Sunday, May 11, 2025

ಕೃಷ್ಣಕರ್ಣಾಮೃತ ಕೃ 61 ಮನವು ಮುಳುಗುವುದು ಮಾಧುರ್ಯದ ಮೂಲದಲಿ (Krishakarnamrta 61)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಇಲ್ಲಿರುವ ಮೂರು ಶ್ಲೋಕಗಳೂ "ಮಧುರಿಮಣಿ ಲೀಯೇ" ಎಂದೇ ಕೊನೆಗೊಳ್ಳುತ್ತವೆ. ಮಧುರಿಮೆಯೆಂದರೆ ಮಾಧುರ್ಯ. ಮತ್ತಿನ್ನಾರದು ಅದು? ಶ್ರೀಕೃಷ್ಣನದೇ.

ಶ್ರೀಕೃಷ್ಣನ ಮಾಧುರ್ಯದಲ್ಲಿ ನಾನಿದೋ ಮುಳುಗಿದೆ - ಎನ್ನುತ್ತಾನೆ ಲೀಲಾಶುಕ. ಕೃಷ್ಣನ ವದನಶಶಿ, ಮುಖಕಮಲ, ಅಧರಮಣಿ - ಈ ಮೂರರಲ್ಲೂ ಮಾಧುರ್ಯವು ಚಿಮ್ಮುತ್ತದೆ. ವದನಶಶಿಯೆಂದರೆ ಮುಖಚಂದ್ರ. ಅಧರಮಣಿಯೆಂದರೆ ಮಣಿಯಂತಿರುವ ತುಟಿ, ಎಂದರೆ ಕೆಂಪಾದ ತುಟಿ.

ಯಾರಿಗಾದರೂ ಸುಂದರವಾದ ವದನ, ಅಲ್ಲೂ ಸುಂದರತರವಾದ ಅಧರ - ಎಂಬುದಿದ್ದರೆ ಯಾರ ಮನಸ್ಸು ಸೂರೆಗೊಳ್ಳದು? ನೋಡುತ್ತಿದ್ದರೆ ನೋಡುತ್ತಲೇ ಇರುವಂತಾಗುವುದು, ಅಲ್ಲವೇ?

"ಲೀಯೇ" ಎಂದರೆ ಇದೇ. ಅದರಲ್ಲಿ ಕರಗಿಹೋಗುತ್ತೇನೆ, ಎಂದರ್ಥ. ಬಾಹ್ಯಪ್ರಪಂಚವೇ ಮರೆಯಾಗಿ, ನಮ್ಮತನವು ಸಹ ಪೂರಾ ಕರಗಿಹೋಗಿರುತ್ತದೆ - ಮಾಧುರ್ಯವೆಂಬುದೇ ಮೂರ್ತಿಮತ್ತಾಗಿ ತೋರಿದಲ್ಲಿ, ಎಂದರೆ ಮೈತಾಳಿ ಬಂದಿರುವಲ್ಲಿ. ಅಲ್ಲಿ ಸವಿಯೆಂಬುದೊಂದೇ ಉಳಿದುಕೊಳ್ಳುವುದಲ್ಲವೇ?

ಕಮಲಗಳು ಅರಳಲು ಬಿಸಿಲು ಬೇಕು. ಎಂದೇ ಸೂರ್ಯೋದಯವಾಗುತ್ತಲೇ ನಳಿನಗಳು ಅರಳಲಾರಂಭಿಸುವುದು. ಆದರೆ ಬಿಸಿಲೆಂದರೂ ಅತಿಬಿಸಿಲಾಗಬಾರದು. ಅತ್ಯುಷ್ಣವೆಂದಾದರೆ ಪುಷ್ಪದ ಒಳಗೆ   ಮಕರಂದವಿದ್ದರೂ ದಳಗಳು ಒಣಗಿಬಿಟ್ಟಂತೆ ಆಗಿಬಿಡುವುದು. ಹಾಗಿರುವಲ್ಲಿ ಕಮಲದ ಶೋಭೆಯೆಂಬುದು ಕ್ಷೀಣಿಸುವುದು – ಸ್ವಲ್ಪಮಟ್ಟಿಗಾದರೂ. ಎಂದೇ ಎಳೆಬಿಸಿಲೇ ಮುಖ್ಯ.

ಎಂದೇ ಅಹಿಮಕರ – ಎಂದು ಸೂರ್ಯನನ್ನು ಇಲ್ಲಿ ಬಣ್ಣಿಸಿರುವುದು. ಎಂದರೆ, ಶೀತವಂತೂ ಅಲ್ಲ, ಸರಿಯೇ. ಅದರ ಜೊತೆಗೆ ಅತ್ಯುಷ್ಣವೂ ಅಲ್ಲದ ಬಿಸಿಯ ಕಿರಣಗಳುಳ್ಳ ಸೂರ್ಯನನ್ನೇ ಹೇಳಿರುವುದು. ಆತನ ಕರ-ನಿಕರವೆಂದರೆ ಕಿರಣಸಮೂಹ. ಅದರಿಂದಾಗಿ ಅರಳುತ್ತಾ, ಕೋಮಲವಾಗಿ ಕಂಗೊಳಿಸುತ್ತದೆ, ಕಮಲಪುಷ್ಪ.

ಅಂತೂ ಹೀಗಾಗಿ ಅತಿಸರಸವಾದ ಕಮಲಗಳು ಹೇಗಿರುತ್ತವೆಯೋ ಹಾಗಿವೆ ಕೃಷ್ಣನ ಕಣ್ಣುಗಳು. ಕೃಷ್ಣನು ದೇವ. ದೇವನೆಂದರೆ ಹೊಳೆಯತಕ್ಕವನು – ಎಂಬರ್ಥವೂ ಇದೆ. ಜೊತೆಗೆ ಆತನ ಕಣ್ಣುಗಳೂ ಕಾಂತಿಯುತವಾಗಿರತಕ್ಕವು.

ಇದಲ್ಲದೆ, ಆತನ ನಗೆಮೊಗವೂ ಸುಶೋಭಿತವೇ. ಮುಖಕ್ಕೆ ಶೋಭೆ ಬರುವುದು ಸಂತೋಷವಿದ್ದಾಗ. ಯಾವುದೇ ಆಟದಲ್ಲಿ ಗೆದ್ದಾಗ ಒಂದಿಷ್ಟು ಗರ್ವವು ಮೂಡುವುದಲ್ಲವೇ? ಆ ಗರ್ವದೊಂದಿಗೆ ತೋರಿಕೊಳ್ಳುವ ತೋಷವು ಕೊಡುವ ಕಳೆಯೇ ಬೇರೆ. ವ್ರಜಾಂಗನೆಯರೊಂದಿಗೆ ರತಿಕಲಹದಲ್ಲಿ ವಿಜಯಿಯಾಗಿದ್ದಾನೆ, ಶ್ರೀಕೃಷ್ಣ. ವ್ರಜನಾರಿಯರೊಂದಿಗೆ ಅವರಿಗೆ ತುಷ್ಟಿಕೊಡುವ ಪುಷ್ಪಪ್ರಹಾರವೇ ಮುಂತಾದ ಕ್ರೀಡೆಗಳನ್ನಾಡಲಾಗಿದೆ. ಅವುಗಳಲ್ಲಿ ಮೇಲುಗೈ ಸಾಧಿಸಿದ್ದಾನೆ, ಕೃಷ್ಣ. ಮುಗುಳ್ನಗೆಯು ಆತನ ಮುಖಚಂದ್ರನಲ್ಲಿ ಮೂಡಿದೆ. 

ಅದರ ಸೊಬಗಿನಲ್ಲಿ ನನ್ನ ಮನಸ್ಸು ಲಯವಾಗುತ್ತಿದೆ - ಎನ್ನುತ್ತಾನೆ, ಕವಿ.

ಅಹಿಮಕರ-ಕರನಿಕರ-ಮೃದುಮುದಿತ-ಲಕ್ಷ್ಮೀ-

-ಸರಸತರ-ಸರಸಿರುಹ-ಸದೃಶದೃಶಿ ದೇವೇ |

ವ್ರಜಯುವತಿ-ರತಿಕಲಹ-ವಿಜಯ-ನಿಜಲೀಲಾ-

-ಮದ-ಮುದಿತ-ವದನಶಶಿ-ಮಧುರಿಮಣಿ ಲೀಯೇ ||

 

***

ಮತ್ತೊಂದು ಶ್ಲೋಕ.

ಶ್ರೀಕೃಷ್ಣನ ಕರವೇ ಕಮಲದಂತೆ. ಆ ಕರದಲ್ಲಿರುವ ಬೆರಳುಗಳು ಕಮಲದಲ್ಲಿರುವ ದಳಗಳಂತೆ. ಅವುಗಳಿಂದ ಧರಿಸಿರುವುದು ಅತಿಲಲಿತವಾದ ವಂಶಿಯನ್ನು. "ವಂಶೀ" ಎಂದರೂ "ವಂಶ" ಎಂದರೂ ಕೊಳಲೇ. ಅದರಿಂದ ಹೊಮ್ಮುವುದು ಕಲ-ನಿನದ ಅಥವಾ ಮಧುರ-ಧ್ವನಿ. ಅ ನಿನಾದವು ಸುರಿಸುವುದು ಅಮೃತವನ್ನು. 

ಆ ಅಮೃತದ ಘನ-ಸರಸ್ಸೇ ಶ್ರೀಕೃಷ್ಣ. ಘನ-ಸರಸ್ಸೆಂದರೆ ಸಾಂದ್ರವಾದ ಸರೋವರ. ಅಲ್ಲಿಗೆ, ಅಮೃತವೇ ಮಡುಗಟ್ಟುವುದಾದರೆ, ಅದುವೇ ಶ್ರೀಕೃಷ್ಣ.

 

ಅಲ್ಲಿಗೆ ಕೃಷ್ಣನೇ ಅಮೃತ-ಸರೋವರ, ಆತನ ಕೈಗಳೇ ಅಲ್ಲಿಯ ಕಮಲಗಳು, ವೇಣುನಾದವೇ ಅವುಗಳ ಮಕರಂದವೆಂಬ ಅಮೃತ – ಎಂಬುದಾಗಿ ಸಾರವಾಗಿ ಹೇಳಿದಂತಾಯಿತು.

ಸ್ವಾಭಾವಿಕ-ಮಾಧುರ್ಯವೇ ಸಹಜ-ರಸ. ಅದರಿಂದ ತುಂಬಿದೆ ಆತನ ದರ-ಹಸಿತ. ಅರ್ಥಾತ್, ಕಿರುನಗೆ. ಅದರ ವೀಥಿಯೆಂದರೆ ಸಂತತವಾಗಿ ಹೊಮ್ಮುವಿಕೆ. ಅದರಿಂದ ನಿರಂತರವಾಗಿ ಸ್ಫುರಿಸುತ್ತಿರುವುದು ಆತನ ಅಧರ. ಅದಾದರೂ ಪದ್ಮರಾಗದ ಮಾಧುರ್ಯವನ್ನು ಹೊಂದಿದೆ. ಕೆಂಪಾದ ಮಣಿಯೆಂದರೆ ಪದ್ಮರಾಗವೇ. ಎಂದೇ ಅಧರಮಣಿಯೆನ್ನುವುದು.

ಆ ಮಣಿಮಾಧುರ್ಯದಲ್ಲಿ ನಾನು ಲೀನನಾಗುವೆನೆನ್ನುತ್ತಾನೆ, ಲೀಲಾಶುಕ.

ಕರಕಮಲ-ದಲಕಲಿತ-ಲಲಿತತರ-ವಂಶೀ-

ಕಲನಿನದ-ಗಲದಮೃತ-ಘನಸರಸಿ ದೇವೇ |

ಸಹಜರಸ-ಭರಭರಿತ-ದರಹಸಿತ-ವೀಥೀ-

ಸತತವಹದ್-ಅಧರಮಣಿ-ಮಧುರಿಮಣಿ ಲೀಯೇ ||


***

ಮತ್ತೊಂದು ಶ್ಲೋಕ.

ಕುಸುಮ-ಶರನೆಂದರೆ ಮನ್ಮಥ. ಏಕೆಂದರೆ ಹೂಗಳೇ ಆತನ ಬಾಣಗಳಲ್ಲವೇ? ಇನ್ನು ಆತನ ಶರ-ಸಮರವೆಂದರೆ ಆ ಪುಷ್ಪಗಳಿಂದಾಗುವ ಪ್ರಹಾರಗಳು. ಆ ಸಂದರ್ಭದಲ್ಲಿ ಸೋತು ಕೋಪಗೊಂಡಿದ್ದಾರೆ, ಮದ-ಗೋಪಿಯರು. ಮದವುಳ್ಳವರಿಗೆ ಕೋಪವು ಸುಲಭವೇ ತಾನೆ? 

ಅವರ ಕೋಪಶಮನಕ್ಕೆ ಆಲಿಂಗನವೊಂದು ಮಾರ್ಗ. ಅವರ ವಕ್ಷಃಸ್ಥಲದ ಕುಂಕುಮವು ಕೃಷ್ಣನ ಎದೆಯ ಮೇಲೆ ಗುರುತುಮಾಡಿದೆ. ಹರ್ಷದಿಂದ ಅರಳಿದ ಆತನ ಮಂದಹಾಸವು ಶಶಿಶೋಭೆಯನ್ನೇ, ಎಂದರೆ ಚಂದ್ರಕಾಂತಿಯನ್ನೇ, ಕದ್ದಿದೆ. ಮುಷಿತವೆಂದರೆ ಅಪಹೃತವಾಗಿರುವುದು.ಇದರಿಂದಾಗಿ ಹೆಜ್ಜೆಹೆಜ್ಜೆಗೂ ಅಧಿಕವಾಗಿ ತೋರುತ್ತಿದೆ, ಕೃಷ್ಣನ ವದನಕಮಲದ ಮಾಧುರ್ಯ.

ಆ ಮುಖಮಾಧುರ್ಯದಲ್ಲಿ ನಾ ಮುಳುಗಿಹೋಗುವೆ  - ಎನ್ನುತ್ತಾನೆ, ಲೀಲಾಶುಕ.

ಕುಸುಮಶರ-ಶರಸಮರ-ಕುಪಿತಮದ-ಗೋಪೀ-

ಕುಚಕಲಶ-ಘುಸೃಣರಸ-ಲಸದುರಸಿ ದೇವೇ |

ಮದಮುದಿತ-ಮೃದುಹಸಿತ-ಮುಷಿತಶಶಿ-ಶೋಭಾ-

ಮುಹುರಧಿಕ-ಮುಖಕಮಲ-ಮಧುರಿಮಣಿ ಲೀಯೇ ||

 

ಉದಾತ್ತವಾದ ಭಾವವೊಂದು ತಾನಾಗಿ ವಿರಾಜಿಸುತ್ತಿದ್ದಲ್ಲಿ ಈ ಮೂರು ಶ್ಲೋಕಗಳಲ್ಲಿರುವ ಮಾತುಗಳು ಒಪ್ಪುತ್ತವೆ.

ಯಾರೋ ಅತಿಸುಂದರನಾದ ಪುರುಷನನ್ನೋ ಅತ್ಯಂತಸುಂದರಿಯಾದ ನಾರಿಯನ್ನೋ ಕಂಡಾಗಲೂ ನೋಡುವವರ ಕಣ್ಣೋ ಮನಸ್ಸೋ ಕ್ಷಣಕಾಲವೋ ಹಲವು ಕ್ಷಣಗಳ ಕಾಲವೋ ಅಲ್ಲೇ ಅಂಟಿಕೊಂಡುಬಿಡುವಂತೆ ಆಗಿಬಿಡುವುದಾದರೂ, ಇಲ್ಲಿ ಲೀಲಾಶುಕನ ಮುಂದಿರುವುದು ಆ ಬಗೆಯ ಲೌಕಿಕ-ಸೌಂದರ್ಯವಲ್ಲ. ಇಲ್ಲಿ ಲಭ್ಯವಾಗಿರತಕ್ಕವು ಲೋಕೋತ್ತರವಾದ ಸೌಂದರ್ಯ-ಮಾಧುರ್ಯಗಳು.

ಸಾಕ್ಷಾತ್ ಪರಮಪುರುಷನೇ ಕೃಷ್ಣನಾಗಿ ಬಂದಿರುವುದರಿಂದ, ಈ ಆಕರ್ಷಣೆಯೆಂಬುದು ಕೇವಲ ಲೀಲಾಶುಕನಿಗೆಂದಲ್ಲ. ಹಾಗೆಯೇ, ವಾಸ್ತವವಾಗಿ ಗೋಪಿಕೆಯರ ಅಂತರಂಗಭಾವವನ್ನೇ ಆತನು ನಮ್ಮ ಮುಂದೆ ಬಿಚ್ಚಿಟ್ಟಿದ್ದಾನೆಂದು ನಾವು ಭಾವಿಸುವುದಾದರೂ, ಕೇವಲ ಅವರಿಗೆ ಮಾತ್ರವೇ ಅದು ಸೀಮಿತವಾದುದೂ ಅಲ್ಲ.

ಲೋಕವನ್ನೇ ಆಕರ್ಷಿಸುವವನೇ ಕೃಷ್ಣನಲ್ಲವೇ? ಅರ್ಥಾತ್, ಮುಗ್ಧ-ಮನಸ್ಸಿನ ಆ ಗೋಪಿಯರ ಉದಾತ್ತ-ಸ್ಥಿತಿಗೆ ಯಾರು ಏರಿದರೂ ಅವರಿಗೆ, ಅಂತಹವರೆಲ್ಲರಿಗೂ ಇಲ್ಲಿ ನಿರೂಪಿತವಾಗಿರುವ ಅನುಭವವು ಉಂಟಾಗುವುದೇ ಸರಿ.

ಈ ಶ್ಲೋಕಗಳಲ್ಲಿಯ ಒಳಸೌಂದರ್ಯವನ್ನು ಕಂಡದ್ದಾಯಿತು. ಅವುಗಳ ಬಾಹ್ಯ-ಸೌಂದರ್ಯದತ್ತಲೂ ಗಮನ ಹರಿಸಬಹುದು. 

ಪ್ರತಿಪಾದದಲ್ಲೂ ೫+೫+೫+೨ ಎಂಬ ಬಗೆಯ ಅಕ್ಷರಸಂಯೋಜನೆ ಈ ಮೂರೂ ಶ್ಲೋಕಗಳಲ್ಲಿದೆ. ಅಲ್ಲಿ ಕೊನೆಯೆರಡಕ್ಷರಗಳು ಛಂದಶ್ಶಾಸ್ತ್ರದಂತೆ "ಗುರು"ಗಳು, ಮಿಕ್ಕ ಹದಿನೈದು ಅಕ್ಷರಗಳೂ "ಲಘು"ಗಳು - ಎಂಬ ಬಗೆಯ ರಚನೆ, ಪ್ರತಿಯೊಂದು ಪಾದದಲ್ಲೂ. ಪ್ರತಿ ಎರಡನೆಯ ಪಾದದ ಕೊನೆಯಲ್ಲಿ "ದೇವೇ" – ಎಂಬ ಪದವಿದೆ; ಅಂತೆಯೇ, ಪ್ರತಿ ನಾಲ್ಕನೆಯ ಪಾದದ ಕೊನೆಯಲ್ಲಿ "ಲೀಯೇ" – ಎಂಬ ಪದವಿದೆ.

ಈ ವೃತ್ತದ ಹೆಸರು "ಶಶಿಶೋಭಾ". ಹೃದ್ಯ-ಲಯಬದ್ಧತೆಯೂ ಸುಶ್ರಾವ್ಯ-ಗೇಯ-ಗುಣವೂ ಈ ಮೂರೂ ಶ್ಲೋಕಗಳಲ್ಲಿದೆ. ಅನುಪ್ರಾಸವಂತೂ ಆದ್ಯಂತವಾಗಿಯೂ ಸಹಜವಾಗಿಯೇ ಮೂಡಿದೆ. ಮೂರೂ ಶ್ಲೋಕಗಳಲ್ಲೂ ಸುದೀರ್ಘ-ಸಮಾಸಗಳೇ ಇವೆಯಾದರೂ, ಶ್ಲೋಕದ ಭಾವಕ್ಕೆ ಯಾವುದೇ ಅಡ್ಡಿಯನ್ನು ಅವು ಒಡ್ಡುವಂತಿಲ್ಲ.

ರಸವೇ ಉಕ್ಕುತ್ತಿರುವಾಗ ಸಮಾಸಗಳ ಉದ್ದವಾಗಲಿ, ಅನುಪ್ರಾಸದ ಧಾರೆಯಾಗಲಿ, ತಾಳಬದ್ಧತೆಯ ಲಯವಾಗಲಿ, ಯಾವುವೂ ಅಡ್ಡಬರವು. ಜಯದೇವಕವಿಯ ಗೀತಗೋವಿಂದಕಾವ್ಯದಲ್ಲಿ ಹೇಗೋ ಹಾಗಿದೆ ಇಲ್ಲಿಯ ರಚನೆ.

ಸೂಚನೆ : 10/05/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.