ಖಾಂಡವವನವನ್ನು ಸುಡುತ್ತಿರುವ ಅಗ್ನಿಯನ್ನು ಪ್ರಾಣಭಿಕ್ಷೆಗಾಗಿ ಪಕ್ಷಿಗಳು ಬೇಡಿಕೊಳ್ಳುತ್ತಿವೆ. ಆ ನಾಲ್ಕು ಪಕ್ಷಿಗಳಲ್ಲೊಂದಾದ ಸಾರಿಸೃಕ್ಕವು ಅಗ್ನಿಯನ್ನು ಕುರಿತು ಹೀಗೆ ಮುಂದುವರೆಸಿ ಹೇಳಿತು: "ಅಗ್ನಿಯೇ ನಿನ್ನ ರೂಪವು ಮಂಗಳಕರವಾದದ್ದು. ನಿನಗೆ ಏಳು ಆಯುಧಗಳಿವೆ (ಜ್ವಾಲೆಗಳ ರೂಪದಲ್ಲಿ), ನಾವು ಆರ್ತರು, ಶರಣಾರ್ಥಿಗಳು, ನಮ್ಮನ್ನು ಆ ಕಾರಣಕ್ಕೂ ನೀನು ಕಾಪಾಡಬೇಕು. ಅಲ್ಲದೇ, ನಾವು ಬಾಲಕ ಋಷಿಗಳು. ನಮ್ಮನ್ನು ಕಾಪಾಡು, ದೂರ ಒಯ್ದು ಬಿಡು" - ಎಂದು.
ಬಳಿಕ ಸ್ತಂಬಮಿತ್ರವು ಹೇಳಿತು: ಓ ಅಗ್ನಿಯೇ, ಈ ಜಗತ್ತನ್ನೆಲ್ಲವನ್ನೂ ನೀನೇ ಧರಿಸಿದ್ದೀಯೇ. ನೀನೇ ಕಾಪಾಡುವವನೂ. ಈ ಮೂರೂ ಲೋಕಗಳನ್ನೂ ಸೃಷ್ಟಿಸಿ ಕೊನೆಗೆ ಪ್ರಳಯಸಮಯದಲ್ಲಿ ನೀನೇ ಎಲ್ಲವನ್ನೂ ಸಂಹರಿಸತಕ್ಕವನು" - ಎಂದು.
ಆಮೇಲೆ ದ್ರೋಣವು ಹೇಳಿತು:
"ಓ ಜಗತ್ಪತಿಯೇ, ಪ್ರಾಣಿಗಳ ಶರೀರದೊಳಗೆ ಇರುವವನಾಗಿದ್ದು, ನೀನೇ ಅವುಗಳು ತಿಂದ ಆಹಾರವನ್ನು ಪಚನ ಮಾಡತಕ್ಕವನು. ನೀನೇ ಸೂರ್ಯನಾಗಿ ನಿನ್ನ ಕಿರಣಗಳಿಂದ ಭೂಮಿಯಿಂದ ನೀರನ್ನೆಲ್ಲಾ ಹೀರಿ, ನೀನೇ ಅದನ್ನೆಲ್ಲಾ ಮಳೆಯಾಗಿ ಸುರಿಸುವೆ. ನೀನು ನಮ್ಮ ಪಾಲಿಗೆ ಕಲ್ಯಾಣಮಯನಾಗು, ನಮ್ಮನ್ನು ನಾಶಪಡಿಸಬೇಡ, ಕಾಪಾಡು - ಎಂದು.
ದ್ರೋಣವು ಮಾಡಿದ ಈ ಪ್ರಾರ್ಥನೆಯಿಂದ ಅಗ್ನಿಯು ಪ್ರಸನ್ನನಾದನು. ಅದೇ ಹೊತ್ತಿಗೆ ಮಂದಪಾಲನಿಗೆ ತಾನಿತ್ತಿರುವ ಮಾತೂ ಆತನ ಸ್ಮರಣೆಗೆ ಬಂದಿತು.
ಆಗ ಅಗ್ನಿಯು ಹೇಳಿದನು:
"ನೀನು ದ್ರೋಣನೆಂಬ ಋಷಿ - ಎಂಬುದನ್ನು ಅರಿತುಕೊಂಡಿದ್ದೇನೆ. ನೀನು ಮಾಡಿರುವ ಸ್ತುತಿಯು ಬ್ರಹ್ಮವನ್ನು ಕುರಿತಾಗಿ - ಎಂಬುದನ್ನೂ ನಾ ಬಲ್ಲೆ. ನಿನ್ನ ಅಪೇಕ್ಷೆಯನ್ನು ಇದೋ ಪೂರೈಸುವೆ. ನಿನಗಾವ ಭಯವೂ ಇರದು. ನಿಮ್ಮ ವಿಷಯವಾಗಿ ಮಂದಪಾಲಮುನಿಯು ಹಿಂದೆಯೇ ಹೇಳಿದ್ದನು. ಖಾಂಡವವನವನ್ನು ಸುಡುವಾಗ ನನ್ನ ಮರಿಗಳನ್ನು ಸುಟ್ಟುಬಿಡಬೇಡ - ಎಂಬುದಾಗಿ. ಆತನ ಆ ಮಾತು, ಹಾಗೂ ನಿನ್ನ ಈಗಿನ ಈ ಮಾತು - ಎರಡೂ ನನಗೆ ಆದರಕ್ಕೆ ಪಾತ್ರವಾದದ್ದೇ. ನಿನ್ನ ವಿಷಯದಲ್ಲಿ ನಾನು ಸುಪ್ರೀತನಾಗಿದ್ದೇನೆ. ನಿನಗಾಗಿ ಏನನ್ನು ಮಾಡಲಿ ಹೇಳು - ಎಂದು.
ಅದಕ್ಕೆ ದ್ರೋಣವು ಹೇಳಿತು:
"ಅಗ್ನಿಯೇ, ಈ ಬೆಕ್ಕುಗಳು ನನಗೆ ಪ್ರತಿದಿನವೂ ಉದ್ವೇಗವುಂಟುಮಾಡುತ್ತಿವೆ. ಇದನ್ನು ಅದರ ಪರಿವಾರದೊಂದಿಗೆ ಸುಟ್ಟುಹಾಕು." ಅಗ್ನಿಯು ಅಂತೆಯೇ ಮಾಡಿದನು. ಹಾಗೂ ಜಾಜ್ವಲ್ಯಮಾನನಾಗಿ ಬೆಳಗುತ್ತ ಖಾಂಡವವನವನ್ನು ದಹಿಸಿದನು. ಇತ್ತ ಮಂದಪಾಲನೂ ಸಹ ತನ್ನ ಮಕ್ಕಳ ಬಗ್ಗೆ ಚಿಂತಿಸಿದನು. ಅಗ್ನಿದೇವನಲ್ಲಿ ಪ್ರಾರ್ಥನೆ ಸಲ್ಲಿಸಿದ್ದರೂ ಮನಸ್ಸಿಗೆ ನೆಮ್ಮದಿಯೊದಗಿರಲಿಲ್ಲ. ಮಕ್ಕಳ ವಿಷಯವಾಗಿ ಚಿಂತಿಸುತ್ತಾ ಆತನು ಲಪಿತೆಯೊಂದಿಗೆ ಹೇಳಿದನು:
"ಲಪಿತೇ, ನನ್ನ ಮಕ್ಕಳು ತಮ್ಮ ಸದನದಲ್ಲಿ ಹೇಗೆ ಬದುಕುಳಿದಾರು? ಅಗ್ನಿಯು ಹೆಚ್ಚಾಗುತ್ತಿರಲು, ವಾಯುವೂ ವೇಗದಿಂದ ಬೀಸುತ್ತಿರಲು, ಅಗ್ನಿಪ್ರಭಾವದಿಂದ ಬಿಡಿಸಿಕೊಳ್ಳುವುದರಲ್ಲಿ ನನ್ನ ಮಕ್ಕಳು ಅಸಮರ್ಥರೇ ಆಗಿಬಿಡುವರು.
ಅವುಗಳ ತಾಯಿಯಂತೂ ಬಡಪಾಯಿಯೇ. ಮಕ್ಕಳನ್ನು ಕಾಪಾಡುವುದೆಂತೆಂದು ತೋಚದೆ ನನ್ನ ಮಕ್ಕಳು ಹಾರಲು ಅಶಕ್ತರು, ರೆಕ್ಕೆ ಬಡಿಯಲೂ ಸಮರ್ಥರಲ್ಲ - ಎಂಬೀ ಸಂತಾಪದಿಂದಾಗಿ ಅದೆಷ್ಟು ಗೋಳಿಡುತ್ತಿರುತ್ತಾಳೋ ಓಡಲೆಳಸುತ್ತಿರುತ್ತಾಳೋ ನಾನರಿಯೆ. ನನ್ನ ಪುತ್ರನಾದ ಜರಿತಾರಿಯು ಹೇಗಿರುವನೋ? ಸಾರಿಸೃಕ್ಕನು ಹೇಗಿರುವನೋ? ಸ್ತಂಬಮಿತ್ರನು ಎಂತೋ? ದ್ರೋಣನು ಹೇಗೋ? ಮತ್ತು ಪಾಪ, ಬಡಪಾಯಿ ಜರಿತೆಯು ಎಂತಿರುವಳೋ?" – ಎಂದು.
ಸೂಚನೆ : 04/05/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.