Saturday, May 17, 2025

ಕೃಷ್ಣಕರ್ಣಾಮೃತ 62 - ಮಾಲೆಯ ರಾಶಿಗೆ ಬೆದರಿದ ಚರಣಕ್ಕೆ ನಮನ (Krishakarnamrta 62)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

ಘೋಷ-ಯೋಷಿದನುಗೀತ-ಯೌವನಂ
ಕೋಮಲ-ಸ್ತನಿತ-ವೇಣು-ನಿಸ್ಸ್ವನಂ |
ಸಾರಭೂತಂ ಅಭಿರಾಮ-ಸಂಪದಾಂ
ಧಾಮ ತಾಮರಸ-ಲೋಚನಂ ಭಜೇ ||
ರಣ-ಘೋಷ, ವಾದ್ಯ-ಘೋಷ ಮುಂತಾದ ಪದಗಳನ್ನು ಕೇಳಿದ್ದೇವಲ್ಲವೇ? ಅಲ್ಲೆಲ್ಲಾ ಘೋಷವೆಂದರೆ ದೊಡ್ಡದಾದ ಸದ್ದೆಂಬುದೇ ಅರ್ಥ. ಆದರೆ ಅದಕ್ಕೆ ಸಂಸ್ಕೃತದಲ್ಲಿ ಆಭೀರ-ಪಲ್ಲೀ, ಅರ್ಥಾತ್ ಗೊಲ್ಲರ ಹಳ್ಳಿ - ಎಂಬ ಅರ್ಥವೂ ಇದೆ. ಅಲ್ಲಿಯ ರಮಣಿಯರೆಂದರೆ ಗೊಲ್ಲರ ನಾರಿಯರು. ಘೋಷ-ಯೋಷಿತರೆಂದರೆ ಅವರೇ. ಅವರ ಮನಸ್ಸನ್ನು ಸೆಳೆದಿಬಿಟ್ಟಿದೆ ಕೃಷ್ಣನ ಯೌವನ. ಎಂದೇ ಅದರ ಮೇಲೆ ಹಾಡುಕಟ್ಟಿ ಹಾಡುವವರು, ಅವರು. ಅಂತಹ ಯೌವನ ಆತನದು. ಹೀಗಾಗಿ, ಅವರ ಈ ಗಾನದಿಂದ ಅನುಗೀತವೇ ಆಗಿರುವ ಯೌವನವೇ ಕೃಷ್ಣನದು.

ಇನ್ನು ಆತನ ವೇಣು-ನಿಸ್ವನವೂ ಆಸ್ವಾದ್ಯವೇ. ನಿಸ್ವನವೆಂದರೆ ನಾದ. ಅದು ಮಧುರವಾಗಿದೆ. ಹೇಗದು ಮಧುರ? ಸ್ತನಿತದಂತೆ. ಸ್ತನಿತವೆಂದರೆ ಗುಡುಗು. ಗುಡುಗೇನು ಮಧುರವೇ? ಹೌದು, ಕೋಮಲ-ಸ್ತನಿತವು ಆಸ್ವಾದ್ಯ. ಕೋಮಲ-ಸ್ತನಿತವೆಂದರೆ ಮಂದ್ರ-ಧ್ವನಿಯ ಗುಡುಗು – ಅದು ಮಂದ್ರವಾದ ವೇಣುಗಾನದಂತೆ.

ಪ್ರಕೃತ, ಅಂತಹ ವೇಣುಗಾನವೆಂಬುದು ಕೃಷ್ಣನದೇ. ಸುಮ್ಮನೆ ಕೃಷ್ಣನೆಂದರೇನು ಸೊಗಸು? ತಾಮರಸ-ಲೋಚನ – ಎನ್ನಬೇಕು. ತಾಮರಸ - ಎಂದರೆ ಕೆಂಪುಕಮಲ. ಅದರಂತೆಯೇ ಇರುವ ಕಣ್ಣು ಆತನದು. ಆತನು ವ್ಯಕ್ತಿಯಲ್ಲ, ಶಕ್ತಿ; ಕೃಷ್ಣನೆಂದರೆ ಬರೀ ನಾಮವಲ್ಲ, ಧಾಮ. ಧಾಮವೆಂದರೆ ತೇಜಸ್ಸು. ಅಂತಹ ಕೆಂದಾವರೆಯ ನೇತ್ರಗಳುಳ್ಳ ತೇಜೋರಾಶಿಯೇ ನಮ್ಮ ಶ್ರೀಕೃಷ್ಣ.

ಮತ್ತೆಂತಹ ಧಾಮವದು? ಅಭಿರಾಮ-ಸಂಪತ್ತಿನ ಸಾರವದು. ಅಭಿರಾಮ-ಸಂಪತ್ತೆಂದರೆ ಸೌಂದರ್ಯ-ಲಕ್ಷ್ಮಿ. ಒಟ್ಟಿನಲ್ಲಿ ಕಮಲದಂತಿರುವ ಕಣ್ಣುಳ್ಳ ತೇಜಸ್ಸೇ ಕೃಷ್ಣ. ಆ ತೇಜಸ್ಸಿನ ಯೌವನವೇ ಗೊಲ್ಲತಿಯರ ಕೊಂಡಾಟಕ್ಕೆ ವಿಷಯ. ಮಂದ್ರಸ್ವರದ ಗುಡುಗಿನ ಸುಸ್ವರ ಅದರ ಕೊಳಲಿನದು. ಸೊಬಗಿನ ಸಿರಿಯ ಸಾರವದು. ಅದನ್ನೇ ಭಜಿಸುವುದು - ಎನ್ನುತ್ತಾನೆ ಲೀಲಾಶುಕ.

***

ಮತ್ತೊಂದು ಶ್ಲೋಕ:

ಲೀಲಯಾ ಲಲಿತಯಾವಲಂಬಿತಂ
ಮೂಲ-ಗೇಹಮಿವ ಮೂರ್ತಿ-ಸಂಪದಾಮ್ |
ನೀಲ-ನೀರದ-ವಿಕಾಸ-ವಿಭ್ರಮಂ
ಬಾಲಮೇವ ವಯಮಾದ್ರಿಯಾಮಹೇ ||

ನಾವು ಆದರಿಸುವುದು ಬಾಲಕೃಷ್ಣನನ್ನು. ಎಂತಹ ಬಾಲ ಆತ? – ಎಂಬುದನ್ನು ಲೀಲಾಶುಕ ಚಿತ್ರಿಸಿದ್ದಾನೆ. ಲಲಿತ-ಲೀಲೆಯೇ ಯಾವನನ್ನಾಶ್ರಯಿಸಿರುವುದೋ ಅಂತಹವನು. ಲಲಿತ-ಲೀಲೆಯೆಂದರೆ ಸೊಬಗಿನ ವಿಲಾಸ. ಅದು ತಾನಾಗಿ ಬಂದು ಈ ಬಾಲಕನನ್ನು ಅವಲಂಬಿಸಿಕೊಂಡಿದೆ.

ಶರೀರದ ಒಂದೊಂದು ಅವಯವವೂ ಸುಷ್ಠುವಾಗಿದ್ದರೆ ಅದಕ್ಕೆ ಅಂಗ-ಸೌಷ್ಠವವೆನ್ನುತ್ತಾರೆ. ಅವಯವಗಳ ಸೌಷ್ಠವವಿದ್ದರೂ, ಕೆಲವೊಮ್ಮೆ ಒಟ್ಟ್ಟಿನ ಸೌಂದರ್ಯದಲ್ಲಿ ಅದೇನೋ ಕೊರತೆಯು ಇರುವುದುಂಟು. ಸೌಷ್ಠವವೂ ಸೌಂದರ್ಯವೂ ಕೂಡಿಬಂದಿದ್ದಲ್ಲಿ ಅದನ್ನು ಮೂರ್ತಿ-ಸಂಪತ್ತೆನ್ನುವರು. ಮೂರ್ತಿಯೆಂಬ ಪದಕ್ಕೆ ಶರೀರವೆಂದೇ ಅರ್ಥ.

ಅಂತಹ ಮೂರ್ತಿ-ಸಂಪತ್ತಿಗೆ ಬಾಲಕೃಷ್ಣನು ಮೂಲ-ಗೇಹ.  ಮೂಲ-ಗೇಹವೆಂದರೆ ತವರುಮನೆ. ಹೀಗಾಗಿ, ಶರೀರಶ್ರೀಗೆ ಮೂಲ-ಸದನನೇ ಈ ಬಾಲಕ.

ಅಷ್ಟೇ ಅಲ್ಲದೆ, ನೀಲ-ನೀರದದ ಹಾಗೆ - ಎಂದರೆ ನೀಲ-ಮೇಘದ ಹಾಗೆ - ಆತನ ವಿಕಾಸ-ವಿಭ್ರಮವಿದೆ. ವಿಕಾಸ-ವಿಭ್ರಮವೆಂದರೆ ಪ್ರಕಾಶ-ವಿಲಾಸ, ಸೊಬಗಿನಾಟ. ನೀರದ ಅಥವಾ ಜಲದವೆಂಬ ಪದ ಅನ್ವರ್ಥವಾದದ್ದು. ಅದರ ಅರ್ಥ, ಮಳೆಸುರಿಸುವ ಮೋಡ - ಎಂದು.

ನೀರಿನಿಂದ ಭಾರವಾದ ಮೋಡವು ನೋಡಲೇ ಸೊಗಸು. ಅದರ ಆ ಹೊಳಪನ್ನು ಹೊಂದಿರುವನೇ, ಈ ಬಾಲ, ಅರ್ಥಾತ್ ಬಾಲಗೋಪಾಲ. ಅಂತಹ ಬಾಲನನ್ನೇ ನಾವು ಆದರಿಸುವುದು - ಎನ್ನುತ್ತಾನೆ ಲೀಲಾಶುಕ.

ಅಲ್ಲಿಗೆ, ಲಲಿತಲೀಲೆಯೂ, ಮೂರ್ತಿಸಂಪತ್ತೂ, ಮೇಘವಿಭ್ರಮವೂ ತೋರಿರುವುದು ಒಬ್ಬ ಬಾಲನಲ್ಲಿಯೇ. ಆತನೇ ನಮ್ಮ ಬಾಲಕೃಷ್ಣ. ಆತನೇ ನಮ್ಮ ಆದರಕ್ಕೆ ಪಾತ್ರನದವನು, ಉಪಾಸನೆಗೆ ಯೋಗ್ಯನಾದವನು.

***

ಮತ್ತೊಂದು ಪದ್ಯ:

ವಂದೇ ಮುರಾರೇಶ್ಚರಣಾರವಿಂದ-

-ದ್ವಂದ್ವಂ ದಯಾ-ದರ್ಶಿತ-ಶೈಶವಸ್ಯ |

ವಂದಾರು-ಬೃಂದಾರಕ-ವೃಂದ-ಮೌಲಿ-

-ಮಂದಾರಮಾಲಾ-ವಿನಿಮರ್ದ-ಭೀರು ||

 

ಮುರನೆಂಬುವನು ನರಕಾಸುರನ ಪರಿವಾರದ ಒಬ್ಬ ರಾಕ್ಷಸ. ಅತನನ್ನು ಮುಂದೆ ಸಂಹರಿಸಿದವನು ಕೃಷ್ಣ. ಆ ಕಾರಣಕ್ಕಾಗಿಯೇ ಕೃಷ್ಣನಿಗೆ ಮುರಾರಿಯೆಂಬ ಹೆಸರು ಪ್ರಸಿದ್ಧವಾಯಿತು.

ಈ ಶ್ಲೋಕದಲ್ಲಿ ಹೇಳಿರುವ ಕೃಷ್ಣ ಎಳಸಿನವನು. ವಾಸ್ತವವಾಗಿ, ಮುಂದೆಂದೋ ನಡೆದ ಘಟನೆಯಿಂದಾಗಿ ಬಂದ ಹೆಸರನ್ನೋ ವಿಶೇಷಣವನ್ನೋ ಆ ಘಟನೆಗೆ ಮೊದಲೇ ಒಬ್ಬನಿಗೆ ಅನ್ವಯಿಸಲಾಗದು.  ಆ ಘಟನೆಯ ಚಿತ್ರಣವೋ, ಕೊನೆಯ ಪಕ್ಷ ಉಲ್ಲೇಖವೋ ಆದ ಸಮಯದಿಂದಾರಂಭಿಸಿ ಆ ವಿಶೇಷಣವನ್ನು ಆ ವ್ಯಕ್ತಿಗೆ ಬಳಸಬಹುದು.  

ಉದಾಹರಣೆಗೆ "ಭಾರತರತ್ನ ಎಂ. ಎಸ್. ಸುಬ್ಬುಲಕ್ಷ್ಮಿಯವರು ೧೯೧೬ ರಲ್ಲಿ ಜನಿಸಿದರು" ಎಂದು ಹೇಳುವುದು ಔಚಿತ್ಯ-ಪೂರ್ಣವೇನಲ್ಲ. ಅವರೇನೂ ಹುಟ್ಟುವಾಗಲೇ ಭಾರತರತ್ನರಾಗಿರಲಿಲ್ಲ. ೧೯೯೮ರಲ್ಲಿ ಅವರಿಗೆ ಆ ಬಿರುದು ಸಂದಿತು. ಆದರೂ, ಅವರಿಗೆ ಮುಂದೆ ಸಂದ ಬಿರುದನ್ನು ಬಹಳ ಮೊದಲಿಗೂ ಅನ್ವಯಿಸಿ ಹೇಳುವುದು ಏನೋ ದೊಡ್ಡ ಪ್ರಮಾದವೆನಿಸದು. ಇಲ್ಲಿಯೂ ಹಾಗೆಯೇ. ಕವಿಗಳಂತೂ ಆ ಬಗ್ಗೆ ಹೆಚ್ಚು ಲೆಕ್ಕವಿಡುವವರಲ್ಲ.

ವಾಮನ-ಕೋದಂಡರಾಮ-ಪರಶುರಾಮರ ಬಾಲ್ಯದ ಬಗ್ಗೆ ನಾವು ಹೆಚ್ಚು ಕೇಳಿಯೇ ಇಲ್ಲವಲ್ಲವೆ? ಆದರೆ ಶೈಶವದ ದರ್ಶನ-ಸುಖವನ್ನು ಪಡೆಯಲು ಅರ್ಹರಾಗಿದ್ದವರು ದೇವಕಿ-ವಸುದೇವರು, ಯಶೋದೆ-ನಂದಗೋಪರು. ತನ್ನ ಶೈಶವವನ್ನು ಅವರಿಗೂ, ಗೊಲ್ಲ-ಗೊಲ್ಲತಿಯರಿಗೂ, ದರ್ಶನ ಮಾಡಿಸಿದವನು ಕೃಷ್ಣ. ಅದೂ ಅವರ ಮೇಲಣ ದಯದಿಂದ. ಎಂದೇ ಆತನನ್ನು "ದಯಾ-ದರ್ಶಿತ-ಶೈಶವ"ವೆನ್ನುವುದು.

ಅಂತಹ ಮುರಾರಿಯ ಚರಣಕಮಲದ ಯುಗಲಕ್ಕೆ ನಮಸ್ಸನ್ನು ಸಲ್ಲಿಸಿದ್ದಾನೆ, ಲೀಲಾಶುಕ. ಯುಗಲವೆಂದರೆ ಜೊತೆ. ಏನದರ ವಿಶೇಷ? ಆ ಚರಣದ್ವಂದ್ವವು ಭೀರುವಂತೆ. ಭೀರುವೆಂದರೆ ಹೇಡಿ, ಹೆದರುವವನು. ಹೇಡಿಯಂತಿದ್ದರೆ ಅದಕ್ಕೇಕೆ ವಂದನೆ?

ಹಿನ್ನೆಲೆ ಪರಿಶೀಲಿಸಿದರೆ ತಿಳಿಯುತ್ತದೆ, ಅದರ ಮರ್ಮ. ಕೃಷ್ಣನಿಗೆ ನಮಸ್ಕರಿಸಲು ದೇವತೆಗಳೆಲ್ಲರೂ ಬರುವರು. ವಂದಾರುಗಳೆಂದರೆ ನಮಸ್ಕಾರ-ಮನಸ್ಕರು. ಬೃಂದಾರಕರೆಂದರೆ ದೇವತೆಗಳು. ಅವರೆಲ್ಲರೂ ತಮ್ಮ ಮೌಲಿಯಲ್ಲಿ, ಎಂದರೆ ಶಿರಸ್ಸಿನಲ್ಲಿ, ಪುಷ್ಪವನ್ನು ಧರಿಸಿರುವರು.

ಗಂಡಸರು ಈಗ ಹೂಮುಡಿಯುತ್ತಿಲ್ಲವಷ್ಟೆ. ಹಿಂದೆ ಅದಿತ್ತು. ದೇವತಾ-ವೃಂದವೇ ಹೂಮಾಲೆ ಮುಡಿದು ಬಂದಿದೆ. ಅದೂ ಯಾವ ಹೂವು? ದೇವಲೋಕಮಾತ್ರ-ಲಭ್ಯವಾದ ಮಂದಾರ. ಮಂದಾರವು ದೇವವೃಕ್ಷ, ಕಲ್ಪವೃಕ್ಷ, ಕೇಳಿದ್ದನ್ನೆಲ್ಲಾ ಕೊಡತಕ್ಕದ್ದು.

ಅವರ ತಲೆಯಲ್ಲಿರುವ ಮಂದಾರ-ಮಾಲೆಗಳೆಲ್ಲ ಕೃಷ್ಣನ ಪಾದದ ಮೇಲೆ ಬಂದಿವೆ. ನಮಸ್ಕರಿಸುವವರ ಮುಡಿ ಶ್ರೀಕೃಷ್ಣನ ಅಡಿಯ ಮೇಲಿರುವುದರಿಂದ ಹಾಗಾಗಿದೆ.

೩೩ ಕೋಟಿ ದೇವತೆಗಳಲ್ಲಿ ಮುಖ್ಯರಾದವರೆಲ್ಲರೂ ಬಂದಿದ್ದರೆಂದರೂ ಅದೆಷ್ಟು ಹೂರಾಶಿಯಾಯಿತು, ಅಲ್ಲಿಗೆ! ಎಂದೇ ಅದರ ಭಾರಕ್ಕೆ ಹೆದರಿತಂತೆ ಕೃಷ್ಣಪಾದದ ಜೋಡಿ! ಹಾಗೆ ಹೆದರಿದ ಚರಣದ್ವಂದ್ವಕ್ಕೆ ನನ್ನ ನಮಃ - ಎಂದು ಆತನ ನುಡಿ.

ಹೂಮಾಲೆಗಳ ಭಾರವನ್ನು ಹೇಳುವುದರ ಉದ್ದೇಶವೇ ಬೇರೆಯಷ್ಟೆ? ಅದೆಷ್ಟು ಮಂದಿ ದೇವತೆಗಳು ಆತನಿಗೆ ಬಂದು ವಂದಿಸುವವರು! – ಎಂಬುದೇ ಅದು.

ಶಿಶುವೇ ಆದರೂ ಈತನ ಪಾದವೂ ಸಹ ಸರ್ವ-ದೇವ-ವಂದ್ಯ - ಎಂಬುದು ಇಲ್ಲಿಯ ತಾತ್ಪರ್ಯ.

ಸರ್ವ-ದೇವವಂದ್ಯನಿಗೆ ನಮ್ಮ ವಂದನೆಗಳೆಂದು ಲೀಲಾಶುಕನು ಹೇಳುವುದು ಸಹಜವಷ್ಟೆ?

ಅಂದವಾದ ಅನುಪ್ರಾಸವಿದೆ ಈ ಶ್ಲೋಕದಲ್ಲಿ್: ವಂದೇ-ವಿಂದ-ದ್ವಂದ್ವ-ವಂದಾ-ಬೃಂದಾ-ವೃಂದ-ಮಂದಾ !

ಸೂಚನೆ : 17/05/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.