ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೧೭. ಕರ್ಣಾಂಜಲಿಯಿಂದ ಪಾನಮಾಡಲು ಯೋಗ್ಯವಾದ ಅಮೃತ ಯಾವುದು?
ಉತ್ತರ - ಉಪದೇಶ
ಈ ಪ್ರಶ್ನೆ ಹೀಗಿದೆ ಕಿವಿಯಿಂದ ಕೇಳಲು ಅತ್ಯಂತ ಯೋಗ್ಯವಾದ ವಿಷಯ ಯಾವುದು? ಎಂಬುದಾಗಿ. ಅದಕ್ಕೆ ಉತ್ತರವಾಗಿ 'ಉಪದೇಶ' ಎಂದು ಹೇಳಲಾಗಿದೆ. ಉಪದೇಶವು ಹೇಳುವಂತಹದ್ದು ಮತ್ತು ಅದು ಕೇಳಲಿಕ್ಕೆ ಯೋಗ್ಯವಾದದ್ದು ಎಂದರ್ಥ. ಕೆಲವೊಮ್ಮೆ ಪ್ರಿಯಯೂ ಹಿತವೂ ಆಗಿರಬಹುದು. ಇನ್ನು ಕೆಲವೊಮ್ಮೆ ಹಿತವೂ ಅಪ್ರಿಯವೂ ಆಗಿರಬಹುದು. ಆದರೆ ಅದು ಅಹಿತವಂತೂ ಖಂಡಿತಾ ಆಗದು. ಆದ್ದರಿಂದಲೇ ಉಪದೇಶವನ್ನು ಕೆಲವೊಮ್ಮೆ ಹೀಗೂ ಹೇಳುವುದುಂಟು 'ಹೇಳಲಿಕ್ಕೆ ಚೆಂದ; ಆಚರಣೆಗೆ ಕಷ್ಟ' ಎಂಬುದಾಗಿ' ಸಂಸ್ಕೃತದಲ್ಲಿ ಒಂದು ಗಾದೆಮಾತು ಕೂಡಾ ಇದೆ - "ಪರೋಪದೇಶವೇಲಾಯಾಂ ಸರ್ವೇ ವ್ಯಾಸಪರಾಶರಾಃ" ಎಂದು. ಅಂದರೆ ಮತ್ತೊಬ್ಬರಿಗೆ ಹೇಳುವಾಗ ಎಲ್ಲರೂ ವ್ಯಾಸ, ಪರಾಶರ ಮಹರ್ಷಿಗಳಂತೆ ಆದರ್ಶವನ್ನೇ ಹೇಳುತ್ತಾರೆ. ಆದರೆ ವಯಕ್ತಿಕವಾದ ಪಾಲನೆಯ ವಿಷಯ ಬಂದಾಗ "?" ಇಷ್ಟೇ! ಅಂದರೆ ಬೇರೆಯವರಿಗೆ ಹೇಳಲು ಆಗುತ್ತದೆ, ಆದರೆ ತಾವೇ ಸ್ವತಃ ಆಚರಣೆಯ ವಿಷಯ ಬಂದಾಗ ಆ ಉಪದೇಶವೂ ನಿರರ್ಥಕವಾಗಬಹುದು ಎಂಬುದಾಗಿ ಉಪದೇಶ ವಿಷಯದಲ್ಲಿ ಹೇಳುವುದುಂಟು. ಹಾಗಾದರೆ ಈ ಉಪದೇಶವು ಏನು ಮಾಡುತ್ತದೆ? ಅದು ಹೇಗೆ ಕೇಳಲು ಯೋಗ್ಯವಾದುದು? ಎಂಬುದನ್ನು ನಾವು ನೋಡಬೇಕಾಗಿದೆ.
ಉಪದೇಶ ಎಂದರೆ ಸಮೀಪದಲ್ಲಿ ಹೇಳುವ ವಿಷಯ ಎಂದರ್ಥ. ಅಥವಾ ಗುಟ್ಟಾಗಿ ಹೇಳುವ ವಿಚಾರ. ಒಬ್ಬ ವ್ಯಕ್ತಿಯನ್ನು ಮಾತುಗಳ ಮೂಲಕ ಅಥವಾ ಹಿತವಚನಗಳ ಮೂಲಕ ಅವನನ್ನು ಸಮೀಪಕ್ಕೆ ಕರೆಯುವುದು ಎಂಬುದು ಇದರ ಅರ್ಥ. ಉಪ- ಸಮೀಪ, ದಿಶ್ - ಉಚ್ಚಾರಣೆ- ಹೇಳುವುದು, ಕರೆಯುವರು ಎಂಬುದು ಅರ್ಥ. ಅಂದರೆ ಯಾವ ವಿಷಯ ಅವನಿಗೆ ದೂರವಾಗಿದೆಯೋ, ಅರಿವಿಲ್ಲದಂತಾಗಿದೆಯೋ ಅದನ್ನು ಅರಿವಾಗುವಂತೆ ಮಾಡಿ ಆ ವಿಷಯದ ಸಾಮಿಪ್ಯವನ್ನು ಉಂಟುಮಾಡುವಂತೆ ಮಾಡುವ ಹಿತವಚನಕ್ಕೆ ಉಪದೇಶ ಎಂದು ಕರೆಯುತ್ತಾರೆ. ಈ ಉಪದೇಶವು ವ್ಯಕ್ತಿಯನ್ನು ಉದ್ಧರಿಸಬಲ್ಲದು, ವ್ಯಕ್ತಿಯನ್ನು ಪರಿವರ್ತಿಸಬಲ್ಲದು, ವ್ಯಕ್ತಿಯನ್ನು ಜಾಗೃತಗೊಳಿಸಬಲ್ಲದು. ಹೀಗೆ ಅನೇಕ ಪ್ರಯೋಜನ ಈ ಉಪದೇಶಕ್ಕೆ ಇದೆ. ಆದ್ದರಿಂದಲೇ ಇದನ್ನು ಕೇಳಲಿಕ್ಕೆ ಯೋಗ್ಯವಾದ ವಿಷಯ ಎಂಬುದಾಗಿ ಹೇಳಲಾಗಿದೆ. ಉಪದೇಶವೂ ಕೇಳಲಿಕ್ಕೆ ಆಪ್ಯಾಯಮಾನವಾಗಿ ಕಾಣಬಹುದು. ಆದರೆ ಅದು ಆಚರಣೆಗೆ ಬಂದಾಗ ಕ್ಲಿಷ್ಟವಾಗಬಹುದು. ಆದ್ದರಿಂದಲೇ ಉಪದೇಶವು ಕರ್ಣಾಂಜಲಿಗೆ ಪಾನ ಮಾಡಲು ಯೋಗ್ಯವಾದದ್ದು. ಯಾವುದು? ಎಂಬ ಪ್ರಶ್ನೆಗೆ 'ಉಪದೇಶ' ಎಂಬ ಉತ್ತರವನ್ನು ಕೊಡಲಾಗಿದೆ ಎಂಬುದನ್ನು ಭಾವಿಸಬಹುದು. ಹಾಗಾಗಿ ಯಾವುದು ಕೇಳಲಿಕ್ಕೆ ಯೋಗ್ಯವಾದದ್ದು, ಆಚರಣೆಗೆ ಕಷ್ಟವಾದದ್ದು ಅಂತದ್ದನ್ನು ಉಪದೇಶ ಎಂಬುದಾಗಿ ಕರೆಯಲಾಗಿದೆ.
'ಉಪದೇಶ' ಎಂಬ ಶಬ್ದಕ್ಕೆ ಮಂತ್ರಕಥನ ಎಂಬ ಅರ್ಥವಿದೆ. ಮಂತ್ರ ಎಂದದೆ ಅತ್ಯಂತ ಗೌಪ್ಯವಾದುದು. ಹೇಳುವ ವಿಷಯವು ಹೇಳುವವನಿಗೆ ಮತ್ತು ಕೇಳುವವನಿಗೆ ಮಾತ್ರ ತಿಳಿಯುವ 'ಷಟ್ ಕರ್ಣಾತ್ ಭಿದ್ಯತೇ ಮಂತ್ರಃ' ಎಂಬಂತೆ ಮೂರನೇಯವನಿಗೆ ಕೇಳದೆ ಇರುವಂತಹ ಯಾವ ವಿಷಯವಿದೆಯೋ ಅದನ್ನು ಉಪದೇಶ ಎಂಬುದಾಗಿ ಕರೆಯಬಹುದು. ಉಪದೇಶ ಎಂಬ ಶಬ್ದಕ್ಕೆ ಶಿಕ್ಷಣ ಎಂಬ ಅರ್ಥವೂ ಇದೆ. ಧರ್ಮೋಪದೇಶ ಮಂತ್ರೋಪದೇಶ ಶಾಸ್ತ್ರೋಪದೇಶ ಇತ್ಯಾದಿ ಸಂದರ್ಭಗಳಲ್ಲಿ ಧರ್ಮವನ್ನು ತಿಳಿಸುವುದು ಎಂಬ ಅರ್ಥವೂ ಕೂಡ ಈ ಶಬ್ದಕ್ಕೆ ಇದೆ.