Monday, November 16, 2026

ವ್ಯಾಸ ವೀಕ್ಷಿತ 214 ಶಿಶುಪಾಲನು ಮಾಡಿದ ಭೀಷ್ಮ-ಭರ್ತ್ಸನೆ (Vyaasa Vikshita 214)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png

ಶ್ರೀಕೃಷ್ಣನ ವಿಷಯವಾಗಿ ಪ್ರಶಂಸೆಯ ಮಾತುಗಳನ್ನು ಭೀಷ್ಮರಾಡಿದರಷ್ಟೆ. ಅದರ ಅವಹೇಳನವನ್ನು ಮಾಡಲಾರಂಭಿಸಿದ ಶಿಶುಪಾಲನು ಹೀಗೆ ಮಾತನ್ನು ಮುಂದುವರಿಸಿದನು:

“ಕಿಂಪುರುಷರ ಆಚಾರ್ಯನಾದ ದ್ರುಮನೇ ಇಲ್ಲಿದ್ದಾನೆ. ಆತನ ವಿಕ್ರಮವು ಪ್ರಥಿತವಾದದ್ದು - ಎಂದರೆ ಸುಪ್ರಸಿದ್ಧವಾದದ್ದು. ಅಂತಹ ಮಹಾವೀರ್ಯನನ್ನು ತೊರೆದು ಕೇಶವನನ್ನು ಪ್ರಶಂಸಿಸುವೆಯೇ, ಭೀಷ್ಮ?

ಇನ್ನು ಶರದ್ವಂತನ ಪುತ್ರನಾದ್ದರಿಂದ ಶಾರದ್ವತನೆಂದು ಕರೆಸಿಕೊಳ್ಳುವ ಕೃಪಾಚಾರ್ಯರು; ಅವರು ಭರತವಂಶದ ವೃದ್ಧರಾದ ಅಚಾರ್ಯವರ್ಯರು. ಅಂತಹ ಮಹಾವೀರ್ಯರನ್ನೇ ಬಿಟ್ಟು ಕೇಶವನನ್ನೇಕೆ ಪ್ರಶಂಸಿಸುವೆ? ಹಾಗೆಯೇ ಧನುರ್ಧರರಲ್ಲಿ ಮಹಾಶ್ರೇಷ್ಠನೆನಿಸಿದ ಪುರುಷಶ್ರೇಷ್ಠನಾದ ರುಕ್ಮಿಯುಂಟು. ಆ ಮಹಾವೀರ್ಯನನ್ನೂ ಕಡೆಗಾಣಿಸಿ ಕೃಷ್ಣನನ್ನೇ ಹೊಗಳುವುದೇ?

ಇವರು ಮಾತ್ರವಲ್ಲ. ಇನ್ನೂ ಅದೆಷ್ಟು ಮಂದಿ ಇದ್ದಾರೆ, ಮಹಾಪರಾಕ್ರಮಿಗಳು!: ಭೀಷ್ಮಕ, ದಂತವಕ್ರ, ಭಗದತ್ತ, ಜಯತ್ಸೇನ, ವಿರಾಟ-ದ್ರುಪದರು, ಶಕುನಿ-ಬೃಹದ್ಬಲರು, ಅವಂತಿಯ ವಿಂದಾನುವಿಂದರು, ಏಕಲವ್ಯ-ಪ್ರಭೃತಿಗಳು. ಅವರನ್ನೆಲ್ಲ ಬಿಟ್ಟು ಕೇಶವನನ್ನು ಸ್ತುತಿಸುವುದೇ? ಶಲ್ಯ ಮುಂತಾದ ರಾಜರನ್ನೂ ನೀನದೇಕೆ ಹೊಗಳುವುದಿಲ್ಲ? ಹೊಗಳುವುದರಲ್ಲೇ ನಿನ್ನ ಬುದ್ಧಿಯು ಓಡುವುದಾದರೆ ಇವರನ್ನೇಕೆ ಹೊಗಳೆ?

ವೃದ್ಧರಾದ ಧರ್ಮವಾದಿಗಳು ಧರ್ಮೋಪದೇಶವನ್ನು ಮಾಡುವರು; ಅಂತಹವರ ಮಾತುಗಳನ್ನು ಹಿಂದೆ ನೀ ಕೇಳಿಸಿಕೊಂಡಿಲ್ಲವಲ್ಲಾ, ಅದಕ್ಕೇ ನೀ ಹೀಗೆ ಮಾತನಾಡುತ್ತಿರುವುದು. ಆದರೆ ಅದಕ್ಕೀಗ ನಾನೇನು ಮಾಡಲಾದೀತು, ಭೀಷ್ಮ?

ಸ್ವನಿಂದೆ-ಸ್ವಪ್ರಶಂಸೆ, ಹಾಗೂ ಪರನಿಂದೆ-ಪರಪ್ರಶಂಸೆ - ಈ ನಾಲ್ಕೂ ಬಗೆಯ ವರ್ತನೆಗಳೂ ಆರ್ಯರ ಆಚರಣೆಯಾಗುವುದಿಲ್ಲ.

ಕೃಷ್ಣನು ಸ್ತುತಿಗೆ ಅನರ್ಹ. ಅಂತಹವನನ್ನು ನೀನು ಭಕ್ತಿಯಿಂದ ಸದಾ ಹೊಗಳುತ್ತಿರುವುದು ಬರೀ ಮೋಹದಿಂದಲೇ, ಅಜ್ಞಾನದಿಂದಲೇ. ಓ ಭೀಷ್ಮನೇ, ಅದನ್ನಾರೂ ಅನುಮೋದಿಸಲಾರರು.

ಈ ಕೇಶವನಿದ್ದಾನಲ್ಲಾ, ಈತನಾರು?: ಕಂಸನ ಮನೆಯ ವರ್ಗಪಾಲ, ಅರ್ಥಾತ್ ದನಕಾಯುವವ! ಜೊತೆಗೆ ದುರಾತ್ಮ.

ಜಗತ್ತೆಲ್ಲವೂ ಅವನಡಿಯಲ್ಲಿರುವುದು - ಎಂಬಂತೆ ನೀ ಮಾತನಾಡುವೆಯೆಲ್ಲಾ, ನಿನ್ನ ಮಾತೆಲ್ಲಾ ಕೇವಲ ಸ್ವಾರ್ಥ-ಪ್ರೇರಿತವಾದದ್ದು.

ಅಥವಾ, ಅದೆಲ್ಲಾ ನಿನ್ನ ಬುದ್ಧಿಗೆ ಸಹಜವಾಗಿ ಬಂದುದಲ್ಲ. ಭೂಲಿಂಗ-ಶಕುನಿಯೆಂಬ ಹಕ್ಕಿಯ ಉದಾಹರಣೆಯನ್ನು ಹಿಂದೆಯೇ ಕೊಟ್ಟಿದ್ದೆನೆಲ್ಲಾ, ಅದರಂತೆ ನೀನು: ಸಾರಾಂಶವಾಗಿ ಹೇಳುವುದಾದರೆ, ನುಡಿಯುವುದೊಂದು, ಮಾಡುವುದೊಂದು!

ಆ ಭೂಲಿಂಗವು ಮಾಡುವುದೇನೆಂದು ಬಿಡಿಸಿ ಹೇಳುವೆ, ಕೇಳು. ಹಿಮಾಲಯ-ಪರ್ವತದ ಆಚೆಯ ತಪ್ಪಲಿನಲ್ಲಿರತಕ್ಕ ಪಕ್ಷಿಯದು. ಅದು ಏನು ಹೇಳಿದರೂ, ತನ್ನ ಆಚರಣೆಯೇ ಏನುಂಟೋ ಅದಕ್ಕೆ ವಿರುದ್ಧವಾದುದನ್ನೇ ಹೇಳುತ್ತದೆ!

"ಮಾ ಸಾಹಸಂ", ಸಾಹಸವನ್ನು ಮಾಡಬೇಡಿ - ಎಂಬುದಾಗಿ ಸದಾಕಾಲವೂ ಅರಚಿಕೊಳ್ಳುತ್ತದೆ. ಆದರೆ ತಾನೇ ಮಹಾ-ಸಾಹಸವನ್ನು ಮಾಡುತ್ತಿರುತ್ತದೆ! ತಾನೇ ಹಾಗೆ ಮಾಡುತ್ತಿರುವೆನೆಂಬುದಾಗಿ ಅದು ಅರಿಯದು!

ಅದರ ನಡೆ ಹೀಗೆ: ಸಿಂಹವು ಮಾಂಸವನ್ನು ತಿನ್ನುವಾಗ ಅದರ ದಂತಾಂತರದಲ್ಲಿ, ಎಂದರೆ ಹಲ್ಲುಗಳ ನಡುವಿನಲ್ಲಿ, ಮಾಂಸದೊಂದು ಚೂರು ಸಿಲುಕಿಕೊಳ್ಳುವುದುಂಟು. ಸಿಲುಕಿಕೊಂಡಿರುವ ಅದನ್ನೇ ಸೆಳೆದುಕೊಳ್ಳಲೆಳಸುತ್ತದೆ, ಆ ಮೂರ್ಖಪಕ್ಷಿ! ಸಿಂಹವೇನೋ ತನ್ನ ಇಚ್ಛೆಯಷ್ಟರಿಂದಲೇ ಅದನ್ನು ಬದುಕಲು ಬಿಟ್ಟಿರುತ್ತದೆ! ತಾನೇ ಏನನ್ನು ಮಾಡುತ್ತಿದ್ದೇನೆಂಬುದರ ಅರಿವಾದರೂ ಅದಕ್ಕಿದ್ದರೆ ತಾನೆ?

ತಿಳಿದುಕೋ ಭೀಷ್ಮ,  ಅಧರ್ಮಿಷ್ಠನಾದ ನೀನೂ ಸಹ ಸದಾ ಅದರ ಹಾಗೆಯೇ ಮಾತನಾಡುತ್ತಿರುವೆ.

ಈ ರಾಜರುಗಳು ಸುಮ್ಮನೆ ಬಿಟ್ಟಿದ್ದಾರೆಂಬ ಕಾರಣಕ್ಕೆ ನೀನಿನ್ನೂ ಬದುಕುಳಿದಿರುವೆಯಷ್ಟೆ. ನಿನ್ನಂತಹ ಲೋಕ-ವಿದ್ವಿಷ್ಟವಾದ, ಎಂದರೆ ಜನರೆಲ್ಲರೂ ದ್ವೇಷಿಸುವ, ಕರ್ಮವುಳ್ಳವರು ಮತ್ತಾರೂ ಇರಲಾರರು!” - ಎಂದನು.


ಸೂಚನೆ :  15/11/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಪ್ರಶ್ನೋತ್ತರ ರತ್ನಮಾಲಿಕೆ 93 (Prasnottara Ratnamalike 93)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



image.png


ಪ್ರಶ್ನೆ - 93. ಯಾವುದು ಭಯ

ಉತ್ತರ -  ಧನ - ಹಣ.

ಈ ಹಿಂದಿನ ಪ್ರಶ್ನೋತ್ತರದಲ್ಲಿ ಭಯ ಮತ್ತು ಅಭಯ ಎಂದರೇನು? ಎಂಬ ಬಗ್ಗೆ ತಿಳಿಯಲಾಗಿತ್ತು. ಈ ಪ್ರಶ್ನೋತ್ತರದಲ್ಲಿ ಧನ ಹೇಗೆ ಭಯ? ಎಂಬುದನ್ನು ತಿಳಿಯಬೇಕಾಗಿದೆ. ಧನದಿಂದ ಆಗುವ ಅನರ್ಥಗಳನ್ನು ಒಮ್ಮೆ ಅವಲೋಕಿಸಿದಾಗ ತಿಳಿಯುತ್ತದೆ ಧನ ಎಷ್ಟು ಭಯಕಾರಕ? ಎಂದು.  ಧನದ ಅನರ್ಥವನ್ನು ಸಾರುವ ಸುಭಾಷಿತ ಹೀಗಿದೆ - ಅರ್ಥಮ್ ಅನರ್ಥಂ ಭಾವಯ ನಿತ್ಯಂ ನಾಸ್ತಿ ತತಃ ಸುಖಲೇಶಃ ಸತ್ಯಮ್ । ಪುತ್ರಾದಪಿ ಧನಭಾಜಾಂ ಭೀತಿಃ ಸರ್ವತ್ರೈಷಾ ವಿಹಿತಾ ರೀತಿಃ॥ ಎಂದು. ಹಣವನ್ನು ಎಲ್ಲಾ ಬಗೆಯ ಅನರ್ಥಗಳಿಗೂ ಕಾರಣ ಎಂದು ಯಾವಾಗಲೂ ತಿಳಿ, ಇದರಿಂದ ಸ್ವಲ್ಪವೂ ಸುಖ ಸಿಗುವುದಿಲ್ಲ, ಹಣವಿರುವವರಿಗೆ ಮಕ್ಕಳಿಂದಲೇ ಭಯ ಬರಬಹುದು, ಇದು ಎಲ್ಲೆಡೆ ಕಾಣುವ ಹಣದ ಪರಿ ಎಂದು ಇದರ ತಾತ್ಪರ್ಯ. ಹಣದಿಂದ ಯಾವೆಲ್ಲಾ ಅನರ್ಥಗಳು ಆಗಬಹುದು ಎಂಬ ಕಾರಣಪರಂಪರೆಯನ್ನೇ ಇಲ್ಲಿ ಹೀಗೆ ಹೇಳಲಾಗುತ್ತದೆ. ಧನದಿಂದ ಲೋಭ, ಲೋಭದಿಂದ ಮೋಹ, ಮೋಹದಿಂದ ಮದ, ಮದದಿಂದ ನಾಶ ಎಂದು. ಹೀಗೆ ಹಣವು ಕೊನೆಯಲ್ಲಿ ನಮ್ಮನ್ನೇ ನಾಶ ಮಾಡಬಹುದು. ಅಲ್ಲಿಯವರೆಗೆ ಹಣದ ಅನರ್ಥದ ವ್ಯಾಪ್ತಿಯಿದೆ. 


ಪ್ರಪಂಚದಲ್ಲಿರುವ ಯಾವುದೇ ಪದಾರ್ಥವಿರಬಹುದು ಅವುಗಳಲ್ಲಿ ಅನುಕೂಲ ಮತ್ತು ಪ್ರತಿಕೂಲ ಎಂಬ ಎರಡೂ ಅಂಶಗಳೂ ಇದ್ದೇ ಇರುತ್ತವೆ. ಸರಿಯಾಗಿ ತಿಳಿದು ವಿವೇಕದಿಂದ ಬಳಸಿದಾಗ ಅದರಿಂದ ನಮಗೆ ಅನುಕೂಲವಾಗುತ್ತದೆ. ಅದೇ ವಿಷಯವನ್ನು ಸರಿಯಾಗಿ ಅರಿಯದಿದ್ದಾಗ ತೊಂದರೆ ನಿಶ್ಚಿತ. ಇದು ಹಣಕ್ಕೂ ಬಿಟ್ಟಿಲ್ಲ. ಅರ್ಥವನ್ನು ಪುರುಷಾರ್ಥ ಎಂದು ಹೇಳಿದ್ದೂ ಉಂಟು. ಅರ್ಥವನ್ನು ನಮ್ಮ ಹೊರಗಿನ ಪ್ರಾಣ ಎಂಬಷ್ಟರ ಮಟ್ಟಿಗೆ ಅರ್ಥದ ಅಗತ್ಯತೆಯನ್ನು ಮಹಾಭಾರತದಲ್ಲಿ ಹೇಳಿದ್ದುಂಟು. ಆದರೆ ಈ ಪ್ರಶ್ನೋತ್ತರದಲ್ಲಿ ಹಣದಿಂದ ಭಯ ಅಥವಾ ಹಣವು ಭಯದ ಮೂಲವೂ ಆಗಬಹುದು ಎಂದು ಎಚ್ಚರಿಸಲಾಗಿದೆ. ದುಡ್ಡಿದ್ದವನು ಏನನ್ನು ಬೇಕಾದರೂ ಮಾಡಬಹುದು ಎಂದು ಭ್ರಮಸುತ್ತಾನೆ. ದುಡ್ಡಿದವನಿಂದ ಭಯವೂ ಬರಬಹುದು. ದುಡ್ಡಿದ್ದವನಿಗೆ ದುಡ್ಡು ಕಳೆದುಹೋಗುತ್ತದೆಯೋ ಎಂಬ ಭಯ, ಕಳ್ಳರು ಎಲ್ಲಿ ಅಪಹರಿಸುತ್ತಾರೋ? ರಾಜರಿಂದ ಅಥವಾ ಸರರ್ಕಾರದಿಂದ ಯಾವಾಗ ಜಪ್ತಿ ಮಾಡಬಹುದೋ? ಅಣ್ಣತಮ್ಮಂದಿರು ಎಲ್ಲಿ ಈ ಹಣದ ಪಾಲನ್ನು ಕೇಳುವರೋ? ವ್ಯಯಿಸಿದಷ್ಟೂ ಖರ್ಚಾಗುತ್ತದೆ ಎಂಬಿತ್ಯಾದಿ ಭಯ ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ. ಹೀಗೆ ದುಡ್ಡು ಸರ್ವತ್ರ ಭಯಕ್ಕೆ ಕಾರಣ. ಹಣ ಇಲ್ಲದವನಿಗೆ ‘ಇಲ್ಲ’ ಎಂಬ ಚಿಂತೆ ಮಾತ್ರ. ಆದರೆ ದುಡ್ಡು ಇರುವವನಿಗೆ ನೂರೆಂಟು ಚಿಂತೆ ಎಂಬಂತೆ ದುಡ್ಡು ಇಲ್ಲದಿದ್ದವನಿಗೆ ಇದಾವ ಭಯವೂ ಇರುವುದಿಲ್ಲ, ದುಡ್ಡು ಇರುವವನಿಗೆ ಎಲ್ಲಾ ಬಗೆಯ ಭಯ ಕಾಡುತ್ತದೆ. ಹಾಗಾಗಿ ದುಡ್ಡೇ ಭಯ. ದುಡ್ಡೇ ಭಯಕ್ಕೆ ಮೂಲ. ದುಡ್ಡು ಇರುವವನಿಗಿಂತ ದುಡ್ಡು ಇಲ್ಲದವನೇ ಚೆನ್ನಾಗಿ ಸುಖವಾಗಿ ನಿದ್ರಿಸಬಲ್ಲ ತಾನೆ? ಆದ್ದರಿಂದ ಹಣದ ಮೌಲ್ಯವನ್ನು ತಿಳಿದರೆ ಅಭಯ, ತಿಳಿಯದಿದ್ದರೆ ಭಯ ನಿಶ್ಚಯ. 


ಸೂಚನೆ :  15/11/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Saturday, November 14, 2026

ಸಹಜತೆಯ ಉಳಿವಿಗೆ ಬೇಕು ‘ಸದಾಚಾರ’ (Sahajateya Ulivige Beku ‘Sadacara’)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

Screenshot 2026-11-14 201049.png

ಅತ್ಯಂತ ಮುಖ್ಯವೂ, ಅವಶ್ಯವೂ ಆದ ವಿಷಯ ‘ಸದಾಚಾರ’. ಸದಾಚಾರವೆಂದರೆ, ಕೇವಲ ಮಡಿ-ಮೈಲಿಗೆ ಇವುಗಳಿಗೆ ಸಂಬಂಧಿಸಿರುವ ವ್ಯಾಪಾರ ಎಂಬಷ್ಟು ಅರ್ಥವನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಆದರೆ ಇದಕ್ಕೆ ತುಂಬಾ ಆಳವೂ, ವಿಸ್ತಾರವೂ ಆದ ಅರ್ಥವಿದೆ. ‘ಸತ್’ ಎಂಬ ಯಾವ ಪ್ರಪಂಚಕ್ಕೆ ಮೂಲಭೂತವಾದ ವಿಷಯವುಂಟೋ, ಅದನ್ನು ಪಡೆಯಲು ಮಾಡಲೇಬೇಕಾದ ಯಾವೆಲ್ಲ ಕ್ರಿಯೆಗಳುಂಟೋ, ಎಲ್ಲವನ್ನೂ ಒಟ್ಟಾಗಿ ‘ಸದಾಚಾರ’ ಎಂಬ ಪದದಿಂದ ಕರೆಯುತ್ತೇವೆ. ‘ಸತ್’ ಎಂಬ ಪದಾರ್ಥವೂ ಕಾಲಾತೀತವಾದುದು ಮತ್ತು ದೇಶಾತೀತವಾದುದು. ಅಂದರೆ ಪರಬ್ರಹ್ಮ. ಇದೇ ಮುಂದಕ್ಕೆ ವಿಸ್ತಾರವಾಗಿ ಪ್ರಪಂಚವಾಯಿತು. ಹೇಗೆ ಬೀಜವು ವಿಸ್ತಾರವಾದಾಗ, ಬೀಜದ ಧರ್ಮವು ಅದರ ಮುಂದಿನ ಎಲ್ಲಾ ಹಂತಗಳಲ್ಲೂ ಗೋಚರಿಸುವುದೋ, ಹಾಗೆ ಪ್ರಪಂಚದ ಪ್ರತಿಯೊಂದೂ, ಆ ಪರಬ್ರಹ್ಮನ ಧರ್ಮದಿಂದಲೇ ಕೂಡಿದೆ. ಉಪನಿಷತ್ತು ಹೇಳುವಂತೆ ‘ಪ್ರಪಂಚವೆಲ್ಲವೂ ಅವನ ಆವಾಸಸ್ಥಾನವೇ ಆಗಿದೆ’. ಈ ಪ್ರಪಂಚವನ್ನೇ ಆಶ್ರಯಿಸಿ ಪ್ರಪಂಚಮೂಲನಾದ ಭಗವಂತನ ಕಡೆಗೆ ಸಾಗಬೇಕಾದುದು ಪ್ರತಿಯೊಬ್ಬ ಮಾನವನ ಕರ್ತವ್ಯವೂ ಆಗಿದೆಯಷ್ಟೆ. ಸಿಕ್ಕ ಮಾನವಜನ್ಮವನ್ನೂ ಸಾರ್ಥಕಪಡಿಸಿಕೊಳ್ಳಬೇಕಷ್ಟೇ. ಇದಕ್ಕೆಂದೇ ನಮ್ಮ ಭಾರತೀಯ ಆರ್ಯಮಹರ್ಷಿಗಳು ಕಂಡ ಸತ್ಯಾನ್ವೇಷಣೆಯ ಫಲವೇ ‘ಸದಾಚಾರ’. ಇದೊಂದು ಮೂಢನಂಬಿಕೆಯಲ್ಲ. ಮೂರ್ಖರ ಆಚರಣೆಯಲ್ಲ. ವಿಜ್ಞಾನದಿಂದ ಕೂಡಿದ ಆಚರಣೆ.

ಈ ಸೃಷ್ಟಿಯಲ್ಲಿ ಪ್ರತಿಯೊಂದು ಪದಾರ್ಥವೂ ತನ್ನ ತನ್ನ ಶುದ್ಧವಾದ ರೂಪದಿಂದಲೇ ಇರಬೇಕೆಂದು ಬಯಸುತ್ತದೆ. ಮಣ್ಣು, ನೀರು, ಗಾಳಿ ಎಲ್ಲವೂ ಶುದ್ಧವಾಗಿದ್ದಾಗ ಮಾತ್ರ ಅವುಗಳಿಂದ ಪ್ರಯೋಜನ. ಅವು ಕಲುಷಿತವಾದರೆ ಅವನ್ನು ಶುದ್ಧಿಗೊಳಿಸಲಾಗುತ್ತದೆ. ಗಿಡ-ಮರ, ಪ್ರಾಣಿ-ಪಕ್ಷಿ, ನದೀ-ಪರ್ವತ ಎಲ್ಲವೂ ಸಹಜವಾಗಿ ಶುದ್ಧವೇ. ಅವು ಸದಾಕಾಲ ಶುದ್ಧವಾಗಿರಬೇಕು. ಅಶುದ್ಧವಾದಾಗ ಶುದ್ಧಗೊಳಿಸಬೇಕು. ಆದ್ದರಿಂದ ಶುದ್ಧಿಯು ಅದರ ಸ್ವಭಾವ. ಅಶುದ್ಧಿಯು ಅದರ ವಿಕಾರ. ಸೃಷ್ಟಿಯ ಒಂದು ಭಾಗವಾದ ಮಾನವನಿಗೂ ಈ ಪ್ರಕ್ರಿಯೆ ಹೊರತಲ್ಲ. ಕಾಲಕಾಲಕ್ಕೆ ಸಂಭವಿಸುವ ಕಲ್ಮಷವನ್ನು ತೆಗೆಯಬೇಕು. ತನ್ನ ಸ್ವರೂಪಕ್ಕೆ ಚ್ಯುತಿ ಬಾರದರೀತಿಯಲ್ಲಿ ಇರಬೇಕು. ಸ್ವರೂಪವನ್ನು ಹಾಗೇ ಉಳಿಸಿಕೊಳ್ಳಲು ಸದಾಚಾರ ಬೇಕೇಬೇಕು.

ಮಾನವನನ್ನು ಅತ್ಯಂತ ಶುದ್ಧಜನ್ಮ, ಶ್ರೇಷ್ಠಜನ್ಮ ಎಂದೆಲ್ಲಾ ಕೊಂಡಾಡಲಾಗುತ್ತದೆ. ಇದಕ್ಕೆ ಕಾರಣವಿಷ್ಟೆ- ‘ಭಗವಂತನ ಸಾನ್ನಿಧ್ಯವನ್ನು ಪಡೆಯಬಹುದಾದ ಜನ್ಮ’ ಎಂದು. ಆಗಲೇ ಜನ್ಮ ಸಾರ್ಥಕ. ಇದಕ್ಕೆ ನಮ್ಮ ದೇಹೇಂದ್ರಿಯ, ಮನಸ್ಸು, ಬುದ್ಧಿ, ಇವೆಲ್ಲದರ ಶುದ್ಧಿ ಅತ್ಯವಶ್ಯ. ಈ ಶುದ್ಧಿಯ ಒಟ್ಟಾರೆ ಪ್ರಕ್ರಿಯೆಯನ್ನು ‘ಸದಾಚಾರ’ ಎಂದು ಹೇಳುತ್ತೇವೆ. “ಪಂಚೇಂದ್ರಿಯಸ್ಯ ದೇಹಸ್ಯ ಬುದ್ಧೇಶ್ಚ ಮನಸಸ್ತಥಾ | ದ್ರವ್ಯದೇಶಕ್ರಿಯಾಣಾಂ ಚ ಶುದ್ಧಿರಾಚಾರ ಇಷ್ಯತೇ||” ಎಂದು. ಇವೆಲ್ಲವನ್ನು ಶುದ್ಧಿಗೊಳಿಸಬೇಕು. ಆಗ ಅವುಗಳ ಸ್ವರೂಪ ಶುದ್ಧವಾದಂತೆ. ಇದರ ಪರಿಣಾಮವೇ ಪರಮಾತ್ಮನ ಸಾಕ್ಷಾತ್ಕಾರ. ನಮ್ಮೆಲ್ಲರ ಗುರಿ ಇಷ್ಟೇ ತಾನೆ. ನಾವು ಪ್ರತಿನಿತ್ಯ ಪಠಿಸುವ ವಾಕ್ಯವೂ ಇದೇ ತಾನೆ- ‘ಧರ್ಮ-ಅರ್ಥ-ಕಾಮ-ಮೋಕ್ಷ-ಚತುರ್ವಿಧ-ಪುರುಷಾರ್ಥ-ಸಿದ್ಧ್ಯರ್ಥಮ್’ ಎಂದು. ಆದರೆ ವೈಪರೀತ್ಯ ಎಂಬಂತೆ ಧರ್ಮ ಮತ್ತು ಮೋಕ್ಷ ಇವೆರಡರ ವಿಷಯಕ್ಕೆ ತಲೆ ಹಾಕದೆ, ಕೇವಲ ಅರ್ಥಕಾಮಗಳ ದಾಸರಾಗಿರುವ ಜನರ ಸಂಖ್ಯೆಯೇ ಹೆಚ್ಚು. ಆಚಾರವೆಂಬುದು ಆ ಆ ಪದಾರ್ಥದ ನೈಜಸ್ವರೂಪವನ್ನು ಅಂತೆಯೇ ಉಳಿಸಲು ಮಾಡುವ ಪ್ರಕ್ರಿಯೆ. ಇಲ್ಲಿ ನಾವು ವಿಚಾರಮಾಡಲಾಗುತ್ತಿರುವ ಆಚಾರವು ಇನ್ನಾವುದೂ ವಸ್ತುವಿನ ಶುದ್ಧಿಯನ್ನು ಹೇಳುತ್ತಿಲ್ಲ. ಈ ಜೀವವೆಂಬುದು ಶರೀರವವೆಂಬ ಸಾಧನವನ್ನು ಬಳಸಿಕೊಂಡು ಇದೇ ಶರೀರದಲ್ಲೇ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಬೇಕಾಗಿದೆ. ಜೀವಶುದ್ದಿ ಅದಕ್ಕೋಸ್ಕವಾಗಿ. ಅದು ತನ್ನ ಸಾಧನವಾದ ಬುದ್ಧಿ ಮನಸ್ಸು ಇಂದ್ರಿಯ ಮೊದಲಾದ ಸಮಷ್ಟಿರೂಪವಾದ ಈ ದೇಹವನ್ನು ಶುದ್ಧಿಗೊಳಿಸಿ ಸಜ್ಜುಗೊಳಿಸಬೇಕು. ಇದನ್ನೇ ಆಚಾರವೆಂದು ಕರೆಯಲಾಗಿದೆ.  ಬಾಹ್ಯವಾದ ಸಲಕರಣೆಗಳನ್ನೂ ಈ ಕಾರ್ಯಕ್ಕಾಗಿ ಬಳಸುವ ಅಗತ್ಯವಂತೂ ಇದರ ಜೊತೆಜೊತೆ ಇದ್ದೇ ಇರುತ್ತದೆ. ದ್ರವ್ಯಶುದ್ಧಿ ಪ್ರದೇಶಶುದ್ಧಿ ಕ್ರಿಯಾಶುದ್ಧಿ ಮುಂತಾದವುಗಳ ಶುದ್ಧಿಯೂ ಅಷ್ಟೇ ಅಗತ್ಯ. ಇವೆಲ್ಲವನ್ನು ಸೇರಿಸಿ ಸದಾಚಾರ ಎಂದು ಹೇಳಲಾಗಿದೆ.

ಸದಾಚಾರವೆಂಬುದು ಧರ್ಮದ ಜಾಗ್ರತೆಯನ್ನುಂಟುಮಾಡುತ್ತದೆ. ‘ಆಚಾರಪ್ರಭವೋ ಧರ್ಮಃ’ ಎಂಬ ಮಾತು ಈ ಹಿನ್ನೆಲೆಯಲ್ಲೇ ಬಂದಿದೆ. ಪ್ರತಿಯೊಂದು ವಸ್ತುವಿನ ಅದರದರ ಸಹಜತೆಯನ್ನು ಅಥವಾ ನಾರ್ಮಲ್ ಕಂಡೀಶನ್ ನನ್ನು ಧರ್ಮವೆಂದು ಕರೆಯಬೇಕು ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಅಂತಹ ಧರ್ಮವನ್ನು ಉಳಿಸಲು ಇರುವ ಕರ್ಮವೇ ಆಚಾರವೆನಿಸುವುದು. ಐದು ಇಂದ್ರಿಯಗಳು, ದೇಹ, ಬುದ್ಧಿ, ಮನಸ್ಸು, ದ್ರವ್ಯ, ದೇಶ ಮತ್ತು ಕ್ರಿಯೆಗಳೆಲ್ಲವೂ ಹೇಗಿದ್ದರೆ ಈ

ಸೂಚನೆ: 14/11/2026 ರಂದು ಈ ಲೇಖನ ವಿಜಯಕರ್ನಾಟಕದ ಬೋಧಿ ವೃಕ್ಷದಲ್ಲಿ ಪ್ರಕಟವಾಗಿದೆ.

Wednesday, November 11, 2026

ಮಹರ್ಷಿಗಳ ದೃಷ್ಟಿಯಲ್ಲಿ ಸಂಸ್ಕಾರದ ಅವಲೋಕನ (Maharsigala Drstiyalli Sanskarada Avalokana)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಸಂಸ್ಕಾರ ಎಂಬ ಪದವನ್ನು ನಾವು ಅನೇಕ ಕಡೆ, ಅನೇಕ ಬಾರಿ ಕೇಳಿದ್ದೇವೆ. ಒಬ್ಬ ವ್ಯಕ್ತಿಯನ್ನು ನೋಡಿದಾಗ ‘ಇವನಿಗೆ ಸಂಸ್ಕಾರವಿಲ್ಲವೇ? ಅಥವಾ ‘ಎಷ್ಟು ಇವನು ಸಂಸ್ಕಾರವಂತ! ಎಂಬಿತ್ಯಾದಿ ಮಾತನ್ನೂ ಕೇಳುತ್ತೇವೆ. ಅಂದರೆ ‘ಸಂಸ್ಕಾರ’ ಎಂದರೇನು? ಸಂಸ್ಕಾರಪದದ ಮೌಲಿಕವಾದ ಅರ್ಥ ಏನು? ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಮ್ಮ ಸನಾತನ ಭಾರತೀಯ ಪರಂಪರೆಯಲ್ಲಿ ಶುದ್ಧಿ ಎಂಬ ಅರ್ಥದಲ್ಲಿ ಸಂಸ್ಕಾರ ಎಂಬ ಪದದ ಬಳಕೆಯನ್ನು ಕಾಣಬಹುದು. ಪದಾರ್ಥಗಳನ್ನು ದೋಷಮುಕ್ತವಾಗಿ ಮಾಡುವ ಮತ್ತು ಇರುವ ಪದಾರ್ಥಕ್ಕೆ ಇನ್ನಷ್ಟು ಹೊಳಪನ್ನು ಕೊಡುವ ಯಾವ ಪ್ರಕ್ರಿಯೆಯುಂಟೋ, ಅದನ್ನು ಸಂಸ್ಕಾರ ಎಂಬುದಾಗಿ ಕರೆಯಬೇಕು. “ದೋಷ-ಅಪನಯನ-ಪೂರ್ವಕಂ ಗುಣಾಧಾನಂ ಸಂಸ್ಕಾರಃ” ಎಂಬುದಾಗಿ ಸಂಸ್ಕಾರ ಪದಕ್ಕೆ ಎಲ್ಲಾ ಕಡೆ ಈ ಅರ್ಥ ಇರುವುದನ್ನು ಕಾಣಬಹುದು. ಅಂದರೆ ಸಂಸ್ಕಾರದಿಂದ ಪದಾರ್ಥದಲ್ಲಿ ಶುದ್ಧಿ, ಪಾವಿತ್ರ್ಯ, ಸೊಬಗು ಮತ್ತು ಇನ್ನು ಅನೇಕ ಪರಿಷ್ಕಾರಗಳು ಉಂಟಾಗುತ್ತವೆ. ಹಾಗಾಗಿ ಇಂತಹ ವಿಶಿಷ್ಟವಾದ ಪರಿಕಲ್ಪನೆಯಲ್ಲಿ ಬಂದಿರುವುದೇ ಸಂಸ್ಕಾರ ಎಂಬುದು.

ಸಂಸ್ಕಾರ ಎಂಬುದು ಕೇವಲ ಪದಾರ್ಥವನ್ನು ಶುದ್ಧಿಗೊಳಿಸಲು ಮಾತ್ರ ಇರುವುದೇ? ಅದಕ್ಕೋಸ್ಕರ ಸಂಸ್ಕಾರ ಎಂಬ ವಿಷಯವನ್ನು ನಾವು ಅರ್ಥ ಮಾಡಿಕೊಳ್ಳಬೇಕೇ? ಹಾಗಲ್ಲ. ಸಂಸ್ಕಾರ ಎಂಬ ಅತಿವಿಶಿಷ್ಟವಾದ ಕಲ್ಪನೆ ಬಂದಿರುವುದೇ ಉದಾತ್ತವಾದ ಪುರುಷಾರ್ಥವನ್ನು ಸಂಪಾದನೆ ಮಾಡುವುದಕ್ಕೋಸ್ಕರ. ಅಂದರೆ ಮಾನವನಾಗಿ ಹುಟ್ಟಿ ಧರ್ಮ, ಅರ್ಥ, ಕಾಮ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಪಡೆಯಬೇಕಾದದ್ದು ಅತ್ಯಂತ ಅನಿವಾರ್ಯ. ಇದನ್ನು ಪಡೆಯಲು ಮಾನವಶರೀರಕ್ಕೆ ಆಧಾರಭೂತವಾಗಿರುವ ಶರೀರ, ಇಂದ್ರಿಯ, ಮನಸ್ಸು, ಬುದ್ಧಿ ಹೀಗೆ ಇವೆಲ್ಲವೂ ಶುದ್ಧವಾದಾಗ ಮಾತ್ರ ಆ ವ್ಯಕ್ತಿ ಪುರುಷಾರ್ಥಗಳನ್ನು ಪಡೆಯಲು ಸಾಧ್ಯ. ಶರೀರ ಬುದ್ಧಿ ಮೊದಲಾದವುಗಳು ಶುದ್ಧವಾಗಿರಬೇಕು ಎಂದಾದರೆ ಅವುಗಳಿಗೆ ಸರಿಯಾದ ವಿಷಯವನ್ನು ಕೊಡುಬೇಕು, ಅವು ಹಾಳಾಗದಂತೆ ರಕ್ಷಿಸಿಕೊಳ್ಳಬೇಕು. ಅದಕ್ಕಾಗಿ ಅನೇಕ ಪರಿಕರಗಳು ಬೇಕು ಮತ್ತು ಪರಿಸರಗಳು ಬೇಕು. ಆ ಪರಿಕರಗಳು ಮತ್ತು ಪರಿಸರವು ಶುದ್ಧವಾಗಿದ್ದಾಗ ಮಾತ್ರ ಅವುಗಳಿಂದ ಶರೀರ ಇಂದ್ರಿಯಾದಿಗಳು ಶುದ್ಧವಾಗಿರುತ್ತವೆ. ಶರೀರಕ್ಕೆ ಬೆಳೆಯಲು ಆಹಾರ ಬೇಕು, ಆ ಆಹಾರವು ಶುದ್ದವಾಗಿರಬೇಕು. ಶುದ್ಧವಾದ ಆಹಾರ ಬೆಳೆಯಲು ಒಳ್ಳೆಯ ಭೂಮಿ, ನೀರು, ಗಾಳಿ, ಅವಕಾಶ ಇವೆಲ್ಲವೂ ಶುದ್ಧವಾಗಿರಬೇಕು. ಹೀಗಿದ್ದಾಗ ಶರೀರ ಸ್ಪಷ್ಟವಾಗಿ, ಸ್ವಸ್ಥವಾಗಿ, ಶುದ್ಧವಾಗಿ ನಮ್ಮ ಇಷ್ಟಾರ್ಥವನ್ನು ಸಾಧಿಸಲು ಅನುಗುಣವಾಗಿ ಬೆಳೆಯಲು ಸಾಧ್ಯ. ಅಂತಯೇ ಇಂದ್ರಿಯ ಮತ್ತು ಮನಸ್ಸುಗಳಿಗೆ ಇರುವ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮೊದಲಾದ ವಿಷಯಶುದ್ಧಿ ಇರಬೇಕು. ಹಾಗಿದ್ದಾಗ ಮನಸ್ಸು ಕೂಡ ಶುದ್ಧವಾಗಿ ಇರಲು ಸಾಧ್ಯ. ಹೀಗೆ ಮಾನವ ತನ್ನ ಜೀವಿತಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು, ಪದಾರ್ಥಗಳನ್ನು ಅದರ ಧರ್ಮಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಇಟ್ಟುಕೊಂಡಾಗ ಮಾತ್ರ ಅವೆಲ್ಲವೂ ಅದರದರ ಪ್ರಯೋಜನಕ್ಕೆ ಅನುಗುಣವಾಗಿ ಕಾರ್ಯವನ್ನು ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ಈ ಅರ್ಥದಲ್ಲಿ ಶುದ್ಧಿ ಎಂಬುದಾಗಿ ಕರೆದು, ಅಂತಹ ಶುದ್ಧಿಯು ಯಾವುದರಿಂದ ಉಂಟಾಗುತ್ತದೆಯೋ ಅದಕ್ಕೆ ಸಂಸ್ಕಾರ ಎಂಬುದಾಗಿ ಮೂಲತಃ ಕರೆಯಲಾಗಿದೆ ಎಂಬುದು ನಮ್ಮ ಮಹರ್ಷಿಗಳ ನೋಟವಾಗಿದೆ.

ಶುದ್ಧವಾದದ್ದು ಎಂದರೆ ಯಾವುದೇ ವಿಕಾರವಿಲ್ಲದ ಸ್ವರೂಪ ಎಂದರ್ಥ. “ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ” ಎಂದು ಹೇಳುವಂತೆ ಅತ್ಯಂತ ಶುದ್ಧವಾದದ್ದು ಎಂದರೆ ಅದು ಪರಮಾತ್ಮ ಅಥವಾ ಪರಬ್ರಹ್ಮ. ಅದೇ ಶುದ್ಧವಾದದ್ದು. ಕಾರಣಾಂತರದಿಂದ ಜೀವವು ಆ ಪರಮಾತ್ಮನಿಂದ ಬೇರ್ಪಟ್ಟಿದೆ. ಆಗ ಈ ಜೀವಕ್ಕೆ ಅಶುದ್ಧಿಯು ಏರ್ಪಟ್ಟಿತು. ಹಾಗಾಗಿ ಮತ್ತೆ ಆ ಜೀವವು ಪರಮಾತ್ಮನಲ್ಲಿ ಒಂದಾಗಿ ಸೇರಲು ಆ ಪರಮಾತ್ಮನ ಶುದ್ದಿಯನ್ನೇ ಪಡೆಯಬೇಕಾದದ್ದು ಅತ್ಯಂತ ಅನಿವಾರ್ಯ. ಅಂತಹ ಶುದ್ಧಿಯನ್ನು ಪಡೆಯುವುದಕ್ಕೋಸ್ಕರವೇ ನಮ್ಮ  ಪರಂಪರೆಯಲ್ಲಿ ಅನೇಕ ಸಂಸ್ಕಾರಗಳು ಬಂದಿವೆ. ಒಬ್ಬ ಆತ್ಮನು ತನ್ನಲ್ಲಿರುವ ಪಾಪದ ಕೊಳೆಯನ್ನೆಲ್ಲಾ ತೊಳೆದುಕೊಂಡು, ಮತ್ತೆ ಶುದ್ಧನಾಗಿ ಆತ್ಮಸಾಕ್ಷಾತ್ಕಾರವನ್ನು ಪಡೆಯುವುದಕ್ಕೋಸ್ಕರವೇ ಮಾಡುವ ಅತ್ಯಂತ ಶ್ರೇಷ್ಠಪ್ರಕ್ರಿಯೆ ಯಾವುದುಂಟೋ ಅದನ್ನೇ ಸಂಸ್ಕಾರ ಎಂಬುದಾಗಿ ಕರೆಯಲಾಗಿದೆ. ಶ್ರೀರಂಗ ಮಹಾಗುರುಗಳು ಹೇಳುವಂತೆ “ಸತ್ಯವನ್ನು ನೇರವಾಗಿ ಕಂಡ ಮಹರ್ಷಿಗಳು ಸತ್ಯದ ಸಂತಾನದ ಗುಂಪಿಗೆ ಸತ್ಯವನ್ನು ಮರೆಯದಂತೆ ಇಡಲು ಆತ್ಮ ಸಂಸ್ಕಾರಕ್ಕನುಗುಣವಾಗಿ ಶಿಕ್ಷಣ ಪಡೆಯುವ ಯೋಗವೂ ವಾತಾವರಣವೂ ಆಗುವಂತೆ ಮಾಡುವುದೇ ಸಂಸ್ಕಾರ” ಎಂದು. ಮತ್ತು “ಕೊಳೆಯಾಗಿರುವುದೇ ಸ್ವರೂಪ ಏಕೆ ಆಗಬಾರದು?, ಶುದ್ಧಿಯೇ ವಿರೂಪ ಎಂದು ಹೇಳಬಹುದಲ್ಲ? ಎಂದರೆ ಶುದ್ಧಿಯೇ ಸ್ವರೂಪವೆಂದು ನಮ್ಮ ಅನುಭವವೇ ಹೇಳುತ್ತದೆ. ಶುದ್ಧಿಯೇ ಸ್ವರೂಪವಾಗಿರುವುದರಿಂದಲೇ ಯಾರನ್ನಾದರೂ ಪ್ರಶ್ನೆಯನ್ನು ಕೇಳುವಾಗ ‘ನೀವೆಲ್ಲರೂ ಆರೋಗ್ಯವಾಗಿದ್ದೀರಿ ತಾನೆ? ಎಂದು ಕೇಳುತ್ತೇವೆ ಹೊರತು, ಕಾಲ ಕಾಲಕ್ಕೆ ಕಾಯಿಲೆಗಳು ಸರಿಯಾಗಿ ಬರುತ್ತಾ ಇವೆ ತಾನೇ? ಎಂದು ಕೇಳುವುದಿಲ್ಲ. ಕಾರಣ ಆರೋಗ್ಯ - ಸ್ವಾಸ್ಥ್ಯವೇ ಸ್ವರೂಪ ಎಂದು ಭಾವಿಸಬೇಕು. ಸ್ವರೂಪ ಆರೋಗ್ಯ ಇವುಗಳನ್ನು ಕಾಡಡಿಕೊಳ್ಳಲು ಬೇಕಾಗಿರುವುದೇ ಸಂಸ್ಕಾರವಾಗಿದೆ.

ಸೂಚನೆ :  10/11/2026 ರಂದು ಈ ಲೇಖನವು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Monday, November 9, 2026

ಪ್ರಶ್ನೋತ್ತರ ರತ್ನಮಾಲಿಕೆ 92 (Prasnottara Ratnamalike 92)

.

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಪ್ರಶ್ನೆ - 92. ಯಾವುದು ಅಭಯ

ಉತ್ತರ -  ವೈರಾಗ್ಯ.


ಈ ಪ್ರಶ್ನೋತ್ತರವು ಅಭಯ ಮತ್ತು ವೈರಾಗ್ಯಕ್ಕೆ ಇರುವ ಸಂಬಂಧವನ್ನು ತಿಳಿಸುತ್ತದೆ. ಅಭಯವೆಂಬುದು ಮಾನಸಿಕವಾದ ಒಂದು ಸ್ಥಿತಿ. ಭಯ ಇಲ್ಲದಿರುವಿಕೆ ಎಂದರ್ಥ. ರಾಗ ಎಂದರೆ ಅಂಟು, ವಿರಾಗ ಎಂದರೆ ಅಂಟು ಇಲ್ಲದಿರುವಿಕೆ. ಪದಾರ್ಥ ಅಥವಾ ವಿಷಯದ ಮೇಲೆ ನನ್ನದು ಎಂಬ ಮಮತ್ವ ಇಲ್ಲದಿರುವಿಕೆಯೇ ವಿರಾಗ. ಇದನ್ನೇ ಇನ್ನೊಂದು ಅರ್ಥದಲ್ಲಿ ‘ವೈರಾಗ್ಯ’ ಎಂಬುದಾಗಿ ಕರೆಯಲಾಗುತ್ತದೆ. ರಾಗವು ಬಂಧನಕ್ಕೆ ಕಾರಣವಾದರೆ, ವಿರಾಗವು ಮೋಕ್ಷಕ್ಕೆ ಕಾರಣ ಎಂಬುದಾಗಿ ನಮ್ಮ ಭಾರತೀಯ ಎಲ್ಲಾ ಸಾಹಿತ್ಯಗಳು ಒಕ್ಕೊರಳಿನಿಂದ ಸಾರುತ್ತವೆ. ರಾಗವು ಭಯಕ್ಕೆ ಕಾರಣ, ವಿರಾಗವು ಅಭಯಕ್ಕೆ ಕಾರಣ ಎಂದು ಹೇಳಿದಂತೆ ಆಯಿತು. ಹಾಗಾದರೆ ಅದು ಹೇಗೆ? ಎಂಬುದು ಇಲ್ಲಿ ಚಿಂತಿಸಬೇಕಾದ ವಿಷಯ.

ಈ ಪ್ರಪಂಚಕ್ಕೆ ಬಂದ ಪ್ರತಿಯೊಬ್ಬ ವ್ಯಕ್ತಿಗೂ ಪದಾರ್ಥಗಳ ಸಂಬಂಧ ಅತ್ಯಂತ ಅನಿವಾರ್ಯ. ಅದಿಲ್ಲವಾದರೆ ಈ ಪ್ರಪಂಚದಲ್ಲಿ ಬದುಕು ಅಸಾಧ್ಯ. ಬದುಕಿಗಾಗಿ ನಾನಾ ಪದಾರ್ಥದ ಜೊತೆ ನಿಕಟವಾದ ಸಂಬಂಧವು ಬೇಕೇಬೇಕು. ಈ ಎಲ್ಲಾ ಪದಾರ್ಥಗಳನ್ನು ಒಟ್ಟಾಗಿಸಿ ‘ಸಂಸಾರ’ ಎಂಬುದಾಗಿ ಕರೆಯಲಾಗುತ್ತದೆ. ಇದನ್ನೇ ವೇದ ಶಾಸ್ತ್ರಗಳು ಎಚ್ಚರಿಸಿವೆ. ಹೇಗೆಂದರೆ ನಮ್ಮ ಭೌತಿಕ ಬದುಕಿಗೆ ಇವು ಬೇಕಾದರೂ, ಬದುಕಿನ ಆಚೆಗೆ ಬೇಡವಾಗಿ ಇರುತ್ತವೆ ಎಂದು. ಈ ಸಂಸಾರವನ್ನು ಬಿಡಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಪದಾರ್ಥಗಳ ಜೊತೆ ಸಂಬಂಧವನ್ನು ಇಟ್ಟುಕೊಳ್ಳಬೇಕು.


ಆ ಸಂಬಂಧ ಅತಿಯಾಗಿ ಆ ಪದಾರ್ಥ ನಮ್ಮಿಂದ ದೂರವಾದಾಗ ಭಯ, ಆತಂಕ ಇವೆಲ್ಲಕ್ಕೂ ಕಾರಣವಾಗುತ್ತದೆ. ಇನ್ನೊಂದೆಡೆ “ದ್ವಿತಿಯಾದ್ಧಿ ಭಯಂ ಭವತಿ” ಎಂದೂ, “ಯದ್ ಅಂತರಂ ಕುರುತೇ ಅಥ ತಸ್ಯ ಭಯಂ ಭವತಿ” ಎಂದು ಉಪನಿಷತ್ತು ಸಾರುತ್ತದೆ. ಅಂದರೆ ತಾತ್ಪರ್ಯವಿಷ್ಟೇ, ಈ ಪ್ರಪಂಚದಲ್ಲಿ ಉಳಿಯಬೇಕಾದದ್ದು ಅಥವಾ ಉಳಿಯುವಂತಹದ್ದು ಅಥವಾ ನಿತ್ಯವಾದ ಶಾಶ್ವತವಾದ ಬದುಕು ಯಾವುದುಂಟೋ ಅದನ್ನು ಮಾತ್ರ ಆಶ್ರಯಿಸಬೇಕು. ಅದು ಮಾತ್ರವೇ ನಮಗೆ ಸುಖ ಶಾಂತಿ ನೆಮ್ಮದಿಯನ್ನು ಕೊಡುವಂತಹದ್ದು ಎಂಬುದಾಗಿ. ಅದನ್ನು ಶಾಶ್ವತ ಸುಖ ಎಂಬುದಾಗಿ ಹೇಳಿ, ಅದುವೇ ಬ್ರಹ್ಮಾನಂದ ಪರಮಾನಂದ ಇತ್ಯಾದಿ ಪದಗಳಿಂದ ಹೇಳಲಾಗಿದೆ. ಪ್ರತಿಯೊಬ್ಬ ಜೀವಿಯೂ ಬಯಸುವುದು ಇದನ್ನೇ. ಇದಕ್ಕೆ ಹೊರತಾದ ಬಯಕೆಯು ಭಯಕ್ಕೆ ಕಾರಣವೇ ಹೊರತು ಅಭಯ ಅಲ್ಲಿ ಸಾಧ್ಯವಿಲ್ಲ ಎಂದು ಉಪನಿಷತ್ತು ಸ್ಪಷ್ಟಪಡಿಸುತ್ತದೆ. ಆದ್ದರಿಂದ ಈ ಸಂಸಾರದಲ್ಲಿ ಹೇಗೆ ಬದುಕಿದಾಗ ನಾವು ಅಭಯವಾಗಿ ಇರಲು ಸಾಧ್ಯ? ಇದ್ದು ಇಲ್ಲದಂತೆ ಬದುಕಲು ಸಾಧ್ಯ?, ಇದ್ದದ್ದನ್ನು ಶಾಶ್ವತ ಬದುಕಿಗಾಗಿ ಬಳಸಿ ಹೇಗೆ ಬದುಕಬೇಕು? ಎಂಬಿತ್ಯಾದಿಯಾಗಿ ಅರಿತಾಗ ಮಾತ್ರ ಆ ಪದಾರ್ಥಕ್ಕೆ ಒಂದು ಸಾರ್ಥಕ್ಯ ಬರುತ್ತದೆ. ಆಗ ಆ ಪದಾರ್ಥದಲ್ಲಿ ನಮಗೆ ಯಾವ ಬಗೆಯ ಅಂಟೂ ಇರುವುದಿಲ್ಲ. ಇಂತಹ ವಿರಾಗಭಾವನೆ ಅಥವಾ ವೈರಾಗ್ಯ ಇದ್ದಾಗ ಅದು ನಮ್ಮಿಂದ ದೂರವಾಗುತ್ತದೆ ಎಂಬ ಭಯವೂ ಇರುವುದಿಲ್ಲ. ಇದನ್ನೇ ಅಭಯ ಎನ್ನಲಾಗಿದೆ. ಈ ಅಭಯದ ಭಾವವನ್ನೇ ವೈರಾಗ್ಯ ಎಂಬುದಾಗಿ ಕರೆಯಲಾಗಿದೆ. ಈ ನೇರದಲ್ಲಿ ಅಭಯ ಮತ್ತು ವೈರಾಗ್ಯಗಳಿಗೆ ಒಂದು ವಿಶಿಷ್ಟವಾದ ಸಂಬಂಧ ಇದೆ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ :  08/11/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ವ್ಯಾಸ ವೀಕ್ಷಿತ 213 ಭೀಷ್ಮನಿಗೆ ಶಿಶುಪಾಲನ ಮೂದಲಿಕೆಯ ಮಾತುಗಳು(Vyaasa Vikshita 213)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

 

image.png


ಶಿಶುಪಾಲನ ನೂರು ತಪ್ಪುಗಳನ್ನು ಕ್ಷಮಿಸುವೆ – ಎಂಬುದಾಗಿ ಶ್ರೀಕೃಷ್ಣನು ನುಡಿದಿದ್ದನೆಂಬುದರ ವೃತ್ತಾಂತವನ್ನು ಹೇಳಿ, ಭೀಷ್ಮರು ಭೀಮನಿಗೆ ಹೀಗೆ ಹೇಳಿದರು:  

"ಈ ಮಂದಮತಿ ಶಿಶುಪಾಲನು ಗೋವಿಂದನ ಆ ವರದ ದರ್ಪದಿಂದ ನಿನ್ನೊಂದಿಗೆ ಸೆಣಸಬಯಸುತ್ತಿದ್ದಾನೆ, ಅಷ್ಟೆ!"

ಭೀಮಸೇನಾ, ಎಂದೂ ರಣಾಂಗಣದಲ್ಲಿ ಹಿಂಸರಿಯದ ನಿನ್ನನ್ನೇ ಶಿಶುಪಾಲನು ಯುದ್ಧಕ್ಕೆ ಕರೆಯುತ್ತಿದ್ದಾನಲ್ಲಾ,! ಇದು ಆತನ ಸ್ವಂತಬುದ್ಧಿಯೆಂದೆಣಿಸಬೇಡ. ಜಗತ್ಪತಿಯಾದ ಶ್ರೀಕೃಷ್ಣನ ನಿಶ್ಚಯದಿಂದಲೇ ಆತನ ಬುದ್ಧಿಗೆ ಹಾಗೆ ಪ್ರೇರಣೆಯಾಗಿರುವುದೆಂದು ತಿಳಿದುಕೋ.

ಭೀಮಾ, ಈ ಕುಲಕಲಂಕನಾದ ಶಿಶುಪಾಲನು ಮೃತ್ಯುಪರವಶನಾಗಿರುವನೇ ಸರಿ. ನನ್ನನ್ನು ಕೆಣಕುತ್ತಾನಲ್ಲಾ - ಭೂಮಿಯ ಮೇಲಿರುವ ಯಾವ ರಾಜನು ತಾನೆ ನನ್ನ ಮೇಲೆ ಹೀಗೆಲ್ಲಾ ಆಕ್ಷೇಪ ಮಾಡಲು ಸಾಧ್ಯ?

ಈ ಮಹಾಬಾಹುವಾದ ಚೇದಿರಾಜನು ನಿಶ್ಚಯವಾಗಿಯೂ ಶ್ರೀಕೃಷ್ಣನ ತೇಜಸ್ಸಿನ ಅಂಶವೇ ಸರಿ. ಸರ್ವವ್ಯಾಪಿಯಾದ ಆ ಭಗವಂತನೇ ಅದನ್ನು ಹಿಂತೆಗೆದುಕೊಳ್ಳಲು ಬಯಸಿರುವನೆಂದೇ ಹೇಳಬೇಕು. ಎಂದೇ ಈ ದುರ್ಬುದ್ಧಿಯ ಶಿಶುಪಾಲನು ನಮ್ಮೆಲ್ಲರನ್ನೂ ಕಡೆಗಾಣಿಸುತ್ತಾ ಹುಲಿಯ ಹಾಗೆ ಗರ್ಜನೆಯನ್ನು ಮಾಡುತ್ತಿರುವನು.”

ಚೈದ್ಯನು, ಎಂದರೆ ಚೇದಿದೇಶದ ರಾಜನಾದ ಶಿಶುಪಾಲನು, ಭೀಷ್ಮನಾಡಿದ ಈ ಮಾತುಗಳನ್ನು ಸಹಿಸಲಿಲ್ಲ. ತೀವ್ರವಾಗಿ ಕೋಪಮಾಡಿಕೊಂಡು ಮತ್ತೆ ಭೀಷ್ಮನಿಗೆ ಹೀಗೆ ಉತ್ತರವಿತ್ತ:

"ವಂದಿಗಳಂತೆ, ಎಂದರೆ ಹೊಗಳುಭಟ್ಟರ ಹಾಗೆ, ಎದ್ದೆದ್ದು ನಿಂತು ನೀನು ಯಾರ ಸ್ತುತಿಯನ್ನು ಮಾಡುತ್ತಲಿರುವೆಯೋ ಆ ಕೇಶವನ ಪ್ರಭಾವವೆಂಬುದು ಶತ್ರುಗಳಾದ ನಮಗೂ ಇರಲಿ: ಪರಪ್ರಶಂಸೆಯಲ್ಲೇ ನಿನ್ನ ಮನಸ್ಸು ರಮಿಸುವುದಾದರೆ, ಈ ಜನಾರ್ದನನನ್ನು ಬಿಟ್ಟು ಇಲ್ಲಿರುವ ಇನ್ನಿತರ ರಾಜರನ್ನೂ ಹೊಗಳಬಹುದಲ್ಲಾ?

ಇದೋ ಇಲ್ಲಿ ದರದದೇಶದ ರಾಜನಿದ್ದಾನೆ. ರಾಜರುಗಳಲ್ಲಿ ಶ್ರೇಷ್ಠನೆನಿಸುವ ಈ ಬಾಹ್ಲೀಕನಿದ್ದಾನಲ್ಲ: ಈತನ ಪರಾಕ್ರಮವೆಂತಹುದು ಗೊತ್ತೇ? ಈತನು ಹುಟ್ಟುತ್ತಲೇ ಈತನ ಮೈಭಾರಕ್ಕೆ ಭೂಮಿಯೇ ಸೀಳಿಹೋಯಿತು!

ಇತ್ತ ನೋಡು, ಇಲ್ಲಿ ಕರ್ಣನಿದ್ದಾನೆ. ಈತನು ಅಂಗದೇಶ-ವಂಗದೇಶಗಳೆರಡಕ್ಕೂ ಒಡೆಯ. ಬಲದಲ್ಲೀತ ಇಂದ್ರನಿಗೇ ಸಮನೇ ಸರಿ. ಜೊತೆಗೆ ದೊಡ್ಡ ಬಿಲ್ಲನ್ನೇ ಸೆಳೆಯಬಲ್ಲವ; ಈತನನ್ನು ಹೊಗಳಬಹುದಲ್ಲಾ? ಕರ್ಣನ ಹಿರಿಮೆ ಇಷ್ಟೇ ಅಲ್ಲ. ಈತನ ಕರ್ಣಕುಂಡಲಗಳೆರಡೂ ಸಹಜವಾದವು, ದಿವ್ಯವಾದವು, ದೇವನಿರ್ಮಿತವಾದವು. ಈತನ ಕವಚವೂ ಅಷ್ಟೇ, ಎಳೇ ಸೂರ್ಯನ ಕಾಂತಿಯನ್ನು ಹೊಂದಿರುವಂತಹುದು. ಮತ್ತೂ ಒಂದು: ಜರಾಸಂಧನು ಇಂದ್ರನ ಹಾಗೆಯೇ ದುರ್ಜಯ, ಅರ್ಥಾತ್ ಯಾರೂ ಜಯಿಸಲಾರದವನು; ಅಂತಹವನನ್ನು ಬಾಹುಯುದ್ಧದಲ್ಲಿ ಈ ಕರ್ಣನು ಸೋಲಿಸಿರುವನು! ಅಷ್ಟೇ ಅಲ್ಲ. ಅವನ ಶರೀರವನ್ನು ತೀವ್ರವಾಗಿ ಘಾಸಿಗೊಳಿಸಿರುವನು!

ಇವುರುಗಳೇ ಅಲ್ಲದೆ ಪಿತಾ-ಪುತ್ರರ, ಎಂದರೆ ತಂದೆ-ಮಗ ಇವರ, ಈ ಜೋಡಿಯಿದೆಯಲ್ಲಾ ದ್ರೋಣ-ದ್ರೌಣಿಯರದ್ದು, ಅರ್ಥಾತ್ ದ್ರೋಣ-ಅಶ್ವತ್ಥಾಮರದ್ದು - ಇವರನ್ನು ಹೊಗಳು ಭೀಷ್ಮ! ಇಬ್ಬರೂ ಸ್ತುತ್ಯರ್ಹರೇ. ಇಬ್ಬರೂ ಬ್ರಾಹ್ಮಣಶ್ರೇಷ್ಠರು! ಭೀಷ್ಮನೇ, ಇವರಿಬ್ಬರಲ್ಲೊಬ್ಬರು ತೀವ್ರವಾಗಿ ಕೋಪಗೊಂಡಿದ್ದರೂ ಸರಿಯೇ. ಚರಾಚರಪ್ರಾಣಿಸಮೇತವಾಗಿ ಈ ಇಡೀ ಭೂಮಿಯನ್ನೇ ನಿಃಶೇಷವನ್ನಾಗಿಸಬಲ್ಲರು! ಯುದ್ಧದಲ್ಲಿ ದ್ರೋಣನಿಗೆ ಸಮನಾದ ಅರಸನನ್ನು ನಾ ಕಾಣೆ. ಅಶ್ವತ್ಥಾಮನಿಗೆ ಸಮನಾದವನ್ನೂ ನಾ ಕಾಣೆ. ಇವರಿಬ್ಬರನ್ನೇಕೆ ನೀನು ಸ್ತುತಿಸಬಯಸೆ?

ಸಾಗರಾಂತವಾದ ಈ ಭೂಮಿಯೇನುಂಟೋ ಅದರಲ್ಲಿ ನಿರುಪಮನೆನಿಸುವ, ಮಹಾಭುಜನಾದ, ರಾಜೇಂದ್ರನಾದ ದುರ್ಯೋಧನನನ್ನು ನೀ ಬಿಟ್ಟಿರುವೆಯೆಲ್ಲಾ!

ಜಯದ್ರಥನೇನು? ಅಸ್ತ್ರವಿದ್ಯೆಯಲ್ಲಿ ಪಳಗಿದವನು, ದೃಢವಾದ ಪರಾಕ್ರಮವುಳ್ಳವನು. ಅವನನ್ನು ಬಿಟ್ಟಿರುವೆಯೆಲ್ಲಾ!

ಸೂಚನೆ :  08/11/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Monday, November 2, 2026

ವ್ಯಾಸ ವೀಕ್ಷಿತ 212 ಕೃಷ್ಣನಿಂದಲೇ ಬರಲಿದೆ ಶಿಶುಪಾಲನ ಮೃತ್ಯು! (Vyaasa Vikshita 212)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



image.png



ಮರೆಯಾಗಿದ್ದ ಭೂತವು, ಅಶರೀರವಾದ ವಾಣಿಯಾಗಿ, ಶ್ರುತಶ್ರವೆ(ಶಿಶುಪಾಲನ ತಾಯಿ)ಯ ಪ್ರಶ್ನೆಗೆ ಈ ರೀತಿಯ ಉತ್ತರವನ್ನು ಕೊಟ್ಟಿತು:

"ಯಾರ ತೊಡೆಯ ಮೇಲೆ ಮಲಗಿಸಿದಾಗ ಈ ಶಿಶುವಿನ ಅಧಿಕವಾದ ಎರಡು ಭುಜಗಳು ನೆಲದ ಮೇಲೆ ಬಿದ್ದು ಹೋಗುವುವೋ, ಹಾಗೂ ಹಣೆಯ ಮೇಲಿರುವ ಮೂರನೆಯ ಕಣ್ಣು ಲಯಹೊಂದುವುದೋ, ಆತನೇ ಈತನಿಗೆ ಮೃತ್ಯುವಾಗುವನು!”

ಮೂರು ಕಣ್ಣು, ನಾಲ್ಕು ತೋಳುಗಳುಳ್ಳ ಮಗುವೊಂದು ಜನಿಸಿರುವುದೆಂಬುದಾಗಿ ಕೇಳಿ ಭೂಮಂಡಲದ ರಾಜರೆಲ್ಲರೂ ಅದನ್ನು ನೋಡುವುದಕ್ಕೋಸ್ಕರವಾಗಿ ಬರಲಾರಂಭಿಸಿದರು. ಹೀಗೆ ಬಂದವರನ್ನೆಲ್ಲ ರಾಜನು ಯಥೋಚಿತವಾಗಿ ಸತ್ಕರಿಸಿ, ಒಬ್ಬೊಬ್ಬ ಅರಸನ ತೊಡೆಯ ಮೇಲೂ ಮಗುವನ್ನಿರಿಸಿ ನೋಡುವುದಾಯಿತು.

ಹೀಗೆ ಸಾವಿರ ರಾಜರ ಸರದಿಯೂ ಆಯಿತು. ಒಬ್ಬೊಬ್ಬರ ತೊಡೆಯನ್ನೇರಿ ಕುಳಿತಾಗಲೂ ಆ ಲಕ್ಷಣಗಳಲ್ಲಿ ಯಾವ ಬದಲಾವಣೆಯೂ  ಉಂಟಾಗಲಿಲ್ಲ.

ಇದನ್ನೆಲ್ಲವನ್ನೂ ಕೇಳಿ ತಿಳಿದರು, ಸಂಕರ್ಷಣ-ಜನಾರ್ದನರು - ಎಂದರೆ ಬಲರಾಮ-ಕೃಷ್ಣರು. ದ್ವಾರವತಿಯಲ್ಲಿದ್ದ ಮಹಾಬಲಶಾಲಿಗಳಾದ ಅವರಿಬ್ಬರು ಚೇದಿಪುರಕ್ಕೆ ಬಂದರು. ಅವರೂ ಯಾದವಕುಲಕ್ಕೆ ಸೇರಿದವರು; ಸೋದರತ್ತೆಯಾದ ಅವಳೂ ಯಾದವಿಯೇ. ಸೋದರತ್ತೆಯನ್ನು ಕಾಣಲೆಂದು ಅವರು ಬಂದಿದ್ದರು.

ಬಂದವರೇ ಯಥೋಚಿತವಾಗಿ, ಎಂದರೆ ಯಥ್ಯಾಜ್ಯೇಷ್ಠವಾಗಿ - ಅರ್ಥಾತ್ ಹಿರಿಯವ ಮೊದಲು ಕಿರಿಯವ ಆಮೇಲೆ ಎಂಬ ಕ್ರಮದಲ್ಲಿ -  ರಾಜನಿಗೂ (ಎಂದರೆ ದಮಘೋಷನಿಗೂ), ಹಾಗೂ ಅವಳಿಗೂ (ಎಂದರೆ ಶ್ರುತಶ್ರವೆಗೂ), ನಮಸ್ಕಾರ ಮಾಡಿದರು. ಕುಶಲಪ್ರಶ್ನೆಯ ಜೊತೆ, ಅನಾಮಯಪ್ರಶ್ನೆ - ಎಂದರೆ ಆರೋಗ್ಯವನ್ನು ಕುರಿತಾದ ಪ್ರಶ್ನೆ- ಇವುಗಳನ್ನು ಕೇಳಿದರು, ಆ ರಾಮ-ಕೇಶವರು.

ಅವರು ಕುಳಿತುಕೊಂಡ ಬಳಿಕ, ಆ ಇಬ್ಬರೂ ವೀರರನ್ನು ಮತ್ತೂ ಅಧಿಕವಾದ ಪ್ರೀತಿಯಿಂದ ಆದರಿಸಿ, ದಾಮೋದರನ, ಎಂದರೆ ಕೃಷ್ಣನ, ಉತ್ಸಂಗದಲ್ಲಿ, ಎಂದರೆ ತೊಡೆಯ ಮೇಲೆ, ಶ್ರುತಶ್ರವೆಯು ಸ್ವತಃ ಮಲಗಿಸಿದಳು, ತನ್ನ ಶಿಶುವನ್ನು.

ಹಾಗೆ ಅವಳು ಆ ಶಿಶುವನ್ನು ಇಡುತ್ತಿದ್ದಂತೆಯೇ ಆ ಎರಡೂ ಅಧಿಕವಾದ ಭುಜಗಳು ಬಿದ್ದುಹೋದವು! ಹಾಗೆಯೇ ಆತನ ಲಲಾಟದಲ್ಲಿದ್ದ, ಎಂದರೆ ಹಣೆಯ ಮೇಲಿದ್ದ, ಕಣ್ಣು ಸಹ ಅಲ್ಲೇ ವಿಲೀನವಾಯಿತು!

ಅದನ್ನು ಕಂಡು ವ್ಯಥಿತಳೂ ಹೆದರಿದವಳೂ ಆದಳು, ಶ್ರುತಶ್ರವೆ. ಆ ಕಾರಣಕ್ಕಾಗಿಯೇ ಕೃಷ್ಣನನ್ನು ವರವೊಂದನ್ನು ಬೇಡಿದಳು:

"ಕೃಷ್ಣಾ, ಮಹಾಭುಜನೇ, ನಾನು ಭಯಾರ್ತೆ. ನನಗೊಂದು ವರವನ್ನು ಕೊಡು, ಕೃಷ್ಣ. ಆರ್ತರಿಗೆ ನೀನಲ್ಲವೆ ನೆಚ್ಚಿಕೆಯಾದವನು, ಭೀತರಾದವರಿಗೆ ಅಭಯಪ್ರದನಾದವನು?"

ಅವಳು ಹೀಗೆ ಹೇಳಲು, ಕೃಷ್ಣನೆಂದನು: “ಧರ್ಮಜ್ಞಳಾದ ದೇವಿಯೇ, ನೀನು ಹೆದರಬೇಡ. ನನ್ನಿಂದ ನಿನಗೆ ಭಯವು ಬರದು. ಯಾವ ವರವನ್ನು ನಿನಗೆ ಕೊಡಲಿ? ಸೋದರತ್ತೆಗೆ ನಾನೇನನ್ನು ಮಾಡಿಕೊಡಬಹುದು? ಅದು ಶಕ್ಯವೋ, ಅಶಕ್ಯವೋ, ನಿನ್ನ ಮಾತನ್ನು ನಾ ನಡೆಸಿಕೊಡುವೆ."

ಕೃಷ್ಣನು ಹೀಗೆ ನುಡಿಯಲು ಅವಳು ಹೀಗೆಂದಳು: "ಮಹಾಬಲನೇ, ಶಿಶುಪಾಲನ ಅಪರಾಧಗಳನ್ನು ನೀ ಕ್ಷಮಿಸಬೇಕು – ನನಗೋಸ್ಕರವಾಗಿ. ಓ ಯದುಶ್ರೇಷ್ಠನೇ. ಇದುವೇ ನಾ ಕೇಳುವ ವರವೆಂದು ತಿಳಿ" ಎಂದಳು.

ಅದಕ್ಕೆ ಕೃಷ್ಣನು, "ವಧಕ್ಕೆ ಅರ್ಹವೆನಿಸುವ ಕಾರ್ಯಗಳನ್ನು ಮಾಡಿದರೂ, ನನ್ನೀ ಸೋದರತ್ತೆಯ ಮಗನ ನೂರು ಅಪರಾಧಗಳನ್ನು ನಾ ಕ್ಷಮಿಸುವೆ! ಶೋಕ ಬೇಡ" ಎಂದು ಅವಳಿಗೆ ಹೇಳಿದನು.

ಸೂಚನೆ :  01/11/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 


ಪ್ರಶ್ನೋತ್ತರ ರತ್ನಮಾಲಿಕೆ 91 (Prasnottara Ratnamalike 91)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

image.png


ಪ್ರಶ್ನೆ - ೯೧. ಯಾವುದು ಆಶೌಚ

ಉತ್ತರ -  ಮನುಷ್ಯರ ಋಣ.


ಶೌಚ ಎಂದರೆ ಶುದ್ಧಿ. ಪ್ರತಿಯೊಂದು ಪದಾರ್ಥದ ಸಹಜ ಧರ್ಮ. ಇದರ ವಿರುದ್ಧವಾದದ್ದು ಆ ಆ ಪದಾರ್ಥದ ಧರ್ಮವನ್ನು ಕೆಡಿಸುವಂತೆ ಮಾಡುವಂತಹದ್ದು ಅದೇ ಆಶೌಚ. ಪ್ರಕೃತ ಆಶೌಚ ಎಂಬ ಪದವು ಮುಖ್ಯಾರ್ಥದಲ್ಲಿ ಮನುಷ್ಯರಿಗೆ ಬರುವ ಅಶುದ್ಧಿ ಎಂಬ ಅರ್ಥವನ್ನು ಕೊಡಲು ಬಳಸುವ ಪದವಾಗಿದೆ. ಮೃತಾಶೌಚ, ಜಾತಾಶೌಚ ಇತ್ಯಾದಿಯಾಗಿ ಆಶೌಚ ಪದದ ಬಳಕೆ ಮನುಷ್ಯರಲ್ಲಿ ಕಾಣಿಸುತ್ತದೆ. ಯಾವುದಾದರೂ ದ್ರವ್ಯಕ್ಕೆ ಉಂಟಾದ ಅಶುದ್ಧಿಯನ್ನು ಮಲ, ಕಲ್ಮಷ ಇತ್ಯಾದಿಯಾಗಿ ಹೇಳುವುದು ಉಂಟು. ಆದರೆ ಮನುಷ್ಯನಿಗೆ ಮಾನಸಿಕವಾಗಿ ಏರುಪೇರು ಉಂಟಾದಾಗ ಆಗುವ ಮಾನಸಿಕವಾದ ಅಶುದ್ಧಿಯನ್ನು ಆಶೌಚ ಎಂದು ಕರೆಯಲಾಗುತ್ತದೆ. ಇಲ್ಲಿ ಕೇಳಿದ ಪ್ರಶ್ನೆ ಹೀಗಿದೆ - ಆಶೌಚವು ಯಾವುದು? ಎಂದು. ಅದಕ್ಕೆ ಉತ್ತರ ಹೀಗಿದೆ - ಮನುಷ್ಯನಿಗೆ ಕೊಡಬೇಕಾದ ಅಥವಾ ತೀರಿಸಬೇಕಾದ ಋಣ ಎಂಬುದಾಗಿ. ಋಣ ಎಂದರೆ ಸಾಲ. ನಾವು ಪಡೆದದ್ದು. ಯಾವುದನ್ನೇ ಪಡೆದರೂ ಅದನ್ನು ಮರಳಿ ತೀರಿಸಬೇಕು - ಕೊಡಲೇಬೇಕು.


ಹಾಗಿಲ್ಲದಿದ್ದರೆ ಅದು ನಮ್ಮ ಮಾನಸಿಕವಾದ ಶುದ್ಧಿಯನ್ನು ಹಾಳು ಮಾಡುತ್ತದೆ. ಆದ್ದರಿಂದ ಆಶೌಚ ಎಂಬುದಾಗಿ ಇಲ್ಲಿ ಕರೆಯಲಾಗಿದೆ. ಅರ್ಥಶಾಸ್ತ್ರದಲ್ಲಿ ಯಾವನು ಅತ್ಯಂತ ಪರಿಶುದ್ಧ? ಎಂಬ ವಿಷಯವನ್ನು ಹೇಳುವಾಗ ‘ಯಃ ಅರ್ಥೇ ಶುಚಿಃ ಸಃ ಶುಚಿಃ’ ಎಂಬುದಾಗಿ. ಅಂದರೆ ಹಣದ ವಿಷಯದಲ್ಲಿ ಶುದ್ಧವಾಗಿದ್ದಾಗ ನಮ್ಮ ಅಗತ್ಯಕ್ಕೆ ಅನುಗುಣವಾಗಿ ಅರ್ಥ ಸಂಚಯವನ್ನು ಮಾಡುತ್ತೇವೆ. ಹಣವನ್ನು ನಮ್ಮ ವ್ಯವಹಾರಕ್ಕೋಸ್ಕರ ಬಳಸುತ್ತೇವೆ. ನಮ್ಮ ಜೀವನದ ನಿರ್ವಹಣೆಗಾಗಿ ಹಣದ ಅಗತ್ಯ ಇದ್ದರೆ ಬೇರೆಯವರಿಂದ ನಾವು ಹಣವನ್ನು ಪಡೆದು ನಮ್ಮ ಜೀವನದ ನಿರ್ವಹಣೆಯನ್ನು ಮಾಡುತ್ತೇವೆ. ಆಗ ಬೇರೆಯವರಿಂದ ಪಡೆದ ಹಣವನ್ನು ಮರಳಿಸಬೇಕಾಗುವುದು ಅತ್ಯಂತ ಅಗತ್ಯ. ಹೀಗೆ ಪಡೆದ ಹಣವನ್ನು ಋಣ ಅಥವಾ ಸಾಲ ಎಂಬುದಾಗಿ ಕರೆಯಲಾಗುತ್ತದೆ. ಇದನ್ನು ಮರಳಿಸದಿದ್ದರೆ ಅದು ನಮ್ಮನ್ನು ಕಾಡುತ್ತದೆ, ಸುಡುತ್ತದೆ.


ಅದು ನಮ್ಮ ಮಾನಸಿಕವಾದ ಅಶುದ್ಧಿಯನ್ನು ಉಂಟುಮಾಡುತ್ತದೆ ಎಂಬುದು ತಾತ್ಪರ್ಯ. ಪ್ರತಿಯೊಂದು ಪದಾರ್ಥಕ್ಕೂ ಒಬ್ಬೊಬ್ಬನ ಸ್ವಾಮಿತ್ವವಿರುತ್ತದೆ. ಆ ವಸ್ತು ಅವನ ಬಳಕೆಗೆ ಎಂದೇ ಸೃಷ್ಟಿಯಾಗಿರುತ್ತದೆ ಎಂಬುದಾಗಿ ಶಾಸ್ತ್ರ ಹೇಳುತ್ತದೆ. ಆ ವಸ್ತುವನ್ನು ಅವನ ಅನುಮತಿಯೊಂದಿಗೆ ಇನ್ನೊಬ್ಬನು ಬಳಸಿದಾಗ ಬಳಸಿದವನಿಗೆ ಋಣವಾಗಿ - ಸಾಲವಾಗಿ, ಅದು ಭಾರವಾಗಿ ಪರಿಣಿಮಿಸುತ್ತದೆ. ಋಣವನ್ನು ಕಳೆದುಕೊಳ್ಳಲು ಮತ್ತೆ ಅದನ್ನು ಕೊಡುವುದು ಸರಿಯಾದ ಕ್ರಮ. ಹಾಗೆ ಕೊಟ್ಟಾಗ ಮಾತ್ರ ಅವನು ಶುದ್ಧನಾಗುತ್ತಾನೆ. ವೇದವೂ ಕೂಡ ಹೇಳುವುದು ಅತ್ಯಂತ ಪ್ರಧಾನವಾಗಿ ದೇವ ಋಷಿ ಪಿತೃಗಳೆಂಬ ಮೂರು ಋಣಗಳನ್ನು. ಯಜ್ಞವನ್ನು ಮಾಡುವುದರ ಮೂಲಕ ದೇವ ಋಣವನ್ನು, ವಿದ್ಯೆಯನ್ನು ಚೆನ್ನಾಗಿ ಅಧ್ಯಯನ ಮಾಡುವುದರಿಂದ ಋಷಿಋಣವನ್ನು ಮತ್ತು ಸಂತತಿಯನ್ನು ಪಡೆಯುವುದರಿಂದ ಪಿತೄಣವನ್ನು ತೀರಿಸಿಕೊಳ್ಳಲೇಬೇಕು. ಈ ಎಲ್ಲಾ ಬಗೆಯ ಋಣಗಳಲ್ಲಿ ಮನುಷ್ಯರ ಋಣ ಅತ್ಯಂತ ಮುಖ್ಯ, ಹಾಗಾಗಿ ಅದು ತೀರಿಸಲೇಬೇಕಾದುದು. ಇವುಗಳನ್ನು ತೀರಿಸಿದಾಗಲೇ ಋಣಮುಕ್ತನಾಗುವುದು, ಮುಕ್ತಿಯನ್ನು ಸಂಪಾದಿಸುವುದೂ ಕೂಡ. ಆದ್ದರಿಂದ ಋಣ ಎಂಬುದು ಅಶುದ್ಧಿಗೆ ಕಾರಕ, ಅಶುದ್ಧಿಯನ್ನು ತೆಗೆದುಕೊಳ್ಳಬೇಕಷ್ಟೆ ಎಂಬುದಾಗಿ ಈ ಪ್ರಶ್ನೋತ್ತರ ಸಾರುತ್ತದೆ.


ಸೂಚನೆ :  01/11/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 


Sunday, November 1, 2026

ಅಷ್ಟಾಕ್ಷರೀ 116 ಧ್ಯೇಯನಿಷ್ಠಾ ಪ್ರಜಾಗರ್ತು (Astakshara 116)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಧ್ಯೇಯನಿಷ್ಠೆಯು ಸದಾ ಜಾಗರಗೊಂಡಿರಬೇಕು

ಇರುವೆಗಳ ಸಾಲನ್ನು ಗಮನಿಸಿರಬಹುದು. ಆಹಾರವನ್ನು ಸಂಪಾದಿಸಲೋ ಸಂಗ್ರಹಿಸಲೋ ಸತತವಾಗಿ ಸಂಚರಿಸುತ್ತಿರುತ್ತವೆ: ಮಳೆಗಾಲಕ್ಕೂ ಬೇಕಲ್ಲಾ  ಆಹಾರ!

ಏಕೆ ಬೇಕು ಆಹಾರ? ಇದೂ ಒಂದು ಪ್ರಶ್ನೆಯೇ? ಬದುಕಬೇಡವೇ? ಯಾವ ಪ್ರಾಣಿಯು ತಾನೆ ಬದುಕಬಯಸದು? ತಾನಿರಬೇಕೆಂದೇ, ಸಾವು ಬೇಡವೆಂದೇ, ಅಲ್ಲವೇ ಪ್ರತಿಜೀವಿಯ ಸಹಜ-ಪ್ರವೃತ್ತಿಯೂ? ಸತತ-ಯತ್ನವೂ!

ಜೀವನವು ನೀರಸವೆನಿಸಿದಾಗ ಮನುಷ್ಯರಿಗೆ ಬೋರ್ ಆಗುವುದುಂಟು. ಪ್ರಾಣಿಗಳಿಗೂ ಹಾಗೆ ಜಾಮಿತೆ ಆಗುವುದುಂಟೇ? ಇಲ್ಲವೆಂದೇ ಬಹುತೇಕ ವಿಜ್ಞಾನಿಗಳ ಮತ. ಅವುಗಳನ್ನು ಕೂಡಿಹಾಕಿಬಿಟ್ಟಾಗಲೋ ಮನೆಯೊಳಗೆ ಸಾಕುವಾಗಲೋ ಅವು ಕೆಲವೊಮ್ಮೆ ಮಂಕಾಗಿ ಬಿದ್ದುಕೊಂಡಿರುವುದುಂಟು. ಆದರೆ ತಮ್ಮ ಸಹಜ-ಪರಿಸರದಲ್ಲಿರುವಲ್ಲಿ ಅವಕ್ಕೆ ಜಾಮಿತೆಯೆಲ್ಲಿ ಬಂದೀತು?

ತೀವ್ರವಾಗಿ ಬೋರ್ ಆಗಿ ಆತ್ಮಹತ್ಯೆ ಮಾಡಿಕೊಳ್ಳುವ ಮನುಷ್ಯರು ಅಲ್ಲೊಬ್ಬರಿಲ್ಲೊಬ್ಬರಿರಬಹುದು. ಬಹುತೇಕ ನಿರಾಶತೆ-ಹತಾಶತೆಗಳಿಂದಲೇ ಮನುಷ್ಯರು ಆತ್ಮಹತ್ಯೆಯತ್ತ ಮನಸ್ಸು ಮಾಡುವುದು.

ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುವುದುಂಟೇ? ಇಲ್ಲವೆನ್ನುತ್ತಾರೆ, ವಿಜ್ಞಾನಿಗಳು. ಉತ್ಕಟ-ಸ್ವಾಮಿಭಕ್ತಿಯುಳ್ಳ ಪ್ರಾಣಿಗಳು, ತಮ್ಮನ್ನು ಪ್ರೀತಿಯಿಂದ ಸಾಕಿದವನು ಸತ್ತಾಗ, ಕೆಲದಿನ ಆಹಾರವನ್ನು ತೊರೆದು ಪ್ರಾಣಬಿಟ್ಟಿರುವುದುಂಟು.

ಅಷ್ಟು ಬಿಟ್ಟರೆ, ಜೀವನದ ಬಗ್ಗೆಯೇ ಏನೋ ಜಿಹಾಸೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಪ್ರಾಣಿಪ್ರಪಂಚದಲ್ಲೆಲ್ಲೂ ಕಾಣಲಾರೆವು! ಸಂಶಯಾಸ್ಪದ-ಪ್ರಸಂಗಗಳೆಂದರೆ ಇವು: ಜೇನುಹುಳುವು ಕಚ್ಚಿತೆಂದರೆ ಅದರ ಮುಳ್ಳು ಮುರಿದು ಅದಕ್ಕೂ ಸಾವು ಬಂತೆಂದೇ; ಸ್ವಸಮೂಹಕ್ಕೇ ತೀವ್ರಶತ್ರುಬಾಧೆಯಾದಾಗ ಸಮೂಹದ ಉಳಿವಿಗಾಗಿ ಹೋರಾಡಿ ಅಸುನೀಗುವ ಪ್ರಾಣಿಗಳೂ ಉಂಟು. ಆದರಿವು ಜುಗುಪ್ಸಾ-ಪ್ರೇರಿತವಾದ ಆತ್ಮಹತ್ಯೆಯಲ್ಲ; ಅಮರ್ಷದಿಂದಾದ ಪ್ರಾಣತ್ಯಾಗ. (“ಜಿಗುಪ್ಸೆ”ಯೆಂಬ ಪದ ಸರಿಯಲ್ಲ: "ಜುಗುಪ್ಸೆ"ಯೇ ಸರಿಯಾದದ್ದು.)

ಪ್ರಾಣಿಗಳಿಗೆ ತೀವ್ರ-ಕೋಪ/ದುಃಖಗಳಾಗುವುದು ತಮ್ಮ ಶಿಶುವಿಗೆ ಅಪಾಯವಾದಾಗಲೇ. ತಾನು ಬದುಕಿರುವುದೇ ತನ್ನ ಕಂದಗಳಿಗಾಗಿ - ಎಂಬಂತೆ ಅವು ವರ್ತಿಸುತ್ತವೆ. ಮರಿಗಳು ದೊಡ್ಡವಾಗುವ ತನಕವೂ ಈ ಕಾಳಜಿಯಿದ್ದೇ ಇರುತ್ತದೆ. ಮರಿ ಸತ್ತಾಗ ಕೊರಗುವುದುಂಟು. 

ಇದಕ್ಕಪವಾದವೆಂದರೆ ಹೆತ್ತೊಡನೆ ತೀವ್ರ-ಕ್ಷುಧೆಯಾಗಿ ಅಪರೂಪಕ್ಕೆ ತನ್ನ ಮೊಟ್ಟೆಯನ್ನೇ/ಮರಿಯನ್ನೇ ತಿಂದುಬಿಡುವುದು; ಅತಿರುಗ್ಣ-ಶಿಶುವನ್ನು ಉಳಿಸದಿರುವುದು.ಇಷ್ಟು ಬಿಟ್ಟರೆ, ಪ್ರಾಣಿಗಳಲ್ಲಿ ಹುಟ್ಟು-ಸಾವುಗಳ ಬಗ್ಗೆ ಜಿಜ್ಞಾಸೆಯೆಂಬುದೇನೂ ಇದ್ದಂತಿಲ್ಲ. (ಮನುಷ್ಯರಂತೆಯೇ ಮರಣದ ಚಿಂತನೆ ಮಾಡುವ ಪ್ರಾಣಿಗಳು ಕಥೆಗಳಲ್ಲಿ ಬರಬಹುದು; ಅದನ್ನು ಬಿಡಿ.)  

ಅಲ್ಲಿಗೆ ಪ್ರಾಣಿ-ಸ್ತೋಮದ ಲಕ್ಷ್ಯವೆರಡೇ: ತಾನಿರಬೇಕೆಂಬುದು ಮೊದಲನೆಯದು, ಸ್ವ-ಸಂತಾನ-ವೃದ್ಧಿಯಾಗಬೇಕೆಂಬುದು ಎರಡನೆಯದು. ಮನುಷ್ಯನ ಜೀವನವೂ ಅಷ್ಟೇ ಆದಲ್ಲಿ, ಪ್ರಾಣಿಗಳ ಜೀವನಕ್ಕಿಂತ ಉತ್ಕೃಷ್ಟವೆನಿಸಿಕೊಳ್ಳಲು ಏನುಂಟು ನಮ್ಮಲ್ಲಿ?

ಪ್ರಾಣಿ-ಜಗತ್ತಿನ ವಿಕಾಸದಲ್ಲಿ, ಬ್ರೈನಿನ ಕಾರ್ಟೆಕ್ಸ್-ನಿಯೋಕಾರ್ಟೆಕ್ಸ್ (cortex-neocortex)ಗಳು ಬೆಳೆಯುತ್ತ ಮನುಷ್ಯತ್ವವುಂಟಾಗಿ ನಾನಾಸಾಮರ್ಥ್ಯಗಳು ಅಭಿವೃದ್ಧವಾಗಿರುವುದರ ಬಗ್ಗೆ ಶ್ರೀರಂಗಮಹಾಗುರುಗಳು ಗಮನ ಸೆಳೆದಿದ್ದಾರೆ. ವಾಕ್ಕು-ಮನಸ್ಸು-ಪ್ರಜ್ಞೆಗಳಲ್ಲಿಯ ವಿಶೇಷ-ಪ್ರಗತಿಯು ಮಾನವತ್ವದ ವೈಶಿಷ್ಟ್ಯವಲ್ಲವೇ? 

ಆದರೆ ಇವೆಲ್ಲವಿದ್ದೂ, ಪ್ರಾಣಿಮಾತ್ರಕ್ಕಿರುವ ಲಕ್ಷ್ಯ-ದ್ವಯಕ್ಕೇ ಇವುಗಳ ವಿನಿಯೋಗವಾದರೆ ಏನು ಬಂದಂತಾಯ್ತು? (ಅತ್ತ, ಸ್ವಾರ್ಥಬುದ್ಧಿಯು ಅಧಿಕವಾಗಿ, ಪ್ರಾಣಿಗಳಿಗಿಂತಲೂ ಕೀಳಾಗಿ ವರ್ತಿಸುವ ಮಂದಿಯೂ ಕೆಲವರಿದ್ದಾರು, ಬಿಡಿ.)

ಯಾರಿಗೆ ಜೀವನದಲ್ಲಿ ಹಿರಿದಾದ ಧ್ಯೇಯವಿಲ್ಲವೋ ಅಂತಹವರಿಗೇ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಮನಸ್ಸು ಬರುವುದು. ಜೀವನದಲ್ಲಿಯ ಸೌಭಾಗ್ಯವು ದ್ವಿಪ್ರಕಾರವಾದುದು: ಉನ್ನತಧ್ಯೇಯವನ್ನು ಹೊಂದಿರುವುದು ಮೊದಲನೆಯದು; ಅದನ್ನು ಸಾಧಿಸಲು ಯುಕ್ತವೂ ಶಕ್ತವೂ ಆದ ಕಾರ್ಯಪದ್ಧತಿಯನ್ನು ಕಂಡುಕೊಂಡು ಅದನ್ನಾಚರಿಸುವುದು ಎರಡನೆಯದು. ಎರಡೂ ಬೇಕಾದದ್ದೇ.

ಧ್ಯೇಯವೆಂಬುದೂ ದ್ವಿಪ್ರಕಾರವಾಗಿರುವುದೆಂದೇ ಸರ್ವಶಾಸ್ತ್ರಗಳ ನಿರ್ಣಯವೂ : ಸಮುತ್ಕರ್ಷ ಹಾಗೂ ನಿಃಶ್ರೇಯಸ - ಎಂಬುದಾಗಿ. ಐಹಿಕ ಜೀವನದ ಏಳ್ಗೆಯು ಮೊದಲನೆಯದು; ಆಧ್ಯಾತ್ಮಿಕವಾದುದು ಎರಡನೆಯದು.

ಇವುಗಳ ಸಾಧನೆಗೆ ಬೇಕಾದುದು ಒಂದು ಉಗ್ರವಾದ ವೀರವ್ರತ. ಅದಕ್ಕೆ ಬೇಕಾದುದಾದರೂ ಹಗಲೆನ್ನದೆ ಇರುಳೆನ್ನದೆ ಹೃದಯದಲ್ಲಿರುವ ಅಕ್ಷಯವೂ ತೀವ್ರವೂ ಆದ ಧ್ಯೇಯನಿಷ್ಠೆ.

ಆ ನಿಷ್ಠೆಯು ನಮ್ಮ ಹೃದಯದೊಳಗೆ ಚೆನ್ನಾಗಿ ಜಾಗರಗೊಂಡಿರಬೇಕು. ಇದನ್ನೇ "ಧ್ಯೇಯನಿಷ್ಠಾ ಪ್ರ-ಜಾಗರ್ತು" ಎನ್ನುವುದು. ಇದುವೇ ಮೂಲಭೂತವಾದದ್ದು. ಇದು ರಾಷ್ಟ್ರೀಯಸ್ವಯಂಸೇವಕಸಂಘದ ನಿತ್ಯಪ್ರಾರ್ಥನೆಯ ಒಂದು ವಚನದ ಸಾರವೂ ಹೌದು.

ಜೀವನದ ಸಮಗ್ರನೋಟವನ್ನು ಹೊಂದಿದ್ದ ಶ್ರೀರಂಗಮಹಾಗುರುಗಳ ನುಡಿಯು ಇಲ್ಲಿ ಸ್ಮರಣೀಯ: "ಜೀವನಕ್ಕೆ ಮಹಾಧ್ಯೇಯ ಬೇಕು. ಅದಕ್ಕೆ ಅನುಗುಣವಾಗಿ ಅವಾಂತರಧ್ಯೇಯ(ಎಂದರೆ ಉಪಧ್ಯೇಯ)ಗಳು ಬೇಕು. ಪ್ರಕೃತಿಯಲ್ಲಿ ಯುದ್ಧ ತಪ್ಪಿದ್ದಲ್ಲ. ಸರಿಯಾದ ಧ್ಯೇಯಕ್ಕಾಗಿ ಯುದ್ಧವು ಬೇಕು. ಧ್ಯೇಯನಿರ್ಣಯಕ್ಕಾಗಿ ಅಭ್ಯುದಯ-ನಿಃಶ್ರೇಯಸಾತ್ಮಕವಾದ ಧರ್ಮದ ಸರಿಯಾದ ಜ್ಞಾನವಿರಬೇಕು."

ಬೆಳಗೇಳುತ್ತಲೇ ಧ್ಯೇಯಸ್ಮರಣೆಯಾಗಬೇಕು; ಅದಕ್ಕಾಗಿ ಮಲಗುವಾಗಲೂ ಧ್ಯೇಯಚಿಂತನೆಯಿರಬೇಕು: “ದಿವ್ಯ ಧ್ಯೇಯ ಕೀ ಓರ ತಪಸ್ವೀ ಜೀವನಭರ ಅವಿಚಲ ಚಲತಾ ಹೈ.”


ಸೂಚನೆ: 31/10//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.