Monday, November 9, 2026

ವ್ಯಾಸ ವೀಕ್ಷಿತ 213 ಭೀಷ್ಮನಿಗೆ ಶಿಶುಪಾಲನ ಮೂದಲಿಕೆಯ ಮಾತುಗಳು(Vyaasa Vikshita 213)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

 

image.png


ಶಿಶುಪಾಲನ ನೂರು ತಪ್ಪುಗಳನ್ನು ಕ್ಷಮಿಸುವೆ – ಎಂಬುದಾಗಿ ಶ್ರೀಕೃಷ್ಣನು ನುಡಿದಿದ್ದನೆಂಬುದರ ವೃತ್ತಾಂತವನ್ನು ಹೇಳಿ, ಭೀಷ್ಮರು ಭೀಮನಿಗೆ ಹೀಗೆ ಹೇಳಿದರು:  

"ಈ ಮಂದಮತಿ ಶಿಶುಪಾಲನು ಗೋವಿಂದನ ಆ ವರದ ದರ್ಪದಿಂದ ನಿನ್ನೊಂದಿಗೆ ಸೆಣಸಬಯಸುತ್ತಿದ್ದಾನೆ, ಅಷ್ಟೆ!"

ಭೀಮಸೇನಾ, ಎಂದೂ ರಣಾಂಗಣದಲ್ಲಿ ಹಿಂಸರಿಯದ ನಿನ್ನನ್ನೇ ಶಿಶುಪಾಲನು ಯುದ್ಧಕ್ಕೆ ಕರೆಯುತ್ತಿದ್ದಾನಲ್ಲಾ,! ಇದು ಆತನ ಸ್ವಂತಬುದ್ಧಿಯೆಂದೆಣಿಸಬೇಡ. ಜಗತ್ಪತಿಯಾದ ಶ್ರೀಕೃಷ್ಣನ ನಿಶ್ಚಯದಿಂದಲೇ ಆತನ ಬುದ್ಧಿಗೆ ಹಾಗೆ ಪ್ರೇರಣೆಯಾಗಿರುವುದೆಂದು ತಿಳಿದುಕೋ.

ಭೀಮಾ, ಈ ಕುಲಕಲಂಕನಾದ ಶಿಶುಪಾಲನು ಮೃತ್ಯುಪರವಶನಾಗಿರುವನೇ ಸರಿ. ನನ್ನನ್ನು ಕೆಣಕುತ್ತಾನಲ್ಲಾ - ಭೂಮಿಯ ಮೇಲಿರುವ ಯಾವ ರಾಜನು ತಾನೆ ನನ್ನ ಮೇಲೆ ಹೀಗೆಲ್ಲಾ ಆಕ್ಷೇಪ ಮಾಡಲು ಸಾಧ್ಯ?

ಈ ಮಹಾಬಾಹುವಾದ ಚೇದಿರಾಜನು ನಿಶ್ಚಯವಾಗಿಯೂ ಶ್ರೀಕೃಷ್ಣನ ತೇಜಸ್ಸಿನ ಅಂಶವೇ ಸರಿ. ಸರ್ವವ್ಯಾಪಿಯಾದ ಆ ಭಗವಂತನೇ ಅದನ್ನು ಹಿಂತೆಗೆದುಕೊಳ್ಳಲು ಬಯಸಿರುವನೆಂದೇ ಹೇಳಬೇಕು. ಎಂದೇ ಈ ದುರ್ಬುದ್ಧಿಯ ಶಿಶುಪಾಲನು ನಮ್ಮೆಲ್ಲರನ್ನೂ ಕಡೆಗಾಣಿಸುತ್ತಾ ಹುಲಿಯ ಹಾಗೆ ಗರ್ಜನೆಯನ್ನು ಮಾಡುತ್ತಿರುವನು.”

ಚೈದ್ಯನು, ಎಂದರೆ ಚೇದಿದೇಶದ ರಾಜನಾದ ಶಿಶುಪಾಲನು, ಭೀಷ್ಮನಾಡಿದ ಈ ಮಾತುಗಳನ್ನು ಸಹಿಸಲಿಲ್ಲ. ತೀವ್ರವಾಗಿ ಕೋಪಮಾಡಿಕೊಂಡು ಮತ್ತೆ ಭೀಷ್ಮನಿಗೆ ಹೀಗೆ ಉತ್ತರವಿತ್ತ:

"ವಂದಿಗಳಂತೆ, ಎಂದರೆ ಹೊಗಳುಭಟ್ಟರ ಹಾಗೆ, ಎದ್ದೆದ್ದು ನಿಂತು ನೀನು ಯಾರ ಸ್ತುತಿಯನ್ನು ಮಾಡುತ್ತಲಿರುವೆಯೋ ಆ ಕೇಶವನ ಪ್ರಭಾವವೆಂಬುದು ಶತ್ರುಗಳಾದ ನಮಗೂ ಇರಲಿ: ಪರಪ್ರಶಂಸೆಯಲ್ಲೇ ನಿನ್ನ ಮನಸ್ಸು ರಮಿಸುವುದಾದರೆ, ಈ ಜನಾರ್ದನನನ್ನು ಬಿಟ್ಟು ಇಲ್ಲಿರುವ ಇನ್ನಿತರ ರಾಜರನ್ನೂ ಹೊಗಳಬಹುದಲ್ಲಾ?

ಇದೋ ಇಲ್ಲಿ ದರದದೇಶದ ರಾಜನಿದ್ದಾನೆ. ರಾಜರುಗಳಲ್ಲಿ ಶ್ರೇಷ್ಠನೆನಿಸುವ ಈ ಬಾಹ್ಲೀಕನಿದ್ದಾನಲ್ಲ: ಈತನ ಪರಾಕ್ರಮವೆಂತಹುದು ಗೊತ್ತೇ? ಈತನು ಹುಟ್ಟುತ್ತಲೇ ಈತನ ಮೈಭಾರಕ್ಕೆ ಭೂಮಿಯೇ ಸೀಳಿಹೋಯಿತು!

ಇತ್ತ ನೋಡು, ಇಲ್ಲಿ ಕರ್ಣನಿದ್ದಾನೆ. ಈತನು ಅಂಗದೇಶ-ವಂಗದೇಶಗಳೆರಡಕ್ಕೂ ಒಡೆಯ. ಬಲದಲ್ಲೀತ ಇಂದ್ರನಿಗೇ ಸಮನೇ ಸರಿ. ಜೊತೆಗೆ ದೊಡ್ಡ ಬಿಲ್ಲನ್ನೇ ಸೆಳೆಯಬಲ್ಲವ; ಈತನನ್ನು ಹೊಗಳಬಹುದಲ್ಲಾ? ಕರ್ಣನ ಹಿರಿಮೆ ಇಷ್ಟೇ ಅಲ್ಲ. ಈತನ ಕರ್ಣಕುಂಡಲಗಳೆರಡೂ ಸಹಜವಾದವು, ದಿವ್ಯವಾದವು, ದೇವನಿರ್ಮಿತವಾದವು. ಈತನ ಕವಚವೂ ಅಷ್ಟೇ, ಎಳೇ ಸೂರ್ಯನ ಕಾಂತಿಯನ್ನು ಹೊಂದಿರುವಂತಹುದು. ಮತ್ತೂ ಒಂದು: ಜರಾಸಂಧನು ಇಂದ್ರನ ಹಾಗೆಯೇ ದುರ್ಜಯ, ಅರ್ಥಾತ್ ಯಾರೂ ಜಯಿಸಲಾರದವನು; ಅಂತಹವನನ್ನು ಬಾಹುಯುದ್ಧದಲ್ಲಿ ಈ ಕರ್ಣನು ಸೋಲಿಸಿರುವನು! ಅಷ್ಟೇ ಅಲ್ಲ. ಅವನ ಶರೀರವನ್ನು ತೀವ್ರವಾಗಿ ಘಾಸಿಗೊಳಿಸಿರುವನು!

ಇವುರುಗಳೇ ಅಲ್ಲದೆ ಪಿತಾ-ಪುತ್ರರ, ಎಂದರೆ ತಂದೆ-ಮಗ ಇವರ, ಈ ಜೋಡಿಯಿದೆಯಲ್ಲಾ ದ್ರೋಣ-ದ್ರೌಣಿಯರದ್ದು, ಅರ್ಥಾತ್ ದ್ರೋಣ-ಅಶ್ವತ್ಥಾಮರದ್ದು - ಇವರನ್ನು ಹೊಗಳು ಭೀಷ್ಮ! ಇಬ್ಬರೂ ಸ್ತುತ್ಯರ್ಹರೇ. ಇಬ್ಬರೂ ಬ್ರಾಹ್ಮಣಶ್ರೇಷ್ಠರು! ಭೀಷ್ಮನೇ, ಇವರಿಬ್ಬರಲ್ಲೊಬ್ಬರು ತೀವ್ರವಾಗಿ ಕೋಪಗೊಂಡಿದ್ದರೂ ಸರಿಯೇ. ಚರಾಚರಪ್ರಾಣಿಸಮೇತವಾಗಿ ಈ ಇಡೀ ಭೂಮಿಯನ್ನೇ ನಿಃಶೇಷವನ್ನಾಗಿಸಬಲ್ಲರು! ಯುದ್ಧದಲ್ಲಿ ದ್ರೋಣನಿಗೆ ಸಮನಾದ ಅರಸನನ್ನು ನಾ ಕಾಣೆ. ಅಶ್ವತ್ಥಾಮನಿಗೆ ಸಮನಾದವನ್ನೂ ನಾ ಕಾಣೆ. ಇವರಿಬ್ಬರನ್ನೇಕೆ ನೀನು ಸ್ತುತಿಸಬಯಸೆ?

ಸಾಗರಾಂತವಾದ ಈ ಭೂಮಿಯೇನುಂಟೋ ಅದರಲ್ಲಿ ನಿರುಪಮನೆನಿಸುವ, ಮಹಾಭುಜನಾದ, ರಾಜೇಂದ್ರನಾದ ದುರ್ಯೋಧನನನ್ನು ನೀ ಬಿಟ್ಟಿರುವೆಯೆಲ್ಲಾ!

ಜಯದ್ರಥನೇನು? ಅಸ್ತ್ರವಿದ್ಯೆಯಲ್ಲಿ ಪಳಗಿದವನು, ದೃಢವಾದ ಪರಾಕ್ರಮವುಳ್ಳವನು. ಅವನನ್ನು ಬಿಟ್ಟಿರುವೆಯೆಲ್ಲಾ!

ಸೂಚನೆ :  08/11/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.