Wednesday, November 11, 2026

ಮಹರ್ಷಿಗಳ ದೃಷ್ಟಿಯಲ್ಲಿ ಸಂಸ್ಕಾರದ ಅವಲೋಕನ (Maharsigala Drstiyalli Sanskarada Avalokana)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಸಂಸ್ಕಾರ ಎಂಬ ಪದವನ್ನು ನಾವು ಅನೇಕ ಕಡೆ, ಅನೇಕ ಬಾರಿ ಕೇಳಿದ್ದೇವೆ. ಒಬ್ಬ ವ್ಯಕ್ತಿಯನ್ನು ನೋಡಿದಾಗ ‘ಇವನಿಗೆ ಸಂಸ್ಕಾರವಿಲ್ಲವೇ? ಅಥವಾ ‘ಎಷ್ಟು ಇವನು ಸಂಸ್ಕಾರವಂತ! ಎಂಬಿತ್ಯಾದಿ ಮಾತನ್ನೂ ಕೇಳುತ್ತೇವೆ. ಅಂದರೆ ‘ಸಂಸ್ಕಾರ’ ಎಂದರೇನು? ಸಂಸ್ಕಾರಪದದ ಮೌಲಿಕವಾದ ಅರ್ಥ ಏನು? ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಮ್ಮ ಸನಾತನ ಭಾರತೀಯ ಪರಂಪರೆಯಲ್ಲಿ ಶುದ್ಧಿ ಎಂಬ ಅರ್ಥದಲ್ಲಿ ಸಂಸ್ಕಾರ ಎಂಬ ಪದದ ಬಳಕೆಯನ್ನು ಕಾಣಬಹುದು. ಪದಾರ್ಥಗಳನ್ನು ದೋಷಮುಕ್ತವಾಗಿ ಮಾಡುವ ಮತ್ತು ಇರುವ ಪದಾರ್ಥಕ್ಕೆ ಇನ್ನಷ್ಟು ಹೊಳಪನ್ನು ಕೊಡುವ ಯಾವ ಪ್ರಕ್ರಿಯೆಯುಂಟೋ, ಅದನ್ನು ಸಂಸ್ಕಾರ ಎಂಬುದಾಗಿ ಕರೆಯಬೇಕು. “ದೋಷ-ಅಪನಯನ-ಪೂರ್ವಕಂ ಗುಣಾಧಾನಂ ಸಂಸ್ಕಾರಃ” ಎಂಬುದಾಗಿ ಸಂಸ್ಕಾರ ಪದಕ್ಕೆ ಎಲ್ಲಾ ಕಡೆ ಈ ಅರ್ಥ ಇರುವುದನ್ನು ಕಾಣಬಹುದು. ಅಂದರೆ ಸಂಸ್ಕಾರದಿಂದ ಪದಾರ್ಥದಲ್ಲಿ ಶುದ್ಧಿ, ಪಾವಿತ್ರ್ಯ, ಸೊಬಗು ಮತ್ತು ಇನ್ನು ಅನೇಕ ಪರಿಷ್ಕಾರಗಳು ಉಂಟಾಗುತ್ತವೆ. ಹಾಗಾಗಿ ಇಂತಹ ವಿಶಿಷ್ಟವಾದ ಪರಿಕಲ್ಪನೆಯಲ್ಲಿ ಬಂದಿರುವುದೇ ಸಂಸ್ಕಾರ ಎಂಬುದು.

ಸಂಸ್ಕಾರ ಎಂಬುದು ಕೇವಲ ಪದಾರ್ಥವನ್ನು ಶುದ್ಧಿಗೊಳಿಸಲು ಮಾತ್ರ ಇರುವುದೇ? ಅದಕ್ಕೋಸ್ಕರ ಸಂಸ್ಕಾರ ಎಂಬ ವಿಷಯವನ್ನು ನಾವು ಅರ್ಥ ಮಾಡಿಕೊಳ್ಳಬೇಕೇ? ಹಾಗಲ್ಲ. ಸಂಸ್ಕಾರ ಎಂಬ ಅತಿವಿಶಿಷ್ಟವಾದ ಕಲ್ಪನೆ ಬಂದಿರುವುದೇ ಉದಾತ್ತವಾದ ಪುರುಷಾರ್ಥವನ್ನು ಸಂಪಾದನೆ ಮಾಡುವುದಕ್ಕೋಸ್ಕರ. ಅಂದರೆ ಮಾನವನಾಗಿ ಹುಟ್ಟಿ ಧರ್ಮ, ಅರ್ಥ, ಕಾಮ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಪಡೆಯಬೇಕಾದದ್ದು ಅತ್ಯಂತ ಅನಿವಾರ್ಯ. ಇದನ್ನು ಪಡೆಯಲು ಮಾನವಶರೀರಕ್ಕೆ ಆಧಾರಭೂತವಾಗಿರುವ ಶರೀರ, ಇಂದ್ರಿಯ, ಮನಸ್ಸು, ಬುದ್ಧಿ ಹೀಗೆ ಇವೆಲ್ಲವೂ ಶುದ್ಧವಾದಾಗ ಮಾತ್ರ ಆ ವ್ಯಕ್ತಿ ಪುರುಷಾರ್ಥಗಳನ್ನು ಪಡೆಯಲು ಸಾಧ್ಯ. ಶರೀರ ಬುದ್ಧಿ ಮೊದಲಾದವುಗಳು ಶುದ್ಧವಾಗಿರಬೇಕು ಎಂದಾದರೆ ಅವುಗಳಿಗೆ ಸರಿಯಾದ ವಿಷಯವನ್ನು ಕೊಡುಬೇಕು, ಅವು ಹಾಳಾಗದಂತೆ ರಕ್ಷಿಸಿಕೊಳ್ಳಬೇಕು. ಅದಕ್ಕಾಗಿ ಅನೇಕ ಪರಿಕರಗಳು ಬೇಕು ಮತ್ತು ಪರಿಸರಗಳು ಬೇಕು. ಆ ಪರಿಕರಗಳು ಮತ್ತು ಪರಿಸರವು ಶುದ್ಧವಾಗಿದ್ದಾಗ ಮಾತ್ರ ಅವುಗಳಿಂದ ಶರೀರ ಇಂದ್ರಿಯಾದಿಗಳು ಶುದ್ಧವಾಗಿರುತ್ತವೆ. ಶರೀರಕ್ಕೆ ಬೆಳೆಯಲು ಆಹಾರ ಬೇಕು, ಆ ಆಹಾರವು ಶುದ್ದವಾಗಿರಬೇಕು. ಶುದ್ಧವಾದ ಆಹಾರ ಬೆಳೆಯಲು ಒಳ್ಳೆಯ ಭೂಮಿ, ನೀರು, ಗಾಳಿ, ಅವಕಾಶ ಇವೆಲ್ಲವೂ ಶುದ್ಧವಾಗಿರಬೇಕು. ಹೀಗಿದ್ದಾಗ ಶರೀರ ಸ್ಪಷ್ಟವಾಗಿ, ಸ್ವಸ್ಥವಾಗಿ, ಶುದ್ಧವಾಗಿ ನಮ್ಮ ಇಷ್ಟಾರ್ಥವನ್ನು ಸಾಧಿಸಲು ಅನುಗುಣವಾಗಿ ಬೆಳೆಯಲು ಸಾಧ್ಯ. ಅಂತಯೇ ಇಂದ್ರಿಯ ಮತ್ತು ಮನಸ್ಸುಗಳಿಗೆ ಇರುವ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮೊದಲಾದ ವಿಷಯಶುದ್ಧಿ ಇರಬೇಕು. ಹಾಗಿದ್ದಾಗ ಮನಸ್ಸು ಕೂಡ ಶುದ್ಧವಾಗಿ ಇರಲು ಸಾಧ್ಯ. ಹೀಗೆ ಮಾನವ ತನ್ನ ಜೀವಿತಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು, ಪದಾರ್ಥಗಳನ್ನು ಅದರ ಧರ್ಮಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಇಟ್ಟುಕೊಂಡಾಗ ಮಾತ್ರ ಅವೆಲ್ಲವೂ ಅದರದರ ಪ್ರಯೋಜನಕ್ಕೆ ಅನುಗುಣವಾಗಿ ಕಾರ್ಯವನ್ನು ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ಈ ಅರ್ಥದಲ್ಲಿ ಶುದ್ಧಿ ಎಂಬುದಾಗಿ ಕರೆದು, ಅಂತಹ ಶುದ್ಧಿಯು ಯಾವುದರಿಂದ ಉಂಟಾಗುತ್ತದೆಯೋ ಅದಕ್ಕೆ ಸಂಸ್ಕಾರ ಎಂಬುದಾಗಿ ಮೂಲತಃ ಕರೆಯಲಾಗಿದೆ ಎಂಬುದು ನಮ್ಮ ಮಹರ್ಷಿಗಳ ನೋಟವಾಗಿದೆ.

ಶುದ್ಧವಾದದ್ದು ಎಂದರೆ ಯಾವುದೇ ವಿಕಾರವಿಲ್ಲದ ಸ್ವರೂಪ ಎಂದರ್ಥ. “ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ” ಎಂದು ಹೇಳುವಂತೆ ಅತ್ಯಂತ ಶುದ್ಧವಾದದ್ದು ಎಂದರೆ ಅದು ಪರಮಾತ್ಮ ಅಥವಾ ಪರಬ್ರಹ್ಮ. ಅದೇ ಶುದ್ಧವಾದದ್ದು. ಕಾರಣಾಂತರದಿಂದ ಜೀವವು ಆ ಪರಮಾತ್ಮನಿಂದ ಬೇರ್ಪಟ್ಟಿದೆ. ಆಗ ಈ ಜೀವಕ್ಕೆ ಅಶುದ್ಧಿಯು ಏರ್ಪಟ್ಟಿತು. ಹಾಗಾಗಿ ಮತ್ತೆ ಆ ಜೀವವು ಪರಮಾತ್ಮನಲ್ಲಿ ಒಂದಾಗಿ ಸೇರಲು ಆ ಪರಮಾತ್ಮನ ಶುದ್ದಿಯನ್ನೇ ಪಡೆಯಬೇಕಾದದ್ದು ಅತ್ಯಂತ ಅನಿವಾರ್ಯ. ಅಂತಹ ಶುದ್ಧಿಯನ್ನು ಪಡೆಯುವುದಕ್ಕೋಸ್ಕರವೇ ನಮ್ಮ  ಪರಂಪರೆಯಲ್ಲಿ ಅನೇಕ ಸಂಸ್ಕಾರಗಳು ಬಂದಿವೆ. ಒಬ್ಬ ಆತ್ಮನು ತನ್ನಲ್ಲಿರುವ ಪಾಪದ ಕೊಳೆಯನ್ನೆಲ್ಲಾ ತೊಳೆದುಕೊಂಡು, ಮತ್ತೆ ಶುದ್ಧನಾಗಿ ಆತ್ಮಸಾಕ್ಷಾತ್ಕಾರವನ್ನು ಪಡೆಯುವುದಕ್ಕೋಸ್ಕರವೇ ಮಾಡುವ ಅತ್ಯಂತ ಶ್ರೇಷ್ಠಪ್ರಕ್ರಿಯೆ ಯಾವುದುಂಟೋ ಅದನ್ನೇ ಸಂಸ್ಕಾರ ಎಂಬುದಾಗಿ ಕರೆಯಲಾಗಿದೆ. ಶ್ರೀರಂಗ ಮಹಾಗುರುಗಳು ಹೇಳುವಂತೆ “ಸತ್ಯವನ್ನು ನೇರವಾಗಿ ಕಂಡ ಮಹರ್ಷಿಗಳು ಸತ್ಯದ ಸಂತಾನದ ಗುಂಪಿಗೆ ಸತ್ಯವನ್ನು ಮರೆಯದಂತೆ ಇಡಲು ಆತ್ಮ ಸಂಸ್ಕಾರಕ್ಕನುಗುಣವಾಗಿ ಶಿಕ್ಷಣ ಪಡೆಯುವ ಯೋಗವೂ ವಾತಾವರಣವೂ ಆಗುವಂತೆ ಮಾಡುವುದೇ ಸಂಸ್ಕಾರ” ಎಂದು. ಮತ್ತು “ಕೊಳೆಯಾಗಿರುವುದೇ ಸ್ವರೂಪ ಏಕೆ ಆಗಬಾರದು?, ಶುದ್ಧಿಯೇ ವಿರೂಪ ಎಂದು ಹೇಳಬಹುದಲ್ಲ? ಎಂದರೆ ಶುದ್ಧಿಯೇ ಸ್ವರೂಪವೆಂದು ನಮ್ಮ ಅನುಭವವೇ ಹೇಳುತ್ತದೆ. ಶುದ್ಧಿಯೇ ಸ್ವರೂಪವಾಗಿರುವುದರಿಂದಲೇ ಯಾರನ್ನಾದರೂ ಪ್ರಶ್ನೆಯನ್ನು ಕೇಳುವಾಗ ‘ನೀವೆಲ್ಲರೂ ಆರೋಗ್ಯವಾಗಿದ್ದೀರಿ ತಾನೆ? ಎಂದು ಕೇಳುತ್ತೇವೆ ಹೊರತು, ಕಾಲ ಕಾಲಕ್ಕೆ ಕಾಯಿಲೆಗಳು ಸರಿಯಾಗಿ ಬರುತ್ತಾ ಇವೆ ತಾನೇ? ಎಂದು ಕೇಳುವುದಿಲ್ಲ. ಕಾರಣ ಆರೋಗ್ಯ - ಸ್ವಾಸ್ಥ್ಯವೇ ಸ್ವರೂಪ ಎಂದು ಭಾವಿಸಬೇಕು. ಸ್ವರೂಪ ಆರೋಗ್ಯ ಇವುಗಳನ್ನು ಕಾಡಡಿಕೊಳ್ಳಲು ಬೇಕಾಗಿರುವುದೇ ಸಂಸ್ಕಾರವಾಗಿದೆ.

ಸೂಚನೆ :  10/11/2026 ರಂದು ಈ ಲೇಖನವು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.