ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಧ್ಯೇಯನಿಷ್ಠೆಯು ಸದಾ ಜಾಗರಗೊಂಡಿರಬೇಕು
ಇರುವೆಗಳ ಸಾಲನ್ನು ಗಮನಿಸಿರಬಹುದು. ಆಹಾರವನ್ನು ಸಂಪಾದಿಸಲೋ ಸಂಗ್ರಹಿಸಲೋ ಸತತವಾಗಿ ಸಂಚರಿಸುತ್ತಿರುತ್ತವೆ: ಮಳೆಗಾಲಕ್ಕೂ ಬೇಕಲ್ಲಾ ಆಹಾರ!
ಏಕೆ ಬೇಕು ಆಹಾರ? ಇದೂ ಒಂದು ಪ್ರಶ್ನೆಯೇ? ಬದುಕಬೇಡವೇ? ಯಾವ ಪ್ರಾಣಿಯು ತಾನೆ ಬದುಕಬಯಸದು? ತಾನಿರಬೇಕೆಂದೇ, ಸಾವು ಬೇಡವೆಂದೇ, ಅಲ್ಲವೇ ಪ್ರತಿಜೀವಿಯ ಸಹಜ-ಪ್ರವೃತ್ತಿಯೂ? ಸತತ-ಯತ್ನವೂ!
ಜೀವನವು ನೀರಸವೆನಿಸಿದಾಗ ಮನುಷ್ಯರಿಗೆ ಬೋರ್ ಆಗುವುದುಂಟು. ಪ್ರಾಣಿಗಳಿಗೂ ಹಾಗೆ ಜಾಮಿತೆ ಆಗುವುದುಂಟೇ? ಇಲ್ಲವೆಂದೇ ಬಹುತೇಕ ವಿಜ್ಞಾನಿಗಳ ಮತ. ಅವುಗಳನ್ನು ಕೂಡಿಹಾಕಿಬಿಟ್ಟಾಗಲೋ ಮನೆಯೊಳಗೆ ಸಾಕುವಾಗಲೋ ಅವು ಕೆಲವೊಮ್ಮೆ ಮಂಕಾಗಿ ಬಿದ್ದುಕೊಂಡಿರುವುದುಂಟು. ಆದರೆ ತಮ್ಮ ಸಹಜ-ಪರಿಸರದಲ್ಲಿರುವಲ್ಲಿ ಅವಕ್ಕೆ ಜಾಮಿತೆಯೆಲ್ಲಿ ಬಂದೀತು?
ತೀವ್ರವಾಗಿ ಬೋರ್ ಆಗಿ ಆತ್ಮಹತ್ಯೆ ಮಾಡಿಕೊಳ್ಳುವ ಮನುಷ್ಯರು ಅಲ್ಲೊಬ್ಬರಿಲ್ಲೊಬ್ಬರಿರಬಹುದು. ಬಹುತೇಕ ನಿರಾಶತೆ-ಹತಾಶತೆಗಳಿಂದಲೇ ಮನುಷ್ಯರು ಆತ್ಮಹತ್ಯೆಯತ್ತ ಮನಸ್ಸು ಮಾಡುವುದು.
ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುವುದುಂಟೇ? ಇಲ್ಲವೆನ್ನುತ್ತಾರೆ, ವಿಜ್ಞಾನಿಗಳು. ಉತ್ಕಟ-ಸ್ವಾಮಿಭಕ್ತಿಯುಳ್ಳ ಪ್ರಾಣಿಗಳು, ತಮ್ಮನ್ನು ಪ್ರೀತಿಯಿಂದ ಸಾಕಿದವನು ಸತ್ತಾಗ, ಕೆಲದಿನ ಆಹಾರವನ್ನು ತೊರೆದು ಪ್ರಾಣಬಿಟ್ಟಿರುವುದುಂಟು.
ಅಷ್ಟು ಬಿಟ್ಟರೆ, ಜೀವನದ ಬಗ್ಗೆಯೇ ಏನೋ ಜಿಹಾಸೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಪ್ರಾಣಿಪ್ರಪಂಚದಲ್ಲೆಲ್ಲೂ ಕಾಣಲಾರೆವು! ಸಂಶಯಾಸ್ಪದ-ಪ್ರಸಂಗಗಳೆಂದರೆ ಇವು: ಜೇನುಹುಳುವು ಕಚ್ಚಿತೆಂದರೆ ಅದರ ಮುಳ್ಳು ಮುರಿದು ಅದಕ್ಕೂ ಸಾವು ಬಂತೆಂದೇ; ಸ್ವಸಮೂಹಕ್ಕೇ ತೀವ್ರಶತ್ರುಬಾಧೆಯಾದಾಗ ಸಮೂಹದ ಉಳಿವಿಗಾಗಿ ಹೋರಾಡಿ ಅಸುನೀಗುವ ಪ್ರಾಣಿಗಳೂ ಉಂಟು. ಆದರಿವು ಜುಗುಪ್ಸಾ-ಪ್ರೇರಿತವಾದ ಆತ್ಮಹತ್ಯೆಯಲ್ಲ; ಅಮರ್ಷದಿಂದಾದ ಪ್ರಾಣತ್ಯಾಗ. (“ಜಿಗುಪ್ಸೆ”ಯೆಂಬ ಪದ ಸರಿಯಲ್ಲ: "ಜುಗುಪ್ಸೆ"ಯೇ ಸರಿಯಾದದ್ದು.)
ಪ್ರಾಣಿಗಳಿಗೆ ತೀವ್ರ-ಕೋಪ/ದುಃಖಗಳಾಗುವುದು ತಮ್ಮ ಶಿಶುವಿಗೆ ಅಪಾಯವಾದಾಗಲೇ. ತಾನು ಬದುಕಿರುವುದೇ ತನ್ನ ಕಂದಗಳಿಗಾಗಿ - ಎಂಬಂತೆ ಅವು ವರ್ತಿಸುತ್ತವೆ. ಮರಿಗಳು ದೊಡ್ಡವಾಗುವ ತನಕವೂ ಈ ಕಾಳಜಿಯಿದ್ದೇ ಇರುತ್ತದೆ. ಮರಿ ಸತ್ತಾಗ ಕೊರಗುವುದುಂಟು.
ಇದಕ್ಕಪವಾದವೆಂದರೆ ಹೆತ್ತೊಡನೆ ತೀವ್ರ-ಕ್ಷುಧೆಯಾಗಿ ಅಪರೂಪಕ್ಕೆ ತನ್ನ ಮೊಟ್ಟೆಯನ್ನೇ/ಮರಿಯನ್ನೇ ತಿಂದುಬಿಡುವುದು; ಅತಿರುಗ್ಣ-ಶಿಶುವನ್ನು ಉಳಿಸದಿರುವುದು.ಇಷ್ಟು ಬಿಟ್ಟರೆ, ಪ್ರಾಣಿಗಳಲ್ಲಿ ಹುಟ್ಟು-ಸಾವುಗಳ ಬಗ್ಗೆ ಜಿಜ್ಞಾಸೆಯೆಂಬುದೇನೂ ಇದ್ದಂತಿಲ್ಲ. (ಮನುಷ್ಯರಂತೆಯೇ ಮರಣದ ಚಿಂತನೆ ಮಾಡುವ ಪ್ರಾಣಿಗಳು ಕಥೆಗಳಲ್ಲಿ ಬರಬಹುದು; ಅದನ್ನು ಬಿಡಿ.)
ಅಲ್ಲಿಗೆ ಪ್ರಾಣಿ-ಸ್ತೋಮದ ಲಕ್ಷ್ಯವೆರಡೇ: ತಾನಿರಬೇಕೆಂಬುದು ಮೊದಲನೆಯದು, ಸ್ವ-ಸಂತಾನ-ವೃದ್ಧಿಯಾಗಬೇಕೆಂಬುದು ಎರಡನೆಯದು. ಮನುಷ್ಯನ ಜೀವನವೂ ಅಷ್ಟೇ ಆದಲ್ಲಿ, ಪ್ರಾಣಿಗಳ ಜೀವನಕ್ಕಿಂತ ಉತ್ಕೃಷ್ಟವೆನಿಸಿಕೊಳ್ಳಲು ಏನುಂಟು ನಮ್ಮಲ್ಲಿ?
ಪ್ರಾಣಿ-ಜಗತ್ತಿನ ವಿಕಾಸದಲ್ಲಿ, ಬ್ರೈನಿನ ಕಾರ್ಟೆಕ್ಸ್-ನಿಯೋಕಾರ್ಟೆಕ್ಸ್ (cortex-neocortex)ಗಳು ಬೆಳೆಯುತ್ತ ಮನುಷ್ಯತ್ವವುಂಟಾಗಿ ನಾನಾಸಾಮರ್ಥ್ಯಗಳು ಅಭಿವೃದ್ಧವಾಗಿರುವುದರ ಬಗ್ಗೆ ಶ್ರೀರಂಗಮಹಾಗುರುಗಳು ಗಮನ ಸೆಳೆದಿದ್ದಾರೆ. ವಾಕ್ಕು-ಮನಸ್ಸು-ಪ್ರಜ್ಞೆಗಳಲ್ಲಿಯ ವಿಶೇಷ-ಪ್ರಗತಿಯು ಮಾನವತ್ವದ ವೈಶಿಷ್ಟ್ಯವಲ್ಲವೇ?
ಆದರೆ ಇವೆಲ್ಲವಿದ್ದೂ, ಪ್ರಾಣಿಮಾತ್ರಕ್ಕಿರುವ ಲಕ್ಷ್ಯ-ದ್ವಯಕ್ಕೇ ಇವುಗಳ ವಿನಿಯೋಗವಾದರೆ ಏನು ಬಂದಂತಾಯ್ತು? (ಅತ್ತ, ಸ್ವಾರ್ಥಬುದ್ಧಿಯು ಅಧಿಕವಾಗಿ, ಪ್ರಾಣಿಗಳಿಗಿಂತಲೂ ಕೀಳಾಗಿ ವರ್ತಿಸುವ ಮಂದಿಯೂ ಕೆಲವರಿದ್ದಾರು, ಬಿಡಿ.)
ಯಾರಿಗೆ ಜೀವನದಲ್ಲಿ ಹಿರಿದಾದ ಧ್ಯೇಯವಿಲ್ಲವೋ ಅಂತಹವರಿಗೇ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಮನಸ್ಸು ಬರುವುದು. ಜೀವನದಲ್ಲಿಯ ಸೌಭಾಗ್ಯವು ದ್ವಿಪ್ರಕಾರವಾದುದು: ಉನ್ನತಧ್ಯೇಯವನ್ನು ಹೊಂದಿರುವುದು ಮೊದಲನೆಯದು; ಅದನ್ನು ಸಾಧಿಸಲು ಯುಕ್ತವೂ ಶಕ್ತವೂ ಆದ ಕಾರ್ಯಪದ್ಧತಿಯನ್ನು ಕಂಡುಕೊಂಡು ಅದನ್ನಾಚರಿಸುವುದು ಎರಡನೆಯದು. ಎರಡೂ ಬೇಕಾದದ್ದೇ.
ಧ್ಯೇಯವೆಂಬುದೂ ದ್ವಿಪ್ರಕಾರವಾಗಿರುವುದೆಂದೇ ಸರ್ವಶಾಸ್ತ್ರಗಳ ನಿರ್ಣಯವೂ : ಸಮುತ್ಕರ್ಷ ಹಾಗೂ ನಿಃಶ್ರೇಯಸ - ಎಂಬುದಾಗಿ. ಐಹಿಕ ಜೀವನದ ಏಳ್ಗೆಯು ಮೊದಲನೆಯದು; ಆಧ್ಯಾತ್ಮಿಕವಾದುದು ಎರಡನೆಯದು.
ಇವುಗಳ ಸಾಧನೆಗೆ ಬೇಕಾದುದು ಒಂದು ಉಗ್ರವಾದ ವೀರವ್ರತ. ಅದಕ್ಕೆ ಬೇಕಾದುದಾದರೂ ಹಗಲೆನ್ನದೆ ಇರುಳೆನ್ನದೆ ಹೃದಯದಲ್ಲಿರುವ ಅಕ್ಷಯವೂ ತೀವ್ರವೂ ಆದ ಧ್ಯೇಯನಿಷ್ಠೆ.
ಆ ನಿಷ್ಠೆಯು ನಮ್ಮ ಹೃದಯದೊಳಗೆ ಚೆನ್ನಾಗಿ ಜಾಗರಗೊಂಡಿರಬೇಕು. ಇದನ್ನೇ "ಧ್ಯೇಯನಿಷ್ಠಾ ಪ್ರ-ಜಾಗರ್ತು" ಎನ್ನುವುದು. ಇದುವೇ ಮೂಲಭೂತವಾದದ್ದು. ಇದು ರಾಷ್ಟ್ರೀಯಸ್ವಯಂಸೇವಕಸಂಘದ ನಿತ್ಯಪ್ರಾರ್ಥನೆಯ ಒಂದು ವಚನದ ಸಾರವೂ ಹೌದು.
ಜೀವನದ ಸಮಗ್ರನೋಟವನ್ನು ಹೊಂದಿದ್ದ ಶ್ರೀರಂಗಮಹಾಗುರುಗಳ ನುಡಿಯು ಇಲ್ಲಿ ಸ್ಮರಣೀಯ: "ಜೀವನಕ್ಕೆ ಮಹಾಧ್ಯೇಯ ಬೇಕು. ಅದಕ್ಕೆ ಅನುಗುಣವಾಗಿ ಅವಾಂತರಧ್ಯೇಯ(ಎಂದರೆ ಉಪಧ್ಯೇಯ)ಗಳು ಬೇಕು. ಪ್ರಕೃತಿಯಲ್ಲಿ ಯುದ್ಧ ತಪ್ಪಿದ್ದಲ್ಲ. ಸರಿಯಾದ ಧ್ಯೇಯಕ್ಕಾಗಿ ಯುದ್ಧವು ಬೇಕು. ಧ್ಯೇಯನಿರ್ಣಯಕ್ಕಾಗಿ ಅಭ್ಯುದಯ-ನಿಃಶ್ರೇಯಸಾತ್ಮಕವಾದ ಧರ್ಮದ ಸರಿಯಾದ ಜ್ಞಾನವಿರಬೇಕು."
ಬೆಳಗೇಳುತ್ತಲೇ ಧ್ಯೇಯಸ್ಮರಣೆಯಾಗಬೇಕು; ಅದಕ್ಕಾಗಿ ಮಲಗುವಾಗಲೂ ಧ್ಯೇಯಚಿಂತನೆಯಿರಬೇಕು: “ದಿವ್ಯ ಧ್ಯೇಯ ಕೀ ಓರ ತಪಸ್ವೀ ಜೀವನಭರ ಅವಿಚಲ ಚಲತಾ ಹೈ.”
ಸೂಚನೆ: 31/10//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.