ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೯೧. ಯಾವುದು ಆಶೌಚ
ಉತ್ತರ - ಮನುಷ್ಯರ ಋಣ.
ಶೌಚ ಎಂದರೆ ಶುದ್ಧಿ. ಪ್ರತಿಯೊಂದು ಪದಾರ್ಥದ ಸಹಜ ಧರ್ಮ. ಇದರ ವಿರುದ್ಧವಾದದ್ದು ಆ ಆ ಪದಾರ್ಥದ ಧರ್ಮವನ್ನು ಕೆಡಿಸುವಂತೆ ಮಾಡುವಂತಹದ್ದು ಅದೇ ಆಶೌಚ. ಪ್ರಕೃತ ಆಶೌಚ ಎಂಬ ಪದವು ಮುಖ್ಯಾರ್ಥದಲ್ಲಿ ಮನುಷ್ಯರಿಗೆ ಬರುವ ಅಶುದ್ಧಿ ಎಂಬ ಅರ್ಥವನ್ನು ಕೊಡಲು ಬಳಸುವ ಪದವಾಗಿದೆ. ಮೃತಾಶೌಚ, ಜಾತಾಶೌಚ ಇತ್ಯಾದಿಯಾಗಿ ಆಶೌಚ ಪದದ ಬಳಕೆ ಮನುಷ್ಯರಲ್ಲಿ ಕಾಣಿಸುತ್ತದೆ. ಯಾವುದಾದರೂ ದ್ರವ್ಯಕ್ಕೆ ಉಂಟಾದ ಅಶುದ್ಧಿಯನ್ನು ಮಲ, ಕಲ್ಮಷ ಇತ್ಯಾದಿಯಾಗಿ ಹೇಳುವುದು ಉಂಟು. ಆದರೆ ಮನುಷ್ಯನಿಗೆ ಮಾನಸಿಕವಾಗಿ ಏರುಪೇರು ಉಂಟಾದಾಗ ಆಗುವ ಮಾನಸಿಕವಾದ ಅಶುದ್ಧಿಯನ್ನು ಆಶೌಚ ಎಂದು ಕರೆಯಲಾಗುತ್ತದೆ. ಇಲ್ಲಿ ಕೇಳಿದ ಪ್ರಶ್ನೆ ಹೀಗಿದೆ - ಆಶೌಚವು ಯಾವುದು? ಎಂದು. ಅದಕ್ಕೆ ಉತ್ತರ ಹೀಗಿದೆ - ಮನುಷ್ಯನಿಗೆ ಕೊಡಬೇಕಾದ ಅಥವಾ ತೀರಿಸಬೇಕಾದ ಋಣ ಎಂಬುದಾಗಿ. ಋಣ ಎಂದರೆ ಸಾಲ. ನಾವು ಪಡೆದದ್ದು. ಯಾವುದನ್ನೇ ಪಡೆದರೂ ಅದನ್ನು ಮರಳಿ ತೀರಿಸಬೇಕು - ಕೊಡಲೇಬೇಕು.
ಹಾಗಿಲ್ಲದಿದ್ದರೆ ಅದು ನಮ್ಮ ಮಾನಸಿಕವಾದ ಶುದ್ಧಿಯನ್ನು ಹಾಳು ಮಾಡುತ್ತದೆ. ಆದ್ದರಿಂದ ಆಶೌಚ ಎಂಬುದಾಗಿ ಇಲ್ಲಿ ಕರೆಯಲಾಗಿದೆ. ಅರ್ಥಶಾಸ್ತ್ರದಲ್ಲಿ ಯಾವನು ಅತ್ಯಂತ ಪರಿಶುದ್ಧ? ಎಂಬ ವಿಷಯವನ್ನು ಹೇಳುವಾಗ ‘ಯಃ ಅರ್ಥೇ ಶುಚಿಃ ಸಃ ಶುಚಿಃ’ ಎಂಬುದಾಗಿ. ಅಂದರೆ ಹಣದ ವಿಷಯದಲ್ಲಿ ಶುದ್ಧವಾಗಿದ್ದಾಗ ನಮ್ಮ ಅಗತ್ಯಕ್ಕೆ ಅನುಗುಣವಾಗಿ ಅರ್ಥ ಸಂಚಯವನ್ನು ಮಾಡುತ್ತೇವೆ. ಹಣವನ್ನು ನಮ್ಮ ವ್ಯವಹಾರಕ್ಕೋಸ್ಕರ ಬಳಸುತ್ತೇವೆ. ನಮ್ಮ ಜೀವನದ ನಿರ್ವಹಣೆಗಾಗಿ ಹಣದ ಅಗತ್ಯ ಇದ್ದರೆ ಬೇರೆಯವರಿಂದ ನಾವು ಹಣವನ್ನು ಪಡೆದು ನಮ್ಮ ಜೀವನದ ನಿರ್ವಹಣೆಯನ್ನು ಮಾಡುತ್ತೇವೆ. ಆಗ ಬೇರೆಯವರಿಂದ ಪಡೆದ ಹಣವನ್ನು ಮರಳಿಸಬೇಕಾಗುವುದು ಅತ್ಯಂತ ಅಗತ್ಯ. ಹೀಗೆ ಪಡೆದ ಹಣವನ್ನು ಋಣ ಅಥವಾ ಸಾಲ ಎಂಬುದಾಗಿ ಕರೆಯಲಾಗುತ್ತದೆ. ಇದನ್ನು ಮರಳಿಸದಿದ್ದರೆ ಅದು ನಮ್ಮನ್ನು ಕಾಡುತ್ತದೆ, ಸುಡುತ್ತದೆ.
ಅದು ನಮ್ಮ ಮಾನಸಿಕವಾದ ಅಶುದ್ಧಿಯನ್ನು ಉಂಟುಮಾಡುತ್ತದೆ ಎಂಬುದು ತಾತ್ಪರ್ಯ. ಪ್ರತಿಯೊಂದು ಪದಾರ್ಥಕ್ಕೂ ಒಬ್ಬೊಬ್ಬನ ಸ್ವಾಮಿತ್ವವಿರುತ್ತದೆ. ಆ ವಸ್ತು ಅವನ ಬಳಕೆಗೆ ಎಂದೇ ಸೃಷ್ಟಿಯಾಗಿರುತ್ತದೆ ಎಂಬುದಾಗಿ ಶಾಸ್ತ್ರ ಹೇಳುತ್ತದೆ. ಆ ವಸ್ತುವನ್ನು ಅವನ ಅನುಮತಿಯೊಂದಿಗೆ ಇನ್ನೊಬ್ಬನು ಬಳಸಿದಾಗ ಬಳಸಿದವನಿಗೆ ಋಣವಾಗಿ - ಸಾಲವಾಗಿ, ಅದು ಭಾರವಾಗಿ ಪರಿಣಿಮಿಸುತ್ತದೆ. ಋಣವನ್ನು ಕಳೆದುಕೊಳ್ಳಲು ಮತ್ತೆ ಅದನ್ನು ಕೊಡುವುದು ಸರಿಯಾದ ಕ್ರಮ. ಹಾಗೆ ಕೊಟ್ಟಾಗ ಮಾತ್ರ ಅವನು ಶುದ್ಧನಾಗುತ್ತಾನೆ. ವೇದವೂ ಕೂಡ ಹೇಳುವುದು ಅತ್ಯಂತ ಪ್ರಧಾನವಾಗಿ ದೇವ ಋಷಿ ಪಿತೃಗಳೆಂಬ ಮೂರು ಋಣಗಳನ್ನು. ಯಜ್ಞವನ್ನು ಮಾಡುವುದರ ಮೂಲಕ ದೇವ ಋಣವನ್ನು, ವಿದ್ಯೆಯನ್ನು ಚೆನ್ನಾಗಿ ಅಧ್ಯಯನ ಮಾಡುವುದರಿಂದ ಋಷಿಋಣವನ್ನು ಮತ್ತು ಸಂತತಿಯನ್ನು ಪಡೆಯುವುದರಿಂದ ಪಿತೄಣವನ್ನು ತೀರಿಸಿಕೊಳ್ಳಲೇಬೇಕು. ಈ ಎಲ್ಲಾ ಬಗೆಯ ಋಣಗಳಲ್ಲಿ ಮನುಷ್ಯರ ಋಣ ಅತ್ಯಂತ ಮುಖ್ಯ, ಹಾಗಾಗಿ ಅದು ತೀರಿಸಲೇಬೇಕಾದುದು. ಇವುಗಳನ್ನು ತೀರಿಸಿದಾಗಲೇ ಋಣಮುಕ್ತನಾಗುವುದು, ಮುಕ್ತಿಯನ್ನು ಸಂಪಾದಿಸುವುದೂ ಕೂಡ. ಆದ್ದರಿಂದ ಋಣ ಎಂಬುದು ಅಶುದ್ಧಿಗೆ ಕಾರಕ, ಅಶುದ್ಧಿಯನ್ನು ತೆಗೆದುಕೊಳ್ಳಬೇಕಷ್ಟೆ ಎಂಬುದಾಗಿ ಈ ಪ್ರಶ್ನೋತ್ತರ ಸಾರುತ್ತದೆ.