Thursday, July 3, 2025

ಪ್ರಶ್ನೋತ್ತರ ರತ್ನಮಾಲಿಕೆ 22 (Prasnottara Ratnamalike 22)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೨೨. ಜಾಡ್ಯ ಯಾವುದು?

ಉತ್ತರ - ಪಾಠಮಾಡಿದ್ದನ್ನು ಅಭ್ಯಾಸದಲ್ಲಿ ಇಟ್ಟುಕೊಳ್ಳದಿರುವುದು.


ಈ ಪ್ರಶ್ನೆ ಹೀಗಿದೆ 'ಜಾಡ್ಯ ಯಾವುದು?' ಎಂದು. ಅದಕ್ಕೆ ಉತ್ತರ - 'ಪಾಠ ಮಾಡಿದ್ದನ್ನು ಅಭ್ಯಾಸದಲ್ಲಿ ಇಟ್ಟುಕೊಳ್ಳದೆ ಇರುವಂತೆ ಇರುವುದು. ಜಾಡ್ಯ ಎಂದರೆ ಆಲಸ್ಯ, ಕಾರ್ಯಪ್ರವೃತ್ತಿ ಇಲ್ಲದೇ ಇರುವುದು ಇತ್ಯಾದಿಯಾಗಿ ಅರ್ಥವನ್ನು ಮಾಡುವುದುಂಟು. ಆದರೆ ಇಲ್ಲಿ ಪಾಠ ಮಾಡಿದ್ದನ್ನು ಮತ್ತೆ ಮತ್ತೆ ಓದದೇ ಇರುವುದನ್ನೇ 'ಜಾಡ್ಯ' ಎಂಬುದಾಗಿ ಹೇಳಲಾಗಿದೆ. ಅಂದರೆ ಓದದೇ ಇರುವುದು ಹೇಗೆ ಜಾಡ್ಯವಾಗುತ್ತದೆ? ಅದಕ್ಕೆ ಜಾಡ್ಯ ಎಂದು ಕರೆಯುವುದು ಹೇಗೆ ಸರಿ? ಎಂಬ ವಿಷಯವನ್ನು ನಾವಿಲ್ಲಿ ಮನಗಾಣಬೇಕಾಗಿದೆ.

ವಿಷಯದ ಅರಿವನ್ನು ನಾವು ಪಡೆಯಬೇಕು. ಅದಕ್ಕೆ ತಿಳಿದವರಿಂದ ಪಾಠವನ್ನು ಮಾಡಿಸಿಕೊಳ್ಳಬೇಕು. ಆಗ ತಿಳಿಯದ ವಿಷಯ ನಮ್ಮ ಬುದ್ಧಿಗೆ ಬರುತ್ತದೆ. ಹಾಗೆ ಒಮ್ಮೆ ಕೇಳಿದ ಪಾಠವನ್ನು ಹಾಗೆಯೇ ಧರಿಸುವ ಸಾಮರ್ಥ್ಯ ಕೆಲವರಿಗೆ ಮಾತ್ರ ಇರುತ್ತದೆ. ಯಾರು ಒಮ್ಮೆ ಕೇಳಿದ್ದನ್ನು ಹಾಗೆಯೇ ಹೇಳಬಲ್ಲರು ಅವರಿಗೆ 'ಏಕಪಾಠೀ- ಸಕೃತ್ ಪಾಠೀ' ಎಂದು ಕರೆಯುತ್ತಾರೆ. ಇನ್ನು ಕೆಲವರಿಗೆ ಪಾಠ ಮಾಡಿದ್ದನ್ನು ಪುನಃ ಪುನಃ ಅಭ್ಯಾಸ ಮಾಡುವ ಅವಶ್ಯಕತೆ ಇರುತ್ತದೆ. ಹೀಗೆ ಮತ್ತೆ ಮತ್ತೆ ಅಭ್ಯಾಸ ಮಾಡುವ ವಿಧಾನದಿಂದ ದ್ವಿಪಾಠೀ, ತ್ರಿಪಾಠೀ ಇತ್ಯಾದಿ ಶಬ್ದಗಳು ಹುಟ್ಟಿಕೊಂಡಿವೆ. ಅಂದರೆ ವಿಷಯವನ್ನು ಅರಿಯಬೇಕಾದರೆ ಅದಕ್ಕೆ ಅಭ್ಯಾಸ ಅತ್ಯಂತ ಅಗತ್ಯ. ಹಾಗೆ ಅಭ್ಯಾಸ ಮಾಡದಿದ್ದರೆ ನಾವು ತಿಳಿಯಬೇಕಾದ ವಿಷಯ ತಿಳಿಯದೆ ಹೋಗುತ್ತದೆ. ವಿಷಯವನ್ನು ತಿಳಿಯಬೇಕಾದರೆ ಅದನ್ನು ಮತ್ತೆ ಮತ್ತೆ ಮನನ ಮಾಡುವ ಅವಶ್ಯಕತೆ ಇರುತ್ತದೆ. ಅದಿಲ್ಲವಾದರೆ ವಿಷಯ ನಮ್ಮಿಂದ ದೂರವಾಗುತ್ತದೆ. ಹೀಗೆ ಅಧೀತವಾದ ಪಾಠವನ್ನು ಪುನರ್ಮನನ ಮಾಡಲು ಕೊಡದೇ ಇರುವ ಯಾವ ಸ್ವಭಾವವಿದೆಯೋ ಅದನ್ನು 'ಜಾಡ್ಯ - ಆಲಸ್ಯ' ಎಂಬುದಾಗಿ ಹೇಳಲಾಗಿದೆ.


 ಈ ಜಾಡ್ಯವು ಅಭ್ಯಾಸ ಮಾಡುವ ಪ್ರವೃತ್ತಿಯನ್ನು ಕೊಲ್ಲುತ್ತದೆ. 'ಆಲಸ್ಯಂ ಹಿ ಮನುಷ್ಯಾಣಾಂ ಶರೀರಸ್ಥೋ ಮಹಾನ್ ರಿಪುಃ' ಎಂಬಂತೆ ಆಲಸ್ಯವು ಈ ಶರೀರದಲ್ಲಿರುವ ದೊಡ್ಡ ಶತ್ರು ಎಂಬುದಾಗಿ ಪರಿಗಣಿಸಲಾಗಿದೆ. ಇದು ನಮ್ಮ ತನವನ್ನು ಹಾಳು ಮಾಡುತ್ತದೆ. ಒಬ್ಬ ವ್ಯಕ್ತಿ ಹೇಗೆ ಬದುಕಬೇಕು? ಹೇಗೆ ಬದುಕನ್ನು ಸಾಧಿಸಿದರೆ ತನ್ನ ಜೀವನ ಹಸನಾಗುತ್ತದೆ? ಎಂಬಿತ್ಯಾದಿಗಳನ್ನು ತಿಳಿದುಕೊಳ್ಳಬೇಕು. ತಿಳಿದು ಅಂತೆಯೇ ಜೀವನವನ್ನು ಮಾಡಬೇಕಾದುದು ಅವನ ಆದ್ಯ ಕರ್ತವ್ಯವಾಗಿರುತ್ತದೆ. ಹಾಗಾಗಿ ಅವನು ಆ ವಿಷಯವನ್ನು ಆಲಸ್ಯವಿಲ್ಲದೆ ಶ್ರದ್ಧಾಪೂರ್ವಕವಾಗಿ, ನಿರಂತರವಾಗಿ ಅನುಸಂಧಾನ ಮಾಡುವ ಅವಶ್ಯಕತೆ ಇರುತ್ತದೆ. ಹಾಗೆ ಮಾಡುವುದನ್ನು 'ಅಭ್ಯಾಸ' ಎಂಬುದಾಗಿ ಕರೆಯಲಾಗಿದೆ. 'ಅಭಿ' - ಎದರು, 'ಆಸ' - ಕುಳಿತುಕೊಳ್ಳುವುದು. ಯಾವ ವಿಷಯವನ್ನು ನಾವು ಕರತಲಾಮಲಕ ಮಾಡಿಕೊಳ್ಲಬೇಕಾಗಿದೆಯೋ ಅದರ ಎದುರು ನಾವು ಕುಳಿತುಕೊಳ್ಳಬೇಕು; ಅಂದರೆ ನಮ್ಮ ಮನಸ್ಸು ಇಂದ್ರಿಯಗಳೆಲ್ಲವೂ ಆ ವಿಷಯದಲ್ಲಿ ಹೊಗಬೇಕು. ಆಗ ಆ ವಿಷಯದ ಪರಿಪೂರ್ಣ ಅರಿವು ನಮ್ಮದಾಗುತ್ತದೆ. ಹಾಗಾಗಿ ಜಾಡ್ಯವನ್ನು ಮರೆತು ಅಭ್ಯಾಸವನ್ನು ಮಾಡಬೇಕು. ಅಭ್ಯಾಸವನ್ನು ಮಾಡದಿದ್ದರೆ ಅಮೃತವೂ ವಿಷವಾಗಬಹುದು 'ಅನಭ್ಯಾಸೇ ವಿಷಂ ವಿದ್ಯಾ ಎಂಬ ಈ ಮಾತು ಅಭ್ಯಾಸವನ್ನು ಮಾಡದೇ ಇರುವವನಿಗೆ ವಿದ್ಯೆಯೇ ಆದರೂ ತೊಡಕನ್ನು ಉಂಟುಮಾಡುತ್ತದೆ ಎಂಬುದನ್ನು ಸಾರುತ್ತದೆ. ಹಾಗಾಗಿ ಜಾಡ್ಯವನ್ನು ಬಿಟ್ಟು ಅಭ್ಯಾಸವನ್ನು ಮಾಡಬೇಕು ಎಂಬ ಸೂಚನೆಯನ್ನು ಈ ಪ್ರಶ್ನೋತ್ತರ ಕೊಟ್ಟಂತಿದೆ.


ಸೂಚನೆ : 29/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.



ಪ್ರಶ್ನೋತ್ತರ ರತ್ನಮಾಲಿಕೆ 21 (Prasnottara Ratnamalike 21)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೨೧. ಜೀವಿತ ಯಾವುದು?

ಉತ್ತರ - ನಿಂದ್ಯವಲ್ಲದ್ದು


ಈ ಮುಂದಿನ ಪ್ರಶ್ನೆ ಹೇಗಿದೆ- "ಜೀವಿತ ಯಾವುದು?" ಎಂಬುದಾಗಿ. ಅದಕ್ಕೆ ಉತ್ತರ- 'ನಿಂದ್ಯವಲ್ಲದ್ದು' ಎಂದು. ಜೀವಿತ ಎಂದರೇನು? ಅದು ನಿಂದ್ಯವಲ್ಲದ್ದು ಅಥವಾ ಸ್ತುತ್ಯವಾದದ್ದು ಹೇಗೆ ಆಗುತ್ತದೆ? ನಿಜವಾದ ಜೀವನ ಹೇಗಿರಬೇಕು? ಎಲ್ಲರೂ ಹೊಗಳುವಂತಿರಬೇಕು; ನಿಂದೆ ಮಾಡುವಂತೆ ಇರಬಾರದು. ಹಾಗೆ ಜೀವನವನ್ನು ಮಾಡಬೇಕು ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ. ಹಾಗಾದರೆ ಜೀವನ ಎಂದರೆ ಏನು? ನಿಂದ್ಯವಲ್ಲದ ಜೀವನವನ್ನು ಮಾಡುವ ವಿಧಾನ ಹೇಗೆ ಎಂಬ ವಿಷಯವನ್ನು ನಾವು ಈಗ ಚಿಂತಿಸಬೇಕಾಗಿದೆ.


ಹುಟ್ಟು ಸಾವುಗಳ ನಡುವಿನ ಒಂದು ಕಾಲದ ಪ್ರಮಾಣ ಏನಿದೆಯೋ ಅದನ್ನು ಜೀವನ ಎಂಬುದಾಗಿ ಕರೆಯುವ ಅಭ್ಯಾಸ ಸಾಮಾನ್ಯವಾಗಿ ಬಂದಿದೆ. ಜೀವದ ವ್ಯಾಪಾರ ಏನಿದೆಯೋ ಅದನ್ನು ಜೀವನ ಎಂಬುದಾಗಿ ಕರೆಯಬೇಕು  ಎಂದು ಶ್ರೀರಂಗ ಮಹಾಗುರುಗಳು ಈ ಜೀವನದ ಬಗ್ಗೆ ಒಂದು ಸುಂದರವಾದ ವಿವರಣೆಯನ್ನು ಕೊಟ್ಟಿದ್ದುಂಟು. "ಒಂದು ವಸ್ತು ಯಾವ ಮೂಲದಿಂದ ಹೊರಟಿತು, ಅಲ್ಲಿಂದ ವಿಕಾಸವಾಗಿ ಕ್ರಮಕ್ರಮವಾಗಿ ಅದರ ವಿಕಾಸವು ಮುಂದುವರಿದು ನೆಲೆ ಸೇರಿದಾಗ ಅಂದರೆ ತಾನು ಹೊರಟ ಮೂಲವನ್ನೇ ಮತ್ತೆ ಸೇರಿದಾಗ ಅದರ ವಿಕಾಸವು ಪೂರ್ಣವಾಗುವುದು; ಇಲ್ಲದಿದ್ದರೆ ವಿಕಾಸ ಅರೆಯಾಗುವುದು" ಎಂಬ ಮಾತು. ಈ ಮಾತನ್ನು ನಾವು ಈ ಜೀವಿತಕ್ಕೂ ಅಂದರೆ ಜೀವನಕ್ಕೂ ಅರ್ಥೈಸಿಕೊಳ್ಳಬಹುದು. ಈ ಜೀವವು ಯಾವ ಮೂಲದಿಂದ ಬಂದಿತೋ, ಆ ಮೂಲಕ್ಕೆ ಮತ್ತೆ ಹೋಗಿ ಸೇರಬೇಕಾದದ್ದು ಅತ್ಯಂತ ಅನಿವಾರ್ಯ. ಈ ಜೀವವು ಜೀವಭಾವವನ್ನು ಪಡೆದಾಗನಿಂದ ಜೀವಭಾವವನ್ನು ಬಿಡುವ ತನಕ ಯಾವ ಅವಧಿ ಉಂಟೋ, ಅದನ್ನು 'ಜೀವನ' ಎಂಬುದಾಗಿ ಕರೆಯಬೇಕು ಎಂದು ಶ್ರೀರಂಗ ಮಹಾಗುರುಗಳೇ ಅಪ್ಪಣೆ ಕೊಡಿಸಿದ್ದನ್ನು ಸ್ಮರಿಸಬಹುದು. ಭಗವಂತನ ಮಡಿಲಲ್ಲಿ ಆಡುತ್ತಿರುವಂತಹ ನಾವೆಲ್ಲರೂ ಯಾವುದೋ ಕಾರಣಕ್ಕೆ ಅಲ್ಲಿಂದ ಹೊರಗೆ ಬಂದು, ಮತ್ತೆ ಅಲ್ಲಿಗೆ ಹೋಗಲಾಗದೆ ಇತ್ತ ಸಂಚರಿಸುತ್ತಾ ಇದ್ದೇವೆ. ಎಲ್ಲಿಗೆ ಹೋಗಬೇಕೆಂಬ ನಿರ್ದಿಷ್ಟವಾದ ಗುರಿಯನ್ನು ಮರೆತಿದ್ದೇವೆ. ಹಾಗಾಗಿ ಈ ಜೀವಿತವು ನಮಗೆ ನಿಂದ್ಯವಾಗಿ ಇರುವಂತೆ ಕಾಣುತ್ತದೆ. 


ಉದಾಹರಣೆಗೆ ಒಂದು ಬೀಜವನ್ನು ನೆಟ್ಟು, ಅದಕ್ಕೆ ಬೇಕಾದ ನೀರು ಗೊಬ್ಬರ ಮುಂತಾದ ಸಹಕಾರ ಸಾಮಗ್ರಿಗಳನ್ನು ಕೊಟ್ಟು ಬೆಳೆಸಿದರೆ ಅದು ಮತ್ತೆ ಉತ್ತಮವಾದ ಬೀಜದಲ್ಲೇ ಕೊನೆಗೊಳ್ಳಬೇಕು. ಅಂದರೆ ಕಾಂಡ, ಶಾಖೆ, ಪುಷ್ಪ, ಫಲ ಹೀಗೆ ಎಲ್ಲೂ ವಿಕಾರವಾಗದೇ ಇದ್ದರೆ ತಾನೆ ಆ ಬೀಜವು ಮತ್ತೆ ಉತ್ಕೃಷ್ಟವಾದ ಬೀಜ ರೂಪವನ್ನು ಪಡೆಯಲು ಸಾಧ್ಯ! ವಿಕಾರವೇ ನಿಂದೆಗೆ ವಿಷಯವಾಗಿರುತ್ತದೆಯಷ್ಟೇ!. ಹಾಗೆಯೇ ಈ ಜೀವವು ಕೂಡ ತನ್ನ ಮೂಲದಿಂದ ಜಾರಿ ಮತ್ತೆ ಮೂಲ ನೆಲೆಯಾದ ಭಗವಂತನಲ್ಲಿಗೆ ಸೇರಬೇಕಾದರೆ ಅಂತಹ ಉತ್ಕೃಷ್ಟವಾದ ಪೂರ್ಣವಾದ ಜೀವನವನ್ನು ನಡೆಸಬೇಕಾಗುತ್ತದೆ. ಉಪನಿಷತ್ತು ಕೂಡ ಇದನ್ನೇ ಸಾರುತ್ತದೆ- 'ಪೂರ್ಣವಾದ ಪೂರ್ಣಮಿದಂ' ಎಂಬುದಾಗಿ. ಅಂದರೆ ಪೂರ್ಣತೆಯೇ ಸ್ತುತ್ಯವಾದ ಜೀವನ, ಅಪೂರ್ಣತೆಯೇ ನಿಂದ್ಯವಾದ ಜೀವನ. ಹಾಗಾಗಿ ಅಂತಹ ಪೂರ್ಣತೆಯ ಎಡೆಗೆ - ಭಗವಂತನ ಕಡೆಗೆ ನಮ್ಮ ನಡೆ ಇರುವಂತಾದರೆ ಅದು ತಾನೇ ಅನಿಂದ್ಯವಾದ ಜೀವಿತ.

ಸೂಚನೆ : 22/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 143 ಮಯನು ನಿರ್ಮಿಸಿದ ಅದ್ಭುತ ಸಭೆ(Vyaasa Vikshita 143)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಆ ಸಭೆಯು ಉದ್ದ-ಅಗಲಗಳಲ್ಲಿ ಹತ್ತು ಹತ್ತು ಸಾವಿರ ಮೊಳಗಳಷ್ಟಿತ್ತು. ಅಗ್ನಿ, ಸೂರ್ಯ, ಚಂದ್ರ - ಇವರುಗಳ ಸಭಾಭವನಗಳು ಹೇಗೆ ಪ್ರಕಾಶಮಯವಾಗಿರುತ್ತವೆಯೋ ಹಾಗೆ ಇದೂ ಭ್ರಾಜಮಾನವಾಗಿತ್ತು, ಎಂದರೆ ಕಂಗೊಳಿಸಿತ್ತು. ಒಟ್ಟಿನಲ್ಲಿ ಇದರ ರೂಪವು ಮನೋಹರವಾಗಿತ್ತು. ಸೂರ್ಯನ ಪ್ರಭೆಯನ್ನೇ ಹೊಡೆಯುವ ಹಾಗಿತ್ತು ಇದರ ಪ್ರಭೆ. ತನ್ನ ಅಲೌಕಿಕವಾದ ತೇಜಸ್ಸಿನಿಂದಾಗಿ ಅದು ಜ್ವಲಿಸುತ್ತಲಿದೆಯೋ ಎಂಬಂತೆ ತೋರುತ್ತಿತ್ತು.

ಅದರ ಎತ್ತರವೆಷ್ಟಿತ್ತೆಂದರೆ ಆಕಾಶವನ್ನು ಆವರಿಸಿಕೊಂಡಿರುವ ನೂತನ ಮೇಘದ ಹಾಗೆ ಅದು ಭಾಸವಾಗುತ್ತಿತ್ತು. ಅದರ ಆಯಾಮ-ವಿಪುಲತೆಗಳಿಂದಾಗಿ ಅದು ಪಾಪವನ್ನೂ ಆಯಾಸವನ್ನೂ ಕಳೆಯುವಂತಿತ್ತು.

ಉತ್ತಮದ್ರವ್ಯಗಳಿಂದ ಅದು ಸಂಪನ್ನವಾಗಿತ್ತು, ಎಂದರೆ ಸಮೃದ್ಧವಾಗಿತ್ತು: ಅದರ ಪ್ರಾಕಾರವೂ ತೋರಣವೂ ರತ್ನಮಯವಾಗಿತ್ತು; ಅನೇಕ ಚಿತ್ರಗಳಿಂದ ಕೂಡಿತ್ತು; ಐಶ್ವರ್ಯದಿಂದ ತುಂಬಿತ್ತು. ವಿಶ್ವಕರ್ಮನಿಂದ, ಎಂದರೆ ಮಯನಿಂದ, ಬಹಳ ಸುಂದರವಾಗಿ ಅದು ನಿರ್ಮಿತವಾಗಿತ್ತು.

ಬುದ್ಧಿಶಾಲಿಯಾದ ಮಯನು ಅದನ್ನದೆಷ್ಟು ಚೆನ್ನಾಗಿ ನಿರ್ಮಿಸಿದ್ದನೆಂದರೆ ದಾಶಾರ್ಹರ ಸುಧರ್ಮೆಯಾಗಲಿ, (ಎಂದರೆ ಯಾದವರ ಸಭೆಯಾಗಲಿ) ಅಥವಾ ಬ್ರಹ್ಮನದ್ದೇ ಸಭೆಯಾಗಲಿ  - ಈ ಸಭೆಯಷ್ಟು ರೂಪಸಂಪನ್ನವಾಗಿರಲಿಲ್ಲ.

ಮಯನ ಆಣತಿಯಂತೆ ಆ ಸಭಾಭವನವನ್ನು ರಕ್ಷಿಸುತ್ತಿದ್ದರು, ಕಿಂಕರರೆಂಬ ರಾಕ್ಷಸರು. ಅವರ ಸಂಖ್ಯೆ ಎಂಟು ಸಾವಿರ.  ಅವರು ಅದನ್ನು ಒಯ್ಯಬಲ್ಲವರೂ ಆಗಿದ್ದರು. ಅಂತರಿಕ್ಷದಲ್ಲಿ ಅವರು ಸಂಚರಿಸಬಲ್ಲವರು, ಘೋರರಾದವರು, ಮಹಾಕಾಯರು - ಎಂದರೆ  ಬೃಹತ್ತಾದ ಶರೀರವುಳ್ಳವರು. ಅವರ ಕಣ್ಣುಗಳು ಕೆಂಪಾಗಿಯೋ ಪಿಂಗಳವಾಗಿಯೋ ಇರುತ್ತಿದ್ದವು. ಅವರ ಕಿವಿಗಳು ಕಪ್ಪೆಚಿಪ್ಪಿನಂತಿದ್ದವು. ಅವರುಗಳು ಪ್ರಹಾರಮಾಡುವುದರಲ್ಲಿ ಸಮರ್ಥರಾಗಿದ್ದವರು.

ಆ ಸಭೆಯಲ್ಲಿ ಮಯನು ಅಪ್ರತಿಮವಾದ ಪುಷ್ಕರಿಣಿಯೊಂದನ್ನು ನಿರ್ಮಿಸಿದನು. ಅದರಲ್ಲಿಯ ಕಮಲವು ಮಣಿಮಯವಾದ ನಾಳದಿಂದ ಕೂಡಿತ್ತು. ವೈದೂರ್ಯಮಯವಾದ ದಳಗಳೊಂದಿಗೆ ವಿಕಾಸಗೊಂಡಿತ್ತು. (ಸಾಮಾನ್ಯವಾಗಿ ಎಲ್ಲರೂ ಬಳಸುವ ವೈಢೂರ್ಯ ಎಂಬ ಪದವು ಸಾಧುವಲ್ಲ. ವೈಡೂರ್ಯವೆಂಬುದೂ ಅಪಭ್ರಂಶವೇ).

ಪದ್ಮರಾಗಮಣಿಯಿಂದಾದ ಕಮಲಗಳ ಸೌರಭವು ಅಲ್ಲಿ ತುಂಬಿತ್ತು. ಸಹಸ್ರಾರು ಪಕ್ಷಿಗಳ ಸಮೂಹವು ಅಲ್ಲಿ ಸೇರಿತ್ತು. ಅಲ್ಲಿಯ ಕಮಲಸಸ್ಯಗಳು ಚೆನ್ನಾಗಿ ಹೂಬಿಟ್ಟಿದ್ದು ಅದರಿಂದಾಗಿ ಆ ಸಭೆಯು ಆಕರ್ಷಕವಾಗಿದ್ದಿತು. ಆ ಸರೋವರದಲ್ಲಿ ಚಿನ್ನದ ಕೂರ್ಮಗಳು ಮತ್ಸ್ಯಗಳೂ ಇದ್ದವು. ಅದರ ಮೆಟ್ಟಿಲುಗಳು ವಿಚಿತ್ರ ಸ್ಫಟಿಕಗಳಿಂದಾಗಿದ್ದವು. ಅಲ್ಲಿಯ ನೀರಲ್ಲಿ ಕೆಸರೇ ಮೂಡುತ್ತಿರಲಿಲ್ಲ. ಮಂದಮಾರುತವು ಅಲ್ಲಿ ಬೀಸುತ್ತಿತ್ತು. ಮುತ್ತಿನ ಬಿಂದುಗಳಿಂದ ಅದು ವ್ಯಾಪ್ತವಾಗಿತ್ತು. ಅದರ ಪರ್ಯಂತದಲ್ಲಿಯ ವೇದಿಕೆಗಳು ಮಹಾಮಣಿಗಳಿಂದಾದ ಶಿಲಾಪಟ್ಟಗಳಿಂದ ಕೂಡಿದ್ದವು.

ಮಣಿಖಚಿತವೂ ರತ್ನಮಯವೂ ಆದ ಆ ಸಭೆಗೆ ಅನೇಕ ಅರಸರು ಬರುತ್ತಿದ್ದರು. ಕಂಡೂ ಅದರ ವಿಶಿಷ್ಟತೆಯನ್ನು ಗುರುತಿಸಲಾರರು.ಹಾಗಾಗಿ ತಮ್ಮ ಅಜ್ಞಾನದಿಂದಾಗಿ ಅಲ್ಲಿ ಬಿದ್ದುಬಿಡುತ್ತಿದ್ದರು!

ಆ ಸಭೆಯ ಸುತ್ತಲೂ ಬಗೆಬಗೆಯ ಮನೋಹರವಾದ ವೃಕ್ಷಗಳು ಬೆಳೆದಿದ್ದವು. ಅವು ಸದಾಕಾಲವೂ ಪುಷ್ಪಭರಿತವಾಗಿರುತ್ತಿದ್ದವು. ಮಂದಮಾರುತದಿಂದಾಗಿ ಅವು ಓಲಾಡುತ್ತಿದ್ದವು. ಭವನದ ಸುತ್ತಲೂ ಸುಗಂಧಭರಿತವಾದ ಕಾನನಗಳೂ ಪುಷ್ಕರಿಣಿಗಳೂ ಇದ್ದವು. ಅವುಗಳಲ್ಲಿಯ ಹಂಸ-ಕಾರಂಡವಪಕ್ಷಿಗಳೂ ಚಕ್ರವಾಕಪಕ್ಷಿಗಳೂ ಅದಕ್ಕೆ ಶೋಭೆಯನ್ನುಂಟುಮಾಡುತ್ತಿದ್ದುವು. ಜಲಜ-ಪದ್ಮಗಳು ಸ್ಥಲಜ-ಪದ್ಮಗಳು – ಇವೆರಡರ ಗಂಧವನ್ನೂ ವಾಯುವು ಎಲ್ಲೆಡೆಯಿಂದ ಹೊತ್ತು ತಂದು ಪಾಂಡವರಿಗೆ ಸೇವೆಯನ್ನು ಸಲ್ಲಿಸುತ್ತಿತ್ತು.

ಸುಮಾರು ಹದಿನಾಲ್ಕು ತಿಂಗಳುಗಳಲ್ಲಿ ಇಂತಹ ಅದ್ಭುತಸಭೆಯನ್ನು ನಿರ್ಮಿಸಿ, ಅದು ಸಂಪೂರ್ಣವಾಗಿ ಸಿದ್ಧವಾದ ಬಳಿಕ, ಮಯನು ಯುಧಿಷ್ಠಿರನಿಗೆ ಅದನ್ನರುಹಿದನು.

ಸೂಚನೆ : 29/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 142 ಭೀಮಾರ್ಜುನರಿಗೆ ಉಡುಗೊರೆ; ಅದ್ಭುತ ಸಭಾನಿರ್ಮಾಣ (Vyaasa Vikshita 142)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ತಾನದೆಂತಹ ಸಭೆಯನ್ನು ನಿರ್ಮಿಸಿಕೊಡುವೆನೆಂದು ಮಯನು ಹೇಳುತ್ತಾನೆ: "ಆ ಸಭೆಯು ಆಶ್ಚರ್ಯಕರವಾಗಿರುವುದು; ಸರ್ವರತ್ನಗಳಿಂದಲೂ ವಿಭೂಷಿತವಾಗಿರುವುದು; ಮನಸ್ಸಿಗೆ ಪ್ರಹ್ಲಾದವನ್ನು, ಎಂದರೆ ವಿಶೇಷವಾದ ಸಂತೋಷವನ್ನು, ಉಂಟುಮಾಡುವಂತಹುದಾಗಿರುವುದು.

ಅರ್ಜುನಾ, ಬಿಂದುಸರಸ್ಸಿನಲ್ಲಿ ಉಗ್ರವಾದ ಗದೆಯೊಂದಿರುವುದು. ವೃಷಪರ್ವ-ರಾಜನು ಯುದ್ಧದಲ್ಲಿ ಶತ್ರುಗಳನ್ನು ಸಂಹರಿಸಿ ಆ ಗದೆಯನ್ನು ಅಲ್ಲಿ ಇಟ್ಟಿರುವನೆಂದು ಭಾವಿಸುತ್ತೇನೆ. ಅ ಗದೆಯು ಬಹಳ ದೊಡ್ಡದಾದುದ್ದು, ಭಾರವಾಗಿರುವುದು; ಭಾರಿ ಹೊಡೆತಗಳನ್ನೂ ಅದು ಸಹಿಸಿಕೊಳ್ಳಬಲ್ಲುದು. ಅಲ್ಲದೆ, ಚಿನ್ನದ ಬಿಂದುಗಳಿಂದ ಚಿತ್ರಿತವೂ ಆಗಿರುವುದು. ಶತ್ರುಸಂಹಾರಿಣಿಯಾದ ಆ ಗದೆಯು ಒಂದು ಲಕ್ಷ ಗದೆಗಳಿಗೆ ಸಮನಾದುದು. ತಮಗೆ (ಅಂದರೆ ಅರ್ಜುನನಿಗೆ) ಗಾಂಡೀವವು ಹೇಗೆ ಅನುರೂಪವಾಗಿರುವುದೋ, ಅದೇ ರೀತಿಯಲ್ಲಿ ಆ ಗದೆಯು ಭೀಮನಿಗೆ ಅನುರೂಪವಾಗಿರುವಂತಹುದು.

ಹಾಗೆಯೇ ವರುಣದೇವನ ಮಹಾಶಂಖವೊಂದಿದೆ. ಬಹಳ ಒಳ್ಳೆಯ ಘೋಷವನ್ನು ಹೊಂದಿರುವುದದು. ಅದರ ಹೆಸರು ದೇವದತ್ತ. ಈ ಎಲ್ಲ ವಸ್ತುಗಳನ್ನೂ ತಮಗೆ ಒಪ್ಪಿಸುವೆ. ಇದರಲ್ಲಿ ಸಂಶಯವಿಲ್ಲ" - ಎಂದು.

ಆಮೇಲೆ ಪೂರ್ವೋತ್ತರದಿಕ್ಕಿಗೆ - ಎಂದರೆ ಈಶಾನ್ಯದಿಕ್ಕಿಗೆ - ಹೊರಟು, ಕೈಲಾಸದ ಉತ್ತರಕ್ಕಿರುವ ಮೈನಾಕಪರ್ವತದ ಬಳಿಗೆ ಮಯನು ಸಾಗಿದನು. ಅಲ್ಲಿಯೇ ಹಿರಣ್ಯಶೃಂಗವೆಂಬ ಗಿರಿಯು ಇರುವುದು. ಮಹಾಮಣಿಮಯವಾದ ವಿಶಾಲವಾದ ಗಿರಿಯದು. ಅದರ ಸಮೀಪದಲ್ಲಿಯೇ ರಮಣೀಯವಾದ ಬಿಂದುಸರವಿರುವುದು. ಭಾಗೀರಥಿಯನ್ನು, ಎಂದರೆ ಗಂಗಾನದಿಯನ್ನು, ಕಾಣಲೆಂದು ಅಲ್ಲಿಯೇ ಭಗೀರಥನು ಅನೇಕವರ್ಷಗಳ ಕಾಲ ತಪಸ್ಸು ಮಾಡುತ್ತಾ ಉಳಿದದ್ದು.  ಸರ್ವಭೂತಗಳಿಗೂ ಪ್ರಭುವೆನಿಸುವ ಬ್ರಹ್ಮನೇ ಅಲ್ಲಿ ಮುಖ್ಯವೆನಿಸುವ ನೂರು ಯಜ್ಞಗಳನ್ನು ಮಾಡಿರುವನು. ಅಲ್ಲಿಯ ಯೂಪಗಳು, ಎಂದರೆ ಯಜ್ಞಸ್ತಂಭಗಳು, ಮಣಿಮಯವಾದಂಥವು. ಚೈತ್ಯಗಳು, ಎಂದರೆ ವೇದಿಗಳು, ಸುವರ್ಣಮಯವಾದಂಥವು. ಇವೆಲ್ಲವನ್ನೂ ಅಲ್ಲಿ ಶೋಭೆಗಾಗಿ ಮಾಡಲಾಗಿತ್ತು. ಶಾಸ್ತ್ರಾನುಸಾರಿಯಾಗಿರಬೇಕೆಂದಲ್ಲ. 

ಸಹಸ್ರನೇತ್ರನಾದ ಇಂದ್ರನೂ ಸಹ ಯಜ್ಞವನ್ನು ಅಲ್ಲಿ ಮಾಡಿಯೇ ತಪಸ್ಸಿದ್ಧಿಯನ್ನು ಪಡೆದನು. ಆ ಎಡೆಯಲ್ಲಿಯೇ ಸನಾತನನಾದ ಭೂತಪತಿಯು ಲೋಕಗಳೆಲ್ಲವನ್ನೂ ಸೃಷ್ಟಿಸಿದುದು, ಮತ್ತು ಸಹಸ್ರಾರು ಭೂತಗಣಗಳಿಂದ ಉಪಾಸಿಸಲ್ಪಟ್ಟು ನೆಲೆನಿಂತಿರುವುದು.

ನರ-ನಾರಾಯಣರಿಬ್ಬರು, ಬ್ರಹ್ಮ-ಯಮರು ಹಾಗೂ ಸ್ಥಾಣುವೆನಿಸುವ ಶಿವ - ಈ ಐವರೂ ಸಹಸ್ರಯುಗಗಳಿಗೊಮ್ಮೆ ಸತ್ರವನ್ನು, ಎಂದರೆ ಯಜ್ಞವನ್ನು, ಇಲ್ಲಿಯೇ ನೆರವೇರಿಸುವರು. ಧರ್ಮ-ಸಂಪ್ರಾಪ್ತಿಗೋಸ್ಕರವಾಗಿ ವರ್ಷಗಟ್ಟಲೆ ಯಜ್ಞಗಳನ್ನು ವಾಸುದೇವನೇ ಶ್ರದ್ಧಾ-ಪೂರ್ವಕವಾಗಿ ಎಡೆಬಿಡದೆ ಇಲ್ಲಿಯೇ ನೆರವೇರಿಸಿರುವನು. ಸುವರ್ಣ-ಮಾಲೆಗಳಿಂದ ಕೂಡಿರುವ ಯಜ್ಞ-ಸ್ತಂಭಗಳನ್ನು, ಹಾಗೂ ಅತ್ಯಂತವಾಗಿ ಹೊಳೆಯತಕ್ಕ ಚೈತ್ಯಗಳನ್ನು ಇಲ್ಲಿಯೇ ನಿರ್ಮಿಸಲಾಗಿತ್ತು. ಸಹಸ್ರವೋ ಲಕ್ಷವೋ ಎನಿಸುವಷ್ಟು ವಸ್ತುಗಳನ್ನು ಕೇಶವನು ದಾನವಿತ್ತದ್ದು ಇಲ್ಲಿಯೇ.

ಆ ಜಾಗಕ್ಕೆ ಹೋಗಿಯೇ ಗದೆಯನ್ನು ಶಂಖವನ್ನೂ, ಸಭಾ-ನಿರ್ಮಾಣಕ್ಕಾಗಿ ಉಪಯೋಗಕ್ಕೆ ಬರುವಂತಹ ಸ್ಫಟಿಕ-ರಾಶಿಯನ್ನೂ ಮಯನು ಪಡೆದುಕೊಂಡನು. ಅವುಗಳೆಲ್ಲವೂ ಮೊದಲು ವೃಷಪರ್ವಮಹಾರಾಜನಿಗೆ ಸೇರಿದ ವಸ್ತುಗಳೇ ಆಗಿದ್ದವು.  ಕಿಂಕರರಾದ ರಾಕ್ಷಸರ ಕಾವಲಿನಲ್ಲಿ ಯಾವ ಮಹಾಧನವನ್ನು ಆ ವೃಷಪರ್ವನು ರಕ್ಷಿಸಿಕೊಂಡಿದ್ದನೋ, ಅದೆಲ್ಲವನ್ನೂ ಅಲ್ಲಿಗೇ ಹೋಗಿ ಈ ಮಯಾಸುರನು ತೆಗೆದುಕೊಂಡುಬಂದನು.

ಅದನ್ನು ತಂದವನಾಗಿ, ಆ ಅಸುರನು ಅಪ್ರತಿಮವಾದ ಮಣಿಮಯಸಭೆಯನ್ನು ಪಾಂಡವರಿಗಾಗಿ ನಿರ್ಮಿಸಿಕೊಟ್ಟನು. ಅದಾದರೂ ಮೂರೂ ಲೋಕಗಳಲ್ಲಿಯೂ ವಿಶ್ರುತವಾಯಿತು.

ಆ ಶ್ರೇಷ್ಠವಾದ ಗದೆಯನ್ನು ಭೀಮನಿಗಿತ್ತನು. ಉತ್ತಮಶಂಖವಾದ ದೇವದತ್ತವನ್ನು ಅರ್ಜುನನಿಗೆ ಕೊಟ್ಟನು; ಆ ಶಂಖದ ನಾದದಿಂದಲೇ ಪ್ರಾಣಿಗಳು ನಡುಗಿಹೋಗುತ್ತಿದ್ದವು. ಮತ್ತು ಸುವರ್ಣಮಯ-ವೃಕ್ಷದಿಂದಾಗಿ ಆ ಸಭೆಯೂ ಶೋಭಿಸಿತು.

ಸೂಚನೆ : 22/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tuesday, July 1, 2025

ಕೃಷ್ಣಕರ್ಣಾಮೃತ 68 ಕಳ್ಳರಲ್ಲಿ ಕಳ್ಳ, ನಮ್ಮ ಕೃಷ್ಣ!(Krishakarnamrta 68)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಯಾರನ್ನಾದರೂ ಹಿಂದೊಮ್ಮೆ ನೋಡಿದ್ದೆವೆನ್ನಿ. ಅವರೇ ಮತ್ತೆ ಎದುರಿಗೆ ಕಂಡಾಗ "ಓ, ಅವನೇ ಇವನು!" ಎನ್ನುತ್ತೇವೆ. ಇದನ್ನು ಅಭಿಜ್ಞಾನ ಅಥವಾ ಪ್ರತ್ಯಭಿಜ್ಞಾನವೆನ್ನುವರು. ಸಂಸ್ಕೃತದಲ್ಲಿ ಇಂತಹ ಅನುಭವವನ್ನು "ಸೋಽಯಂ" ಎಂದು ತಿಳಿಸುವುದುಂಟು. ಒಬ್ಬರ ಬಗ್ಗೆ ಏನಾದರೂ ಕೇಳಿದ್ದರೂ ಅಷ್ಟೇ; ಅವರೇ ಪ್ರತ್ಯಕ್ಷವಾದರೆ ಆಗಲೂ ಅಭಿಜ್ಞಾನವೇ.

ಹಾಗೆ ಇಲ್ಲಿ ಕೃಷ್ಣನ ದರ್ಶನವಾಗಿರುವ ಪ್ರಸಂಗವೊಂದನ್ನು ಹೇಳಿದೆ. ಯಾರ ಬಗ್ಗೆ ಹೀಗೆಲ್ಲಾ ಕೇಳಿದ್ದೆವೋ ಆತನೇ ಇದೋ ಎದುರಿಗಿದ್ದಾನೆ - ಎನ್ನುವ ಭಾವವಿಲ್ಲಿ ಚಿತ್ರಿತವಾಗಿದೆ.

ಈಗ ಕಾಣುತ್ತಿರುವುದೊಂದು ಬಗೆ. ಹಿಂದೆ ಹೀಗೆಂದು ಕೇಳಿರುವುದು ಮೂರು ಬಗೆ. ಆದರೆ ಅಷ್ಟರಲ್ಲೂ ಸಮಾನಾಂಶವೊಂದಿದೆ. ಏನದು? ಕೃಷ್ಣನು ಅಪಹರಿಸಿದ್ದು – ಎಂದರೆ ಕದ್ದದ್ದು, ಒಯ್ದದ್ದು, ಅಥವಾ ಅಡಗಿಸಿಟ್ಟದ್ದು. ಹಿಂದಿದ್ದದ್ದು ಈಗಿಲ್ಲ ವಾಯಿತೆಂದರೆ ಅದೊಂದು ಬಗೆಯ ಅಪಹರಣವೇ. ಕೃಷ್ಣನು ಎಷ್ಟಾದರೂ ಕಳ್ಳನೆಂದೇ ಪ್ರಸಿದ್ಧಿಪಡೆದವನಲ್ಲವೇ? ಎಂದೇ ಆತನನ್ನು (ಅಪ)ಹಾರಿ ಎನ್ನಬಹುದು: ಹೀಗೆಮ್ಮ ಹರಿಯು ಹಾರಿಯೂ ಹೌದು!

ಏನೇನನ್ನು ಹಾರಿಸಿದ್ದಾನೆ ಕೃಷ್ಣ? ಮೊಟ್ಟಮೊದಲನೆಯದಾಗಿ ಮುನಿಗಳ ತಾಪವನ್ನು. ಮುನಿಶ್ರೇಷ್ಠರಿಗೂ ಚಿತ್ತದಲ್ಲೊಂದಿಷ್ಟು ತಾಪವಿದ್ದೀತಲ್ಲವೇ? ಮುಕ್ತಿಯು ದೊರೆಯುವ ತನಕ ಮಾನಸ-ತಾಪವು ಮುನೀಂದ್ರರಿಗೂ ತಪ್ಪಿದ್ದಲ್ಲ. ಹೀಗಾಗಿ ಮುನಿ-ಜನ-ಹೃದಯ-ತಾಪವನ್ನು ಹೋಗಲಾಡಿಸುವವ, ಕೃಷ್ಣ. ಹೀಗೆ ತಾಪವನ್ನು "ಕದ್ದವನು", ಅವನು. ಮುನೀಂದ್ರರೆಂದರೆ ತಪೋನಿಷ್ಠರು. ತಾಪ ಕಳೆ ಯಿತೆಂದರೆ ಅವರಿಗಿದೋ ತಂಪಾಯಿತು.

ಎರಡನೆಯದಾಗಿ, ಗೋಪಿಯರ ವಸ್ತ್ರವನ್ನು ಅಪಹರಣ ಮಾಡಿದವನಲ್ಲವೇ, ಆತನು? ವಸನವೆಂದರೆ ವಸ್ತ್ರವೇ. ಹೀಗೆ ಅವರ ವಸನಾಪಹಾರಿ, ಈ ಕೃಷ್ಣ.

ತನ್ನಲ್ಲಿ ಪ್ರೀತಿಯುಳ್ಳ ವ್ರಜ-ನಾರಿಯರ ವಿಷಯದಲ್ಲಿ ಕೃಷ್ಣನು ಹೀಗೆ ವರ್ತಿಸಿದುದು ಸರಿಯೇ? - ಎಂಬ ಪ್ರಶ್ನೆ ಬರುವುದಲ್ಲವೇ?

ಅದಕ್ಕೆ ಲೀಲಾಶುಕನು ಉತ್ತರವನ್ನಿತ್ತಿದ್ದಾನೆ. ಅವರು ಸಾಧಾರಣ-ನಾರಿಯರಲ್ಲ, ಮದ ತುಂಬಿದವರು. ಸೊಕ್ಕಿದವರಿಗೆ ತಕ್ಕ ಪಾಠವಾಗಬೇಡವೇ? ಎಂದೇ ಅವರ ವಸ್ತ್ರವನ್ನೇ ಅವರಿಗೆಟುಕದಂತೆ ಮಾಡಿಟ್ಟನವನು. ಪರಿಣಾಮವಾಗಿ, ಆ ಮಾನಿನಿಯರು ಮಾನಕ್ಕಾಗಿ ಆತನನ್ನು ಬೇಡಿಕೊಳ್ಳುವಂತಾಯಿತು. ಮದಿಸಿದವರು ಯಾಚಿಸುವಂತಾದರೆ ಅವರ ಮದವನ್ನಡಗಿಸಿದಂತೆಯೇ.

ಅದಕ್ಕೆ ವಸ್ತ್ರವನ್ನೇಕೆ ತೆಗೆದಿಟ್ಟನು? ಅದು ಅಸಭ್ಯವಲ್ಲವೇ? ಅದಕ್ಕೆ ಕಾರಣ, ಅವರಿಗೆ ಗರ್ವಭಂಗದೊಂದಿಗೆ ಮತ್ತೂ ಒಂದೆರಡು ಪಾಠವನ್ನು ಕಲಿಸಬೇಕಿತ್ತು. ಮೊದಲನೆಯದಾಗಿ, ಅವರು ನಗ್ನರಾಗಿ ನದೀ-ಸ್ನಾನಮಾಡುತ್ತಿದ್ದರು. ಇದು ಶಾಸ್ತ್ರ-ನಿಷಿದ್ಧವಾದದ್ದು. ನದೀ-ಸರೋವರಗಳು ಸಾರ್ವಜನಿಕ-ಸ್ಥಳಗಳಲ್ಲವೇ? ಬೆಳಗಿನ ಜಾವವಾಗಿದ್ದು ಜನಸಂಚಾರವಿಲ್ಲದ ಸಮಯವೆಂದರೂ, ನಗ್ನರಾಗೆಂದೂ ಸ್ನಾನಮಾಡುವಂತಿಲ್ಲ.

ಈ ನಿಯಮವು ಸ್ತ್ರೀಯರಿಗೆ ಮಾತ್ರವಲ್ಲ, ಪುರುಷರಿಗೂ ಉಂಟು. ನದೀ-ಸರೋವರಗಳಲ್ಲಿರಲಿ, ಗೃಹ-ಸ್ನಾನದಲ್ಲಿ ಸಹ ನಗ್ನ-ಸ್ನಾನವು ನಿಷಿದ್ಧವಾಗಿದೆ – ಎಲ್ಲರಿಗೂ!

ಎರಡನೆಯದಾಗಿ, ಅವರದನ್ನು ಮಾಡುತ್ತಿದ್ದುದು ತಮ್ಮ ಕಾತ್ಯಾಯನೀ-ವ್ರತದ ಅಂಗವಾಗಿ. ವ್ರತಾಂಗವಾಗಿ ಮಾಡುವ ಸ್ನಾನವಂತೂ ಮತ್ತೂ ನಿಯಮ-ಬದ್ಧವಾಗಿರತಕ್ಕದ್ದಷ್ಟೆ.

ನಿಯಮಗಳನ್ನೆಲ್ಲ ಸರಿಯಾಗಿ ಪಾಲಿಸಿಯೇ ಆಚರಿಸುತ್ತಿದ್ದರೂ ವ್ರತಾಂತದಲ್ಲಿ, "ಲೋಪಗಳೋ ಭ್ರಂಶಗಳೋ ಆಗಿದ್ದಲ್ಲಿ ಅದಕ್ಕೆ ಕ್ಷಮೆಯಿರಲಿ" ಎಂದು ಭಗವಂತನನ್ನು ಕೇಳಿಕೊಳ್ಳುತ್ತೇವೆ. ಹಾಗಿರುವಲ್ಲಿ, ಅರಿತರಿತೇ ತಪ್ಪೆಸಗುವುದು ಮಹಾಪರಾಧವೇ ಸರಿ!

ಮೂರನೆಯದಾಗಿ, "ಇಷ್ಟು ದಿನ ಈ ದೀಕ್ಷೆಯಲ್ಲಿರುವೆ" ಎಂದು ಸಂಕಲ್ಪಮಾಡಿ ಅದನ್ನು ನೆರವೇರಿಸುವುದುಂಟು; ಆ ಸಮಯದಲ್ಲೇ ನಿಷಿದ್ಧ-ಕರ್ಮವನ್ನು ಮಾಡಿಬಿಟ್ಟಲ್ಲಿ ಅದು ದೇವಾಪಚಾರವೆನಿಸಿಕೊಳ್ಳುತ್ತದೆ. ದೇವ-ಹೇಡನವೆಂದರೂ ಅದೇ. ಹೇಡನವೆಂದರೂ ಅವಹೇಳನವೆಂದರೂ ಒಂದೇ. ಇಂತಹ ಅಪಚಾರಗಳಿಂದ ವ್ರತವೇ ಸಿದ್ಧಿಸದು. ವ್ರತಫಲವೂ ದಕ್ಕದು. ಇಂತಹುದನ್ನು ತಪ್ಪಿಸುವುದೂ ಕೃಷ್ಣನ ಉದ್ದೇಶ.

ನಾಲ್ಕನೆಯದಾಗಿ, ಆಗ ಅವರು ಮಾಡುವ ಏಕ-ಹಸ್ತ-ನಮಸ್ಕಾರವು ಸಹ ಶಾಸ್ತ್ರದಲ್ಲಿ ನಿಷಿದ್ಧವಾದದ್ದೇ! ಅದರ ಬಗ್ಗೆಯೂ ಪಾಠವಾಗಬೇಕಾಯಿತು.

ಹೀಗಾಗಿ ತಾವು ಉತ್ಕೃಷ್ಟ-ವ್ರತವನ್ನು ಉತ್ಕೃಷ್ಟವಾಗಿ ಆಚರಿಸುತ್ತಿರುವೆವೆಂಬ ಭ್ರಮೆಯನ್ನೂ, ತನ್ನಿಮಿತ್ತವಾದ ಗರ್ವವನ್ನೂ, ಹೊಂದಿದ್ದ ವ್ರಜಾಂಗನೆಯರ ವಸನಾಪಹಾರವನ್ನು ಕೃಷ್ಣನು ಮಾಡಬೇಕಾಯಿತು. ಇರಲಿ.

ಕೃಷ್ಣನು ಇಂದ್ರ-ಗರ್ವಾಪಹಾರಿಯೂ ಹೌದು. ಮೂರನೆಯ ಅಪಹಾರವಿದು. ಏಳುದಿನಗಳ ಕಾಲ ಸತತ ಮಳೆಸುರಿಸಿ ಗೋಕುಲವಾಸಿಗಳನ್ನು ಇಂದ್ರನು ಕಂಗಾಲುಮಾಡಲೆಳಸಿದಾಗ ಕೃಷ್ಣನು ಗೋವರ್ಧನೋದ್ಧರಣವನ್ನು ಮಾಡಿದನಲ್ಲವೇ? ಅಂತೂ ಪೆಟ್ಟುಕೊಟ್ಟೇ ಅಹಂಕಾರವನ್ನು ಸರಿಮಾಡಬೇಕಾದ ಸಂದರ್ಭ ಬಂದರೆ ಅದನ್ನೂ ಮಾಡತಕ್ಕವನೇ ಕೃಷ್ಣ.

ಪಾತಾಳಲೋಕ ಮರ್ತ್ಯಲೋಕಗಳೆಂದರೆ ಕೆಳಗಿನ ಹಾಗೂ ಮಧ್ಯದ ಲೋಕಗಳು. ಸ್ವರ್ಗವು ತೃತೀಯ-ಭುವನ ಅಥವಾ ಮೂರನೆಯ ಲೋಕ. ಇಂದ್ರನು ಅದರೊಡೆಯ. ಉನ್ನತಸ್ಥಾನದಲ್ಲಿರುವವರೇ ತಪ್ಪೆಸಗುವುದೇ? ಅಂತಹವರ ಶಾಠ್ಯಕ್ಕೆ ತಕ್ಕ ಶಾಸ್ತಿ.

ಇವೆಲ್ಲದರೊಂದಿಗೆ ನಾಲ್ಕನೆಯದಾಗಿ, ಅಥವಾ ಇನ್ನೂ ಸರಿಯಾಗಿ ಹೇಳಬೇಕೆಂದರೆ, ಇವೆಲ್ಲಕ್ಕಿಂತಲೂ ಮಿಗಿಲಾಗಿ, ಆತನು ನನ್ನ ಹೃದಯ-ಕಮಲವನ್ನೇ ಅಪಹರಿಸಿರುವನು. ಹೃದಯವು ಕಮಲಾಕಾರವೆಂದು ಉಪನಿಷತ್ತು-ಆಯುರ್ವೇದಗಳೂ ಸೂಚಿಸುತ್ತವೆ, ತಂತ್ರ-ಆಗಮಗಳೂ ಚಿತ್ರಿಸುತ್ತವೆ.

ಹೀಗಾಗಿ, ನನ್ನ ಚಿತ್ತಾಪಹಾರಕ, ಅರ್ಥಾತ್ ನನ್ನ ಮನಸ್ಸನ್ನು ಸೂರೆಗೊಂಡವ - ಎನ್ನುವುದನ್ನೂ ಇಲ್ಲಿ ಹೇಳಿದೆ.

ನಾಲ್ಕೂ ಪಾದಗಳೂ ಸೋಽಯಂ ಎಂದೇ ಆರಂಭವಾಗುತ್ತವೆ; 'ಹಾರೀ' ಎಂದೇ ಮುಗಿಯುತ್ತವೆ: ಸಮಾನವಾದ ಆದ್ಯಾಕ್ಷರದ್ವಯ; ಸಮಾನವಾದ ಅಂತ್ಯಾಕ್ಷರದ್ವಯ.

ಸೋಽಯಂ ಮುನೀಂದ್ರ-ಜನ-ಮಾನಸ-ತಾಪ-ಹಾರೀ/ 

ಸೋಽಯಂ ಮದ-ವ್ರಜ-ವಧೂ-ವಸನಾಪಹಾರೀ|

ಸೋಽಯಂ ತೃತೀಯಭುವನೇಶ್ವರ-ದರ್ಪ-ಹಾರೀ/

ಸೋಽಯಂ ಮದೀಯ-ಹೃದಯಾಂಬುರುಹಾಪಹಾರೀ ||

*****

ಮತ್ತೊಂದು ಶ್ಲೋಕ:

ಕಳ್ಳಕೃಷ್ಣನ ಲೀಲೆಗಳು ಒಂದೇ ಎರಡೇ? ಗೋಪಿಯೊಬ್ಬಳ ಮನೆಗೆ ಕದಿಯಲು ಬಂದಿದ್ದಾನೆ, ಪುಟ್ಟಕೃಷ್ಣ. ಏನನ್ನು ಕದಿಯಲು? - ಎಂದು ಹೇಳಲೇಬೇಕಿಲ್ಲ: ಬೆಣ್ಣೆಯನ್ನೇ. ಆತ ನೇರಾಗಿ ಮನೆಯೊಳಗೇ ಹೋಗಿದ್ದಾನೆ, ಅಡಿಗೆಮನೆಯೊಳಗೇ. ತನ್ನ ಮನೆಗೆ ಹೀಗೆ ಗುಟ್ಟಾಗಿ ನುಗ್ಗಿರುವ ಕಳ್ಳಬಾಲಕನಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂಬ ಮನಸ್ಸಾಯಿತು, ಈ ಗೋಪಿಕೆಗೆ.

ಪುಟ್ಟಬಾಲನಿಗೆ ಪೆಟ್ಟುಕೊಟ್ಟು ಬುದ್ಧಿಕಲಿಸುವುದೇ? ಛೆ! ಮುದ್ದುಮುಖದ ಮಗುವಿಗೆ ಒಂದಿಷ್ಟು ಬೈಸಬೇಕು, ಬೆದರಿಸಬೇಕು, ಅಷ್ಟು ಸಾಕು. ಎಂದೇ,  "ಕದಿಯುತ್ತಿರುವಾಗಲೇ ಕಳ್ಳನು ಸಿಕ್ಕಿಬಿದ್ದಿರುವ"ನೆಂದಾಗಿಸಲು, ಆತನನ್ನು ತನ್ನ ಅಡಿಗೆಮನೆಯೊಳಗೇ ಕೂಡಿಹಾಕಿಬಿಟ್ಟಳಾಕೆ.

ಇನ್ನು ನೇರಾಗಿ ಹೋಗಿ ಅವನಮ್ಮನಿಗೇ ಚಾಡಿ ಹೇಳಿದರಾಯಿತೆಂದು ನಿಶ್ಚಯಮಾಡಿದವಳೇ, ಹೋದಳು ಯಶೋದೆಯ ಮನೆಗೆ - ಅಲ್ಲೊಂದಿಷ್ಟು ಆಕ್ರೋಶಮಾಡಲಿಕ್ಕೆ. ಆದರೆ ಅಲ್ಲಿ ಕಂಡ ದೃಶ್ಯ ಅವಳನ್ನು ದಂಗುಬಡಿಸಿತು! ಯಾವ ಚಾಡಿಯನ್ನೂ ಹೇಳಲಾರದಾದಳು, ಆ ಗೋಪಿಕೆ!

ಏಕೆ? ಏಕೆಂದರೆ ಯಶೋದೆಯ ಮನೆಯಲ್ಲೂ ಕೃಷ್ಣನೇ, ಬಾಲಕೃಷ್ಣನೇ, ಇದ್ದಾನೆ: ಆತನ ಚೇಷ್ಟೆಯನ್ನು ತಾಳಲಾರದ ಆತನ ತಾಯಿಯೇ ಆತನನ್ನು ಕಟ್ಟಿಹಾಕಿಟ್ಟಿದ್ದಾಳೆ - ಒಂದು ಒರಳಿಗೆ!

ಅದಕ್ಕೇನು ಅವಳ ಪ್ರತಿಕ್ರಿಯೆ? ಆಶ್ಚರ್ಯದಿಂದ ಸ್ತಂಭೀಭೂತಳಾದಳೆಂಬುದಷ್ಟೇ: ಅವಳ ಬಾಯಿಂದ ಮಾತೇ ಹೊರಡದಾಯಿತು. ತನ್ನ ಮನೆಯಲ್ಲಾದುದನ್ನು ನಂಬುವುದೋ, ಈಗ ಕಾಣುತ್ತಿರುವುದನ್ನೋ? ಮೊದಲೂ ತಾನೇ ಕಣ್ಣಾರಕಂಡಿದ್ದಳು. ಈಗಲೂ ಅಷ್ಟೇ. ಯಾವುದು ಸತ್ಯ? ಯಾವುದಲ್ಲ? ತಿಳಿಯಲಾರಳು, ಏನನ್ನೂ ಹೇಳಲಾರಳು. ಆಹಾ!

ಅದನ್ನು ಕವಿ ಹೀಗೆ ಹೇಳುತ್ತಾನೆ:

ಅಂತರ್ಗೃಹೇ ಕೃಷ್ಣಂ ಅವೇಕ್ಷ್ಯ ಚೋರಂ

ಬಧ್ವಾ ಕವಾಟಂ ಜನನೀಂ ಗತೈಕಾ |

ಉಲೂಖಲೇ ದಾಮ-ನಿಬದ್ಧಂ ಏನಂ

ತತ್ರಾಪಿ ದೃಷ್ಟ್ವಾ ಸ್ತಿಮಿತಾ ಬಭೂವ ||

ಸೂಚನೆ : 29/06/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, June 21, 2025

ಅಷ್ಟಾಕ್ಷರೀ 83 ನಾದಬ್ರಹ್ಮ ತದಾನಂದಂ (Ashtakshari 83)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



"ಯೋಗ"ದ ಯೋಗ ಜೂನ್ ೨೧ಕ್ಕೆ ಸಂದಿದೆಯಲ್ಲವೇ? ಯೋಗಸಾರವೆನಿಸುವ ವಿಷಯವನ್ನೇ ತೆಗೆದುಕೊಳ್ಳೋಣ. ಗಾನವು ಯಾರಿಗೆ ಪ್ರಿಯವಲ್ಲ? ಚಂಡಿ ಹಿಡಿದು ಅಳುತ್ತಿರುವ ಮಗುವನ್ನು ಸಹ ಸಂತೈಸಿ ಜೋಗುಳ ಹಾಡಿ ನಿದ್ದೆ ಮಾಡಿಸುವ ಪರಿ ಎಲ್ಲಿಲ್ಲ? ಪ್ರಾಣಿಗಳು ಸಹ ಸಂಗೀತಕ್ಕೆ ವಶವಾಗುವುವಲ್ಲವೇ? ಕೆಲವು ರಾಗಗಳಿಂದ ಜಿಂಕೆಗಳನ್ನು ವಶಪಡಿಸಿಕೊಳ್ಳುವುದುಂಟೆಂದು ಕೇಳಿರುತ್ತೇವೆ. ಭಾಸಮಹಾಕವಿಯ ನಾಟಕವೊಂದರಲ್ಲಿ ಉದಯನ-ಮಹಾರಾಜನು ತನ್ನ ವೀಣಾ-ವಾದನದಿಂದಲೇ ಆನೆಗಳನ್ನು ಮಂತ್ರ-ಮುಗ್ಧವಾದಂತಾಗಿಸಿ ಹಿಡಿಯುತ್ತಿದ್ದುದರ ಉಲ್ಲೇಖವಿದೆ.

ಶಿಶು-ಪಶುಗಳಿರಲಿ, ದೇವತೆಗಳೂ ಸಂಗೀತಪ್ರಿಯರೇ. ಸರ್ವಜ್ಞನಾದ ಪಾರ್ವತೀಪತಿಯು ಗೀತದಿಂದ ಸಂತೋಷಪಡುತ್ತಾನೆ. ಗೋಪೀಪತಿಯಾದ ಕೃಷ್ಣನು ಕೊಳಲಿನ ದನಿಗೆ ಮಾರುಹೋಗಿದ್ದಾನೆ. ಬ್ರಹ್ಮನು ಸಾಮಗಾನದಲ್ಲಿ ನಲಿಯುತ್ತಾನೆ. ಸರಸ್ವತಿಯು ವೀಣಾಸಕ್ತಳು. ಇನ್ನುಳಿದ ಯಕ್ಷ-ಗಂಧರ್ವ-ದೇವ-ದಾನವ-ಮಾನವರ ವಿಷಯವನ್ನು ಹೇಳುವುದೇನು? - ಎಂದು ಕೇಳುತ್ತದೆ, ಸಂಗೀತ-ರತ್ನಾಕರವೆಂಬ ಉತ್ಕೃಷ್ಟ-ಗ್ರಂಥ.

ಸಂಗೀತವೆಂಬುದಕ್ಕೆ ಆಧಾರವೇ ನಾದವಲ್ಲವೇ? ನಾದವಲ್ಲದೆ ಗೀತವಿಲ್ಲ, ನಾದವಿಲ್ಲದೆ ಸ್ವರವಿಲ್ಲ, ನಾದವಿಲ್ಲದೆ ನೃತ್ತವಿಲ್ಲ - ಎಂದೇ, ಜಗತ್ತೇ ನಾದಾತ್ಮಕ - ಎಂಬುದಾಗಿ ಮತಂಗನ ಬೃಹದ್ದೇಶಿ-ಗ್ರಂಥವು ಹೇಳುತ್ತದೆ.

ಗೀತವು ನಾದಾತ್ಮಕವಾದರೆ, ವಾದ್ಯದ ಸಾಫಲ್ಯವಿರುವುದೇ ನಾದದ ಅಭಿವ್ಯಕ್ತಿಯಲ್ಲಿ. ಇನ್ನು ನೃತ್ತವಾದರೋ ಗೀತ-ವಾದ್ಯಗಳನ್ನು ಅನುಸರಿಸಿ ಬರುವಂತಹುದೇ ಸರಿ. ಹೀಗೆ ಗೀತ-ವಾದ್ಯ-ನೃತ್ತಗಳು ಮೂರೂ ನಾದಾಧೀನವೇ.

ವಾಸ್ತವವಾಗಿ ಸಂಗೀತ ಎಂಬ ಪದವನ್ನು ನಾವಿಂದು ಸಾಧಾರಣವಾಗಿ ಬಳಸುತ್ತಿರುವುದು ಅಷ್ಟೊಂದು ಯುಕ್ತವಲ್ಲ. ಏಕೆ? ಗೀತ-ವಾದ್ಯ-ನೃತ್ಯಗಳು ಮೂರೂ ಸೇರಿದರೇ ಅದು ಸಂಗೀತವೆನಿಸಿಕೊಳ್ಳುವುದು - ಎಂಬುದಾಗಿ ಶಾಸ್ತ್ರಗಳು ಹೇಳುತ್ತವೆ.

ನಾವೆಲ್ಲರೂ ವ್ಯವಹರಿಸುವುದು ಪ್ರಧಾನವಾಗಿ ನಮ್ಮ ಮಾತುಗಳ ಮೂಲಕವೇ. ಇದನ್ನೇ ವಾಕ್ಕೆನ್ನುವುದು. ವಾಕ್ಕೆಲ್ಲವೂ ವಾಕ್ಯಗಳಿಂದಲ್ಲವೇ ತುಂಬಿರುವುದು? ವಾಕ್ಯಗಳು ಪದಗಳಿಂದ ಕೂಡಿರುವುವು. ಪದಗಳು ವರ್ಣಗಳಿಂದಾಗುವುವು. ವರ್ಣಕ್ಕೆ ಆಧಾರಭೂತವಾದದ್ದೇ ನಾದ. ಹೀಗಾಗಿ ಜಗತ್ತಿನ ವ್ಯವಹಾರವೆಲ್ಲವೂ ನಾದಾಧೀನವೆನ್ನಬಹುದಲ್ಲವೇ? ಶಾಸ್ತ್ರಕಾರರ ಮಾತನ್ನೇ ಇಲ್ಲಿ ಹೇಳಿರುವುದು.

ಸಂಗೀತಕ್ಕೆ ಆಧಾರವೇ ನಾದ - ಎಂಬುದನ್ನು ಕಂಡುಕೊಂಡದ್ದಾಯಿತು. ಸಂಗೀತಪ್ರಿಯರಾದ ನಮ್ಮ ದೇವತೆಗಳನ್ನು ಯೋಗಜ್ಞರಾದ ನಮ್ಮ ವಾಗ್ಗೇಯಕಾರರು ಹೇಗೆ ಚಿತ್ರಿಸಿರುವರೆಂಬುದನ್ನು ಒಂದೆರಡು ಉದಾಹರಣೆಗಳಿಂದ ನೋಡಬಹುದು. ದೇವಿಯನ್ನು ಸಂಗೀತ-ರಸಿಕೆಯೆಂದು ಕಾಳಿದಾಸನು ಕರೆದಿರುವನು. ಹೆಸರಿಗೆ ತಕ್ಕಂತೆ ಚಿತ್ತರಂಜಕವಾದ ಚಿತ್ತರಂಜನೀ ರಾಗದಲ್ಲಿಯ ತಮ್ಮ ಕೃತಿಯಲ್ಲಿ ತ್ಯಾಗರಾಜರು "ನಾದತನುಂ ಅನಿಶಂ" - ಎಂಬುದಾಗಿ ಶಂಕರನನ್ನು ಸ್ತುತಿಸಿದ್ದಾರೆ.

ಇನ್ನು ಕೃಷ್ಣನ ವೇಣುಗಾನವನ್ನು ಹೃದ್ಯವಾಗಿ ಚಿತ್ರಿಸಿರುವ ಲೀಲಾಶುಕನು ವೃಕ್ಷಗಳ ಮೇಲೂ ಮೃಗಗಳ ಮೇಲೂ ಗೋಪಾಲಕರ ಮೇಲೂ ಅದರಿಂದಾದ ಪರಿಣಾಮವನ್ನು ಹೇಳುತ್ತಾನೆ. ಅಷ್ಟೇ ಅಲ್ಲ. ಮುನಿಗಳನ್ನೂ ಅದು ಅಂತರ್ಮುಖ ಮಾಡುವುದೆಂದೂ, ವಸ್ತುತಃ ವೇದಗಳನ್ನೇ ಅದು ಪ್ರತಿಧ್ವನಿಸುತ್ತದೆಂದೂ ನಿರೂಪಿಸುತ್ತಾನೆ. ಅದು ಓಂಕಾರಾರ್ಥವನ್ನೇ ಹೊಮ್ಮಿಸುತ್ತದೆಂದೂ ಚಿತ್ರಿಸಿದ್ದಾನೆ. ಲೋಕವನ್ನೇ ಅದು ಉನ್ಮತ್ತಗೊಳಿಸುವುದೆಂದರೆ ಯೋಗಶಾಸ್ತ್ರಗಳು ಹೇಳುವ ಉನ್ಮನೀ ಎಂಬ ಅವಸ್ಥೆಯನ್ನುಂಟುಮಾಡುವದು - ಎಂದು ಯೋಗಿವರೇಣ್ಯರೂ ಗಾನಪ್ರವೀಣರೂ ಆದ ಶ್ರೀರಂಗಮಹಾಗುರುಗಳು ವಿವರಿಸಿದ್ದಾರೆ.

ಇಲ್ಲಿ ಮುನಿಗಳು ಅಂತರ್ಮುಖರಾಗುವುದೂ ಪ್ರಣವಾರ್ಥವು ವೇಣುಗಾನದಿಂದ ಬರುವುದೂ ಯೋಗಶಾಸ್ತ್ರದ ವಿಷಯಗಳೇ. ವಾಸ್ತವವಾಗಿ ಇವೆಲ್ಲಕ್ಕೂ ಮೂಲವಾದ ನಾದವೆಂಬುದೇ ಯೋಗಶಾಸ್ತ್ರದ ವಿಷಯ.

ನಕಾರವೆಂಬುದು ಪ್ರಾಣ, ದಕಾರವು ಅಗ್ನಿ. ಪ್ರಾಣ ಹಾಗೂ ಅಗ್ನಿ (ಅರ್ಥಾತ್ ಪ್ರಾಣ ಮತ್ತು ಅಪಾನ) - ಇವುಗಳ ಸೇರುವೆಯಿಂದಲೇ ಪ್ರಣವನಾದವೂ ಸಪ್ತಸ್ವರಗಳೂ ಜನಿಸುವುದೆಂಬುದನ್ನು ತ್ಯಾಗರಾಜರು "ಮೋಕ್ಷಮು ಗಲದಾ" ಎಂಬ ಸಾರಮತಿ-ರಾಗದ ತಮ್ಮ ಕೃತಿಯಲ್ಲಿ ಹಾಡಿದ್ದಾರೆ.

ನಾದಬ್ರಹ್ಮವು ಅದ್ವಿತೀಯವಾದ ಆನಂದವೇ ಆಗಿರುವ (ನಾದಬ್ರಹ್ಮ ತದಾನಂದಂ) ಸರ್ವಭೂತ-ಚೈತನ್ಯ - ಎನ್ನುವುದು ಶಾರ್ಙ್ಗದೇವನ ಸಾರೋಕ್ತಿ.

ನಾದವೆಂಬುದು ಮೂಲಾಧಾರಚಕ್ರದಲ್ಲಿ ಜನಿಸುವುದೆಂಬುದನ್ನು ಯೋಗಿವರ್ಯರಾದ ತ್ಯಾಗರಾಜರು ತಮ್ಮ ಸ್ವರರಾಗಸುಧಾರಸ  (ಶಂಕರಾಭರಣ-ರಾಗ) - ಎಂಬ ಕೃತಿಯಲ್ಲಿ ಹೇಳಿ, ಅದರ ಪರಮಾನಂದತತ್ತ್ವವನ್ನು ಹೇಳಿದ್ದಾರೆ.

ಸಾಧಕರ ಜೀವನದಲ್ಲಿ ಯೋಗಸಾಧನೆಯು ಎಷ್ಟು ಮುಖ್ಯವೆಂಬುದನ್ನು ಪುರಂದರದಾಸರು ತಮ್ಮ ಊರದೇವರ ಮಾಡಬೇಕಣ್ಣಾ - ಎಂಬ (ನಾದನಾಮಕ್ರಿಯಾ-ರಾಗ) ಕೃತಿಯಲ್ಲಿ "ದ್ವಾರಗಳೊಂಭತ್ತು ಮುಚ್ಚಿ, ನಿಲ್ಲಿಸಿ ಭ್ರೂಮಧ್ಯದಲ್ಲಿ" - ಎಂಬುದಾಗಿ ಚಿತ್ರಿಸಿದ್ದಾರೆ. ಆಜ್ಞಾಚಕ್ರದವರೆವಿಗೂ ಮನಸ್ಸನ್ನೊಯ್ಯುವ ಯೋಗಪ್ರಕ್ರಿಯೆಯನ್ನು ಇದು ಹೇಳುತ್ತದೆ. ವೀಣಾವಾದನ-ತತ್ತ್ವಜ್ಞನು ಮೋಕ್ಷಮಾರ್ಗವನ್ನು ಹೊಂದುವನೆಂದು ಯಾಜ್ಞವಲ್ಕ್ಯಸ್ಮೃತಿಯು ತಿಳಿಸುತ್ತದೆ.

"ನಾದದಿಂದಲೇ ಮಂತ್ರಶಾಸ್ತ್ರ, ಯೋಗಶಾಸ್ತ್ರ, ವ್ಯಾಕರಣಶಾಸ್ತ್ರ, ಸಂಗೀತಶಾಸ್ತ್ರ - ಇವುಗಳೆಲ್ಲವೂ ಹೊರಡುತ್ತವೆ" ಎಂಬ ಶ್ರೀರಂಗಮಹಾಗುರುಗಳ ಮಾತು ಈ ಎಲ್ಲ ವಿದ್ಯೆಗಳ ಸಾರಕ್ಕೆ ಕನ್ನಡಿ ಹಿಡಿಯುತ್ತದೆ.

 ಯೋಗಶಾಸ್ತ್ರದಿಂದಲೇ ಹೊಮ್ಮಿದ ಸಂಗೀತವಿದ್ಯೆಯನ್ನು ವಿಶ್ವಯೋಗದಿನದಂದು ಸ್ಮರಿಸಿಕೊಳ್ಳುವುದು ಉಚಿತವೇ ಆಗಿದೆಯಲ್ಲವೇ?

ಸೂಚನೆ: 21/6//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Monday, June 16, 2025

ಪ್ರಶ್ನೋತ್ತರ ರತ್ನಮಾಲಿಕೆ 20 (Prasnottara Ratnamalike 20)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)





ಪ್ರಶ್ನೆ ೨೦. ಲಾಘವ ಯಾವುದು?

ಉತ್ತರ - ನೀಚರಲ್ಲಿ ಬೇಡುವುದು.

ಈ ಮುಂದಿನ ಪ್ರಶ್ನೆ 'ಲಾಘವ ಯಾವುದು?' ಎಂಬುದು. ಉತ್ತರ 'ನೀಚರಲ್ಲಿ ಬೇಡುವುದು'. ಉತ್ತರ ಬಹಳ ಹಗುರವಾಗಿದೆ; ತಿಳಿದುಕೊಳ್ಳಲು ಸುಲಭವಾಗಿದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ ನಮಗೆ ಇಲ್ಲಿ ಬರುವ ಸವಾಲು ಎಂದರೆ ಯಾರು ನೀಚರು? ಎಂಬುದನ್ನು ತಿಳಿದುಕೊಳ್ಳುವುದರಲ್ಲಿ. ಇದು ಬಹಳ ಕಠಿಣವಾದದ್ದು. ಏಕೆಂದರೆ ಹೇಗೆ ನೀಚರನ್ನು ಗುರುತಿಸುವುದು? ಮಾನದಂಡ ಉಂಟೆ? ಅಥವಾ ನೀಚರಿಗೆ ಏನಾದರೂ ಸರಿಯಾದ ಲಕ್ಷಣವುಂಟೇ? ಹೀಗೆಲ್ಲ ನಮಗೆ ಪ್ರಶ್ನೆ ಬರುತ್ತದೆ. ಹಾಗಾಗಿ ನೀಚರು ಯಾರು? ಎಂದು ತಿಳಿದರೆ ಅವರಲ್ಲಿ ಬೇಡುವುದು ಸರಿಯಲ್ಲ ಎಂಬ ವಿಷಯವನ್ನು ತಿಳಿದಂತೆ ಆಗುತ್ತದೆ. ಇದಕ್ಕೂ ಮೊದಲು ಕಾಳಿದಾಸನು ಋತು ಸಂಹಾರ ಎಂಬ ಕಾವ್ಯದಲ್ಲಿ ಒಂದು ಮಾತನ್ನು ಹೇಳುತ್ತಾನೆ "ಯಾಚ್ನಾ ಮೋಘಾ ವರಮಧಿಗುಣೇ ನಾಧಮೇ ಲಬ್ಧಕಾಮಾ - ಒಳ್ಳೆಯವರಲ್ಲಿ ಬೇಡಿದ್ದು ಸಿಗದಿರುವುದು, ಅಧಮರಲ್ಲಿ ಬೇಡಿ ಸಿಗುವುದಕ್ಕಿಂತ ಉತ್ತಮ" ಎಂಬುದಾಗಿ. ಬೇಡುವುದು ಹೇಗೆ ತಪ್ಪು? ಎಂಬುದನ್ನು ಈ ಹಿಂದಿನ ಲೇಖನದಲ್ಲಿ ಚಿಂತಿಸಲಾಗಿದೆ. ಅದರಲ್ಲೂ ನೀಚರಲ್ಲಿ ಬೇಡುವುದೆಂದರೆ ಅದು ತಪ್ಪೇ ತಪ್ಪು. ಆದ್ದರಿಂದರೆ ನೀಚರು ಯಾರು? ಎಂಬುದನ್ನು ಈ ಪ್ರಶ್ನೋತ್ತರದಲ್ಲಿ ಗಮನಿಸುವುದು ಉಚಿತ ಎಂಬುದು ಭಾವನೆಯಾಗಿದೆ.


ಇಲ್ಲೊಂದು ಸುಭಾಷಿತವು ಇದರ ಬಗ್ಗೆ ಹೀಗೆ ವಿವರಣೆಯನ್ನು ನೀಡುತ್ತಿದೆ - "ಕರ್ಮಣ್ಯೇಕಂ ವಚಸ್ಯೇಕಂ ಮನಸ್ಯೇಕಂ ಮಹಾತ್ಮನಾಮ್। ಕರ್ಮಣ್ಯತ್ ವಚಸ್ಯನ್ಯತ್ ಮನಸ್ಯತ್ ದುರಾತ್ಮನಾಮ್ ಎಂಬುದಾಗಿ. ಅಂದರೆ ಯಾರ ಮಾಡುವ ಕರ್ಮ, ಆಡುವ ಮಾತು ಮತ್ತು ಯೋಚಿವ ಮನಸ್ಸು ಒಂದೇ ಆಗಿರುತ್ತದೆಯೋ ಅವರು ಮಹಾತ್ಮ ಅಥವಾ ಉತ್ತಮ ಎನಿಸಿಕೊಳ್ಳುತ್ತಾನೆ. ಇದಕ್ಕೆ ವಿರುದ್ಧ ಸ್ವಭಾವುಳ್ಳವನು ದುರಾತ್ಮ ಅಥವಾ ನೀಚನೆನಿಸಿಕೊಳ್ಳುತ್ತಾನೆ. ಅಂದರೆ ಮಾಡುವುದಕ್ಕೂ ಹೇಳುವುದಕ್ಕೂ ಯೋಚಿಸುವುದಕ್ಕೂ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ ಎಂದರ್ಥ. ಮನನಸ್ಸು, ಮಾತು ಮತ್ತು ಕೆಲಸ ಈ ಮೂರು ಒಂದೇ ಸರಳರೇಖೆಯಲ್ಲಿ ಬರುವಂತಿರಬೇಕು. ಇವೆಲ್ಲವೂ ರುಜುರೇಖೆಯಲ್ಲಿ ಬರುವಂತೆ ಇದ್ದರೆ ವ್ಯವಸ್ಥೆ ಸರಿಯಾಗಿರುತ್ತದೆ. ಇವು ಮೂರು ಜೀವಾತ್ಮನ ಆಣಂತಿಯಂತೆ ನಡೆಯುವಂತಿರಬೇಕು ಎಂದರ್ಥ. 'ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳಿಯಿತು' ಎಂಬ ಗಾದೆಮಾತಿನಂತೆ ಆಗಬಾರದು. ಒಬ್ಬನು ತನ್ನ ಚಕ್ಕಡಿಗಾಡಿಗೆ ಒಂದುಕಡೆ ಕೋಣವನ್ನು, ಇನ್ನೊಂದುಕಡೆ ಎತ್ತನ್ನು ಕಟ್ಟಿದರೆ ಆ ಗಾಡಿಯು ಚಾಲಕನ ನಿಯಂತ್ರಣದಲ್ಲಿ ಇರದು. ಏಕೆಂದರೆ ನೀರು ಕಂಡೀತೆಂದರೆ ಕೋಣಕ್ಕೆ ನೀರಿನ ಕಡೆ ಹೋಗಿ ಅಲ್ಲಿ ಆಡುವ ಆಸೆ. ಆದರೆ ಎತ್ತಿಗೆ ನೀರಾಗದು. ಅದು ನೀರಿನ ಕಡೆ ಹೋಗದು. ಹೀಗೆ ಅಲ್ಲೇ ಎಳೆದಾಟ ಆಗಿ ಗಾಡಿ ಎಲ್ಲಿಗೂ ಹೋಗದು. ಅಂತೆಯೇ ನೀಚರು ತಮ್ಮ ಶರೀರ ಮಾತು ಮನಸ್ಸುಗಳನ್ನು ಜೀವದ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಿಲ್ಲ. ಪರಿಣಾಮವಾಗಿ ಅವರು ಮಾಡಬಾರದ್ದನ್ನೇ ಮಾಡುತ್ತಾರೆ. ಆಡಬಾರದ್ದನ್ನೇ ಆಡುತ್ತಾರೆ. ಅಂತವರ ಬಳಿ ಕೇಳುವುದು ಅಥವಾ ಬೇಡುವುದು ಕಠಿಣವೇ ಸರಿ. ಅವರು ಒಮ್ಮೆ ಕೊಡುತ್ತೇನೆಂದರೆ, ಕೆಲವೇ ಕ್ಷಣದಲ್ಲಿ ಕೋಡುವುದಿಲ್ಲ ಎಂದೂ ಹೇಳಬಹುದು. 'ಕ್ಷಣಚಿತ್ತ ಕ್ಷಣಪಿತ್ತ' ಎಂಬಂತೆ ಅವರು ಒಂದೇ ರೀತಿ ಇರುತ್ತಾರೆ ಎಂದು ಎಣಿಸುವುದು ಕಷ್ಟವೇ ಸರಿ. ಹಾಗಾಗಿ ಇಂತವರ ಬಳಿ ಬೇಡಿದರೆ ಕೇಳಿದ ವ್ಯಕ್ತಿಯೇ ಲಘುವಾಗುತ್ತಾನೆ. ಅಂದರೆ ಅವನ ವ್ಯಕ್ತಿತ್ವಕ್ಕೇ ಅದು ಕುಂದು ತಂದೀತು!


ಸೂಚನೆ : 15/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 141 ಕೃಷ್ಣನ ಸ್ವಗೃಹಗಮನ (Vyaasa Vikshita 141)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಅರ್ಧಯೋಜನದಷ್ಟು ದೂರ ಹೋದ ಬಳಿಕ ಶತ್ರುಜಯನಾದ ಕೃಷ್ಣನು ಯುಧಿಷ್ಠಿರನ ಅನುಮತಿಯನ್ನು ಪಡೆದುಕೊಂಡು ಆತನನ್ನು ಬೀಳ್ಕೊಟ್ಟನು. ಇನ್ನು ಹಿಂದಿರುಗೆಂದು ಆತನಿಗೆ ಹೇಳಿದನು. ತನ್ನನ್ನು ಕಳುಹಿಸಿಕೊಡಲು ಅಷ್ಟು ದೂರ ಸಾಗಿಬಂದ ಉಳಿದವರನ್ನೂ ಹಾಗೆಯೇ ಬೀಳ್ಕೊಟ್ಟನು. ಧರ್ಮಜ್ಞನಾದ ಕೃಷ್ಣನು ಆ ಬಳಿಕ ಅಭಿವಾದನ ಮಾಡಿ ಯುಧಿಷ್ಠಿರನ ಪಾದಗಳನ್ನು ಹಿಡಿದನು. ಧರ್ಮರಾಜನಾದ ಯುಧಿಷ್ಠಿರನು ಕೇಶವನನ್ನು ಎಬ್ಬಿಸಿದನು, ಆತನ ಶಿರಸ್ಸನ್ನು ಆಘ್ರಾಣಿಸಿದನು. ಯಾದವಶ್ರೇಷ್ಠನೂ ಹಾಗೂ ಕಮಲನೇತ್ರನೂ ಆದ ಕೃಷ್ಣನನ್ನು ಯುಧಿಷ್ಠಿರನು "ಹೋಗಿ ಬಾ" ಎಂದು ಹರಸಿದನು.  ಆಮೇಲೆ ಆತನಿಗೆ ಮತ್ತೆ ಹಿಂದಿರುಗಿ ಬರುವುದಾಗಿ ಮಾತಿತ್ತು, ಕೃಷ್ಣನು ತನ್ನನ್ನನುಸರಿಸುತ್ತಿದ್ದ ಪಾಂಡವರನ್ನು ಹಿಂದಕ್ಕೆ ಕಳುಹಿಸಿದನು. ಬಳಿಕ ಸಂತೋಷಗೊಂಡವನಾಗಿ, ಸ್ವಪುರಿಯತ್ತ ಪ್ರಯಾಣ ಬೆಳೆಸಿದನು. ಇಂದ್ರನು ಅಮರಾವತಿಯನ್ನು ಸೇರಿಕೊಳ್ಳುವಂತೆ ಅದಿತ್ತು. ಮತ್ತು ಆ ಪಾಂಡವರಾದರೂ, ಎಷ್ಟು ದೂರ ತಮ್ಮ ದೃಷ್ಟಿಗೆ ಕಾಣುತ್ತಾನೋ ಅಷ್ಟು ದೂರವೂ ಕೃಷ್ಣನನ್ನು ತಮ್ಮ ಕಣ್ಣುಗಳಿಂದ ಅನುಸರಿಸಿದರು. ಕೃಷ್ಣನ ಮೇಲೆ ಅತಿಶಯವಾದ ಪ್ರೀತಿಯ ಕಾರಣದಿಂದ ಮನಸ್ಸಿನಿಂದಲೂ ಆತನನ್ನು ಹಿಂಬಾಲಿಸಿದರು.


ತನ್ನನ್ನು ಎಷ್ಟು ನೋಡಿದರೂ ತೃಪ್ತಿಯಾಗದ ಮನಸ್ಸುಳ್ಳ ಅವರ ದೃಷ್ಟಿಯಿಂದ ಬೇಗನೆ ಮರೆಯಾದನು, ನೇತ್ರಗಳಿಗೆ ಅಭಿರಾಮನೆನಿಸುವ ಶ್ರೀಕೃಷ್ಣನು. ಪಾಂಡವರೆಲ್ಲರ ಮನಸ್ಸೂ ಗೋವಿಂದನಲ್ಲಿಯೇ ನೆಲೆಗೊಂಡಿತ್ತು. ಕೃಷ್ಣನನ್ನು ಬೀಳ್ಕೊಟ್ಟಾದ ಬಳಿಕ ಹಿಂದಿರುಗಿ ತಮ್ಮ ಪುರವನ್ನು ಪಾಂಡವರು ಬೇಗನೇ ಸೇರಿಕೊಂಡರು. ಇತ್ತ ಕೃಷ್ಣನೂ ರಥದಲ್ಲಿ ಸಾಗಿ ತ್ವರಿತವಾಗಿಯೇ ದ್ವಾರಕೆಯನ್ನು ಸೇರಿಕೊಂಡನು. ಸಾತ್ತ್ವತವಂಶದ ವೀರನಾದ ಸಾತ್ಯಕಿಯು ಕೃಷ್ಣನ ಹಿಂದೆ ಕುಳಿತು ಪ್ರಯಾಣಿಸುತ್ತಿದ್ದನು. ಸಾರಥಿಯಾದ ದಾರುಕನು ಮುಂದೆ ಕುಳಿತಿದ್ದನು. ಅವರಿಬ್ಬರೊಂದಿಗೆ, ವೇಗಸಂಪನ್ನನಾಗಿ ಗರುಡನು ಹೇಗೋ ಹಾಗೆ ದ್ವಾರಕೆಯನ್ನು ಕೃಷ್ಣನು ಸೇರಿಕೊಂಡನು.


ಇತ್ತ, ಸೋದರರೊಡಗೂಡಿದ ಧರ್ಮರಾಜನು ಸ್ನೇಹಿತರಿಂದ ಸುತ್ತುವರೆಯಲ್ಪಟ್ಟವನಾಗಿ ತನ್ನ ಶ್ರೇಷ್ಠಪುರವನ್ನು ಹೋಗಿ ಸೇರಿದನು. ಮಿತ್ರರು, ಎಲ್ಲ ಭ್ರಾತೃಗಳು ಹಾಗೂ ಪುತ್ರರು - ಇವರೆಲ್ಲರನ್ನೂ ಕಳುಹಿಸಿಕೊಟ್ಟು, ಆ ಪುರುಷವ್ಯಾಘ್ರನಾದ ಯುಧಿಷ್ಠಿರನು ದ್ರೌಪದಿಯೊಂದಿಗೆ ಸಂತೋಷವಾಗಿದ್ದನು. ಇತ್ತ ಕೇಶವನೂ ಸಂತೋಷದಿಂದ ತನ್ನ ಶ್ರೇಷ್ಠನಗರಿಯನ್ನು ಸೇರಿಕೊಂಡನು. ಉಗ್ರಸೇನ ಮೊದಲಾದ ಯದುವೀರರು ಆತನನ್ನು ಸಂಮಾನಿಸಿದರು. ಉಗ್ರಸೇನ, ವೃದ್ಧನಾದ ತಂದೆ ವಸುದೇವ, ಯಶಸ್ವಿನಿಯಾದ ತಾಯಿ ದೇವಕಿ ಹಾಗೂ ಅಣ್ಣ ಬಲರಾಮ - ಇವರುಗಳಿಗೆಲ್ಲ ಶ್ರೀಕೃಷ್ಣನು ನಮಸ್ಕಾರಗಳನ್ನು ಸಲ್ಲಿಸಿದನು. ಬಳಿಕ ಪ್ರದ್ಯುಮ್ನ, ಸಾಂಬ ಮುಂತಾದವರನ್ನು ಕೃಷ್ಣನು ಆಲಿಂಗಿಸಿಕೊಂಡನು. ಹಿರಿಯರ ಅನುಮತಿ ಪಡೆದು ರುಕ್ಮಿಣಿಯ ಭವನಕ್ಕೆ ಹೋದನು.


ಅಷ್ಟರಲ್ಲಿ ಇತ್ತ ಮಯನೂ ಸರ್ವರತ್ನಗಳಿಂದಲೂ ಕಂಗೊಳಿಸುವ ಸಭೆಯೊಂದನ್ನು ಧರ್ಮರಾಜನಿಗೆ ಕಟ್ಟಿಕೊಡುವ ಸಂಕಲ್ಪಮಾಡಿದನು. ಜಯಶಾಲಿಗಳಾದವರಲ್ಲಿ ಶ್ರೇಷ್ಠನೆನಿಸುವ ಅರ್ಜುನನನ್ನು ಕುರಿತು ಮಯನು ಹೇಳಿದನು, "ಹೊರಡಲು ಅನುಮತಿ ಕೊಡಿ, ನಾ ಮತ್ತೆ ಬರುವೆ. ಕೈಲಾಸಕ್ಕೆ ಉತ್ತರದಲ್ಲಿರುವ ಮೈನಾಕಪರ್ವತದ ಮೇಲೆ ದಾನವರು ಒಂದು ಯಜ್ಞವನ್ನು ಮಾಡುವವರಾಗಿದ್ದರು.  ಆಗ ಮಣಿಮಯಭಾಂಡವೊಂದನ್ನು ನಾನು ನಿರ್ಮಿಸಿದೆ. ಬಿಂದುಸರದ ಸಮೀಪದಲ್ಲಿಯ ರಾಜ ವೃಷಪರ್ವನ ಸಭೆಯಲ್ಲಿ ಅದನ್ನಿಡಲಾಯಿತು. ಆ ರಾಜನು ಸತ್ಯಸಂಧ - ಎಂದರೆ ಸತ್ಯವಾದ ಪ್ರತಿಜ್ಞೆಯುಳ್ಳವನು. ಅದಿನ್ನೂ ಹಾಗೆಯೇ ಉಳಿದಿರುವುದಾದರೆ ಅದನ್ನು ಇಲ್ಲಿಗೆ ತೆಗೆದುಕೊಂಡುಬರುವೆ. ಆ ಬಳಿಕವೇ ಪಾಂಡವರಿಗೆ ಕೀರ್ತಿಯನ್ನು ತರುವ ಸಭೆಯೊಂದನ್ನು ನಿರ್ಮಿಸುವೆ" - ಎಂದು.


ಸೂಚನೆ : 15/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಕೃಷ್ಣಕರ್ಣಾಮೃತ 68 ಬಾಲಕೃಷ್ಣನ ಬಾಯೊಳಗೆ ಒಟ್ಟಿಗೇ ಹಾಲು-ಬೆಣ್ಣೆ-ಮಣ್ಣುಗಳೇ? (Krishakarnamrta 67)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಇಲ್ಲಿ ಚಿತ್ರಿಸಲಾಗಿರುವ ಶ್ರೀಕೃಷ್ಣನು ವಿಲಾಸಗಳಿಗೆ ನಿಧಿಯಾದ ಬಾಲಕ. ವಿಲಾಸಗಳ ಸಮುದ್ರವೇ ಆತನೆಂದರೂ ನಡೆಯುತ್ತದೆ. ಆತನನ್ನು ನಾನು ಕಾಣುವುದು ಎಂದು? - ಎಂದು ಶ್ಲೋಕಾಂತದಲ್ಲಿ ಕೇಳಿದೆ.

ಯಾವ ತೆರನವು ಆತನ ವಿಲಾಸಗಳು? ಎರಡೆಡೆಗಳಲ್ಲಿ ವೈಪುಲ್ಯ, ಎರಡೆಡೆಗಳಲ್ಲಿ ಮಾರ್ದವ, ಎರಡೆಡೆಗಳಲ್ಲಿ ಮಾಧುರ್ಯ - ಇವುಗಳೇ ಆತನ ವಿಲಾಸಮಯತೆಗೆ ವ್ಯಂಜಕ.

ಆತನ ವಕ್ಷಸ್ಸು ವಿಶಾಲವಾದದ್ದು. ಅಲ್ಲದೆ, ಆತನ ಕಣ್ಣುಗಳೂ ಅಷ್ಟೆ, ಆಯತವಾದವು. ಉತ್ಪಲವನ್ನು, ಎಂದರೆ ಕಮಲವನ್ನು, ಹೋಲುವಂತಹವು ಅವು. ವಿಶಾಲವಾದ ವಕ್ಷಸ್ಸು ಪುರುಷನ ಪುರುಷತ್ವಕ್ಕೆ ಕನ್ನಡಿ. ಅಗಲವಾದ ಅಕ್ಷಿಗಳು ಅಂದ-ಸೌಂದರ್ಯಗಳ ಆಗರಗಳು.

ಆತನ ಮುಖವನ್ನು ಮಂದಸ್ಮಿತವು ಮಂಡಿಸಿದೆ. ಅದರಲ್ಲೇ ಆತನ ಮನಸ್ಸದೆಷ್ಟು ಮೃದುವೆಂಬುದು ಮನದಟ್ಟಾಗುತ್ತದೆ. ಮೃದು-ಮನಸ್ಕರ ಮುಖದಲ್ಲಿ ಮುಗ್ಧ-ಹಸಿತವು ರಾಜಿಸುತ್ತದೆ. ಉದ್ಧತರು ನಕ್ಕರೆಂದರೆ  ಅಟ್ಟಹಾಸವಷ್ಟೆ ಹೊಮ್ಮೀತು.

ಇದಲ್ಲದೆ ಆತನ ಮದ-ಜಲ್ಪಿತವೂ ಮೃದುಲವೇ. ಮದಿಸಿದವರ ಮಾತಲ್ಲಿ ನಯವೆಲ್ಲಿ? - ಎನಿಸಬಹುದು. ಜಲ್ಪಿತವೆಂದರಂತೂ ತೋಚಿದಂತೆ ಮಾತನಾಡುವುದು. ಆದರೆ ಕೃಷ್ಣನ ಮದವು ಬೇರೆಯವರ ಮದದಂತಲ್ಲವಲ್ಲ? ಒಳಗಿನ ಹರ್ಷಾವಸ್ಥೆಯು ಮದಾವಸ್ಥೆಯಂತೆ ತೋರೀತಷ್ಟೆ. ವಿಹಾರ-ಬುದ್ಧಿಯಿಂದ ವಿಲಾಸಕ್ಕಾಡುವ ಮಾತಾದರೂ, ಕೃಷ್ಣನಂತಹ ವಿವೇಕಿಗಳ ಮಾತು ಧರ್ಮದ ಜಾಡಿನಿಂದಂತೂ ಜಾರದು. 

ಎಂದೇ ಒರಟಾದ ಮಾತೇ ಅಂತಹವರ ಬಾಯಿಂದ ಹೊರಡದು. ಮಾತು ಒರಟಾದರೆ ಕೇಳುವವರಿಗೇನು ಹಿತವೇ? ಕೃಷ್ಣನ ಸ್ಮಿತವೂ ಮೃದುಲ, ಭಾಷಿತವೂ ಮೃದುಲ.

ಇನ್ನು ಆತನ ತುಟಿಯಂತೂ ತೊಂಡೇ ಹಣ್ಣಿನಂತೆಯೇ ಇರುವುದು. ಬಿಂಬಫಲ ಅಥವಾ ತೊಂಡೆಯ ಒಳಭಾಗವು ಕಡುಗೆಂಪಾಗಿರುವುದು. ಹಾಗೆ ಸಹಜವಾಗಿ ಕೆಂಪಾಗಿರುವ ತುಟಿಗಳು ರಕ್ತಪುಷ್ಟಿಯನ್ನು ಸೂಚಿಸುವುವು; ಅದಂತೂ ಆರೋಗ್ಯದ ಸುಲಕ್ಷಣವೇ ಸರಿ. ಹೀಗಾಗಿ ಕೃಷ್ಣನ ಬಿಂಬಾಧರವು ಮಾಧುರ್ಯವನ್ನು ಬಿಂಬಿಸುತ್ತದೆ. ಅದು ಮಾತ್ರವಲ್ಲ; ಆತನ ತುಟಿಗೆ ತಗಲುವ ಕೊಳಲೂ ಅಷ್ಟೇ. ಕಿವಿಗಿಂಪಾದ ದನಿಯೇ ಅದರಿಂದ ಚಿಮ್ಮುವುದು. ಹೀಗೆ ಶ್ರವಣಗಳಿಗೆ ರಮಣೀಯವೆನಿಸಿವುದು, ಕೃಷ್ಣನ ಮುರಳೀ-ರವ. ರವವೆಂದರೆ ಧ್ವನಿ.

ಈ ಶ್ಲೋಕವು ಕೃಷ್ಣನಲ್ಲಿ ತೋರುವ ವೈಪುಲ್ಯ-ಮಾರ್ದವ-ಮಾಧುರ್ಯಗಳನ್ನು ತಿಳಿಸುತ್ತದೆ. ಈ ಮೂರನ್ನೇ ಮೊದಲ ಮೂರು ಪಾದಗಳಲ್ಲಿ ತಿಳಿಸಿರುವುದು. ಅವುಗಳಲ್ಲಿಯ ಪದಗಳಲ್ಲಿ ೪+೧+೩+೫+೧ ಎಂಬ ಪರಿಯ ಅಕ್ಷರಗಳ ವಿನ್ಯಾಸವಿದೆ. ಈ ಶ್ಲೋಕದ ರಚನೆಯಲ್ಲೇ ಹೀಗೊಂದು ವಿಶೇಷವಿದೆ.

ಅಲ್ಲದೆ, ಲ-ಲ, ಮ-ಮ, ರ-ರ, ಎಂಬೀ ಅಕ್ಷರಗಳ ಪುನರಾವೃತ್ತಿಯಿಂದಾದ ಅನುಪ್ರಾಸವೂ ಕಿವಿಗೆ ಸವಿಯೇ. ಚ-ಚಗಳು ನಿಯತವಾದ ಸ್ಥಾನಗಳಲ್ಲೇ ಬರುತ್ತಿರುವುದೂ ಒಂದು ಚಮತ್ಕೃತಿಯೇ.

ಶ್ಲೋಕ ಹೀಗಿದೆ:
ವಕ್ಷಃಸ್ಥಲೇ ಚ ವಿಪುಲಂ ನಯನೋತ್ಪಲೇ ಚ
ಮಂದಸ್ಮಿತೇ ಚ ಮೃದುಲಂ ಮದಜಲ್ಪಿತೇ ಚ |
ಬಿಂಬಾಧರೇ ಚ ಮಧುರಂ ಮುರಲೀ-ರವೇ ಚ
ಬಾಲಂ ವಿಲಾಸನಿಧಿಮಾಕಲಯೇ ಕದಾ ನು? ||

ಮತ್ತೊಂದು ಶ್ಲೋಕ:

ಕೃಷ್ಣನು ನಮ್ಮನ್ನು ಕಾಪಾಡಲಿ - ಎಂಬ ಕೇಳ್ಕೆಯೊಂದಿಗೆ ಈ ಶ್ಲೋಕವು ಮುಕ್ತಾಯಗೊಳ್ಳುತ್ತದೆ. ಅದರ ಹಿಂದಿನ ನುಡಿಗಳು ಕೃಷ್ಣಜೀವಿತದ ಒಂದು ಪ್ರಸಂಗವನ್ನು ಹೇಳುತ್ತವೆ. ತಾಯಿ ಯಶೋದೆಗೆ ಮಹಾಗಾಬರಿಯನ್ನೇ ಉಂಟುಮಾಡಿದ ಪ್ರಸಂಗವದು.

ತಾಯಿಯಾದವಳಿಗೆ ತನ್ನ ಶಿಶುವಿನ ಆರೋಗ್ಯದ ಬಗ್ಗೆ ಸದಾ ಕಳಕಳಿಯಿರುವುದಷ್ಟೆ? ಹೆತ್ತ ತಾಯಿಗಿಂತಲೂ ಹೆಚ್ಚು ಕಾಳಜಿಯನ್ನು ಸಾಕುತಾಯಿಯು ತೋರಿಸುವಳು. ಏಕೆ? ಶಿಶುರಕ್ಷಣೆಯು ತನ್ನ ಜವಾಬ್ದಾರಿಯಲ್ಲವೇ? ತಾನು ಸಾಕಷ್ಟು ಜಾಗರೂಕಳಾಗಿರಲಿಲ್ಲವೆಂದು ಯಾರಾದರೂ ಭಾವಿಸುವಂತಾಗಿಬಿಟ್ಟರೆ ಏನು ಗತಿ? - ಎಂಬ ಚಿಂತೆ ಸಹಜವಾದದ್ದೇ.

ಕೃಷ್ಣನ ಬಾಲಲೀಲೆಗಳು ಒಂದೇ ಎರಡೇ? ಒಳ್ಳೆಯ ಮಗುವಾದರೂ ತಾಯಿಗೆ ವ್ಯಾಕುಲತೆಯಿದ್ದೇ ಇರುವುದೇ. ಆದರೆ ತುಂಟಾಟ ಮಾಡುವ ಮಕ್ಕಳು, ಚೇಷ್ಟೆಯ ಮಕ್ಕಳಾದರಂತೂ ಸದಾ ಮಗುವಿನ ಮೇಲೊಂದು ಕಣ್ಣಿಟ್ಟಿರುವುದೇ ತಾಯಿಯ ಕೆಲಸವಾಗಿಬಿಡುತ್ತದೆ. ಅನ್ಯ-ಕರ್ತವ್ಯಗಳು ಗೌಣವೇ ಆದಾವು!

ಮಕ್ಕಳು ಗುಟ್ಟಲ್ಲಿ ಮಣ್ಣುಮುಕ್ಕಿಬಿಡುವುದುಂಟು. ಏನನ್ನು ದೊಡ್ಡವರು ಬೇಡವೆನ್ನುತ್ತಾರೋ ಅದನ್ನು ಗುಟ್ಟಾಗಿ ಮಾಡು - ಇದುವೇ ಮಕ್ಕಳ ವಿಲಾಸ-ವೈಭವ-ವ್ರತ! ಇದು ಸಾಲದೆಂಬಂತೆ ಕೃಷ್ಣನಂತೂ ಅವರಿವರ ಮನೆಗಳಲ್ಲೆಲ್ಲಾ ಬೆಣ್ಣೆ ಕದ್ದು ತಿನ್ನುವುದೂ ಗೊತ್ತಿರುವುದೇ. ಹಾಲು ಕುಡಿಯುವ ಚಪಲವೂ ಕೃಷ್ಣನಿಗಿದ್ದದ್ದೇ. ಅವೇಳೆಯಲ್ಲಿಯೋ ಅತಿಯಾಗಿಯೋ ಹಾಲು ಕುಡಿದರೆ ಅದೂ ಅನಾರೋಗ್ಯಕರವೇ ತಾನೇ?

ಆದರೆ ಒಮ್ಮೆ ಯಶೋದೆಗೆ ಗಾಬರಿಯೇ ಆಗುವಂತಾಗಿದೆ, ಕೃಷ್ಣನ ಬಾಯೊಳಗೆ ಇದ್ದುದನ್ನು ಕಂಡು. ಅಲ್ಲಿ ಒಂದಿಷ್ಟು ಬೆಣ್ಣೆಯಿದೆ. ಜೊತೆಗೇ ಒಂದಿಷ್ಟು ಮಣ್ಣಿನ ಹೆಂಟೆಯೂ ಇದೆ,ಅ ಲ್ಲದೆ, ಒಂದಿಷ್ಟು ಹಾಲೂ ಕೂಡ ಇದೆ! ಅದೆಲ್ಲವೂ ಒಟ್ಟಿಗೆ ಬಾಯಲ್ಲಿ ಇರಲು ಸಾಧ್ಯವೇ? ಹಿಂದೆಂದೂ ಹೀಗಾಗಿಲ್ಲದ ಈ ಸಂನಿವೇಶವನ್ನು ಕಂಡು ಅವಳಿಗೆ ಗಾಬರಿ, ಭಯ, ಆತಂಕ, ಆಶ್ಚರ್ಯಗಳೆಲ್ಲಾ ಒಟ್ಟಿಗೇ ಆಗಿವೆ.

ವಾಸ್ತವವಾಗಿ ಆಗಿರುವುದೇನು? ಕೃಷ್ಣನು ಬಾಯಿಬಿಟ್ಟಾಗ ಜಗವೆಲ್ಲ ಆತನ ಬಾಯಲ್ಲಿ ಕಂಡಿದೆ. ಬೆಣ್ಣೆಯಾಗಿ ತೋರಿದ್ದು ವಾಸ್ತವವಾಗಿ ಕೈಲಾಸಪರ್ವತವೇ! ಪ್ರಾಗ್ಜಗ್ಧವೆಂದರೆ ಮೊದಲು ಜಗಿದದ್ದು. ಅಂತಹ ಮಣ್ಣುಹೆಂಟೆಯಂತೆ ಕಂಡದ್ದು ಭೂಮಿಯೇ! ಇನ್ನು ಕುಡಿದ ಹಾಲಿನಂತೆ ತೋರಿದ್ದು ಕ್ಷೀರಸಮುದ್ರವೇ!

ಹೀಗಾಗಿ ಮುದ್ದುಕೃಷ್ಣನ ಪುಟ್ಟಮುಖದಲ್ಲಿ ಕೈಲಾಸವೇ ನವನೀತವಾಗಿಹೋಯಿತು! ಭೂಮಿಯೇ ಮಣ್ಣಿನ ಮುದ್ದೆಯಾಗಿಹೋಯಿತು! ಕ್ಷೀರಸಾಗರವು ಹಾಲಾಗಿಹೋಯಿತು! ಬಾಲಕನ ಬಾಯೊಳಗೇ ಕೈಲಾಸ- ಭೂಖಂಡ-ಕ್ಷೀರಸಮುದ್ರಗಳನ್ನೆಲ್ಲಾ ಕಂಡಳಾಕೆ!

ಮುಗುಳ್ನಗೆಯಿಂದ ಅರಳಿದ ಮುಖದಲ್ಲಿ, ಬಾಯೊಳಗೆ ಏನೇನೋ ಕಂಡ ತಾಯಿಗೆ ತೋರಿದ್ದೇನು? ತೋರುವುದೇನು, ಏನೋ ಅಜೀರ್ಣವಾಗಿದೆಯೆಂದೇ!

ಸುಮ್ಮಸುಮ್ಮನೆ ಹಾಗೆಲ್ಲಾ ಅಜೀರ್ಣವೂ ಆಗುವುದಿಲ್ಲ, ಆಗಲೂಬಾರದು. ಹಾಗಿದ್ದರೆ ಯಾರದ್ದೋ ದೃಷ್ಟಿಯಾಗಿರಬೇಕು. ಯಾರದ್ದೋ ಎಂದರೆ ಇನ್ನೇನು, ಯಾವಳೋ ಹೆಂಗಸಿನದೇ ದೃಷ್ಟಿ ತಾಗಿರಬೇಕು. ಬರೀ ಅಜೀರ್ಣಕ್ಕೆ ವೈದ್ಯ ಮಾಡಬಹುದೇನೋ? ಆದರೆ ದೃಷ್ಟಿ ಪರಿಹಾರವೆಂಬುದೇನು ಸುಲಭವೇ? ಕೆಟ್ಟೆ ಕೆಟ್ಟೆ! – ಎಂದುಕೊಂಡಳು.

ಎಂದೇ ಆಕೆಯ ಗಾಬರಿಯ ಉದ್ಗಾರ: "ಧೂ ಧೂ!" ಎಂದು; ಜೊತೆಗೆ, "ಮಗುವೇ, ಬಾಳು! ನೂರ್ಕಾಲ ಬಾಳು! ಚಿರಕಾಲ ಬಾಳು!" – ಎಂದು.

ಬಾಯಲ್ಲೇ ವಿಶ್ವರೂಪವನ್ನು ತೋರಿದ ತನ್ನ ಮಹಿಮೆಯನ್ನರಿಯದ ತಾಯಿಯ ಬಾಯಿಂದ ಇಂತಹ ಉದ್ಗಾರ ತರಿಸಿದ ಹರಿಯು ನಮ್ಮನ್ನು ಕಾಪಾಡಲಿ - ಎನ್ನುತ್ತದೆ ಶ್ಲೋಕ.

ನವನೀತದಂತೆ ತೋರು - ಎಂಬುದಕ್ಕೆ ನವನೀತತಿ ಎಂದಷ್ಟೇ ಹೇಳಿದರೂ ಆಯಿತು, ಸಂಸ್ಕೃತದಲ್ಲಿ. ನಾಮಪದಗಳನ್ನೇ ಹೀಗೆ ಧಾತುಗಳನ್ನಾಗಿಸುವ ಬಗೆ ವಿಶಿಷ್ಟವಾದುದು. ಮೂರು ಬಾರಿ ಈ ತೆರನ ನಾಮಧಾತು-ಪ್ರಯೋಗವೆಂಬುದು ಪ್ರಕೃತಶ್ಲೋಕಕ್ಕೊಂದು ಮೆರುಗುಕೊಟ್ಟಿದೆ.

ಶ್ಲೋಕವಿಂತಿದೆ:
ಕೈಲಾಸೇ ನವನೀತತಿ, ಕ್ಷಿತಿತಲೇ ಪ್ರಾಗ್-ಜಗ್ಧ-ಮೃಲ್ಲೋಷ್ಟತಿ, /
ಕ್ಷೀರೋದೇಽಪಿ ನಿಪೀತ-ದುಗ್ಧತಿ ಲಸತ್-ಸ್ಮೇರ-ಪ್ರಫುಲ್ಲೇ ಮುಖೇ, |
ಮಾತ್ರಾಽಜೀರ್ಣ-ಧಿಯಾ ದೃಢಂ ಚಕಿತಯಾ ನಷ್ಟಾಽಸ್ಮಿ! ದೃಷ್ಟಃ ಕಯಾ ?/
ಧೂ ಧೂ ವತ್ಸಕ! ಜೀವ ಜೀವ ಚಿರಮಿತ್ಯುಕ್ತೋಽವತಾದ್ ವೋ ಹರಿಃ ||

ಸೂಚನೆ : 14/06/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.