Thursday, December 30, 2021

சமையல் கலையின் அடிப்படை (Samaiyarkalaiyin adippadai)

மூலம்: தாரோடி சுரேஷ் தமிழாக்கம்: வனஜா

மின்னஞ்சல் : (lekhana@ayvm.in)


 

     

இன்றைய தலைமுறையினரின் சமையற்கலையை குறித்த கருத்துக்களையும்,  சமையல்முறை வழக்கங்களையும்  குறித்து கடந்த பதிவில் சுருக்கமாக நினைவு கூர்ந்தோம். சமையல் கலையின் அடிப்படையை அறிமுகப்படுத்துவது இன்றைய பதிவின் நோக்கம். .

       பாகம்(paakam) என்ற சொல் பதப்படுத்துவது என்பதை குறிக்கிறது.  அதாவது இயற்கையில் உள்ள ஏற்ற-தாழ்வுகளை நிலைக்குலையாமல் சமநிலைப்படுத்துதல் என்பதாகும்.  இறைவன் குறையின்றி சமநிலையுடன்  விளங்குபவன்.  (நீர்த்தோஷம் ஹி சமம் பிரம்ஹ) "உதரத்திற்கு(வயிற்றிற்கு) நிறைவளிப்பது மட்டுமன்றி தாமோதரனுக்கும் நிறைவு ஏற்படுத்த வேண்டும்" என்று ஸ்ரீரங்கமகாகுரு அறிவுறுத்தினார். இறைவனை உணர தடையாய் இல்லாதிருப்பின்  சமையல் என்பது ஒரு கலையாகும்.

சமையல் என்பது  ஒரு கலை மட்டுமன்று, அனைத்துக் கலைகளுக்கும்  தாய் போன்றது. படைப்பிலுள்ள அனைத்து உயிரினங்களையும் நிறைவுபடுத்தி காக்கிறது இக்கலை. இது தேவாதி தேவர்களுக்கும், பாடகர்நடிகர்கவிஞர் சிற்பிஎழுத்தாளர்விவசாயிபடைவீரர் என அனைவருக்கும் ஊட்டமளிக்கிறது. ஆயின்  வெவ்வேறு கலைகளுக்கேற்ப   சுவை சேர்க்கும் வண்ணம்  திட்டமிடுதல் அவசியம்.

    

         பலதரப்பட்ட கலைகளுக்கு தகுந்தவாறு  பதப்படுத்துதலும் வேறுபடும். எனவே சமநிலை ஏற்படத்தக்க விகிதத்தில் தயாரிக்கும் ரகசியம் அடங்கியுள்ளதனால் இது ஒரு கலை மட்டுமன்று, அனைத்து கலைகளுக்கும் தாயாகும்.

          சமையற்கலையானது  படைப்பின் வளர்சியில் ஒரு முக்கிய பங்கு வகிக்கும் கலையாகி மனிதனுக்கு தேவையான உடல்பலத்தையும்மனநிறைவையும், ஆன்மீகநோக்கையும் அளிக்கிறது. பௌதிக இன்பத்தை மட்டுமின்றி யோகத்தின் பேரின்பத்தையும் உள்ளடக்கிய நோக்குள்ளது. உப்புபுளி, காரம் போன்ற சுவைகளனைத்தும் பதத்துடன் சமரஸமாக அமைந்தால் மட்டுமே சமையல் நேர்த்தியானதாகிறது. ஸமரசமே  சமையற்கலையின் சாரம். ரஸஸ்வரூபியான பரமாத்மனை மறைக்காமலிருப்பதுவே ரஸம். மேலும் புலன்களால் உணரப்படும் சுவையினிலும்  அதன் மூலரஸத்தின் சுவடு உண்டு.   

  

        நாம் மற்றொரு செய்தியையும் மனதில் கொள்ள வேண்டும். ஸ்ரீக்ருஷ்ணன்  "தனக்காக மட்டுமே சமைப்பவன் பாவத்தை மட்டுமே உண்கிறான்" என்று எச்சரிக்கிறான். அனைத்து பொருட்களும்தேவையான தானியம் போன்றவையும் இறைவனிடமிருந்தே கிடைக்கின்றன. நாமும் அவன் படைப்பே. இரண்டிற்கும் அவனே தலைவன். எனவே அவன் பொருட்களை பயன்படுத்துகையில் அனைத்தும் அவனுக்கு-தலைவனுக்கு-உரியவை என்பதை அறிந்திருக்க வேண்டும். அவ்வாறாயின் நாம் கள்வர்களாவதில்லை. அதனை இறைவனுக்கு அர்ப்பணித்து பின் நாம் அவன் நினைவுடன் அதனை ஏற்கும்போது அது ப்ரஸாதமாக புனிதமான உணவாக மாறுகிறது. எனவே இச்செயல் யாகயக்ஞமாகிறது.


 இங்கு ஸ்ரீரங்கமஹாகுருவின் சொற்களை நினைவு கூர்தல் ஏற்புடையது. "ஒவ்வொரு கட்டத்திலும் இறைவனை நினைவுகூற வைப்பதே உண்மையான சமையல்".

         இதன் பின்னணியில் பின்வரும் பதிவுகளில்.  சமையலறை அமைப்புசமைப்பவர்அடுப்புசமையலுக்கு தேவையான பாத்திரங்கள், மனநிலை  குறித்து ஆராய்வோம்.


குறிப்பு: இக்கட்டுரை யின் கன்னட மூலம் AYVM blogs ல் காணலாம்.

Tuesday, December 28, 2021

ஒப்பற்ற மஹாபுருஷர் ஶ்ரீரங்கமஹாகுரு - பாகம் -1 (Oppatra Mahaapurushan Srirangamahaa Guru - Part - 1)

திரு எஸ்.வி.சாமு அவர்களின்  மூலகன்னட புத்தகத்தின் ஒரு பகுதி

தமிழாக்கம்:  ஶ்ரீமதி ஜானகி

மின்னஞ்சல் : (lekhana@ayvm.in)




ஶ்ரீரங்க ஸத்குரவே நம:


நமது ஸனாதன  பரம்பரை அநேக ஸாதுக்களையும், யோகிகளையும்  கண்டுள்ளது. ஶ்ரீரங்கமஹாகுரு என்ற மஹான் நமது பாரதம் கண்ட அத்தகைய மஹான்களில்  அபூர்வமும், ஒப்பற்றவருமான  ஒரு  யோகி. மேருவைப்போல உயர்ந்த அசாதாரணமான குணநலன்களை கொண்டவராக விளங்கியவர். அவர் அந்த பெயரே கூறுவது போல ஓர் ஞான புருஷனாக திகழ்ந்தார்.


.         ஶ்ரீரங்க மஹாகுருவானவர் ஒரு சாதாரண குடும்பத்தில் பிறந்து எளிமையான உலகவாழ்க்கை நடத்தினார். அவரது யோகமஹிமையானது இலை மறைவிலுள்ள காய்போல் உலகத்தின்  கண்களுக்கு புலப்படாது  திகழ்ந்தது.  அசாதாரணமான அத்யாத்ம ஸித்தியை தான் அடைந்தது மட்டுமன்றி அதை விரும்பி தன்னை நாடி வந்தவர்க்கும்  அதை அருளிய ஒப்பில்லாத மஹா புருஷர். உலகில் ஞானிகள் தோன்றினாலும் அவர்களுடனேயே அந்த ஞானமும் மறைந்து விடுவதை நாம் காண்கிறோம். ஆனால் இம்மஹான்  அருளிய ஞானம், வித்யை, கலை முதலியவை அவருடன் மறையவில்லை. தான் கண்ட பரம்பொருளை  பிறரும் கண்டு அனுபவிக்கும்படி செய்யும் சாமர்த்யமுள்ளவராக விளங்கினார். நம் சம காலத்தில் பெங்களூரில். 


வாழ்ந்து சமூகத்தில் அனைவரையும் ஊக்குவித்த  ஶ்ரீ ஶ்ரீரங்கப்ரியஸ்வாமிகளின் குருவும் இவரே. அவர்போன்ற  அநேக மஹனீயர்களுக்கு பரிசோதித்து அறியக்கூடிய  பாரத கலாச்சாரத்தின் உண்மையும், முழுமையுமான அறிமுகத்தை  அளித்தார் ஶ்ரீரங்கமஹாகுரு. அனைத்து  வித்யைகளும், கலைகளும் எவ்வாறு இறைவனிடமிருந்து மலர்ந்தன மற்றும் அவைகளை அறிந்து உணர்ந்து உபாசித்தால் அவை ஸாதகனை அந்த இறை ஒளியிடமே  அழைத்து செல்லும் என்பதை நிரூபித்த பெருமை   இவருடையது.


                அவருடைய இத்தகைய கண்ணோட்டத்தை கண்டு கொண்டது அவருடைய  சிஷ்ய சமூகம் ஆனாலும்  அவருடைய இந்த விசாலமான கண்ணோட்டம் பாரத தேசம் மட்டுமே அல்லாது உலகிற்கே பரம மங்களமான ஒரு வழிகாட்டியாக உதவுகிறது.

    

 (தொடரும்)


Sunday, December 26, 2021

ಶ್ರೀರಾಮನ ಗುಣಗಳು - 37 ಭಾಷಾಭಿಜ್ಞ - ಶ್ರೀರಾಮ(Sriramana Gunagalu -37 Bhaashaabhijna Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



ಮಾನವನು ತನ್ನ ಭಾವನೆಗಳನ್ನು ಇನ್ನೊಬ್ಬರಿಗೆ ತಲುಪಿಸಲು ಲಿಪಿ, ಚೇಷ್ಟೆ, ಸಂಜ್ಞೆ, ಮೌನ, ಭಾಷೆ ಹೀಗೆ ಹಲವು ಮಾಧ್ಯಮಗಳನ್ನು ಬಳಸುತ್ತಾನೆ. ಅವುಗಳಲ್ಲಿ ಭಾಷೆಯು ಅತ್ಯುತ್ತಮವಾದ ಸಂವಹನ ಮಾಧ್ಯಮ. ಅದು ಉತ್ತಮವಾಗಿದ್ದಾಗ ಮಾತ್ರ ಭಾವವೂ ಅದೇ ಮಟ್ಟದಲ್ಲಿ ಆಚೆ ತಲುಪಲು ಸಾಧ್ಯ. ಭಾಷೆಯ ಹಿಂದೆ ಅವ್ಯಕ್ತವಾದ ಪರಾ, ಪಶ್ಯಂತೀ, ಮಧ್ಯಮಾ ಎಂಬ ಮೂರು ಅವಸ್ಥೆಗಳು ಇವೆ. ಭಾಷೆಯೆಂಬುದು ವ್ಯಕ್ತವಾದ ಮಾತಿನ ರೂಪ. ಹಾಗಾಗಿ ಭಾಷೆಯು ನಾಲ್ಕನೆಯ ಅವಸ್ಥೆಯಾಗಿದೆ. ಇದಕ್ಕೆ 'ವೈಖರೀ' ಎಂಬುದಾಗಿಯೂ ಕರೆಯುತ್ತಾರೆ. ಭಾಷೆಯ ಹಿಂದಿನ ಅವಸ್ಥೆಗಳು ಯೋಗಿ ಅಥವಾ ಋಷಿಮಾತ್ರ ಸಂವೇದ್ಯವಾಗಿವೆ. ಭಾಷೆಯು, ಬಳಸಿದವನ ಭಾವವನ್ನು ಹೊತ್ತು ತರುತ್ತದೆ. ಆ ಭಾವವನ್ನು ತಿಳಿಯಲು, ಯಾವ ಭಾಷೆಯನ್ನು ಅಲ್ಲಿ ಉಪಯೋಗಿಸಲಾಗಿದೆಯೋ, ಅದನ್ನು ಕೇಳುವವನೂ ತಿಳಿದಿರಬೇಕಾಗುತ್ತದೆ. ಅಷ್ಟೆ ಅಲ್ಲ, ಉತ್ತಮವಾದ ಅಭಿಪ್ರಾಯವನ್ನು ಹೊರಡಿಸಲು ಭಾಷೆಯ ಜ್ಞಾನವೂ ಅಷ್ಟೇ ಅಗತ್ಯವಾಗಿದೆ. ಇದನ್ನೇ 'ಭಾಷಾಭಿಜ್ಞತೆ' ಎನ್ನಬಹುದು. ಹಾಗಾಗಿ ಭಾಷೆಯ ಅಭಿಪ್ರಾಯವನ್ನು ಅರಿಯಲು, ಅದರ ಎಲ್ಲಾ ಅವಸ್ಥೆಗಳನ್ನೂ ತಿಳಿದಿದ್ದರೆ ಮಾತ್ರವೇ ಸಾಧ್ಯ. ಯಾರು ಈ ನಾಲ್ಕು ಅವಸ್ಥೆಗಳನ್ನು ಅರಿಯಬಲ್ಲರೋ ಅವರು ಮಾತ್ರವೇ 'ಭಾಷಾಭಿಜ್ಞ' ಎಂಬ ಪದಕ್ಕೆ ಯೋಗ್ಯರಾಗುತ್ತಾರೆ.


ವೈಖರೀರೂಪವಾದ ಭಾಷೆಯಿಂದ ಅದರ ಹಿಂದಿನ ಭಾವವನ್ನು ಅರಿಯಲು ಸಾಮಾನ್ಯವಾದ ನಾಮಪದ ಕ್ರಿಯಾಪದಗಳಿಂದ ಕೂಡಿದ ವ್ಯಾಕರಣ ಜ್ಞಾನಮಾತ್ರ ಸಾಲದು. ಶ್ರೀರಾಮನು ಎಂತಹ ಭಾಷಾಭಿಜ್ಞನಾಗಿದ್ದ ಎಂಬುದಕ್ಕೆ ಶ್ರೀಮದ್ರಾಮಾಯಣದ ಒಂದು ಉದಾಹರಣೆ ಸಾಕು. ಸುಗ್ರೀವದೂತನಾಗಿ ಹನುಮಂತನು ಶ್ರೀರಾಮನ ಬಳಿ ಬರುತ್ತಾನೆ. ಆಗ ಅನೇಕ ಮಾತನ್ನು ಹನುಮಂತನು ಆಡುತ್ತಾನೆ. ಅಲ್ಲಿ ಹನುಮಂತನು ಆಡಿದ ಮಾತನ್ನು ಶ್ರೀರಾಮನು ಪ್ರಶಂಸಿಸುತ್ತಾ ಲಕ್ಷ್ಮಣ ಬಳಿ ಹೇಳುತ್ತಾನೆ –"ಇಷ್ಟು ಹೊತ್ತು ಈತ ಮಾತನಾಡಿದರೂ ಒಂದು ಮಾತನ್ನು ತಪ್ಪಾಗಿ ಆಡಲಿಲ್ಲ. ಇಂತಹ ಪರಿಶುದ್ಧವಾದ ಭಾಷೆಯನ್ನು ಬಳಸಲು ಅದಕ್ಕೆ ಹಿಂದೆ ಎಷ್ಟು ಅಧ್ಯಯನ ಅವಶ್ಯ!  ಋಗ್ವೇದಾದಿ ನಾಲ್ಕು ವೇದಗಳನ್ನು ಚೆನ್ನಾಗಿ ತಿಳಿಯದೇ ಇಷ್ಟು ಸ್ಪಷ್ಟವಾಗಿ ಮಾತನಾಡಲು ಸಾಧ್ಯವಿಲ್ಲ. ಇವನನ್ನು ನೋಡಿದರೆ ವ್ಯಾಕರಣವನ್ನು ಎಷ್ಟು ಚೆನ್ನಾಗಿ ತಿಳಿದಿದ್ದಾನೆ ಎಂಬುದು ಗೊತ್ತಾಗುತ್ತದೆ. ಅಲ್ಲದೆ ಇವನ ವೈಖರೀವಾಕ್ಕು ಹಿಂದಿನ ಮೂರು ಅವಸ್ಥೆಗಳನ್ನು ಸಹಜವಾಗಿ ಅಭಿವ್ಯಕ್ತಿಪಡಿಸುತ್ತಿದೆ" ಎಂದು ಹೇಳುತ್ತಾನೆ. ಇಲ್ಲಿ ಹನುಮಂತನು ಬಹಳ ಸ್ಫುಟವಾಗಿ ಮಾತನಾಡಿರುವುದು ಎಷ್ಟು ವಿಶೇಷವೋ ಅದಕ್ಕಿಂತಲೂ ವಿಶೇಷವಾದದ್ದು ಶ್ರೀರಾಮನು ಅದನ್ನು ಗುರುತಿಸಿರುವುದು. ಒಬ್ಬನ ಭಾಷಾಪ್ರೌಢಿಮೆಯನ್ನು ಇನ್ನೊಬ್ಬ ಭಾಷಾಭಿಜ್ಞ ತಾನೇ ತಿಳಿಯಬಲ್ಲ! ಇಲ್ಲಿ ನಾವು ಗುರುತಿಸಬೇಕಾದುದು ಶ್ರೀರಾಮನ ಭಾಷಾಭಿಜ್ಞತೆಯನ್ನು. ಇನ್ನೊಂದು ಉದಾಹರಣೆಯನ್ನು ನೋಡಬಹುದು. ಅತ್ತ ವಿಭೀಷಣನು ಅಣ್ಣನಾದ ರಾವಣನ ಸಂಬಂಧವನ್ನು ಕಡಿದುಕೊಂಡು ಬರುತ್ತಾನೆ. ಆಗ ರಾಮನು ವಿಭೀಷಣನ ಭಾವ ಮತ್ತು ಭಾಷೆಯನ್ನು ತಿಳಿದು ಅವನ ಶರಣಾಗತಿಯ ಇಂಗಿತವನ್ನು ತಿಳಿದನು. ಅಂದರೆ ಒಬ್ಬನ ಶಬ್ದಪ್ರಯೋಗದಿಂದ ಅವನ ಒಳಹೊರ ಸಂಗತಿಗಳನ್ನು ಎಷ್ಟು ಸ್ಪಷ್ಟವಾಗಿ ತಿಳಿಯಬಹುದು ಎಂಬುದಕ್ಕೆ ಶ್ರೀರಾಮನ ಅನೇಕ ನಿದರ್ಶನಗಳು ನಮಗೆ ಸಿಗುತ್ತವೆ.

ಸೂಚನೆ : 26/12/2021 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.


ವಸ್ತ್ರಾಭರಣ - 2 ಸ್ತ್ರೀ-ಪುರುಷರ ವಸ್ತ್ರಗಳ ಬಣ್ಣ (Vastra bharana -2 Stree Purushara Vastragala Banna)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)


ನಮ್ಮ ಸಂಸ್ಕೃತಿಯಲ್ಲಿ ಬಂದಂತೆ ಸ್ತ್ರೀ-ಪುರುಷರ ವಸ್ತ್ರಗಳ ಬಣ್ಣವನ್ನು ಕುರಿತು ಗಮನಿಸೊಣ. ಸಾಮಾನ್ಯವಾಗಿ ಸ್ತ್ರೀಯರು ಬಣ್ಣ-ಬಣ್ಣದ ಸೀರೆಗಳನ್ನು ತೊಡುತ್ತಾರೆ. ಆದರೆ ಪುರುಷರ ಉಡುಪು ಬಿಳಿಯ ಪಂಚೆ-ಉತ್ತರೀಯ. ಅವರ ಆಂಗಿಯೂ ಬಿಳುಪಾಗಿಯೇ ಇರುತ್ತಿತ್ತು. ಇದೇಕೆ ಇಂತಹ ಯುನಿಫಾರ್ಮ್ ? ಈ ರಹಸ್ಯವನ್ನು ಅರ್ಥೈಸಿಕೊಳ್ಳಲು ಯೋಗ ಪ್ರಕ್ರಿಯೆಗಳ ಪರಿಚಯ ಅಗತ್ಯ.   


ಯೋಗದ ಸ್ಥಿತಿಯು ಜೀವ-ದೇವರ ಸಂಯೋಗವೆಂದೂ ಪ್ರಕೃತಿ-ಪುರುಷರ ಸೇರ್ಪಡೆಯೆಂದೂ ಬಣ್ಣಿಸುವುದುಂಟು. ಪುರುಷ-ಪ್ರಕೃತಿ ಎಂಬೀ ತತ್ತ್ವಗಳು ನಮ್ಮ ಶರೀರದಲ್ಲಿಯೇ ಅನುಭವಕ್ಕೆ ಬರುತ್ತವೆ. ನಮ್ಮ ಶರೀರವನ್ನು ನೋಡಿದರೆ, ಇದು ಪಂಚಭೂತಗಳಿಂದ ಮಾಡಲ್ಪಟ್ಟಿದೆ. ಇಲ್ಲಿ ಹೊರ ಲೋಕದ ಸಮಾಚಾರವನ್ನು ಗ್ರಹಿಸಲು ಜ್ಞಾನೇಂದ್ರಿಯಗಳುಂಟು. ಈ ಮಾಹಿತಿಗಳನ್ನು ಉಪಯೋಗಿಸಿ ಲೋಕದಲ್ಲಿ ಹೇಗೆ ಹೆಜ್ಜೆ ಇಡಬೇಕೆಂದು ತೀರ್ಮಾನಿಸುವ ಮನಸ್ಸುಂಟು. ನಮ್ಮ ಸಂಕಲ್ಪವನ್ನು ಕಾರ್ಯರೂಪಕ್ಕೆ ತರಲು ಕೈಕಾಲುಗಳೇ  ಮೊದಲಾದ ಕರ್ಮೇಂದ್ರಿಯಗಳು ಉಂಟು. ಈ ಎಲ್ಲ ಚಟುವಟಿಕೆಗಳು 'ನನ್ನ' ಒಳಿತಿಗಾಗಿ, 'ನನ್ನ' ಇಚ್ಛಾಪೂರ್ತಿಗೆ ಎಂದಾಗ ಅಲ್ಲಿ 'ನಾನು' ಎಂಬ ಅಹಂಕಾರ. ಈ ವ್ಯಾಪಾರಗಳೆಲ್ಲಾ ಚಿತ್ತವೆಂಬ ಸಾಗರದಲ್ಲಿ ಸತತವೂ ಎದ್ದೇಳುವ ಅಲೆಗಳಂತೆ ಜ್ಞಾನಿಗಳಿಗೆ ಕಾಣುತ್ತದೆ. ಈ ಅಲೆಗಳನ್ನು ಚಿತ್ತವೃತ್ತಿಗಳೆಂದು ಕರೆಯುತ್ತಾರೆ. ಚಿತ್ತ, ಮನಸ್ಸು, ಇಂದ್ರಿಯಗಳೇ ಮೊದಲಾದ ಎಲ್ಲಾ ತತ್ತ್ವಗಳೂ ಪ್ರಕೃತಿಗೆ ಸೇರುತ್ತವೆ. ಲೋಕದ ವಿಷಯವನ್ನು ತಿಳಿಯುವುದು, ಕಲ್ಪನಾ ಲೋಕದಲ್ಲಿ ವಿಹರಿಸುವುದು, ಹಿಂದಿನ ಅನುಭವಗಳ ಸ್ಮರಣೆಯನ್ನು ಮಾಡುವುದು ಅಥವಾ ಜಾಡ್ಯದಿಂದ ನಿದ್ರಿಸುವುದು - ಇವೆಲ್ಲ ವೃತ್ತಿಗಳೂ ಪ್ರಕೃತಿಗೆ ಸೇರಿದ್ದು. ಪ್ರಕೃತಿಯನ್ನು ಮೀರಿ ತಾನೇತಾನಾಗಿ ಮೆರೆಯುವವನು ಪುರುಷ. ತಪಸ್ಯೆಯಿಂದ ಎಲ್ಲ ಚಿತ್ತವೃತ್ತಿಗಳನ್ನೂ ನಿಲ್ಲಿಸಿದಾಗ, ನಿಸ್ತರಂಗ ಮಹೋದಧಿಯಂತೆ ಪ್ರಕೃತಿಯು ನಿಷ್ಕ್ರಿಯವಾಗಿ ಪ್ರಕೃತಿಯ ಹಿಂದಿರುವ ಪುರುಷನು / ಪರಮಾತ್ಮನು  ಭಾಸವಾಗುತ್ತಾನೆ. ಈ  ಅನುಭವವೇ ಯೋಗ ಸಮಾಧಿ. ಈ ಸ್ಥಿತಿಯನ್ನು ಪ್ರಕೃತಿ-ಪುರುಷರ ಸಮಾಗಮವೆಂದೂ ಕೆಲವು ಶಾಸ್ತ್ರಗಳು ಕರೆಯುತ್ತವೆ. ಪೂರ್ಣ ಜೀವನಕ್ಕೆ ಪ್ರಕೃತಿ-ಪುರುಷರೀರ್ವರ ಪಾತ್ರವೂ ಆನಿವಾರ್ಯ. 


ಪ್ರಕೃತಿ-ಪುರುಷರ ಸಮಾಗಮವೆಂಬ ಯೋಗದ ಮಾರ್ಮಿಕ ರಹಸ್ಯವನ್ನು ಬಿಂಬಿಸುವ ಕಥೆಯನ್ನು ಲೋಕವೆಂಬ ರಂಗಮಂಚದಲ್ಲಿ, ಗೃಹಸ್ಥ ಜೀವನದಲ್ಲಿ ನೆನಪಿಸುವ ವ್ಯವಸ್ಥೆಯನ್ನು ಭಾರತೀಯ ಋಷಿಗಳು ತಂದಿದ್ದಾರೆ. ಗಂಡು ಹೆಣ್ಣುಗಳಿಬ್ಬರೂ ಒಳಗೆ ಭಗವಂತನನ್ನೇ ಹೊತ್ತಿದ್ದರೂ, ಹೆಣ್ಣು ಪ್ರಕೃತಿಯ ಪಾತ್ರವನ್ನೂ, ಗಂಡು ಪುರುಷನ ಪಾತ್ರವನ್ನೂ ಹಾಕುತ್ತಾರೆ. 


ಪ್ರಕೃತಿಯಲ್ಲಿ ಹುಟ್ಟಿಬರುವ ಚಿತ್ರವಿಚಿತ್ರವಾದ ಅಲೆಗಳನ್ನು, ಅಂದರೆ ಚಿತ್ತವೃತ್ತಿಗಳನ್ನು ನಾನಾ ಬಣ್ಣಗಳಿಂದ ಸೂಚಿಸುತ್ತಾರೆ. ಆದ್ದರಿಂದಲೇ ಪ್ರಕೃತಿಯ ಪಾತ್ರ ವಹಿಸುವ ಸ್ತ್ರೀಯರ ವೇಷ-ಭೂಷಣವು ಚಿತ್ರ-ವಿಚಿತ್ರವಾದ  ಮರುಗು ಬಣ್ಣಗಳಿಂದ ಕೂಡಿರುತ್ತದೆ. 


ಶಾಲಾ-ಕಾಲೇಜುಗಳಲ್ಲಿ ಪ್ರಯೋಗವೊಂದನ್ನು ಗಮನಿಸಿರಬಹುದು. ಚಕ್ರವೊಂದರಲ್ಲಿ ಕಾಮನಬಿಲ್ಲಿನ ಎಲ್ಲ ಬಣ್ಣಗಳನ್ನೂ ಸೇರಿಸಿರುತ್ತದೆ. ಈ ಚಕ್ರವು ತಿರುಗಿದಾಗ, ಎಲ್ಲ ಬಣ್ಣಗಳೂ ಹೋಗಿ ಕೇವಲ ಬಿಳಿಯ ಬಣ್ಣ ಮಾತ್ರ ಕಾಣುತ್ತದೆ. ಇದೇಕೆ ? ಎಲ್ಲ ಬಣ್ಣಗಳೂ ಸಮಪ್ರಮಾಣದಲ್ಲಿ ಒಂದುಗೂಡಿದಾಗ ಅಲ್ಲಿ ತಮ್ಮ ತನವನ್ನು ಕಳೆದುಕೊಂಡು ಬಿಳುಪಾಗಿ ಕಂಗೊಳಿಸುತ್ತವೆ.


ಆದ್ದರಿಂದ ಪ್ರಕೃತಿಯನ್ನು ಮೀರಿ, ಎಲ್ಲಾ ಚಿತ್ತವೃತ್ತಿಗಳನ್ನೂ ದಾಟಿದ ಸ್ಥಿತಿಯಲ್ಲಿ ಕಂಗೊಳಿಸುವ ಪುರುಷನನ್ನು ಸೂಚಿಸುವ ಬಣ್ಣ ಬಿಳುಪು. ಎಂದೇ ಪುರುಷನ ಪಾತ್ರ ವಹಿಸುವ ಗಂಡಿಗೆ ಬಿಳಿಯ ಬಣ್ಣದ ಬಟ್ಟೆ. ಆದರೆ ಈ ಲೋಕ ಜೀವನದಲ್ಲಿ ಪುರುಷನ ಪಾತ್ರ ಹಾಕುತ್ತಿದ್ದರೂ, ಈ ಗಂಡು ವಾಸ್ತವಿಕವಾಗಿ  ಪ್ರಕೃತಿಯಲ್ಲಿಯೇ ಓಡಾಡುತ್ತಿದ್ದಾನೆ. ಆದ್ದರಿಂದ ಪ್ರಕೃತಿಯ ಒಂದು ಅಂಶವನ್ನು ಪಂಚೆಯ ಅಂಚಿನ ಬಣ್ಣದ ರೂಪದಲ್ಲಿ ಧರಿಸುತ್ತಾನೆಂಬುದು ಶ್ರೀರಂಗಮಹಾಗುರುಗಳ ಮಾರ್ಮಿಕ ನೋಟ. ಹೀಗೆ ವಸ್ತ್ರದ ಬಣ್ಣದ ಹಿಂದಿನ ವಿಜ್ಞಾನವಿದು. 


ಸೂಚನೆ : 25/12/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.


ಕಾರ್ಪೊರೇಟ್ ಜಗತ್ತಿನಲ್ಲಿ ಸತ್ಯದ ಬೆಲೆ (Corporate Jagattinalli Sathyada Bele)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)


ಸತ್ಯವು ಅಷ್ಟಾಂಗ ಯೋಗದ ಮೊದಲ ಮೆಟ್ಟಿಲಾದ ಯಮದಲ್ಲಿ ಒಂದು. ಆದರೆ ಇಂದಿನ ಕಾಲದಲ್ಲಿ ಸತ್ಯಕ್ಕೆ ಬೆಲೆಯಿಲ್ಲ, ಸತ್ಯದ ಪರವಾಗಿ ಮಾತನಾಡುವವನು ಓಬೀರಾಯನ ಕಾಲದವರು, ಗೊಡ್ಡು, ಈ ಕಾಲಕ್ಕೆ ತಕ್ಕವನಲ್ಲವೆನ್ನುವ ಭಾವನೆಯೂ ಜನಮನದಲ್ಲಿ ಪ್ರಚಲಿತವಿದೆ. ಸತ್ಯಮೇವ ಜಯತೇ ಎನ್ನುವ ಘೋಷವಾಕ್ಯ ಜನಮನದಲ್ಲಿ ಕ್ಷೀಣ ದೆಶೆಯಲ್ಲಿ ಉಳಿದುಕೊಂಡಿದೆ ಎಂದು ಹೇಳಿದರೆ ತಪ್ಪಾಗದು.

ಆದರೆ, ವಾಸ್ತವವನ್ನು ಪರಿಶೀಲಿಸಿದರೆ ವ್ಯಾವಹಾರಿಕ ಪ್ರಪಂಚದ ಎಷ್ಟೋ ಎಡೆಗಳಲ್ಲಿ ಸತ್ಯವು ಶಕ್ತಿಯುತವಾಗಿ ಉಳಿದುಕೊಂಡಿದೆ ಎಂದು ಕಂಡು ಬರುತ್ತದೆ. ಈ ಬಗ್ಗೆ ಶ್ರೀರಂಗಮಹಾಗುರುಗಳು ಕೊಟ್ಟಿರುವ ಸರಳ ಹಾಗೂ ಮಾರ್ಮಿಕವಾದ ನೋಟ ಗಮನಾರ್ಹ.

ಶ್ರೀರಂಗಮಹಾಗುರುಗಳು - ಸುಳ್ಳನ್ನು ಜನ ಸತ್ಯವೆಂದು ಭಾವಿಸಿದಾಗ ಮಾತ್ರ ಅದಕ್ಕೆ ಬೆಲೆಯೇ ಹೊರತು ಸುಳ್ಳನ್ನು ಸುಳ್ಳೆಂದು ತಿಳಿದರೆ ಯಾರೂ ಬೆಲೆ ಕೊಡುವುದಿಲ್ಲ ಎನ್ನುವ ಮಾರ್ಮಿಕವಾದ ನೋಟವನ್ನು ಕೊಟ್ಟಿದ್ದಾರೆ. ಒಬ್ಬ ಪ್ರವಚನಕಾರರು ಸಭೆಯೊಂದರಲ್ಲಿ ಈ ನೋಟವನ್ನು ನಿರೂಪಿಸಲು, ಮಾತಿನ ಮಧ್ಯದಲ್ಲಿ ಇದ್ದಕ್ಕಿದ್ದಂತೆ "ಕಟ್ಟಡದ ಹಿಂದೆ ಏನೋ ಕಾಣುತ್ತಿದೆಯಲ್ಲಾ ಅದು ಬೆಂಕಿಯೇ? ಎಂದು ಕೇಳಿದರು. ತಕ್ಷಣವೇ ಸಭೆಯಲ್ಲಿದ್ದ ಅನೇಕರು ಹಿಂದಕ್ಕೆ ತಿರುಗಿ ನೋಡಿದರು. ನಂತರ, ಪ್ರವಚನಕಾರರು ನಾನು ಸುಮ್ಮನೆ ಹಾಗೆ ಕೇಳಿದೆ, ಆದರೆ ಇನ್ನೊಮ್ಮೆ ಅದೇ ಪ್ರಶ್ನೆಯನ್ನು ಕೇಳುತ್ತೇನೆ ಎಂದು ಪ್ರಶ್ನೆಯನ್ನು ಪುನರುಚ್ಛರಿಸಿದರು. ಈ ಬಾರಿ ಒಬ್ಬರೇ ವ್ಯಕ್ತಿಯೂ ಹಿಂದಿರುಗಿ ನೋಡಲಿಲ್ಲ. ಈ ಘಟನೆಯನ್ನಿಟ್ಟುಕೊಂಡು ಪ್ರವಚನಕಾರರು - ನೋಡಿ, ಸಭಾಭವನದ ಹಿಂಭಾಗದಲ್ಲಿ ಬೆಂಕಿಯಿದೆಯೆಂಬುದು ಸುಳ್ಳು. ಆದರೂ ಮೊದಲನೇ ಸಾರಿ ಅದನ್ನು ಹೇಳಿದಾಗ ಅದನ್ನು ಸತ್ಯವೆಂದು ಭಾವಿಸಿದ್ದರಿಂದ ನೀವೆಲ್ಲರೂ ಹಿಂದಿರುಗಿ ನೋಡಿದಿರಿ. ಆದರೆ ಅದು ಸುಳ್ಳೆಂದು ತಿಳಿದ ಮೇಲೆ, ಒಬ್ಬರೂ ಮಿಸುಕಾಡಲಿಲ್ಲ. ಅಂದರೆ ಸತ್ಯಕ್ಕೆ ಮಾತ್ರವೇ ಜನರನ್ನು ಪ್ರಭಾವಗೊಳಿಸುವ, ಚಲಿಸುವ, ಹಿಡಿದಿಡುವ ಶಕ್ತಿಯಿರುವುದು. ಸುಳ್ಳಿಗೆ ಸತ್ಯದ ವೇಷ ತೊಡಿಸಿದಾಗ ಮಾತ್ರವೇ ಅದಕ್ಕೆ ಬೆಲೆ ಹೊರತು ಸುಳ್ಳಿಗೆ ತನ್ನ ಸ್ವರೂಪತಃ ಬೆಲೆಯಿಲ್ಲ. ಹೀಗಾಗಿ ಸತ್ಯಕ್ಕೇ ಎಂದಿಗೂ ಜಯ ಎನ್ನುವ ವಾಕ್ಯವು ಸರ್ವಕಾಲಕ್ಕೂ ಅನ್ವಯಿಸುತ್ತದೆ ಎಂದು ಆ ಸಭೆಯಲ್ಲಿ ನಿರೂಪಿಸಿದರು.

ಸತ್ಯಕ್ಕೆ ಜಯವೆಂದ ಮಾತ್ರಕ್ಕೆ ಗೊಡ್ಡುಗೊಡ್ಡಾಗಿಯಾದರೂ ಸರಿಯೇ ಸತ್ಯವನ್ನು ಎತ್ತಿಹಿಡಿಯಲು ಹೊರಟರೆ ಸುಲಭವಾಗಿ ಯಶಸ್ಸು ದೊರೆಯುತ್ತದೆ ಎಂದು ಹೇಳಲಾಗುವುದಿಲ್ಲ. ಸುಳ್ಳನ್ನು ಸತ್ಯವೆಂದು ಬಿಂಬಿಸಿ ತಾತ್ಕಾಲಿಕ ಜಯವನ್ನು ಪಡೆಯುವುದಕ್ಕೆ ಹೇಗೆ ಜಾಣತನ ಬೇಕೋ ಹಾಗೆಯೇ ಸತ್ಯವನ್ನೇ ಹಿಡಿದು ಯಶಸ್ವಿಯಾಗಲೂ ಯುಕ್ತಿ, ಜಾಣತನ ಬೇಕಾಗುತ್ತದೆ. ಈ ಜಾಣತನದ ಬಗ್ಗೆ ಒಂದು ಸುಭಾಷಿತವಿದೆ: 
ಸತ್ಯಂ ಬ್ರೂಯಾತ್ ಪ್ರಿಯಂ ಭ್ರೂಯಾತ್ । 
ನ ಭ್ರೂಯಾತ್ ಸತ್ಯಮಪ್ರಿಯಂ । 
ಪ್ರಿಯಂಚ ನಾನೃತಂ ಭ್ರೂಯಾತ್ । 
ಏಷಃ ಧರ್ಮಸ್ಸನಾತನಃ ॥ 
ಎಂದು. ಅಂದರೆ, ಯಥಾರ್ಥವಾದುದನ್ನೇ ಮಾತನಾಡಬೇಕು, ಪ್ರಿಯವಾದುದನ್ನೇ ಮಾತನಾಡಬೇಕು, ಯಥಾರ್ಥವಾದರೂ ಅಪ್ರಿಯವನ್ನು ಹೇಳಬಾರದು ಮತ್ತು ಪ್ರಿಯವಾದರೂ ಸಹ ಸುಳ್ಳನ್ನು ಹೇಳಬಾರದು ಎನ್ನುವುದು ಈ ಸುಭಾಷಿತದ ಅಭಿಪ್ರಾಯ.

ಈ ಸುಭಾಷಿತದ ಅಭಿಪ್ರಾಯದಂತೆ ಸತ್ಯವನ್ನು ನಯನ ಮಾಡಿ ಯಶಸ್ಸುಗಳಿಸಿದ ಅನೇಕ ನಿದರ್ಶನಗಳು ಇಂದಿನ ಕಾರ್ಪೊರೇಟ್ ಕ್ಷೇತ್ರದಲ್ಲಿದೆ.

ಕಾರ್ಪೊರೇಟ್ ಕ್ಷೇತ್ರದಲ್ಲಿ ನಿಗಧಿತ ಕಾಲದಲ್ಲಿ ಕಾರ್ಯಯೋಜನೆಗಳನ್ನು ಮಾಡಿಕೊಟ್ಟು (commercial project contracts) ಅರ್ಥಗಳಿಸುವ ವಿಧಾನವುಂಟು. ಇಂತಹಾ ಪ್ರಾಜೆಕ್ಟ್ ಗಳು ವಿಳಂಬವಾಗುವುದೂ ಉಂಟು. ಇಂತಹ ವಿಳಂಬಗಳು ಎದುರಾದಾಗ ಕಾರ್ಯ ನಿರ್ವಹಣ ತಂಡಕ್ಕೆ ಅಸಮಾಧಾನಗೊಂಡ ಗ್ರಾಹಕರನ್ನು ಎದುರಿಸುವುದು ಬಹಳ ಮುಜುಗರ ಹಾಗೂ ಕಷ್ಟಕರವಾದ ಕೆಲಸ. ಹೀಗಾಗಿ ಹಲವರು ಯಥಾಸ್ಥಿತಿಯನ್ನು ಮರೆಮಾಚಿ ಎಲ್ಲವೂ ಸರಿಯಿದೆಯೆಂದು ತೋರಿಸಿ ಜಾರಿಕೊಂಡು, ಜಾಣತನವನ್ನು ಮೆರೆದೆವೆಂದುಕೊಳ್ಳುತ್ತಾರೆ ಆದರೆ ಕೊನೆಯ ಹಂತದಲ್ಲಿ ಸಿಕ್ಕಿಹಾಕಿಕೊಂಡು ವಿಫಲರಾಗುತ್ತಾರೆ. ಇಂತಹವರು ಸುಭಾಷಿತದ ಭಾಗವಾದ ಪ್ರಿಯವಾದರೂ ಸುಳ್ಳನ್ನು ಹೇಳಬೇಡ ಎನ್ನುವ ವಾಕ್ಯವನ್ನು ಪಾಲಿಸುವುದಿಲ್ಲ.

ಅಮೆರಿಕೆಯ ಗ್ರಾಹಕರು ಎಂತಹ ಪ್ರತಿಕೂಲ ಪರಿಸ್ಥಿತಿಯಿದ್ದರೂ ಸತ್ಯವನ್ನೇ ಅಪೇಕ್ಷಿಸುತ್ತಾರೆ - ಆದರೆ ಪ್ರತಿಕೂಲ ಪರಿಸ್ಥಿತಿಯಿದ್ದಾಗ ಸಮಸ್ಯೆಯ ಮೂಲ ಮತ್ತು ಪರಿಹಾರದೊಡನೆ ಯಥಾಸ್ಥಿತಿಯನ್ನು ಬಿಂಬಿಸಬೇಕು ಎಂದು ಅಪೇಕ್ಷಿಸುತ್ತಾರೆ. ಹೀಗಾಗಿ ಎಷ್ಟೋ ಮಂದಿ ದಿಟ್ಟ ಅಧಿಕಾರಿಗಳು ಪ್ರತಿಕೂಲ ಪರಿಸ್ಥಿತಿಯಿದ್ದಾಗ ಸಮಸ್ಯೆಯನ್ನು ವಿವರಿಸುವುದಲ್ಲದೇ ಪರಿಹಾರಕ್ಕೆ ಸೂಕ್ತ ಸಲಹೆಗಳನ್ನೂ ಮುಂದಿಟ್ಟುಕೊಂಡು ಯಥಾಸ್ಥಿತಿಯನ್ನು ಬಿಂಬಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಗ್ರಾಹಕರು ಅಧಿಕಾರಿಗಳ ಸತ್ಯಶೀಲತೆಯನ್ನು ಮೆಚ್ಚುತ್ತಾರೆ ಮತ್ತು ಈ ಅಧಿಕಾರಿಗಳು ಅವರ ವೃತ್ತಿಜೀವನದಲ್ಲಿ ಎತ್ತರಕ್ಕೆ ಬೆಳೆಯುತ್ತಾರೆ. ಇಂತಹ ಅಧಿಕಾರಿಗಳು ಸುಭಾಷಿತದ - ಅಪ್ರಿಯವಾದ ಸತ್ಯವನ್ನು ಹೇಳಬೇಡ ಎನ್ನುವ ಭಾಗವನ್ನು ಅಪ್ರಿಯವಾದ ಸತ್ಯವನ್ನು ಪ್ರಿಯವಾಗುವಂತೆ ಮಾಡಿ ಹೇಳುವುದರ ಮೂಲಕ ಪಾಲಿಸಿ ಯಶಸ್ವಿಯಾಗುತ್ತಾರೆ.

ಇಂತಹ ಉದಾಹರಣೆಗಳು ಅನೇಕ. ಅವುಗಳಲ್ಲಿ 90ರ ದಶಕದಲ್ಲಿ ನಡೆದ ಒಂದು ಘಟನೆ ಇಲ್ಲಿ ಸ್ಮರಣೀಯ. ಭಾರತೀಯ ಸಂಸ್ಥೆಯೊಂದು ಅಮೆರಿಕೆಯ ಗ್ರಾಹಕ ಸಂಸ್ಥೆಗಳಿಂದ ಗುತ್ತಿಗೆ ಪಡೆಯುತ್ತಿತ್ತು. ಈ ಗುತ್ತಿಗೆಯನ್ನು ನಿರ್ವಹಿಸಿಕೊಡುವುದಕ್ಕೆ ಒಂದು ದೊಡ್ಡ ಗಣಕಯಂತ್ರ(mainframe computer)ವನ್ನು ಆಮದು ಮಾಡಿಕೊಳ್ಳಬೇಕಾಗಿತ್ತು. ಆಮದಾದ ಆ ಯಂತ್ರವು ವಿಮಾನ ನಿಲ್ದಾಣದ ಆಮದು ತೆರಿಗೆ ಇಲಾಖೆಯಲ್ಲಿ ಬಂದು ಕುಳಿತುಕೊಂಡಿತು. ಸಂಸ್ಥೆಯ ಅಧಿಕಾರಿಗಳು ಗಣಕ ಯಂತ್ರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಹೋದಾಗ ತೆರಿಗೆ ಅಧಿಕಾರಿಗಳು ಲಂಚಕ್ಕಾಗಿ ಒತ್ತಾಯ ಮಾಡಿ ಸಂಸ್ಥೆ ಅಧಿಕಾರಿಗಳು ಒಪ್ಪದಿದ್ದಾಗ ಯಂತ್ರವನ್ನು ಬಿಡುಗಡೆ ಮಾಡಲು ನಿರಾಕರಿಸಿಬಿಟ್ಟರು. ಈ ಯಂತ್ರವಿಲ್ಲದಿದ್ದರೆ ಗುತ್ತಿಗೆ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಯೋಜನೆ ವಿಳಂಬವಾಗುತ್ತಿತ್ತು. ನಿರ್ವಾಹಕ ತಂಡಕ್ಕೆ ಗ್ರಾಹಕರಿಗೆ ಏನು ಹೇಳುವುದು ಎಂದು ಬಹಳ ಆತಂಕವಾಗುತ್ತಿತ್ತು - ಆದರೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಗ್ರಾಹಕರ ಒಲುಮೆಗಾಗಿಯಾದರೂ ಸರಿಯೇ, ತಮ್ಮ ಉದ್ದಿಮೆಯ ಒಳಿತಿನ ಸಲುವಾಗಿಯಾದರೂ ಸರಿಯೇ ಲಂಚವನ್ನು ಕೊಡಲೇಬಾರದು ಎಂಬ ತಮ್ಮ ನೀತಿಯನ್ನು ಸ್ಪಷ್ಟ ಪಡಿಸಿಬಿಟ್ಟರು. ಲಂಚ ಕೊಡದೆಯೇ ಯಂತ್ರವನ್ನು ಪಡೆದುಕೊಳ್ಳುವ ಪ್ರಯತ್ನ ಆರು ತಿಂಗಳು ಕಾಲ ಸತತವಾಗಿ ನಡೆಯಿತು. ಕೊನೆಗೆ ಕಾರ್ಯತಂಡದ ಇಬ್ಬರು ಸದಸ್ಯರು ತೆರಿಗೆ ಅಧಿಕಾರಿಗಳ ಬಳಿ ಹೋಗಿ, ನೋಡಿ - ನೀವು ಇನ್ನೆಷ್ಟು ವರ್ಷಗಳು ಯಂತ್ರವನ್ನು ಇಟ್ಟುಕೊಂಡಿದ್ದರೂ ನಾವು ಲಂಚ ಕೊಡುವುದಿಲ್ಲ. ನಿಮಗೆ ಸುಮ್ಮನೆ ಜಾಗ ವ್ಯಯವಾಗುತ್ತದೆ ಮತ್ತು ಯಂತ್ರ ಧೂಳುಸೇರಿಸಿಕೊಂಡು ಬಿದ್ದಿರುತ್ತದೆ. ನೀವು ಅದನ್ನು ಕಳುಹಿಸಿಕೊಡುವಿರಾ ಇಲ್ಲ ಅದರ ಧೂಳನ್ನು ಹೊಡೆದುಕೊಂಡು ಜಾಗವನ್ನೂ ಹಾಳು ಮಾಡೀಕೊಳ್ಳುತ್ತೀರೋ ಎಂದು ಕೇಳಿಬಿಟ್ಟರು. ಆಗ ಬೇರೆ ವಿಧಿಯಿಲ್ಲದೇ ತೆರಿಗೆ ಅಧಿಕಾರಿಗಳು ಯಂತ್ರವನ್ನು ಬಿಡುಗಡೆ ಮಾಡಿದರು.

ಈ ಮಧ್ಯದಲ್ಲಿ ತಂಡದವರಿಗೆ ಈ ವಿಳಂಬದಿಂದಾಗಿ ಗ್ರಾಹಕರು ಕುಪಿತರಾಗಿ ಎಲ್ಲಿ ಗುತ್ತಿಗೆಯನ್ನು ರದ್ದು ಮಾಡಿಬಿಡುತ್ತಾರೋ ಎನ್ನುವ ಆತಂಕ ಇತ್ತು. ಆದರೂ ವಿಳಂಬದ ಸತ್ಯಾಂಶವನ್ನೇ ಗ್ರಾಹಕರಿಗೆ ತಿಳಿಸಿದರು. ಈ ವಿಳಂಬದಿಂದ ಗ್ರಾಹಕರಿಗೆ ಕೋಪ ಬರುವುದರ ಬದಲು, ಗುತ್ತಿಗೆ ರದ್ದಾಗುವ ಸಾಧ್ಯತೆಯಿದ್ದಾಗಲೂ

ಲಂಚ ಕೊಡದೇ ತಮ್ಮ ನೈತಿಕ ಸಮಗ್ರತೆಯನ್ನು ಕಾಪಾಡಿಕೊಂಡರು ಎಂದು ಸಂತೋಷವೇ ಉಂಟಾಗಿ ಇನ್ನೂ ಹೆಚ್ಚಿನ ಮೊತ್ತದ ಗುತ್ತಿಗೆಗಳನ್ನು ಮುಂದೆ ಕೊಟ್ಟರು. ಹೀಗೆ ಸತ್ಯವು ಅಪ್ರಿಯವಾಗಿರುವಾಗ ಅದನ್ನು ಪ್ರಿಯವಾಗುವಂತೆ ಮಾಡಿ ಹೇಳುವುದಕ್ಕೆ ಜಾಣತನ ಬೇಕು. ಹೀಗೆ ಜಾಣತನದಿಂದ ಸತ್ಯವನ್ನು ನಯನ ಮಾಡಿದಾಗ ಸತ್ಯದಿಂದ ಕ್ಷಿಪ್ರವಾಗಿಯೇ ಯಶಸ್ಸು ದೊರೆಯುತ್ತದೆ. ಸತ್ಯಮೇವ ಜಯತೇ ಎನ್ನುವುದು ಸಾರ್ವಕಾಲಿಕ ಸತ್ಯ.  

ಸೂಚನೆ : 25/12/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ನವವಿಧ ಭಕ್ತಿ - 8 ವಂದನಮ್ - ಭಕ್ತಿಯ ಒಂದು ಪ್ರಕಾರ ((Navavidha Bhakti - 8 Vandanam - Bhaktiya Ondu Prakaara)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ

(ಪ್ರತಿಕ್ರಿಯಿಸಿರಿ lekhana@ayvm.in)


'ವಂದನಂ' ಎನ್ನುವುದಕ್ಕೆ ನಮನ, ಪ್ರಣಾಮ, ನಮಸ್ಕಾರ ಮುಂತಾದ ಬೇರೆ ಬೇರೆ ಪದಗಳುಂಟು. ಈಗ ನಮಸ್ಕಾರ ಎನ್ನುವುದು ಪ್ರಸಿಧ್ಧವಾಗಿದೆ. ವಂದನದಲ್ಲಿ ಹಲವು ಪ್ರಭೇದಗಳಿವೆ. ಉದಾಹರಣೆಗೆ ಉತ್ತರಭಾರತದಲ್ಲಿ ಹಿರಿಯರನ್ನು ನೋಡಿದೊಡನೆಯೇ ಒಂದು ಕೈಯಲ್ಲಿ ಅವರ ಪಾದವನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುವ ರೂಢಿಯಿದೆ. ದಕ್ಷಿಣದಲ್ಲಿ ಸಾಷ್ಟಾಂಗನಮಸ್ಕಾರ, ಅರ್ಧನಮಸ್ಕಾರ, ಪಂಚಾಂಗನಮಸ್ಕಾರ ಮುಂತಾಗಿ ರೂಢಿಗಳಿವೆ. ಅಷ್ಟೂ ಆಗದಿದ್ದಾಗ ನಿಂತಲ್ಲೇ ಎರಡು ಕೈಗಳನ್ನೂ ಹೃದಯದ ನೇರದಲ್ಲಿ ಜೋಡಿಸಿ ನಮಸ್ಕಾರ ಮಾಡುವುದುಂಟು. ಒಂದೇ ಕೈಯನ್ನು ಹೃದಯಕ್ಕೆ ಸೇರಿಸಿ ಮಾಡುವ ರೂಢಿಯೂ ಉಂಟು. ಈಗ ಕೈಕುಲುಕುವುದು,  ತಬ್ಬಿಕೊಳ್ಳುವುದು ಮುಂತಾಗಿ ಅನೇಕ ರೀತಿಯ ಗೌರವ-ಸೂಚಕವಾದ ಕ್ರಿಯೆಗಳು ಕಾಣಿಸುತ್ತಿವೆ. 

ನಮಸ್ಕಾರ ಎಂದರೇನು?

ನಮ್ಮ ಸಂಸ್ಕೃತಿಯಲ್ಲಿ 'ನಮಸ್ಕಾರ'ದ ಲಕ್ಷಣ ಹೀಗಿದೆ: "ನಮಸ್ತ್ವೈಕ್ಯಂ ಪ್ರಚಕ್ಷತೇ." ಯಾವ ಕ್ರಿಯೆಯಿಂದ ಭಗವಂತನಲ್ಲಿ ಐಕ್ಯಭಾವ(ಗಾಢವಾದ ಸೇರುವೆ) ಉಂಟಾಗುವುದೋ, ನಮ್ಮ ಮನಸ್ಸು ಏಕೀಭೂತವಾಗುವುದೋ ಆ ಕ್ರಿಯೆಯೇ ನಮಸ್ಕಾರ. ಆಗ ಏರ್ಪಡುವ  ಮದ್ರೆಯೇ  'ನಮಸ್ಕಾರಮುದ್ರೆ'  ಎನಿಸಿಕೊಳ್ಳುತ್ತದೆ.

ದೇವರಿಗಾಗಲಿ, ಗುರುಹಿರಿಯರಿಗಾಗಲಿ ಸಾಷ್ಟಾಂಗನಮಸ್ಕಾರ(ಎಂಟು ಅಂಗಗಳಿಂದ ಕೂಡಿದ ನಮಸ್ಕಾರ)ವನ್ನು ಮಾಡಬೇಕು.  ದೋರ್ಭ್ಯಾಂ ಪದ್ಭ್ಯಾಂ ಚ ಜಾನುಭ್ಯಾಂ ಉರಸಾ ಶಿರಸಾ ದೃಶಾ ಮನಸಾ ವಚಸಾ ಚೇತಿ ಪ್ರಣಾಮೋ ಅಷ್ಟಾಂಗ ಈರಿತಃ. ಅಂದರೆ ತೋಳುಗಳು, ಕಾಲುಗಳು, ಮೊಣಕಾಲುಗಳು, ಎದೆ, ಶಿರಸ್ಸು, ಕಣ್ಣು ಇಷ್ಟೂ ನಮಸ್ಕಾರದ ಕ್ರಿಯೆಯಲ್ಲಿ ಭೂಮಿಗೆ ಸ್ಪರ್ಶವಾಗಿರಬೇಕು. ಮನಸ್ಸು-ವಾಕ್ ಗಳು ಸೇರಿರಬೇಕು. ಇಲ್ಲಿ, ಭಗವಂತನಲ್ಲಿ ಏಕೀಭಾವವನ್ನು ಹೊಂದಬೇಕು ಎಂದಾಗ ಮೊದಲು ಈ ಜೀವವು ಭಗವಂತನಲ್ಲಿ ಹೋಗಿ ಸೇರಬೇಕೆನ್ನುವ ಮನಸ್ಸಾಗದಿದ್ದರೆ ಸಾಧ್ಯವಿಲ್ಲ. ಆದ್ದರಿಂದ ಮನಸ್ಸು ಅತಿಮುಖ್ಯವಾದದ್ದು. ಮನಸ್ಸಿನಲ್ಲಿ ಉಂಟಾಗುವುದು ಮುಂದೆ ಹರಿದು ಮಾತಿಗೆ ಬರಬೇಕು. ನಂತರ ಅದು ದೇಹದಲ್ಲಿ ಹರಿದುಬರಬೇಕು. ಇದಿಷ್ಟೂ ಆದಾಗ ಸಾಷ್ಟಾಂಗನಮಸ್ಕಾರದಲ್ಲಿ ಸಂಪೂರ್ಣವಾದ ಐಕ್ಯಭಾವವು ಉಂಟಾಗುವುದು ಸಾಧ್ಯವಾಗುತ್ತದೆ. ಸಿದ್ಧಪುರುಷರ ಮನಸ್ಸು ಭಗವಂತನಲ್ಲಿ ಐಕ್ಯಭಾವವನ್ನು ಹೊಂದಿದಾಗ ಅದು ವಿಕಾಸವಾಗುತ್ತ ಅವರ ಅರಿವಿಲ್ಲದೆಯೇ ನಮಸ್ಕಾರಮುದ್ರೆಯು ಏರ್ಪಡಬಹುದು. ಮನಸ್ಸು-ವಾಕ್ಕುಗಳು  ಸೇರದೆ ಅಡ್ಡಬೀಳುವ ಕ್ರಿಯೆ ಕೇವಲ ಚೇಷ್ಟೆಯಾಗುತ್ತದೆ. ಇದಲ್ಲದೇ, ಪಂಚಾಂಗ ನಮಸ್ಕಾರ, ಪ್ರದಕ್ಷಿಣ ನಮಸ್ಕಾರಗಳನ್ನೂ ಸಂಪ್ರದಾಯದಲ್ಲಿ ಕಾಣುತ್ತೇವೆ.

ಕೈಜೋಡಿಸುವುದರ ತಾತ್ತ್ವಿಕ ನೋಟ

ಸಾಮಾನ್ಯವಾಗಿ ನಮಸ್ಕಾರವೆಂದರೆ ಕೈಜೋಡಿಸುವುದು ಎಂದಷ್ಟೇ ಅರ್ಥೈಸುತ್ತೇವೆ. ಕೈಜೋಡಿಸುವುದಾದರೂ ಏಕೆ? ಇಲ್ಲಿ ಎರಡು ಕೈಗಳು ಒಟ್ಟಿಗೆ ಸೇರಿಕೊಳ್ಳುವುದು ಎರಡು ತತ್ತ್ವಗಳು   ಒಟ್ಟಿಗೆ ಸೇರುವುದನ್ನು ಸೂಚಿಸುತ್ತದೆ. ಒಂದು ಕೈ ಪ್ರಕೃತಿಯನ್ನು ಸೂಚಿಸಿದರೆ, ಮತ್ತೊಂದು ಪರಮಪುರುಷನನ್ನು ಸೂಚಿಸುವುದು. ನಮ್ಮಲ್ಲಿ ಪಂಚಭೂತಗಳೆಲ್ಲವೂ ಕೆಳಮುಖವಾಗಿ, ಪ್ರಕೃತಿಯ ಕಡೆ ಕೆಲಸ ಮಾಡುತ್ತಿವೆ.  ಅದನ್ನು ಬಿಟ್ಟು ನಾವು ಪರಮಪುರುಷನ ಕಡೆಗೆ ಹೋಗಬೇಕಾದರೆ ಪ್ರಕೃತಿಯನ್ನು ಪರಮಪುರುಷನಲ್ಲಿ ಸೇರಿಸಿಕೊಂಡು, ಪ್ರಕೃತಿ-ಪುರುಷರ ಪ್ರತಿನಿಧಿಗಳಾದ ಕೈಗಳನ್ನು ಒಟ್ಟಿಗೆ ಸೇರಿಸಿಕೊಂಡು ಕೈಯನ್ನು ಮೇಲ್ಮುಖವಾಗಿ ಇಟ್ಟುಕೊಳ್ಳಬೇಕು. ಹೀಗೆ ಜೀವವು ಪರಮಾತ್ಮನಲ್ಲಿ ಒಂದಾಗಿ ಕಲೆತುಬಿಡುವುದಕ್ಕೆ ಯಾವ ಮುದ್ರೆ ಪೋಷಕವಾಗಿದೆಯೋ ಆ ಮುದ್ರೆಗೆ ನಮಸ್ಕಾರ-ಅಂಜಲಿಮುದ್ರೆಯೆಂಬ ಹೆಸರು. 

ನಮಸ್ಕಾರಮುದ್ರೆ 

ಮುದ್ರೆಯೆನ್ನುವುದು ಸಹಜವಾಗಿ ತಾನೇ ತಾನಾಗಿ ಉಂಟಾಗುವಂತಹ ಶರೀರದ-ಅಂಗಾಂಗಗಳ ಒಂದು ವಿನ್ಯಾಸ.  ಅಂತಹ ಒಂದು ವಿನ್ಯಾಸವನ್ನು ನೋಡುವುದೇ ಸಂತೋಷವನ್ನು ಉಂಟು ಮಾಡುತ್ತದೆ. ವಾಸ್ತವವಾಗಿ ಜ್ಞಾನಿಯಾದವನಿಗೆ ಅಥವಾ ಭಕ್ತನಾದವನಿಗೆ ಆ ಭಾವವು ಉಂಟಾದಾಗ ತಾನಾಗಿಯೇ ಈ ಮುದ್ರೆಯು ಏರ್ಪಡುತ್ತದೆ.

        ಲೌಕಿಕವಾದ ಉದಾಹರಣೆಯ ಮೂಲಕ ವಿವರಿಸುವುದಾದರೆ, ಉತ್ಕಟವಾದ ಕೋಪ ಬಂದಾಗ ಕಣ್ಣುಗಳು ಕೆಂಪಾಗುವುದು, ತುಟಿ ಅದುರುವುದು, ಹಲ್ಲು ಕಚ್ಚಿಕೊಳ್ಳುವುದು ಇವೆಲ್ಲವೂ ಮುಖದಲ್ಲಿ  ಸಹಜವಾಗಿ ಮೂಡಿಬರುವುವು. ಆದರೆ ಯಾರನ್ನಾದರೂ "ಈಗ ಕೋಪ ಮಾಡಿಕೊಳ್ಳಿ ನೋಡೋಣ" ಎಂದು ಹೇಳಿದಾಗ ಆ ಲಕ್ಷಣಗಳನ್ನು ತಂದುಕೊಂಡರೆ ಅಲ್ಲಿ ಸಹಜತೆಯು ಇರುವುದಿಲ್ಲವಾದ್ದರಿಂದ  ಅದನ್ನು ಕೃತಕವೆಂಬುದಾಗಿ ಗುರುತಿಸಿಬಿಡಬಹುದು. ಅಂತೆಯೇ ಸಾಧಕನಲ್ಲಿ,  ಸಮಾಧಿಸ್ಥಿತಿಯಲ್ಲಿ ಐಕ್ಯ-ಭಾವವು ಏರ್ಪಟ್ಟಾಗ ನಮಸ್ಕಾರ ಮುದ್ರೆಯು ಸಹಜವಾಗಿ ಕಾಣಿಸಿಕೊಳ್ಳುತ್ತದೆ. 

ಸಮಾಧಿಸ್ಥಿತಿಗೆ ಹೋಗಬೇಕೆನ್ನುವ ಅಭಿಲಾಷೆಯುಳ್ಳವರಿಗೆ ಇಂತಹ ಮುದ್ರೆಯನ್ನು ಅಭ್ಯಾಸ ಮಾಡಿಸಿದಾಗ ಆ ಸ್ಥಿತಿಗೆ ನಯನಮಾಡುತ್ತದೆ ಎಂಬುದು ಜ್ಞಾನಿಗಳ ಮತ.  ಅಭ್ಯಾಸವೇ ಕಾಲಕ್ರಮದಲ್ಲಿ ಭಕ್ತಿಭಾವವನ್ನು ಉಕ್ಕಿಸಿ ನಮಸ್ಕಾರಭಾವವು ಮೂಡಿಬರುವ ಅವಕಾಶವಿದೆ. ಹಾಗೆ ಮುದ್ರೆಯನ್ನು ಅಭ್ಯಾಸ ಮಾಡಿಸಿ ಮುದ್ರಾಸ್ಥಿತಿಗೆ ಕರೆದೊಯ್ಯುವ ಒಂದು ವಿಜ್ಞಾನ ಇಲ್ಲಿದೆ. ಇಂತಹ ವಂದನವೂ ಭಕ್ತಿಯ ಒಂದು ಪ್ರಕಾರವೇ ಆಗುತ್ತದೆ.

ನಮಸ್ಕಾರಮುದ್ರೆಯು ಸೃಷ್ಟಿಸಹಜವಾದದ್ದು ಎಂಬುದನ್ನು ಜ್ಞಾನ-ವಿಜ್ಞಾನ ತೃಪ್ತಾತ್ಮರಾದ ಶ್ರೀರಂಗಮಹಾಗುರುಗಳು ವಿವರಿಸುತ್ತಿದ್ದರು. ಗರ್ಭಸ್ಥ ಶಿಶುವು ಎಂಟನೆಯ ತಿಂಗಳಲ್ಲಿ ಭಗವಂತನ ದರ್ಶನ ಮಾಡುವುದಾಗಿ ಗರ್ಭೋಪನಿಷತ್ತು ತಿಳಿಸುತ್ತದೆ. ಆ ಸನ್ನಿವೇಶದ ಚಿತ್ರದಲ್ಲಿ ನಮಸ್ಕಾರಮುದ್ರೆಯ ವಿನ್ಯಾಸವನ್ನು ತೋರಿಸಿ ಅವರು ವಿವರಿಸುತ್ತಿದ್ದುದು ಇಲ್ಲಿ ಸ್ಮರಣೀಯ.

ಉಪಚಾರ 

ನಮಸ್ಕಾರವು ಭಗವಂತನ ಪೂಜೆಯಲ್ಲಿ  ಮಾಡುವ ಉಪಚಾರಗಳಲ್ಲಿ ಮುಖ್ಯವಾದದ್ದಾಗಿ ಪರಿಗಣಿಸಲ್ಪಟ್ಟಿದೆ. ಶ್ರೀರಂಗಮಹಾಗುರುಗಳ ವಿವರಣೆಯಂತೆ ಪೂಜೆಯಲ್ಲಿ ಉಪಚಾರವೆಂದರೆ ಪೂಜ್ಯನಾದ ಭಗವಂತನನ್ನು ಪೂಜಕನ (ಉಪ)ಸಮೀಪಕ್ಕೆ  ಬರುವಂತೆ ಮಾಡಿಕೊಳ್ಳುವ ಕ್ರಿಯೆಯಾಗುತ್ತದೆ. ಪೂಜಕನ ಮನಸ್ಸು ಪ್ರಾರಂಭದಲ್ಲಿ ಭಗವಂತನ ಕಡೆ ಒಲಿದು-ಬಾಗಿ-ಸಮೀಪಿಸಿ ಕೊನೆಯಲ್ಲಿ ಐಕ್ಯವಾಗುವ ಪರಿಯೇ ನಮಸ್ಕಾರವಾಗುತ್ತದೆ.

'ಅಕ್ರೂರಸ್ತು ಅಭಿವಂದನೇ'

ನಮಸ್ಕಾರಭಕ್ತಿಗೆ ಅಕ್ರೂರನನ್ನೇ ಉದಾಹರಣೆಯಾಗಿ ಕೊಡುತ್ತಾರೆ.  ಇವನು ಪರಮ ಭಾಗವತೋತ್ತಮ. ಕೃಷ್ಣ-ಬಲರಾಮರನ್ನು ಮಥುರೆಗೆ ಕರೆತರಲು ದುಷ್ಟನಾದ ಕಂಸನಿಂದ ಈತನೇ ಆಜ್ಞಪ್ತನಾದವನು. ನಂದಗೋಕುಲಕ್ಕೆ ಶೀಘ್ರಗತಿಯ ರಥದಲ್ಲಿ ಅಕ್ರೂರನು ಪ್ರಯಾಣ ಮಾಡುತ್ತಾನೆ. ದಾರಿಯುದ್ದಕ್ಕೂ, ಜಗತ್ಪತಿಯಾದ ಕೃಷ್ಣನ ಸ್ಮರಣೆಯಲ್ಲಿಯೇ ಕಳೆಯುತ್ತಾನೆ. ಗೋಕುಲದ ಸಮೀಪದಲ್ಲಿ ದಾರಿಯಲ್ಲೇ ಶ್ರೀಕೃಷ್ಣನ ಶಂಖ-ಚಕ್ರ-ಪದ್ಮ ಮುಂತಾದ ಗುರುತುಗಳಿಂದ ಕೂಡಿದ ಪಾದಚಿಹ್ನೆಗಳನ್ನು ನೋಡುತ್ತಾನೆ.  ಈ ಚಿಹ್ನೆಗಳೆಲ್ಲವೂ ಮಹಾಪುರುಷನಲ್ಲಿ ಇರುವಂತಹ ಲಕ್ಷಣಗಳು. ನೋಡಿದೊಡನೆಯೇ ಆನಂದಪುಳಕಿತನಾಗಿ ನಮಿಸುತ್ತಾನೆ, ಸ್ತೋತ್ರಮಾಡುತ್ತಾನೆ, ಅದರಮೇಲೆ ಬಿದ್ದು ಹೊರಳಾಡುತ್ತಾನೆ, ನಮಸ್ಕರಿಸಿ ಸಂತೋಷಪಡುತ್ತಾನೆ. ಹೊರ ಚಿಹ್ನೆಗಳಿಗಷ್ಟೇ ಅಲ್ಲದೇ ಬಾಹ್ಯವಾಗಿಯೂ ಕೃಷ್ಣ-ಬಲರಾಮರ ಪಾದಸ್ಪರ್ಶದ ಸೌಖ್ಯವನ್ನು ಅನುಭವಿಸಿದ ಮಹಾಪುರುಷ ಈತನು.

(ಮುಂದುವರಿಯುವುದು)

ಸೂಚನೆ : 25/12/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Friday, December 24, 2021

ಜೀವನವೆಂಬ ಜಾರುಗಂಬ (Jaavanavemba Jaarugamba)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
 


ಅದೊಂದು ನಯವಾದ ಜಾರುಕಂಬ. ಮೇಲಾಗಿ ಅದಕ್ಕೆ ಮೇಲಿಂದ ಕೆಳಗಿನವರೆಗೂ ಎಣ್ಣೆ ಸುರಿದಿದ್ದಾರೆ. ಮೇಲುಗಡೆ ಒಂದು ಸುವರ್ಣನಿಧಿ. ಸ್ಪರ್ಧಿಗಳು ಕೆಳಗಿಂದ ಜಾರುಕಂಬದ ಮೇಲೇರಿ ಆ ನಿಧಿಯನ್ನು ಪಡೆಯಬೇಕು. ಈ ಜಾರಿಕೆಯ ಜೊತೆಗೆ ಕೆಳಗಿದ್ದ ಜನರು ಸಣ್ಣ ಕಲ್ಲುಗಳಿಂದ ಹತ್ತುವವನ ಮೈಗೆ ತಾಕುವಂತೆ ಹೊಡೆಯುತ್ತಾರೆ ಸಹ. ಇಷ್ಟೆಲ್ಲಾ ಪ್ರತಿಕೂಲ ಸನ್ನಿವೇಶಗಳಲ್ಲಿ ಅವನ್ನೆಲ್ಲಾ ಮೀರಿ ಆ ನಿಧಿಯನ್ನು ಪಡೆಯುವುದೇ ಸ್ಪರ್ಧೆ. ಅನೇಕರು ಪ್ರಯತ್ನಿಸುತ್ತಾರೆ. ಒಬ್ಬ ಯಶಸ್ವಿಯಾಗುತ್ತಾನೆ. ಈ ಸ್ಪರ್ಧೆ ನಮ್ಮೂರಿನಲ್ಲಿ ಗೋಕುಲಾಷ್ಟಮಿಯ ಮರುದಿನ ನಡೆಯುತ್ತಿತ್ತು.

ಇದೊಂದು ಭಾರತೀಯವಾದ ಆಟ. ಹೊರಗಿನಿಂದ ಸ್ಪರ್ಧೆ, ಮನೋರಂಜನೆ. ಆದರೆ ಇದರೊಳಗೆ ಒಂದು ಜೀವನದ ತತ್ತ್ವವಿದೆ. ಈ ಜೀವನ ಒಂದು ಜಾರುಕಂಬ. ಇಲ್ಲಿನ ಸುಖದುಃಖಗಳು ನಮ್ಮನ್ನು ಸದಾಕಾಲವೂ ಕೆಳಸೆಳೆಯುತ್ತವೆ. ನಮ್ಮ ಇಂದ್ರಿಯಗಳು ನಮ್ಮನ್ನು ಜೀವನದ ಅತ್ಯುನ್ನತ ಸ್ಥಾನದಲ್ಲಿ ಇರುವ ಆ ಸುವರ್ಣನಿಧಿಯಾದ, ಪರಮಾನಂದದ ಎತ್ತರಕ್ಕೆ ಏರಲು ಬಿಡುವುದಿಲ್ಲ. ಶಂಕರ ಭಗವತ್ಪಾದರು ತಮ್ಮ ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರದಲ್ಲಿ ಹೇಳುವಂತೆ-ಅಂಧಸ್ಯ ಮೇ ಹೃತವಿವೇಕ ಮಹಾಧನಸ್ಯ, ಚೋರೈರ್ಮಹಾಬಲಿಭಿರಿಂದ್ರಿಯನಾಮಧೇಯೈ: ಮೋಹಾಂಧಕಾರಕುಹರೇ ವಿನಿಪಾತಿತಸ್ಯ ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್||- ಹೇ ಲಕ್ಷ್ಮೀನೃಸಿಂಹನೇ! ಮಹಾ ಬಲಿಷ್ಠರಾದ ಇಂದ್ರಿಯಗಳೆಂಬ ಕಳ್ಳರಿಂದ ನನ್ನ ವಿವೇಕವು ಅಪಹರಿಸಲ್ಪಟ್ಟಿದ್ದರಿಂದ ಅಂಧನಾಗಿ ಮೋಹವೆಂಬ ಅಂಧಕಾರದ ಬಾವಿಯಲ್ಲಿ ಬಿದ್ದಿರುವ ನನ್ನನ್ನು ನಿನ್ನ ಕರಾವಲಂಬನವನ್ನು ನೀಡಿ ಕಾಪಾಡು ಎಂದು ಪ್ರಾರ್ಥಿಸುತ್ತಾರೆ. ಎಂದೇ ಈ ಆಟ ನಮ್ಮ ಜೀವನಲಕ್ಷ್ಯವನ್ನು ನೆನಪಿಸುವುದಾಗಿದೆ. ಕ್ಷಣ ಕ್ಷಣಕ್ಕೂ ಜಾರುತ್ತಿರುವ ಈ ಜೀವನವೆಂಬ ಜಾರುಗಂಬವನ್ನು ಸಾಹಸದಿಂದ ಏರಿ ತುದಿಯಲ್ಲಿ ಬೆಳಗುತ್ತಿರುವ ಪರಮಾತ್ಮನಿಧಿ ಎಂಬ ಆನಂದದ ಎಡೆಗೆ ತಲುಪಿ ಸುಖಿಸಬೇಕಾಗಿದೆ. ಇಂತಹ ಪರಮ ಸಾಹಸಕ್ಕೆ ನಮ್ಮನ್ನು ತಯಾರುಮಾಡಲೆಂದೇ ನಮ್ಮ ಮಹರ್ಷಿಗಳು ಭಾರತೀಯವಾದ ಎಲ್ಲ ವಿದ್ಯೆ,ಕಲೆ, ಆಚಾರ ವಿಚಾರಗಳನ್ನೂ ಕರುಣೆಯಿಂದ ತಂದುಕೊಟ್ಟಿದ್ದಾರೆ. ಜೀವನದ ಕಟ್ಟುಗಳನ್ನೆಲ್ಲ ಬಿಡಿಸಿಕೊಳ್ಳಲು ಕೆಲವು ಚೌಕಟ್ಟುಗಳಿಗೆ ಒಳಪಡಬೇಕಾಗುತ್ತೆ. 

ಜಾರುಗಂಬ ನಮ್ಮನ್ನು ಜಾರಿಸದೇ ಮೇಲೇರುವಂತೆ ಸಹಕಾರಿಗಳಾಗುವಂತೆ ನಮ್ಮ ಜೀವನ ವಿಧಾನದಲ್ಲಿ ಚೌಕಟ್ಟುಗಳನ್ನು ಹಾಕಿಕೊಟ್ಟಿದ್ದಾರೆ. ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು-"ಹೊಳೆ, ಕೆರೆಗಳಿಂದ ನೀರನ್ನು ಹೊತ್ತುತರುವ ಹೆಂಗಸರು ತಲೆಯ ಮೇಲೆ ನೀರಿನ ಪಾತ್ರೆ ಹೊತ್ತು ಜೊತೆಗೆ ಬೇರೆಯ ಮಾತನ್ನೂ ಆಡುತ್ತಿರುತ್ತಾರೆ. ಆದರೆ ಮೇಲಿನ ಪೂರ್ಣಕುಂಭವನ್ನು ಮರೆಯುವುದಿಲ್ಲ. ಅದಕ್ಕೆ ವಿರೋಧವಿಲ್ಲದಂತೆ ಮಾತು, ಅಭಿನಯ ಎಲ್ಲಾ ಮಾಡುತ್ತಾರೆ. ಹಾಗೆಯೇ ನಮ್ಮ ತಲೆಯ ಮೇಲಿರುವ ಪೂರ್ಣನಾದ ಭಗವಂತನನ್ನು ಮರೆಯದೇ ಅದಕ್ಕೆ ವಿರೋಧವಿಲ್ಲದ ರೀತಿ ಬೇರೆ ಬೇರೆ ಕೆಲಸವನ್ನು ಮಾಡಿಕೊಳ್ಳಬೇಕು." ಹಾಗೆಯೇ ಇನ್ನೊಂದು ಮಾರ್ಮಿಕವಾದ ಮಾತನ್ನೂ ಹೇಳಿದ್ದರು-"ಸಂತೆ ವ್ಯಾಪಾರಕ್ಕೆ ಬಂದಿರುವುದು ಸರಿಯೇ. ಹಾಗೆಂದು ವ್ಯಾಪಾರದಲ್ಲಿ ನಿರುತ್ಸಾಹ ಪಡಬೇಕಾಗಿಲ್ಲ. ಆದರೆ ವ್ಯಾಪಾರದ ಉತ್ಸಾಹದಲ್ಲಿ ತನ್ನ ಮನೆಗೆ ಹೋಗಿ ಸೇರಬೇಕಾದ್ದನ್ನು ಮಾತ್ರ ಮರೆಯಬಾರದು." ಇಂದ್ರಿಯಜೀವನವನ್ನು ಕಡೆಗಣಿಸಿ ಎಂದು ಋಷಿಗಳು ಎಲ್ಲೂ ಹೇಳಿಲ್ಲ. ಆದರೆ ಒಳ ಆತ್ಮಜೀವನಕ್ಕೆ ಸಹಕಾರಿಯಾಗುವಂತೆ ಇಂದ್ರಿಯಜೀವನವನ್ನು ಇಟ್ಟುಕೊಳ್ಳುವ ಉಪಾಯವನ್ನು ಹೇಳಿಕೊಟ್ಟಿದ್ದಾರೆ.  ನಾವು ಅವರ ಹೆಜ್ಜೆಯನ್ನು ಅನುಸರಿಸಿದರೆ ಐಹಿಕ ಪಾರಮಾರ್ಥಿಕ ಜೀವನಗಳೆರಡೂ ಆನಂದಮಯ.

ಸೂಚನೆ:  24/12/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.  

Thursday, December 23, 2021

ಬಾಹ್ಯಾಕಾಶ ಮತ್ತು ದಹರಾಕಾಶ(Baahyaakaasha Matthu Daharaakaasha)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)


ನವಂಬರ್ ೧೧, ೨೦೨೧ ವಿಜ್ಞಾನ ಮತ್ತು ತಂತ್ರಜ್ಞಾನಕ್ಷೇತ್ರದ ಚರಿತ್ರಾರ್ಹದಿನ. ಅಂದು ಭಾರತಮೂಲದ ರಾಜಾಚಾರಿರವರ ನೇತೃತ್ವದ ನಾಲ್ಕು ಸದಸ್ಯರ ಅಂತರಿಕ್ಷಯಾತ್ರಿಗಳು ಫ್ಲೋರಿಡಾ ರಾಜ್ಯದ ಕೇಪ್ ಕೆನವೆರಲ್ ಎಂಬ ದ್ವೀಪದ ಉಡಾವಣೆ ಕ್ಷೇತ್ರದಿಂದ ಬಾಹ್ಯಾಕಾಶಕ್ಕೆ ಖಾಸಗಿ ಎನ್ಡೂರನ್ಸ್ ಬಹುತೇಕ ಉಪಯೋಗಿಸಬಲ್ಲ ರಾಕೆಟ್ ಹಾಗೂ ಕ್ಷಿಪಣಿಯ ಮೂಲಕ ಹಾರಿ, ಕೇವಲ ೨೨ ಗಂಟೆಯಲ್ಲಿ ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶನಿಲ್ದಾಣದ ನೌಕೆಯೊಂದಿಗೆ ತಮ್ಮ ಕ್ಷಿಪಣಿಯನ್ನು ಸೇರಿಸಿ ಆ ನೌಕೆಯೊಳಗೆ ಪ್ರವೇಶಿಸಿದರು. ಎನ್ದ್ಯೂರನ್ಸ್ ಕ್ಷಿಪಣಿಯ ರಾಕೆಟ್ ಈಗಾಗಲೆ ಭೂಮಿಗೆ ಕ್ಷೇಮವಾಗಿ ಹಿಂದಿರುಗಿದೆ.  .    

ಅಮೇರಿಕಾದೇಶದ ಪ್ರಥಮ ಅಂತರಿಕ್ಷಯಾತ್ರಿ ಜಾನ್ ಗ್ಲೆನ್ನ್ ಎಂಬಾತ ತನ್ನ ಯಾತ್ರೆಯ ಬಗ್ಗೆ "ಈ ಸೃಷ್ಟಿಯ ನೋಟವನ್ನು ನೋಡಿ , ಭಗವಂತನಲ್ಲಿ ನಂಬಿಕೆಯಿಲ್ಲದಿರುವುದು ಅಸಾಧ್ಯ" ಎಂದಿದ್ದಾರೆ. ಈಗ ೭೭ ವರ್ಷಗಳಾಗಿರುವ ಗ್ಲೆನ್ನ್ ಅವರು "ಅಂತರಿಕ್ಷದ ಅನುಭವ ನನಗೆ ದೇವರಲ್ಲಿ ನಂಬಿಕೆಯನ್ನು ಬಲಪಡಿಸಿದೆ" ಎಂದಿದ್ದಾರೆ. ಅನೇಕ ಅಂತರಿಕ್ಷಯಾತ್ರಿಗಳು ಈ ತರಹದ ಅನುಭವವನ್ನು ವ್ಯಕ್ತಪಡಿಸಿದ್ದಾರೆ.

ಅಂತರಿಕ್ಷ ಯಾತ್ರೆ ಹಾಗೂ ಭಾರತೀಯ ಮಹರ್ಷಿಗಳ ಆಧ್ಯಾತ್ಮಿಕಯಾತ್ರೆ ಹೋಲಿಸುವುದು ಸ್ವಾರಸ್ಯಕರವಾಗಿದೆ. ಬಾಹ್ಯಾಕಾಶದ ನೌಕೆ ಭೂಮಿಯ ಗುರುತ್ವಾಕರ್ಷಣೆಯಿಂದ ದೂರಸರಿಯಬೇಕಾದರೆ, ಅದರ ವೇಗ ಗಂಟೆಗೆ ೪೦ ಸಾವಿರ ಕಿ.ಮಿ. ದಾಟಬೇಕಾಗುತ್ತದೆ. ಮಾನವನು ತ್ರಿಗುಣಗಳೆಂಬ ಗುರುತ್ವಾಕರ್ಷಣೆಯಿಂದ ಸೆಳೆಯಲ್ಪಟ್ಟು ಸಂಸಾರದಲ್ಲಿದ್ದಾನೆ. ಆತ ದೈವವನ್ನು ಕಂಡ ಹಾಗೂ ತೋರಿಸುವ ಗುರುಗಳ ಉಪದೇಶವೆಂಬ ನೌಕೆಯ ಸಹಾಯದಿಂದ ತ್ರಿಗುಣಾತೀತನಾಗಬೇಕಾಗುತ್ತದೆ. 

ಅಂತರಿಕ್ಷಯಾತ್ರಿಗಳು ಯಾತ್ರೆಯಲ್ಲಿ ನಿರ್ವಾತ, ಉಷ್ಣ ಮತ್ತು ಒತ್ತಡಗಳ ಸಮಸ್ಯೆಯಿಂದ ರಕ್ಷಣೆ ಪಡೆಯಬೇಕಾಗುತ್ತದೆ. ಹಾಗೆಯೇ, ಆಧ್ಯಾತ್ಮಿಕ ಸಾಧನೆಯೆಂಬುದು ಕತ್ತಿಯ ಅಲಗಿನ ಮೇಲೆ ನಡೆಯುವಂತೆ ಎಂದು ಉಪನಿಷದ್ವಾಣಿ ಎಚ್ಚರಿಸುತ್ತದೆ. ಗುರುಗಳ ಅನುಗ್ರಹದಿಂದ ಸಾಧನೆಯ ಪಥದಲ್ಲಿ ರಕ್ಷಣೆ ಪಡೆಯುವುದು ಅತ್ಯಾವಶ್ಯಕವಾಗುತ್ತದೆ. ಶೂನ್ಯ ಗುರುತ್ವಾಕರ್ಷಣೆಯನ್ನು ಅಂತರಿಕ್ಷಯಾತ್ರಿಗಳು ಅನುಭವಿಸುತ್ತಾರೆ. ಹಾಗೆಯೇ ಮುಂದುವರಿದ ಸಾಧಕರು, ಭವಬಂಧನ ಕಳಚಿಕೊಂಡ ಅನುಭವ ಪಡೆಯತ್ತಾರೆ. ಭೌತಿಕ ಅಂತರಿಕ್ಷ ಯಾತ್ರಿಗಳಿಗೆ ಶಾರೀರಿಕ ಬದಲಾವಣೆಗಳಾದಂತೆ, ಸಮಾಧಿ ಅಥವಾ ತುರೀಯ ಸ್ಥಿತಿಯಲ್ಲಿ ಯೋಗಿಗಳ ಶರೀರ ಕಟ್ಟಿಗೆಯಂತಾಗುವುದು, ಇತ್ಯಾದಿ ಅನುಭಗಳು ಉಂಟಾಗುತ್ತವೆ ಎಂಬುದು ಅನುಭವಿಗಳ ಮಾತು.    

ಶ್ರೀರಂಗಗುರುಗಳು ಉಪನಿಷದ್ವಾಣಿಯನ್ನು ಸ್ಮರಿಸಿಕೊಂಡಿರುವುದು ಉಲ್ಲೇಖಾರ್ಹ- "ನಿಮ್ಮ ಹೃದಯ ಒಂದು ಗೇಣಿರಬಹುದು. ಆದರೆ ಅಲ್ಲಿ ಅಂತರ್ಯಾಮಿಯಾಗಿದ್ದರೂ ವಾಸ್ತವವಾಗಿ ನನ್ನ ಪ್ರಭುವು ಭೂರ್ಭುವಸ್ಸುವರ್ಲೋಕಗಳನ್ನು ಮೀರಿ ನಿಂತಿದ್ದಾನೆ. ಅವನು ಅತ್ಯಂತ ಹತ್ತಿರದಲ್ಲಿಯೂ ಇದ್ದಾನೆ, ಅತಿದೂರದಲ್ಲಿಯೂ ಇದ್ದಾನೆ. "  ಉಪನಿಷತ್ತಿನಲ್ಲಿ ತಿಳಿಸಿರುವ ಹಾಗೆ, ಶರೀರವು ಬ್ರಹ್ಮಪುರಿ; ಹೃದಯವೊಂದು ಕಮಲ; ಅದರೊಳಗೊಂದು ಆಕಾಶ; ಆ ಆಕಾಶದೊಳಗಿರುವ ಸಚ್ಚಿದಾನಂದ ಪರವಸ್ತುವನ್ನು ಕಾಣವುದೇ ಜೀವನದ ಪರಮಧ್ಯೇಯ. ಆ ಆಕಾಶವನ್ನೇ ದಹರಾಕಾಶವೆನ್ನುತ್ತಾರೆ. ಬ್ರಹ್ಮಾಂಡವು ಭೌತಿಕ ಕ್ಷೇತ್ರವಾದರೆ, ಅಂತರಂಗದ ಅನುಭವವಾಗುವುದು ಪಿಂಡಾಂಡವೆನ್ನುವ ಕ್ಷೇತ್ರದಲ್ಲಿ. 

ಎಂಡ್ಯೂರನ್ಸ್ ಅಂತರಿಕ್ಷಯಾತ್ರಿಗಳು ಏಪ್ರಿಲ್ ೨೦೨೨ ರಲ್ಲಿ ಭೂಮಿಗೆ ಹಿಂದಿರುಗಿ ಸಹಜ ಜೀವನಕ್ಕೆ ಮರಳಿ ಬರುತ್ತಾರೆ. ಹಾಗೆಯೇ, ಋಷಿಗಳು ತಮ್ಮ ತಪಸ್ಸಿನಿಂದ ಹೊರಬಂದು ತಮ್ಮ ಇಹಜೀವನವನ್ನು "ಜೀವನ್ಮುಕ್ತರಾಗಿ" ನಡೆಸುತ್ತಾರೆ. 

ಗಗನಯಾತ್ರಿಯು ಬಾಹ್ಯಾಕಾಶಕ್ಕೆ ಹಾರುವುದನ್ನು ನೋಡಿ ನಾವು ದಹರಾಕಾಶಕ್ಕೆ ಹಾರುವ ಸ್ಫೂರ್ತಿಯನ್ನು ಪಡೆಯೋಣ. 


ಸೂಚನೆ: 23/12/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ. 


Wednesday, December 22, 2021

Antyeshti Samskaara -2 (Post-death rituals)

Kannada Article by: Tarodi Suresha

English Rendering by: Padmini Shrinivasan

Respond to (lekhana@ayvm.in)



 

While demonstrating the resonance between two Tambooras (stringed drone instrument)Sriranga mahaaguru used to say – "Look, when both the instruments are tuned to the same pitch and one of them is plucked, the other picks up its vibrations". Similarly by judging the future status of the soul, an enlightened person (Jnaani), can tune his mind and Praana Shakti (life forces) in consonance with the soul of the dead person and act at lightning speed to deliver salvation. He helps the dead person's soul to gather all necessary attributes to attain salvation. The rituals compliment byserving as vehicles in this process.

What does salvation mean? Vision of the Lord is the highest aspiration for a Jiva. As per the inner vision of the Jnaanis, the rituals which are designed as per the Lord's evolutionary plan (Vijnaana), elevate the dead to its pre-ordained crossover path (Naadi patha) leading to communion with Lord. The life forces navigate along energy pathways (Naadis) encompassing the entire creation (Brahmaanda/Pindaanda). There exist pathways which are capable of downgrading a person too. The main purpose of Antyeshti is to help the Jiva escape from its entry into such pathways and conjoin withthat auspicious path leading to the eternal Truth.

The Jiva needs to be elevated from its current level to a higher one, based on its spiritual merits and demerits (Punya and Paapa). These Apara Samskaaras add merit through a purification process commensurate with the spiritual evolution of the Jiva. If not the ultimate oneness with the eternity, i.e. no rebirth, to be re-born as a human or as a cow in a pious person's house or even in a congenial place are all considered as a spiritual progression. A few examples would clarify these concepts. When a person is on his deathbed, hymns reminding the Lord are chanted into his right ear. Sacred water from Ganga and sacred Tulsi leaves are also dropped into the mouth. These yield the fruits of turning the Jiva upwards. Mahaguru had clarified that "the final memories of the individual are very important as his after-life depends on these feelings. At this juncture, the seven Dhaatus of his body attain a state of maturity. His future in general, meaning the body he is destined to get etc. get decided at this point of time". It is customary for relatives and friends to visit the dead person to pay their last respects. Just as anger manifests itself on the face, when a Jnaani dies, divine imprints of the passage of his enlightened soul get highlighted over his body. Identifying these imprints purifies the onlooker and elevates him too. This forms the basis for the customary and compulsory last sight of the departed. If an enlightened person witnesses a death, the dead person gets his divine blessings. We can notice here that all the rituals designed by Maharshis point to the same ultimate goal. How fortunate are citizens of Bhaarata to have Rshis as ancestors who possessed special abilities to steer themselves through all the three domains of creation! Respectful salutations to our revered Rshis!

Note: The Kannada version of this article can be viewed at AYVM blogs.

Sunday, December 19, 2021

ಅಷ್ಟಾಕ್ಷರ ದರ್ಶನ -2 ಯೋಽರ್ಥೇ ಶುಚಿಃ ಸ ಹಿ ಶುಚಿಃ (Astakshara Darshana -2 Yo’rthe Shucih Sa Hi Hhucih)


ಲೇಖಕರು :
ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

ಧರ್ಮ-ಅರ್ಥ-ಕಾಮ-ಮೋಕ್ಷ – ಇವುಗಳ ಗಳಿಕೆಯೇ ಭಾರತೀಯರ ಆಧ್ಯಾತ್ಮಿಕ ಚೌಕಟ್ಟು. ಇವುಗಳಲ್ಲಿ ಧರ್ಮವೆಂಬುದರ ಬಗ್ಗೆ ಒಂದು ಪರಿಚಯಾತ್ಮಕ ನೋಟವಾಯಿತು, ಮನುವಿನ ಉಕ್ತಿಯೊಂದರ ಮೂಲಕ. ಅರ್ಥದ ಬಗ್ಗೆಯೂ ಮನುವಿನದೇ ಮೌಲಿಕವಾದ ಕಿರುನುಡಿಯೊಂದುಂಟು: ಅದು "ಯೋಽರ್ಥೇ ಶುಚಿಃ ಸ ಹಿ ಶುಚಿಃ" - "ಯಾರು ಧನದ ವಿಷಯದಲ್ಲಿ ಶುದ್ಧರೋ ಅವರು ತಾನೆ ಶುದ್ಧರು!" ಹಾಗಾದರೆ ಧನಶುದ್ಧಿ ಅಷ್ಟು ಮುಖ್ಯವೇ?

ಸ್ಥೂಲದೃಷ್ಟಿಯವರಿಗೆ ಎಚ್ಚರವಾಗಲೆಂದು, "ಮೃದ್ವಾರಿಗಳಿಂದ(ಷ್ಟೆ) ಶುಚಿಯಾದವನು ಶುಚಿಯೆಂದಲ್ಲ" ಎಂದೂ ಮನು ಎಚ್ಚರಿಸುತ್ತಾನೆ! ಮೃದ್ ಎಂದರೆ ಮಣ್ಣು; ವಾರಿಯೆಂದರೆ ನೀರು. ಇವುಗಳಿಂದಲೂ (ಸೋಪು-ಚೂರ್ಣಗಳಿಂದಲೂ) ಪ್ರಧಾನವಾಗಿ ಆಗುವುದು ಬಾಹ್ಯಶುದ್ಧಿ, ಶರೀರಶುದ್ಧಿ. ಅದು ಬೇಕು, ಹೌದೇ. ಆದರೆ ಸಾಕು - ಎನ್ನಲಾಗದು.

ಇದೇ ತಿಂಗಳ ಎರಡನೇ ತಾರೀಖಿಗೆ 'ಜಾಗೃತಿ ಅರಿವು ಸಪ್ತಾಹ'ವು ಸಂಪನ್ನವಾಯಿತಷ್ಟೆ. ಇದರ ಉದ್ದೇಶ ಭ್ರಷ್ಟಾಚಾರದ ವಿರುದ್ಧ ಅರಿವನ್ನು ಮೂಡಿಸುವುದು. ಎಲ್ಲಾ ರಾಜ್ಯಸರಕಾರಗಳೂ ಇದನ್ನಾಚರಿಸುವಂತಾಗಲು ಪ್ರೇರಣೆ ಬಂದುದು ಕೇಂದ್ರ ವಿಚಕ್ಷಣಾ ಆಯೋಗದಿಂದ. ಸಾರ್ವಜನಿಕ ಆಡಳಿತದ ಸರ್ವಕ್ಷೇತ್ರಗಳಲ್ಲೂ ಭ್ರಷ್ಟಾಚಾರವನ್ನು ತೊಲಗಿಸಬೇಕು; ಧಾರ್ಮಿಕತೆ ಹಾಗೂ ಪ್ರಾಮಾಣಿಕತೆಯಿಂದ ಜೀವನವನ್ನು ನಡೆಸುವಂತೆ ಯುವಪೀಳಿಗೆಗೆ ಸ್ಫೂರ್ತಿ ತುಂಬಬೇಕು – ಇವು ಇದರ ಉದ್ದೇಶಗಳೆಂದು ಆಯೋಗವು ಘೋಷಿಸಿದೆ.

ಸರಕಾರಗಳ ಈ ತೆರನಾದ ಅನೇಕ ಕಾರ್ಯಕ್ರಮಗಳು ತೋರಿಕೆಗಷ್ಟೆ; ಆದರೆ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬಂದ ಕೇಂದ್ರಸರಕಾರದ "ಸತರ್ಕ ಭಾರತ, ಸಮೃದ್ಧ ಭಾರತ"ದ ಸುತ್ತೋಲೆಯು ಪ್ರಭಾವಶಾಲಿಯಾದದ್ದು ಎಂದು ಧೈರ್ಯವಾಗಿಯೇ ಹೇಳಬಹುದು. ಕಾರಣವೇನು? ಮುಖ್ಯವಾಗಿ ಇದನ್ನು ಧಾರ್ಮಿಕತೆಯ ಆಧಾರದ ಮೇಲೆ ನಿಲ್ಲಿಸಲು ಮಾಡಿರುವ ಯತ್ನ.

ಜನರು ಧರ್ಮಪರರಾಗಿ ಬಾಳಬೇಕು. ಧರ್ಮವೆಂಬುದೇ ಧಾರಣ ಮಾಡುವುದು. ಸ್ವಸ್ವಕರ್ತವ್ಯಗಳನ್ನು ಅರಿತು ಸರಿಯಾದ ಹಾದಿಯಲ್ಲಿ ಎಲ್ಲರೂ ಸಾಗುವಂತಾದಲ್ಲಿ ಅದುವೇ ಆರೋಗ್ಯಶಾಲಿ ಸಮಾಜದ ಲಕ್ಷಣ. ಆರೋಗ್ಯವೇ ಸಹಜಧರ್ಮ. ಕರ್ತವ್ಯನಿಷ್ಠೆಯೆಂಬುದು ಸ್ವಪ್ರೇರಣೆಯಿಂದಲೇ ಜಾತವಾದಲ್ಲಿ ಪ್ರಜೆಗಳು ಆರೋಗ್ಯದಿಂದಿದ್ದಾರೆಂಬುದರ ಲಕ್ಷಣವದು; ಯಾರದ್ದೋ ಭಯವೇ ಪ್ರೇರಕವಾಗಿರಬಾರದು.

ಎಲ್ಲ ಜನರಲ್ಲೂ ಸಜ್ಜನಿಕೆಯೆಂಬುದಿರುತ್ತದೆ. ಜೊತೆಗೇ ಎಲ್ಲರಲ್ಲೂ ಪಾಶವೀಭಾವನೆಗಳಿಗೂ ಆಸ್ಪದವಿರುತ್ತದೆ. ಮೊದಲನೆಯದೇ ಸಕ್ರಿಯವಾಗಿರಬೇಕೆಂದರೆ ಆಳುವವರು ಸ್ವಧರ್ಮದಲ್ಲಿರಬೇಕು. ಆಳುವವರ ಧರ್ಮಗಳೆರಡೇ: ದುಷ್ಟದಮನ, ಶಿಷ್ಟರಕ್ಷಣ. ಕಣ್ಣಲ್ಲಿ ಕಣ್ಣಿಟ್ಟು ಮಾಡಬೇಕಾದವಿವು. ಪ್ರತಿಯೊಂದು ಸಂಸ್ಥೆಗೂ ಅನ್ವಯಿಸುವಂತಹವಿವು. ರಾಜ್ಯ-ರಾಷ್ಟ್ರಗಳಿಗಂತೂ ಸರ್ವಥಾ ಅನ್ವಯಿಸುವಂತಹುವೇ.

ಭಯವೆಂಬುದೊಂದೇ ಕೆಲವರಿಗೆ ಸನ್ಮಾರ್ಗದಲ್ಲಿರಲು ಪ್ರೇರಣೆ. ಆದುದರಿಂದ ದಂಡಭಯವೆಂಬ ಕಷ್ಟವು ದುಷ್ಟರಿಗೆ ಕಟ್ಟಿಟ್ಟದ್ದೇ – ಎಂಬುದು ಸರ್ವಗೋಚರವಾಗಿರುವಂತಾಗಬೇಕು. ಆದರೆ ಅದಕ್ಕಿಂತಲೂ ಮುಖ್ಯವಾದುದೆಂದರೆ, ಪ್ರಜೆಗಳು ಸನ್ಮಾರ್ಗದಲ್ಲಿರಲು ಸ್ಫೂರ್ತಿಯನ್ನೀಯಬಲ್ಲ ನಾಯಕತ್ವ.

ನಮ್ಮ ದೇಶದ ಅಪಾರಸಂಪತ್ತನ್ನು ಲೂಟಿಮಾಡಲೆಂದೇ ಬಂದಿದ್ದ ಮೊಘಲರಿಂದಾಗಲಿ ಬ್ರಿಟಿಷರಿಂದಾಗಲಿ ಇದನ್ನು ನಿರೀಕ್ಷಿಸುವುದೆಂತು? ಅವರು ತೊಲಗಿಹೋದ ಹೊಸದರಲ್ಲಿ, ಧರ್ಮಿಷ್ಠರಾಷ್ಟ್ರನಿರ್ಮಾಣದ ಹೊಂಗನಸು ಅಂದಿನ ಹತ್ತುಹಲವು ಪೌರನಾಯಕರಲ್ಲಿ ತುಂಬಿತ್ತು; ಅಂತಹ ಹಂಬಲಕ್ಕೆ ಬೆಂಬಲವಾಗಿ ನಿಂತು, ಅಧೋಗತಿಗೆ ತಳ್ಳಲಾಗಿದ್ದ ನಮ್ಮ ರಾಷ್ಟ್ರವು ಮತ್ತೆ ಪ್ರಗತವಾಗಿ ತಲೆಯೆತ್ತಿ ನಿಲ್ಲುವಂತೆ ಮಾಡಬಹುದಾಗಿತ್ತು. ಆದರೆ "ಧರ್ಮನಿರಪೇಕ್ಷತೆ"ಯೆಂಬ ರೋಗವು ನಾಯಕತ್ವಕ್ಕೆ ತಗುಲಿ ರಾಷ್ಟ್ರಕ್ಕೆ ಕ್ಷಯವು ಬಡಿದಂತಾಯಿತು.

ಆದರೆ ಪೂರ್ವದಲ್ಲಿ ನಮ್ಮನ್ನು ಆಳಿದ ಅನೇಕ ರಾಜ-ಮಹಾರಾಜರುಗಳು ಧಾರ್ಮಿಕವಾಗಿಯೇ ರಾಜ್ಯವನ್ನಾಳುತ್ತಾ ತಮ್ಮ ಉತ್ತಮವಾದ ನಡತೆಯಿಂದಾಗಿ ಪ್ರಜೆಗಳಿಗೂ ಸ್ಫೂರ್ತಿಯನ್ನು ತುಂಬಿದ್ದರು. ವಾಸ್ತವವಾಗಿ ರಾಜನೆಂದರೆ ಯಾರು? "ಯಾವನಲ್ಲಿ ಧರ್ಮವು ರಾಜಿಸುವುದೋ ಆತನೇ ರಾಜನು" – ಎಂಬ ಮಹಾಭಾರತದ ವಚನವನ್ನು ಶ್ರೀರಂಗಮಹಾಗುರುಗಳು ಪದೇ ಪದೇ ಉಲ್ಲೇಖಿಸುತ್ತಿದ್ದರು.

ಹಾಗಿರಲು ಸ್ಫೂರ್ತಿಯು ಅರಸರಿಗೆ ಎಲ್ಲಿಂದ ಬಂದಿತು? ಮನುಕುಲಕ್ಕೇ ಮೂಲನೆನಿಸಿದ ಮನುಮಹಾರಾಜನ ನಡವಳಿಕೆಯಿಂದಲೇ. ದೇಶದ ಪ್ರಜೆಗಳೆಲ್ಲರೂ ಶುದ್ಧವಾದ ಜೀವನವನ್ನು ನಡೆಸಲು ಪ್ರೇರಣಾಪ್ರದವಾದ ಹಲವಂಶಗಳು ಮನುಸ್ಮೃತಿಯಲ್ಲುಂಟು.

ಶುಚಿತ್ವವು ನಮ್ಮಲ್ಲಿ ಮೂಡುವುದೆಂತು? ಬಾಹ್ಯಶುದ್ದ್ಧಿಗಿಂತಲೂ ಮಿಗಿಲಾಗಿ ಅಂತಃಶುದ್ಧಿಯಿಂದ. ಅಂತಃಶುದ್ಧಿಗೆ ಪ್ರಧಾನವಾಗಿ ಬೇಕಾದುದು ದ್ರವ್ಯಾರ್ಜನೆಯಲ್ಲಿಯ ಶುದ್ಧಿ. ನಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಸಂಪತ್ತು ಬೇಕು; ಎಷ್ಟೋ ಧರ್ಮಾಚರಣೆಗಳಿಗಾಗಿಯೂ ಸಂಪತ್ತು ಅವಶ್ಯವೇ. ಎಂದೇ ಕೌಟಲ್ಯನು ಧರ್ಮಕ್ಕೂ ಕಾಮಕ್ಕೂ ಅರ್ಥವು ಬುನಾದಿಯೆನ್ನುವುದು. ಆದರೆ ಅಮಾರ್ಗಸಂಪಾದನೆಯಿಂದ ಸಾಧಿಸಿಕೊಂಡ ಕಾಮಪೂರಣವಿರಲಿ, ಧರ್ಮಾಚರಣವೂ ದೋಷದುಷ್ಟವಾಗುವುದು! ಲಂಚದ ಹಣದಿಂದ ಪ್ರಪಂಚಪ್ರಭುವನ್ನು ಮೆಚ್ಚಿಸಲಾದೀತೇ?

ಸರಕಾರದ ಸೇವೆಯಲ್ಲಿರುವವರು ಯಾವಾಗ-ಹೇಗೆ-ಎಷ್ಟು ಹಣವನ್ನು ಪ್ರಜೆಗಳಿಂದ ದೋಚುವರೆಂದು, ಖಜಾನೆಯಿಂದ ಬಾಚುವರೆಂದು, ಕೌಟಲ್ಯನೂ ತನ್ನ ಅರ್ಥಶಾಸ್ತ್ರದಲ್ಲಿ ಕಾಣಿಸದೆ ಬಿಟ್ಟಿಲ್ಲ.

ಸ್ವಾರ್ಥಪರನಲ್ಲದ ರಾಷ್ಟ್ರನಾಯಕನೊಬ್ಬನು ಬೇಕೆಂದು ಹಲವು ಶತಮಾನಗಳಿಂದ ಪ್ರಾರ್ಥಿಸಿದ ಭಾರತೀಯಜನತೆಗೆ ಉತ್ತರವೊಂದಿಂದು ಸಿಕ್ಕಿರುವಂತಿದೆ. ಎಲ್ಲಿಯವರೆಗೂ ರಾಷ್ಟ್ರನೇತಾರರು ಮಾತ್ರವಲ್ಲದೆ ಅಧಿಕಾರಿಗಳೂ ಪ್ರಜೆಗಳೂ ಮನುವಿನ ಈ ಶುಚಿತ್ವದ ಎತ್ತರಕ್ಕೆ ಹತ್ತಲು ಹಗಲಿರುಳೂ ಎಳಸುವರೋ, ಅಲ್ಲಿಯವರೆಗೂ – ಅಲ್ಲಿಯವರೆಗೆ ಮಾತ್ರ - ದೇಶದ ಕ್ಷೇಮವೆಂಬುದು ಸಿದ್ಧವಾದದ್ದೇ ಸರಿ. ಅಧಿಕಾರಿಗಳೆಂದರೆ ದೇಶಕ್ಕೆ 'ಅಧಿಕ- ಅರಿ'ಗಳಾಗಬಾರದಲ್ಲವೇ?

ಸೂಚನೆ: 19/12/2021 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.  

ಶ್ರೀರಾಮನ ಗುಣಗಳು - 36 ಪ್ರಾಮಾಣಿಕ - ಶ್ರೀರಾಮ (Sriramana Gunagalu -36Pramanika - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



'ಪ್ರಮಾಣ-ಮಾನ' ಎಂಬ ಶಬ್ದಮೂಲವಾದುದು 'ಪ್ರಾಮಾಣಿಕ' ಎಂಬ ಶಬ್ದ. ಯಥಾರ್ಥವಾದುದು, ವಸ್ತುನಿಷ್ಠವಾದುದು, ಮರ್ಯಾದೆಯುಂದ ಕೂಡಿದ್ದು, ಪ್ರಮಾಣದಿಂದ ಕೂಡಿದ್ದು ಎಂಬಿತ್ಯಾದಿ ಅರ್ಥಗಳು ಈ ಪದಕ್ಕೆ ಇವೆ. ಅನೇಕ ವ್ಯಕ್ತಿ ಅಥವಾ ಪದಾರ್ಥಗಳ ಮಧ್ಯೆ ನಾವು ಪ್ರತಿನಿತ್ಯ ಜೀವಿಸುತ್ತೇವೆ. ನಮ್ಮ ಜೀವನ ಸುಖಮಯವಾಗಿ ಸಾಗಬೇಕಾದರೆ ಅಥವಾ ಜೀವದ ಗತಿ ಸದ್ಗತಿಯಾಗಬೇಕಾದರೆ ಎಲ್ಲಾ ವ್ಯಕ್ತಿ ಅಥವಾ ಪದಾರ್ಥಗಳಿಗೆ ಅದರದ್ದೇ ಆದ ಗೌರವ-ಆದರಗಳನ್ನು ಕೊಡಬೇಕಾಗುತ್ತದೆ. ಆಗ ಮಾತ್ರ ಆ ಪದಾರ್ಥದಿಂದ ನಮಗೆ ನೆಮ್ಮದಿ ಸಾಧ್ಯವಾಗುತ್ತದೆ. ಯಾರ ಜೊತೆ ಎಷ್ಟು ಮಾತನಾಡಬೇಕು? ಯಾರ ಜೊತೆ ಹೇಗೆ ವರ್ತಿಸಬೇಕು? ಯಾವ ಪದಾರ್ಥವನ್ನು ಹೇಗೆ ಬಳಸಿಕೊಂಡರೆ ಆ ಪದಾರ್ಥಕ್ಕೂ ಸಾರ್ಥಕ್ಯ. ಇವುಗಳೆಲ್ಲದರ ಒಟ್ಟಾರೆ ಪರಿಭಾಷೆಯಾಗಿ ಬಂದದ್ದೇ 'ಪ್ರಾಮಾಣಿಕ ಅಥವಾ ಪ್ರಾಮಾಣಿಕತೆ ಎಂಬುದು. ಸತ್ಯ, ಧರ್ಮ, ನ್ಯಾಯ, ನಿಷ್ಠೆ ಶ್ರೀರಾಮನ ನಡವಳಿಕೆಯಲ್ಲಿನ ಪ್ರಾಮಾಣಿಕತೆಯಾದರೆ, ವ್ಯಕ್ತಿಶಃ ಹೇಗೆ ನಡೆದುಕೊಳ್ಳಬೇಕೆಂಬುದು ವ್ಯವಹಾರ-ಪ್ರಾಮಾಣಿಕತೆ. ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಮಹತ್ತ್ವವಿರ್ರುತ್ತದೆ ಎಂದು ತಿಳಿದು ಪದಾರ್ಥಗಳ ಸದುಪಯೋಗವು ಕೂಡ ಪ್ರಾಮಾಣಿಕತೆಯ ಮತ್ತೊಂದು ಮಜಲು. 

ಶ್ರೀರಾಮನು ತನ್ನ ಜೀವನ ಪೂರ್ತಿ ಪ್ರಾಮಾಣಿಕತೆಯಿಂದ ಬದುಕಿ ಪ್ರಾಮಾಣಿಕನಾದ. ಇದಕ್ಕೆ ಒಂದೆರಡು ಉದಾಹರಣೆಗಳನ್ನು ಶ್ರೀಮದ್ರಾಮಾಯಣದಲ್ಲಿ ಕಾಣಬಹುದು. ಅಸ್ತ್ರ-ಶಸ್ತ್ರಗಳನ್ನು ಬಳಸುವುದು ಕ್ಷತ್ತ್ರಿಯರಿಗೆ ಕರ್ತವ್ಯ. ಆದರೆ ಅವುಗಳನ್ನು ಸರಿಯಾದ ಕಾಲದಲ್ಲಿ ಸಕ್ರಮವಾಗಿ ಬಳಸಬೇಕಾದ ಜವಾಬ್ದಾರಿ ಇರುತ್ತದೆ. ಇದನ್ನು ಅರಿತಿದ್ದ ಶ್ರೀರಾಮ. ಬಲ – ಅತಿಬಲಗಳಂತಹ ದಿವ್ಯಾಸ್ತ್ರಗಳನ್ನು ಆತ ಸಕಾಲದಲ್ಲೇ ಬಳಸಿದ. ಅಧಿಕಾರಿಗಳಿಗೇ ಪದಾರ್ಥ ಸಿಕ್ಕರೆ, ಆ ದ್ರವ್ಯಕ್ಕೂ ಸಮಾಜಕ್ಕೂ ವ್ಯಕ್ತಿಗೂ ಹೀಗೆ ಎಲ್ಲ ರೀತಿಯಿಂದಲೂ ಕ್ಷೇಮವೇ ಅದರ ಪರಿಣಾಮ. ಯುದ್ಧದ ಸಮನಂತರ ಶ್ರೀರಾಮನು ಸೀತಾಸಮೇತನಾಗಿ ಪುಷ್ಪಕವಿಮಾನವನ್ನು ಏರಿ ಅಯೋಧ್ಯೆಗೆ ಮರಳುತ್ತಾನೆ. ಲಂಕೆಯಿಂದ ಅಯೋಧ್ಯೆಯ ತನಕ ಶ್ರೀರಾಮನ ಸಾಂಗತ್ಯವನ್ನು ಮಾಡಿದ ಆ ವಿಮಾನಕ್ಕೆ ರಾಮನನ್ನು ಬಿಟ್ಟು ತೆರಳುವುದು ಬಹಳ ಕಷ್ಟವೇ ಸರಿ. ಪ್ರತಿಯೊಂದು ಪದಾರ್ಥವೂ ಕೂಡ ತನ್ನ ಯೋಗ್ಯತೆಗೆ ಸಮನಾದ ವ್ಯಕ್ತಿ ಸಿಕ್ಕಾಗ ಅದು ಧನ್ಯತೆಯ ಭಾವವನ್ನು ಹೊಂದುತ್ತದೆ ಎಂಬುದಾಗಿ ಯೋಗಶಾಸ್ತ್ರವು ಸಾರುತ್ತದೆ. ಸತ್ಯವನ್ನು ಯಾರು ಅನುಷ್ಠಾನ ಮಾಡುತ್ತಾರೋ ಅವರ ಬಳಿ ಎಲ್ಲಾ ರತ್ನಗಳು ಸನ್ನಿಹಿತವಾಗುತ್ತವೆ ಎಂದು. ಅಂದರೆ ಶ್ರೀರಾಮನ ಸಾಂಗತ್ಯ ಪುಷ್ಪಕವಿಮಾನಕ್ಕೆ ಇಷ್ಟವಾಯಿತು. "ತಾನು ನಿನ್ನ ಬಳಿಯೇ ಇರುತ್ತೇನೆ" ಎಂದು ಆ ವಿಮಾನ ಹೇಳಿತು. ಆಗ ಶ್ರೀರಾಮ ಹೇಳಿದ ಮಾತು ಪ್ರಾಮಾಣಿಕತೆಯ ದ್ಯೋತಕ. "ನೀನು ಕುಬೇರನ ಬಳಿಯಲ್ಲಿ ಇರಬೇಕಾದವನು. ಅವನ ಪದಾರ್ಥ. ಹಾಗಾಗಿ ನೀನು ಅಲ್ಲಿಗೇ ಹೋಗು. ಬೇಕಾದ ಕರೆಯುತ್ತೇನೆ" ಎಂದು ಹೇಳಿ ಕಳಿಸುತ್ತಾನೆ. ಆ ವಿಮಾನವನ್ನಾದರೋ ಕುಬೇರನನ್ನು ಸೋಲಿಸಿ ರಾವಣ ಪಡೆದಿದ್ದ. ರಾವಣನನ್ನು ಸೋಲಿಸಿದ್ದರಿಂದ ಶ್ರೀರಾಮನು ಅದನ್ನು ಇಟ್ಟುಕೊಂಡರೆ ತಪ್ಪೇನಿಲ್ಲ. ಆದರೆ ಬ್ರಹ್ಮನಿಂದ ಸಂಪಾದಿತವಾದ ವಸ್ತು ಕುಬೇರನ ಸ್ವತ್ತು ಎಂದು ತಿಳಿದು ಆ ದಿವ್ಯವಾದ ವಸ್ತುವಿಗೆ ಪ್ರಾಮಣಿಕತೆಯನ್ನು ಸಲ್ಲಿಸಿದ ಶ್ರೀರಾಮ, ತಾನೇ ಅನುಭವಿಸಬೇಕೆಂಬ ಆಸೆ ಪಡಲಿಲ್ಲ.

ಸೂಚನೆ : 19/12/2021 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.

Saturday, December 18, 2021

ವಸ್ತ್ರಾಭರಣ - 1 ಒಂದು ಯೋಗಸಾಧನ (Vastra bharana -1 Ondu yogasaadhana)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)


  

ಅಶನ-ಉಡುಪು-ವಸತಿ ಇವುಗಳ  ಅವಶ್ಯಕತೆಗಳು ಪ್ರತಿ ಮಾನವನಿಗೂ ಉಂಟು. ಎಷ್ಟು ಚೊಕ್ಕವಾಗಿ ಇವುಗಳ ಪೂರೈಕೆ ಎಂಬುದರಮೇಲೆ ಜನ, ಜನಾಂಗ, ನಾಗರೀಕತೆಗಳನ್ನೂ ಅಳೆದುಬಿಡುತ್ತಾರೆ. ಗೆಡ್ಡೆ ಗೆಣಸುಗಳ ಆಹಾರ, ನಾರುಮಡಿ, ಎಲೆಗಳ ಬಟ್ಟೆ, ತೆಂಗಿನ ಗರಿಯ ಚಪ್ಪರವಿದ್ದರೆ ಬಡವರು ಅಥವಾ ವನವಾಸಿಗಳು ಎಂಬುದಾಗಿ ಪರಿಗಣಿಸುವುದು ಸಹಜ. ಬಂಗಲೆ, ರೇಷ್ಮೆ ಬಟ್ಟೆ, ಪಂಚ-ಭಕ್ಷ್ಯ ಪರಮಾನ್ನವು ಆಡ್ಯರ ಲಕ್ಷಣವೆಂದು ಭಾವಿಸುತ್ತಾರೆ. ಈ ಮಾನದಂಡದಿಂದ ನೋಡಿದರೆ, ಅನೇಕ ಸಹಸ್ರಮಾನಗಳಿಂದಲೂ ಕೂಡ ವಲಸೆಗಾರರ ಸಾಕ್ಷ್ಯದ ಆಧಾರದ ಮೇಲೆ ಹೇಳುವುದಾದರೂ ಭಾರತ ದೇಶವು ತುಂಬಾ ಆಡ್ಯರ ನಾಡು ಎಂಬುದಾಗಿಯೇ ಪ್ರಸಿದ್ಧಿ. ಭಾರತದ ರೇಷ್ಮೆ ಹಾಗೂ ಹತ್ತಿಯ ವಸ್ತ್ರಗಳು ಗ್ರೀಸ್, ರೋಮ್ ಮತ್ತು ಮಧ್ಯ ಏಷ್ಯಾದ ದೇಶಗಳಲ್ಲಿ ಪ್ರಖ್ಯಾತವಾಗಿದ್ದವು. ಅಡಿಯಿಂದ ಮುಡಿಯವರೆಗೆ ದೇಹದ ನಾನಾಂಗಗಳನ್ನು ಅಲಂಕರಿಸಿ ಸೌಂದರ್ಯವನ್ನು ವರ್ಧಿಸುವಂತಹ ಬಳೆಗಳು, ಡಾಬುಗಳು, ಹಾರಗಳು, ಉಂಗುರಗಳು, ಬೊಟ್ಟುಗಳೇ ಮೊದಲಾದ ಆಭರಣಗಳು ಅನಾದಿ ಕಾಲದಿಂದಲೂ ಭಾರತದಲ್ಲಿ ಬಳಕೆಯಲ್ಲಿದ್ದಿವೆ. ವಸ್ತ್ರಗಳನ್ನು ಬಣ್ಣಿಸುವ ಕಲೆಯಲ್ಲಿ ಭಾರತೀಯರು ವಿಖ್ಯಾತರು. ಹೆಣ್ಣಾಗಲಿ ಗಂಡಾಗಲಿ,  ಸರ್ವಾಂಗ ಸುಂದರವಾಗಿ ಪ್ರಸ್ತುತಪಡಿಸಿಕೊಳ್ಳುವಂತಹ ವಸ್ತ್ರಾಭರಣಗಳು ಭಾರತದ ಪ್ರತಿಯೊಂದು ಜನಪದದಲ್ಲಿಯೂ ವಿವಿಧವಾಗಿಯೂ ಪುಷ್ಕಳವಾಗಿಯೂ ಕಂಡು ಬರುತ್ತವೆ. ಉಡುವವರಿಗೆ ಸೌಖ್ಯವನ್ನೂ, ನೋಡುಗರಿಗೆ ಆಹ್ಲಾದವನ್ನೂ, ಸಮಾಜಕ್ಕೆ ಹೆಮ್ಮೆಯನ್ನೂ ತಂದುಕೊಡುವ ಉಡುಗೆ ತೊಡುಗೆಗಳ ಪರಂಪರೆಯೇ ಭಾರತದ್ದು. 


ಆದರೆ ಭಾರತೀಯರ ಮೇಧೆ ಕೇವಲ ಅಷ್ಟರಲ್ಲೇ ನಿಲ್ಲುವುದಿಲ್ಲ. ಭಾರತೀಯರು ಜೀವನದಲ್ಲಿ ಭೋಗವನ್ನು ಪುಷ್ಕಳವಾಗಿ ಅನುಭವಿಸಿದರೂ ಯೋಗಕ್ಕೂ ಅಷ್ಟೇ ಅಥವಾ ಇನ್ನೂ ಮಿಗಿಲಾದ ಸ್ಥಾನವನ್ನು ಕೊಟ್ಟವರು. ಇಲ್ಲಿ ಯೋಗವೆಂದರೆ ಕೇವಲ ಆಸನ-ಪ್ರಾಣಾಯಾಮಗಳಲ್ಲ. ಆಸನ-ಪ್ರಾಣಾಯಾಮಗಳು ಯಾವ ಧ್ಯೇಯಕ್ಕೆ ಸಾಧನವೋ, ಅಂತಹ ಸಮಾಧಿ-ಸಾಮ್ರಾಜ್ಯದ ಭೋಗವೇ ಯೋಗವೆನಿಸಿಕೊಳ್ಳುತ್ತದೆ. ಹಂಸತೂಲಿಕೆಯಲ್ಲಿ ಪವಡಿಸಿದರೂ, ಧ್ಯಾನದಲ್ಲಿ ಕುಳಿತು ಕಣ್ಣು ಮುಚ್ಚಿದರೆ ಹೊಂಬೆಳಕಿನ ತೆಕ್ಕೆಯಲ್ಲಿ ವಿಶ್ರಮಿಸುವವನೇ  ಪೂರ್ಣಜೀವನವನ್ನು ಮಾಡಿದಂತೆ. ಧನ- ಕನಕ-ಸಮೃದ್ಧಿ-ಆಯುಷ್ಯ-ಆರೋಗ್ಯಗಳ ಜೊತೆಯಲ್ಲಿ ಆನಂದ-ನೆಮ್ಮದಿ-ಶಾಂತಿಗಳ ಗಣಿಯಾಗಿರುವ ಒಂದು ಬಾಳಾಟವೇ ಯೋಗಮಯ ಜೀವನ. ನಿತ್ಯಜೀವನದಲ್ಲಿ ಬಳಸುವ ಪ್ರತಿಯೊಂದು ವಿಷಯದಲ್ಲೂ/ಪದಾರ್ಥದಲ್ಲಿಯೂ ಯೋಗ-ಭೋಗಗಳ ಸಂಗಮವನ್ನು ತಂದುಕೊಳ್ಳುವ ಜಾಣ್ಮೆ ಭಾರತೀಯರಲ್ಲಿತ್ತು. ಆಚಾರ-ವಿಚಾರ-ವ್ಯವಹಾರ-ದ್ರವ್ಯ-ದೇಶ-ಕ್ರಿಯೆ ಎಲ್ಲದರಲ್ಲಿಯೂ ಹೆಜ್ಜೆಹೆಜ್ಜೆಯಲ್ಲಿಯೂ ಈ ಜಾಣ್ಮೆ ಕಂಡುಬರುತ್ತದೆ. ಅಂತಹ ಒಂದು ಪೂರ್ಣವಾದ ಯೋಗಮಯ ಜೀವನದಲ್ಲಿ ವಸ್ತ್ರಾಲಂಕಾರಗಳನ್ನು ಭಾರತೀಯರು ಹೇಗೆ ಸಂಯೋಜಿಸಿದರು? ಪಟ್ಟೆ-ಪೀತಾಂಬರಗಳು, ಹೊನ್ನಾಭರಣಗಳು ಸೌಂದರ್ಯ-ಐಶ್ವರ್ಯಗಳನ್ನು ವರ್ಧಿಸುವುದನ್ನು ಒಪ್ಪಬಹುದು. ಆದರೆ ಇವುಗಳಲ್ಲಿ ಯೋಗವೆಲ್ಲಿದೆ ? ಯೋಗವು ಒಳಸ್ಥಿತಿಯಾದರೆ ಉಡುಪಿಗೂ ಯೋಗಕ್ಕೂ ಏನು ಸಂಬಂಧ ಎಂಬ ಕುತೂಹಲ ಕಾಡುತ್ತದೆ. 


ಒಗಟಿನಂತಿರುವ ಈ ಮಾತನ್ನು ಅರ್ಥೈಸಿಕೊಳ್ಳಬೇಕಾದರೆ ಉಡುಪಿಗೂ ನಮ್ಮ ಧ್ಯೇಯಕ್ಕೂ ಇರುವ ಸಂಬಂಧವನ್ನು ಗಮನಿಸಬೇಕು. ನೀರಿನಲ್ಲಿ ಈಜುವಾಗ ನೀರಿನ ಹರಿವೆಯನ್ನು ಪ್ರತಿಭಟಿಸಬಾರದು, ಮಲಗುವಾಗ ಮೈ ಬಿಗಿಯ ಬಾರದು, ಅಂತರಿಕ್ಷದಲ್ಲಿ ಹಾರುವಾಗ ಹೊರ ವಾತಾವರಣದ ಕುಂದು-ಕೊರತೆಗಳು ತಟ್ಟಬಾರದು. ಹೀಗೆಲ್ಲಾ ಲೆಕ್ಕಾಚಾರವಾಗಿ ಬಟ್ಟೆಗಳನ್ನು ಹೊಂದಿಸಿಕೊಳ್ಳುತ್ತೇವೆ. ವಸ್ತ್ರವು ನಮ್ಮ ಮೇಲೆ ಒಂದು ಪರಿಣಾಮ ಬೀರುತ್ತದೆ ಎಂಬುದನ್ನು ನಾವು ತಿಳಿದೇ ಇದ್ದೇವೆ. ಆದರೆ ಯೋಗಮರ್ಮವನ್ನು ಕಂಡು-ಅರಿಯುವ ಕಣ್ಣು ಇಲ್ಲವಾದ್ದರಿಂದ "ಉಡುಪಿನಿಂದ ಯೋಗ" ಎಂಬುದು ನಮ್ಮ ಅರಿವಿಗೆ ಬಾರದು. ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳ ಯೋಗದೃಷ್ಟಿಯಿಂದ ಬಂದ ವಿಚಾರಗಳನ್ನು ಆಧರಿಸಿದ ಈ ಲೇಖನಮಾಲೆಯಲ್ಲಿ ಭಾರತೀಯರ ಉಡುಗೆ-ತೊಡುಗೆಗಳ ಹಿಂದಿನ ಯೋಗ ರಹಸ್ಯಗಳನ್ನು ಅರಿಯಲು ಯತ್ನಿಸೋಣ.

(ಮುಂದುವರಿಯುವುದು)

ಸೂಚನೆ : 18/12/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ನವವಿಧ ಭಕ್ತಿ - 7 ಭಕ್ತಿಗೊಂದು ಸಾಧನ - ಅರ್ಚನೆ (Navavidha Bhakti - 7 Bhaktigondu Saadhana - Archane)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ

(ಪ್ರತಿಕ್ರಿಯಿಸಿರಿ lekhana@ayvm.in)

ಭಗವಂತನನ್ನು ಪೂಜೆ ಮಾಡುವುದು, ಆರಾಧನೆ ಮಾಡುವುದು ಭಕ್ತಿಯ ಒಂದು ಪ್ರಕಾರವೇ. ಅರ್ಚನೆಯೆನ್ನುವುದು ಪೂಜೆಯ ಒಂದು ಅಂಗ. ಪೂಜೆಯಲ್ಲಿ ಭಗವಂತನ ಸ್ತೋತ್ರಗಳನ್ನು, ನಾಮಾವಳಿಯನ್ನು ಹೇಳುತ್ತಾ ಭಗವಂತನ ಮೂರ್ತಿಗೆ ಪರಿಮಳಭರಿತವಾದ ಪುಷ್ಪಗಳನ್ನು ಸಮರ್ಪಿಸುವುದೇ ಅರ್ಚನೆ. 

ಕಮಲ

ಅರ್ಚನೆಗೆ ಕೆಲವು ಪುಷ್ಪಗಳು ವಿಶೇಷವೆಂಬುದಾಗಿ ಸೂಚಿಸಿರುವುದುಂಟು. ಅದರಲ್ಲಿ ಮೊಟ್ಟಮೊದಲ ಸ್ಥಾನ ತಾವರೆಯ ಹೂವಿಗಿದೆ. ಭಗವಂತನ ಎಲ್ಲಾ ರೂಪಗಳನ್ನೂ ಅರ್ಚಿಸುವುದಕ್ಕೆ ಯೋಗ್ಯವಾದ ಪುಷ್ಪಶ್ರೇಷ್ಠವಿದು. ದೇವತೆಗಳ ಅಂಗಾಂಗಗಳಿಗೆ ಕಮಲದ ಹೋಲಿಕೆಯನ್ನು ಕೊಡುವುದುಂಟು. ಪಾದಪದ್ಮ, ಕರಕಮಲ, ಮುಖಾರವಿಂದ, ನಯನಾಂಬುಜ ಮುಂತಾಗಿ ಅನೇಕ ರೀತಿಯಲ್ಲಿ ದೇವತೆಗಳ ಸ್ವರೂಪ ವರ್ಣನೆಯುಂಟು. ಅವರ ಆಸನವೂ ಕಮಲವೇ. ಅವರ ಕೈಯಲ್ಲಿಯೂ ಕಮಲವೇ. ಮಹಾಲಕ್ಷ್ಮಿಯನ್ನು ಪದ್ಮಪ್ರಿಯೆ, ಪದ್ಮಹಸ್ತೆ, ಪದ್ಮದಳಾಯತಾಕ್ಷಿ ಎಂಬುದಾಗಿ ಸ್ತೋತ್ರಮಾಡುತ್ತೇವೆ. ಹಯಗ್ರೀವದೇವರು ಕುಳಿತಿರುವುದು ಬಿಳಿಯ ತಾವರೆಯ ಮೇಲೆ. ಯೋಗಮಾರ್ಗದಲ್ಲಿ ಆರೋಹಣ ಮಾಡುವಾಗ ಮೂಲಾಧಾರದಿಂದ ಸಹಸ್ರಾರದವರೆಗೂ ಇರುವ ಪದ್ಮಗಳನ್ನು ಸೂಚಿಸುವುದಾಗಿದೆ ಈ ಹೊರಗಿನ ಪದ್ಮಗಳು. 

ಕಮಲದ ಮತ್ತೊಂದು ವೈಶಿಷ್ಟ್ಯವೆಂದರೆ ಇದು ನೀರಿನಲ್ಲೇ ವಾಸಮಾಡುತ್ತಿದ್ದರೂ ತಾವರೆಯ ಎಲೆಗೆ ನೀರು ಅಂಟುವುದಿಲ್ಲ – ಜ್ಞಾನಿಗೆ ಪುಣ್ಯ-ಪಾಪಗಳು ಹೇಗೆ ಅಂಟುವುದಿಲ್ಲವೋ ಹಾಗೆ ("ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ"). ಈ ಎಲ್ಲ ಕಾರಣಗಳಿಂದಲೂ ಕಮಲವು ಅರ್ಚನೆಗೆ ಸರ್ವಶ್ರೇಷ್ಠವಾದುದು.

ಇದಲ್ಲದೇ, ಮಲ್ಲಿಗೆ, ಸುಗಂಧರಾಜ, ಜಾಜಿ, ಸೇವಂತಿಗೆ, ಪಾರಿಜಾತ ಮುಂತಾದ ಪರಿಮಳ ಪುಷ್ಪಗಳೂ ಸಹ  ಪೂಜೆಗೆ ಶ್ರೇಷ್ಠವೆಂಬುದಾಗಿ ಪರಿಗಣಿಸಲ್ಪಟ್ಟಿವೆ. ಸೌಗಂಧ್ಯ-ಸೌಕುಮಾರ್ಯಗಳಿಂದ ಕೂಡಿದ ಪುಷ್ಪಗಳನ್ನೇ ಶ್ಲಾಘಿಸಿರುವರು. ಹಾಗೆಯೇ, ನಿರ್ಗಂಧ-ದುರ್ಗಂಧ-ಕಂಟಕ(ಮುಳ್ಳುಗಿಡದ) ಪುಷ್ಪಗಳನ್ನು ಅರ್ಚನೆಯಲ್ಲಿ ನಿಷೇಧಿಸಿರುವರು. ಅದರಲ್ಲೂ ಈಗಿನ ಕಾಲದ ಕಾಗದಪುಷ್ಪವನ್ನು ಹೊರಗಡೆಯ ಅಲಂಕಾರಕ್ಕೆ ಮಾತ್ರ ಬಳಸಬಹುದು, ಅರ್ಚನೆಗೆ ಅಲ್ಲ. ಭೌತಿಕಕ್ಷೇತ್ರದಲ್ಲಿ ಅನೇಕ ಕಡೆ ಅನಿವಾರ್ಯವಾಗಿಬಿಟ್ಟಿರುವುದು ಪ್ಲಾಸ್ಟಿಕ್ ಪದಾರ್ಥಗಳು. ಆದರೆ ಪೂಜೆಗೆ ಬೇಕಾಗಿರುವ ಧರ್ಮವನ್ನು ಅದರ ಸ್ಪರ್ಶವೇ ಕುಂಠಿತ ಮಾಡುವುದರಿಂದ ಅವುಗಳನ್ನು ಪೂಜೆಯಲ್ಲಿ ಬಳಸಲೇ ಕೂಡದು ಎಂಬುದು ಹಿರಿಯರ ಅಭಿಪ್ರಾಯವಾಗಿದೆ.

ಪುಷ್ಪ ಮತ್ತು ದೇವತೆಗಳು 

ಯಾವ  ದೇವರಿಗೆ ಯಾವ ಪುಷ್ಪ ಪ್ರಿಯ, ಯಾವುದು ನಿಷಿದ್ಧ ಎನ್ನುವ ಪಟ್ಟಿಯೇ  ಇದೆ. ಈ ನಿರ್ಣಯದಲ್ಲಿ ಹೂವಿನ ವರ್ಣವು ಮುಖ್ಯ ಪಾತ್ರ ವಹಿಸುತ್ತದೆ. ಉದಾಹರಣೆಗೆ ನಾರಾಯಣನಿಗೆ ಬಿಳಿ ಅಥವಾ ಹಳದಿ ಬಣ್ಣದ ಪುಷ್ಪಗಳು ಪ್ರಿಯವೆಂದೂ, ಶಿವನಿಗೆ ಕೆಂಪು ಬಣ್ಣದ ಕುಸುಮಗಳು ಪ್ರಿಯವೆಂದೂ ಸೂಚಿಸಿದ್ದಾರೆ. ಸುದರ್ಶನಮೂರ್ತಿಯನ್ನು ಹೊರತುಪಡಿಸಿ ಉಳಿದ ವಿಷ್ಣುವಿಗೆ ಸಂಬಂಧಿಸಿದ ದೇವತೆಗಳ  ಪೂಜೆಗೆ ಕೆಂಪುಬಣ್ಣದ ಹೂವುಗಳನ್ನು ಸಾಮಾನ್ಯವಾಗಿ ಬಳಸುವುದಿಲ್ಲ. ಸುದರ್ಶನನನ್ನೇ ಪೂಜೆ ಮಾಡುವಾಗ ಅದು ಶ್ರೇಷ್ಠ. ಇಲ್ಲಿ ದೇವತೆಗಳಿಗೆ ಪ್ರಿಯ ಎಂದರೆ ಏನು ಎಂಬ ಪ್ರಶ್ನೆ ಏಳುತ್ತದೆ: ಯಾವ ಬಣ್ಣವು ಯಾವ ದೇವತಾಭಾವಕ್ಕೆ ಸಹಾಯವಾಗುವುದೋ ಆ ಬಣ್ಣವನ್ನು ಆ ದೇವತೆಗಳಿಗೆ ಪ್ರಿಯ ಎಂಬುದಾಗಿ ತಿಳಿಸಿರುವರು.  

ಇದಲ್ಲದೇ, ಪುಷ್ಪಗಳನ್ನು ಬೆಳೆಸುವ ಸ್ಥಳ, ವಿಧಾನ, ಅವುಗಳನ್ನು ಸಂಗ್ರಹ ಮಾಡುವ ಕ್ರಮವೂ ಪೂಜೆಗೆ ಸಹಾಯಕವಾಗಿರಬೇಕು. ಮಲಗಳಿಂದ ಕೂಡಿದ ಜಾಗಗಳು ಅಶುಚಿಯ ಸ್ಥಳಗಳು. ಅಲ್ಲಿ ಬೆಳೆಯುವ ಕುಸುಮಗಳು ಪೂಜೆಗೆ ಯೋಗ್ಯವಲ್ಲ. ತನ್ನ ಮನೆಯಲ್ಲಿಯೇ ನೀರಿನ ಧಾರೆಯ ಜೊತೆಯಲ್ಲಿ ಮನೋಧಾರೆಯನ್ನೂ ಸೇರಿಸಿ ಬೆಳೆಸಿದ ಪುಷ್ಪಗಳು ಸರ್ವಶ್ರೇಷ್ಠ. (ಆದರೆ ಇತರರ ಮನೆಯ ಹೂಗಳನ್ನು ಅವರ ಅನುಮತಿ ಪಡೆಯದೇ ಕಿತ್ತು ಪೂಜೆಗೆ ಉಪಯೋಗಿಸುವುದು ಸರ್ವಥಾ ನಿಷಿದ್ಧ)!

ಪತ್ರಗಳು

ಅರ್ಚನೆಗೆ ಉಪಯೋಗಿಸಬಹುದಾದ ಕೆಲವು ಪತ್ರ(ಎಲೆ)ಗಳೂ ಉಂಟು. ತುಳಸಿಯನ್ನು ವಿಷ್ಣು ಮೂರ್ತಿಗಳಿಗೂ, ಬಿಲ್ವಪತ್ರೆಯನ್ನು ಶಿವನ ಪೂಜೆಗೂ, ಗರಿಕೆಯನ್ನು ಹಯಗ್ರೀವ ಮತ್ತು ಗಣೇಶನ ಪೂಜೆಯಲ್ಲೂ ಬಳಸುವುದನ್ನು ಕಾಣುತ್ತೇವೆ. ತುಳಸಿಯ ದರ್ಶನ-ಸ್ಪರ್ಶನ-ಆಘ್ರಾಣಗಳೇ ಬ್ರಾಹ್ಮೀಸ್ಥಿತಿಗೆ ಕರೆದೊಯ್ಯುವ ಗುಣವನ್ನು ಹೊಂದಿರುವುದನ್ನು ಜ್ಞಾನಿಗಳು ಗುರುತಿಸಿರುವರು. ತುಳಸಿಯ ಅಭಾವದಲ್ಲಿ ಒಣಗಿರುವ ತುಳಸೀದಳವನ್ನೋ ಅಥವಾ ತುಳಸಿಯ ಕಾಷ್ಠವನ್ನಾದರೂ ಬಳಸಬಹುದೆಂಬ ವಿಧಿಯು ಇಲ್ಲಿ ಸ್ಮರಣೀಯ.

ಬಿಲ್ವಪತ್ರವು ಸ್ಪರ್ಶದಿಂದ ವಿಶೇಷವಾದ ಪರಿಣಾಮವನ್ನು ಉಂಟುಮಾಡುವಂತಹುದು. ಮೂರು ದಳದಿಂದ ಕೂಡಿರುವ ಬಿಲ್ವ(ಏಕಬಿಲ್ವಂ)ವನ್ನೇ ಶಿವನಿಗೆ ಅರ್ಪಿಸಬೇಕೆನ್ನುವ ನಿಯಮವನ್ನು ಗಮನಿಸಬಹುದು. ಈ ಮೂರರ

ಅರಿಶಿನ-ಕುಂಕುಮ-ಅಕ್ಷತೆ

ಅರ್ಚನೆಗೆ ಪುಷ್ಪ-ಪತ್ರಗಳಲ್ಲದೆ, ಅರಿಶಿನ ಕುಂಕುಮಗಳನ್ನೂ ಬಳಸುವ ರೂಢಿಯಿದೆ. ಇವು ಮಂಗಳದ್ರವ್ಯಗಳು; ಅರ್ಚನೆಗೆ ಬಳಸಲು ಶ್ರೇಷ್ಠವಾದವುಗಳೇ ಆಗಿವೆ. ಆದರೆ ಯಾವ ದೇವತೆಯ ಪೂಜೆಗೆ ಉಪಯೋಗಿಸಬಹುದೆನ್ನುವುದೂ ಉಂಟು. ದೇವೀ ಪೂಜೆಯಲ್ಲಿ ಇದನ್ನು ಬಳಸಬಹುದು. 

ಅಕ್ಷತೆಯನ್ನೂ ಅರ್ಚನೆಗೆ ಬಳಸುವುದುಂಟು.  ಅಕ್ಷತೆಯನ್ನು ಮಾಡಲು ಪೂರ್ಣವಾದ ಅಕ್ಕಿಕಾಳುಗಳನ್ನೇ ಉಪಯೋಗಿಸಬೇಕು. ಅಕ್ಷತೆಯ ವೈಶಿಷ್ಟ್ಯವೆಂದರೆ, ಅದರಲ್ಲಿ ಬಳಸುವ  ಅಕ್ಕಿಯು ಸಕಲದೇವತೆಗಳೂ ವಾಸಮಾಡುವ ಒಂದು ಧಾನ್ಯ. ಅದರ ಜೊತೆಯಲ್ಲಿ ಸೇರಿಸುವ ಮಂಗಳದ್ರವ್ಯವಾದ ಅರಿಶಿನ ಹಾಗೂ ತುಪ್ಪಗಳೂ ಸಹ ವಿಶೇಷ ಪರಿಣಾಮವನ್ನು ಉಂಟುಮಾಡುವ ದ್ರವ್ಯಗಳೇ ಆಗಿವೆ. ಆದ್ದರಿಂದಲೇ ಅಕ್ಷತೆಯನ್ನು ಎಲ್ಲ ಮಂಗಳ ಕಾರ್ಯಗಳಲ್ಲಿಯೂ ಉಪಯೋಗಿಸುತ್ತಾರೆ. ವಿಷ್ಣುವಿನ ಪೂಜೆಯಲ್ಲಿ ಹಳದಿ ಅಕ್ಷತೆಯನ್ನೂ ಶಿವನ ಪೂಜೆಯಲ್ಲಿ  ಕೆಂಪು ಅಕ್ಷತೆಯನ್ನೂ ಉಪಯೋಗಿಸುವುದು ವೈಜ್ಞಾನಿಕವಾಗಿದೆ. 

ಶ್ಲೋಕ / ಮಂತ್ರ

ಪುಷ್ಪವನ್ನು ಶುದ್ಧಿಮಾಡಿಯೇ ಅರ್ಚನೆಗೆ ತರಬೇಕು. (ಪುಷ್ಪಗಳಿಗೂ ಮದ್ದುಗಳನ್ನು ಹೊಡೆಯುವ ಇಂದಿನ ಪರಿಸ್ಥಿತಿಯಲ್ಲಿ ಇನ್ನೂ ವಿಶೇಷವಾಗಿಯೇ ತೊಳೆಯಬೇಕಾಗುವುದು!) ಪೂಜೆಮಾಡುವವರೂ, ಅದನ್ನು ಶುದ್ಧವಾದ ಮನಸ್ಸಿನಿಂದ ವೀಕ್ಷಿಸಿ ಪ್ರಣವದಿಂದ ಪ್ರೋಕ್ಷಿಸಿ ಪೂಜೆಗೆ ತೆಗೆದುಕೊಳ್ಳಬೇಕು.

ಪುಷ್ಪಗಳನ್ನು, ಶ್ಲೋಕ, ಮಂತ್ರ ಇತ್ಯಾದಿಗಳನ್ನು ಪಠಿಸುತ್ತ ಆಯಾ ದೇವರ ಪಾದಕ್ಕೆ ಸಮರ್ಪಣೆ ಮಾಡುವುದು ರೂಢಿಯಲ್ಲಿದೆ. ಪೂಜೆ ಮಾಡುವಾಗ ಮನಸ್ಸು ಸೋತ್ರ ಅಥವಾ ಮಂತ್ರದಲ್ಲಿ ಲಗ್ನವಾಗಿರಬೇಕು. ಅದು ಭಕ್ತಿಗೆ ಪೋಷಕವಾಗುತ್ತದೆ. ಶತನಾಮಾವಳಿ ಅಥವಾ ಸಹಸ್ರನಾಮಾವಳಿಗಳಲ್ಲಿ ಸಾಮಾನ್ಯವಾಗಿ ಭಗವಂತನ ಗುಣಗಳು, ಅವನ ರೂಪ, ಶೌರ್ಯ, ಪರಾಕ್ರಮ ಮುಂತಾದವು ಇರುವುದರಿಂದ  ಅವುಗಳನ್ನು ಪಠಿಸುವಾಗ ಮನಸ್ಸು ಅವುಗಳ ಅರ್ಥವನ್ನು ಭಾವಿಸಿ ಆಸ್ವಾದಿಸಿದರೆ ಅದು ಭಕ್ತಿಯ ವೃದ್ಧಿಗೆ ಪೋಷಕವಾಗುವುದು. ಹಾಗಲ್ಲದೆ, ಯಾಂತ್ರಿಕ ಅರ್ಚನೆಯಾದರೆ ಹೂವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ವರ್ಗಾವಣೆ (transfer) ಮಾಡುವ ಕೆಲಸ ಆಗುತ್ತದೆಯೇ ವಿನಾ ಇನ್ಯಾವ ಪ್ರಯೋಜನವೂ ಇರುವುದಿಲ್ಲ.

(ಮುಂದುವರಿಯುವುದು)

ಸೂಚನೆ : 18/12/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.