Wednesday, December 8, 2021

ಭಕ್ತಪರಾಧೀನ ಭಗವಂತ (Bhaktaparaadheena Bhagavanta)

ಲೇಖಕಿ: ಆಶಾ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


ತ್ರಿಕೂಟವೆಂಬ ಪರ್ವತ. ಅದರಲ್ಲಿ ಅತಿಸುಂದರವಾದ ಪದ್ಮಸರೋವರ. ಅದರ ನೀರು ಅಮೃತಪ್ರಾಯ. ಅದರಮೇಲೆ ಬೀಸುವತಂಪಾದ ಗಾಳಿಯು ಸುಗಂಧಯುತವಾಗಿದ್ದು ಬಹುದೂರದಲ್ಲಿರುವ ಪ್ರಾಣಿಗಳನ್ನೂ ಆಕರ್ಷಿಸುತ್ತಿತ್ತು. ಹೀಗೇ ಆಕರ್ಷಿಸಲ್ಪಟ್ಟಒಂದು ಮದಗಜ ತನ್ನ ಪರಿವಾರ ಸಮೇತ ಆ ಸರೋವರದಲ್ಲಿ ಜಲಕ್ರೀಡೆಯಾಡಲು ಬಂತು. ಅತ್ಯಂತ ಸಂಭ್ರಮ ಸಂತೋಷಗಳಿಂದಮೈಮರೆತು ತನ್ನ ಪರಿವಾರದವರೊಂದಿಗೆ ಜಲಕ್ರೀಡೆಯಾಡುತ್ತಿತ್ತು. ಸರೋವರದ ನೀರು ಅಲ್ಲೋಲ ಕಲ್ಲೋಲವಾಗಿತ್ತು. ಆದರೆಆನೆಯ ಸಂತೋಷ ಬಹಳ ಕಾಲ ಉಳಿಯಲಿಲ್ಲ. ಎಲ್ಲಿಂದಲೋ ಬಂದ ಮೊಸಳೆಯೊಂದು ಆನೆಯ ಕಾಲನ್ನು ಬಲವಾಗಿ ಹಿಡಿದುಸರೋವರದ ಆಳಕ್ಕೆ ಎಳೆಯತೊಡಗಿತು. ಆನೆಯು ತನ್ನ ಬಂಧುಗಳನ್ನೆಲ್ಲಾ ಆರ್ತವಾಗಿ ಕರೆದು ಕಾಪಾಡುವಂತೆ ಬೇಡಿಕೊಂಡಿತು.ಎಲ್ಲಾ ಬಂಧುಗಳೂ ಎಷ್ಟು ಪ್ರಯತ್ನಿಸಿದರೂ ಮೊಸಳೆಯ ಹಿಡಿತದಿಂದ ಆನೆಯನ್ನು ಪಾರುಮಾಡಲಾಗಲಿಲ್ಲ. ಈ ಎಳೆದಾಟಬಹಳ ಕಾಲದವರೆಗೆ ನಡೆಯಿತು. ದೇಹಬಂಧುಗಳು ಎಷ್ಟೇ ಪ್ರಿಯರಾಗಿದ್ದರೂ ಈ ಬಂಧನದಿಂದ ತಮ್ಮ ಪ್ರಿಯತಮನನ್ನು ಬಿಡಿಸಲುಆಶಕ್ತರಾದರು. ಕಡೆಯಲ್ಲಿ ಆನೆಯು-'ಅನ್ಯಥಾ ಶರಣಂ ನಾಸ್ತಿ", ಎಂಬ ನಿಶ್ಚಯಕ್ಕೆ ಬಂದು ಸರ್ವನಿಯಾಮಕನಾದ ಶ್ರೀಹರಿಯನ್ನೇಆದಿಮೂಲಾ ಎಂದು ಸಂಬೋಧಿಸಿ 'ತ್ವಮೇವ ಶರಣಂ ಮಮ" ಎಂದು ಪ್ರಾರ್ಥಿಸಿತು. ಆ ಸರೋವರದಲ್ಲೇ ಅರಳಿದಕಮಲವೊಂದನ್ನು ಅತ್ಯಂತ ಭಕ್ತಿಯಿಂದ ಸರ್ವ ಶರಣಾಗತ ಭಾವದಿಂದ ದೇವದೇವನಿಗೆ ಸಮರ್ಪಿಸಿತು. ಒಡನೆಯೇ ಶ್ರೀ ಹರಿಯುವೇಗವಾಗಿ ಬಂದು ತನ್ನ ಚಕ್ರದಿಂದ ಮೊಸಳೆಯನ್ನು ಸೀಳಿ ಆನೆಯನ್ನು ಕಾಪಾಡಿದನು. ಮೊಸಳೆಯೂ ಶಾಪಗ್ರಸ್ತ ಗಂಧರ್ವನಾಗಿದ್ದು,ಶ್ರೀಹರಿಯಿಂದ ಶಾಪವಿಮೋಚನೆಗೊಂಡನು.ಈ ಆನೆಯು ಪೂರ್ವ ಜನ್ಮದಲ್ಲಿ ಇಂದ್ರದ್ಯುಮ್ನನೆಂಬ ರಾಜ. ಶ್ರೀಹರಿಯ ಪರಮ ಭಕ್ತ. ಒಮ್ಮೆ ಶ್ರೀಹರಿಯ ಭಜನೆಯಲ್ಲಿರುವಾಗಮಹರ್ಷಿ ಅಗಸ್ತ್ಯರನ್ನು ಆದರಿಸದೇ ಶಾಪಕ್ಕೊಳಗಾಗಿ ಆನೆಯಾಗಿದ್ದವನು. ಆ ಪೂರ್ವಜನ್ಮದ ಅನನ್ಯ ಭಕ್ತಿಯೇ ಆನೆಯರೂಪದಲ್ಲಿದ್ದರೂ ಭಗವಂತನ ಸ್ಮರಣೆಯನ್ನು ಮರೆಯದೇ ಇಷ್ಟು ತೀವ್ರವಾಗಿ ಪ್ರಾರ್ಥಿಸುವಂತೆ ಮಾಡಿತು.

ಈ ಕಥೆ ನಮಗೆಲ್ಲ ಪಾಠವಾಗಿದೆ. ದೇಹಬಂಧುಗಳು ಎಷ್ಟೇ ಹತ್ತಿರದವರಾದರೂ ಆತ್ಮಬಂಧುವಾದ ಭಗವಂತನೇ ಈ ಸಂಸಾರದಅತಿ ಭಯಂಕರವಾದ ಕಟ್ಟಿನಿಂದ ಬಿಡಿಸಬಲ್ಲನು. ಆನೆಯ ವಿಷಯದಲ್ಲೂ ಹಾಗೇ ಆಯಿತು.ಆ ಆನೆಗೇನು ಸಂಸ್ಕೃತ ಅಥವಾ ಇನ್ಯಾವುದಾದರೂ ಭಾಷೆ ಬರುತ್ತಿತ್ತೇ? ಹೇಗೆ ಪ್ರಾರ್ಥಿಸಿತು? ಅದರೊಳಗಿನ ಭಕ್ತಿಯೇ, ಭಾವರೂಪವಾಗಿಪ್ರಾರ್ಥಿಸಿತು. ಶರಣಾಗತನಾಗಿ ಪ್ರಾಮಾಣಿಕತೆಯಿಂದ ಕರೆದಾಗ ಅವನು ನಮ್ಮನ್ನು ಕಾಪಾಡುತ್ತಾನೆ. ರಾಜಾ ಇಂದ್ರದ್ಯುಮ್ನಭಗವಂತನ ವಿಭೂತಿಗಳಾದ ಮಹರ್ಷಿಗಳನ್ನು ಎಂತಹ ಸಂದರ್ಭದಲ್ಲಾದರೂ ಆದರಿಸಬೇಕಿತ್ತು. ರಾಜನು ಉಳಿದವರೆರಿಗೆಮಾದರಿಯಾಗಿರಬೇಕಾಗುತ್ತದೆ. ಭಗವಂತನ ಮೇಲಿಟ್ಟಿರುವ ಭಕ್ತಿ, ಜನ್ಮ ಜನ್ಮಾಂತರಗಳವರೆಗೂ ಫಲನೀಡದೇ ಬಿಡುವುದಿಲ್ಲಎಂಬುದು ಗಜೇಂದ್ರನ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ. ಶ್ರೀರಂಗ ಮಹಾಗುರುಗಳು ಹೇಳಿದಂತೆ- "ಮಾನವ ತನ್ನಹೃದಯದಲ್ಲಿ ಭಗವಂತನಿಗೆ ಜಾಗ ಕೊಟ್ಟಷ್ಟೂ ಆ ತೇಜೋನಿಧಿಯು ತನ್ನ ಮಡಿಲಲ್ಲಿ ಅವನಿಗೆ ಜಾಗ ಕೊಡುತ್ತಾನೆ. ಆಗ "ಸದಾಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀಹರಿ ಎಂದು ಪಲ್ಲವಿ ಹಾಡಬಹುದು".ಗಜೇಂದ್ರನ ಭಕ್ತಿ, ಶರಣಾಗತಿ ನಮಗೆಲ್ಲರಿಗೂ ಪಾಠವಾಗಲಿ.

ಸೂಚನೆ: 8/12/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.