Friday, December 24, 2021

ಜೀವನವೆಂಬ ಜಾರುಗಂಬ (Jaavanavemba Jaarugamba)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
 


ಅದೊಂದು ನಯವಾದ ಜಾರುಕಂಬ. ಮೇಲಾಗಿ ಅದಕ್ಕೆ ಮೇಲಿಂದ ಕೆಳಗಿನವರೆಗೂ ಎಣ್ಣೆ ಸುರಿದಿದ್ದಾರೆ. ಮೇಲುಗಡೆ ಒಂದು ಸುವರ್ಣನಿಧಿ. ಸ್ಪರ್ಧಿಗಳು ಕೆಳಗಿಂದ ಜಾರುಕಂಬದ ಮೇಲೇರಿ ಆ ನಿಧಿಯನ್ನು ಪಡೆಯಬೇಕು. ಈ ಜಾರಿಕೆಯ ಜೊತೆಗೆ ಕೆಳಗಿದ್ದ ಜನರು ಸಣ್ಣ ಕಲ್ಲುಗಳಿಂದ ಹತ್ತುವವನ ಮೈಗೆ ತಾಕುವಂತೆ ಹೊಡೆಯುತ್ತಾರೆ ಸಹ. ಇಷ್ಟೆಲ್ಲಾ ಪ್ರತಿಕೂಲ ಸನ್ನಿವೇಶಗಳಲ್ಲಿ ಅವನ್ನೆಲ್ಲಾ ಮೀರಿ ಆ ನಿಧಿಯನ್ನು ಪಡೆಯುವುದೇ ಸ್ಪರ್ಧೆ. ಅನೇಕರು ಪ್ರಯತ್ನಿಸುತ್ತಾರೆ. ಒಬ್ಬ ಯಶಸ್ವಿಯಾಗುತ್ತಾನೆ. ಈ ಸ್ಪರ್ಧೆ ನಮ್ಮೂರಿನಲ್ಲಿ ಗೋಕುಲಾಷ್ಟಮಿಯ ಮರುದಿನ ನಡೆಯುತ್ತಿತ್ತು.

ಇದೊಂದು ಭಾರತೀಯವಾದ ಆಟ. ಹೊರಗಿನಿಂದ ಸ್ಪರ್ಧೆ, ಮನೋರಂಜನೆ. ಆದರೆ ಇದರೊಳಗೆ ಒಂದು ಜೀವನದ ತತ್ತ್ವವಿದೆ. ಈ ಜೀವನ ಒಂದು ಜಾರುಕಂಬ. ಇಲ್ಲಿನ ಸುಖದುಃಖಗಳು ನಮ್ಮನ್ನು ಸದಾಕಾಲವೂ ಕೆಳಸೆಳೆಯುತ್ತವೆ. ನಮ್ಮ ಇಂದ್ರಿಯಗಳು ನಮ್ಮನ್ನು ಜೀವನದ ಅತ್ಯುನ್ನತ ಸ್ಥಾನದಲ್ಲಿ ಇರುವ ಆ ಸುವರ್ಣನಿಧಿಯಾದ, ಪರಮಾನಂದದ ಎತ್ತರಕ್ಕೆ ಏರಲು ಬಿಡುವುದಿಲ್ಲ. ಶಂಕರ ಭಗವತ್ಪಾದರು ತಮ್ಮ ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರದಲ್ಲಿ ಹೇಳುವಂತೆ-ಅಂಧಸ್ಯ ಮೇ ಹೃತವಿವೇಕ ಮಹಾಧನಸ್ಯ, ಚೋರೈರ್ಮಹಾಬಲಿಭಿರಿಂದ್ರಿಯನಾಮಧೇಯೈ: ಮೋಹಾಂಧಕಾರಕುಹರೇ ವಿನಿಪಾತಿತಸ್ಯ ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್||- ಹೇ ಲಕ್ಷ್ಮೀನೃಸಿಂಹನೇ! ಮಹಾ ಬಲಿಷ್ಠರಾದ ಇಂದ್ರಿಯಗಳೆಂಬ ಕಳ್ಳರಿಂದ ನನ್ನ ವಿವೇಕವು ಅಪಹರಿಸಲ್ಪಟ್ಟಿದ್ದರಿಂದ ಅಂಧನಾಗಿ ಮೋಹವೆಂಬ ಅಂಧಕಾರದ ಬಾವಿಯಲ್ಲಿ ಬಿದ್ದಿರುವ ನನ್ನನ್ನು ನಿನ್ನ ಕರಾವಲಂಬನವನ್ನು ನೀಡಿ ಕಾಪಾಡು ಎಂದು ಪ್ರಾರ್ಥಿಸುತ್ತಾರೆ. ಎಂದೇ ಈ ಆಟ ನಮ್ಮ ಜೀವನಲಕ್ಷ್ಯವನ್ನು ನೆನಪಿಸುವುದಾಗಿದೆ. ಕ್ಷಣ ಕ್ಷಣಕ್ಕೂ ಜಾರುತ್ತಿರುವ ಈ ಜೀವನವೆಂಬ ಜಾರುಗಂಬವನ್ನು ಸಾಹಸದಿಂದ ಏರಿ ತುದಿಯಲ್ಲಿ ಬೆಳಗುತ್ತಿರುವ ಪರಮಾತ್ಮನಿಧಿ ಎಂಬ ಆನಂದದ ಎಡೆಗೆ ತಲುಪಿ ಸುಖಿಸಬೇಕಾಗಿದೆ. ಇಂತಹ ಪರಮ ಸಾಹಸಕ್ಕೆ ನಮ್ಮನ್ನು ತಯಾರುಮಾಡಲೆಂದೇ ನಮ್ಮ ಮಹರ್ಷಿಗಳು ಭಾರತೀಯವಾದ ಎಲ್ಲ ವಿದ್ಯೆ,ಕಲೆ, ಆಚಾರ ವಿಚಾರಗಳನ್ನೂ ಕರುಣೆಯಿಂದ ತಂದುಕೊಟ್ಟಿದ್ದಾರೆ. ಜೀವನದ ಕಟ್ಟುಗಳನ್ನೆಲ್ಲ ಬಿಡಿಸಿಕೊಳ್ಳಲು ಕೆಲವು ಚೌಕಟ್ಟುಗಳಿಗೆ ಒಳಪಡಬೇಕಾಗುತ್ತೆ. 

ಜಾರುಗಂಬ ನಮ್ಮನ್ನು ಜಾರಿಸದೇ ಮೇಲೇರುವಂತೆ ಸಹಕಾರಿಗಳಾಗುವಂತೆ ನಮ್ಮ ಜೀವನ ವಿಧಾನದಲ್ಲಿ ಚೌಕಟ್ಟುಗಳನ್ನು ಹಾಕಿಕೊಟ್ಟಿದ್ದಾರೆ. ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು-"ಹೊಳೆ, ಕೆರೆಗಳಿಂದ ನೀರನ್ನು ಹೊತ್ತುತರುವ ಹೆಂಗಸರು ತಲೆಯ ಮೇಲೆ ನೀರಿನ ಪಾತ್ರೆ ಹೊತ್ತು ಜೊತೆಗೆ ಬೇರೆಯ ಮಾತನ್ನೂ ಆಡುತ್ತಿರುತ್ತಾರೆ. ಆದರೆ ಮೇಲಿನ ಪೂರ್ಣಕುಂಭವನ್ನು ಮರೆಯುವುದಿಲ್ಲ. ಅದಕ್ಕೆ ವಿರೋಧವಿಲ್ಲದಂತೆ ಮಾತು, ಅಭಿನಯ ಎಲ್ಲಾ ಮಾಡುತ್ತಾರೆ. ಹಾಗೆಯೇ ನಮ್ಮ ತಲೆಯ ಮೇಲಿರುವ ಪೂರ್ಣನಾದ ಭಗವಂತನನ್ನು ಮರೆಯದೇ ಅದಕ್ಕೆ ವಿರೋಧವಿಲ್ಲದ ರೀತಿ ಬೇರೆ ಬೇರೆ ಕೆಲಸವನ್ನು ಮಾಡಿಕೊಳ್ಳಬೇಕು." ಹಾಗೆಯೇ ಇನ್ನೊಂದು ಮಾರ್ಮಿಕವಾದ ಮಾತನ್ನೂ ಹೇಳಿದ್ದರು-"ಸಂತೆ ವ್ಯಾಪಾರಕ್ಕೆ ಬಂದಿರುವುದು ಸರಿಯೇ. ಹಾಗೆಂದು ವ್ಯಾಪಾರದಲ್ಲಿ ನಿರುತ್ಸಾಹ ಪಡಬೇಕಾಗಿಲ್ಲ. ಆದರೆ ವ್ಯಾಪಾರದ ಉತ್ಸಾಹದಲ್ಲಿ ತನ್ನ ಮನೆಗೆ ಹೋಗಿ ಸೇರಬೇಕಾದ್ದನ್ನು ಮಾತ್ರ ಮರೆಯಬಾರದು." ಇಂದ್ರಿಯಜೀವನವನ್ನು ಕಡೆಗಣಿಸಿ ಎಂದು ಋಷಿಗಳು ಎಲ್ಲೂ ಹೇಳಿಲ್ಲ. ಆದರೆ ಒಳ ಆತ್ಮಜೀವನಕ್ಕೆ ಸಹಕಾರಿಯಾಗುವಂತೆ ಇಂದ್ರಿಯಜೀವನವನ್ನು ಇಟ್ಟುಕೊಳ್ಳುವ ಉಪಾಯವನ್ನು ಹೇಳಿಕೊಟ್ಟಿದ್ದಾರೆ.  ನಾವು ಅವರ ಹೆಜ್ಜೆಯನ್ನು ಅನುಸರಿಸಿದರೆ ಐಹಿಕ ಪಾರಮಾರ್ಥಿಕ ಜೀವನಗಳೆರಡೂ ಆನಂದಮಯ.

ಸೂಚನೆ:  24/12/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.