Saturday, December 18, 2021

ವಸ್ತ್ರಾಭರಣ - 1 ಒಂದು ಯೋಗಸಾಧನ (Vastra bharana -1 Ondu yogasaadhana)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)


  

ಅಶನ-ಉಡುಪು-ವಸತಿ ಇವುಗಳ  ಅವಶ್ಯಕತೆಗಳು ಪ್ರತಿ ಮಾನವನಿಗೂ ಉಂಟು. ಎಷ್ಟು ಚೊಕ್ಕವಾಗಿ ಇವುಗಳ ಪೂರೈಕೆ ಎಂಬುದರಮೇಲೆ ಜನ, ಜನಾಂಗ, ನಾಗರೀಕತೆಗಳನ್ನೂ ಅಳೆದುಬಿಡುತ್ತಾರೆ. ಗೆಡ್ಡೆ ಗೆಣಸುಗಳ ಆಹಾರ, ನಾರುಮಡಿ, ಎಲೆಗಳ ಬಟ್ಟೆ, ತೆಂಗಿನ ಗರಿಯ ಚಪ್ಪರವಿದ್ದರೆ ಬಡವರು ಅಥವಾ ವನವಾಸಿಗಳು ಎಂಬುದಾಗಿ ಪರಿಗಣಿಸುವುದು ಸಹಜ. ಬಂಗಲೆ, ರೇಷ್ಮೆ ಬಟ್ಟೆ, ಪಂಚ-ಭಕ್ಷ್ಯ ಪರಮಾನ್ನವು ಆಡ್ಯರ ಲಕ್ಷಣವೆಂದು ಭಾವಿಸುತ್ತಾರೆ. ಈ ಮಾನದಂಡದಿಂದ ನೋಡಿದರೆ, ಅನೇಕ ಸಹಸ್ರಮಾನಗಳಿಂದಲೂ ಕೂಡ ವಲಸೆಗಾರರ ಸಾಕ್ಷ್ಯದ ಆಧಾರದ ಮೇಲೆ ಹೇಳುವುದಾದರೂ ಭಾರತ ದೇಶವು ತುಂಬಾ ಆಡ್ಯರ ನಾಡು ಎಂಬುದಾಗಿಯೇ ಪ್ರಸಿದ್ಧಿ. ಭಾರತದ ರೇಷ್ಮೆ ಹಾಗೂ ಹತ್ತಿಯ ವಸ್ತ್ರಗಳು ಗ್ರೀಸ್, ರೋಮ್ ಮತ್ತು ಮಧ್ಯ ಏಷ್ಯಾದ ದೇಶಗಳಲ್ಲಿ ಪ್ರಖ್ಯಾತವಾಗಿದ್ದವು. ಅಡಿಯಿಂದ ಮುಡಿಯವರೆಗೆ ದೇಹದ ನಾನಾಂಗಗಳನ್ನು ಅಲಂಕರಿಸಿ ಸೌಂದರ್ಯವನ್ನು ವರ್ಧಿಸುವಂತಹ ಬಳೆಗಳು, ಡಾಬುಗಳು, ಹಾರಗಳು, ಉಂಗುರಗಳು, ಬೊಟ್ಟುಗಳೇ ಮೊದಲಾದ ಆಭರಣಗಳು ಅನಾದಿ ಕಾಲದಿಂದಲೂ ಭಾರತದಲ್ಲಿ ಬಳಕೆಯಲ್ಲಿದ್ದಿವೆ. ವಸ್ತ್ರಗಳನ್ನು ಬಣ್ಣಿಸುವ ಕಲೆಯಲ್ಲಿ ಭಾರತೀಯರು ವಿಖ್ಯಾತರು. ಹೆಣ್ಣಾಗಲಿ ಗಂಡಾಗಲಿ,  ಸರ್ವಾಂಗ ಸುಂದರವಾಗಿ ಪ್ರಸ್ತುತಪಡಿಸಿಕೊಳ್ಳುವಂತಹ ವಸ್ತ್ರಾಭರಣಗಳು ಭಾರತದ ಪ್ರತಿಯೊಂದು ಜನಪದದಲ್ಲಿಯೂ ವಿವಿಧವಾಗಿಯೂ ಪುಷ್ಕಳವಾಗಿಯೂ ಕಂಡು ಬರುತ್ತವೆ. ಉಡುವವರಿಗೆ ಸೌಖ್ಯವನ್ನೂ, ನೋಡುಗರಿಗೆ ಆಹ್ಲಾದವನ್ನೂ, ಸಮಾಜಕ್ಕೆ ಹೆಮ್ಮೆಯನ್ನೂ ತಂದುಕೊಡುವ ಉಡುಗೆ ತೊಡುಗೆಗಳ ಪರಂಪರೆಯೇ ಭಾರತದ್ದು. 


ಆದರೆ ಭಾರತೀಯರ ಮೇಧೆ ಕೇವಲ ಅಷ್ಟರಲ್ಲೇ ನಿಲ್ಲುವುದಿಲ್ಲ. ಭಾರತೀಯರು ಜೀವನದಲ್ಲಿ ಭೋಗವನ್ನು ಪುಷ್ಕಳವಾಗಿ ಅನುಭವಿಸಿದರೂ ಯೋಗಕ್ಕೂ ಅಷ್ಟೇ ಅಥವಾ ಇನ್ನೂ ಮಿಗಿಲಾದ ಸ್ಥಾನವನ್ನು ಕೊಟ್ಟವರು. ಇಲ್ಲಿ ಯೋಗವೆಂದರೆ ಕೇವಲ ಆಸನ-ಪ್ರಾಣಾಯಾಮಗಳಲ್ಲ. ಆಸನ-ಪ್ರಾಣಾಯಾಮಗಳು ಯಾವ ಧ್ಯೇಯಕ್ಕೆ ಸಾಧನವೋ, ಅಂತಹ ಸಮಾಧಿ-ಸಾಮ್ರಾಜ್ಯದ ಭೋಗವೇ ಯೋಗವೆನಿಸಿಕೊಳ್ಳುತ್ತದೆ. ಹಂಸತೂಲಿಕೆಯಲ್ಲಿ ಪವಡಿಸಿದರೂ, ಧ್ಯಾನದಲ್ಲಿ ಕುಳಿತು ಕಣ್ಣು ಮುಚ್ಚಿದರೆ ಹೊಂಬೆಳಕಿನ ತೆಕ್ಕೆಯಲ್ಲಿ ವಿಶ್ರಮಿಸುವವನೇ  ಪೂರ್ಣಜೀವನವನ್ನು ಮಾಡಿದಂತೆ. ಧನ- ಕನಕ-ಸಮೃದ್ಧಿ-ಆಯುಷ್ಯ-ಆರೋಗ್ಯಗಳ ಜೊತೆಯಲ್ಲಿ ಆನಂದ-ನೆಮ್ಮದಿ-ಶಾಂತಿಗಳ ಗಣಿಯಾಗಿರುವ ಒಂದು ಬಾಳಾಟವೇ ಯೋಗಮಯ ಜೀವನ. ನಿತ್ಯಜೀವನದಲ್ಲಿ ಬಳಸುವ ಪ್ರತಿಯೊಂದು ವಿಷಯದಲ್ಲೂ/ಪದಾರ್ಥದಲ್ಲಿಯೂ ಯೋಗ-ಭೋಗಗಳ ಸಂಗಮವನ್ನು ತಂದುಕೊಳ್ಳುವ ಜಾಣ್ಮೆ ಭಾರತೀಯರಲ್ಲಿತ್ತು. ಆಚಾರ-ವಿಚಾರ-ವ್ಯವಹಾರ-ದ್ರವ್ಯ-ದೇಶ-ಕ್ರಿಯೆ ಎಲ್ಲದರಲ್ಲಿಯೂ ಹೆಜ್ಜೆಹೆಜ್ಜೆಯಲ್ಲಿಯೂ ಈ ಜಾಣ್ಮೆ ಕಂಡುಬರುತ್ತದೆ. ಅಂತಹ ಒಂದು ಪೂರ್ಣವಾದ ಯೋಗಮಯ ಜೀವನದಲ್ಲಿ ವಸ್ತ್ರಾಲಂಕಾರಗಳನ್ನು ಭಾರತೀಯರು ಹೇಗೆ ಸಂಯೋಜಿಸಿದರು? ಪಟ್ಟೆ-ಪೀತಾಂಬರಗಳು, ಹೊನ್ನಾಭರಣಗಳು ಸೌಂದರ್ಯ-ಐಶ್ವರ್ಯಗಳನ್ನು ವರ್ಧಿಸುವುದನ್ನು ಒಪ್ಪಬಹುದು. ಆದರೆ ಇವುಗಳಲ್ಲಿ ಯೋಗವೆಲ್ಲಿದೆ ? ಯೋಗವು ಒಳಸ್ಥಿತಿಯಾದರೆ ಉಡುಪಿಗೂ ಯೋಗಕ್ಕೂ ಏನು ಸಂಬಂಧ ಎಂಬ ಕುತೂಹಲ ಕಾಡುತ್ತದೆ. 


ಒಗಟಿನಂತಿರುವ ಈ ಮಾತನ್ನು ಅರ್ಥೈಸಿಕೊಳ್ಳಬೇಕಾದರೆ ಉಡುಪಿಗೂ ನಮ್ಮ ಧ್ಯೇಯಕ್ಕೂ ಇರುವ ಸಂಬಂಧವನ್ನು ಗಮನಿಸಬೇಕು. ನೀರಿನಲ್ಲಿ ಈಜುವಾಗ ನೀರಿನ ಹರಿವೆಯನ್ನು ಪ್ರತಿಭಟಿಸಬಾರದು, ಮಲಗುವಾಗ ಮೈ ಬಿಗಿಯ ಬಾರದು, ಅಂತರಿಕ್ಷದಲ್ಲಿ ಹಾರುವಾಗ ಹೊರ ವಾತಾವರಣದ ಕುಂದು-ಕೊರತೆಗಳು ತಟ್ಟಬಾರದು. ಹೀಗೆಲ್ಲಾ ಲೆಕ್ಕಾಚಾರವಾಗಿ ಬಟ್ಟೆಗಳನ್ನು ಹೊಂದಿಸಿಕೊಳ್ಳುತ್ತೇವೆ. ವಸ್ತ್ರವು ನಮ್ಮ ಮೇಲೆ ಒಂದು ಪರಿಣಾಮ ಬೀರುತ್ತದೆ ಎಂಬುದನ್ನು ನಾವು ತಿಳಿದೇ ಇದ್ದೇವೆ. ಆದರೆ ಯೋಗಮರ್ಮವನ್ನು ಕಂಡು-ಅರಿಯುವ ಕಣ್ಣು ಇಲ್ಲವಾದ್ದರಿಂದ "ಉಡುಪಿನಿಂದ ಯೋಗ" ಎಂಬುದು ನಮ್ಮ ಅರಿವಿಗೆ ಬಾರದು. ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳ ಯೋಗದೃಷ್ಟಿಯಿಂದ ಬಂದ ವಿಚಾರಗಳನ್ನು ಆಧರಿಸಿದ ಈ ಲೇಖನಮಾಲೆಯಲ್ಲಿ ಭಾರತೀಯರ ಉಡುಗೆ-ತೊಡುಗೆಗಳ ಹಿಂದಿನ ಯೋಗ ರಹಸ್ಯಗಳನ್ನು ಅರಿಯಲು ಯತ್ನಿಸೋಣ.

(ಮುಂದುವರಿಯುವುದು)

ಸೂಚನೆ : 18/12/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.