Sunday, December 19, 2021

ಅಷ್ಟಾಕ್ಷರ ದರ್ಶನ -2 ಯೋಽರ್ಥೇ ಶುಚಿಃ ಸ ಹಿ ಶುಚಿಃ (Astakshara Darshana -2 Yo’rthe Shucih Sa Hi Hhucih)


ಲೇಖಕರು :
ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

ಧರ್ಮ-ಅರ್ಥ-ಕಾಮ-ಮೋಕ್ಷ – ಇವುಗಳ ಗಳಿಕೆಯೇ ಭಾರತೀಯರ ಆಧ್ಯಾತ್ಮಿಕ ಚೌಕಟ್ಟು. ಇವುಗಳಲ್ಲಿ ಧರ್ಮವೆಂಬುದರ ಬಗ್ಗೆ ಒಂದು ಪರಿಚಯಾತ್ಮಕ ನೋಟವಾಯಿತು, ಮನುವಿನ ಉಕ್ತಿಯೊಂದರ ಮೂಲಕ. ಅರ್ಥದ ಬಗ್ಗೆಯೂ ಮನುವಿನದೇ ಮೌಲಿಕವಾದ ಕಿರುನುಡಿಯೊಂದುಂಟು: ಅದು "ಯೋಽರ್ಥೇ ಶುಚಿಃ ಸ ಹಿ ಶುಚಿಃ" - "ಯಾರು ಧನದ ವಿಷಯದಲ್ಲಿ ಶುದ್ಧರೋ ಅವರು ತಾನೆ ಶುದ್ಧರು!" ಹಾಗಾದರೆ ಧನಶುದ್ಧಿ ಅಷ್ಟು ಮುಖ್ಯವೇ?

ಸ್ಥೂಲದೃಷ್ಟಿಯವರಿಗೆ ಎಚ್ಚರವಾಗಲೆಂದು, "ಮೃದ್ವಾರಿಗಳಿಂದ(ಷ್ಟೆ) ಶುಚಿಯಾದವನು ಶುಚಿಯೆಂದಲ್ಲ" ಎಂದೂ ಮನು ಎಚ್ಚರಿಸುತ್ತಾನೆ! ಮೃದ್ ಎಂದರೆ ಮಣ್ಣು; ವಾರಿಯೆಂದರೆ ನೀರು. ಇವುಗಳಿಂದಲೂ (ಸೋಪು-ಚೂರ್ಣಗಳಿಂದಲೂ) ಪ್ರಧಾನವಾಗಿ ಆಗುವುದು ಬಾಹ್ಯಶುದ್ಧಿ, ಶರೀರಶುದ್ಧಿ. ಅದು ಬೇಕು, ಹೌದೇ. ಆದರೆ ಸಾಕು - ಎನ್ನಲಾಗದು.

ಇದೇ ತಿಂಗಳ ಎರಡನೇ ತಾರೀಖಿಗೆ 'ಜಾಗೃತಿ ಅರಿವು ಸಪ್ತಾಹ'ವು ಸಂಪನ್ನವಾಯಿತಷ್ಟೆ. ಇದರ ಉದ್ದೇಶ ಭ್ರಷ್ಟಾಚಾರದ ವಿರುದ್ಧ ಅರಿವನ್ನು ಮೂಡಿಸುವುದು. ಎಲ್ಲಾ ರಾಜ್ಯಸರಕಾರಗಳೂ ಇದನ್ನಾಚರಿಸುವಂತಾಗಲು ಪ್ರೇರಣೆ ಬಂದುದು ಕೇಂದ್ರ ವಿಚಕ್ಷಣಾ ಆಯೋಗದಿಂದ. ಸಾರ್ವಜನಿಕ ಆಡಳಿತದ ಸರ್ವಕ್ಷೇತ್ರಗಳಲ್ಲೂ ಭ್ರಷ್ಟಾಚಾರವನ್ನು ತೊಲಗಿಸಬೇಕು; ಧಾರ್ಮಿಕತೆ ಹಾಗೂ ಪ್ರಾಮಾಣಿಕತೆಯಿಂದ ಜೀವನವನ್ನು ನಡೆಸುವಂತೆ ಯುವಪೀಳಿಗೆಗೆ ಸ್ಫೂರ್ತಿ ತುಂಬಬೇಕು – ಇವು ಇದರ ಉದ್ದೇಶಗಳೆಂದು ಆಯೋಗವು ಘೋಷಿಸಿದೆ.

ಸರಕಾರಗಳ ಈ ತೆರನಾದ ಅನೇಕ ಕಾರ್ಯಕ್ರಮಗಳು ತೋರಿಕೆಗಷ್ಟೆ; ಆದರೆ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬಂದ ಕೇಂದ್ರಸರಕಾರದ "ಸತರ್ಕ ಭಾರತ, ಸಮೃದ್ಧ ಭಾರತ"ದ ಸುತ್ತೋಲೆಯು ಪ್ರಭಾವಶಾಲಿಯಾದದ್ದು ಎಂದು ಧೈರ್ಯವಾಗಿಯೇ ಹೇಳಬಹುದು. ಕಾರಣವೇನು? ಮುಖ್ಯವಾಗಿ ಇದನ್ನು ಧಾರ್ಮಿಕತೆಯ ಆಧಾರದ ಮೇಲೆ ನಿಲ್ಲಿಸಲು ಮಾಡಿರುವ ಯತ್ನ.

ಜನರು ಧರ್ಮಪರರಾಗಿ ಬಾಳಬೇಕು. ಧರ್ಮವೆಂಬುದೇ ಧಾರಣ ಮಾಡುವುದು. ಸ್ವಸ್ವಕರ್ತವ್ಯಗಳನ್ನು ಅರಿತು ಸರಿಯಾದ ಹಾದಿಯಲ್ಲಿ ಎಲ್ಲರೂ ಸಾಗುವಂತಾದಲ್ಲಿ ಅದುವೇ ಆರೋಗ್ಯಶಾಲಿ ಸಮಾಜದ ಲಕ್ಷಣ. ಆರೋಗ್ಯವೇ ಸಹಜಧರ್ಮ. ಕರ್ತವ್ಯನಿಷ್ಠೆಯೆಂಬುದು ಸ್ವಪ್ರೇರಣೆಯಿಂದಲೇ ಜಾತವಾದಲ್ಲಿ ಪ್ರಜೆಗಳು ಆರೋಗ್ಯದಿಂದಿದ್ದಾರೆಂಬುದರ ಲಕ್ಷಣವದು; ಯಾರದ್ದೋ ಭಯವೇ ಪ್ರೇರಕವಾಗಿರಬಾರದು.

ಎಲ್ಲ ಜನರಲ್ಲೂ ಸಜ್ಜನಿಕೆಯೆಂಬುದಿರುತ್ತದೆ. ಜೊತೆಗೇ ಎಲ್ಲರಲ್ಲೂ ಪಾಶವೀಭಾವನೆಗಳಿಗೂ ಆಸ್ಪದವಿರುತ್ತದೆ. ಮೊದಲನೆಯದೇ ಸಕ್ರಿಯವಾಗಿರಬೇಕೆಂದರೆ ಆಳುವವರು ಸ್ವಧರ್ಮದಲ್ಲಿರಬೇಕು. ಆಳುವವರ ಧರ್ಮಗಳೆರಡೇ: ದುಷ್ಟದಮನ, ಶಿಷ್ಟರಕ್ಷಣ. ಕಣ್ಣಲ್ಲಿ ಕಣ್ಣಿಟ್ಟು ಮಾಡಬೇಕಾದವಿವು. ಪ್ರತಿಯೊಂದು ಸಂಸ್ಥೆಗೂ ಅನ್ವಯಿಸುವಂತಹವಿವು. ರಾಜ್ಯ-ರಾಷ್ಟ್ರಗಳಿಗಂತೂ ಸರ್ವಥಾ ಅನ್ವಯಿಸುವಂತಹುವೇ.

ಭಯವೆಂಬುದೊಂದೇ ಕೆಲವರಿಗೆ ಸನ್ಮಾರ್ಗದಲ್ಲಿರಲು ಪ್ರೇರಣೆ. ಆದುದರಿಂದ ದಂಡಭಯವೆಂಬ ಕಷ್ಟವು ದುಷ್ಟರಿಗೆ ಕಟ್ಟಿಟ್ಟದ್ದೇ – ಎಂಬುದು ಸರ್ವಗೋಚರವಾಗಿರುವಂತಾಗಬೇಕು. ಆದರೆ ಅದಕ್ಕಿಂತಲೂ ಮುಖ್ಯವಾದುದೆಂದರೆ, ಪ್ರಜೆಗಳು ಸನ್ಮಾರ್ಗದಲ್ಲಿರಲು ಸ್ಫೂರ್ತಿಯನ್ನೀಯಬಲ್ಲ ನಾಯಕತ್ವ.

ನಮ್ಮ ದೇಶದ ಅಪಾರಸಂಪತ್ತನ್ನು ಲೂಟಿಮಾಡಲೆಂದೇ ಬಂದಿದ್ದ ಮೊಘಲರಿಂದಾಗಲಿ ಬ್ರಿಟಿಷರಿಂದಾಗಲಿ ಇದನ್ನು ನಿರೀಕ್ಷಿಸುವುದೆಂತು? ಅವರು ತೊಲಗಿಹೋದ ಹೊಸದರಲ್ಲಿ, ಧರ್ಮಿಷ್ಠರಾಷ್ಟ್ರನಿರ್ಮಾಣದ ಹೊಂಗನಸು ಅಂದಿನ ಹತ್ತುಹಲವು ಪೌರನಾಯಕರಲ್ಲಿ ತುಂಬಿತ್ತು; ಅಂತಹ ಹಂಬಲಕ್ಕೆ ಬೆಂಬಲವಾಗಿ ನಿಂತು, ಅಧೋಗತಿಗೆ ತಳ್ಳಲಾಗಿದ್ದ ನಮ್ಮ ರಾಷ್ಟ್ರವು ಮತ್ತೆ ಪ್ರಗತವಾಗಿ ತಲೆಯೆತ್ತಿ ನಿಲ್ಲುವಂತೆ ಮಾಡಬಹುದಾಗಿತ್ತು. ಆದರೆ "ಧರ್ಮನಿರಪೇಕ್ಷತೆ"ಯೆಂಬ ರೋಗವು ನಾಯಕತ್ವಕ್ಕೆ ತಗುಲಿ ರಾಷ್ಟ್ರಕ್ಕೆ ಕ್ಷಯವು ಬಡಿದಂತಾಯಿತು.

ಆದರೆ ಪೂರ್ವದಲ್ಲಿ ನಮ್ಮನ್ನು ಆಳಿದ ಅನೇಕ ರಾಜ-ಮಹಾರಾಜರುಗಳು ಧಾರ್ಮಿಕವಾಗಿಯೇ ರಾಜ್ಯವನ್ನಾಳುತ್ತಾ ತಮ್ಮ ಉತ್ತಮವಾದ ನಡತೆಯಿಂದಾಗಿ ಪ್ರಜೆಗಳಿಗೂ ಸ್ಫೂರ್ತಿಯನ್ನು ತುಂಬಿದ್ದರು. ವಾಸ್ತವವಾಗಿ ರಾಜನೆಂದರೆ ಯಾರು? "ಯಾವನಲ್ಲಿ ಧರ್ಮವು ರಾಜಿಸುವುದೋ ಆತನೇ ರಾಜನು" – ಎಂಬ ಮಹಾಭಾರತದ ವಚನವನ್ನು ಶ್ರೀರಂಗಮಹಾಗುರುಗಳು ಪದೇ ಪದೇ ಉಲ್ಲೇಖಿಸುತ್ತಿದ್ದರು.

ಹಾಗಿರಲು ಸ್ಫೂರ್ತಿಯು ಅರಸರಿಗೆ ಎಲ್ಲಿಂದ ಬಂದಿತು? ಮನುಕುಲಕ್ಕೇ ಮೂಲನೆನಿಸಿದ ಮನುಮಹಾರಾಜನ ನಡವಳಿಕೆಯಿಂದಲೇ. ದೇಶದ ಪ್ರಜೆಗಳೆಲ್ಲರೂ ಶುದ್ಧವಾದ ಜೀವನವನ್ನು ನಡೆಸಲು ಪ್ರೇರಣಾಪ್ರದವಾದ ಹಲವಂಶಗಳು ಮನುಸ್ಮೃತಿಯಲ್ಲುಂಟು.

ಶುಚಿತ್ವವು ನಮ್ಮಲ್ಲಿ ಮೂಡುವುದೆಂತು? ಬಾಹ್ಯಶುದ್ದ್ಧಿಗಿಂತಲೂ ಮಿಗಿಲಾಗಿ ಅಂತಃಶುದ್ಧಿಯಿಂದ. ಅಂತಃಶುದ್ಧಿಗೆ ಪ್ರಧಾನವಾಗಿ ಬೇಕಾದುದು ದ್ರವ್ಯಾರ್ಜನೆಯಲ್ಲಿಯ ಶುದ್ಧಿ. ನಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಸಂಪತ್ತು ಬೇಕು; ಎಷ್ಟೋ ಧರ್ಮಾಚರಣೆಗಳಿಗಾಗಿಯೂ ಸಂಪತ್ತು ಅವಶ್ಯವೇ. ಎಂದೇ ಕೌಟಲ್ಯನು ಧರ್ಮಕ್ಕೂ ಕಾಮಕ್ಕೂ ಅರ್ಥವು ಬುನಾದಿಯೆನ್ನುವುದು. ಆದರೆ ಅಮಾರ್ಗಸಂಪಾದನೆಯಿಂದ ಸಾಧಿಸಿಕೊಂಡ ಕಾಮಪೂರಣವಿರಲಿ, ಧರ್ಮಾಚರಣವೂ ದೋಷದುಷ್ಟವಾಗುವುದು! ಲಂಚದ ಹಣದಿಂದ ಪ್ರಪಂಚಪ್ರಭುವನ್ನು ಮೆಚ್ಚಿಸಲಾದೀತೇ?

ಸರಕಾರದ ಸೇವೆಯಲ್ಲಿರುವವರು ಯಾವಾಗ-ಹೇಗೆ-ಎಷ್ಟು ಹಣವನ್ನು ಪ್ರಜೆಗಳಿಂದ ದೋಚುವರೆಂದು, ಖಜಾನೆಯಿಂದ ಬಾಚುವರೆಂದು, ಕೌಟಲ್ಯನೂ ತನ್ನ ಅರ್ಥಶಾಸ್ತ್ರದಲ್ಲಿ ಕಾಣಿಸದೆ ಬಿಟ್ಟಿಲ್ಲ.

ಸ್ವಾರ್ಥಪರನಲ್ಲದ ರಾಷ್ಟ್ರನಾಯಕನೊಬ್ಬನು ಬೇಕೆಂದು ಹಲವು ಶತಮಾನಗಳಿಂದ ಪ್ರಾರ್ಥಿಸಿದ ಭಾರತೀಯಜನತೆಗೆ ಉತ್ತರವೊಂದಿಂದು ಸಿಕ್ಕಿರುವಂತಿದೆ. ಎಲ್ಲಿಯವರೆಗೂ ರಾಷ್ಟ್ರನೇತಾರರು ಮಾತ್ರವಲ್ಲದೆ ಅಧಿಕಾರಿಗಳೂ ಪ್ರಜೆಗಳೂ ಮನುವಿನ ಈ ಶುಚಿತ್ವದ ಎತ್ತರಕ್ಕೆ ಹತ್ತಲು ಹಗಲಿರುಳೂ ಎಳಸುವರೋ, ಅಲ್ಲಿಯವರೆಗೂ – ಅಲ್ಲಿಯವರೆಗೆ ಮಾತ್ರ - ದೇಶದ ಕ್ಷೇಮವೆಂಬುದು ಸಿದ್ಧವಾದದ್ದೇ ಸರಿ. ಅಧಿಕಾರಿಗಳೆಂದರೆ ದೇಶಕ್ಕೆ 'ಅಧಿಕ- ಅರಿ'ಗಳಾಗಬಾರದಲ್ಲವೇ?

ಸೂಚನೆ: 19/12/2021 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.