Sunday, December 19, 2021

ಶ್ರೀರಾಮನ ಗುಣಗಳು - 36 ಪ್ರಾಮಾಣಿಕ - ಶ್ರೀರಾಮ (Sriramana Gunagalu -36Pramanika - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



'ಪ್ರಮಾಣ-ಮಾನ' ಎಂಬ ಶಬ್ದಮೂಲವಾದುದು 'ಪ್ರಾಮಾಣಿಕ' ಎಂಬ ಶಬ್ದ. ಯಥಾರ್ಥವಾದುದು, ವಸ್ತುನಿಷ್ಠವಾದುದು, ಮರ್ಯಾದೆಯುಂದ ಕೂಡಿದ್ದು, ಪ್ರಮಾಣದಿಂದ ಕೂಡಿದ್ದು ಎಂಬಿತ್ಯಾದಿ ಅರ್ಥಗಳು ಈ ಪದಕ್ಕೆ ಇವೆ. ಅನೇಕ ವ್ಯಕ್ತಿ ಅಥವಾ ಪದಾರ್ಥಗಳ ಮಧ್ಯೆ ನಾವು ಪ್ರತಿನಿತ್ಯ ಜೀವಿಸುತ್ತೇವೆ. ನಮ್ಮ ಜೀವನ ಸುಖಮಯವಾಗಿ ಸಾಗಬೇಕಾದರೆ ಅಥವಾ ಜೀವದ ಗತಿ ಸದ್ಗತಿಯಾಗಬೇಕಾದರೆ ಎಲ್ಲಾ ವ್ಯಕ್ತಿ ಅಥವಾ ಪದಾರ್ಥಗಳಿಗೆ ಅದರದ್ದೇ ಆದ ಗೌರವ-ಆದರಗಳನ್ನು ಕೊಡಬೇಕಾಗುತ್ತದೆ. ಆಗ ಮಾತ್ರ ಆ ಪದಾರ್ಥದಿಂದ ನಮಗೆ ನೆಮ್ಮದಿ ಸಾಧ್ಯವಾಗುತ್ತದೆ. ಯಾರ ಜೊತೆ ಎಷ್ಟು ಮಾತನಾಡಬೇಕು? ಯಾರ ಜೊತೆ ಹೇಗೆ ವರ್ತಿಸಬೇಕು? ಯಾವ ಪದಾರ್ಥವನ್ನು ಹೇಗೆ ಬಳಸಿಕೊಂಡರೆ ಆ ಪದಾರ್ಥಕ್ಕೂ ಸಾರ್ಥಕ್ಯ. ಇವುಗಳೆಲ್ಲದರ ಒಟ್ಟಾರೆ ಪರಿಭಾಷೆಯಾಗಿ ಬಂದದ್ದೇ 'ಪ್ರಾಮಾಣಿಕ ಅಥವಾ ಪ್ರಾಮಾಣಿಕತೆ ಎಂಬುದು. ಸತ್ಯ, ಧರ್ಮ, ನ್ಯಾಯ, ನಿಷ್ಠೆ ಶ್ರೀರಾಮನ ನಡವಳಿಕೆಯಲ್ಲಿನ ಪ್ರಾಮಾಣಿಕತೆಯಾದರೆ, ವ್ಯಕ್ತಿಶಃ ಹೇಗೆ ನಡೆದುಕೊಳ್ಳಬೇಕೆಂಬುದು ವ್ಯವಹಾರ-ಪ್ರಾಮಾಣಿಕತೆ. ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಮಹತ್ತ್ವವಿರ್ರುತ್ತದೆ ಎಂದು ತಿಳಿದು ಪದಾರ್ಥಗಳ ಸದುಪಯೋಗವು ಕೂಡ ಪ್ರಾಮಾಣಿಕತೆಯ ಮತ್ತೊಂದು ಮಜಲು. 

ಶ್ರೀರಾಮನು ತನ್ನ ಜೀವನ ಪೂರ್ತಿ ಪ್ರಾಮಾಣಿಕತೆಯಿಂದ ಬದುಕಿ ಪ್ರಾಮಾಣಿಕನಾದ. ಇದಕ್ಕೆ ಒಂದೆರಡು ಉದಾಹರಣೆಗಳನ್ನು ಶ್ರೀಮದ್ರಾಮಾಯಣದಲ್ಲಿ ಕಾಣಬಹುದು. ಅಸ್ತ್ರ-ಶಸ್ತ್ರಗಳನ್ನು ಬಳಸುವುದು ಕ್ಷತ್ತ್ರಿಯರಿಗೆ ಕರ್ತವ್ಯ. ಆದರೆ ಅವುಗಳನ್ನು ಸರಿಯಾದ ಕಾಲದಲ್ಲಿ ಸಕ್ರಮವಾಗಿ ಬಳಸಬೇಕಾದ ಜವಾಬ್ದಾರಿ ಇರುತ್ತದೆ. ಇದನ್ನು ಅರಿತಿದ್ದ ಶ್ರೀರಾಮ. ಬಲ – ಅತಿಬಲಗಳಂತಹ ದಿವ್ಯಾಸ್ತ್ರಗಳನ್ನು ಆತ ಸಕಾಲದಲ್ಲೇ ಬಳಸಿದ. ಅಧಿಕಾರಿಗಳಿಗೇ ಪದಾರ್ಥ ಸಿಕ್ಕರೆ, ಆ ದ್ರವ್ಯಕ್ಕೂ ಸಮಾಜಕ್ಕೂ ವ್ಯಕ್ತಿಗೂ ಹೀಗೆ ಎಲ್ಲ ರೀತಿಯಿಂದಲೂ ಕ್ಷೇಮವೇ ಅದರ ಪರಿಣಾಮ. ಯುದ್ಧದ ಸಮನಂತರ ಶ್ರೀರಾಮನು ಸೀತಾಸಮೇತನಾಗಿ ಪುಷ್ಪಕವಿಮಾನವನ್ನು ಏರಿ ಅಯೋಧ್ಯೆಗೆ ಮರಳುತ್ತಾನೆ. ಲಂಕೆಯಿಂದ ಅಯೋಧ್ಯೆಯ ತನಕ ಶ್ರೀರಾಮನ ಸಾಂಗತ್ಯವನ್ನು ಮಾಡಿದ ಆ ವಿಮಾನಕ್ಕೆ ರಾಮನನ್ನು ಬಿಟ್ಟು ತೆರಳುವುದು ಬಹಳ ಕಷ್ಟವೇ ಸರಿ. ಪ್ರತಿಯೊಂದು ಪದಾರ್ಥವೂ ಕೂಡ ತನ್ನ ಯೋಗ್ಯತೆಗೆ ಸಮನಾದ ವ್ಯಕ್ತಿ ಸಿಕ್ಕಾಗ ಅದು ಧನ್ಯತೆಯ ಭಾವವನ್ನು ಹೊಂದುತ್ತದೆ ಎಂಬುದಾಗಿ ಯೋಗಶಾಸ್ತ್ರವು ಸಾರುತ್ತದೆ. ಸತ್ಯವನ್ನು ಯಾರು ಅನುಷ್ಠಾನ ಮಾಡುತ್ತಾರೋ ಅವರ ಬಳಿ ಎಲ್ಲಾ ರತ್ನಗಳು ಸನ್ನಿಹಿತವಾಗುತ್ತವೆ ಎಂದು. ಅಂದರೆ ಶ್ರೀರಾಮನ ಸಾಂಗತ್ಯ ಪುಷ್ಪಕವಿಮಾನಕ್ಕೆ ಇಷ್ಟವಾಯಿತು. "ತಾನು ನಿನ್ನ ಬಳಿಯೇ ಇರುತ್ತೇನೆ" ಎಂದು ಆ ವಿಮಾನ ಹೇಳಿತು. ಆಗ ಶ್ರೀರಾಮ ಹೇಳಿದ ಮಾತು ಪ್ರಾಮಾಣಿಕತೆಯ ದ್ಯೋತಕ. "ನೀನು ಕುಬೇರನ ಬಳಿಯಲ್ಲಿ ಇರಬೇಕಾದವನು. ಅವನ ಪದಾರ್ಥ. ಹಾಗಾಗಿ ನೀನು ಅಲ್ಲಿಗೇ ಹೋಗು. ಬೇಕಾದ ಕರೆಯುತ್ತೇನೆ" ಎಂದು ಹೇಳಿ ಕಳಿಸುತ್ತಾನೆ. ಆ ವಿಮಾನವನ್ನಾದರೋ ಕುಬೇರನನ್ನು ಸೋಲಿಸಿ ರಾವಣ ಪಡೆದಿದ್ದ. ರಾವಣನನ್ನು ಸೋಲಿಸಿದ್ದರಿಂದ ಶ್ರೀರಾಮನು ಅದನ್ನು ಇಟ್ಟುಕೊಂಡರೆ ತಪ್ಪೇನಿಲ್ಲ. ಆದರೆ ಬ್ರಹ್ಮನಿಂದ ಸಂಪಾದಿತವಾದ ವಸ್ತು ಕುಬೇರನ ಸ್ವತ್ತು ಎಂದು ತಿಳಿದು ಆ ದಿವ್ಯವಾದ ವಸ್ತುವಿಗೆ ಪ್ರಾಮಣಿಕತೆಯನ್ನು ಸಲ್ಲಿಸಿದ ಶ್ರೀರಾಮ, ತಾನೇ ಅನುಭವಿಸಬೇಕೆಂಬ ಆಸೆ ಪಡಲಿಲ್ಲ.

ಸೂಚನೆ : 19/12/2021 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.