Sunday, December 26, 2021

ವಸ್ತ್ರಾಭರಣ - 2 ಸ್ತ್ರೀ-ಪುರುಷರ ವಸ್ತ್ರಗಳ ಬಣ್ಣ (Vastra bharana -2 Stree Purushara Vastragala Banna)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)


ನಮ್ಮ ಸಂಸ್ಕೃತಿಯಲ್ಲಿ ಬಂದಂತೆ ಸ್ತ್ರೀ-ಪುರುಷರ ವಸ್ತ್ರಗಳ ಬಣ್ಣವನ್ನು ಕುರಿತು ಗಮನಿಸೊಣ. ಸಾಮಾನ್ಯವಾಗಿ ಸ್ತ್ರೀಯರು ಬಣ್ಣ-ಬಣ್ಣದ ಸೀರೆಗಳನ್ನು ತೊಡುತ್ತಾರೆ. ಆದರೆ ಪುರುಷರ ಉಡುಪು ಬಿಳಿಯ ಪಂಚೆ-ಉತ್ತರೀಯ. ಅವರ ಆಂಗಿಯೂ ಬಿಳುಪಾಗಿಯೇ ಇರುತ್ತಿತ್ತು. ಇದೇಕೆ ಇಂತಹ ಯುನಿಫಾರ್ಮ್ ? ಈ ರಹಸ್ಯವನ್ನು ಅರ್ಥೈಸಿಕೊಳ್ಳಲು ಯೋಗ ಪ್ರಕ್ರಿಯೆಗಳ ಪರಿಚಯ ಅಗತ್ಯ.   


ಯೋಗದ ಸ್ಥಿತಿಯು ಜೀವ-ದೇವರ ಸಂಯೋಗವೆಂದೂ ಪ್ರಕೃತಿ-ಪುರುಷರ ಸೇರ್ಪಡೆಯೆಂದೂ ಬಣ್ಣಿಸುವುದುಂಟು. ಪುರುಷ-ಪ್ರಕೃತಿ ಎಂಬೀ ತತ್ತ್ವಗಳು ನಮ್ಮ ಶರೀರದಲ್ಲಿಯೇ ಅನುಭವಕ್ಕೆ ಬರುತ್ತವೆ. ನಮ್ಮ ಶರೀರವನ್ನು ನೋಡಿದರೆ, ಇದು ಪಂಚಭೂತಗಳಿಂದ ಮಾಡಲ್ಪಟ್ಟಿದೆ. ಇಲ್ಲಿ ಹೊರ ಲೋಕದ ಸಮಾಚಾರವನ್ನು ಗ್ರಹಿಸಲು ಜ್ಞಾನೇಂದ್ರಿಯಗಳುಂಟು. ಈ ಮಾಹಿತಿಗಳನ್ನು ಉಪಯೋಗಿಸಿ ಲೋಕದಲ್ಲಿ ಹೇಗೆ ಹೆಜ್ಜೆ ಇಡಬೇಕೆಂದು ತೀರ್ಮಾನಿಸುವ ಮನಸ್ಸುಂಟು. ನಮ್ಮ ಸಂಕಲ್ಪವನ್ನು ಕಾರ್ಯರೂಪಕ್ಕೆ ತರಲು ಕೈಕಾಲುಗಳೇ  ಮೊದಲಾದ ಕರ್ಮೇಂದ್ರಿಯಗಳು ಉಂಟು. ಈ ಎಲ್ಲ ಚಟುವಟಿಕೆಗಳು 'ನನ್ನ' ಒಳಿತಿಗಾಗಿ, 'ನನ್ನ' ಇಚ್ಛಾಪೂರ್ತಿಗೆ ಎಂದಾಗ ಅಲ್ಲಿ 'ನಾನು' ಎಂಬ ಅಹಂಕಾರ. ಈ ವ್ಯಾಪಾರಗಳೆಲ್ಲಾ ಚಿತ್ತವೆಂಬ ಸಾಗರದಲ್ಲಿ ಸತತವೂ ಎದ್ದೇಳುವ ಅಲೆಗಳಂತೆ ಜ್ಞಾನಿಗಳಿಗೆ ಕಾಣುತ್ತದೆ. ಈ ಅಲೆಗಳನ್ನು ಚಿತ್ತವೃತ್ತಿಗಳೆಂದು ಕರೆಯುತ್ತಾರೆ. ಚಿತ್ತ, ಮನಸ್ಸು, ಇಂದ್ರಿಯಗಳೇ ಮೊದಲಾದ ಎಲ್ಲಾ ತತ್ತ್ವಗಳೂ ಪ್ರಕೃತಿಗೆ ಸೇರುತ್ತವೆ. ಲೋಕದ ವಿಷಯವನ್ನು ತಿಳಿಯುವುದು, ಕಲ್ಪನಾ ಲೋಕದಲ್ಲಿ ವಿಹರಿಸುವುದು, ಹಿಂದಿನ ಅನುಭವಗಳ ಸ್ಮರಣೆಯನ್ನು ಮಾಡುವುದು ಅಥವಾ ಜಾಡ್ಯದಿಂದ ನಿದ್ರಿಸುವುದು - ಇವೆಲ್ಲ ವೃತ್ತಿಗಳೂ ಪ್ರಕೃತಿಗೆ ಸೇರಿದ್ದು. ಪ್ರಕೃತಿಯನ್ನು ಮೀರಿ ತಾನೇತಾನಾಗಿ ಮೆರೆಯುವವನು ಪುರುಷ. ತಪಸ್ಯೆಯಿಂದ ಎಲ್ಲ ಚಿತ್ತವೃತ್ತಿಗಳನ್ನೂ ನಿಲ್ಲಿಸಿದಾಗ, ನಿಸ್ತರಂಗ ಮಹೋದಧಿಯಂತೆ ಪ್ರಕೃತಿಯು ನಿಷ್ಕ್ರಿಯವಾಗಿ ಪ್ರಕೃತಿಯ ಹಿಂದಿರುವ ಪುರುಷನು / ಪರಮಾತ್ಮನು  ಭಾಸವಾಗುತ್ತಾನೆ. ಈ  ಅನುಭವವೇ ಯೋಗ ಸಮಾಧಿ. ಈ ಸ್ಥಿತಿಯನ್ನು ಪ್ರಕೃತಿ-ಪುರುಷರ ಸಮಾಗಮವೆಂದೂ ಕೆಲವು ಶಾಸ್ತ್ರಗಳು ಕರೆಯುತ್ತವೆ. ಪೂರ್ಣ ಜೀವನಕ್ಕೆ ಪ್ರಕೃತಿ-ಪುರುಷರೀರ್ವರ ಪಾತ್ರವೂ ಆನಿವಾರ್ಯ. 


ಪ್ರಕೃತಿ-ಪುರುಷರ ಸಮಾಗಮವೆಂಬ ಯೋಗದ ಮಾರ್ಮಿಕ ರಹಸ್ಯವನ್ನು ಬಿಂಬಿಸುವ ಕಥೆಯನ್ನು ಲೋಕವೆಂಬ ರಂಗಮಂಚದಲ್ಲಿ, ಗೃಹಸ್ಥ ಜೀವನದಲ್ಲಿ ನೆನಪಿಸುವ ವ್ಯವಸ್ಥೆಯನ್ನು ಭಾರತೀಯ ಋಷಿಗಳು ತಂದಿದ್ದಾರೆ. ಗಂಡು ಹೆಣ್ಣುಗಳಿಬ್ಬರೂ ಒಳಗೆ ಭಗವಂತನನ್ನೇ ಹೊತ್ತಿದ್ದರೂ, ಹೆಣ್ಣು ಪ್ರಕೃತಿಯ ಪಾತ್ರವನ್ನೂ, ಗಂಡು ಪುರುಷನ ಪಾತ್ರವನ್ನೂ ಹಾಕುತ್ತಾರೆ. 


ಪ್ರಕೃತಿಯಲ್ಲಿ ಹುಟ್ಟಿಬರುವ ಚಿತ್ರವಿಚಿತ್ರವಾದ ಅಲೆಗಳನ್ನು, ಅಂದರೆ ಚಿತ್ತವೃತ್ತಿಗಳನ್ನು ನಾನಾ ಬಣ್ಣಗಳಿಂದ ಸೂಚಿಸುತ್ತಾರೆ. ಆದ್ದರಿಂದಲೇ ಪ್ರಕೃತಿಯ ಪಾತ್ರ ವಹಿಸುವ ಸ್ತ್ರೀಯರ ವೇಷ-ಭೂಷಣವು ಚಿತ್ರ-ವಿಚಿತ್ರವಾದ  ಮರುಗು ಬಣ್ಣಗಳಿಂದ ಕೂಡಿರುತ್ತದೆ. 


ಶಾಲಾ-ಕಾಲೇಜುಗಳಲ್ಲಿ ಪ್ರಯೋಗವೊಂದನ್ನು ಗಮನಿಸಿರಬಹುದು. ಚಕ್ರವೊಂದರಲ್ಲಿ ಕಾಮನಬಿಲ್ಲಿನ ಎಲ್ಲ ಬಣ್ಣಗಳನ್ನೂ ಸೇರಿಸಿರುತ್ತದೆ. ಈ ಚಕ್ರವು ತಿರುಗಿದಾಗ, ಎಲ್ಲ ಬಣ್ಣಗಳೂ ಹೋಗಿ ಕೇವಲ ಬಿಳಿಯ ಬಣ್ಣ ಮಾತ್ರ ಕಾಣುತ್ತದೆ. ಇದೇಕೆ ? ಎಲ್ಲ ಬಣ್ಣಗಳೂ ಸಮಪ್ರಮಾಣದಲ್ಲಿ ಒಂದುಗೂಡಿದಾಗ ಅಲ್ಲಿ ತಮ್ಮ ತನವನ್ನು ಕಳೆದುಕೊಂಡು ಬಿಳುಪಾಗಿ ಕಂಗೊಳಿಸುತ್ತವೆ.


ಆದ್ದರಿಂದ ಪ್ರಕೃತಿಯನ್ನು ಮೀರಿ, ಎಲ್ಲಾ ಚಿತ್ತವೃತ್ತಿಗಳನ್ನೂ ದಾಟಿದ ಸ್ಥಿತಿಯಲ್ಲಿ ಕಂಗೊಳಿಸುವ ಪುರುಷನನ್ನು ಸೂಚಿಸುವ ಬಣ್ಣ ಬಿಳುಪು. ಎಂದೇ ಪುರುಷನ ಪಾತ್ರ ವಹಿಸುವ ಗಂಡಿಗೆ ಬಿಳಿಯ ಬಣ್ಣದ ಬಟ್ಟೆ. ಆದರೆ ಈ ಲೋಕ ಜೀವನದಲ್ಲಿ ಪುರುಷನ ಪಾತ್ರ ಹಾಕುತ್ತಿದ್ದರೂ, ಈ ಗಂಡು ವಾಸ್ತವಿಕವಾಗಿ  ಪ್ರಕೃತಿಯಲ್ಲಿಯೇ ಓಡಾಡುತ್ತಿದ್ದಾನೆ. ಆದ್ದರಿಂದ ಪ್ರಕೃತಿಯ ಒಂದು ಅಂಶವನ್ನು ಪಂಚೆಯ ಅಂಚಿನ ಬಣ್ಣದ ರೂಪದಲ್ಲಿ ಧರಿಸುತ್ತಾನೆಂಬುದು ಶ್ರೀರಂಗಮಹಾಗುರುಗಳ ಮಾರ್ಮಿಕ ನೋಟ. ಹೀಗೆ ವಸ್ತ್ರದ ಬಣ್ಣದ ಹಿಂದಿನ ವಿಜ್ಞಾನವಿದು. 


ಸೂಚನೆ : 25/12/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.