Showing posts with label author_mohanraghavan. Show all posts
Showing posts with label author_mohanraghavan. Show all posts

Friday, May 26, 2023

The mystic symbolism of Sengol

Dr Mohan Raghavan
Respond to (lekhana@ayvm.in)



The Sengol has been all over the news ever since the announcement of its restoration to the seat of parliament; for the first time since 1947. Historically it was the symbol of authority wielded by the kings of bhārata; most famously by the Tamil kings who called it the Sengol, associated with righteousness, abundance and prosperity. The Sengol or dharma daṇḍa(in Sanskrit) is highly celebrated in Tamil1 and Sanskrit literature2 alike as the personification of dharma, upholding which was considered the greatest duty of the king; in fact, it was their raison d' etre. The word daṇḍadhara3 itself is a synonym for Yama, the lord of dharma in particular and in general to a king. The science of statecraft is often called daṇḍaniti4. However, all of this begs the question, "Why was the daṇḍa chosen to represent royal authority?". The staff is not the greatest of weapons when compared to the sword, mace, spear or bow. Royalty is indicated by the presence of several items like the catra (Umbrella) and cāmara (Whisk). However, the daṇḍa alone is a personification of royal authority. 


śrīranga mahāguru's beautiful exposition on this matter is worth recalling at this juncture. He identifies the king's dharma-daṇḍa or royal sceptre as the replica of merudaṇḍa or backbone which houses the spinal cord. The true king is said to rule over two kinds of kingdoms - the heavenly and the earthly ones5. The heavenly kingdom is the one that yogis see within themselves. The yogis dive deep within and enjoy the greatest bliss that anyone could achieve. Yoga śāstras say that this ultimate bliss is reached only when the yogi enters the sahasrāra or the crown. This state of bliss6 is followed by an experience of nectar or amṛta that pours downwards7, giving joy to every one of the senses and nourishes the physical body. It is thus that the process of Yoga gives unbounded joy within and also freshness and agility of the senses to enjoy the material world outside, albeit with a sense of calmness and balance. Thus such a prince who has learnt the secrets of yoga from his gurus and achieved the same by penance is a master of the inner heavenly kingdom and is also capable of enjoying the material world with a sense of equanimity and balance. 


Such a prince is in due course anointed as a king. His goal is to secure for his subjects, that which he has secured for himself - the two-fold happiness within and in the material. This is the dharma that he must uphold. He is anointed by the rājaguru in a ceremony which reminds him of the source of this dharma and the means to preserve it. His conquest of heavenly joys were made possible by the 'control over the senses' or damā. The dharma daṇḍa or royal sceptre presented to him is none other than a replica of the merudaṇḍa or backbone which houses the spinal cord. It is only with damā, that one ascends the suśumna within the spinal cord and enjoys the bliss of joy within the sahasrāra. The chatra over his head is the kunḍalinī that has risen up straight like a rod or daṇḍa and holds its hoods erect over the crown. The chatra also resembles an inverted lotus that showers the bliss of amṛta downwards. This downwards-shower of amṛta is represented by the abhiṣekha of the king where ceremonially purified waters from the sacred rivers are poured downwards from the crown of the head. Thus the rajyābhiṣekha in Indic tradition8 is not a transfer of power but a grand reminder of a king's role on earth. In fact it is said that a king is verily the viṣṇu on earth9, for he secures for his subjects all the joys.


Now how does the king practically achieve this? It is by creating institutional systems for the same if they do not exist. When they do exist he preserves, nourishes and upholds them. First and foremost is the protection of the system of yajña and its underlying methods of tapasya that bestows all boons. In a different age and time,  yajña could be replaced by pūja and another spiritual discipline. Thus he must ensure that the ṛshis who are the custodians of this knowledge of yogavidya (spiritual discipline) are well protected and provided for. The guru-śiṣya parampara must be well protected so that there is an unbroken transmission of the knowledge. This ensures dharma. 


Secondly, the people in their daily lives must exercise due caution so that the vices like anger, lust, greed, infatuation and others do not take over and destroy dharma. Such codes of conduct must be implemented so that all must be able to enjoy the material and the higher joys. Legendary kings like rāma and yudhiṣṭira are celebrated for their ability to uphold the dharma - in individuals, homes, societies and the country at large. They did it rigorously,  meticulously and by setting an example themselves. Bathed in the shower of amṛta within, their mind, words and deeds became gentle, soft,  pleasant,  attractive and devoid of vices.  While they were kind and empathetic,  they were also unsparing in matters of dharma, even if it were their own kith and kin. It is thus no surprise that the dharma rājya is also called 'rāma rājya' and Rama is considered an embodiment of Dharma itself.


It is quite apt that the Dharma daṇḍa or Sengol will soon be installed in its rightful place in the assemblage of those whose duty it is to deliver dharma in our Bharata.


--------------------------------------------------------------------------------------------------------------------------------

1 tirukkuṟal̤: 543: antaṇar nūṟkum aṟattiṟkum ātiyāy niṉṟatu maṉṉavaṉ kol.

2 devībhāgavata purāṇa: 1.17.3: vinā daṇḍam kathaṃ rājyaṃ karoti janakaḥ kila | dharme na vartate loko daṇḍaścenna bhavedyadi

3 śabdakalpadruma: daṇḍadharaḥ:

4 śabdakalpadruma: daṇḍanītiḥ: tat cāṇakyādi prāṇītam nīti śāstram

5 ṛgveda: 4.42.1: mama dvitā rāṣṭraṃ kṣatriyasya viśvāyorviśve amṛtā yathā naḥ

6 ṣaṭcakranirūpaṇam: 40: daśa śata dalam pūrṇacandrāti śubhram…pravilasitavapuḥ kevalānandarūpaṃ

7 ṣaṭcakranirūpaṇam: 43: sudhā dhārā sāraṃ niravadhi vimuñcannatitarām

8 A classic example of the coronation with all these features are found in vālmīki rāmāyaṇam : 6.131.60 onwards: vasiṣṭhovāmadevaścajābālirathakāśyapaḥ | kātyāyanosuyajñaścagautamovijayastathā || abhyaṣiñcannaravyāghraṃprasannenasugandhinā | salilenasahasrākṣaṃvasavovāsavaṃyathā ||

9 devībhāgavatapurāṇam: 6.10.24: nādevāṃśo dadātyannaṃ nāviṣṇuḥ pṛthivīpatiḥ


Wednesday, June 1, 2022

ಆಮೆಯಂತೆ ಒಳ ಸೆಳೆದುಕೊಳ್ಳೋಣ (Ameyante Ola Seledukollona)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)


 


ದಟ್ಟವಾದ ಕಾಡಿನ ಪ್ರಶಾಂತವಾದ ಸರೋವರದ ತೀರದಲ್ಲಿ ಮೂವರು  ಸಂಗಡಿಗರ ಸಹಬಾಳುವೆ. ಆಮೆ, ಜಿಂಕೆ ಮತ್ತು ಹದ್ದು. ಈ ಮೂವರೂ ದಿನವೂ ಕಾಡು ಹರಟೆಯಲ್ಲೂವಿಚಾರ-ವಿನೋದದಲ್ಲೂ ಕಾಲ ಕಳೆಯುತ್ತಿದ್ದರು. ಒಮ್ಮೆ ಬೇಡನೊಬ್ಬನು ಆ ಪ್ರಶಾಂತ ವಾತಾವಾರಣಕ್ಕೆ ಭಂಗ ತರಲು ಬಂದನು. ಹದ್ದು ಹಾರಿಹೋಯಿತುಜಿಂಕೆ ವೇಗವಾಗಿ ಕಾಣದಂತಾಯಿತು. ಆದರೆ ನಿಧಾನವಾಗಿ ನಡೆದಾಡುತ್ತಿದ್ದ ಆಮೆ ಬೇಡನ ಕೈಗೆ ಸಿಲುಕಿತು. ಅದರ ಕೈ ಕಾಲುಗಳನ್ನು ಕಟ್ಟಿತನ್ನ ಬಿಲ್ಲಿನ ತುದಿಗೇರಿಸಿ ಮನೆಯಕಡೆಗೆ ಹೊರಟನು. ಆಗ ಜಿಂಕೆ ಮತ್ತು ಹದ್ದು ಸೇರಿ ಮಿತ್ರನನ್ನು ಉಳಿಸಿಕೊಳ್ಳಲು ಒಂದು ಯುಕ್ತಿಯನ್ನು ರೂಪಿಸಿದರು. ಜಿಂಕೆ ಓಡಿ ಹೋಗಿ ಬೇಡನು ಹೋಗುತ್ತಿದ್ದ ಮಾರ್ಗದಲ್ಲಿ ಸತ್ತಂತೆ ನಟಿಸುತ್ತಾ ಮಲಗಿತು. ಅದನ್ನು ನೋಡಿದ ಬೇಡಆಮೆಯನ್ನು ಬದಿಗಿಟ್ಟು ಜಿಂಕೆಯನ್ನು ಎತ್ತಿಕೊಂಡು ಬರಲು ಹೋದ. ಹತ್ತಿರ ಬರುವವರೆಗೂ ಕಾದಿದ್ದು ಬೇಡ ಕಣ್ಣು ಮಿಟುಕಿಸುವುದರಲ್ಲಿ ಜಿಂಕೆ ಎದ್ದು ಕಾಡಿನೊಳಗೆ ಸೇರಿಕೊಂಡಿತು. ಈ ನಡುವೆ ಹದ್ದು ಆಮೆಯನ್ನು ಕಟ್ಟಿರುವ ಪಾಶವನ್ನು ಕಚ್ಚಿ ಆಮೆಯನ್ನು ಬಿಡಿಸಿತು. ಆಮೆಯು ತನ್ನ ಕೈಕಾಲುಗಳನ್ನು ಒಳಕ್ಕೆ ಸೆಳೆದು ಪಕ್ಕದಲ್ಲೇ ಇದ್ದ ಕಲ್ಲು ಬಂಡೆಗಳ ನಡುವೆ ತಾನೂ ಬಂಡೆಯಂತೆ ಕುಳಿತುಬಿಟ್ಟಿತು. ಯಾವ ಬೇಟೆಯೂ ಸಿಗದೇ ಬೇಡನು ಹತಾಶನಾಗಿ ಹಿಂತಿರುಗಬೇಕಾಯಿತು. 

 

ಆಮೆಯೊಂದು ವಿಶಿಷ್ಟವಾದ ಪ್ರಾಣಿ. ಆಮೆಯ ಉದಾಹರಣೆಯ ಮೂಲಕ ಶ್ರೀರಂಗಮಹಾಗುರುಗಳು ಜೀವನದ ಗಾಢವಾದ ತತ್ತ್ವಗಳನ್ನು ತಿಳಿಸಿಕೊಡುತ್ತಿದ್ದರು. ಆಮೆ ನಾಲ್ಕು ಕಾಲುಗಳುಪುಚ್ಚ ಮತ್ತು ತಲೆಯನ್ನು ಹೊರಕ್ಕೆ ಚಾಚಿ ವ್ಯವಹಾರವನ್ನು ನಡೆಸಬಲ್ಲದು. ಅಂತೆಯೇ ಅವನ್ನು ಒಳಕ್ಕೆ ಸೆಳೆದು ಹೊರಲೋಕದಿಂದ ತನ್ನನ್ನು ಒಳಸೆಳೆದುಕೊಂಡು ತನ್ನ ಗೂಡಿನೊಳಗೆ ಸೇರಿಕೊಂಡು ಆರಾಮವಾಗಿ ಇರಲೂ ಬಲ್ಲದು. ನಾವೂ ಅಂತೆಯೇ ನಮ್ಮ ಇಂದ್ರಿಯಗಳ ಮೂಲಕ ಹೊರಲೋಕದೊಂದಿಗೆ ವ್ಯವಹರಿಸುತ್ತೇವೆ. ಈ ಲೋಕದಲ್ಲಿ ಸುಖವೂ ಉಂಟುಬೇಡನಂತೆ ಬೇಡದ ದುಃಖಕಷ್ಟ ಕಾರ್ಪಣ್ಯಗಳೂ ಉಂಟು. ನಾನಾ ಇಂದ್ರಿಯದ ಬಯಕೆಗಳು. ಒಂದನ್ನು ತೀರಿಸಿದರೆ ಇನ್ನೊಂದು ಪುಟಿದೇಳುತ್ತವೆ. ಇಂದ್ರಿಯಗಳ ಬಯಕೆಗಳು ತೃಪ್ತಿಗೊಳಿಸಿ ತೀರವು. ಹೀಗೆ ಇಂದ್ರಿಯ ಸುಖಕ್ಕಾಗಿ ನಾವು ಆಮೆಯಂತೆ ಓಡಿಇಂದ್ರಿಯಗಳನ್ನು ಹೊರಚಾಚಿ ಪ್ರಯತ್ನಿಸುತ್ತೇವೆ. ಆದರೆ ದುಃಖ ಬಂದಾಗ ಜಿಂಕೆಯಂತೆ ಓಡುವ ಸಾಮರ್ಥ್ಯ ಇಲ್ಲ, ಹದ್ದಿನಂತೆ ಹಾರುವ ಸಾಮರ್ಥ್ಯವೂ ಇಲ್ಲ. ಆದರಿಂದ ಎಷ್ಟು ಓಡಿದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದುಃಖವೆಂಬ ಬೇಡ ಪಕ್ಕದಲ್ಲೇ ಇರುತ್ತಾನೆ. ದುಃಖದಿಂದ ತಪ್ಪಿಸಿಕೊಳ್ಳಲು ಏಕೈಕ ಉಪಾಯವೆಂದರೆ ಇಂದ್ರಿಯಗಳನ್ನು ಒಳಕ್ಕೆ ಸೆಳೆದು ನಮ್ಮ ಗೂಡಿನೊಳಗೆ ಇರುವ ಒಳ ನೆಮ್ಮದಿಯನ್ನು ಅನುಭವಿಸುವುದು. ಇದೇ ಯೋಗವು ತೋರಿಸಿಕೊಡುವ ದಾರಿ. ಆಮೆಯಂತೆ ಇಂದ್ರಿಯಗಳನ್ನು ಒಳಕ್ಕೆ ಸೆಳೆಯುವುದನ್ನು ಯೋಗಶಾಸ್ತ್ರದಲ್ಲಿ ಪ್ರತ್ಯಾಹಾರ ಎನ್ನುತ್ತಾರೆ. ಪ್ರತ್ಯಾಹಾರವು ಧ್ಯಾನನಂತರದ ಸಮಾಧಿ ಶಾಂತಿಗಳಿಗೆ ಅಣಿಮಾಡಿ ಕೊಡುತ್ತದೆ.  


ಹೀಗೆ ಹೊರಜೀವನದ ಬೇಗೆಯಿಂದ ಒಳಜೀವನದೆಡೆಗೆ ನಮ್ಮ ಇಂದ್ರಿಯಗಳನ್ನು ಸೆಳೆಯಲು ಆಮೆಯ ಉದಾಹರಣೆಯಿಂದ ಕಲಿಯೋಣ. 


ಸೂಚನೆ: 31/05/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ. 

Sunday, April 10, 2022

ಶ್ರೀರಾಮ ನಾಮದ ಮಹಿಮೆ (Srirama Namada Mahime)

ಲೇಖಕರು: ಮೋಹನ ರಾಘವನ್.
(ಪ್ರತಿಕ್ರಿಯಿಸಿರಿ lekhana@ayvm.in)

'ರಾಮ ಮಂತ್ರವ ಜಪಿಸೋ' ಎಂಬ ದಾಸರ ಪದವು ಪ್ರಖ್ಯಾತವಾಗಿದೆ. ಮಂತ್ರ ಹಾಗೂ ನಾಮಜಪಗಳು ನಮ್ಮ ದೇಶದ ಸಾಧನಾ ಪದ್ಧತಿಗಳಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆಯುತ್ತದೆ. ರಾಮ ತಾರಕ ಮಂತ್ರ ಹಾಗೂ ಅದರ ಜಪವಿಧಿಗಳು ಜಪಯೋಗದ ಸಾಧನಾ ಮಾರ್ಗವಾಗಿದೆ. ಕಲಿಸಂತರಣ ಉಪನಿಷತ್ತು ವಿವರಿಸುವಂತಹ ಹರೇ ರಾಮ ಹರೇ ಕೃಷ್ಣ ಮಂತ್ರವು ಇಂದು ವಿಶ್ವದಲ್ಲಿಯೇ ಪ್ರಖ್ಯಾತವಾಗಿದೆ. ರಾಮನಾಮ ಜಪದಿಂದ ಭಕ್ತಿಯ ಪರಾಕಾಷ್ಠೆಯನ್ನು ಹತ್ತಿದ ಮಹನೀಯರಲ್ಲಿ ವಾಗ್ಗೇ ಯಕಾರರಾದ ತ್ಯಾಗರಾಜರು ಚಿರಪರಿಚಿತರು. ಇನ್ನು ಈ ನಾಮದ ಮಹಿಮೆಯನ್ನು ಹಾಡುತ್ತಾ 'ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮ ಒಂದಿರಲು ಸಾಕು' ಎಂದು ದಾಸರು ಹಾಡುತ್ತಾರೆ. ಆದರೆ ಇದು ಹೇಗೆ  ಸಾಧ್ಯವಾದೀತು? ರಾಮ ನಾಮಕ್ಕೂ ರಾಮನಿಗೂ ಏನು ಸಂಬಂಧ? ನಮ್ಮ ಚರಿತ್ರೆಯಲ್ಲಿ ದಶರಥನ ಪುತ್ರನಾದ ರಾಮ, ಪರಶುರಾಮ, ಕೃಷ್ಣನ ಅಣ್ಣ ಬಲರಾಮ, ಮುಂತಾದ ಅನೇಕ ರಾಮರು ಉಂಟು. ಹಾಗಾದರೆ ಈ 'ರಾಮ' ಎಂಬ ಹೆಸರನ್ನು ಕರೆದರೆ ಸಿಗುವುದು ಯಾರು ಎಂಬೀ ಪ್ರಶ್ನೆಗಳೆಲ್ಲವೂ ಹುಟ್ಟಿಕೊಳ್ಳುತ್ತದೆ.


ಪದ - ಪದಾರ್ಥಗಳ ಸಂಬಂಧ 


ವಾಕ್ ಮತ್ತು ಅರ್ಥಗಳಿಗೆ ಅನನ್ಯವಾದ ಸಂಬಂಧ ಉಂಟು ಎಂಬುದು ಭಾರತೀಯವಾದ ಪರಂಪರೆಯಲ್ಲಿ ಬಂದಿರುವ ಮಾತು. ಯಾವುದೇ ಒಂದು ಪದ ಮತ್ತು ಆ ಪದದಿಂದ ಸೂಚಿಸಲ್ಪಡುವ ಪದಾರ್ಥದ ನಡುವೆ ಅನನ್ಯವಾದ ಸಂಬಂಧವನ್ನು ಅರಿಯುವುದು ಹೇಗೆ. ಪ್ರಸಿದ್ಧವಾದ ಮೆದುಳಿನ ವಿಜ್ಞಾನಿ ವಿಲಯನೂರ್ ರಾಮಚಂದ್ರನ್ರವರು ವಿವರಿಸುವಂತಹ ಕೆಲವು ಪ್ರಯೋಗಗಳನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಪ್ರಯೋಗದಲ್ಲಿ ಜನರ ಮುಂದೆ ಎರಡು ಪದಾರ್ಥಗಳನ್ನು ಇಟ್ಟರು - ಒಂದು ದುಂಡಗಿರುವಂಥ ಪದಾರ್ಥ, ಮತ್ತೊಂದು ಚೂಪಾದ  ಸೂಜಿ. ಎರಡು ಕಪೋಲಕಲ್ಪಿತ ವಾದ ಹೆಸರುಗಳನ್ನು ಜನರಿಗೆ ಕೊಟ್ಟರು, 'ಬೊಬೋ' ಮತ್ತು 'ಕಿಕಿ'. ಯಾವ ಪದಾರ್ಥಕ್ಕೆ ಯಾವ ಹೆಸರು ಹೊಂದುತ್ತದೆ ? ಹೇಗೆ ನಾಮಕರಣ ಮಾಡುತ್ತೀರಿ ? ಎಂದು ಸಭೆಯನ್ನು ಕೇಳಿದರು.   ಹೆಚ್ಚುವರಿ ಜನ ದುಂಡಗಿರುವ ವಸ್ತುಗೆ 'ಬೋಬೋ' ಎಂದು ಹೆಸರಿಟ್ಟರು, ಸೂಜಿಗೆ 'ಕಿಕಿ' ಎಂದಿಟ್ಟರು. ನಾನಾ ದೇಶ, ಭಾಷೆಗಳ ಮಾತನಾಡುವವರ ಸಮಕ್ಷದಲ್ಲಿ ಈ ಪ್ರಯೋಗವನ್ನು ನಡೆಸಿದಾಗಲೂ ಫಲಿತಾಂಶ ಒಂದೇ ಆಗಿತ್ತು. ದುಂಡಗಿರುವ ಪದಾರ್ಥಕ್ಕೆ ಬೋಬೋ ಎಂಬ ಹೆಸರು ಹೊಂದುತ್ತದೆ, ಕಿಕ್ಕಿ ಎಂಬ ಹೆಸರು ಚೂಪಾಗಿರುವ ಅಂತಹ ಪದಾರ್ಥಕ್ಕೆ ಹೊಂದುತ್ತದೆ ಎಂಬುದು ಸಿದ್ಧವಾಯಿತು. 


ಪ್ರತಿಯೊಂದು ಪದವಾಗಲಿ, ಪದಾರ್ಥವಾಗಲಿ ನಮ್ಮ ಮೇಲೆ ಒಂದು ಸೂಕ್ಷ್ಮವಾದ ಪರಿಣಾಮ ಬೀರುತ್ತದೆ. ಪದ-ಪದಾರ್ಥಗಳೆರಡೂ ನಮ್ಮಲ್ಲಿ ಒಂದೇ ರೀತಿಯ  ಭಾವತರಂಗಗಳನ್ನು ಎಬ್ಬಿಸಿದಾಗ ಎಬ್ಬಿಸಿದಾಗ, ಆ ಪದ-ಪದಾರ್ಥಗಳ ಜೋಡಿ ತುಂಬಾ ಹೊಂದುತ್ತೆ. ಪದಾರ್ಥಕ್ಕೆ ಹೊಂದುವಂತಹ ಪದಪುಂಜಗಳನ್ನು ಹುಡುಕುವುದು ಸಾಧ್ಯವೇ? ಪದಾರ್ಥದ ಅರಿವು ಅನುಭವ ನಮಗೆ ಚೆನ್ನಾಗಿ ಇದ್ದಾಗ ಅಲ್ಲಿಗೆ ಹೊಂದುವ ಪದಪುಂಜಗಳನ್ನು ಹುಡುಕಿ ಪದಾರ್ಥಕ್ಕೆ ಹೆಸರಿಸು ವಂತಹ ಕಾರ್ಯ ಸಾಧ್ಯ. ಇಂಥಹ ಅನೇಕ ಪದ-ಪದಾರ್ಥಗಳ ಜೋಡಿಗಳು ಸಂಸ್ಕೃತವನ್ನು ತಾಯಿಬೇರಾಗಿ  ಇಟ್ಟುಕೊಂಡು ಬಂದಿರುವ ಭಾರತೀಯ ಭಾಷೆಗಳಲ್ಲಿ ಲಭ್ಯವಾಗಿದೆ. 


ಮಂತ್ರಗಳೂ ಅಂತಹ ವಿಶೇಷವಾದಂತಹ ಪದಪುಂಜಗಳು. ಅದರ  ಜೋಡಣೆ, ಅದರಲ್ಲಿ ಉಪಯೋಗಿಸುವಂತಹ ಸ್ವರ-ವ್ಯಂಜನ ಗಳು, ಅವುಗಳನ್ನು ಉಚ್ಚರಿಸುವ ಸ್ವರಸ್ಥಾಯಿ, ಮಾತ್ತ್ರಾಕಾಲಗಳು, ಬಲ, ಪ್ರಯತ್ನಗಳು ಎಲ್ಲವೂ ಕೂಡಿ ಉಚ್ಚರಿಸಿದವರಿಗೆ ಆ ಪದಾರ್ಥದ ಅನುಭವವನ್ನೇ ಮಾಡಿಸಿಬಿಡುತ್ತದೆ. ದೇವತಾ ಸಾನ್ನಿಧ್ಯವನ್ನು ತಂದುಕೊಡುವಂತಹ ಇಂತಹ ವಿಶಿಷ್ಟವಾದ ಪದಪುಂಜಗಳನ್ನು ತಮ್ಮ ಮೇಧೆಯಿಂದ  ಕಂಡುಕೊಂಡು ಲೋಕಕ್ಕೆ ಕೊಟ್ಟವರು ಋಷಿಗಳು-ಕವಿಗಳು ಅನಿಸಿಕೊಳ್ಳುತ್ತಾರೆ. ವಾಲ್ಮೀಕಿ ಮಹರ್ಷಿಗಳು ಅಂತಹ ಕವಿವರೇಣ್ಯರು. ಅವರ ಕೃತಿಯೇ ಆದಿಕಾವ್ಯ. ಅಲ್ಲಿ ವರ್ಣಿತವಾದ ಪದಾರ್ಥವೇ ಸೀತಾ-ರಾಮರ  ತತ್ತ್ವ.     


'ರಾಮ'ನಾಮ ಯಾವ ಪದಾರ್ಥವನ್ನು ತಂದುಕೊಡುತ್ತದೆ


ಜ್ನ್ಯಾನಿಗಳ ಹೃದಯದಲ್ಲಿ ರಮಿಸುವುದರಿಂದ ಅವನು ರಾಮ. ರಾಮ ಎಂಬವನು ಕೇವಲ ಐತಿಹಾಸಿಕವಾದ ವ್ಯಕ್ತಿ ಮಾತ್ರವಲ್ಲ. ಶ್ರೀರಂಗ ಮಹಾಗುರುಗಳು ಹೇಳಿರುವಂತೆ ರಾಮನು ಸ್ಥೂಲದೃಷ್ಟಿಗೆ ಮನುಷ್ಯ ಸೂಕ್ಷ್ಮ ದೃಷ್ಟಿಗೆ ದೇವತೆ ಪರಾ ದೃಷ್ಟಿಗೆ ಪರಂಜ್ಯೋತಿ. ಅವನು ಒಂದು ವ್ಯಕ್ತಿತ್ವ, ಗುಣಗಳ ಸಮೂಹ, ಒಂದು ಶಕ್ತಿ. ಜ್ಞಾನಿಗಳು ಹೃದಯದಲ್ಲಿ ಕಂಡರಿದು ಆನಂದಿಸುವಂತಹ, ಸೀತಾ ಸಮೇತನಾಗಿ ಕೋದಂಡವನ್ನು ಧರಿಸಿರುವ ಒಂದು ರೂಪ,  ಒಂದು ಯೋಗಾನುಭವ. ರಾಮ ಎಂಬ ನಾಮವನ್ನು ಉಚ್ಚರಿಸಿ ಜಪಿಸಿದವರಿಗೆ ರಾಮನ ಗುಣಗಳು ಸಂಕ್ರಾಂತ ವಾಗುತ್ತದೆ. ಸತ್ಯಪರತೆ, ಧರ್ಮದಲ್ಲಿ ನಿಷ್ಠೆ ಮತ್ತು ಆತ್ಮಗುಣಗಳು ಸಿದ್ಧಿಸುತ್ತವೆ. ನಮ್ಮ ಜೀವನವನ್ನು ಧಾರ್ಮಮಯವಾಗಿ ಮಾಡುತ್ತದೆ.


ಸೂಚನೆ: 10/4/2022 ರಂದು "ವಿಜಯ ವಾಣಿ ಕ್ಲಬ್ಈ ಹೌಸ್ ಪ್ರವಚನ" ಲೇಖನವಾಗಿ ಶ್ರೀರಾಮನವಮೀ ವಿಶೇಷ ಅಂಕಣದಲ್ಲಿ ಪ್ರಕಟವಾಗಿದೆ. 

Saturday, March 26, 2022

ವಸ್ತ್ರಾಭರಣ 15 ಉಪಸಂಹಾರ (Vastra Bharana -15 Upasanhara)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)





ಭಾರತೀಯ ಸಂಸ್ಕೃತಿಯಲ್ಲಿ ಬೆಳೆದು ಬಂದಿರುವ ವಸ್ತ್ರ-ಆಭರಣಗಳ ಅಲಂಕಾರ ಪದ್ಧತಿಯನ್ನು ಸವಿವರವಾಗಿ ನೋಡಿದ್ದಾಗಿದೆ. ಮುಖ್ಯವಾಗಿ ಯೋಗಕ್ಕೂ ಅದಕ್ಕೂ ಇರುವ ಸಂಬಂಧವನ್ನು ನೋಡಿದ್ದೆವು. ಇದು ಸಾಮಾನ್ಯ ಮನುಷ್ಯರಿಗೆ, ಸಾಧಕರಿಗೆ ಒಪ್ಪುವ ಅಲಂಕಾರವಾದರೆ, ವಿಶೇಷವಾಗಿ ಯೋಗಿಗಳಿಗೆ ಈಶ್ವರನಾದ ಶಿವ-ನಟರಾಜ ಹಾಗೂ ಯೋಗಕ್ಕೆ ಈಶ್ವರನಾದ ಕೃಷ್ಣನ ಅಲಂಕಾರವೆಂತಿದೆ ಎಂದು ನೋಡೋಣ. ಕೃಷ್ಣನು- ಸ್ಥಿತಿ ಕಾರಕನಾದ ವಿಷ್ಣುಸ್ವರೂಪಿ. 'ಅಲಂಕಾರ ಪ್ರಿಯೋವಿಷ್ಣು:' ಎಂಬಂತೆ ಸ್ಥಿತಿ ಕಾರಕನಾಗಿ, ಧರ್ಮ ರಕ್ಷಕನಾಗಿರುವನು ಲೋಕಕ್ಕೆ ಒಪ್ಪುವಂತಹ ಸುಂದರವಾದ ರೂಪ-ಅಲಂಕಾರವನ್ನು ಧರಿಸುತ್ತಾನೆ. ಆದರೆ ಶಿವ-ನಟರಾಜ ದಿಗಂಬರ, ನಾಗಾಭರಣ. ಇಬ್ಬರ ಅಲಂಕಾರವೂ ಒಂದಕ್ಕೊಂದು ಸಂಬಂಧವಿಲ್ಲದಂತೆ  ಕಂಡರೂ ಅದರಲ್ಲಿ ಸಾಮ್ಯತೆಗಳುಂಟು. ಎರಡೂ ತಮ್ಮದೇ ಆದರೀತಿಯಲ್ಲಿ  ಪರಿಪೂರ್ಣಯೋಗ ಸ್ಥಿತಿಗೆ ಒಪ್ಪುವಂತಿರುತ್ತದೆ. 


ಶ್ರೀಮದ್ಭಾಗವತದಲ್ಲಿ ಕೃಷ್ಣನ ವರ್ಣನೆ ಸೌಂದರ್ಯಪೂರ್ಣವೂ ರೋಚಕವೂ ಆಗಿದೆ.  ಕೃಷ್ಣ ಪೀತಾಂಬರಧಾರಿ. ಹಳದಿಯ ರೇಷ್ಮೆ ಸ್ವರ್ಣಮಯವಾದ ಜ್ಯೋತೀರೂಪವನ್ನು ಹೊತ್ತು ತರುತ್ತದೆ. ಶಿರದಲ್ಲಿ ಶಿಖರಸ್ಥಾನದಲ್ಲಿನ ಪೂರ್ಣತತ್ತ್ವದ ಪ್ರತೀಕವಾಗಿ ಕಿರೀಟವನ್ನು ಧರಿಸಿದ್ದಾನೆ. ಜೊತೆಯಲ್ಲಿ ಮಾಯಾಶಕ್ತಿಯ ನವಿಲುಗರಿಯನ್ನು ಧರಿಸಿ ಮಾಯೆಯನ್ನು ವಶದಲ್ಲಿಟ್ಟಿದ್ದಾನೆ. ಸೊಂಟಕ್ಕೆ ಕಾಂಚೀಯನ್ನು ಕಟ್ಟಿದ್ದಾನೆ. ತೋಳುಗಳಲ್ಲಿ ಅಂಗದವು ಬಿಗಿಯಾಗಿ ಬಂಧಿಸಿದೆ. ಮಣಿಕಟ್ಟಿನಲ್ಲಿ ಕಂಕಣವೂ ಇದೆ. ಇವು  ಸಾಧಕರಿಗೆ ಮರ್ಮಸ್ಥಾನಗಳಲ್ಲಿ ಬಂಧವನ್ನು ಉಂಟುಮಾಡುತ್ತದೆ. ಆದರೆ ಯೋಗೇಶ್ವರನಲ್ಲಿ ಅವನ  ಸಹಜವಾಗಿರುವ ಸ್ಥಿತಿಯನ್ನು ನಮಗೆ ಪರಿಚಯ ಮಾಡಿಸಿಕೊಟ್ಟು ಅಲಂಕಾರವಾಗಿ ಶೋಭಿಸುತ್ತದೆ. ಯೋಗಿಯ ಒಳದರ್ಶನಕ್ಕೆ ಅವನ ಕಂಠದಲ್ಲಿ ಶೋಭಿಸುತ್ತಿದ್ದ ಕೌಸ್ತುಭ ಮಣಿಯು, ಕಿವಿಯ ವೈಢೂರ್ಯಗಳು, ಅವನ ಶುದ್ಧ ಒಳ ಸ್ವರೂಪವನ್ನು , ಪರಮಾತ್ಮಸ್ವರೂಪವನ್ನು ದರ್ಶಿಸುತ್ತವೆ. ಎತ್ತಿರುವ ಕೈಯಲ್ಲಿ  ಶಂಖ-ಚಕ್ರಗಳು ಅಮಾನುಷವಾದ ದಿವ್ಯ ಆಯುಧಗಳು, ಕೃಷ್ಣನಿಗೆ ಆಭರಣಗಳು. ಅವು ಊರ್ಧ್ವಮುಖವಾಗಿರುವ ಮನಸ್ಸು-ಬುದ್ಧಿಗಳ ಪ್ರತಿರೂಪ. ಕೈಯಲ್ಲಿ ಕೊಳಲು ಪ್ರಣವನಾದದ ಪ್ರತೀಕ.   


ಶಿವ-ನಟರಾಜನನ್ನು ನೋಡಿದರೆ, ಅವನು ಯಾವ ಪಟ್ಟು-ಪೀತಾಂಬರವನ್ನೂ ಧರಿಸಿಲ್ಲ. ಆದರೆ, ಅಂತರೀಯದ ಕೆಲಸವನ್ನು ಗಜ-ಚರ್ಮವು ಮಾಡುತ್ತದೆ. ಅವನು ಉತ್ತರೀಯವನ್ನು ಧರಿಸಿಲ್ಲ. ಆದರೆ ಅದರ ಪ್ರತಿರೂಪವಾದ ಕುಂಡಲಿನಿ ಸರ್ಪರೂಪದ ಜನ್ನದಾರವನ್ನು ಧರಿಸಿದ್ದಾನೆ. ಕೃಷ್ಣನಂತೆಯೇ ಮರ್ಮಸ್ಥಾನವನ್ನು ಬಂಧಿಸುವ ಬಂಧಕ ಆಭರಣಗಳನ್ನು ಧರಿಸಿದ್ದಾನೆ. ಆದರೆ ಇವೂ ಕುಂಡಲೀ ಸರ್ಪಗಳ ರೂಪದಲ್ಲಿ ಆಭರಣಗಳು. ಇವನ ಮುಕುಟವು ಅರ್ಕ ಪತ್ರ, ಚಂದ್ರ, ಗಂಗೆಯಿಂದ ಕೂಡಿದೆ. ಹೊರನೋಟಕ್ಕೆ ಕೃಷ್ಣನ ಮುಕುಟಕ್ಕಿಂತ ವಿಪರೀತವಾಗಿದ್ದರೂ ಹಿಂದಿನ ತತ್ತ್ವ ಒಂದೇ. ಅರ್ಕಪತ್ರ-ಚಂದ್ರಗಳು ಸೂರ್ಯ-ಚಂದ್ರ-ಅಗ್ನಿ ತತ್ತ್ವಗಳ ಸೇರುವೆಯನ್ನು ತೋರಿಸುತ್ತದೆ. ಅರ್ಕಪತ್ರ-ಗಂಗೆಗಳು ಆಪೋಜ್ಯೋತಿಸ್ಥಲವನ್ನು ಸೂಚಿಸುತ್ತದೆ. ಕೈಯಲ್ಲಿನ ಡಮರು-ಅಗ್ನಿಗಳು ಪ್ರಾಣಾಪಾನದ ಸಮತ್ವವನ್ನು ಸಾರುತ್ತವೆ. ಅವನು  ಸಾಕ್ಷಾತ್ ನಾದತನು ಆಗಿದ್ದಾನೆ. ಇನ್ನೂ ಹೇಳುವುದಾದರೆ, ಕೃಷ್ಣನ ಕೈಯಲ್ಲಿರುವ ಕೊಳಲು ಸಾಕ್ಷಾತ್ ರುದ್ರನೇ ಎಂದು ಶಾಸ್ತ್ರಗಳು ತಿಳಿಸುತ್ತವೆ.                                                                 


ಇವರೀರ್ವರ ಅಲಂಕಾರದಲ್ಲಿ ಕಂಡುಬರುವ ಎಲ್ಲ ತತ್ತ್ವಗಳೂ ಒಟ್ಟುಗೂಡಿಸಿದರೆ, ಭಾರತೀಯ ವಸ್ತ್ರಾಲಂಕಾರ ಮತ್ತು ಆಭರಣಗಳ ಸಾರವನ್ನೇ ತೋರುತ್ತಿದೆ. ಸಾಧಕರಲ್ಲಿ ಇವು ಯೋಗಸಾಧನಗಳಾಗಿ ಕೆಲಸ ಮಾಡುತ್ತವೆ. ಆದರೆ ಸಿದ್ಧರಲ್ಲಿ, ಯೋಗೀಶ್ವರ-ಯೋಗೇಶ್ವರರಲ್ಲಿ ಇದು ಆದರ್ಶವಾಗಿ ಕಂಗೊಳಿಸುತ್ತದೆ. ಅವರ ನಿಜ ರೂಪವನ್ನು ದರ್ಶಿಸುವ ಕನ್ನಡಿಯಾಗಿ ನಿಲ್ಲುತ್ತವೆ. ಶ್ರೀರಂಗಮಹಾಗುರುಗಳ ಅದ್ಭುತ ಯೋಗದೃಷ್ಟಿಯಿಂದ ಕೂಡಿದ ಈ ನೋಟವು ಲೋಕಕ್ಕೆ ಋಷಿಗಳ ಅಂತರದೃಷ್ಟಿಯನ್ನು ತಂದುಕೊಟ್ಟು, ನಮ್ಮ ಜೀವನಗಳನ್ನೇ ಪಾವನವನ್ನಾಗಿ ಮಾಡಿದೆ.


ಸೂಚನೆ : 26/03/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Saturday, March 19, 2022

ವಸ್ತ್ರಾಭರಣ - 14 ಮಾಂಗಲ್ಯ-ತಾಳೀ (Vastra Bharana - 14 Mangalya-Tali)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)




ಇದರ ಬಗ್ಗೆ ಅನೇಕ ಟೀಕಾಟೊಕೆಗಳುಂಟು. ಸ್ತ್ರೀಯರನ್ನು ಕಟ್ಟಿಹಾಕುವ ಮೂಗುದಾರದಂತೆ, ಸ್ತ್ರೀ-ಶೋಷಣೆಯ ಪ್ರತೀಕವೆಂದೆಲ್ಲಾ ಹೇಳುವುದುಂಟು. ಆದರೆ ಋಷಿಗಳ ದೃಷ್ಟಿಯಲ್ಲಿ ನಿಸರ್ಗ ಸಹಜವಾದ, ಸ್ತ್ರೀಧರ್ಮದ ಸಹಜಾಭಿವ್ಯಕ್ತಿಯಾಗಿರುವ ಆಭರಣವಿದು. ಹಿಂದೆಯೇ ಹೇಳಿದ ಹಾಗೆ, ಪ್ರಕೃತಿಮಾತೆಯ ಪಾತ್ರವನ್ನು ವಹಿಸುವ ಸ್ತ್ರೀ, ಪರಮಪುರುಷನ ಪಾತ್ರವನ್ನು ವಹಿಸುವ ಪುರುಷನೊಡನೆ ಸೇರಿ, ಲಕ್ಷ್ಮೀ-ನಾರಾಯಣರಂತೆ, ಪಾರ್ವತೀ-ಪರಮೇಶ್ವರಂತೆ  ಭಗವತ್ಸಂಕಲ್ಪವನ್ನು ಈಡೇರಿಸಲು ಹೆಜ್ಜೆ ಹಾಕುವ ಮಧುರ ರಸನಿಮಿಷವೇ ವಿವಾಹ. ಏನು ಆ ಭಗವತ್ಸಂಕಲ್ಪ ? 


ನೆಮ್ಮದಿ, ಸಂತೋಷ ಆನಂದದಗಳನ್ನು ಲೋಕದಲ್ಲಿ ಎಲ್ಲ ಜೀವಿಗಳಿಗೆ ಹಂಚುವುದೇ ಅವರ ಸಂಕಲ್ಪ. ಆನಂದವೇ ಆ ಪರಮಪುರುಷನ ಸ್ವರೂಪ. ಯೋಗಿಯು ಸಮಾಧಿಯಲ್ಲಿ ಅನುಭವಿಸುವ ಆನಂದ ಆ ಬ್ರಹ್ಮಸ್ವರೂಪದ ನೈಜ ಪೂರ್ಣರೂಪ. ಲೋಕದಲ್ಲಿ, ಉಂಡು-ಕೊಂಡು, ಆಡಿ-ಓಡಿ ಅನುಭವಿಸುವ ಆನಂದಗಳೆಲ್ಲಾ ಆ ಪರಮಾನಂದದ ತುಣುಕುಗಳು. ಪರಮಪುರುಷನ  ಆನಂದದ ರಸವನ್ನು ಲೋಕದಲ್ಲಿ ಹರಿಸಿ, ಬೆಳೆಸುವಳು ಪ್ರಕೃತಿಮಾತೆ - ಲಕ್ಷ್ಮೀ, ಗೌರೀ. ಅವಳು ಆನಂದವನ್ನು ನಾನಾ ರೂಪದಲ್ಲಿ ಹಂಚುತ್ತಾಳೆ - ಧನ-ಧಾನ್ಯ, ಹಸು-ಕರು, ಮನೆ-ಮಕ್ಕಳು ಇತ್ಯಾದಿ. ಕೇವಲ ಆತ್ಮಸುಖವನ್ನೇ ಬಯಸುವ ವಿರಕ್ತನಿಗೆ ಆತ್ಮಶ್ರೀಯಾಗಿ ಒಲಿದು ಪರಮಾನಂದದ ತೆಕ್ಕೆಯಲ್ಲಿ ಸೇರಿಸುವಳೂ ಇವಳೇ. 


 ಈ ತತ್ತ್ವಸ್ಮರಣೆಯಲ್ಲೇ ವಿವಾಹಪದ್ಧತಿಯನ್ನು ಋಷಿಗಳು ರೂಪಿಸಿದ್ದಾರೆ. ಪರಮಾನಂದರೂಪಿಯಾದ ಪುರುಷನು, ವಿಸ್ತಾರಕ್ಕೆ ಅಣಿಮಾಡಿಸುತ್ತಾ, ತನ್ನ ಮಡದಿಯ ಕೊರಳಿಗೆ ಮಾಂಗಲ್ಯವನ್ನು ಕಟ್ಟುತ್ತ್ತಾನೆ. ಏಕೆ ? "ಮಮ ಜೀವನ ಹೇತುನಾ" ನನ್ನ ಜೀವನದ ಧ್ಯೇಯಸಾಧನೆಗಾಗಿ. ಆನಂದವನ್ನು ವಿತರಿಸುವ ಕೆಲಸವನ್ನು ನಿನಗೆ ವಹಿಸಿದ್ದೇನೆ ಎಂಬುದು ಭಾವ. ಕಂಠದಿಂದ ಕೆಳಗೆ ಹರಿದುಬರುವ ಮಾಂಗಲ್ಯವು ಧ್ಯೇಯದ ನೇರ ಪ್ರತೀಕ. "ರಿಲೇ ರೇಸ್" ನಲ್ಲಿ ತಮ್ಮದೇ ತಂಡದ ಮತ್ತೊಬ್ಬರಿಗೆ 'ಬ್ಯಾಟನ್' ವಹಿಸಿಕೊಟ್ಟ ಹಾಗೆ. 'ಬ್ಯಾಟನ್' ರೂಪದಲ್ಲಿ ಕಟ್ಟಿರುವ ತಾಲಿಯಲ್ಲಿ ಧ್ಯೇಯದ ಗುರುತುಗಳು ಅಡಗಿದೆ. ಹೇಗೆ ? ಅದು ಸುವರ್ಣಮಯವಾಗಿದೆ. ಸೌಖ್ಯ, ಮಾಂಗಲ್ಯ, ಸಮೃದ್ಧಿಯ ಜೊತೆಯಲ್ಲಿ ಸುವರ್ಣಮಯವಾದ ಹಿರಣ್ಯಗರ್ಭನನ್ನು ನೆನಪಿಸುತ್ತದೆ. ಯೋಗಿಯ ಒಳ ಅನುಭವದಲ್ಲಿ ಪುರುಷ ಸ್ಥಾನದಿಂದ ಪ್ರಕೃತಿಯ ಸ್ಥಾನಕ್ಕೆ ಇಳಿದು ಬರುವಾಗ ಆಗುವ  ಒಳ ದರ್ಶನಗಳನ್ನು ತಂತ್ರಶಾಸ್ತ್ರಗಳು ವಿವರಿಸುತ್ತವೆ. ಬಿಂದು-ನಾದವಾಗಿ ಬೆಳೆದು ಒಂದು  ಮಹಾಬಿಂದುವಾಗಿ ಪರಿಣಮಿಸುತ್ತದೆ. ಮಹಾಬಿಂದು ಪ್ರಣವ ನಾದವನ್ನು ಮಾಡುತ್ತಾ, ಸ್ಫೋಟವಾಗಿ ಮೂರಾಗಿ ( ಬಿಂದು + ವಿಸರ್ಗವಾಗಿ) ವಿಭಜಿಸಿ ಈ ಸೃಷ್ಟಿಯನ್ನು ಮುಂದುವರಿಸಿತು. ಈ ಮೂರು ತ್ರಿಗುಣಗಳೆಂದೂ, ತ್ರಿಮೂರ್ತಿಯರೆಂದೂ ಹೇಳಬಹುದು. ಆ ಒಳ ಅನುಭವವೇ ತಾಳಿಯ ರಚನೆಗೆ ಆಧಾರ. ತಾಳಿಯಲ್ಲಿ ಇರುವ ಸಾಮಾನ್ಯ ಲಾಂಚನವೆಂದರೆ ಬೊಟ್ಟು, ಇದು ಬಿಂದುವಿನ ಪ್ರತಿರೂಪ. ಇದರ ನಾನಾ ಪ್ರಕಾರಗಳುಂಟು - ಮಹಾಬಿಂದುವನ್ನು ಸೂಚಿಸುವ ಒಂದು ಬೊಟ್ಟು, ಆಗ ತಾನೇ ಸೃಷ್ಟವಾದ ಸ್ಥಿತಿಯಲ್ಲಿ ಮೂರು ಬೊಟ್ಟುಗಳು, ಒಂದು ಬೊಟ್ಟು ಮತ್ತು ಎರಡು ಕರೀಮಣಿಗಳು, ವಿಸರ್ಗಾತ್ಮಕವಾಗಿ ಎರಡು ಬೊಟ್ಟುಗಳು ಇತ್ಯಾದಿ. ತಾಳಿಯನ್ನು ಕಟ್ಟುವ ಸಮಯದಲ್ಲಿ, ಪುರೋಹಿತರು 'ಸುಲಗ್ನಾ: ಸಾವಧಾನಾ:' ಎಂದು ಎಚ್ಚರಿಸುತ್ತಾರೆ. ಘಟ್ಟಿಮೇಳ, ಘಂಟಾನಾದ, ನಾದಸ್ವರಗಳ  ಒಂದು ರವ ಕೂಡಿರುತ್ತದೆ. ಇಂತಹ ಸನ್ನಿವೇಶದಲ್ಲಿ ನಡೆಯುವ ಮಾಂಗಲ್ಯ ಧಾರಣ. ಮಾಂಗಲ್ಯದ ಮತ್ತೊಂದು ರೂಪದವೆಂದರೆ ಆಂಗ್ಲ ಭಾಷೆಯ "M"ನ ಆಕಾರ. ಇದು ಹೇಗೆ ಸಮಂಜಸ ಎಂಬ ಪ್ರಶ್ನೆಗೆ, ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ಇದರ ಮೂಲ ತತ್ತ್ವವನ್ನು ಗುರುತಿಸಿ, ಇದು ಸೃಷ್ಟಿಗೆ ಸಹಕಾರಿಯಾದ ಪ್ರಾಣಸ್ವರೂಪ-ಗರುಡನ ರೂಪವೆಂದು ನುಡಿದಿದ್ದಾರೆ. ಅದರಂತೆ ಕಿಂಚಿತ್ ಮಾರ್ಪಾಡು ಮಾಡಿ ಗರುಡನ ಆಕಾರವು ಸ್ಪಷ್ಟವಾಗಿ ಕಾಣಿಸುವಂತೆ ಸಂಯೋಜಿಸಿದ್ದರು. ಅವರ ಡಿಸೈನ್ ಇಂದು  ಬೆಂಗಳೂರು ನಗರದ ಅನೇಕ ಜ್ಯುವೆಲ್ಲರಿ ಅಂಗಡಿಗಳಲ್ಲಿ 'ದೇಶಿಕಾಚಾರ್' ಮಾಂಗಲ್ಯ  ಎಂಬ ಹೆಸರಿನಿಂದ ಪ್ರಚಲಿತವಾಗಿದೆ.


ಸೂಚನೆ : 19/03/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Tuesday, March 15, 2022

ವಸ್ತ್ರಾಭರಣ - 12 ಮುಖ-ಕಂಠದ ಆಭರಣಗಳು (Vastra Bharana - 12 Mukha-Kanthada Abharanagalu)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)

ಕಿವಿಯ-ಮೂಗಿನ ಆಭರಣಗಳು

ಕಿವಿ ಚುಚ್ಚಿಕೊಳ್ಳುವುದು ನಮ್ಮ ಸಂಸ್ಕೃತಿಯಲ್ಲಿ ಒಂದು ಪ್ರಧಾನ ಸಂಸ್ಕಾರ. ಸಂಸ್ಕಾರವೆಂದರೆ, ಶುದ್ಧಿಮಾಡಿ ನಮ್ಮನ್ನು ಪೂರ್ವ ಸ್ಥಿತಿಗೆ ತರುವುದು. ಕಿವಿ ಮತ್ತು ಮೂಗನ್ನು ಚುಚ್ಚಿಕೊಳ್ಳುವುದು, ಯೋಗಸಾಧಕನರಿಗೆ ವಿಶೇಷ ಲಾಭವನ್ನು ಉಂಟು ಮಾಡುತ್ತದೆ. ಆಯುರ್ವೇದ ಶಾಸ್ತ್ರವೂ ಇದರಿಂದ ರೋಗಗಳಿಂದ ರಕ್ಷಣೆ ಸಿಗುವುದೆಂದು ಸಾರುತ್ತದೆ. ಕುಂಡಲ ಎಂಬ ಹೆಸರಿನಿಂದ ಕಂಡುಬರುವ ಆಭರಣ ಬಹಳ ಪ್ರಸಿದ್ಧ. ಕರ್ಣನು ಕವಚ ಕುಂಡಲಗಳನ್ನು ಹುಟ್ಟಿನಿಂದ ಧರಿಸಿ, ದಾನ ಮಾಡಿದ್ದು ತಿಳಿದೇ ಇದೆ. ವಿಷ್ಣುವನ್ನು ವರ್ಣಿಸುವಾಗ, ಕುಂಡಲವನ್ನು ಧರಿಸಿರುವುದಾಗಿ ವರ್ಣಿಸುತ್ತಾರೆ.  ಕಿವಿಯನ್ನು ಸ್ತ್ರೀ-ಪುರುಷರಿಬ್ಬರೂ ಚುಚ್ಚಿಕೊಂಡರೂ ಮೂಗನ್ನು ಚುಚ್ಚಿಕೊಳ್ಳುವುದು ಸ್ತ್ರೀಯರಿಗೆ ವಿಶೇಷ. 

ಕೈಗಳ ಆಭರಣ 

ಕೈಯಲ್ಲಿ ಧರಿಸುವ ಬಳೆಗಳು ಚಿರಪರಿಚಿತ. ಪುಷ್ಕಳವಾಗಿ ಬಳೆಗಳನ್ನು ಕೈಗಳಲ್ಲಿ ಧರಿಸುವ ಪದ್ಧತಿ ಅನಾದಿಕಾಲದಿಂದಲೂ ನಮ್ಮ ದೇಶದಲ್ಲಿ ಕಂಡುಬರುತ್ತದೆ. ಸಿಂಧೂಕಣಿವೆಯ ಶಿಲಾಬಾಲಿಕೆಯರಲ್ಲೂ ಬಳೆಗಳ ಬಾಹುಳ್ಯ ಕಂಡುಬಂದು, ಇದು ಭಾರತೀಯ ಉಡುಗೆ ತೊಡುಗೆಯ ಒಂದು ಲಕ್ಷಣವೆಂದು ತಜ್ನ್ಯರು ಗುರುತಿಸುತ್ತಾರೆ.   ಇದು ವಲಯ ಎಂಬುದರ ತದ್ಭವ. ಸುತ್ತುವರೆಯುವುದು ಎಂಬುದಿದರ ಅರ್ಥ. ಮಣಿಕಟ್ಟಿನಲ್ಲಿ ಕಟ್ಟುವ ಕಂಕಣವು ಮುಖ್ಯವಾದ ಆಭರಣ. ಶ್ರೀಕೃಷ್ಣನು ಜನ್ಮತಃ ಇದನ್ನು ಧರಿಸಿದ್ದನು ಎಂದು ಶ್ರೀಮದ್ಭಾಗವತವು ಹೇಳುತ್ತದೆ. ಬಳೆಗಳು ತೋಳಿನಲ್ಲೂ ತೋಳು ಬಳೆಯ ರೂಪದಲ್ಲಿ ಧರಿಸುವುದುಂಟು; ಅಂಗದ ಎಂಬುದು ಇದರ ಪ್ರಾಚೀನ ಹೆಸರು. ಕೇಯೂರವೆಂಬ ಮತ್ತೊಂದು ಪ್ರಕಾರ - ಇದನ್ನು ಸೀತಾದೇವಿ ಧರಿಸಿದ್ದುದನ್ನು ರಾಮಾಯಣವು ನಮೂದಿಸುತ್ತದೆ. ಕೈಯಲ್ಲಿ ಸದ್ದು ಮಾಡುವ ಕಡಗ, ಕಟಕ ಎಂಬುದರ ತದ್ಭವರೂಪ. ಪ್ರಸಿದ್ಧವಾದ ಕಣ್ಣಗಿಯ ಕಥೆಯು ಈ ಕಡಗವನ್ನೇ ಕೇಂದ್ರಬಿಂದುವಾಗಿ ಇಟ್ಟುಕೊಂಡಿದೆ. ಬೆರಳುಗಳಲ್ಲಿ ಧರಿಸುವ ಉಂಗುರವನ್ನು ಅಂಗುಲೀಯ-ಮುದ್ರಾ ಎಂದು ಕರೆಯುತ್ತಿದ್ದರು. ಈ ಹೆಸರಿನಲ್ಲಿನ ಎರಡು ಪದಗಳು ಇವತ್ತು ಬಳಕೆಯಲ್ಲಿರುವ ಪದಗಳಿಗೇ ಮೂಲವೆಂದನಿಸುತ್ತದೆ. ಅಂಗುಲೀಯ ಎಂಬುದು ಕನ್ನಡ-ತೆಲುಗುನಲ್ಲಿ ಉಂಗುರ(ಮು) ಎಂದೂ, ಮುದ್ರಾ ಎಂಬಪದವು ತಮಿಳು-ಮಲಯಾಳಂ ಭಾಷೆಯ ಮೋದಿರ ಎಂದೂ ನಾವಿಂದು ಕಾಣುತ್ತೇವೆ. ಈ ಉಂಗುರವು ಕಾಳಿದಾಸನ ಶಾಕುಂತಲ ನಾಟಕದಲ್ಲಿ ಪ್ರಧಾನಪತ್ರವನ್ನು ವಹಿಸುತ್ತದೆ. ಉಂಗುರವನ್ನು ಧರಿಸುವ ಬೆರಳಿಗೆ ಅದೇ ಹೆಸರನ್ನು ಕೊಟ್ಟಿದೆ. ಸಾಮಾನ್ಯವಾಗಿ ಯಜ್ಞ - ಹೋಮ -ಪೂಜೆ ಮುಂತಾದ ಕರ್ಮಗಳನ್ನು ಮಾಡುವಾಗ ಇದೆ ಬೆರಳಲ್ಲಿ ದರ್ಭೆಯಿಂದ ಮಾಡಿದ ಒಂದು ಪವಿತ್ರವನ್ನು ಧರಿಸುವುದು ಉಂಟು. ಇದರ ಹೆಸರೇ ಹೇಳುವಂತೆ ನಮ್ಮಲ್ಲಿದು ಪಾವಿತ್ರ್ಯವನ್ನು ಉಂಟುಮಾಡುತ್ತದೆ. ಪಾವಿತ್ರ್ಯವನ್ನು ಉಂಟುಮಾಡಲು ಈ ಉಂಗುರದ ಬೆರಳೇ ಅತ್ಯಂತ ಪರಿಣಾಮಕಾರೀ ಎಂಬುದು ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳ ತತ್ವಾರ್ಥಸಹಿತವಾದ ವಿಶ್ಲೇಷಣೆ. ಆದ್ದರಿಂದಲೇ ಸುವರ್ಣದಿಂದ ಮಾಡಲ್ಪಟ್ಟ ಉಂಗುರವನ್ನು ಈ ಬೆರಳಲ್ಲಿ ಧರಿಸುತ್ತಾರೆ. 

ಕಂಠಾಭರಣ 

ಕಂಠಕ್ಕೆ ಒಪ್ಪುವ ಹಾರಗಳು, ಸರಗಳಂತೂ ಅತ್ಯಂತ ಪ್ರಚಲಿತ ಹಾಗೂ ಜನಪ್ರಿಯ. ಇದರ ಪ್ರಕಾರಗಳು ಪುಷ್ಕಳವಾಗಿವೆ ಎಂದು ಶಾಸ್ತ್ರಗಳಲ್ಲೂ ಗಮನಿಸಿದ್ದಾರೆ. ಇವುಗಳಲ್ಲಿ ಹುಟ್ಟುವ ಪ್ರಕಾರಗಳಿಗೆ ಅನೇಕ ಕಾರಣಗಳು - ಸರದಲ್ಲಿರುವ ಎಳೆಗಳ ಸಂಖ್ಯೆ, ಮಣಿ-ಮುತ್ತುಗಳ ವೈವಿಧ್ಯ, ಅವುಗಳ ಉದ್ದ-ಗಾತ್ರಗಳು, ಮತ್ತು ಸರಗಳ ತುದಿಯಲ್ಲಿ ಶೋಭಿಸುವ ಪ್ರಧಾನ ಮಣಿ ಅಥವಾ ಶಿಲ್ಪಾಕೃತಿಗಳು. ಈ ಹಾರಗಳ ಸೊಬಗು  ಹೊಯ್ಸಳ ಶೈಲಿಯ ಶಿಲ್ಪಗಳಲ್ಲಿ ಎದ್ದುಕಂಡು  ಕಂಗೊಳಿಸುತ್ತದೆ. ಕಂಠದ ಸರದ ಪ್ರಕಾರಗಳನ್ನು ವರ್ಣಿಸುತ್ತ, ರತ್ನಾವಳೀ, ರತ್ನಮಾಲಿಕಾ, ಮುಕ್ತಾವಳೀ, ವ್ಯಾಳಪಂಕ್ತಿ, ಸೂತ್ರ ಎಂಬ ನಾನಾ ಹೆಸರುಗಳನ್ನೂ ಹೇಳುತ್ತವೇ ಶಾಸ್ತ್ರಗಳು.      ನಾಟ್ಯಶಾಸ್ತ್ರದಲ್ಲಿ ಸರ(ಸ್) ಎಂಬ ಪದ ಎಳೆ ಎಂಬುದರ ಪರ್ಯಾಯವಾಗಿ ಬಳಸುತ್ತಾರೆ. ಪ್ರಸಿದ್ಧವಾದ ತಾಳೀ ಅಥವಾ ಮಂಗಳಸೂತ್ರವೂ ಒಂದು ರೀತಿಯ ಹಾರವೇ.

ಸೂಚನೆ : 12/03/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Monday, March 7, 2022

ವಸ್ತ್ರಾಭರಣ 12 ಕಾಲು ಮತ್ತು ಸೊಂಟದ ಆಭರಣಗಳು (Vastra Bharana - 12 Kalu Mattu Sontada Abharanagalu)

 ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)


ಅಂಗಾಂಗಗಳಲ್ಲಿ ಧರಿಸುವ ವಿವಿಧ ಆಭರಣಗಳನ್ನೂ ಅವುಗಳ ಕೆಲವು ವಿವರಗಳನ್ನು ಗಮನಿಸೋಣ. ಈ ಆಭರಣಗಳಲ್ಲಿ ಕೆಲವು ಇಂದೂ ದೈನಂದಿನ ಬಳಕೆಯಲ್ಲಿವೆ. ಕೆಲವನ್ನು ಸಮಾರಂಭಾದಿ ವಿಶೇಷ ಸನ್ನಿವೇಶಗಳಲ್ಲಿ ಮಾತ್ರ ಬಳಸುತ್ತೇವೆ. ಅನೇಕವು, ಬೇಲೂರು, ಹಳೇಬೀಡು ಮುಂತಾದ ಶಿಲ್ಪಗಳಲ್ಲಿ, ಪ್ರಾಚೀನ ಚಿತ್ರಗಳಲ್ಲಿ ಮಾತ್ರ ಕಂಡು ಬರುತ್ತವೆ. ಈ ಆಭರಣಗಳ ಬಗೆಗೆ ತಿಳಿದು ಬಂದಿರುವ ವಿಷಯಗಳನ್ನು ಶ್ರೀರಂಗ ಮಹಾಗುರುಗಳು ಕೊಟ್ಟ ದೃಷ್ಟಿಯಿಂದ ನೋಡೋಣ.


ಕಾಲಿನ ಆಭರಣಗಳು 

ಕಾಲುಗೆಜ್ಜೆ ಎಲ್ಲರಿಗೂ ಪರಿಚಿತವೇ. ಸಣ್ಣ ಘಂಟೆಗಳಿಂದ ಕೂಡಿದ ಈ ಆಭರಣದ ಪ್ರಾಚೀನ ಹೆಸರು ಘಂಟಿಕಾಜಾಲ. ಗೆಜ್ಜೆ ಎಂಬೀ ಪದದ  ತತ್ಸಮರೂಪವೂ ಆಗಿರಬಹುದು. ನೂಪುರ ಮತ್ತು ಕಿಂಕಿಣಿ ಎಂಬುದು ಇದರ ಪ್ರಭೇದಗಳು. ಕಿಂಕಿಣಿ ಎಂಬುದು ಯೋಗಿಗೆ ಕೇಳಿ ಬರುವ ಒಂದು ಅಂತರ್ನಾದವೂ ಹೌದು ಎಂದು ಯೋಗ ಶಾಸ್ತ್ರದಲ್ಲಿ ಕಂಡುಬರುತ್ತದೆ. ಈ ಅಂತರ್ನಾದದ  ಹೆಸರೂ, ಆಭರಣದ ಹೆಸರೂ ಒಂದೇ ಆಗಿರುವುದು ಆಕಸ್ಮಿಕವಲ್ಲ. ರಾಮಕೃಷ್ಣ ಪರಮಹಂಸರಂತಹ ಯೋಗಿಗಳಿಗೆ ಕಾಳಿಯ ಕಾಲುಗೆಜ್ಜೆಯ ಧ್ವನಿ ಕೇಳಿಬರುತ್ತಿದ್ದ ಪುರಾವೆಗಳುಂಟು. ಇಂತಹ ಯೋಗಾನುಭವದ ಸ್ಪೂರ್ತಿಯಿಂದ ಹುಟ್ಟಿದ ಆಭರಣವಿದೆಂದು ಭಾವಿಸಬಹುದು. ಸೀತಾದೇವಿಯ ನೂಪುರವನ್ನು ಲಕ್ಷ್ಮಣ ದಿನನಿತ್ಯ ಪೂಜಿಸುತ್ತಿದ್ದಕಾರಣ ತತ್ಕ್ಷಣದಲ್ಲಿ ಗುರುತಿಸುತ್ತಾನೆ ಎಂಬ ರಾಮಾಯಣದ ಘಟ್ಟವನ್ನೂ ನೆನಪಿಸಿಕೊಳ್ಳ ಬಹುದು. ದಪ್ಪನಾದ ಕಾಲುಬಳೆಯೊಳಗೆ ಸದ್ದು ಮಾಡುವ ಸಣ್ಣ ಕಲ್ಲುಗಳನ್ನು ಹಾಕಿಮಾಡುವ ಒಂದು ಆಭರಣವನ್ನು ಸಂಘೋಷ-ಕಟಕ ಎನ್ನುತ್ತಾರೆ (ಕಾಲು-ಕಡಗ ಅಥವಾ ಕಾಲಂಡಿಗೆ). ಕಾಲುಂಗುರ ಭಾರತೀಯರಲ್ಲಿ ಇರಲಿಲ್ಲ, ಮಧ್ಯಕಾಲದಲ್ಲಿ ಮುಘಲರ ಶಾಸನಕಾಲದಲ್ಲಿ ಪ್ರಾರಂಭವಾಯಿತು ಎಂಬ ಮಾತು ಕೆಲವೊಮ್ಮೆ ಕೇಳಿಬರುತ್ತದೆ. ಆದರೆ ಕಾಲುಂಗುರಗಳೂ ಪ್ರಾಚೀನಕಾಲದಿಂದ ಬಳಕೆಯಲ್ಲಿದ್ದವು ಎಂಬುದಕ್ಕೆ ಭರತನ ನಾಟ್ಯ ಶಾಸ್ತ್ರದ ಆಧಾರವಿದೆ. ಅದರಲ್ಲೂ ಪಾದಾಂಗುಷ್ಟದಲ್ಲಿ ತಿಲಕ ಎಂಬ ಆಭರಣದ ಬಳಕೆಯಿತ್ತು ಎಂಬುದು ತಿಳಿದುಬರುತ್ತದೆ. ಇದೂ ಯೋಗಶಾಸ್ತ್ರಕ್ಕೆ ಸಮ್ಮತವೇ, ಏಕೆಂದರೆ ಶರೀರದಲ್ಲಿ ಅಂಗುಷ್ಠವು ಜ್ಯೋತಿರ್ಮಯ ಪುರುಷನ ಪ್ರತೀಕವೇ ಹೌದು. ಆ ಶಕ್ತಿಯನ್ನು ಯೋಗಿಯು ಮತ್ತೊಬ್ಬರಲ್ಲಿ ಹರಿಸುವುದಕ್ಕೆ ಪಾದಾಂಗುಷ್ಟವೂ ಒಂದು ಉತ್ತಮ ಸಾಧನ. 


ಸೊಂಟದ ಆಭರಣ 

ಸೊಂಟದಲ್ಲಿ ಧರಿಸುವ ಮೆಖಲೆಗೂ ಯೋಗಕ್ಕೂ ಇರುವ ಸಂಬಂಧವನ್ನು ಹಿಂದೆಯೇ ಅಂತರೀಯದ ಸಂದರ್ಭದಲ್ಲಿ ಗಮನಿಸಿದ್ದಾಗಿದೆ. ಪ್ರಾಣಾಪಾನಗಳ ಸಂಯಮ ಮಾಡಿ, ಒಳಯೋಗ ಮಾರ್ಗಗಳ ಬಾಗಿಲನ್ನು ತೆರೆದಿಡುವ ಸಲುವಾಗಿ ಇದರ ಬಳಕೆಯೆಂದೂ, ಸಾಧಕನಿಗೆ ಉತ್ತಮ ಸಾಧನವೆಂದೂ ಗಮನಿಸಿದ್ದೇವೆ. ಮುಂಜಾ ಹುಲ್ಲಿನಿಂದ ಮಾಡಲ್ಪಟ್ಟು ಇದನ್ನು ಬ್ರಹ್ಮಚಾರಿಯೋ, ನವವಧುವಾಗಲಿರುವವಳೂ ಧರಿಸುವರು. ಸೊಂಟದಲ್ಲಿ ಧರಿಸುವ ಡಾಬೂ ಇದರ ಒಂದು ರೂಪ.  ಈ ಮೇಖಲೆಯಲ್ಲಿ ಎಷ್ಟು ಎಳೆಗಳು ಎಂಬುದರ ಮೇಲೆ ಈ ಆಭರಣದ ನಾನಾ ಪ್ರಕಾರಗಳು ಹೊರಡುತ್ತವೆ.   ಒಂದೆಳೆಯಿದ್ದರೆ ಕಾಂಚೀ, ಎಂತಿದ್ದಲ್ಲಿ ಮೇಖಲಾ, ಹದಿನಾರಿದ್ದರೆ ರಶನಾ, ಇಪ್ಪತ್ತೈದಿದ್ದರೆ ಕಲಾಪ. ಅಂತೆಯೇ ಮೂವತ್ತೆರಡು, ಅರವತ್ತುನಾಲ್ಕು, ನೂರಾಎಂಟು ಎಲೆಗಳಿಂದ ಕೂಡಿದ ಆಭರಣಗಳ ಪ್ರಕಾರವೂ ಬಳಕೆಯಲ್ಲಿದ್ದು, ದೇವತಾ ಸ್ತ್ರೀಯರೂ ಮತ್ತು ರಾಜಮಹಿಷಿಯರಿಗೆ ಅದರ ಬಳಕೆ ವಿಶೇಷವಾಗಿ ವಿಧಿಸಿದೆ. ಸ್ತ್ರೀ ಪ್ರಕೃತಿಯು ಸರಸ್ವತಿಯ ರೂಪ, ಲೋಕದಲ್ಲಿ ವಿದ್ಯೆಯನ್ನು ಬೆಳಸುವಳು. ಮೇಲ್ಕಂಡ ಎಲ್ಲಾ ಸಂಖ್ಯೆಗಳೂ ವಿದ್ಯೆಗಳ ವಿಸ್ತಾರದ ಕ್ರಮಗಳನ್ನೂ ವಿದ್ಯೆಯ ನಾನಾ ಭಾಗಗಳನ್ನೂ ಸೂಚಿಸುತ್ತವೆ.


ಶಿರಸ್ಸಿನಲ್ಲಿ ಧರಿಸುವ ಆಭರಣಗಳು

ಕೇಶಾಲಂಕಾರದ ಸಂದರ್ಭದಲ್ಲಿಯೇ ಶಿರಸ್ಸಿನಲ್ಲಿ ಧರಿಸುವ ಬೈತಲೆ ಬೊಟ್ಟು, ಸೂರ್ಯ, ಚಂದ್ರ, ಕಮಲಾ ಆದಿ ಆಭರಣಗಳ ಉಲ್ಲೇಖವು ಬಂದಿದೆ. ಇವುಗಳಿಗೂ ಯೋಗಕ್ಕೂ ಇರುವ ಗಾಢವಾದ ಸಂಬಂಧವನ್ನೂ ಹಿಂದಿನ ಲೇಖನದಲ್ಲಿ  ಗಮನಿಸಿದ್ದೇವೆ.

 (ಮುಂದುವರಿಯುವುದು)

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 5/3/2022 ರಂದು ಪ್ರಕಟವಾಗಿದೆ.

Tuesday, March 1, 2022

ವಸ್ತ್ರಾಭರಣ - 11 ಅಲಂಕಾರ - ಆಭರಣ (Vastra Bharana - 11 Alankara - Abharana)

 ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)


ವಸ್ತ್ರ, ಪುಂಡ್ರ, ಕೇಶಗಳ ವಿನ್ಯಾಸ-ಇವುಗಳಿಗೂ ಯೋಗಕ್ಕೂ ಇರುವ ಸಂಬಂಧವನ್ನು ಗಮನಿಸಿಯಾಗಿದೆ.  ನಿತ್ಯವೂ ಮಾಡಿಕೊಳ್ಳುವ ವಸ್ತ್ರ ಅಲಂಕಾರ ಸಾಮಾನ್ಯದ್ದಾದರೆ,ಹಬ್ಬ, ಮದುವೆ, ಸಮಾರಂಭಗಳಿಗೆ ಮಾಡಿಕೊಳ್ಳುವ ವಿಶೇಷವಾದ ಅಲಂಕಾರಗಳದ್ದೇ ಒಂದು ಸೊಬಗು. ನಾನಾ ತರಹದ ಒಡವೆ-ಆಭರಣಗಳು, ವಸ್ತ್ರಗಳಜೊತೆಗೂಡಿ ಸೌಂದರ್ಯವನ್ನು ವರ್ಧಿಸುವಂತೆ ಮಾಡಿ ನಮ್ಮನ್ನು ಜನರ ಮುಂದೆ ಪ್ರಸ್ತುತಪಡಿಸಿಕೊಳ್ಳುವ ಬಯಕೆಯೂ ಸಹಜವೇ. ಇಂತಹ ಅಲಂಕಾರಗಳ ಬಗ್ಗೆ ಋಷಿಗಳ ದೃಷ್ಟಿಯೇನು? ಶ್ರೀರಂಗಮಹಾಗುರುಗಳ ಚರಣವ್ಯೂಹದಿಂದ ಈ ವಿಷಯದಲ್ಲಿ ಬಂದ ವಿಚಾರಧಾರೆಯನ್ನು ನೋಡೋಣ.  


`ಅಲಂಕಾರ' ಶಬ್ದಾರ್ಥ 

ಅಪೂರ್ಣವಾಗಿರುವುದನ್ನು ಪೂರ್ಣಮಾಡಿದರೆ ಅದು ಅಲಂಕಾರ. ಪೂರ್ಣವಾದಮೇಲೆ ಇನ್ನೇನೂ ಬೇಡ, ಸಾಕು ಎಂಬ ತೃಪ್ತಿಯ ಭಾವ ಮೂಡುತ್ತದೆ. ಹೀಗೆ 'ಅಲಂ'-ಸಾಕು ಎಂಬುದೇ 'ಅಲಂಕಾರ' ಎಂಬ ಪದಕ್ಕೆ ಮೂಲ. ಕಾವ್ಯದ ಶೋಭೆಯನ್ನು ಯಾವುದು ವರ್ಧಿಸಿ ಪೂರ್ಣತೆಯನ್ನು ತರುತ್ತದೆಯೋ ಅದನ್ನೂ ಅಲಂಕಾರ ಎನ್ನುತ್ತಾರೆ. ನಾಟ್ಯಶಾಸ್ತ್ರದಲ್ಲಿ ಅಲಂಕಾರವೆಂಬ ಪದದಿಂದ ವಸ್ತ್ರ, ಆಭರಣ ಹೂವಿನ ಹಾರ ಮುಂತಾದವುಗಳೆಲ್ಲವನ್ನೂ ಸೂಚಿಸುತ್ತಾರೆ.       


ಒಳಸೌಂದರ್ಯದತ್ತ ಸೆಳೆಯುವ ಹೊರಅಲಂಕಾರ 

ಈ ಶರೀರವು ಮಹತ್ತರವಾದ ಆನಂದದ ಗಣಿ. ಸಮಾಧಿಯಲ್ಲಿ ಅನುಭವಿಸಿದ ಆನಂದದ ಗುಂಗು ಜಾಗ್ರದವಸ್ಥೆಯಲ್ಲೂ ಮುಂದುವರೆಯುತ್ತದೆ. ಜ್ಞಾನಿಯ ನಡೆ-ನುಡಿ, ವೇಷ-ಭೂಷಣ, ಅಲಂಕಾರ ಎಲ್ಲದರಲ್ಲಿಯೂ ಒಳಸಂಸ್ಕಾರದ ಅಚ್ಚೊತ್ತಲ್ಪಟ್ಟಿರುತ್ತದೆ.  ಅವರು ಒಳಗೆ ಕಂಡ ದೇವತಾಮೂರ್ತಿಗಳ ಸೌಂದರ್ಯ, ಸೊಬಗುಗಳನ್ನು ಹೊರಗಡೆಯೂ ತಮ್ಮ ಮತ್ತಿತರ ವೇಷ-ಭೂಷಣಗಳಲ್ಲಿ  ನೋಡಿ ಆನಂದಿಸಲು ಇಷ್ಟಪಡುತ್ತಾರೆ. ಜೊತೆಗೆ ಚಾಣಾಕ್ಷತೆಯಿಂದ, ಒಳ ಸ್ಥಿತಿಗಳನ್ನು ತಂದುಕೊಡುವ ಉಪಾಯಗಳನ್ನೂ ವಸ್ತ್ರ, ಆಭರಣಗಳಲ್ಲಿ ಹೆಣೆದಿಡುತ್ತಾರೆ. ಶರೀರದ ಮರ್ಮಸ್ಥಾನಗಳನ್ನು ಅರಿತು, ಆ ಸ್ಥಾನಗಳಲ್ಲಿ ಯಾವ ರೀತಿ ಒತ್ತಿ, ಎತ್ತಿ, ಕಟ್ಟಿ, ಬಿಗಿದರೆ ಒಳ ಯೋಗಮಾರ್ಗಗಳು ತೆರೆಯುತ್ತವೆ ಎಂಬುದನ್ನು ಸ್ವಾನುಭವದಿಂದ ಕಂಡು ಯೋಜಿಸಿರುತ್ತಾರೆ. ಸ್ಪರ್ಶದಿಂದಲೂ, ನೋಟದಿಂದಲೂ ಯೋಗಸಾಧಕವಾಗಿರುವಂತೆ ಯೋಜಿಸಿರುತ್ತಾರೆ. ಇಂತಹ ಕೆಲಸವನ್ನು ವಸ್ತ್ರಗಳ, ಆಭರಣಗಳ ಯೋಜನೆಯಿಂದ ಸಾಧಿಸಿ, ಪೂರ್ಣಗೊಳಿಸಿದ್ದಾರೆ 


ಯೋಗಮಾರ್ಗದ ಮರ್ಮಸ್ಥಾನಗಳು 

ಈ ಮರ್ಮಸ್ಥಾನಗಳನ್ನು ಗಮನಿಸೋಣ. ಯೋಗೋಪನಿಷತ್ತುಗಳು ೧೮ ಮರ್ಮಸ್ಥಾನಗಳನ್ನು ವರ್ಣಿಸುತ್ತವೆ. ಈ ಮರ್ಮಸ್ಥಾನಗಳಲ್ಲಿ ಒಂದೊಂದಾಗಿ ದೃಷ್ಠಿ-ಮನಸ್ಸು-ಪ್ರಾಣಗಳನ್ನು ಕೇಂದ್ರೀಕರಿಸಿ, ಪುನಃ ಹಿಂದಕ್ಕೆ ಸೆಳೆದು, ಪಾದಾಂಗುಷ್ಟದಿಂದ ಶಿರಸ್ಸಿನ ಶಿಖರಸ್ಥಾನದವರೆಗೂ ಆರೋಹಣ ಕ್ರಮದಲ್ಲಿ ಹೋಗುವಂತಹ ಪ್ರತ್ಯಾಹಾರವನ್ನು ಕಲ್ಪಿಸಿದೆ. ಪಾದಾಂಗುಷ್ಟ, ಪಾದ, ಕಣುಕಾಲು, ಮೀನಖಂಡ, ಮಂಡಿ, ತೊಡೆ, ಗುದದ್ವಾರ, ಜನನಾಂಗ, ನಾಭಿ, ಹೃದಯ, ಕತ್ತು, ಕಂಠಕೂಪ, ತಾಲು, ಮೂಗಿನ ಹೊಳ್ಳೆ, ಕಣ್ಣುಗಳು, ಭ್ರೂಮಧ್ಯ , ಹಣೆ ಮತ್ತು ಶಿರಸ್ಸಿನ ಅಗ್ರ. ಕಾಲಿನ ಅಂಗುಷ್ಠ, ಕಣುಕಾಲು, ಮಂಡಿ, ತೊಡೆ ಮುಂತಾದವುಗಳಿಗೆ ಹೊಂದುವಂತಹ ಕೈಗಳಲ್ಲಿನ ಬೆರಳುಗಳು, ಮಣಿಕಟ್ಟು, ಮೊಣಕೈ, ಭುಜ, ತೋಳುಗಳನ್ನೂ ಯೋಗಸಾಧನೆಯಲ್ಲಿ ಮುಖ್ಯ ಅಂಗಗಳೆಂದು ಕೆಲವರು ಭಾವಿಸುತ್ತಾರೆ.    


ಆಭರಣಗಳಲ್ಲಿ ವಿವಿಧ ಪ್ರಕಾರಗಳು 

ಆಭರಣಗಳ ವೈವಿಧ್ಯವನ್ನು ಗಮನಿಸೋಣ. ಆಭರಣಗಳು ೪ ಪ್ರಕಾರವೆಂದು ಶಾಸ್ತ್ರಗಳು ಹೇಳುತ್ತವೆ. ಚುಚ್ಚಿಕೊಳ್ಳುವ ಆಭರಣಗಳನ್ನು ಆವೇಧ್ಯ ಎಂದು ಕರೆಯುತ್ತಾರೆ. ಉದಾಹರಣೆಗೆ ಕಿವಿಯ ಓಲೆ, ಮೂಗುತಿ. ಬಂಧನೀಯ ಆಭರಣಗಳು ಬಿಗಿಯಾಗಿ ಕಟ್ಟಿಕೊಳ್ಳುವಂತಹವು-ತೋಳುಬಳೆ ಮುಂತಾದವು. ಪ್ರಕ್ಷೇಪ್ಯ ಆಭರಣಗಳು ಬಂಧನೀಯಗಳಿಗಿಂತ ಸ್ವಲ್ಪ ಸಡಿಲವಾಗಿ ಧರಿಸುವಂಥವು, ಗೆಜ್ಜೆಗಳಂತೆ. ಕೊನೆಯದು ಆರೋಪ್ಯ - ಅಂದರೆ ಶರೀರದ ಅಂಗಾಂಗಗಳ ಮೇಲೆ ಸುಮ್ಮನೆ ನಿಲ್ಲುವಂತೆ ಮಾಡುವ ಆಭರಣಗಳು - ಸರ, ಹಾರ ಮುಂತಾದವು. ಇವುಗಳ ವಿವರಗಳನ್ನು ಮುಂದಿನ ಅಂಕದಲ್ಲಿ ನೋಡೋಣ.

 (ಮುಂದುವರಿಯುವುದು)

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 26/2/2022 ರಂದು ಪ್ರಕಟವಾಗಿದೆ.

Saturday, February 19, 2022

ವಸ್ತ್ರಾಭರಣ - 10 ಕೇಶಾಲಂಕಾರ (Vastra Bharana - 10 Kesaalankara)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)





ಅನಾದಿ ಕಾಲದಿಂದಲೂ ಕೇಶಗಳನ್ನು ಆಯಾ ಕಾಲದ ಫ್ಯಾಷನ್ಗೆ ತಕ್ಕಂತೆ ಅನೇಕ ವಿಧವಾಗಿ ಕಟ್ಟಿ, ಅಲಂಕರಿಸುವ ವಾಡಿಕೆಯಿದೆ. ನಮ್ಮ ದೇಶ ಮೊದಲುಗೊಂಡು ನಾನಾ ದೇಶಗಳಲ್ಲಿ ಕಾಲ, ದೇಶಕ್ಕೆ ತಕ್ಕಂತೆ ಫ್ಯಾಷನ್ ಬದಲಾಗುತ್ತಾ ಬಂದಿದೆ. ಆದರೆ ಅದರ ನಡುವೆ ನಮ್ಮ ದೇಶದಲ್ಲಿ ಯೋಗ, ಯೋಗಸಾಧನೆಯ ದೃಷ್ಟಿಯಿಂದ ಕೇಶಾಲಂಕಾರಕ್ಕೆ ಒಂದು ಹಾದಿಯನ್ನು ಹಾಕಿಕೊಟ್ಟಿರುವುದನ್ನು ಗಮನಿಸಬೇಕು. 


ಕೂದಲು ಸತ್ತ ಜೀವಕಣಗಳ ರಾಶಿ, ಆದ್ದರಿಂದಲೇ ಕತ್ತರಿಸಿದಾಗ ನೋವು ಉಂಟಾಗುವುದಿಲ್ಲ ಎಂದು ಹೇಳುತ್ತಾರೆ. ಆದರೆ  ನಮ್ಮ ಮೈಯಲ್ಲಿ ರೋಮ-ರೋಮವೂ ಚರ್ಮದ ಕೆಳಗಿನ ನರಗಳಿಗೆ ಅಂಟಿಕೊಂಡಿದೆ. ಆದ್ದರಿಂದಲೇ ಎಳೆದರೆ, ನೋವು ಉಂಟಾಗುತ್ತದೆ. ಕೇಶರಾಶಿಯನ್ನು ನಾನಾ ವಿಧವಾಗಿ ವಿಭಜಿಸಿ,  ತಿರುಚಿ, ಕಟ್ಟಿ, ಇಳಿಯಬಿಟ್ಟು ಅನೇಕ ವಿನ್ಯಾಸಗಳನ್ನು ಮಾಡಿದಾಗ ಅದು ನಮ್ಮ ನರಗಳಮೂಲಕ ನಮ್ಮ ಮೇಲೆ ಪ್ರಭಾವವನ್ನು ಬೀರುತ್ತದೆ. ಹಿಂದೆಯೇ ಬಟ್ಟೆಗಳಿಂದ ಉಂಟಾಗುವ ಬಂಧಗಳ ಉಲ್ಲೇಖವನ್ನು ಮಾಡಿ್ದ್ದವು. ಅಂತೆಯೇ ಕೇಶರಾಶಿಯನ್ನು ಕಟ್ಟುವ ಕ್ರಮಗಳು ಸರಿಯಾಗಿ ಯೋಜಿಸಿದ್ದಲ್ಲಿ ಯೋಗ ಸಾಧನೆಗೆ ಅನುಕೂಲ ಮಾಡುವ ಶಕ್ತಿಯನ್ನು ಹೊಂದಿದೆ. 


ಕೇಶರಾಶಿಯನ್ನು  ಕಟ್ಟಿಡುವುದು ಯೋಗಸಾಧನೆಗೆ ಪೋಷಕ. ಆದ್ದರಿಂದಲೇ ಬದ್ಧಶಿಖಿಯಾಗಿ ಎಲ್ಲ ಕರ್ಮಗಳನ್ನು ಮಾಡಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ಸಾಮಾನ್ಯವಾಗಿ ತಲೆಯ ಹಿಂಭಾಗದಲ್ಲಿ ಕೂದಲನ್ನು ಸೇರಿಸಿ ಶಿಖೆಯನ್ನು ಕಟ್ಟುತ್ತಾರೆ. ಈ ವಿನ್ಯಾಸದಿಂದ ತಲೆಯಹಿಂಬದಿಯ ಮರ್ಮಸ್ಥಾನದ ರಕ್ಷಣೆಯಾಗುತ್ತದೆ. ತಲೆಯ ಶಿಖಾಸ್ಥಾನದಲ್ಲಿ  ಜ್ಞಾನಿಯು ತನ್ನೊಳಗೆ ಪರಮಾತ್ಮ ಜ್ಯೋತಿಯನ್ನು ದೀಪಶಿಖೆಯ ಆಕಾರದಲ್ಲಿ ಕಾಣುತ್ತಾನೆ. ಆ ಸ್ಮರಣೆಯಲ್ಲಿ ಹೊರಗಿನ ಈ ಶಿಖೆ. ಪುರುಷರು ಅಂಗುಷ್ಟಗಾತ್ರದ ಶಿಖೆಯನ್ನು ಧರಿಸುತ್ತಾರೆ. ಇನ್ನೂ ಪರಮ ವೈರಾಗ್ಯದಿಂದ ಕೂಡಿದ ಋಷಿಮುನಿಗಳು ಜಗತ್ತಿಗೆ ವಿಮುಖರಾಗಿ, ಕೇಶಭಾರವನ್ನು ಶಿರದ ಮೇಲೆ ಕಟ್ಟಿರುತ್ತಾರೆ.  ಆದರೆ, ಸ್ತ್ರೀಯರು ಪ್ರಕೃತಿಮಾತೆಯ ಪ್ರತಿನಿಧಿ. ಪರಮಾತ್ಮ ಶಕ್ತಿಯನ್ನು ಇಡೀ ವಿಶ್ವದಲ್ಲಿ ಬೆಳೆಸುವವಳು.  'ವಿಶ್ವ' ಎಂದು ಕರೆಯಲ್ಪಡುವ ಈ ಇಡೀ ಶರೀರವನ್ನೂ ವ್ಯಾಪಿಸಿ ಪೋಷಿಸುವ ಕೆಲಸ ಪ್ರಕೃತಿಮಾತೆಯದು. ಅದನ್ನು ಸೂಚಿಸುವಂತೆ ಸ್ತ್ರೀಯರು ಶಿಖೆಯನ್ನು ಜಡೆಯ ರೂಪದಲ್ಲಿ ಉದ್ದವಾಗಿ ಇಳಿಯಬಿಡುತ್ತಾರೆ. ಈ ಕ್ರಮವನ್ನು ನಿಸರ್ಗದ ಯೋಜನೆಯಲ್ಲಿಯೂ ಕಾಣಬಹುದು. ನಮ್ಮ ಮೆದುಳು ಶಿರಸ್ಸಿನ ಸ್ಥಾನವನ್ನು ಅಲಂಕರಿಸಿದೆ, ಬೆನ್ನುಹುರಿಯ ರೂಪದಲ್ಲಿ ಸೊಂಟದವರೆಗೂ ಇಳಿದುಬಂದಿದೆ. ಬೆನ್ನುಹುರಿಯ ಮೂಲಕ ಇಡೀ ಶರೀರವನ್ನು ವ್ಯಾಪಿಸುವ ನರಮಂಡಲವನ್ನು  ನಿಯಂತ್ರಿಸುತ್ತದೆ. ಸ್ತ್ರೀಯರು ಇಳಿಯಬಿಡುವ ಜಡೆಯೂ ಬೆನ್ನುಹುರಿಯ ಆಕಾರವನ್ನು ಹೊಂದಿ ಅದೇಸ್ಥಾನವನ್ನು ಅಲಂಕರಿಸಿದೆ. 


ಕೇಶಕ್ಕೆ ಅಲಂಕಾರವನ್ನು ಮಾಡುವ ಬಗೆಯನ್ನು ಗಮನಿಸಿದರೆ ಜಡೆಯನ್ನು ಹೆಣೆದುಕೊಳ್ಳುವುದೆ ಒಂದು ಅಲಂಕಾರ. ವಿಶೇಷವಾಗಿ ಸ್ತ್ರೀಯರಲ್ಲಿ. ಮೂರು ಕಾಲುಗಳಿಂದ ಕೂಡಿದ ಒಂದು ಜಡೆ ಸರ್ವೇ ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಕಂಡುಬರುತ್ತದೆ. ಆದರೆ ನೋಡುಗರಿಗೆ ಎರಡೇ ಕಾಲುಗಳು ಇದ್ದಂತೆ ಕಂಡುಬರುತ್ತದೆ. ಇದು ಬೆನ್ನು ಹುರಿಯ ಮೂರು ನಾಡಿಗಳಂತೆ ಎಂದು ಶ್ರೀರಂಗಮಹಾಗುರುಗಳು ಸ್ಮರಿಸಿಕೊಂಡಿದ್ದರು. ಇಡಾ-ಪಿಂಗಲಗಳ ಜೊತೆಯಲ್ಲಿ ಸುಷುಮ್ನಾ ಗುಪ್ತವಾಗಿ ಹರಿಯುತ್ತದೆ. ಗಂಗೆ-ಯಮುನೆಗಳ ನಡುವೆ ಗುಪ್ತಗಾಮಿನಿಯಾದ ಸರಸ್ವತಿಯಂತೆ. ಆದರಿಂದಲೇ ಜಡೆಗೆ ತ್ರಿವೇಣಿ ಎಂದೂ ಹೆಸರು. ಈ ರೀತಿ ಹೆಣೆದಿರುವ ಜಡೆಯು, ಜ್ಞಾನಿಗಳಿಗೆ ಜಾಗೃತವಾದ ಕುಂಡಲಿನೀ ಸರ್ಪದ ಆಕಾರವನ್ನು ಜ್ಞಾಪಿಸುತ್ತದೆ. ಮೂಲಾಧಾರದಿಂದ ಎದ್ದು ಸುಷುಮ್ನಾನಾಡಿಯನ್ನು ಹಾದು, ಸಹಸ್ರಾರಕಮಲದಲ್ಲಿ  ಹೆಡೆಯನ್ನೆತ್ತಿ ಜ್ಞಾನಸಮಾಧಿಯ ಪ್ರತಿರೂಪದಂತೆ ಕಾಣುತ್ತದೆ. ಸಮಾಧಿಸ್ಥಾನದಲ್ಲಿನ ಬೆಳಕು, ಸೂರ್ಯ ಚಂದ್ರ ಅಗ್ನಿಗಳ ಸಮಾಗಮವೆಂದು ಹೇಳುತ್ತಾರೆ. ಅದರ ಸ್ಮರಣೆಯಲ್ಲಿಯೇ ಶಿರಸ್ಥಾನದಲ್ಲಿ ಸೂರ್ಯ-ಚಂದ್ರ-ಅಗ್ನಿ-ಕಮಲ ಮುಂತಾದ ಅಲಂಕಾರಗಳನ್ನು ಸ್ತ್ರೀಯರು ಧರಿಸುತ್ತಾರೆ. 


ಕೇಶಾಲಂಕಾರವನ್ನೂ ಯೋಗಸಾಧನೆಯ ನಿಟ್ಟಿನಲ್ಲಿ ಕಂಡರುಹಿದ ಮಹರ್ಷಿಗಳಿಗೆ ನಮೋನಮಃ 

 (ಮುಂದುವರಿಯುವುದು)

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 19/2/2022 ರಂದು ಪ್ರಕಟವಾಗಿದೆ.

Sunday, February 13, 2022

ವಸ್ತ್ರಾಭರಣ - 9 ಕುಂಕುಮ - ತಿಲಕ -ಪುಂಡ್ರಗಳು (Vastra Bharana - 8 Kunkuma - Tilaka -Pundragalu)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)

 


ಹಣೆಯಲ್ಲಿ ಧರಿಸುವ ತಿಲಕ, ಕುಂಕುಮ, ಭಸ್ಮ, ಚಂದನ ಇತ್ಯಾದಿ ಲಾಂಛನಗಳು ಅಲಂಕಾರಗಳ ಮುಖ್ಯವಾದ ಭಾಗ. ಇವು ಕೆಲವೊಮ್ಮೆ ಕುಚೋದ್ಯಕ್ಕೂ ವಿಷಯವಾದರೂ ಇದರ ಹಿಂದಿನ ಗೂಢವೂ ಗಾಢವೂ ಆದ ತತ್ತ್ವ ಮನಸ್ಸಿಗೆ ಬಂದಾಗ ಕುಚೋದ್ಯವು ಕರಗಿ ಗೌರವಕ್ಕೆ ಎಡೆಯಾಗುವುದೆಂದು ಭಾವಿಸುತ್ತೇವೆ. 


ಕುಂಕುಮವನ್ನು ಕುರಿತು ವಿಮರ್ಶಕರೊಬ್ಬರು "ಬ್ಯೂಟಿ ಸ್ಪಾಟ್" ಎಂದು ಕರೆದಿರುವುದನ್ನು ಶ್ರೀರಂಗಮಹಾಗುರುಗಳಿಗೆ ವಿಜ್ಞಾಪಿಸಿದಾಗ, ಅವರು 'ನಾನು ಅದನ್ನು "ಜ್ಯೋತಿಯ ಸ್ಪಾಟ್" ಎಂದು ಕರೆಯುತ್ತೇನಪ್ಪ' ಎಂದು ಉದ್ಗರಿಸಿದ್ದರು. ಋಷಿಗಳು  ಅಂತರಂಗದ ಯೋಗಮಾರ್ಗದಲ್ಲಿ ಸಾಗುವಾಗ, ನಾನಾ ಸ್ಥಾನಗಳಲ್ಲಿ ನಾನಾ ಆಕಾರಗಳಲ್ಲಿ ಬೆಳಗುವ ಜ್ಯೋತಿಯನ್ನು ಕಾಣುತ್ತಾರೆ. ಅಂತಹ ಜ್ಯೋತಿರ್ದರ್ಶನದ ಸ್ಥಾನಗಳಲ್ಲಿ  ಲಲಾಟವು ಪ್ರಮುಖವಾದ ಸ್ಥಾನ. ಯೋಗಕ್ಕೆ ಆಯತನವಾದ ಈ ಶರೀರದಲ್ಲಿ ಭ್ರೂಮಧ್ಯದಿಂದ ಕೆಳಗಿನ ಭಾಗವು ಪ್ರಕೃತಿ, ಅಲ್ಲಿಂದ ಮೇಲಿನದು ಭಾಗ ಪುರುಷ ಭಾಗವೆಂಬುದು ಯೋಗಿಗಮ್ಯ ಸತ್ಯ. ಭ್ರೂಯುಗವು ಪ್ರಕೃತಿ-ಪುರುಷಭಾಗಗಳ ಮಧ್ಯರೇಖೆಯಾಗಿದೆ. ಈ ಭ್ರೂಮಧ್ಯದಲ್ಲಿ ಬಿಂದುರೂಪದ ಜ್ಯೋತಿಯನ್ನು ಯೋಗಿಗಳು ಒಳಗೆ ಕಾಣುತ್ತಾರೆ. ಬಿಂದುವಿನಿಂದ ಶರೀರದಲ್ಲಿನ ನಾನಾ ದೇವತಾ ಶಕ್ತಿಗಳ ಸೃಷ್ಟಿಯನ್ನೂ ಕಾಣುತ್ತಾರೆ. ಅಷ್ಟುಮಾತ್ರವಲ್ಲದೆ, ಈ ಬಿಂದುವಿನೊಳಗೆ ಸೂಕ್ಷ್ಮರೂಪದಲ್ಲಿ ಜೀವಾತ್ಮನನ್ನು ಜ್ಯೋತೀ ರೂಪದಲ್ಲಿ ಕಾಣುತ್ತಾರೆ. 


ಹೊರಗಡೆಯಿಂದ ಪ್ರಕೃತಿಸ್ವರೂಪಿಣಿಯಾಗಿ ಮಕ್ಕಳನ್ನು ಹೆತ್ತು ಪೋಷಿಸುವ ಸ್ತ್ರೀ, ಒಳಗಿನ ಆ ಸೃಷ್ಟಿಮೂಲ ಬಿಂದುವನ್ನು ಹೊರಗಡೆಯೂ ಅದೇ ಭ್ರೂಮಧ್ಯಸ್ಥಾನದಲ್ಲಿ  ಅಥವಾ ಸ್ವಲ್ಪ ಮೇಲುಗಡೆ ಧರಿಸುತ್ತಾಳೆ. ಪುರುಷರೂ ಜೀವಾತ್ಮನ ಗುರುತಾಗಿ ಒಂದು ದೀಪಶಿಖೆಯ ಆಕಾರದಲ್ಲಿ, ತಿಲಕಾಕಾರದಲ್ಲಿ ಪುಂಡ್ರವನ್ನು ಧರಿಸುತ್ತಾರೆ. ಸ್ತ್ರೀಯರೂ ವಯೋಮಾನಕ್ಕೆ ತಕ್ಕಂತೆ ತಮ್ಮ ಸೃಷ್ಟಿಕಾರ್ಯದ ಹೊಣೆಯನ್ನು ಪೂರೈಸಿದ ನಂತರ ವೈರಾಗ್ಯವನ್ನು ಅವಲಂಬಿಸಿದಾಗ ತಿಲಕಾಕಾರದ ಬೊಟ್ಟನ್ನು ಲಲಾಟದಲ್ಲಿ ಧರಿಸುತ್ತಾರೆ. 


ಪುರುಷರು ಧರಿಸುವ ಊರ್ಧ್ವಪುಂಡ್ರವು ಇಬ್ಬಗೆ, ನಾಮ ಎಂದು ಪಾರಿಭಾಷಿಕವಾಗಿ ಕರೆಯಲ್ಪಡುವ ಊರ್ಧ್ವಪುಂಡ್ರ, ಭಸ್ಮ-ವಿಭೂತಿ ಎಂದು ಕರೆಯಲ್ಪಡುವ ತಿರ್ಯಕ್ ಪುಂಡ್ರ ಅಥವಾ ತ್ರಿಪುಂಡ್ರ. ಇವೆರಡೂ ಕೇವಲ ಹಣೆಯಲ್ಲಿ ಮಾತ್ರವಲ್ಲದೆ ಶರೀರದ ನಾನಾ ಸ್ಥಾನಗಳಲ್ಲಿ ಧರಿಸುವ ವಾಡಿಕೆ ಇದೆ. ಊರ್ಧವಪುಂಡ್ರದಲ್ಲಿ ಉದ್ದವಾದ ಮೂರು ರೇಖೆಗಳು. ಎಡ ಬಲದಲ್ಲಿ ಬಿಳಿಯಮೃತ್ತಿಕೆಯಿಂದ ಮಾಡಿರುವ ರೇಖೆಗಳು. ಮಧ್ಯದಲ್ಲಿ ಹರಿಶಿನ,ಕುಂಕುಮ,ತುಳಸಿ,ಅಕ್ಕಿಹಿಟ್ಟು ಮುಂತಾದ ದ್ರವ್ಯಗಳಿಂದ ತಯಾರಿಸಲ್ಪಟ್ಟ ಕೆಂಪು ಬಣ್ಣದ ರುಜುವಾದ ರೇಖೆ. ಹಳದಿ ಅಥವಾ ಗೋಪಿಚಂದನದಿಂದಲೂ ಧರಿಸುವುದುಂಟು.  ಮಧ್ಯರೇಖೆಯು ಸುಷುಮ್ನಾನಾಡಿಯಲ್ಲಿ ಬೆಳಗುವ ಜ್ಯೋತಿಯನ್ನೂ, ಎಡಬಲದಲ್ಲಿ ಪಕ್ಕದ ಇಡಾ-ಪಿಂಗಳಾ ನಾಡಿಗಳನ್ನೂ ಸೂಚಿಸುತ್ತದೆ. ಈ ಜ್ಯೋತಿಯ ದರ್ಶನ ಜ್ಞಾನಿಯು, ಹೃದಯ, ನಾಭಿಯ ಮೇಲುಗಡೆ, ಕಂಠ, ಭುಜಗಳು, ಬೆನ್ನು ಕತ್ತು ಮತ್ತು ಬ್ರಹ್ಮರಂಧ್ರಸ್ಥಾನದಲ್ಲ್ಲೂ ಕಾಣುತ್ತಾನೆ. ಅದರ ಸ್ಮರಣೆಯಲ್ಲಿ ಆಯಾ ಜಾಗದಲ್ಲಿ ಆಯಾ ಗಾತ್ರದಲ್ಲಿ ಇಟ್ಟುಕೊಳ್ಳುತ್ತಾನೆ. 


ವಿಭೂತಿ-ಭಸ್ಮ ಎಂಬುದು  ಭಸ್ಮದಿಂದ ಮಾಡಿದ ಮೂರು ಅಡ್ಡ ರೇಖೆಗಳ ರೂಪದಲ್ಲಿ ಹಣೆಯಲ್ಲಿ ವಿರಾಜಿಸುವ ಪುಂಡ್ರವಿದು. ತನ್ಮಧ್ಯದಲ್ಲಿ ಒಂದು ಊರ್ಧ್ವಪುಂಡ್ರವನ್ನೂ ಧರಿಸುವುದುಂಟು. ಸೃಷ್ಟಿಯಲ್ಲಿರುವುದೆಲ್ಲವೂ ಮೂರು-ಮೂರಾಗಿದೆ; ಮೂರು ಗುಣಗಳು (ಸತ್ತ್ವ-ರಜಸ್-ತಮಸ್), ದೋಷಗಳು(ವಾತ-ಪಿತ್ತ-ಶ್ಲೇಷ್ಮ), ಲೋಕಗಳು(ಭೂ:-ಭುವ:-ಸುವ:), ತ್ರಿಮೂರ್ತಿಗಳು, ವೇದಗಳು(ಋಗ್-ಯಜುಸ್-ಸಾಮ), ಪ್ರಣವದ ಮಾತ್ರೆಗಳು(ಅ -ಉ-ಮ). ಇವನ್ನು ನಾವೆಲ್ಲಾ ಧರಿಸಿದ್ದೇವೆ, ಅಷ್ಟು ಮಾತ್ರವಲ್ಲದೇ ಇವೆಲ್ಲದರ ಪ್ರೇರಕ ಶಕ್ತಿಯಾಗಿದ್ದು ಎಲ್ಲವನ್ನೂ ಭಸ್ಮರೂಪದಲ್ಲಿ ತನ್ನಲ್ಲಿ ಲಯಗೊಳಿಸಿಕೊಳ್ಳುವ ಪರಾತ್ಪರ ವಸ್ತುವನ್ನು ಸೂಚಿಸುತ್ತದೆ ಭಸ್ಮ- ತ್ರಿಪುಂಡ್ರ.                     


ಶ್ರೀರಂಗಮಹಾಗುರುಗಳು ಧ್ಯಾನಮಗ್ನರಾದ ತಮ್ಮ ಶಿಷ್ಯರ ಶರೀರದಲ್ಲಿ, ಯೋಗದೆಶೆಯಲ್ಲಿ ಇಬ್ಬಗೆಯ ಪುಂಡ್ರಗಳ ಗುರುತು ಸಹಜವಾಗಿ ಮೂಡಿಬರುತ್ತಿರುವುದನ್ನು ತೋರಿಸಿ, ಈ ಪುಂಡ್ರಗಳ ಯೌಗಿಕ ಸ್ವರೂಪವನ್ನು ಪ್ರತಿಪಾದಿಸಿದ್ದರು.

(ಮುಂದುವರಿಯುವುದು)

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 12/2/2022 ರಂದು ಪ್ರಕಟವಾಗಿದೆ.

Saturday, February 5, 2022

ವಸ್ತ್ರಾಭರಣ - 8 ಪೇಟ-ಶಿರಸ್ತ್ರಾಣ (Vastra Bharana - 8 Peta-Sirastrana)


ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)


ಅಂತರೀಯ ಮತ್ತು ಉತ್ತರೀಯದ ಜೊತೆಯಲ್ಲಿ ಮೂರನೆಯ ವಸ್ತ್ರವೆಂದರೆ ತಲೆಯ ಸುತ್ತಲೂ ಕಟ್ಟುವ ಪೇಟ. ಭಾರತೀಯ ಶಿಲ್ಪಗಳನ್ನು ಗಮನಿಸಿದರೆ, ಅನಾದಿ ಕಾಲದಿಂದಲೂ ಶಿರಸ್ತ್ರಾಣವನ್ನು ಪೇಟಗಳ ರೂಪದಲ್ಲೋ, ರತ್ನಾಲಂಕೃತವಾದ ಕಿರೀಟಗಳಾಗಿಯೋ ಧರಿಸುವುದು ಕಂಡುಬರುತ್ತದೆ. ಮಳೆ-ಗಾಳಿ-ಬಿಸಿಲಿನಿಂದ ರಕ್ಷಿಸುವ ಕೆಲಸವೊಂದಾದರೆ, ಅಲಂಕಾರವಾಗಿ ಸೌಂದರ್ಯವನ್ನು ವರ್ಧಿಸುವುದು ಮತ್ತೊಂದು ಲಾಭ. ಆದರೆ ಇಲ್ಲಿ ಭಾರತೀಯ ಮಹರ್ಷಿಗಳ ಗೂಢವೂ ಗಾಢವೂ ಆದ ದೃಷ್ಟಿಯೊಂದಿದೆ.   


ಮುಬ್ಬಗೆಯ ವಸ್ತ್ರಗಳು ವೇದಗಳು ಕೊಂಡಾಡುವ ಮೂರು ಲೋಕಗಳನ್ನೂ ಜ್ಞಾಪಿಸುತ್ತದೆ. ಭೂಲೋಕ, ಭುವರ್ಲೋಕ ಮತ್ತು ಸುವರ್ಲೋಕಗಳೆಂಬ ಈ ಮೂರು ಲೋಕಗಳನ್ನು ಭುವಿ, ಅಂತರಿಕ್ಷ,  ದಿವಿ ಎಂದೂ ಪರಿಗಣಿಸುವುದುಂಟು. ಈ ಲೋಕಗಳು ಕೇವಲ ಹೊರಗಡೆಮಾತ್ರವಲ್ಲದೆ ನಮ್ಮೊಳಗೂ ಬೆಳಗುತ್ತವೆ. ಜ್ಞಾನಿಯಾದವನು ತನ್ನ ಒಳಗಡೆಯೂ ಈ ಲೋಕಗಳನ್ನು ಕಾಣುತ್ತಾನೆ. ಭುವಿಯಿಂದ ಪ್ರಾರಂಭಿಸಿ, ಪ್ರಾಣಗಳು ಊರ್ಧ್ವ ಮುಖವಾಗಿ ಹರಿದಾಗ ಅಂತರಿಕ್ಷವನ್ನು ದಾಟಿ ದಹರಾಕಾಶದಲ್ಲಿ ವಿಹರಿಸುತ್ತಾನೆ. ಕೊನೆಯಲ್ಲಿ, ಪ್ರಾಣರೂಪವಾದ ಕುಂಡಲೀಸರ್ಪವು ಶಿರಸ್ಥಾನದಲ್ಲಿನ ಸಹಸ್ರಾರಕಮಲಕ್ಕೆ ಹತ್ತಿದಾಗ, ದಿವಿಯಲ್ಲಿ ಬೆಳಗುವ ಪ್ರಕಾಶಮಾನವಾದ ಸೂರ್ಯರೂಪಿಯಾದ ಬೆಳಕನ್ನು ಕಾಣುತ್ತಾನೆ. ಯೋಗಿವರೇಣ್ಯರಾದ ಶ್ರೀರಂಗ ಮಹಾಗುರುಗಳು ಸಮಾಧಿಯ  ಈ ಪರಮಾತ್ಮಾನುಭವವನ್ನು ವರ್ಣಿಸುತ್ತಾ 'ಕೋಟಿ ಕೋಟಿ ಸೂರ್ಯಪ್ರಕಾಶವೆಂದೂ ಕರೆಯಬಹುದಪ್ಪಾ' , 'ಆದರೂ ಅವನು ಬೆಳದಿಂಗಳಂತೆ ತಂಪಾಗಿದ್ದಾನೆ' ಎಂದು ಅವರ ಅನುಭವವನ್ನು ಸಾರಿದ್ದಾರೆ. ದಿವಿಯಲ್ಲಿ ಬೆಳಗುವ ಪ್ರಧಾನ ಜ್ಯೋತಿಗಳು ಸೂರ್ಯ-ಚಂದ್ರರು. ಅವರಿಬ್ಬರೂ ಒಂದೆಡೆ ಸೇರಿಕೊಂಡಂತೆ ಭಾಸವಾಗುವಂತಹ ಈ ಅನುಭವವನ್ನು ಋಷಿಗಳು ಒಳ ದಹರಾಕಾಶದಲ್ಲಿ ಕಾಣುತ್ತಾರೆ. 


ನಮ್ಮ ಶರೀರವನ್ನೇ ಗಮನಿಸಿದರೆ, ನಾಭಿಯವರೆಗಿನ ಭಾಗ ಭುವಿಯೆಂದೂ, ಅಲ್ಲಿಂದ ಮೇಲ್ಭಾಗವನ್ನು (ಶಿರಸ್ಸಿನ ವರೆಗೆ) ಅಂತರಿಕ್ಷವೆಂದೂ, ಶಿರೋಭಾಗವನ್ನು ದಿವಿಯೆಂದೂ ಹೇಳುವುದುಂಟು. ನಾವು ಹಿಂದೆಯೇ ಗಮನಿಸಿದಂತೆ, ಭುವಿಯ ಸ್ಥಾನವನ್ನು ಅಲಂಕರಿಸುವ ಅಂತರೀಯವು ಮೂಲ ಮತ್ತು ಉದರಬಂಧಗಳನ್ನು ಭದ್ರಪಡಿಸಿ ಪ್ರಾಣಗಳನ್ನು ಒಳಮುಖವಾಗಿಸುತ್ತದೆ. ಅಂತರಿಕ್ಷದ ಸ್ಥಾನವನ್ನು ಅಲಂಕರಿಸುವ ಉತ್ತರೀಯವು ಪ್ರಾಣಗಳ ಪಥವನ್ನು ನೆನಪಿಸುತ್ತದೆ, ಅಂತರಂಗದಲ್ಲಿ ದರ್ಶಿಸಲು ಸಹಕರಿಸುತ್ತದೆ, ಸಂಚಾಲನವನ್ನೂ ಉಂಟುಮಾಡುತ್ತದೆ. ಹೀಗಿಯೇ, ದಿವಿಯ ಭಾಗವನ್ನು, ಅಂದರೆ ಶಿರಸ್ಸನ್ನು ಅಲಂಕರಿಸುವ ವಸ್ತ್ರ-ಆಭರಣಗಳು ದಹರಾಕಾಶದಲ್ಲಿ ಬೆಳಗುವ ಅನುಭವಗಳ ಅಭಿಜ್ಞಾನವಾಗಿಯೇ ಇರುತ್ತವೆ.         


ಸಹಸ್ರಾರ ಸ್ಥಾನದಲ್ಲಿ ಧರಿಸುವ ಕಿರೀಟಗಳು ಆಕಾಶವನ್ನು ಚುಂಬಿಸುವ ಶಿಖರದ ಆಕಾರದಲ್ಲಿರುತ್ತವೆ, ಪ್ರಭಾವಳಿಗಳಿಂದಲೂ ಕೂಡಿರುತ್ತವೆ. ವಜ್ರ-ವೈಢೂರ್ಯಗಳಿಂದ ಕಂಗೊಳಿಸುತ್ತ ಸೂರ್ಯ-ಚಂದ್ರರಂತೆ ಜಾಜ್ವಲ್ಯಮಾನವಾಗಿ ಕಂಗೊಳಿಸುತ್ತವೆ. ಇಂದೂ ಮದುವೆ-ಸಮಾರಂಭಗಳಲ್ಲಿ ಸ್ತ್ರೀಯರು ಶಿರಸ್ಸಿನ ಸ್ಥಾನದಲ್ಲಿ ಧರಿಸುವ ಅಲಂಕಾರಗಳಲ್ಲಿ, ಸೂರ್ಯ, ಚಂದ್ರ, ನಕ್ಷತ್ರಗಳು, (ಸಹಸ್ರಾರ) ಕಮಲ, (ಕುಂಡಲೀ)ನಾಗರ ಹೆಡೆ ಮುಂತಾದವುಗಳು ಕಂಡುಬರುತ್ತವೆ. ಕೃಷ್ಣನು ಧರಿಸುವ ನವಿಲುಗರಿಯ ಮಧ್ಯಭಾಗವನ್ನು ನೋಡಿದರೆ, ಒಂದರೊಳಗೊಂದು ಲೀನವಾಗುವ ವೃತ್ತಗಳು ಸೂರ್ಯ-ಚಂದ್ರ-ಅಗ್ನಿಗಳು ಒಂದರೊಳಗೊಂದು ಸೇರಿಕೊಂಡಂತೆ ಕಾಣುತ್ತವೆ. ಪೇಟ-ಕಿರೀಟ ಯಾವುದೇ ರೂಪದಲ್ಲಿರಲಿ, ಶಿರಸ್ತ್ರಾಣಗಳು ನೆತ್ತಿಯ ಸುತ್ತಲೂ ಬಿಗಿಯುತ್ತವೆ.  ಹಣೆಗೆ ಕಟ್ಟಿರುವ ಬಾಸಿಂಗವೂ ಅದೇ ಕೆಲಸವನ್ನು ಮಾಡುತ್ತದೆ. ಜೊತೆಗೆ ಬಾಸಿಂಗವು ವಿಶೇಷವಾಗಿ ಹಣೆಯ ಮಧ್ಯದಲ್ಲಿ, ಭ್ರೂಮಧ್ಯಸ್ಥಾನದಲ್ಲಿ ಒಂದು ಗಂಟಿನಂತೆ ಒತ್ತುವ ಕೆಲಸ ಮಾಡುತ್ತದೆ. ಇದು ಆಜ್ಞಾಚಕ್ರದ ಸ್ಥಾನ. ಈ ಚಕ್ರವು ಒಳಗಡೆಯಲ್ಲಿ  ಸಮಾಧಿಸಾಮ್ರಾಜ್ಯದ ಹೊಸಲಿನಂತಿದೆ. ಈ ಬಾಸಿಂಗವು ಚರಿತ್ರೆಯ ದೃಷ್ಟಿಯಿಂದಲೂ ಅತ್ಯಂತ ಪ್ರಾಚೀನವಾದ ಆಭರಣವೆಂದು ಕಂಡುಬರುತ್ತದೆ. ಸಿಂಧುಕಣಿವೆಯ ಶಿಲ್ಪಗಳಲ್ಲಿ ಕಂಡುಬರುತ್ತದೆ. ಅನಂತರದ ಮೌರ್ಯರ ಶಿಲ್ಪಗಳಲ್ಲಿ ಬಾಸಿಂಗವಾಗಿ, ಅಥವಾ ಹಣೆಯಲ್ಲಿ ಗಂಟು ಮಾಡುವ ಪೇಟದ ರೂಪದಲ್ಲಿ ಕಂಡುಬರುತ್ತದೆ. ಒಂದಾನೊಂದು ಕಾಲದಲ್ಲಿ ಪ್ರಚಲಿತವಾಗಿದ್ದ ಈ ವಸ್ತ್ರ-ಅಲಂಕಾರ ವಿನ್ಯಾಸವಿಂದು ಭಾರತದ ಹೆಚ್ಚುವರಿ ಭಾಗಗಳಲ್ಲಿ ಲುಪ್ತವಾಗಿದ್ದರೂ ಕರ್ನಾಟಕ-ಆಂಧ್ರಗಳಲ್ಲಿ ಪ್ರಚಲಿತವಾಗಿರುವುದು ಗಮನೀಯ. ಹೀಗೆ ಒಳ ಬೆಳಕನ್ನು ನೆನಪಿಸಲು ತಂದ ಸಹಜಾಲಂಕಾರವಾಗಿ ಶಿರವೇಷವು ಇರುವುದನ್ನು ಗಮನಿಸಬೇಕು.

 (ಮುಂದುವರಿಯುವುದು)

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 5/2/2022 ರಂದು ಪ್ರಕಟವಾಗಿದೆ.



Saturday, January 29, 2022

ವಸ್ತ್ರಾಭರಣ - 7 ಉತ್ತರೀಯ ಮತ್ತು ಪ್ರಾಣಸಂಚಾರ (Vastra Bharana - 7 UttarIya Mattu Pranasanncara)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)


ಮೇಲ್ವಸ್ತ್ರ ಅಥವಾ ಉತ್ತರೀಯ ಭಾರತೀಯ ವಸ್ತ್ರಯೋಜನೆಯಲ್ಲಿ ಮುಖ್ಯವಾದ ಸ್ಥಾನವನ್ನು ಪಡೆಯುತ್ತದೆ. ಬಲಕಂಕಳು, ಸೊಂಟವನ್ನು ಹಾದುಹೋಗಿ ಎಡ ಹೆಗಲಿನ ಮೇಲೆ ವಿಶ್ರಮಿಸಿ ಅಲಂಕರಿಸುವ ವಸ್ತ್ರವಿದು. ಪುರುಷರು ಬಿಳಿಯ ಒಂದು ಪ್ರತ್ಯೇಕವಾದ ಮೇಲ್ವಸ್ತ್ರವನ್ನು ಧರಿಸಿದರೆ, ಸ್ತ್ರೀಯರ ಸೀರೆಯ ಮೇಲ್ಭಾಗವಾಗಿ ಇದನ್ನು ಧರಿಸುತ್ತಾರೆ. ಎಡ ತೋಳು - ಬಲ ಸೊಂಟದ ನಡುವೆ ಹಾದು ಹೋಗುವ ಕ್ರಮವನ್ನು ನಾವು ಜನ್ನದಾರದಲ್ಲೂ ಕಾಣುತ್ತೇವೆ. ಇದು ಆಕಸ್ಮಿಕವಲ್ಲ. ಉತ್ತರೀಯ ಮತ್ತು ಜನಿವಾರ ಎರಡೂ ಮೌಲಿಕವಾಗಿ ಒಂದೇನೇ. ಅದರ ಹೆಸರೇ ಹೇಳುವಂತೆ, ಜನ್ನದಾರ ಅಥವಾ ಯಜ್ಞ-ದಾರ ಯಜ್ಞಕ್ಕೆ ಸಂಬಂಧವನ್ನು ಹೊಂದಿದೆ. ಉತ್ತರೀಯವನ್ನು ವೇದಗಳು ಅಧಿವಸ್ತ್ರವೆಂದೂ ಯಜ್ಞದ ಆಚರಣೆಯಲ್ಲಿ ಧರಿಸಲ್ಪಡುವ ವಸ್ತ್ರವೆಂದೂ ಕರೆಯುತ್ತದೆ. ಉತ್ತರೀಯವನ್ನು ತೃತೀಯ ಯಜ್ಞೊಪವೀತ ಎಂದೂ ಕರೆಯುವುದುಂಟು. ಇಂತಹ ಒಂದು ವಸ್ತ್ರವಿನ್ಯಾಸಕ್ಕೂ ಯಜ್ಞಕ್ಕೂ ಏನು ಸಂಬಂಧವೆಂದು ನೋಡೋಣ. 


ಯಜ್ಞ ಮತ್ತು ದೇವತೆಗಳು 


ನಮ್ಮ ಶರೀರವೇ ಸಮಸ್ತ ದೇವತಾ ಶಕ್ತಿಗಳ ನೆಲೆಮನೆಯಾಗಿದೆ. ನಮ್ಮ  ಇಂದ್ರಿಯ, ಮನಸ್ಸು ಬುದ್ಧಿಗಳ ಹಿಂದೆ ಆಡುವ ಶಕ್ತಿಗಳನ್ನು ದೇವತಾ ಶಕ್ತಿಗಳ ರೂಪದಲ್ಲಿ ಋಷಿಗಳು ತಮ್ಮ ಒಳಗಣ್ಣಿನಿಂದ ದರ್ಶನ ಮಾಡಿದರು. ಆ ದೇವತಾ ಶಕ್ತಿಗಳು ಪ್ರಸನ್ನವಾಗಿದ್ದು ಚೆನ್ನಾಗಿ ನಮ್ಮ ಮೈ-ಮನಗಳಲ್ಲಿ ಸಂಚರಿಸುವಂತೆ ಆದರೆ, ಇಂದ್ರಿಯ-ಮನಸ್ಸು-ಬುದ್ಧಿ-ಆತ್ಮ ಎಲ್ಲವೂ ಸುಸ್ಥಿತಿಯಲ್ಲಿದ್ದು ಭೋಗ-ಯೋಗಗಳ ಸಾಧನೆಗೆ ಯೋಗ್ಯವಾದ ಜೀವನ ಸಿದ್ಧಿಸುತ್ತದೆ. ದೇವತಾ ಶಕ್ತಿಗಳನ್ನು ಪ್ರಸನ್ನಗೊಳಿಸಿ ನಮ್ಮಲ್ಲಿ ಅಬಾಧಿತವಾಗಿ ಹರಿಯುವಂತೆ ಮಾಡುವ ಕ್ರಿಯೆಯನ್ನೇ ಯಜ್ಞ ಎಂದು ಕರೆಯುತ್ತಾರೆ. 


ಶಕ್ತಿರೂಪರಾದ ದೇವತೆಗಳನ್ನು ಬರಮಾಡಿ ತೃಪ್ತಿಗೊಳಿಸುವುದು ಹೇಗೆ ?             

                         

ಒಂದು ವೃಕ್ಷದ ಫಲ ಸಿಗುವುದು ಹೇಗೆ ? ಬೀಜದಿಂದ ಹಿಡಿದು, ವೃಕ್ಷವಾಗಿ ಬೆಳೆದು ಫಲವನ್ನು ಕೊಡುವ 'ಪ್ಲಾನ್' ಬೀಜದಲ್ಲೇ ಅಡಕವಾಗಿದೆ. ಇದು ಸೃಷ್ಟಿಮಾತೆಯ 'ಪ್ಲಾನ್' ಎಂದೂ ಹೇಳ ಬಹುದು. ಆದರೆ ಸೃಷ್ಟಿಮಾತೆಯು ಯೋಜಿಸಿ ಇಟ್ಟಿರುವ ಶಕ್ತಿಗಳ, ಪೂರ್ಣಫಲವನ್ನು ಪಡೆಯಬೇಕಾದರೆ ಬೀಜವನ್ನು ನೆಟ್ಟು, ನೀರೆರೆಯ ಬೇಕು. ಕೃಷಿ ಮಾಡ ಬೇಕು. ಅಂತೆಯೇ ನಮ್ಮ ಶರೀರದಲ್ಲಿ ಯೋಗ-ಭೋಗ ವೆಂಬ ಇಬ್ಬಗೆಯ ಫಲಗಳನ್ನು ತಂದುಕೊಡುವ ಶಕ್ತಿ ಅಡಕವಾಗಿದೆ. ಯಜ್ಞವೆಂಬ ಕರ್ಮವು ನೀರೆರೆದು ಕೃಷಿ ಮಾಡಿ, ಆ ಗುಪ್ತ ಶಕ್ತಿಗಳ ಪೂರ್ಣ ವಿಕಾಸ ಮಾಡುವ ಕೆಲಸ ಮಾಡುತ್ತದೆ.


ದೇವತಾ ಯಜ್ಞಕ್ಕೆ ಪ್ರಾಣಸಂಚಾರ  


ನಾವು ಹಿಂದೆಯೇ ಗಮನಿಸಿದಂತೆ ಎಲ್ಲ ಕರ್ಮಗಳಲ್ಲೂ ಪ್ರಾಣಗಳ ಪಾತ್ರ ಅನಿವಾರ್ಯ. ಅಂತೆಯೇ ಈ ದೇವತೆಗಳನ್ನು ಬರಮಾಡಿಕೊಳ್ಳ ಬೇಕಾದರೆ ನಮ್ಮಲ್ಲಿರುವ ಪ್ರಾಣಶಕ್ತಿಗಳನ್ನು ನಿರ್ದಿಷ್ಟಕ್ರಮದಲ್ಲಿ ಇಟ್ಟುಕೊಳ್ಳಬೇಕು. ದೇವತಾ ಕರ್ಮಗಳಿಗೆ ಪ್ರಾಣಗಳು 'ವಾಮ ಬಾಹು ದಕ್ಷಿಣ ಕಟಿ', ನಡುವೆ ಹರಿಯ ಬೇಕು. ಅಂತಹ, ದೇವತಾ ಯಜ್ಞಕ್ಕೆ ಪೋಷಕವಾದ ಪ್ರಾಣ ಸ್ಥಿತಿಯನ್ನು ತಂದುಕೊಡಲು ಈ ಮೇಲ್ವಸ್ತ್ರದ ವಿನ್ಯಾಸ ಅತ್ಯಂತ ಸಹಾಯಕ. ಈ ವಿನ್ಯಾಸವನ್ನು ಉಪವೀತಿ ಎಂದು ಕರೆಯುತ್ತಾರೆ. ತದ್ವಿಪರೀತವಾದ ಒಂದು ವಿನ್ಯಾಸವೂ ಉಂಟು. ಬಲತೋಳು ಎಡ ಸೊಂಟವನ್ನು ಹಾದುಹೋಗುವ ಪ್ರಾಚೀನಾವೀತಿ ಎಂಬ ಒಂದು ವಿನ್ಯಾಸ ಪಿತೃ-ದೇವತೆಗಳ ಪ್ರೀತಿಗೆ ಅನುಕೂಲಕರ. 


ಈ ಮರ್ಮವನ್ನು ಸೂಚಿಸಲೆಂದೇ ದೇವತಾ ಶಿಲ್ಪಗಳಲ್ಲಿ  ಕೆಲವೊಮ್ಮೆ ಪ್ರಾಣರೂಪವಾದ ಸರ್ಪವನ್ನೇ ಯಜ್ಞೋಪವೀತವಾಗಿ ಧರಿಸಿರುವುದನ್ನು ಕಾಣುತ್ತೇವೆ.  ಇಂತಹ ಮಾರ್ಮಿಕವಾದ ಸತ್ಯಗಳು ವೇದ-ಶಾಸ್ತ್ರಗಳಲ್ಲಿ ಅಡಕವಾಗಿದ್ದರೂ ಅವನ್ನು ಬಿಚ್ಚಿ ಪ್ರಾಯೋಗಿಕವಾಗಿ ತೋರಿಸಿದ ಯೋಗಿವರೇಣ್ಯರು ಶ್ರೀರಂಗಮಹಾಗುರುಗಳು. ಋಷಿಸದೃಶರಾದ ಆ ಮಹನೀಯರಿಗೆ ನಮೋನಮ: ! 


ಸೂಚನೆ : 29/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Saturday, January 22, 2022

ವಸ್ತ್ರಾಭರಣ- 6 ಅಂತರೀಯ ಮತ್ತು ಬಂಧಗಳು (Vastra bharana - 6 Antariya Mattu Bandhagalu)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)



ಅಂತರೀಯ ಅಥವಾ ಕೆಳವಸ್ತ್ರ ಶರೀರದ ಕೆಳಭಾಗವನ್ನು ಮುಚ್ಚುವ ಒಂದು ಅವಿಚ್ಛಿನ್ನವಾದ ವಸ್ತ್ರ. ಇದು ಕೆಳಮೈಯನ್ನು ಸುತ್ತುವರೆದು, ಗಂಟುಹಾಕಿ ಸೊಂಟಕ್ಕೆ ಬಿಗಿದಿರುತ್ತದೆ. ಗಂಡಸರು ಉಡುವ ಪಂಚೆ, ಸ್ತ್ರೀಯರ ಸೀರೆಯ ಕೆಳಭಾಗ ಇವು ಅಂತರೀಯದ ನಿದರ್ಶನಗಳು. ಪಂಚೆ ಉಡುವ ಬಗೆಗಳು ಅನೇಕ. ಸುಮ್ಮನೆ ಸುತ್ತಿಕೊಂಡಿರುವುದು ಒಂದು. ಪಂಚಕಚ್ಛದ ಶೈಲಿ ಮತ್ತೊಂದು. ಕಚ್ಛ ಎಂದರೆ ಬಟ್ಟೆಯ ತುದಿ ಅಥವಾ ಅಂಚು. ಐದು ಜಾಗಗಳಲ್ಲಿ ತುದಿಯನ್ನು ಮಡಿಸಿ / ಗಂಟು ಹಾಕಿ  ಕಟ್ಟಿರುವುದರಿಂದ ಇದು ಪಂಚ-ಕಚ್ಛಾ. ಸೀರೆಯ ಕೆಳಭಾಗವನ್ನು ಉಡುವ ಕ್ರಮದಲ್ಲೂ ಈ ಎರಡು ಶೈಲಿಗಳು ಕಂಡುಬರುತ್ತವೆ. ಅಂತರೀಯವನ್ನು ಉಡುವ ಎಲ್ಲಾ ಶೈಲಿಗಳಲ್ಲೂ ಸಮಾನವಾಗಿರುವುದೆಂದರೆ ನಾಭಿಯ ಎಡ-ಬಲ ಭಾಗಗಳಲ್ಲಿ ಎರಡು ಗಂಟುಮಾಡಿ ಸೊಂಟವನ್ನು ಬಿಗಿಯಾಗಿ ಬಂಧಿಸುವ ಕ್ರಮ. ಕಚ್ಛೆ ಅಂತರೀಯದಲ್ಲಿ ಇದರ ಜೊತೆಗೆ, ಲಿಂಗ-ಮೂಲಗಳನ್ನು ಮುಚ್ಚಿ ಬಿಗಿಯಾಗಿ ಕಟ್ಟುವ ಮತ್ತೊಂದು ಬಂಧವೂ ಸೇರಿಕೊಳ್ಳುತ್ತದೆ. ಇಂತಹ ವಸ್ತ್ರಧಾರಣೆಯೇ ನಮ್ಮಲ್ಲಿ ಸಹಜವಾಗಿಯೇ ಉಡ್ಡೀಯನ ಹಾಗೂ ಮೂಲ ಬಂಧಗಳನ್ನು ಉಂಟು ಮಾಡಲು ಅತ್ಯಂತ ಸಹಕಾರಿ ಎಂಬುದು ಯೋಗರಹಸ್ಯಜ್ಞರಾದ ಶ್ರೀರಂಗಮಹಾಗುರುಗಳ ಅಭಿಪ್ರಾಯ. ಯೋಗಶಾಸ್ತ್ರದಲ್ಲಿ ಜಾಲಂಧರ, ಉಡ್ಡೀಯನ ಮತ್ತು ಮೂಲಬಂಧ ಎಂಬುದಾಗಿ ಮೂರು ಬಂಧಗಳ ಉಲ್ಲೇಖವಿದೆ. ಈ ಮೂರು 'ಬಂಧ'ಗಳನ್ನು ಸಾಧಿಸಿದವನಿಗೆ ಕಾಲಪಾಶದ 'ಬಂಧನ'ವೇ ಕಳಚಿ ಹೋಗುತ್ತಂತೆ ! ಅಂದರೆ ಅವನು ಯೋಗಸಿದ್ಧಿಯನ್ನು ಪಡೆದು ಮುಕ್ತನಾಗುತ್ತಾನೆ ಎಂದೇ ಅರ್ಥ.


ಬಂಧ ಹೇಗೆ ಯೋಗಸಿದ್ಧಿಯನ್ನು ಕೊಟ್ಟೀತು?     

ಮಹತ್ತಾದ ಭಾರವನ್ನು ಎತ್ತುವಾಗ, ಪೂರ್ವಸಿದ್ಧತೆಯನ್ನು ಹೇಗೆ ಮಾಡಿಕೊಳ್ಳುತ್ತೇವೆ ? ಸೊಂಟಕ್ಕೆ ಬಿಗಿದು, ಎತ್ತಬೇಕಾದ ವಸ್ತುವಿನ ಅಡಿಯಲ್ಲಿ ಕೈ ಹಾಕಿ ಸಜ್ಜಾಗುತ್ತೇವೆ. ಒಂದು ಕ್ಷಣ ದಮ್ ಕಟ್ಟಿ, ಎವೆಯಿಕ್ಕದೇ ಕಟ್ಟಿಗೆಯಂತಾಗುತ್ತೇವೆ. ಆಗ ಭಾರವನ್ನು ಎತ್ತುವ ಕೆಲಸ ಅನಾಯಾಸವಾಗಿ ಸಿದ್ಧಿಸುತ್ತೆ. ಇಲ್ಲಿ ಭಾರ ಎತ್ತಲು ಉಸಿರಿನ ಮೇಲೆ ನಿಯಂತ್ರಣ ಅವಶ್ಯಕ. ಅದನ್ನು ಸದಾಕಾಲವೂ ಉಳಿಸುವುದಕ್ಕೆ ನಡುವಿಗೆ ಬಿಗಿದ ಬಟ್ಟೆ ಸಹಕಾರಿಯಾಗಿತ್ತು.  


ಯೋಗಸಾಧನೆಗಂತೂ ಉಸಿರಾಟದ ಮೇಲೆ ನಿಯಂತ್ರಣ ಅವಶ್ಯಕ ಮಾತ್ರವಲ್ಲ ಅನಿವಾರ್ಯವೂ ಹೌದು. ಆದರೆ ಯೋಗಸಿದ್ಧಿಗೆ ಸಹಕಾರಿಯಾದ ಪ್ರಾಣಾಯಾಮ ಕೇವಲ ದಮ್ ಕಟ್ಟುವುದಲ್ಲ. ಅದರ ಒಂದು ಅಂಶವಷ್ಟೇ. ಯೋಗಸಾಧನೆಗೆ ಅನೇಕ ಒಳ ಪ್ರಕ್ರಿಯೆಗಳು ನಡೆದಿರಬೇಕು. ಪ್ರಾಣ ಮನಸ್ಸುಗಳು ಒಳಮುಖವಾಗಿ ಹರಿದು ಧ್ಯೇಯದಲ್ಲಿ ಲೀನವಾಗಿರಬೇಕು. ಧಾರಣ-ಧ್ಯಾನ-ಸಮಾಧಿ ಸಿದ್ಧಿಸಬೇಕು. ಸಮಾಧಿಯ ಸೌಖ್ಯವನ್ನು ಅನುಭವಿಸಬೇಕಾದರೆ ಒಳಮುಖವಾಗಿ ಹರಿದ ಪ್ರಾಣಗಳು ಹೊರಬಾರದಂತೆ, ಕೆಳಗಿಳಿಯದಂತೆ ನೋಡಿಕೊಳ್ಳುವುದೇ ಈ ಬಂಧಗಳು. ಬಂಧಗಳು ಮೂರು ಜಾಗದಲ್ಲಿ ಉಂಟಾಗುತ್ತವೆ. ಕಂಠದಲ್ಲಿ ಜಾಲಂಧರ, ಉದರಸ್ಥಾನದಲ್ಲಿ ಉಡ್ಡೀಯನ ಬಂಧ, ಮತ್ತು ಲಿಂಗ-ಮೂಲ ಗಳಲ್ಲಿ ಮೂಲಬಂಧ. ಭಾರತೀಯವಾದ ಪಂಚೆ-ಸೀರೆಗಳ ವಿನ್ಯಾಸ  ಉಡ್ಡೀಯನ ಮತ್ತು ಮೂಲ ಬಂಧಗಳನ್ನು ಉಂಟುಮಾಡಲು ಭೌತಿಕವಾದ ಸಹಕಾರವನ್ನು ನೀಡುತ್ತದೆ.  


ಡಾಬು-ಒಡ್ಯಾಣ-ಮೇಖಲೆ 

ಸ್ತ್ರೀಯರು ಆಭರಣವಾಗಿ ತೊಡುವ ಡಾಬು (ಒಡ್ಯಾಣ), ಬ್ರಹ್ಮಚಾರಿಗಳು ಸೊಂಟಕ್ಕೆ ಸುತ್ತುವ ಅಭಿಮಂತ್ರಿತ ಮೌಂಜೀ (ಮೇಖಲಾ) ಇವೂ ಸಹ ಇದೇ ಕೆಲಸವನ್ನೇ ಮಾಡುತ್ತವೆ. ಈಗಾಗಲೇ ಗಮನಿಸಿರುವ ಅಂತರೀಯದ ಯೋಗರಹಸ್ಯವನ್ನೇ ನಾವು ವೇದಾಗಳಲ್ಲಿಯೂ ಕಾಣುತ್ತೇವೆ. ವೇದಗಳು ಮೇಖಲೆಯನ್ನು ಸಾಕ್ಷಾತ್ ದೇವೀಸ್ವರೂಪಿಣಿಯಾಗಿ ಕಾಣುತ್ತದೆ. ಪ್ರಾಣ-ಅಪಾನಗಳಿಗೆ ಬಲವನ್ನು ತಂದು ಕೊಡವವಳೆಂದು ಕೊಂಡಾಡುತ್ತದೆ. ಋಷಿಗಳ ಆಯುಧವೆಂದೂ, ಸಹೋದರಿಯೆಂದೂ ಕೊಂಡಾಡುತ್ತಾರೆ. ಸನ್ಮತಿಯನ್ನೂ ಮೇಧೆಯನ್ನೂ ಕೊಡುವವಳು ಮೇಖಲೆ. 


ಪಂಚೆ, ಸೀರೆ, ಡಾಬು, ಮೇಖಲೆ ಮುಂತಾದವು ಹೊರಗಡೆಯಿಂದ ಆಕರ್ಷಕವಾದ ಅಲಂಕಾರವಾಗಿಯೂ ಇದ್ದು ಅದ್ಭುತವಾದ ಯೋಗಸಾಧನವೂ ಆಗಿವೆ ಎಂಬುದನ್ನು ಗಮನಿಸಬೇಕು. ಇಂತಹ ಅಲಂಕಾರವನ್ನು ತಂದುಕೊಟ್ಟ ಋಷಿಗಳ ಮೇಧೆಗೆ ನಮೋನಮಃ ! 

ಸೂಚನೆ : 22/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.