Saturday, January 29, 2022

ವಸ್ತ್ರಾಭರಣ - 7 ಉತ್ತರೀಯ ಮತ್ತು ಪ್ರಾಣಸಂಚಾರ (Vastra Bharana - 7 UttarIya Mattu Pranasanncara)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)


ಮೇಲ್ವಸ್ತ್ರ ಅಥವಾ ಉತ್ತರೀಯ ಭಾರತೀಯ ವಸ್ತ್ರಯೋಜನೆಯಲ್ಲಿ ಮುಖ್ಯವಾದ ಸ್ಥಾನವನ್ನು ಪಡೆಯುತ್ತದೆ. ಬಲಕಂಕಳು, ಸೊಂಟವನ್ನು ಹಾದುಹೋಗಿ ಎಡ ಹೆಗಲಿನ ಮೇಲೆ ವಿಶ್ರಮಿಸಿ ಅಲಂಕರಿಸುವ ವಸ್ತ್ರವಿದು. ಪುರುಷರು ಬಿಳಿಯ ಒಂದು ಪ್ರತ್ಯೇಕವಾದ ಮೇಲ್ವಸ್ತ್ರವನ್ನು ಧರಿಸಿದರೆ, ಸ್ತ್ರೀಯರ ಸೀರೆಯ ಮೇಲ್ಭಾಗವಾಗಿ ಇದನ್ನು ಧರಿಸುತ್ತಾರೆ. ಎಡ ತೋಳು - ಬಲ ಸೊಂಟದ ನಡುವೆ ಹಾದು ಹೋಗುವ ಕ್ರಮವನ್ನು ನಾವು ಜನ್ನದಾರದಲ್ಲೂ ಕಾಣುತ್ತೇವೆ. ಇದು ಆಕಸ್ಮಿಕವಲ್ಲ. ಉತ್ತರೀಯ ಮತ್ತು ಜನಿವಾರ ಎರಡೂ ಮೌಲಿಕವಾಗಿ ಒಂದೇನೇ. ಅದರ ಹೆಸರೇ ಹೇಳುವಂತೆ, ಜನ್ನದಾರ ಅಥವಾ ಯಜ್ಞ-ದಾರ ಯಜ್ಞಕ್ಕೆ ಸಂಬಂಧವನ್ನು ಹೊಂದಿದೆ. ಉತ್ತರೀಯವನ್ನು ವೇದಗಳು ಅಧಿವಸ್ತ್ರವೆಂದೂ ಯಜ್ಞದ ಆಚರಣೆಯಲ್ಲಿ ಧರಿಸಲ್ಪಡುವ ವಸ್ತ್ರವೆಂದೂ ಕರೆಯುತ್ತದೆ. ಉತ್ತರೀಯವನ್ನು ತೃತೀಯ ಯಜ್ಞೊಪವೀತ ಎಂದೂ ಕರೆಯುವುದುಂಟು. ಇಂತಹ ಒಂದು ವಸ್ತ್ರವಿನ್ಯಾಸಕ್ಕೂ ಯಜ್ಞಕ್ಕೂ ಏನು ಸಂಬಂಧವೆಂದು ನೋಡೋಣ. 


ಯಜ್ಞ ಮತ್ತು ದೇವತೆಗಳು 


ನಮ್ಮ ಶರೀರವೇ ಸಮಸ್ತ ದೇವತಾ ಶಕ್ತಿಗಳ ನೆಲೆಮನೆಯಾಗಿದೆ. ನಮ್ಮ  ಇಂದ್ರಿಯ, ಮನಸ್ಸು ಬುದ್ಧಿಗಳ ಹಿಂದೆ ಆಡುವ ಶಕ್ತಿಗಳನ್ನು ದೇವತಾ ಶಕ್ತಿಗಳ ರೂಪದಲ್ಲಿ ಋಷಿಗಳು ತಮ್ಮ ಒಳಗಣ್ಣಿನಿಂದ ದರ್ಶನ ಮಾಡಿದರು. ಆ ದೇವತಾ ಶಕ್ತಿಗಳು ಪ್ರಸನ್ನವಾಗಿದ್ದು ಚೆನ್ನಾಗಿ ನಮ್ಮ ಮೈ-ಮನಗಳಲ್ಲಿ ಸಂಚರಿಸುವಂತೆ ಆದರೆ, ಇಂದ್ರಿಯ-ಮನಸ್ಸು-ಬುದ್ಧಿ-ಆತ್ಮ ಎಲ್ಲವೂ ಸುಸ್ಥಿತಿಯಲ್ಲಿದ್ದು ಭೋಗ-ಯೋಗಗಳ ಸಾಧನೆಗೆ ಯೋಗ್ಯವಾದ ಜೀವನ ಸಿದ್ಧಿಸುತ್ತದೆ. ದೇವತಾ ಶಕ್ತಿಗಳನ್ನು ಪ್ರಸನ್ನಗೊಳಿಸಿ ನಮ್ಮಲ್ಲಿ ಅಬಾಧಿತವಾಗಿ ಹರಿಯುವಂತೆ ಮಾಡುವ ಕ್ರಿಯೆಯನ್ನೇ ಯಜ್ಞ ಎಂದು ಕರೆಯುತ್ತಾರೆ. 


ಶಕ್ತಿರೂಪರಾದ ದೇವತೆಗಳನ್ನು ಬರಮಾಡಿ ತೃಪ್ತಿಗೊಳಿಸುವುದು ಹೇಗೆ ?             

                         

ಒಂದು ವೃಕ್ಷದ ಫಲ ಸಿಗುವುದು ಹೇಗೆ ? ಬೀಜದಿಂದ ಹಿಡಿದು, ವೃಕ್ಷವಾಗಿ ಬೆಳೆದು ಫಲವನ್ನು ಕೊಡುವ 'ಪ್ಲಾನ್' ಬೀಜದಲ್ಲೇ ಅಡಕವಾಗಿದೆ. ಇದು ಸೃಷ್ಟಿಮಾತೆಯ 'ಪ್ಲಾನ್' ಎಂದೂ ಹೇಳ ಬಹುದು. ಆದರೆ ಸೃಷ್ಟಿಮಾತೆಯು ಯೋಜಿಸಿ ಇಟ್ಟಿರುವ ಶಕ್ತಿಗಳ, ಪೂರ್ಣಫಲವನ್ನು ಪಡೆಯಬೇಕಾದರೆ ಬೀಜವನ್ನು ನೆಟ್ಟು, ನೀರೆರೆಯ ಬೇಕು. ಕೃಷಿ ಮಾಡ ಬೇಕು. ಅಂತೆಯೇ ನಮ್ಮ ಶರೀರದಲ್ಲಿ ಯೋಗ-ಭೋಗ ವೆಂಬ ಇಬ್ಬಗೆಯ ಫಲಗಳನ್ನು ತಂದುಕೊಡುವ ಶಕ್ತಿ ಅಡಕವಾಗಿದೆ. ಯಜ್ಞವೆಂಬ ಕರ್ಮವು ನೀರೆರೆದು ಕೃಷಿ ಮಾಡಿ, ಆ ಗುಪ್ತ ಶಕ್ತಿಗಳ ಪೂರ್ಣ ವಿಕಾಸ ಮಾಡುವ ಕೆಲಸ ಮಾಡುತ್ತದೆ.


ದೇವತಾ ಯಜ್ಞಕ್ಕೆ ಪ್ರಾಣಸಂಚಾರ  


ನಾವು ಹಿಂದೆಯೇ ಗಮನಿಸಿದಂತೆ ಎಲ್ಲ ಕರ್ಮಗಳಲ್ಲೂ ಪ್ರಾಣಗಳ ಪಾತ್ರ ಅನಿವಾರ್ಯ. ಅಂತೆಯೇ ಈ ದೇವತೆಗಳನ್ನು ಬರಮಾಡಿಕೊಳ್ಳ ಬೇಕಾದರೆ ನಮ್ಮಲ್ಲಿರುವ ಪ್ರಾಣಶಕ್ತಿಗಳನ್ನು ನಿರ್ದಿಷ್ಟಕ್ರಮದಲ್ಲಿ ಇಟ್ಟುಕೊಳ್ಳಬೇಕು. ದೇವತಾ ಕರ್ಮಗಳಿಗೆ ಪ್ರಾಣಗಳು 'ವಾಮ ಬಾಹು ದಕ್ಷಿಣ ಕಟಿ', ನಡುವೆ ಹರಿಯ ಬೇಕು. ಅಂತಹ, ದೇವತಾ ಯಜ್ಞಕ್ಕೆ ಪೋಷಕವಾದ ಪ್ರಾಣ ಸ್ಥಿತಿಯನ್ನು ತಂದುಕೊಡಲು ಈ ಮೇಲ್ವಸ್ತ್ರದ ವಿನ್ಯಾಸ ಅತ್ಯಂತ ಸಹಾಯಕ. ಈ ವಿನ್ಯಾಸವನ್ನು ಉಪವೀತಿ ಎಂದು ಕರೆಯುತ್ತಾರೆ. ತದ್ವಿಪರೀತವಾದ ಒಂದು ವಿನ್ಯಾಸವೂ ಉಂಟು. ಬಲತೋಳು ಎಡ ಸೊಂಟವನ್ನು ಹಾದುಹೋಗುವ ಪ್ರಾಚೀನಾವೀತಿ ಎಂಬ ಒಂದು ವಿನ್ಯಾಸ ಪಿತೃ-ದೇವತೆಗಳ ಪ್ರೀತಿಗೆ ಅನುಕೂಲಕರ. 


ಈ ಮರ್ಮವನ್ನು ಸೂಚಿಸಲೆಂದೇ ದೇವತಾ ಶಿಲ್ಪಗಳಲ್ಲಿ  ಕೆಲವೊಮ್ಮೆ ಪ್ರಾಣರೂಪವಾದ ಸರ್ಪವನ್ನೇ ಯಜ್ಞೋಪವೀತವಾಗಿ ಧರಿಸಿರುವುದನ್ನು ಕಾಣುತ್ತೇವೆ.  ಇಂತಹ ಮಾರ್ಮಿಕವಾದ ಸತ್ಯಗಳು ವೇದ-ಶಾಸ್ತ್ರಗಳಲ್ಲಿ ಅಡಕವಾಗಿದ್ದರೂ ಅವನ್ನು ಬಿಚ್ಚಿ ಪ್ರಾಯೋಗಿಕವಾಗಿ ತೋರಿಸಿದ ಯೋಗಿವರೇಣ್ಯರು ಶ್ರೀರಂಗಮಹಾಗುರುಗಳು. ಋಷಿಸದೃಶರಾದ ಆ ಮಹನೀಯರಿಗೆ ನಮೋನಮ: ! 


ಸೂಚನೆ : 29/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.