Thursday, January 20, 2022

ಸಮರ್ಪಣೆಗಿರಲಿ ಪರಿಶುದ್ಧ ಮನೋಭಾವ (Samarpanegirali Parishuddha Manobhava)

ಲೇಖಕಿ: ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪಾಂಡವರು ವನವಾಸದಲ್ಲಿರುವ ಸಂಧರ್ಭ. ರಾತ್ರಿ ಪಾಂಡವರ ಹಾಗೂ ದ್ರೌಪದಿಯ ಭೋಜನವಾದ ನಂತರ, ಹತ್ತು ಸಾವಿರ ಶಿಷ್ಯರೊಡನೆ ಪಾಂಡವರ ಕುಟೀರಕ್ಕೆ ಮಹರ್ಷಿದುರ್ವಾಸರ ಆಗಮನ; ಧರ್ಮರಾಯನು ಅತ್ಯಂತ ಭಕ್ತಿಯಿಂದ ಅವರನ್ನು ಎದುರುಗೊಂಡು ಕುಶಲವನ್ನು ವಿಚಾರಿಸುತ್ತಾನೆ. ನದಿಯಲ್ಲಿ ಆಹ್ನಿಕಗಳನ್ನು ಪೂರೈಸಿ ಬರುವಷ್ಟರಲ್ಲಿ ತಮಗೂ ಹಾಗೂ ತಮ್ಮ ಶಿಷ್ಯಂದಿರಿಗೂ ಭೋಜನದ ವ್ಯವಸ್ಥೆಯಾಗಬೇಕೆಂದು ಆದೇಶಿಸಿ ನದಿಗೆ ತೆರಳುತ್ತಾರೆ. ಪಾಂಡವರಿಗೆ ಸೂರ್ಯದೇವನಿಂದ ಕೊಡಲ್ಪಟ್ಟ ಅಕ್ಷಯ ಪಾತ್ರೆಯಲ್ಲಿ ರಾತ್ರಿ ದ್ರೌಪದಿಯ ಭೋಜನವಾದ ನಂತರ ಪದಾರ್ಥಗಳು ಸೃಷ್ಟವಾಗಲು ಮಾರನೆಯ ದಿನ ಸೂರ್ಯೋದಯದವರೆಗೂ ಕಾಯಬೇಕು, ಬಂದ ಅತಿಥಿಗಳನ್ನು ಸತ್ಕರಿಸುವುದು ಹೇಗೆ? ಮಹರ್ಷಿ ದುರ್ವಾಸರ ಕೋಪಕ್ಕೆ ಗುರಿಯಾಗದಿರುವುದಕ್ಕೆ ದಾರಿ ಏನು? ಎಂಬುದಾಗಿ ಚಿಂತಿಸುತ್ತಾ ಧರ್ಮರಾಯನು ತಮಗೆ ಬಂದ ಸಂದಿಗ್ಧ ಪರಿಸ್ಥಿತಿಯನ್ನು ದ್ರೌಪದಿಗೆ ತಿಳಿಸುತ್ತಾನೆ, ಆಗ ದ್ರೌಪದಿಯೂ ಕ್ಷಣಕಾಲ ಯೋಚಿಸಿ ತಮ್ಮ ಅಪದ್ಭಾಂಧವನಾದಂತಹ ಶ್ರೀಕೃಷ್ಣನ ಮೊರೆಯನ್ನೇ ಹೋಗುತ್ತಾಳೆ. ಅವಳ ಪ್ರಾರ್ಥನೆಗೆ ಓಗೊಟ್ಟು ಪ್ರತ್ಯಕ್ಷನಾದ ಶ್ರೀಕೃಷ್ಣನು ತನಗೆ ಸ್ವಲ್ಪ ಆಹಾರವನ್ನು ನೀಡುವಂತೆ ಆಜ್ಞಾಪಿಸುತ್ತಾನೆ. ಆಗ ದ್ರೌಪದಿಯು, ಅಕ್ಷಯ ಪಾತ್ರೆಯಲ್ಲಿ ಹುಡುಕಿ ಪಾತ್ರೆಗೆ ಅಂಟಿಕೊಂಡಿದ್ದ ಒಂದೇ ಒಂದು ಕಾಳನ್ನು ಭಕ್ತಿಯಿಂದ, ಸಮರ್ಪಣಾ ಭಾವದಿಂದ ಭಗವಂತನಿಗೆ ಅರ್ಪಿಸಿದಾಗ ಅದನ್ನು ಸ್ವೀಕರಿಸಿ ಸಂತೃಪ್ತನಾಗುತ್ತಾನೆ.ಆಗ ನದೀತೀರದಲ್ಲಿ ಆಹ್ನಿಕಗಳನ್ನು ನೆರವೇರಿಸುತ್ತಿದ್ದ ದೂರ್ವಾಸರಿಗೆ ಹಾಗೂ ಅವರ ಎಲ್ಲಾ ಶಿಷ್ಯಂದಿರಿಗೂ ಹೊಟ್ಟೆ ತುಂಬಿದ ಅನುಭವವಾಗುತ್ತದೆ, ಏಕೆಂದರೆ ಉದರದಲ್ಲಿ ವೈಶ್ವಾನರ ರೂಪದಲ್ಲಿರುವುದು ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನಲ್ಲವೇ?


ಅವನೇ ದ್ರೌಪದಿಯು ಸಮರ್ಪಿಸಿದ ಆಹಾರದಿಂದ ಸಂತೃಪ್ತನಾದಾಗ ಅವನನ್ನೇ ಉಪಾಸಿಸುವ ದುರ್ವಾಸರು ಹಾಗೂ ಅವರ ಶಿಷ್ಯಂದಿರೂ ಸಂತೃಪ್ತರಾಗಿ ಪಾಂಡವರನ್ನು ಹರಸಿ ಅಲ್ಲಿಂದ ತೆರಳುತ್ತಾರೆ. ಪರಮಾತ್ಮನು ಭಗವದ್ಗೀತೆಯಲ್ಲಿ ಹೇಳಿರುವಂತೆ ಪತ್ರವನ್ನಾಗಲೀ, ಪುಷ್ಪವನ್ನಾಗಲೀ ಫಲವನ್ನಾಗಲೀ,ಒಂದು ತೊಟ್ಟು ಜಲವನ್ನಾಗಲೀ ಭಕ್ತಿಯಿಂದ ಸಮರ್ಪಿಸಿದಾಗ ನಾನು ಸಂತೃಪ್ತನಾಗುತ್ತೇನೆ ಎಂಬಂತೆ ನಿತ್ಯತೃಪ್ತನಾದ ಭಗವಂತನಿಗೆ ಭಕ್ತರು ಕೊಡುವ ದ್ರವ್ಯದ ಪರಿಮಾಣಕ್ಕಿಂತ ಅವರಲ್ಲಿರುವ ಸಮರ್ಪಣಾ ಭಾವವೇ ಪ್ರಿಯವಾದುದು. ವಿದುರನು ಅರ್ಪಿಸಿದಂತೆ , ಶಬರಿಯು ನೀಡಿದಂತೆ ಶುದ್ಧವಾದ ಭಾವವನ್ನು ಮಾತ್ರ ಅವನು ಅಪೇಕ್ಷಿಸುತ್ತಾನೆ; ಸ್ವೀಕರಿಸುತ್ತಾನೆ ಕೂಡ. ಭಗವಂತನಿಗೆ, ಭಗವತ್ಸ್ವರೂಪರಾದ ಗುರು ಹಿರಿಯರಿಗೆ ಅಥವಾ ಯಾವುದೇ ಭಗವತ್ಕಾರ್ಯಗಳಿಗೆ ದ್ರವ್ಯವನ್ನು ಸಮರ್ಪಿಸುವಾಗ ನಿರ್ಲಿಪ್ತವಾದ ಹಾಗೂ ಹಗುರವಾದ ಪರಿಶುದ್ಧಮನಸ್ಸೇ ಮುಖ್ಯ. ಹಾಗಿದ್ದಾಗ ಮಾತ್ರ ಅದು ನಿಜವಾದ ಅರ್ಥದಲ್ಲಿ ಸಮರ್ಪಣೆಯಾಗುತ್ತದೆ. 'ಬಾಹ್ಯಾಂತರಿಕ್ಷಕ್ಕೆ ಹೋದಾಗ ಚಿನ್ನದ ಗಟ್ಟಿ ಮತ್ತು ಹತ್ತಿಯ ಪಂಜಿ ಒಂದೇ ರೀತಿಯಾಗಿ ಬಿಡುತ್ತದೆ, ಎರಡೂ ಭಾರ ಕಳೆದುಕೊಂಡು ಒಂದೇ ರೀತಿಯಾಗಿಬಿಡುತ್ತದೆ, ಎರಡಕ್ಕೂ ಭಾರದ ಅಭಾವ ಉಂಟಾಗುತ್ತದೆ, ಹಾಗೆಯೇ ಭಗವಂತನಿಗೆ ಶುದ್ಧಭಾವದಿಂದ ಅರ್ಪಣೆಯಾದಾಗ ನಯಾ ಪೈಸಾ ಮತ್ತು ಸ್ವರ್ಣರಾಶಿ ಎರಡಕ್ಕೂ ಒಂದೇ ರೂಪ, ಎರಡೂ ತಮ್ಮ ಮೌಲ್ಯವನ್ನು ಕಳೆದುಕೊಂಡು ಬ್ರಹ್ಮರೂಪವನ್ನು ಹೊಂದಿಬಿಡುತ್ತವೆ' ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯವಾಗಿದೆ.


ಸೂಚನೆ: 20/1/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.