Sunday, January 30, 2022

ಶ್ರೀರಾಮನ ಗುಣಗಳು - 42 ವಿರಕ್ತ ಶ್ರೀರಾಮ (Sriramana Gunagalu - 42 Dusta Virakta Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)ಕೈಕೇಯಿಯ ವರದ ಕಾರಣದಿಂದ ರಾಜಾ ದಶರಥನು ಶ್ರೀರಾಮನನ್ನು ಅರಣ್ಯಕ್ಕೆ ಕಳುಹಿಸಲು ಸಕಲವಿಧವಾದ ಸಿದ್ಧತೆಯನ್ನೂ ಮಾಡುತ್ತಾನೆ. ನಾಲ್ಕು ಬಗೆಯ ಸೇನೆಯನ್ನು ಸಜ್ಜುಗೊಳಿಸಿದ. ಮಹಾಧನಿಕರನ್ನು, ವ್ಯಾಪಾರಿಗಳನ್ನು ರೂಪವಿನ್ಯಾಸಕಾರರನ್ನು ಹೀಗೆ ಅನೇಕರನ್ನು ಕಳಿಸಲು ವ್ಯವಸ್ಥೆ ಮಾಡಿದ. ವೀರ್ಯ ಪರಾಕ್ರಮಶಾಲಿಗಳಾದ ಜನರನ್ನು ರಾಮನ ಬೆಂಗಾವಲಿಗಾಗಿ ನಿಯೋಜಿಸಿದ. ಎತ್ತಿನ ಗಾಡಿಯಲ್ಲಿ ಹಿಡಿಯುವಷ್ಟು ಶಸ್ತ್ರಾಸ್ತ್ರಗಳನ್ನು ಸೇರಿಸಿದ. ಅರಣ್ಯಮಾರ್ಗದಲ್ಲಿ ಸಂಚರಿಸುವಾಗ ವನ್ಯಮೃಗಗಳಿಂದ ಪೀಡೆ ಉಂಟಾಗದಂತೆ ವ್ಯವಸ್ಥೆ ಮಾಡಿದ. ಮುಂದಿನ ಹದಿನಾಲ್ಕು ವರ್ಷದ ವನವಾಸದಲ್ಲಿ ಆಹಾರದ ಕೊರತೆ ಉಂಟಾಗಬಾರದೆಂದು ಧಾನ್ಯಕೋಶವನ್ನು, ಮತ್ತು ವ್ಯವಹಾರಕ್ಕೆ ಎಲ್ಲೂ ತೊಡಕುಂಟಾಗಬಾರದು ಎಂದು ಧನಕೋಶವನ್ನೂ ಕಳಿಸಲು ಹೇಳಿದ. ಶ್ರೀರಾಮನ ಅಂತಃಸ್ಥೈರ್ಯಕ್ಕೆ ಪೋಷಕವಾಗಲೆಂದು ಋಷಿಗಳನ್ನು ಜೊತೆಗೆ ಕಳಿಸಲು ಅರುಹಿದ. ಅರಣ್ಯದಲ್ಲಿ ಆರೋಗ್ಯದ ತೊಂದರೆ ಆಗದಿರಲೆಂದು ವೈದ್ಯರನ್ನು ನೇಮಿಸಿದ. ಹೀಗೆ ಇನ್ನೂ ಅನೇಕ ಬಗೆಯಲ್ಲಿ ಶ್ರೀರಾಮನಿಗೆ ಕಾಡಿನಲ್ಲಿ ಯಾವುದೇ ತೊಂದರೆ ಆಗಬಾರದು ಎಂದು ಸಕಲ ಸಿದ್ಧತೆಯನ್ನು ಮಾಡಿದ ದಶರಥಮಹಾರಾಜ.


ಆದರೆ ಶ್ರೀರಾಮನು ಇವು ಯಾವುದನ್ನೂ ಬಯಸಲೇ ಇಲ್ಲ. ಆತನೊಬ್ಬ ಮಹಾವಿರಕ್ತ. ಯಾವುದೇ ಬಗೆಯ ಅನುರಕ್ತಿ-ಆಸೆ ಇಲ್ಲದವನು. ಸಮಚಿತ್ತ, ಸ್ಥಿತಪ್ರಜ್ಞ. ಯಾವ ಕಾಲದಲ್ಲಿ ಹೇಗಿರಬೇಕು? ಯಾವುದನ್ನು ಬಯಸಬೇಕು? ಎಷ್ಟನ್ನು ಬಯಸಬೇಕು? ಎಂಬ ಬಗ್ಗೆ ಸ್ಪಷ್ಟವಾದ ಅರಿವು ಇತ್ತು ಶ್ರೀರಾಮನಿಗೆ. ಈ ಕಾರಣದಿಂದ ತಂದೆಯ ವೈಭವೋಪೇತವಾದ ರಾಜಮರ್ಯಾದೆಯನ್ನು ಸ್ವೀಕರಿಸದೇ ವಿನಮ್ರನಾಗಿ ತಿರಸ್ಕರಿಸಿದ. ವಾಸ್ತವಿಕವಾಗಿ ತಂದೆಯಾದ ರಾಜನಿಂದಲೇ, ರಾಜ್ಯದ ಬೊಕ್ಕಸದಿಂದಲೇ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೈಕೇಯಿಯ ವರ ಯಾಚನೆಯಲ್ಲಿ ವೈಭೋಗದ ನಿರಾಕರಣೆ ಇರಲಿಲ್ಲ. ಅವಳಿಗೆ ಶ್ರೀರಾಮನು ವನವಾಸವನ್ನು ಮಾಡಬೇಕು ಎಂಬಿಷ್ಟೇ ತುಡಿತವಾಗಿತ್ತು. ಅರಣ್ಯದಲ್ಲಿ ಯಾವ ಬಗೆಯ ವ್ಯವಸ್ಥೆಯನ್ನು ನಿಷೇಧಿಸಿ ವರವನ್ನು ಕೇಳಿರಲಿಲ್ಲ. ಶ್ರೀರಾಮನು ಇವೆಲ್ಲವನ್ನೂ ಬಳಸಿಕೊಂಡಿದ್ದರೆ ಅಪರಾಧವೇನೂ ಇರಲಿಲ್ಲ. ಶ್ರೀರಾಮನಾದರೋ ಆದರ್ಶಪುರುಷ. ಅವನು ಹೊರಟಿದ್ದು ಅರಣ್ಯಕ್ಕೆ. ಅಲ್ಲಿ ಋಷಿಜನರು ವಾಸವಾಗಿರುತ್ತಾರೆ. ಅಲ್ಲಿ ಯಾವ ಬಗೆಯ ರಾಜವೈಭೋಗದ ಅವಶ್ಯಕತೆ ಇರಲಿಲ್ಲ. ಅರಣ್ಯವಾಸವು ಋಷಿಜೀವನಕ್ಕೆ ಯೋಗ್ಯವಾದುದು. ಅದಕ್ಕಾಗಿ ವನವಾಸ ಯೋಗ್ಯವಲ್ಲದ ಎಲ್ಲ ರೀತಿಯಾದ ವೈಭೊಗ ಸಾಮಗ್ರಿಗಳನ್ನು ನಿರಾಕರಿಸಿದ. ಅರಮನೆಯಲ್ಲಿ ರಾಜೋಚಿತವಾಗಿ ತೊಟ್ಟಿದ್ದ ವಸ್ತ್ರ-ಆಭರಣಾದಿಗಳನ್ನು ಬಿಚ್ಚಿಟ್ಟ. 'ಋಷಿಜೀವನಕ್ಕೆ ಪೋಷಕವಾದ ಹದಿನಾಲ್ಕು ವರ್ಷ ವನವಾಸವನ್ನು ಮಾಡಲು ತೆರಳುವ ನನಗೆ ಚೀರವಲ್ಕಲವನ್ನೇ ಕೊಡಿ' ಎಂದು ಕೇಳಿಕೊಂಡ. ಶ್ರೀರಾಮನ ಸಹಧರ್ಮಿಣಿಯಾದ ಸೀತಾಮಾತೆಯೂ ಪತಿಯನ್ನೇ ಅನುಸರಿದಳು. ತಾನುಟ್ಟ ಕೌಶೇಯ ವಸ್ತ್ರದ ಹೊರಗಡೆ ನಾರುಬಟ್ಟೆಯನ್ನು ಸುತ್ತಿಕೊಂಡಳು. ಅನುಜ ಲಕ್ಷ್ಮಣನು ಸಹ ಅಣ್ಣನ ಋಷಿಭಾವವನ್ನೇ ಅಂಗೀಕರಿಸಿದ. ಭರತನೇ 'ರಾಜ್ಯಕ್ಕೆ ಮರಳು' ಎಂದು ಪರಿಪರಿಯಾಗಿ ಕೇಳಿಕೊಂಡರೂ ಭರತನಲ್ಲೇ ರಾಜ್ಯದ ಸಮಸ್ತಭಾರವನ್ನೂ ಸನ್ಯಸ್ತ ಮಾಡಿದ. ಕೊನೆಯಲ್ಲಿ ರಾವಣನಿಂದ ಜಿತವಾದ ಸ್ವರ್ಣಮಯೀ ಲಂಕೆಯ ರಾಜನಾಗಲಿಲ್ಲ. ಅದನ್ನು ವಿಭೀಷಣನಿಗೆ ಅನುಗ್ರಹಿಸಿದ. ಅಯಾಚಿತವಾಗಿ ಉಚಿತವಾಗಿ ಬಂದರೂ ಕಾಲಕಾಲಕ್ಕೆ ಸೀಮಿತವಾದ ಋಷಿತುಲ್ಯಜೀವನವನ್ನೇ ಮಾಡಿ ಎಲ್ಲರಿಗೂ ವೈರಾಗ್ಯದ ಆದರ್ಶವನ್ನು ಎತ್ತಿಹಿಡಿದ ಶ್ರೀರಾಮ.


ಸೂಚನೆ : 30/1/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.