Saturday, January 1, 2022

ವಸ್ತ್ರಾಭರಣ - 3 ಸ್ತ್ರೀ-ಪುರುಷರ ವಸ್ತ್ರಗಳ ಬಣ್ಣ (Vastra bharana -3 Stri-Purushara Vastragala banna}

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)

 

ವಸ್ತ್ರಗಳಲ್ಲಿ  ಬಣ್ಣಗಳ ಆಟ  

ಪರಾತ್ಪರ ಪರಮಪುರುಷನ ಪಾತ್ರವನ್ನು ಗೃಹಸ್ಥನಾಗಿ ನಿರ್ವಹಿಸುವ ಪುರುಷನಿಗೆ ಸಾಮಾನ್ಯವಾಗಿ ಬಿಳಿಯ ವಸ್ತ್ರಗಳು ವಿಹಿತ. ಪ್ರಕೃತಿಯ ಸ್ಥಾನದಲ್ಲಿ ನಿಂತು ಕಂಗೊಳಿಸುವ ಸ್ತ್ರೀ, ನಾನಾ ಬಣ್ಣಗಳಿಂದ ಕೂಡಿದ ವಸ್ತ್ರಗಳನ್ನು ಧರಿಸುವುದರ ಹಿಂದೆ ಮಹರ್ಷಿಗಳು ಕಂಡರುಹಿದ ವಿಜ್ಞಾನವಿದೆ ಎಂಬುದನ್ನು ಗಮನಿಸಿದೆವು. ಆದರೆ ಈ ಹಿಂದಿನ ವಿಷಯ ಯಾವುದೂ ತಿಳಿಯದಿದ್ದವರಿಗೆ ವಸ್ತ್ರದಲ್ಲಿ ಬಣ್ಣಗಳ ಯೋಜನೆ ಏನು ಪರಿಣಾಮ ಮಾಡುತ್ತದೆ  ಮತ್ತೆ ಇಂತಹ ವಸ್ತ್ರ ನಿಯಮಗಳಿಂದ ಏನು ಪ್ರಯೋಜನ ಎಂಬುದನ್ನು ತಿಳಿಯಲು, ಬಣ್ಣಗಳು ನಮ್ಮ ಮೇಲೆ ಬೀರುವ ಪರಿಣಾಮವನ್ನು ತಿಳಿಯಬೇಕು. 


ಬಣ್ಣಗಳು ಮನಸ್ಸಿನಮೇಲೆ ಅತ್ಯಂತ ಪರಿಣಾಮಕಾರಿ ಎಂಬುದು ಭಾರತೀಯರಿಗೆ ಚಿರಪರಿಚಿತ.  'ರಾಗ' ಎಂಬ ಪದವು ಸಂಸ್ಕೃತದಲ್ಲಿ ಬಣ್ಣ ಎಂದೂ, ಮನಸ್ಸಿನ ಒಂದು ಸ್ಥಿತಿಯೆಂದೂ ಅರ್ಥವನ್ನು ಕೊಡುತ್ತದೆ. ನೋಡುಗರ ಮೇಲೆ ಬಣ್ಣಗಳು ವಿಶಿಷ್ಟ ಪರಿಣಾಮ ಮಾಡುವುದರಿಂದ, ಕಾಲ-ದೇಶ-ಪ್ರಯೋಜನವನ್ನು ಅನುಸರಿಸಿ ಬಣ್ಣಗಳ ಪ್ರಯೋಗವನ್ನು ಮಾಡಿರುವುದನ್ನು ಕಾಣುತ್ತೇವೆ. 


ಪ್ರಕೃತಿಯಲ್ಲಿ ಸತ್ತ್ವ-ರಜಸ್-ತಮಸ್ ಎಂಬ ಮೂರು ಗುಣಗಳು ಕೆಲಸಮಾಡುತ್ತವೆ. ನಮ್ಮಲ್ಲಿ ಉಂಟಾಗುವ ಚಿತ್ತವೃತ್ತಿಗಳ ಹಿಂದೆ ಈ ತ್ರಿಗುಣಗಳ ಕೆಲಸವುಂಟು. ರಜೋಗುಣವು ಕಾರ್ಯಪ್ರವೃತ್ತಿಯನ್ನು ಉಂಟುಮಾಡಿದರೆ, ತಮಸ್ಸು ಮಾಂದ್ಯ-ಜಾಡ್ಯಗಳನ್ನು ತರುತ್ತದೆ. ಸತ್ತ್ವವು ಇವೆರಡಕ್ಕಿಂತಲೂ ಭಿನ್ನವಾಗಿ, ಲಘುವಾಗಿಯೂ ಹಿತಕರವಾಗಿಯೂ, ಜ್ಞಾನ-ಸಂತೋಷವನ್ನು ತರುವಂತದ್ದು. ಬಿಳಿಯ ಬಣ್ಣದ ದರ್ಶನ ನಮ್ಮಲ್ಲಿ ಸತ್ತ್ವವನ್ನು ಪ್ರಚೋದಿಸುತ್ತದೆ. ಅಂತೆಯೇ ರಕ್ತವರ್ಣವು ರಜೋಗುಣವನ್ನೂ, ಕಪ್ಪು ತಮೋಗುಣವನ್ನೂ ಹೊತ್ತು ಬರುತ್ತದೆ. ಸತ್ತ್ವಗುಣವು ತ್ರಿಗುಣಗಳಲ್ಲಿ ಒಂದಾದರೂ ಯೋಗ ಸಮಾಧಿಗೆ ಕರೆದೊಯ್ಯುವಂತದ್ದು. ಆ ಸ್ಥಿತಿಗೆ ಅತ್ಯಂತ ನಿಕಟವರ್ತಿಯೆಂದೂ ಹೇಳಬಹುದು. ಆದ್ದರಿಂದಲೇ ಪರಮಪುರುಷನ ಪಾತ್ರವಹಿಸುವ ಪುರುಷನಿಗೆ ಬಿಳುಪು ಬಣ್ಣ. ತ್ರಿಗುಣಗಳನ್ನು ನಾನಾ ಪ್ರಮಾಣಗಳಲ್ಲಿ ಬಳಸುವ ಪ್ರಕೃತಿಗೆ ಅನೇಕ ವರ್ಣಗಳು. ಆಭಿಚಾರಿಕ ಪ್ರಯೋಗಕ್ಕೆ ಕಪ್ಪು ವಸ್ತ್ರಗಳು. ಹಳದಿ ಬಣ್ಣವು ವ್ರತನಿಷ್ಠರಿಗೆ, ವಿಶೇಷವಾಗಿ ಬ್ರಹ್ಮಚಾರಿಗಳಿಗೆ ಪ್ರಶಸ್ತ. ಅತ್ಯಂತ ಮಂಗಳಕರವೂ ಹೌದು. ಜ್ಞಾನ-ವೈರಾಗ್ಯ ಶಿರೋಮಣಿಗಳಾದ ಯತಿಗಳಿಗೆ ಕಾವಿಯ ವಸ್ತ್ರ. ಈ ರೀತಿ ವಸ್ತ್ರ ಉಡುವವರಿಗೆ ಅವರವರ ವೃತ್ತಿಗೆ ಬೇಕಾದ ಮನೋಧರ್ಮಗಳನ್ನು ತಂದುಕೊಡಲು ವಸ್ತ್ರಗಳ ಬಣ್ಣ ಸಹಕಾರಿಯಾಗಿದ್ದು,ಇತರರಿಗೆ ತಮ್ಮ ಮನೋಧರ್ಮವನ್ನು ಸೂಚಿಸುತ್ತಾ, ಆ ಧರ್ಮವನ್ನು ಒಂದು ಪ್ರಮಾಣದಲ್ಲಿ ಸಂಕ್ರಮಿಸುವ ಕೆಲಸವನ್ನೂ ಕೂಡ ಮಾಡುತ್ತದೆ.


ದೇವತೊಪಾಸನೆಯಲ್ಲಿ ಬಳಸುವ ವಸ್ತ್ರ-ವರ್ಣ ದೇವತೆಯ ಸ್ಥಾನ-ಭಾವಗಳು, ನೀಡುವ ಫಲಗಳನ್ನೂ, ಬೇಕಾದ ಮನೋಧರ್ಮವನ್ನೂ ಅವಲಂಬಿಸಿದ್ದಾಗಿದೆ. ಒಳ ಭೂಮಿಕೆಯಲ್ಲಿ ಋಷಿ-ಮುನಿಗಳು  ದರ್ಶನ ಮಾಡುವ ದೇವತಾ-ಮೂರ್ತಿಗಳೂ ಸಹ ತಮ್ಮ ಸ್ವರೂಪಕ್ಕೆ ತಕ್ಕನಾದ ವರ್ಣದ ವಸ್ತ್ರವನ್ನು ಧರಿಸಿರುತ್ತಾರಂತೆ. ಇದು ಸೃಷ್ಟಿಸಹಜವಾಗಿಯೇ ಇದೆ. ಉದಾಹರಣೆಗೆ, ಶುದ್ಧ ಸಾತ್ವಿಕರಾಗಿರುವಂತಹ ಪಿತೃದೇವತೆಗಳು ಬಿಳಿಯ-ಬಣ್ಣವನ್ನು ಧರಿಸಿರುವರಾಗಿ ದರ್ಶನ ನೀಡುತ್ತಾರೆಂಬುದು ಯೋಗಿವೆರೇಣ್ಯರಾದ ಶ್ರೀರಂಗಮಹಾಗುರುಗಳ ಯೋಗದೃಷ್ಟಿಯ ಮಾತು. ಲಯಕಾರಕ, ವೈರಾಗ್ಯ ಸಂಪನ್ನ, ಪ್ರಕೃತಿಯಿಂದ ವಿಮುಖನಾಗಿರುವ ಸ್ಮಶಾನವಾಸಿಯಾದ ಶಿವನು ದಿಗಂಬರನಾಗಿರುತ್ತಾನೆ.  ಲೋಕದಲ್ಲಿ ಸ್ಥಿತಿಕಾರಕನಾದ ವಿಷ್ಣುವು ಮಂಗಳಮಯವಾದ ಹೊಂಬಣ್ಣದ ಪೀತಾಂಬರವನ್ನು ಧರಿಸುತ್ತಾನೆ. ವಿಷ್ಣುವಿನ ಪ್ರಮುಖ ಅವತಾರವಾದ ಕೃಷ್ಣನೂ ಪೀತಾಂಬರಧಾರಿ. ಅಷ್ಟುಮಾತ್ರವಲ್ಲ. ಕೃಷ್ಣಪರಮಾತ್ಮನು ತಲೆಯಲ್ಲಿ ಅತ್ಯಂತ ಮೋಹಕವಾದ  ಬಣ್ಣಗಳಿಂದ ಕೂಡಿದ  ನವಿಲುಗರಿಯೊಂದನ್ನು ಧರಿಸುತ್ತಾನೆ. ಪರಾತ್ಪರ ಪರಮಪುರುಷನಾದ ಕೃಷ್ಣನು ಮಾಯಾಮಯ ಪ್ರಕೃತಿಯನ್ನು ತನ್ನ ವಶದಲ್ಲಿಟ್ಟುಕೊಂಡಿದ್ದಾನೆಂಬುದರ ಸೂಚನೆಯಿದು. ಬಣ್ಣಗಳ ಒಳ ಹೊರ ಪರಿಣಾಮ ಇಲ್ಲಿ ಬಹು ಮುಖ್ಯವಾದ ಅಂಶ.


ಸೂಚನೆ : 1/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.