Saturday, January 22, 2022

ನವವಿಧ ಭಕ್ತಿ - 12 ಸಖನಾಗಿದ್ದೂ ಭಕ್ತಿಯನ್ನು ತೋರಬಹುದು (Sakhanaagiddu Bhaktiyannu Torabahudu)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ

(ಪ್ರತಿಕ್ರಿಯಿಸಿರಿ lekhana@ayvm.in)
ಸಖ್ಯಭಕ್ತಿ - 1
ಸಖ್ಯಭಕ್ತಿ - 1

ಭಕ್ತಿಯಲ್ಲಿ ಮತ್ತೊಂದು ಪ್ರಸಿದ್ಧವಾದ ಪ್ರಕಾರ 'ಸಖ್ಯಭಕ್ತಿ'.  ಸಖಾ ಎಂದರೆ ಸ್ನೇಹಿತ-ಮಿತ್ರ-ಸ್ನೇಹದಿಂದ ಕೂಡಿರುವವನು. ಇದಲ್ಲದೇ, 'ಸ್ನೇಹ'ವೆಂದರೆ ಎಣ್ಣೆ-ಜಿಡ್ಡು ಎಂಬುದೂ ಒಂದರ್ಥ. ಎಣ್ಣೆಯ ವಿಶೇಷಧರ್ಮ ಅಂಟಿಕೊಳ್ಳುವುದು. ಅಂಟಿನಿಂದ ಕೂಡಿರುವುದರಿಂದ ಇದು ಸ್ನೇಹ. 'ಅಂಟು' ಎನ್ನುವುದೇ 'ರಾಗ'. ರಾಗ-ಅನುರಾಗ ಎಂದರೆ ಪ್ರೀತಿ. ಪ್ರೀತಿಯನ್ನು ಭಗವಂತನಲ್ಲಿ ತೋರಿಸುವುದೇ ಭಕ್ತಿಯಾದ್ದರಿಂದ ಭಕ್ತಿಗೆ ವಿಶೇಷವಾಗಿ ಅಪೇಕ್ಷಿತವಾಗಿರುವುದು ರಾಗ. ಆದುದರಿಂದ ರಾಗ-ಸ್ನೇಹಭಾವದಿಂದ ಕೂಡಿ ಭಗವಂತನನ್ನು ಆರಾಧಿಸುವುದೇ 'ಸಖ್ಯ-ಭಕ್ತಿ' - ಭಗವಂತನಲ್ಲಿ ಮಿತ್ರನಲ್ಲಿರುವಂತಹ ಅಂಟಿನಿಂದ ಕೂಡಿರುವುದು.

ಸಖ್ಯದ ವೈಶಿಷ್ಟ್ಯ

ಮೈತ್ರಿಯಲ್ಲಿ ಪರಸ್ಪರ ಅಂಟು-ಸುಖ-ದುಃಖಗಳ ಹಂಚಿಕೆಯಿರುತ್ತವೆ. ಕಷ್ಟಗಳು ಒದಗಿಬಂದಾಗ ಗೆಳೆಯನಿಗೆ ಸಮಾಧಾನವನ್ನು ಹೇಳುತ್ತಾನೆ. A friend in need is a friend indeed (ಅವಶ್ಯಕತೆ ಇದ್ದಾಗ ಒದಗಿಬರುವವನೇ ನಿಜಕ್ಕೂ ಸ್ನೇಹಿತ) ಎಂಬ ಗಾದೆಯೂ ಇದನ್ನು ಪೋಷಿಸುತ್ತದೆ. ಸಖ್ಯಭಕ್ತಿಯಲ್ಲಿ ವಿಶೇಷವೆಂದರೆ ಭಗವಂತನಿಗೆ ಅತಿಸಮೀಪದಲ್ಲಿರಬಹುದು ಮತ್ತು ಭಕ್ತನು ಭಗವಂತನನ್ನು ಸಖನಾಗಿ ನೋಡುವಂತೆಯೇ ಭಗವಂತನೂ ಈತನನ್ನು ಸಖನಾಗಿ ನೋಡುತ್ತಾನೆ. ಅತ್ಯಂತ ನಿಕಟವರ್ತಿಯಾಗಿ ಭಕ್ತನಿಗೆ (ತನ್ನ ಹೆಗಲಮೇಲೆ ಕೈ ಹಾಕಿಕೊಳ್ಳುವುದು, ಪಕ್ಕದಲ್ಲೇ ಕೂರುವುದು ಮುಂತಾದ) ವಿಶೇಷ ಅಧಿಕಾರಗಳನ್ನೂ ಕೊಡುತ್ತಾನೆ.

 

ಕೃಷ್ಣ - ಅರ್ಜುನ 

 ಇತಿಹಾಸ-ಪುರಾಣಗಳಲ್ಲಿ ಕಥೆಗಳ ಮೂಲಕ ಸಖ್ಯಭಕ್ತಿಯ ಬಗೆಗೆ ತೋರಿಸಿಕೊಡುತ್ತಾರೆ. ಸಖ್ಯಭಕ್ತಿಗೆ ಪ್ರಸಿದ್ಧ ಉದಾಹರಣೆ ಅರ್ಜುನ. ಅವನು ಕೃಷ್ಣನ ಜೊತೆಜೊತೆಯಾಗಿಯೇ ಇದ್ದವನು. ಕೃಷ್ಣನೇ ಅರ್ಜುನನನ್ನು ತನ್ನ ಸ್ನೇಹಿತನೆಂದು ಪ್ರೀತಿಪೂರ್ವಕವಾಗಿ ಪ್ರಕಟಿಸಿಕೊಂಡಂತಹ ಪ್ರಸಂಗಗಳನೇಕ. ಮಿತ್ರನ ವಿಶೇಷ ಜವಾಬ್ದಾರಿಯೆಂದರೆ ಅವನು ಯಾವ ಸಂಕಟಕ್ಕೂ-ತೊಂದರೆಗೂ ಒಳಗಾಗದಂತೆ ನೋಡಿಕೊಳ್ಳುವುದು. ಅರ್ಜುನನ ವಿಷಯದಲ್ಲಿ ಅಂತಹ ಜವಾಬ್ದಾರಿಯನ್ನು ಪರಿಪೂರ್ಣವಾಗಿ ಹೊತ್ತುಕೊಂಡಿದ್ದವನು  ಕೃಷ್ಣನೇ. ಪಾಂಡವರೆಲ್ಲರ ವಿಷಯದಲ್ಲೂ ಕೃಷ್ಣನಿಗೆ ಅತ್ಯಂತ ಪ್ರೀತಿಯಿತ್ತು, ಕಾರಣ ಅವರು ಧರ್ಮಿಷ್ಠರಾಗಿದ್ದರು. ಅದರಲ್ಲೂ ಅರ್ಜುನನಲ್ಲಿ ವಿಶೇಷಪ್ರೀತಿ ಇತ್ತು ಎನ್ನುವುದಕ್ಕೆ ಕೆಲವು ಘಟನೆಗಳನ್ನು ಸ್ಮರಿಸಬಹುದು. 


1. ಯುದ್ಧವಾಗಲೇಬೇಕೆಂದು ತೀರ್ಮಾನವಾದಾಗ ಶಕುನಿಯ ಪ್ರೇರಣೆಯಂತೆ ದುರ್ಯೋಧನನು ಕೃಷ್ಣನ ಬಳಿ ಬರುತ್ತಾನೆ. ನಿದ್ರಿಸುತ್ತಿದ್ದ ಕೃಷ್ಣನ ತಲೆಯ ಬಳಿ ಕುಳಿತುಕೊಳ್ಳುತ್ತಾನೆ. ನಂತರ ಬಂದ ಅರ್ಜುನ, ಕೃಷ್ಣನ ಪದತಲದಲ್ಲಿ ಕುಳಿತುಕೊಳ್ಳುತ್ತಾನೆ. ಕೃಷ್ಣ ಎಚ್ಚರವಾದೊಡನೆ ಅರ್ಜುನನನ್ನು ಮೊದಲು ಕಂಡು, ಅವನ ಆಗಮನಕ್ಕೆ ಕಾರಣವನ್ನು ಕೇಳುತ್ತಾನೆ; ನಂತರ ಹೇಳುತ್ತಾನೆ: ನನ್ನ ಹತ್ತಿರ ಮಹಾಬಲಿಷ್ಠರಿಂದ ಕೂಡಿದ 'ನಾರಾಯಣಸೈನ್ಯ'ವಿದೆ ಈ ಸೈನ್ಯವನ್ನು ಬೇಕಾದರೆ ನಿನ್ನ ಸಹಾಯಕ್ಕೆಂದು ಕೊಡಬಲ್ಲೆ; ಅಥವಾ ಏಕಾಂಗಿಯಾಗಿ ನಿನ್ನ ಸಹಾಯಕ್ಕೆ ನಿಲ್ಲಬಲ್ಲೆ; ಆದರೆ ಯುದ್ಧದಲ್ಲಿ ನಾನೊಬ್ಬನೇ ಯಾವ ಆಯುಧವನ್ನೂ  ಉಪಯೋಗಿಸದೇ ಇರುತ್ತೇನೆ. ಇದರಲ್ಲಿ ನಿನಗೆ ಯಾವುದು ಬೇಕೋ ಆರಿಸಿಕೊಳ್ಳಪ್ಪಾ". ಶ್ರೇಷ್ಠವಾದ ಸೇನಾಬಲವನ್ನು ಅರ್ಜುನನೇ ಆರಿಸಿಕೊಂಡುಬಿಡುತ್ತಾನೆಂದು ಹೆದರಿದ ದುರ್ಯೋಧನನು "ನಾನೇ ಮೊದಲು ಬಂದವನು" ಎನ್ನುತ್ತಾನೆ. ಆದರೆ ಕೃಷ್ಣನು "ಆದರೆ ನಾನು ಮೊದಲು ನೋಡಿದ್ದು ಅರ್ಜುನನನ್ನೇ" ಎಂದು ನುಡಿಯುತ್ತಾನೆ. ಅರ್ಜುನನೋ "ನೀನೊಬ್ಬನೇ ಬೇಕು ನನಗೆ" ಎಂದು ಉತ್ತರಿಸುತ್ತಾನೆ. ಮಹಾಸಂಗ್ರಾಮದಲ್ಲಿ ಬಲಿಷ್ಠರ ಸೈನ್ಯವು ಎಷ್ಟು ಆವಶ್ಯಕ  ಎಂಬುದನ್ನರಿತಿದ್ದರೂ "ಭಗವಂತ ನೀನೊಬ್ಬ ಸಾಕಪ್ಪ, ಇನ್ಯಾರೂ ಬೇಡ" ಎನ್ನಬೇಕಾದರೆ ಅದೆಷ್ಟು ಭಕ್ತಿ ಅವನಿಗೆ! ಕೃಷ್ಣನನ್ನು ಎಷ್ಟು ಚೆನ್ನಾಗಿ ಅರಿತಿದ್ದನೆಂಬುದು ಸ್ಪಷ್ಟವಾಗುತ್ತದೆ. ಕೃಷ್ಣನೂ ಒಪ್ಪಿಕೊಳ್ಳುತ್ತಾನೆ. 


ಅರ್ಜುನ, ಭಕ್ತನಾಗಿಯೂ ಮಿತ್ರನಾಗಿದ್ದಾನೆ. ಇದೇ ಸಖ್ಯಭಕ್ತಿ. 'ನೀನೊಬ್ಬ ಇದ್ದರೆ ಸಾಕು, ನನಗೆ ಇನ್ನೇನು ಬೇಕು?' ಎಂದಾಗ ಅಲ್ಲಿ ಭಕ್ತಿಭಾವದ ಜೊತೆಯಲ್ಲಿ ಶರಣಾಗತಿ ಭಾವವೂ  ತುಂಬಿದೆ. ಆದರೆ ಮಿತ್ರನಂತೆ ಸಲುಗೆಯ ಮಾತೂ ಇದೆ. 


2. ಕರ್ಣನ ವಿರುದ್ಧ ಯುದ್ಧ ಮಾಡುವಾಗ ಕರ್ಣನು ಇಂದ್ರನಿಂದ ಪಡೆದಂತಹ ಶಕ್ತ್ಯಾಯುಧವನ್ನು ಅರ್ಜುನನಮೇಲೆ ಪ್ರಯೋಗಿಸಿ ಆತನ ಕಥೆಯನ್ನು ಮುಗಿಸಲು ನಿಶ್ಚಯಿಸಿದ್ದ. ಆದರೆ ಕೃಷ್ಣನಿಗೆ ಸದಾ ಅರ್ಜುನನನ್ನು ಕಾಪಾಡುವುದರ ಚಿಂತೆಯೇ. ಆದ್ದರಿಂದ ಆ ಸಮಯಕ್ಕೆ ಸರಿಯಾಗಿ  ಘಟೋತ್ಕಚನನ್ನು ಯುದ್ಧಕ್ಕೆ ಬರಮಾಡಿಸಿ ಕೌರವಸೇನೆಯನ್ನು ಸಂಕಷ್ಟಕ್ಕೆ ಒಳಪಡಿಸಿದ. ಇದನ್ನು ಸಹಿಸಲಾರದೇ, ವಿಧಿಯಿಲ್ಲದೇ ಕರ್ಣ ಅರ್ಜುನನಿಗಾಗಿ ಕಾಯ್ದಿರಿಸಿದ ಶಕ್ತ್ಯಾಯುಧವನ್ನು ಘಟೋತ್ಕಚನ ಮೇಲೆ ಪ್ರಯೋಗಿಸಿಬಿಡುತ್ತಾನೆ. ಅರ್ಜುನ ಬದುಕಿದ ಎಂದು ಕೃಷ್ಣನು ನಿಟ್ಟುಸಿರು ಬಿಡುತ್ತಾನಂತೆ!


3. ಕರ್ಣ ನಾಗಾಸ್ತ್ರವನ್ನು ಪ್ರಯೋಗಿಸಿದಾಗ ಕೃಷ್ಣ ಇಡೀ ರಥವನ್ನೇ ಅದುಮಿ ಅರ್ಜುನನ ಕಿರೀಟವನ್ನು ಮಾತ್ರವೇ ಹಾರಿಸಿಕೊಂಡು ಹೋಗುವಂತೆ ಉಪಾಯಮಾಡಿ ಇವನನ್ನು ಬದುಕಿಸುತ್ತಾನೆ!  


4. 'ಅಭಿಮನ್ಯುವನ್ನು ಸಂಹರಿಸಲು ಕಾರಣನಾಗಿದ್ದ ಸೈಂಧವನನ್ನು ಮಾರನೆಯದಿನದ ಸಂಜೆಯೊಳಗೆ  ಸಂಹಾರ ಮಾಡಿಯೇ ಮಾಡುತ್ತೇನೆ; ಇಲ್ಲದಿದ್ದಲ್ಲಿ ಅಗ್ನಿಪ್ರವೇಶ ಮಾಡುತ್ತೇನೆಂದು' ಅರ್ಜುನನು ಶಪಥ ಮಾಡಿಬಿಡುತ್ತಾನೆ. ಆದರೆ ಅದನ್ನು ನೆರೆವೇರಿಸುವುದು ಅತ್ಯಂತ ಕಷ್ಟಸಾಧ್ಯವೆಂಬ ಪರಿಸ್ಥಿತಿ ಒದಗಿದಾಗ ಶ್ರೀಕೃಷ್ಣನು ತನ್ನ ಯೋಗಮಾಯೆಯಿಂದ ಸೂರ್ಯಾಸ್ತವಾದಂತೆ ತೋರಿಸುತ್ತಾನೆ. ಆಗ ಸೈಂಧವ ತನಗಿದ್ದ ವಿಶೇಷರಕ್ಷಣೆಯನ್ನು ಬಿಟ್ಟು ಹೊರಬರುತ್ತಾನೆ. ಅರ್ಜುನ ಆಗ ತನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸಿಕೊಳ್ಳುತ್ತಾನೆ. ಅವನಿಗಾಗಿ ಕೃಷ್ಣ ತನ್ನ ಯೋಗಮಾಯೆಯನ್ನು ತೋರಿಸುವುದಕ್ಕೂ ಹಿಂಜರಿಯಲಿಲ್ಲ. 'ನನ್ನ ಸಖ ನೀನು, ನಿನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆ' ಎಂಬುದಾಗಿ ಕೃಷ್ಣನು ಬಾಯಿಬಿಟ್ಟು ಹೇಳಿಕೊಳ್ಳುವ ಪ್ರಸಂಗಗಳುಂಟು. 


5. ಮತ್ತೊಂದು ಪ್ರಸಂಗ. ಯುದ್ಧವು ಮುಗಿದ ಮೇಲೆ ಕೊನೆಯಲ್ಲಿ "ಅರ್ಜುನ! ರಥದಿಂದ ಇಳಿ ಕೆಳಗೆ" ಎಂದು ಕೃಷ್ಣ ಆಜ್ಞೆಮಾಡುತ್ತಾನೆ. ಆಗ ಅರ್ಜುನನು  "ಸಾರಥಿ ಮೊದಲು ಇಳಿಯಬೇಕು. ನಂತರ ರಥಿಯಾದ ನಾನು ಇಳಿಯಬೇಕು, ಅದೇ ನಿಯಮ" ಎಂಬುದಾಗಿ ಕೃಷ್ಣನಿಗೇ ಉಪದೇಶ ಮಾಡುತ್ತಾನೆ. "ನಾನು ಹೇಳಿದಂತೆ ಕೇಳು" ಎಂದು  ಮಿತ್ರನೇ ಆದರೂ  ಪ್ರಭುವಿನಂತೆ ಆಜ್ಞೆ  ಮಾಡುತ್ತಾನೆ ಕೃಷ್ಣ. ಅರ್ಜುನನು ರಥದಿಂದ ಇಳಿದ ಬಳಿಕ ಕೃಷ್ಣನು ಇಳಿದ ಮರುಕ್ಷಣವೇ ರಥವು ಉರಿದುಭಸ್ಮವಾಗುತ್ತದೆ. "ನಾನು ಮೊದಲು ಇಳಿದುಬಿಟ್ಟಿದ್ದರೆ ನಿನ್ನ ಕಥೆ ಏನಾಗುತ್ತಿತ್ತು ನೋಡಿದೆಯಾ?" ಎನ್ನುತ್ತಾನೆ ಕೃಷ್ಣ. ಅಂದರೆ ಎಲ್ಲಾ ಸಂದರ್ಭಗಳಲ್ಲೂ ಕೃಷ್ಣ ಅವನಿಗೆ ರಕ್ಷಕನಾಗಿಯೂ, ಅಂಗರಕ್ಷಕನಾಗಿಯೂ ಇದ್ದು ಸಖ್ಯತ್ವವನ್ನು ಪರಿಪಾಲಿಸಿದ.   

(ಸಶೇಷ)

ಸೂಚನೆ : 22/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.