Sunday, January 16, 2022

ನವವಿಧ ಭಕ್ತಿ - 11 ಎಲ್ಲ ಕರ್ಮಗಳೂ ಸೇವೆಯೇ ಆಗಬಹುದು (Navavidha Bhakti - 11 Ella karmagalu Seveye Aagabahudu)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ

(ಪ್ರತಿಕ್ರಿಯಿಸಿರಿ lekhana@ayvm.in)


 ಸೇವೆಯ ವಿಸ್ತೃತ ರೂಪ 

ದಾಸ್ಯಭಾವವು ಪೂಜೆಗೆ ಮಾತ್ರ ಸೀಮಿತವಾದದ್ದಲ್ಲ. ಇನ್ನೂ ವಿಸ್ತಾರವಾಗಿದೆ. ಇಂತಹ ಸೇವಾಕಾರ್ಯಕ್ಕೆ ಉತ್ತಮ ಉದಾಹರಣೆ ಹನುಮಂತ. ಪ್ರತಿಯೊಂದು ಹಂತದಲ್ಲೂ ರಾಮನ ಸ್ಮರಣೆಯೇ, ರಾಮನ ಸಂತೋಷವೇ ಅವನ ಉದ್ದೇಶವಾಗಿತ್ತು. ಮಹಾಬಲಶಾಲಿ, ವೀರ್ಯವಂತ; ಜೊತೆಗೆ ಬುದ್ಧಿವಂತ, ವಾಗ್ಮಿ. ರಾವಣನ ಮುಂದೆ ದೂತನಾಗಿಯೂ, ಸುಗ್ರೀವನಲ್ಲಿ ಮಂತ್ರಿಯಾಗಿಯೂ, ಯುದ್ಧದಲ್ಲಿ ವೀರನಾಗಿಯೂ ವರ್ತಿಸುತ್ತಾನೆ. ಜ್ಞಾನದಲ್ಲಿಯೂ ಶ್ರೇಷ್ಠ. ಆತ್ಮಜ್ಞಾನ ಸಂಪನ್ನ. ಪರಮಭಕ್ತ-ಭಾಗವತ. ಅಣಿಮಾದಿ ಅಷ್ಟಸಿದ್ಧಿಗಳೂ ಅವನ ವಶದಲ್ಲಿದ್ದುವು. ಇಷ್ಟೆಲ್ಲಾ ಶಕ್ತಿಗಳನ್ನೂ ರಾಮಕಾರ್ಯಕ್ಕಾಗಿಯೇ ಬಳಸುತ್ತ ರಾಮಸೇವೆಯನ್ನು ಮಾಡುತ್ತಿದ್ದ ಅಪ್ರತಿಮ ದಾಸನು.  


ಅಷ್ಟೆಲ್ಲಾ ಶಕ್ತಿಯಿಲ್ಲದವರೂ ಇರುವಷ್ಟರಲ್ಲಿಯೇ ಭಗವಂತನ ಸೇವೆ ಮಾಡಬಹುದು. ಶ್ರೀಮದ್ರಾಮಾಯಣದಲ್ಲಿ ಸಮುದ್ರ-ಸೇತುವೆಯ ನಿರ್ಮಾಣ ಸಮಯದಲ್ಲಿ ಅಳಿಲೂ, ಸೇವೆ ಮಾಡಿದ  ಕಥೆ  ಪ್ರಸಿದ್ಧವಾಗಿದೆ.  ಅಳಿಲು, ನೀರಿನಲ್ಲಿ ಮುಳುಗಿ, ಮರಳಲ್ಲಿ ಹೊರಳಾಡಿ,  ತನ್ನ ಮೈಗೆ ಅಂಟಿದ ಮರಳನ್ನು ಸೇತುವೆ ಕಟ್ಟಿದ ಜಾಗದಲ್ಲಿ ಉದುರಿಸಿತು ಅಷ್ಟೆ. ಹೀಗೆ ಉದುರಿಸಿದ ಮರಳಿನಿಂದ ಸೇತುವೆ ಕಟ್ಟಲಾದೀತೇ! ವಿಚಾರಕ್ಕಿಂತ ಇದರ ಹಿಂದಿರುವ ಭಕ್ತಿಭಾವ-ಸೇವಾಭಾವ ಎಂತಹುದ್ದು! "ಅಳಿಲಸೇವೆ"ಯು ನಿಜವಾದ ಘಟನೆಯೋ ಅಥವಾ ಕವಿಕಲ್ಪನೆಯೋ ನಾವರಿಯೆವು. ಆದರೆ ಇದರಿಂದ ನಮ್ಮಲ್ಲಿ ಸಂತೋಷ-ಉತ್ಸಾಹ-ಭಕ್ತಿಭಾವಗಳು ಮೂಡಿಬರುವುದರಲ್ಲಿ ಸಂಶಯವಿಲ್ಲ. ಅಂತಹ ಉತ್ಸಾಹ-ಭರಿತವಾದ ಪೂರ್ಣಶಕ್ತಿಪ್ರಯೋಗದ "ಅಳಿಲುಸೇವೆ"ಯೂ ಶ್ರೀರಾಮನಿಗೆ ಪ್ರಿಯವಾದದ್ದು. 


ಕ್ರಿಯೆಗಳೆಲ್ಲವೂ ಸೇವೆಯಾಗುವುದು ಹೇಗೆ?

ಸೇವೆಯ ವಿಸ್ತೃತರೂಪದ ಬಗೆಗೆ ಶ್ರೀರಂಗಮಹಾಗುರುಗಳು ದಯಪಾಲಿಸಿದ ನೋಟವನ್ನು  ಗಮನಿಸುವುದಾದರೆ - ವೃಕ್ಷದಿಂದ ಫಲವನ್ನು ಪಡೆದು  ಸಂತೋಷಿಸುವುದೇ ವೃಕ್ಷವನ್ನು ಬೆಳಸುವುದರ ಉದ್ದೇಶ. ಗಿಡಕ್ಕೆ ನೀರು-ಗೊಬ್ಬರಗಳನ್ನು ಹಾಕುವುದು, ಅಗತ್ಯವಿದ್ದಲ್ಲಿ ಔಷಧಿ ಹೊಡೆಯುವುದು, ಸೊಂಪಾಗಿ ಬೆಳೆಯಲು ಕಾಲಕಾಲಕ್ಕೆ ಕತ್ತರಿಸುವುದು ಇತ್ಯಾದಿಗಳೆಲ್ಲವೂ ಫಲದ ಕಡೆಗೆ ಗಮನವಿಟ್ಟು ಮಾಡುವ ಕ್ರಿಯೆಗಳೇ. 


ಎಲೆಯಲ್ಲಿನ ಸಣ್ಣ-ಸಣ್ಣ ನರಗಳಿಂದ ಹಿಡಿದು ಗಿಡದಲ್ಲಿರುವ ಪ್ರತಿಯೊಂದು ಭಾಗದೊಡನೆಯೂ ಸಂಬಂಧವನ್ನು ಹೊಂದಿರುವ ಬೇರು, ಇಡೀ ವೃಕ್ಷವನ್ನು ರಕ್ಷಿಸುವ-ಪೋಷಿಸುವ ಭಾಗವಾಗಿದೆ. ಆದ್ದರಿಂದಲೇ ನೀರು-ಗೊಬ್ಬರಗಳನ್ನು ಮೇಲೆ ಇರುವ ಕಾಯಿ-ಹೂವಿಗೆ ಹಾಕದೆ, ಕೆಳಗಿರುವ ಬೇರಿಗೇ ಹಾಕುತ್ತೇವೆ. ಆದ್ದರಿಂದ ಬೇರಿಗೆ ಮಾಡುವ 'ಸೇವಾಕಾರ್ಯ' ಇಡೀ ವೃಕ್ಷಕ್ಕೇ ಮಾಡುವ ಸೇವೆಯಾಗುತ್ತದೆ. ಬೇರು ತನ್ನಲ್ಲಿಗೆ ಬಂದ ನೀರು-ಗೊಬ್ಬರಗಳನ್ನು ತಾನು ಇಟ್ಟುಕೊಳ್ಳದೆ ಇಡೀ ವೃಕ್ಷಕ್ಕೆ ಒದಗಿಸಿ ಫಲವನ್ನು ನೀಡುತ್ತದೆ. ಮೂಲ ಉದ್ದೇಶಕ್ಕೆ ಪೋಷಕವಾದ ಕೆಲಸಗಳೆಲ್ಲವೂ ಸೇವೆಯೇ. ಅಂತೆಯೇ ಅದಕ್ಕೆ ವಿರೋಧವಾದವುಗಳಾವುವೂ ಸೇವೆಯಾಗುವುದಿಲ್ಲ. 


ನಮ್ಮ ದೇಹವೂ ಒಂದು ವೃಕ್ಷವೇ. ಇದರಲ್ಲಿ ಇಂದ್ರಿಯ-ಮನಸ್ಸು-ಬುದ್ಧಿಗಳ ಮೂಲಕ ಮಾಡುವ ಕ್ರಿಯೆಗಳೆಲ್ಲವೂ ಮಹಾಫಲವನ್ನು ಹೊಂದಲನುಗುಣವಾಗಿದ್ದರೆ ಇವೆಲ್ಲವೂ ಸೇವೆಯೇ ಆಗುತ್ತವೆ. ಜೀವ-ದೇವರ ಸಂಯೋಗವೇ (ಭಗವಂತನಲ್ಲಿ ಒಂದಾಗಿ ಸೇರಿಕೊಳ್ಳುವುದೇ) ಈ ವೃಕ್ಷದಿಂದ ದೊರೆಯುವ ಮಹಾಫಲ. ಅದಕ್ಕೆ ಪೋಷಕವಾದ ಕ್ರಿಯೆಗಳೆಲ್ಲವೂ ಸೇವಾಕಾರ್ಯಗಳೇ. ಭಗವಂತನ ಪ್ರೀತ್ಯರ್ಥವಾದದ್ದೆಲ್ಲವೂ ಸೇವೆಯೇ. ಆದರೆ ಭಗವಂತನ ಪ್ರೀತಿ-ಅಪ್ರೀತಿಗಳ ತಿಳಿವಳಿಕೆಯನ್ನು ಭಗವಂತನನ್ನು ಚೆನ್ನಾಗಿ ಅರಿತ ಜ್ಞಾನಿಗಳಿಂದ, ಋಷಿಗಳಿಂದ ತಿಳಿಯಬೇಕು. 


ಭಗವತ್ಪ್ರೀತಿಕರವಾಗಿ ಮಾಡಿದಾಗ ಧನಸಹಾಯ, ಔಷಧಿಸಹಾಯ ಮುಂತಾದ ಎಲ್ಲಾ ಸಮಾಜಸೇವಾರೂಪವಾದ(social service) ಕ್ರಿಯೆಗಳನ್ನೂ ಸೇವಾಕಾರ್ಯವಾಗಿ ಪರಿವರ್ತಿಸಬಹುದು. ಕೇವಲ ಆರಾಧನೆಯನ್ನಷ್ಟೇ ಸೇವಾಕಾರ್ಯ ಎಂದೆಣಿಸಬಾರದು.   


ಆಂಜನೇಯ, ಪ್ರತಿ ಹೆಜ್ಜೆಯಲ್ಲಿಯೂ ರಾಮನನ್ನೇ ಭಾವಿಸುತ್ತ ಸೇವೆ ಸಲ್ಲಿಸಿದನೆಂಬುದನ್ನು ಗಮನಿಸಬಹುದು. ಇಂದ್ರಜಿತ್ತನು ಪ್ರಯೋಗಿಸಿದ ಬ್ರಹ್ಮಾಸ್ತ್ರದಿಂದ ರಾಮಲಕ್ಷ್ಮಣರು ಮೂರ್ಛೆ ಹೋದಾಗ ಹಿಮಾಲಯದಿಂದ ಸಂಜೀವಿನಿಪರ್ವತದಲ್ಲಿರುವ ಮೂಲಿಕೆ ತರಲು ಹೋಗಿ ಆ ಬೆಟ್ಟವನ್ನೇ ಹೊತ್ತುತಂದ ಕಥೆ ಪ್ರಸಿದ್ಧ. ಅಷ್ಟು ಬಲಶಾಲಿಯೂ, ವಾಯುಪುತ್ರನೂ ಆದವನು ವಾಯುವೇಗದಲ್ಲಿ ಬಂದುಸೇರಿದನು. ಅದರಿಂದಲೇ ರಾಮಲಕ್ಷ್ಮಣರ ಜೀವ ಉಳಿಯಿತು. ಇನ್ನು ಸೀತೆಯನ್ನು ರಕ್ಷಿಸಿದ ವಿಷಯ ಪ್ರಸಿದ್ಧವಾದದ್ದು. ಒಂದು ನಿಮಿಷ ತಡವಾಗಿದ್ದರೂ ಅಶೋಕವನದಲ್ಲಿದ್ದ ಸೀತೆಯು ರಾವಣನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಹಂತದಲ್ಲಿದ್ದಳು. ಅದೇ ಸಮಯದಲ್ಲಿ ಆಂಜನೇಯನು ರಾಮನ ವರ್ಣನೆಯನ್ನು ಮಾಡಿ ಅವಳಿಗೆ ಸಂತೋಷವನ್ನುಂಟುಮಾಡಿ ಸೀತೆಯನ್ನೂ ಬದುಕಿಸಿದನು ಎನ್ನಬಹುದು. 


ಹದಿನಾಲ್ಕುವರ್ಷ ಮುಗಿಯುತ್ತಲೇ ಪ್ರಾಯೋಪವೇಶಕ್ಕೆ ಅನುವು ಮಾಡಿಕೊಳ್ಳುತ್ತಿದ್ದ ಭರತನಿಗೆ ರಾಮನ ಆಗಮನದ ಸುದ್ದಿಯನ್ನು ತಿಳಿಸಿ ಆಂಜನೇಯ ಭರತನಿಗೂ ಸೇವೆ ಮಾಡುತ್ತಾನೆ ಎಂಬುದಾಗಿ ವಾಲ್ಮೀಕಿ ಮಹರ್ಷಿಯು ಸಂತೋಷವಾಗಿ ನುಡಿಯುತ್ತಾರೆ. ಇಷ್ಟೆಲ್ಲ ಸೇವೆಯ ಮಧ್ಯದಲ್ಲಿ ವಿರಾಮ ದೊರೆತಾಗ ಕಲ್ಲುಬಂಡೆಯ ಮೇಲೆ ಕುಳಿತು ರಾಮನಾಮವನ್ನು ಜಪಿಸುತ್ತಾ ರಾಮಧ್ಯಾನದಲ್ಲಿ ನಿರತನಾಗಿರುವವನು ಹನುಮಂತ. 


ಮಹಾಪರಾಕ್ರಮಿಯೂ ಜಿತೇಂದ್ರಿಯನೂ ಆದ ಲಕ್ಷ್ಮಣನು ಸ್ವಂತ ಸುಖವೆಲ್ಲವನ್ನೂ ತ್ಯಜಿಸಿ ಶ್ರೀರಾಮನ ಸೇವೆಗಾಗಿ ಅರಣ್ಯಕ್ಕೆ ತೆರಳಿದ ವೃತ್ತಾಂತ ಸುಪ್ರಸಿದ್ಧ. ಹಗಲಿರುಳೆನ್ನದೇ ಅರಣ್ಯದಲ್ಲಿ ಅನವರತವೂ ಹದಿನಾಲ್ಕು ವರ್ಷ ನಿದ್ರೆಯನ್ನೇ ವರ್ಜಿಸಿ ಸೀತಾರಾಮರ ಸೇವೆಯಲ್ಲಿಯೇ ನಿರತನಾಗಿದ್ದ ಸೇವಕ, ಅಪೂರ್ವತ್ಯಾಗಿ ಲಕ್ಷ್ಮಣ, ದಾಸ್ಯಕ್ಕೆ ಮಾದರಿಯೆನಿಸಿಕೊಳ್ಳುತ್ತಾನೆ.


ಭಗವಂತನಲ್ಲಿ ದಾಸ್ಯಭಾವವಿರುವಂತೆಯೇ ಪರಮಭಾಗವತರಿಗೆ-ಭಗವಂತನ ಭೃತ್ಯರಿಗೆ ಸೇವೆಮಾಡಿದರೂ ಭಗವಂತನಿಗೇ ತಲಪುತ್ತದೆ. ಅದರ ಪರಂಪರೆ ಹೇಗೆಂದರೆ 'ತ್ವದ್ಭೃತ್ಯ ಭೃತ್ಯ ಪರಿಚಾರಕ ಭೃತ್ಯ-ಭೃತ್ಯ ಭೃತ್ಯಸ್ಯ-ಭೃತ್ಯ ಇತಿ ಮಾಂ ಸ್ಮರ ಲೋಕನಾಥ' ಎಂದು ಕುಲಶೇಖರ ಆಳ್ವಾರರು ಕೊಂಡಾಡುತ್ತಾರೆ. "ಭಗವಂತ, ನನ್ನನ್ನು ಹೇಗೆ ತಿಳಿಯಬೇಕೆಂದರೆ ನಿನ್ನ ಭೃತ್ಯ(ಸೇವಕ), ನಿನ್ನ ಭೃತ್ಯರಿಗೆ ಭೃತ್ಯರಿಗೆ….  ಹೀಗೆ ಐದು ಆರು ಪರಂಪರೆ ದಾಟಿನಿಂತು ನಿನ್ನ ಸೇವೆ ಮಾಡುವ ದಾಸ ಎಂದು ತಿಳಿಯಬೇಕು" ಎನ್ನುತ್ತಾರೆ. "ದಾಸ-ದಾಸ-ದಾಸರ ದಾಸ್ಯವ ಕೊಡೋ…." ಗೀತವೂ ಇದನ್ನೇ ಪುನರುಕ್ತಿಗೊಳಿಸುತ್ತದೆಯಲ್ಲವೇ?


ಒಂದು ಇಂಜಿನ್ ಹಿಂದೆ ಹದಿನೈದು ಬೋಗಿಗಳಿದ್ದರೂ ಕೊನೆಯ ಬೋಗಿಗೂ ಇಂಜಿನ್ನಿಗೂ ಕೊಂಡಿಯ ಮೂಲಕ ಸಂಬಂಧ ಇದ್ದೇ ಇರುತ್ತದೆ (ಕೊಂಡಿ ಕಳಚಿಕೊಳ್ಳದಿದ್ದರೆ!) ಅಂತೆಯೇ ಆ ಭೃತ್ಯರೆಲ್ಲರೂ ದಾಸ್ಯಭಾವದ ಕೊಂಡಿಯನ್ನು ಭದ್ರವಾಗಿ ಹಿಡಿದಿರುವುದರಿಂದ ಕೊನೆಯ ಭೃತ್ಯರಿಗೂ ಭಗವಂತನ ದಾಸ್ಯಸಂಬಂಧ ಇರುತ್ತದೆ. ಆದ್ದರಿಂದ ಭಗವದ್ಭಕ್ತರಲ್ಲಿ ದಾಸ್ಯಭಾವವಿರುವುದೂ ಆಷ್ಟೇ ಶ್ರೇಷ್ಠವಾದದ್ದು. ದಾಸ್ಯವನ್ನೇ ವೃತ್ತಿಯನ್ನಾಗಿಟ್ಟು ಭಗವಂತನ ಮಹಿಮೆಯನ್ನು ಮನೆಮನೆಗೂ ತಲುಪಿಸಿ ಸ್ಫೂರ್ತಿಯನ್ನು ತುಂಬುತ್ತಿದ್ದ  ಪುರಂದರದಾಸರು-ಕನಕದಾಸರು ಮುಂತಾದ ದಾಸಶ್ರೇಷ್ಠರನ್ನು ಸ್ಮರಿಸೋಣ.

(ಮುಂದುವರಿಯುವುದು)

ಸೂಚನೆ : 15/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.