ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
(ಪ್ರತಿಕ್ರಿಯಿಸಿರಿ lekhana@ayvm.in)
ಭರತನು ಶ್ರೀರಾಮನನ್ನು ಮರಳಿ ಅಯೋಧ್ಯೆಗೆ ಕರೆದುಕೊಂಡು ಹೋಗಲೇಬೇಕೆಂಬ ಹಠದಿಂದ ಶ್ರೀರಾಮನಿದ್ದಲ್ಲಿಗೆ ಬರುತ್ತಾನೆ. ಆಗ ಶ್ರೀರಾಮನು, ಭರತನಿಗೆ ಕೆಲವು ಆದರ್ಶವಾದ ಮಾತುಗಳನ್ನು ಹೇಳುತ್ತಾನೆ. ಈ ಮಾತುಗಳಿಂದ ಆತ ಎಷ್ಟರಮಟ್ಟಿಗೆ ರಾಜನೀತಿಕುಶಲನಾಗಿದ್ದ ಎಂಬುದು ಮನವರಿಕೆಯಾಗುತ್ತದೆ. ಒಬ್ಬ ರಾಜನಾದವನು ಹೇಗೆ ಸಮಗ್ರವಾದ ರಾಜನೀತಿಯನ್ನು ತಿಳಿದಿರಬೇಕೆಂಬುದನ್ನು ಅವನ ಮಾತಿನಿಂದ ತಿಳಿಯಬಹುದು. ಒಂದೊಂದು ಮಾತನ್ನೂ, ತನ್ನ ನಡೆ-ನುಡಿಗಳಲ್ಲಿ ಮಾಡಿ-ಆಡಿ ತೋರಿಸಿದ ಆದರ್ಶಪುರುಷೋತ್ತಮ ಶ್ರೀರಾಮ. ಅದಕ್ಕೆ ಶ್ರೀರಾಮನು ಭರತನಿಗೆ ಉಪದೇಶಿಸಿದ ಕೆಲವು ಮಾರ್ಮಿಕವಾದ ರಾಜನೀತಿಯ ತುಣುಕುಗಳೇ ಸಾಕು. ಒಬ್ಬ ರಾಜನಾದವನು ಯಾವ ಯಾವ ಜನರ ಜೊತೆ ಯಾವ ರೀತಿಯಾದ ಸಂಬಂಧವನ್ನು ಪಡೆದಿರುತ್ತಾನೆ, ಮತ್ತು ಅವರ ಜೊತೆ ಹೇಗೆ ಅವನ ವ್ಯವಹಾರವಿರಬೇಕಾಗುತ್ತದೆ ಎಂಬ ಅರಿವನ್ನೇ 'ರಾಜನೀತಿಜ್ಞತೆ' ಎನ್ನುತ್ತಾರೆ. ಶ್ರೀರಾಮನ ರಾಜನೀತಿಕೌಶಲದ ಮಾತುಗಳು ಇಂತಿವೆ. "ಎಲೈ ಭರತನೇ! ಈ ರಾಜ್ಯದ ಅಧಿಕಾರವೆಂಬುದು ಶಾಶ್ವತವಾದುದಲ್ಲ. ರಾಜಪುತ್ರನು ವಿನಯಸಂಪನ್ನನೂ, ಸರ್ವವಿದ್ಯಾಪಾರಂಗತನೂ, ಕುಲವನ್ನು ಬೆಳಗಿಸುವವನೂ ಆಗಿರಬೇಕು. ದೇವರನ್ನು, ತಂದೆ-ತಾಯಿಯರನ್ನು, ಗುರುವನ್ನು, ಗುರುಸಮಾನರಾದವರನ್ನೂ ಗೌರವಿಸುವ ನಡೆಯಿರಬೇಕು. ಶೂರರೂ, ಜಿತೇಂದ್ರಿಯರೂ, ಬಹುಶ್ರುತರೂ, ಒಳ್ಳೆಯ ಕುಲದಲ್ಲಿ ಜನಿಸಿದವರೂ, ಆದ ಮಂತ್ರಿಗಳನ್ನು ಪಡೆದಿರಬೇಕು. ನೂರಾರು ಸಾವಿರಾರು ಮೂರ್ಖಮಂತ್ರಿಗಳಿಗಿಂತ ಚತುರನಾದ ಒಬ್ಬ ಮಂತ್ರಿ ಇದ್ದರೂ ಸಾಕು. ಒಬ್ಬನೇ ಒಬ್ಬ ಮೇಧಾವಿಯೂ, ಶೂರನೂ, ದಕ್ಷನೂ, ಬುದ್ಧಿವಂತನೂ ಆದ ಮಂತ್ರಿಯಿದ್ದರೆ ರಾಜನು ಅವನಿಂದ ಶ್ರೇಯಸ್ಸು ಮತ್ತು ಪ್ರೇಯಸ್ಸು ಎರಡನ್ನೂ ಪಡೆಯುತ್ತಾನೆ.
ರಹಸ್ಯವಾಗಿ ಇರಬೇಕಾದ ವಿಷಯಗಳು ಹೊರಗೆ ಹೋಗದಂತೆ ನೋಡಿಕೊಳ್ಳಬೇಕು. ಯಾವುದೇ ಕಾರ್ಯವನ್ನೂ ಬಹು ಶೀಘ್ರವಾಗಿ ಪ್ರಾರಂಭಿಸಬೇಕು ಮತ್ತು ಅದನ್ನು ಸಕಾಲದಲ್ಲಿ ಮುಗಿಸಬೇಕು. ಸೇವಕವರ್ಗಕ್ಕೆ ಅವರವರ ಕಾರ್ಯಕ್ಕೆ ಯೋಗ್ಯವಾದ ವೇತನವನ್ನು ಕೊಡಬೇಕು ಮತ್ತು ಅದನ್ನು ಕಾಲಕ್ಕೆ ಸರಿಯಾಗಿ ಪಾವತಿಸಬೇಕು. ನಿನ್ನ ಪ್ರಜೆಗಳು ಕೃಷಿ-ಗೋರಕ್ಷ-ವಾಣಿಜ್ಯದಲ್ಲಿ ನೆಮ್ಮದಿಯಿಂದ ಜೀವನವನ್ನು ನಡೆಸುವಂತೆ ನೋಡಿಕೊಳ್ಳಬೇಕು. ಯುದ್ಧಕ್ಕೆ ಬೇಕಾದ ಅಶ್ವ, ಗಜ ಸೇನೆ ಎಲ್ಲವೂ ಸನ್ನದ್ಧವಾಗಿರಬೇಕು. ಆಯಕ್ಕಿಂತಲೂ ವ್ಯಯವು ಕಮ್ಮಿ ಇರಬೇಕು. ಕೋಟೆ-ಕೊತ್ತಲಗಳು ಸದಾ ಧವಸಧಾನ್ಯದಿಂದ ಹೇರಳವಾಗಿ ತುಂಬಿರಬೇಕು. ದೇವತೆಗಳಿಗೆ, ಪಿತೃಗಳಿಗೆ, ಅತಿಥಿ-ಅಭ್ಯಾಗತರಿಗೆ, ಬ್ರಾಹ್ಮಣರಿಗೆ, ಯೋಧರಿಗೆ ಮಿತ್ರವರ್ಗಕ್ಕೆ ಮಾಡಿದ ವ್ಯಯದಿಂದ ಎಲ್ಲಾ ಪಾಪಗಳೂ ದೂರವಾಗುತ್ತವೆ. ಅದು ಎಂದೂ ವ್ಯರ್ಥವಾಗುವುದಿಲ್ಲ. ಇದರಿಂದ ರಾಜನಾದವನಿಗೆ ಸಕಲ ಅನಿಷ್ಟವೂ ದೂರವಾಗುತ್ತದೆ. ಅರ್ಥಕಾಮಗಳನ್ನು ಧರ್ಮದ ಚೌಕಟ್ಟಿನಲ್ಲಿ ಅನುಭವಿಸಬೇಕು. ಉತ್ತಮವಾದ ನಡೆಗಳಿಂದ ನಮ್ಮ ಕುಲಕ್ಕೆ ಕೀರ್ತಿಯನ್ನು ಕೊಟ್ಟು, ಸಂಪೂರ್ಣಭೂಮಂಡಲಕ್ಕೆ ಅಧಿಪತಿಯಾಗಿ, ಕೊನೆಯಲ್ಲಿ ಸ್ವರ್ಗವನ್ನು, ಉತ್ತಮಲೋಕವನ್ನು ಪಡೆಯುವಂತವನಾಗು". ಹೀಗೆ ಶ್ರೀರಾಮನು ಭರತನಿಗೆ ಅನೇಕಬಗೆಯಲ್ಲಿ ರಾಜನೀತಿಯನ್ನು ಉಪದೇಶಿಸುತ್ತಾನೆ. ಈ ಉಪದೇಶವನ್ನು ಗಮನಿಸಿದರೆ ಸಾಕು, ಶ್ರೀರಾಮನು ಯಾವ ರೀತಿಯಾಗಿ ರಾಜನೀತಿಯನ್ನು ತಿಳಿದವನಾಗಿದ್ದ ಎಂದು. ಇದು ಕೇವಲ ಭರತನಿಗೆ ಮಾಡಿದ ಉಪದೇಶವೆಂದು ತಿಳಿದರೆ ಸಾಲದು. ಈ ಭರತಖಂಡದಲ್ಲಿ ರಾಜ್ಯವನ್ನು ಆಳುವ ಪ್ರತಿಯೊಬ್ಬ ರಾಜನಿಗೂ ಮಾಡಿರುವ ಪಾಠವೆಂದು ತಿಳಿದವನಾಗಿದ್ದ ಎಂದು ಅರಿಯಬಹುದು. ಇಲ್ಲಿ ಭರತನು ನೆಪಮಾತ್ರವಷ್ಟೆ.