Sunday, January 9, 2022

ಅಷ್ಟಾಕ್ಷರ ದರ್ಶನ -3 ಸಂಕಲ್ಪಮೂಲಃ ಕಾಮೋ ವೈ (Astakshara Darshana -3 Sankalpamulah Kamo Vai)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ನಾವು ಬದುಕಿರುವಷ್ಟು ದಿನವೂ ಏನಾದರೊಂದು ಕೆಲಸವನ್ನು ಮಾಡುತ್ತಲೇ ಇರುತ್ತೇವೆ. 'ಸುಮ್ಮನಿರು' ಎಂದು ಕೈಕಾಲುಗಳನ್ನು ಕಟ್ಟಿಹಾಕಲಾದೀತು; ಆದರೆ ಮನಸ್ಸನ್ನು ಕಟ್ಟಿಹಾಕಲಾದೀತೇ? ಕಾಯ-ವಾಕ್-ಮನಸ್ - ಎಂಬ ಮೂರುಸ್ತರಗಳಲ್ಲಿ ಒಂದಿಲ್ಲೊಂದೆಡೆ ಕಾರ್ಯವು ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

ಕನಸಿನಲ್ಲಿ ಸಹ ಕ್ರಿಯೆಯುಂಟು. ಕನಸೊಂದು ಚಲಚ್ಚಿತ್ರ: ಅಲ್ಲಿ ಮನಸ್ಸೇ ಪರದೆ, ಮನಸ್ಸೇ ರೀಲು, ಮನಸ್ಸೇ ಪ್ರೊಜೆಕ್ಟರ್ ಕೂಡ. ನಾವು ಪಟ್ಟ ಏನೇನೋ ಆಸೆಗಳು ಅಲ್ಲಿ ಈಡೇರುವುದುಂಟು. ಹಾಗೆಂದು ಕನಸೆಲ್ಲಾ ಸುಖಮಯವೇ? ಅಲ್ಲೂ ಖೇದ-ಭಯ-ವಿಸ್ಮಯಾದಿಗಳು ಉಂಟೇ. ಆದರೆ ಅವಾವೂ ನಮ್ಮ ಹಿಡಿತದಲ್ಲಿಲ್ಲವೆಂಬ ವಿಚಾರ ಬೇರೆ; ಆದರೆ ಅಲ್ಲೂ ನಾವು ಸಕ್ರಿಯರೇ, ಅಕ್ರಿಯರಲ್ಲ.

ಗಾಢನಿದ್ರೆಯಲ್ಲಿ ನಿಷ್ಕ್ರಿಯರಾಗಿರುವೆವಲ್ಲವೆ? ಇಲ್ಲ! ಏಕೆ? ಅಲ್ಲೂ ಆಡುವುದುಂಟು! ಯಾವ ಆಟ? ಉಸಿರಾಟ, ರಕ್ತದ ಹರಿದಾಟ, ನಾಡಿಯ ಬಡಿದಾಟ. ಈ ಕ್ರಿಯೆಗಳೆಲ್ಲ ನಾವೇ ನಡೆಸುವುದಲ್ಲ; ತಾವೇ ನಡೆಯತಕ್ಕವು - ಸಾವಿನ ಸಮಯದವರೆಗೂ. ಗೀತೆ ಹೇಳುತ್ತದೆ :"ಒಂದು ಕ್ಷಣವೂ ಯಾರೊಬ್ಬರೂ ಕ್ರಿಯೆಗಳಲ್ಲಿ ತೊಡಗದೆ ಇರರು" ಎಂದು. ಈ ಮಾತಿನ ಔಚಿತ್ಯ ಈ ಹಿನ್ನೆಲೆಯಲ್ಲಿ ನಮಗೆ ಸ್ಫುಟವಾಗುತ್ತದೆ.

ಎಡೆಬಿಡದೆ ನಾವು ಕೆಲಸಮಾಡುತ್ತಿರುವೆವೆಂದರೆ ಇದಕ್ಕೆಲ್ಲಾ ಏನೋ ಕಾರಣವೋ ಉದ್ದೇಶವೋ ಇರಬೇಕಲ್ಲವೆ? ಯಾವುದೇ ಕ್ರಿಯೆಯನ್ನು ನಾವು ಆರಂಭಿಸುವೆವೆಂದರೆ "ಏತಕ್ಕಾಗಿ?" ಎಂದು ಕೇಳಿಕೊಳ್ಳಬಹುದಲ್ಲವೆ? ಏನೋ ಒಂದು ಫಲವನ್ನು ನಿರೀಕ್ಷಿಸಿಯೇ ಅಲ್ಲವೆ ನಾವು ತೊಡಗುವುದು? ಸುಭಾಷಿತಕಾರನೊಬ್ಬ ಹೇಳುತ್ತಾನೆ: ಪ್ರಯೋಜನವೊಂದರ ಉದ್ದೇಶವಿಲ್ಲದೆ ಒಬ್ಬ ಪೆದ್ದನೂ ಕೆಲಸದಲ್ಲಿ ತೊಡಗ - ಎಂಬುದಾಗಿ. (ಆದರಿದೋ ಹಿರಿಯರೊಬ್ಬರು ತಮ್ಮ ಬಗ್ಗೆಯೇ ತಮಾಷೆಯಾಗಿ ಲಘುವಾಗಿ ಹೇಳಿಕೊಂಡದ್ದು: ನಾನೊಂದು ನಾಯಿಯಂತೆ - ಮಾಡಲು ಕೆಲಸವಿಲ್ಲ, ನಿಲ್ಲಲು ಪುರುಸೊತ್ತಿಲ್ಲ!)

ಆದರೆ ದಾಸರನ್ನು ಕೇಳಿ. ಈ ಪ್ರಶ್ನೆಗೂ ಅವರ ಉತ್ತರ ಸಿದ್ಧ: "ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ" (ಕನಕದಾಸರು). ಪ್ರಶ್ನೆಗೆ ಉತ್ತರ ಬಂತೆಂದುಕೊಳ್ಳುವಷ್ಟರಲ್ಲಿಯೇ ಯಾರಿಗೋ ಮರುಪ್ರಶ್ನೆ ಬರುವುದೇ: ಅವೂ ಏತಕ್ಕೆ? ಹೊಟ್ಟೆಗೆ ಹಾಕಿಕೊಳ್ಳಬೇಕೇಕೆ? ಬಟ್ಟೆ ಬೇಕೇಕೆ? ಇದಿದೋ ಕಷ್ಟಕ್ಕಿಟ್ಟುಕೊಂಡಿತು: "ಹೊಟ್ಟೆಗಿಲ್ಲದಿದ್ದರೆ ಬದುಕಲಾದೀತೆ? ಸುಮ್ಮನೆ ಬದುಕಿದರಾಯಿತೇ? - ಮಾನಮುಚ್ಚಿಕೊಳ್ಳಲು ಬಟ್ಟೆ ಬೇಡವೇ?" ಎಲ್ಲದಕ್ಕೂ ಏಕೆಂದು ಕೇಳಲೇಬೇಕೇಕೆ? - ಎಂದು ಬುಡಕ್ಕೇ ಕೊಡಲಿಹಾಕಿದರೆ! ಹಾಗಾದರೆ ಮೂಲಭೂತಪ್ರಶ್ನೆಯನ್ನೇ ಹಾಕಿಕೊಳ್ಳಬೇಕು: ಏತಕ್ಕಾಗಿ ಬದುಕಿರಬೇಕು? ಸಾಯಬಾರದೇಕೆ?

ಈ ಪ್ರಶ್ನೆಗೆ ಉತ್ತರವನ್ನು ಆಯುರ್ವೇದಗ್ರಂಥವೊಂದು ಕೊಟ್ಟಿದೆ. ಅದು ಮನುಷ್ಯರ ನಡೆಯನ್ನು ಮಾತ್ರವಲ್ಲ, ಎಲ್ಲ ಪ್ರಾಣಿಗಳ ನಡೆಯನ್ನೂ ಗಮನಿಸಿ ಉತ್ತರವಿತ್ತಿದೆ. ಅದು ಹೇಳುತ್ತದೆ: "ಎಲ್ಲ ಭೂತಗಳ ಎಲ್ಲ ಪ್ರವೃತ್ತಿಗಳಿಗೂ ಗುರಿಯೊಂದೇ - ಅದುವೇ ಸುಖ". ಅಲ್ಲಿಗೆ, ಸುಖಕ್ಕಾಗಿಯೇ ಎಲ್ಲರೂ ಎಲ್ಲ ಕೆಲಸಗಳನ್ನು ಮಾಡುವುದು. ಅಲ್ಲಿಗೆ ಪ್ರಶ್ನಪರಂಪರೆ ಮುಗಿಯಿತು. ಯಾರೂ ಸುಖವೇತಕ್ಕೆ? - ಎಂದು ಮರುಪ್ರಶ್ನಿಸಲಾರರು.

"ಸುಖಕ್ಕಾಗಿ" ಯೇ? ಹಾಗಾದರೆ ಸುಖಗಳು ಯಾವಯಾವವು? ಎಂತೆಂತಹ ಸುಖಗಳು ಎಷ್ಟೆಷ್ಟು ಬೇಕು ಅಥವಾ ಬೇಡ, - ಎಂದೆಲ್ಲ ಪ್ರಶ್ನಪರಂಪರೆ. ಕಾಮನೆಗಳಿಲ್ಲದೆ ಯಾರೂ ಏನನ್ನೂ ಮಾಡರು; ಮಾಡುವುದೇನೇನುಂಟೋ ಅದೆಲ್ಲವೂ ಕಾಮದ ಚೇಷ್ಟಿತವೇ - ಎನ್ನುತ್ತದೆ ಮನುಸ್ಮೃತಿ. ನನಗಿಂತಹ ಸುಖ ಬೇಕೆಂಬ ಏನೋ ಒಂದು ಲೆಕ್ಕಾಚಾರವು (ವ್ಯಕ್ತವಾಗಿಯೋ ಅವ್ಯಕ್ತವಾಗಿಯೋ) ಹೆಜ್ಜೆಯಿಡುವ ಮುನ್ನ ಇದ್ದೇ ಇರುವುದು. ಲೆಕ್ಕಾಚಾರವು ಸರಿಯಿರಬಹುದು, ಇಲ್ಲದಿರಬಹುದು. ಇದನ್ನೇ ಮನುವು "ಕಾಮಗಳೆಲ್ಲವೂ ಸಂಕಲ್ಪಮೂಲವಾದವು" ಎನ್ನುವುದು.

ಎಲ್ಲ ಬಯಕೆಗಳೂ ಪೂರೈಕೆಯಾಗಬೇಕೇ, ಬೇಡವೇ?: ಯಾವುದು ಚಾಪಲಮಾತ್ರವೋ, ಮೊದಲು ಸುಖವಾಗಿ ತೋರಿ ಆಮೇಲೆ ಕ್ಲೇಶಕಾರಿಯೋ, ಅಂತಹ ಕಾಮಗಳು ವರ್ಜ್ಯ;  ಯಾವುವು ಸ್ವಹಿತ-ಪರಹಿತಗಳನ್ನು ಸಾಧಿಸುವುವೋ ಅಂತಹವು ಅವಶ್ಯ: ಇಲ್ಲವೋ ಸ್ವಘಾತ-ಪರಘಾತಗಳು ಸ್ವತಃಸಿದ್ಧ.

"ಧರ್ಮಕ್ಕೆ ವಿರುದ್ಧವಲ್ಲದ ಕಾಮವು ನಾನೆಂದು ತಿಳಿ" ಎಂದು ಕೃಷ್ಣನು ಗೀತೆಯಲ್ಲಿ ಶುದ್ಧಕಾಮದ ಸೇವ್ಯತೆಯನ್ನು ತಿಳಿಸಿದ್ದಾನೆ. ಹಾಗಲ್ಲವೋ, "ಕಾಮ-ಕ್ರೋಧಗಳು ವೈರಿಗಳು"; "ಕಾಮ-ಕ್ರೋಧ-ಲೋಭಗಳು ನರಕದ್ವಾರಗಳು" -ಎಂಬುವೂ ಅವನ ಮಾತೇ! ಪುರುಷಾರ್ಥಗಳ ಪಟ್ಟಿಯಲ್ಲಿಯೂ ಅರಿಷಡ್ವರ್ಗದ ಪಟ್ಟಿಯಲ್ಲಿಯೂ ಸ್ಥಾನ ಪಡೆದ ಈ ಕಾಮದ ಸ್ವರೂಪವು ಸುವೇದ್ಯವಲ್ಲ. ಅಚ್ಚರಿಯೆಂದರೆ, "ಸಮ್ಯಕ್-ಸಂಕಲ್ಪದಿಂದ ಜನಿಸಿದ ಕಾಮವು ಧರ್ಮಕ್ಕೇ ಪ್ರಮಾಣಭೂತವಾದುದು" (ಯಾಜ್ಞವಲ್ಕ್ಯ)!

ದ್ವಂದ್ವಾತ್ಮಕವಾದ ಕಾಮಸ್ವರೂಪವನ್ನು ಸರಳಸುಂದರವಾದ – ಹಳ್ಳಿಗರಿಗೂ ತಿಳಿಯುವ - ಉಪಮಾನವೊಂದರ ಮೂಲಕ ಶ್ರೀರಂಗಮಹಾಗುರುಗಳು ಬಿಡಿಸಿರುವರು: "ಅರ್ಥ-ಕಾಮಗಳು ತುಂಟಹಸುವಿನಂತೆ: ಹಾಲು ಕರೆಯಲು ಹೋದರೆ, ಕೊಂಬಿನಿಂದ ತಿವಿಯುವುವು, ಕಾಲಿನಿಂದ ಒದೆಯುವುವು. ಅಂತಹ ಹಸುಗಳನ್ನು ಹಿಂದೊಂದು ಮುಂದೊಂದು ಕಂಬಗಳಿಗೆ ಕಟ್ಟಿಹಾಕಿ ಹಾಲು ಕರೆಯಬೇಕು: ಧರ್ಮ-ಮೋಕ್ಷಗಳೆಂಬ ಎರಡು ಕಂಬಗಳಿಗೆ ಕಟ್ಟಿಹಾಕಿದಾಗ ಅಮೃತದ ಧಾರೆಯನ್ನೇ ಅವು ಕರೆಯಬಲ್ಲವು!"

ಹೀಗೆ ಧರ್ಮ-ಮೋಕ್ಷಗಳೆಂಬ ಎಲ್ಲೆಕಟ್ಟುಗಳ ನಡುವಿನಲ್ಲಿ ಅರ್ಥ-ಕಾಮಗಳು ಸೇವ್ಯವೇ.

ಸೂಚನೆ: 9/1/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.