ಲೇಖಕರು: ಮೋಹನ ರಾಘವನ್.
ವಸ್ತ್ರ-ಆಭರಣಗಳು ಹೊರ ವಾತಾವರಣದಿಂದ ನಮ್ಮನ್ನು ರಕ್ಷಿಸುತ್ತವೆ. ಸೌಂದರ್ಯವನ್ನು ಹೆಚ್ಚಿಸುತ್ತವೆ ಎಂಬುದು ಬಟ್ಟೆಯನ್ನುಟ್ಟು ಕನ್ನಡಿಯಲ್ಲಿ ನೋಡಿಕೊಳ್ಳುವ ಪ್ರತಿಯೊಬ್ಬರಿಗೂ ತಿಳಿದೇ ಇದೆ. ಜೊತೆಗೆ ವಸ್ತ್ರಗಳ ಬಣ್ಣ, ಅದರ ಪರಿಣಾಮಗಳನ್ನು ಗಮನಿಸಿದ್ದೇವೆ. ನಾವು ಕಣ್ಣು ಮುಚ್ಚಿದ್ದಾಗಲೂ ಧರಿಸಿರುವ ಬಟ್ಟೆಯ ಪರಿಣಾಮ ಸ್ಪರ್ಶದ ಮೂಲಕ ನಮಗೆ ಭಾಸವಾಗುತ್ತವೆ. ಬಟ್ಟೆ ತುಂಬಾ ಸೆಕೆ, ಭಾರ, ಬಿರುಸು, ಮೃದು, ಹಗುರ ಇತ್ಯಾದಿಯಾಗಿ ಹೇಳುವುದುಂಟು. ಮಾಡಿರುವ ಪದಾರ್ಥದ ಮೇಲೆ ಅದರ ಪರಿಣಾಮ ನಿಂತಿದೆ. ಹತ್ತಿ, ರೇಷ್ಮೆ, ಉಣ್ಣೆ, ನೈಲಾನ್, ಪಾಲಿಯೆಸ್ಟರ್, ಪ್ರಾಣಿ-ಚರ್ಮಗಳು ಮುಂತಾದವು ವಸ್ತ್ರವನ್ನು ತಯಾರಿಸಲು ಬಳಸುವ ಪದಾರ್ಥಗಳು.
ಪ್ರಸ್ತುತ, ಪದಾರ್ಥದ ಪರಿಣಾಮದ ಬಗ್ಗೆ ಮಾತ್ರ ಗಮನಿಸೊಣ. ಪದಾರ್ಥಗಳು ಶೈತ್ಯ ಅಥವಾ ಉಷ್ಣತೆಗಳನ್ನು ಉಂಟುಮಾಡುವುದು ನಮ್ಮ ಅನುಭವಕ್ಕೆ ಬರುತ್ತದೆ. ಹತ್ತಿ ಮೃದುವಾಗಿದ್ದು ಹಿತವನ್ನು ಕೊಡುತ್ತದೆ, ಉಣ್ಣೆ ಶೈತ್ಯದಿಂದ ರಕ್ಷಿಸುತ್ತದೆ. ಈ ಪರಿಣಾಮಗಳು ಸರ್ವವಿದಿತ. ಏಕೆಂದರೆ, ಶೈತ್ಯ, ಉಷ್ಣತೆ, ಮೃದುತ್ವ ಮುಂತಾದ ಸಂವೇದನೆಗಳ ಪರಿಚಯ ನಮಗುಂಟು. ಆದರೆ ಯೋಗ ಸಾಧನೆಯಲ್ಲಿ ಉಂಟಾಗುವ ಭಾವಗಳು, ಅದರ ಕುರುಹುಗಳ ಪರಿಚಯ ನಮಗಿಲ್ಲ. ಆದ್ದರಿಂದ ಈ ಪದಾರ್ಥಗಳು ಯೋಗಸಾಧಕನ ಮೇಲೆ ಉಂಟುಮಾಡುವ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳ ಪರಿವೆ ನಮಗಿಲ್ಲವಾಗಿದೆ.
ಆದರೆ, ಋಷಿಗಳು ಅದನ್ನು ತಿಳಿದವರಾಗಿದ್ದು ವಿಧಿ-ನಿಷೇಧ ರೂಪವಾದ ಪಟ್ಟಿಗಳನ್ನು ಕೊಟ್ಟಿದ್ದರು. ಇಂದು ಆಚರಣೆ ದೂರಸರಿದಿರುವುದರಿಂದ ಯಾವ ಪದಾರ್ಥವಾದರೇನು, ನೋಡಲು, ಉಡಲು ಚೆನ್ನಾಗಿದ್ದರೆ ಸಾಕೆಂದುಬಿಡುತ್ತವೆ. ಯೋಗಸಿದ್ಧರೂ ಯೋಗ-ವಿಜ್ಞಾನ ವೇದಿಗಳೂ ಆದ ಶ್ರೀರಂಗಮಹಾಗುರುಗಳು, ಶಾಸ್ತ್ರಕಾರರ ಮಾತನ್ನು ಬಹುಪಾಲು ಪುಷ್ಟೀಕರಿಸಿ ಅದರ ಅಂತರಾರ್ಥವನ್ನೂ ತಿಳಿಸಿದ್ದಾರೆ. ಆಧುನಿಕವಾದ ಪದಾರ್ಥಗಳನ್ನೂ ಪರಿಶೀಲಿಸಿ, ಅದರ ಬಗೆಗಿನ ನಿರ್ದಿಷ್ಟವಾದ ಫಲಿತಾಂಶಗಳನ್ನೂ ಕೊಟ್ಟಿದ್ದಾರೆ. ಅವರ ಯೋಗದೃಷ್ಟಿಯಿಂದ ಹರಿದುಬಂದ ವಿಚಾರಧಾರೆ ಹೀಗಿದೆ.
ಯೋಗಸಾಧಕರಿಗೆ ಚಿತ್ತದ ಏಕಾಗ್ರತೆ, ಒಳಮುಖತೆ ಅನಿವಾರ್ಯ. ಯಾವ ಪದಾರ್ಥಗಳು ಇದನ್ನು ಸಾಧಿಸಲು ಸಹಕಾರಿಯೊ ಅವು ಯೋಗ ಸಾಧನೆಗೆ ವಿಹಿತವೆಂದು ಕರೆಸಿಕೊಳ್ಳುತ್ತವೆ. ನಮಗೆ ಅಪ್ರಿಯವಾಗಿದ್ದರೂ ಹಿತವಾದದ್ದನ್ನು ಆರಿಸಿಕೊಳ್ಳುವುದು ಜಾಣತನ. ಸಕ್ಕರೆ ನಮಗೆ ಪ್ರಿಯವಾಗಿರಬಹುದು, ಆದರೆ ಕೆಲವರಿಗೆ ಆರೋಗ್ಯದ ದೃಷ್ಟಿಯಿಂದ ಅದು ಅಹಿತವಿದ್ದಾಗ ನಿಷಿದ್ಧ. ಕಹಿಯಾದ ಔಷಧಿ ಅಪ್ರಿಯವಾದರೂ ಪರಿಣಾಮದಲ್ಲಿ ಹಿತ. ಅಂತೆಯೇ ಹತ್ತಿ, ಉಣ್ಣೆ, ರೇಷ್ಮೆಯ ವಸ್ತ್ರಗಳು ಯೋಗಸಾಧಕರಿಗೆ, ಹಿತಕಾರಿ. ಒಗೆಯುವುದರಿಂದ ಹತ್ತಿಯಬಟ್ಟೆಗೆ ಶುದ್ಧೀಕರಣ. ಧರಿಸುವವರಲ್ಲದೆ ಇತರರ ಸ್ಪರ್ಷವಾದರೆ ಅದು ತನ್ನ ಯೋಗ್ಯತೆಯನ್ನು ಕಳೆದುಕೊಳ್ಳಬಹುದು. ಇತರರ ಸ್ಪರ್ಶದಿಂದ ಏನು ತೊಡಕು ? ನಾಲಿಗೆ ಸುಸ್ಥಿತಿಯಲ್ಲಿದ್ದವರಿಗೆ ಮಾತ್ರ ಸಿಹಿ-ಕಹಿಗಳ ವ್ಯತ್ಯಾಸ ವೇದ್ಯವಾಗುವುದು. ಅಂತೆಯೇ ಅಂತಃಕರಣ ಶುದ್ಧಿಯಿರುವರಿಗೆ, ಯೋಗ-ಸಾಧನೆಗೆ ಹಿತಾಹಿತಗಳು ಸ್ಪಷ್ಟವಾಗಿ ಕಾಣುತ್ತವೆ. ಆಗ ಸ್ಪರ್ಶ ದೋಷಗಳು ಅರಿವಿಗೆ ಬಂದೀತು. ರೇಷ್ಮೆ ಒಳ್ಳೆಯದಾದರೂ, ಸನ್ಯಾಸಿಯ ವೈರಾಗ್ಯಧರ್ಮಕ್ಕೆ ತೊಡಕನ್ನುಂಟು ಮಾಡುತ್ತದೆ. ಕೃಷ್ಣಾಜಿನ ಬ್ರಹ್ಮಚಾರಿಗೂ ಸನ್ಯಾಸಿಗೂ ಹಿತ. ಪಾಲಿಸ್ಟರ್, ನೈಲೋನ್ ಇವು ಯೋಗ ಸಾಧಕರಿಗೆ ಅಹಿತವನ್ನು ಉಂಟು ಮಾಡುತ್ತವೆ. ವ್ಯಾವಹಾರಿಕವಾಗಿ, ಪಾಲಿಸ್ಟರ್ ಬಟ್ಟೆಯಲ್ಲಿ ಐರನ್ ಚೆನ್ನಾಗಿ ನಿಲ್ಲುತ್ತೆ , ಆದರೆ ಕಾಟನ್ ಬಟ್ಟೆ ಸುಕ್ಕಾಗಿಬಿಡುತ್ತಲ್ಲ ! ಎಂದೊಬ್ಬರು ಹೇಳಿದಾಗ -"ಹೊರಗಿನ ಐರನ್ ಗೋಸ್ಕರ (ಕಬ್ಬಿಣ) ಒಳಗಿನ ಗೋಲ್ಡ್ ನ್ನೇ ಕಳೆದುಕೊಳ್ಳುತ್ತೀರಲ್ಲಪ್ಪಾ ! " ಎಂದು ಮಾರ್ಮಿಕವಾಗಿ ಆದರೆ ವಿಜ್ಞಾನಯುತವಾಗಿ ನುಡಿದ ಯೋಗೀವೆರೇಣ್ಯರಾದ ಶ್ರೀರಂಗಮಹಾಗುರುಗಳ ಉದ್ಗಾರವನ್ನು ಸ್ಮರಿಸಿಕೊಳ್ಳಬೇಕು.
ಸೂಚನೆ : 8/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.