Sunday, January 23, 2022

ಅಷ್ಟಾಕ್ಷರ ದರ್ಶನ -4 ಮನೋ ಮೋಕ್ಷೇ ನಿವೇಶಯೇತ್ (Astakshara Darshana -4 Mano Mokse Niveshayet)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಧರ್ಮ-ಅರ್ಥ-ಕಾಮಗಳನ್ನು ಕುರಿತಾಗಿ ಮನುವಿನ ಮೂರು ಉಕ್ತಿಗಳನ್ನು ನೋಡಿದೆವು. ಕೊನೆಯ ಪುರುಷಾರ್ಥವಾದ ಮೋಕ್ಷವನ್ನು ಕುರಿತಾಗಿಯೂ ಅಲ್ಲಿಯದೇ ಸೂಕ್ತಿ- ಎಂಟೇ ಅಕ್ಷರಗಳಲ್ಲೇ: "ಮನಸ್ಸನ್ನು ಮೋಕ್ಷದಲ್ಲಿ ನೆಲೆಗೊಳಿಸಬೇಕು"- ಮನೋ ಮೋಕ್ಷೇ ನಿವೇಶಯೇತ್ – ಎಂದು.

ನಾನಾಕಾರ್ಯಗಳಿಗಾಗಿ ಹಗಲೆಲ್ಲ ಹೊರಗೆಲ್ಲ ಸುತ್ತಾಡಿ, ಅದೆಲ್ಲ ಮುಗಿಯುತ್ತಿದ್ದಂತೆ ಕೊನೆಗೆ ಮನೆ ಸೇರಿಕೊಳ್ಳುತ್ತೇವೆ. ಹೊಟ್ಟೆಪಾಡಿಗಾಗಿಯೋ ಆಟಕ್ಕಾಗಿಯೋ ಆಗಸದಲ್ಲೆಲ್ಲಾ ಹೋರಾಡಿ ಹಾರಾಡಿ ಕೊನೆಗೆ ವಿಶ್ರಾಂತಿ ಪಡೆಯಲು ಪಕ್ಷಿಗಳು ಗೂಡು ಸೇರಿಕೊಳ್ಳುವುವಲ್ಲವೆ? ಕೂಡುವ ಜಾಗವೇ ಗೂಡು: ಕುಳಿತುಕೊಳ್ಳುವೆಡೆ. ಕುಳಿತುಕೊಳ್ಳುವುದು ಎಂದರೆ ಭ್ರಮಣವೆಲ್ಲ ಮುಗಿದು ನೆಮ್ಮದಿಯಾದೆಡೆಯನ್ನು ಸೇರಿಕೊಳ್ಳುವುದು. ಹೊರಗೆ ಕಾಣಿಸಿಕೊಳ್ಳುವುದನ್ನು ಬಿಟ್ಟು ಮರೆಯಾಗುವ/ಅಡಗಿಕೊಳ್ಳುವ ಸ್ಥಾನವೇ ನಿಲಯ ಅಥವಾ ಆಲಯ. ಲಯವೆಂದರೆ ಮರೆಯಾಗುವುದೇ. ಹೀಗೆ ಮೋಕ್ಷವೆಂದರೆ 'ಮನೆ ಸೇರಿಕೊಳ್ಳುವುದೇ'. "ಮೋಕ್ಷ"ಕ್ಕೆ ಬಿಡುಗಡೆಯೆಂದರ್ಥವಲ್ಲವೇ? ಪ್ರಾಪಂಚಿಕ ಜಂಜಾಟಗಳನ್ನೆಲ್ಲ ಕಳೆದುಕೊಂಡು ನಮ್ಮದೇ ನೆಮ್ಮದಿಯ ನೆಲೆಯನ್ನೇ ಸೇರಿಕೊಳ್ಳುವುದೇ ಮೋಕ್ಷ.

ಹುಟ್ಟಿ ಬಂದ ಮೇಲೆ, "ನನಗೇನೂ ಬೇಡ" ಎಂದು ಯಾರು ಇರಲಾದೀತು?  ಜೀವನ-ನಿರ್ವಾಹಕ್ಕಾಗಿ ಮಾಡಬೇಕಾದ ಹತ್ತುಹಲವು ಕೆಲಸಗಳಿದ್ದೇ ಇರುತ್ತವೆ: ತನಗಾಗಿ, ತನ್ನ ಕುಟುಂಬಕ್ಕಾಗಿ, ತನ್ನ ಸುತ್ತಲಿನ ಸಮಾಜಕ್ಕಾಗಿ, ದೇಶಕ್ಕಾಗಿ. ಕರ್ತವ್ಯವಿಮುಖತೆಯು ಬಿಡುಗಡೆಗೆ ಹಾದಿಯಲ್ಲ.

ಮನು ಮುಂತಾದ ಶಾಸ್ತ್ರಕಾರರು ಈ ಕರ್ತವ್ಯದೃಷ್ಟಿಯನ್ನು ವಾಚ್ಯವಾಗಿಯೋ ಸೂಚ್ಯವಾಗಿಯೋ ಹೆಜ್ಜೆಹೆಜ್ಜೆಗೂ ತಿಳಿಸಿರುವವರೇ. ಮಿತಿಮೀರಿದ ಸಾಲವನ್ನು ಮಾಡಿಬಿಟ್ಟು ಅದನ್ನು ತೀರಿಸಲಾಗದೆ ಮನೆ ಬಿಟ್ಟು ಓಡಿಹೋಗಿ "ಸಂನ್ಯಾಸ"ವನ್ನು ತೆಗೆದುಕೊಳ್ಳುವುದುಂಟೇ? ಸಂನ್ಯಾಸವೆಂಬುದು ಅತ್ಯಂತ ಜವಾಬ್ದಾರಿಯ ಕೆಲಸ: ಮಿಕ್ಕೆಲ್ಲ ಜವಾಬ್ದಾರಿಗಳನ್ನೂ ಕಳೆದುಕೊಂಡ ಮೇಲೆ ಮಾಡಬೇಕಾದದ್ದು! ಮೋಕ್ಷಕ್ಕಾಗಿನ ಆಶ್ರಮವೆಂದರೆ ಅದೆಂದೇ! ಅಲ್ಲಿ ಸಹ ಅದರದೇ ಜವಾಬ್ದಾರಿಗಳಿಲ್ಲದಿಲ್ಲ.

ಸಾಲಮಾಡಿಟ್ಟು ಓಡಿಹೋಗಲು ಯತ್ನಿಸಿದರೇ ಸಾಕು, ಸಾಲಕೊಟ್ಟವರು ತಡೆಗಟ್ಟಲು ಬರುತ್ತಾರೆ. ಸಾಲ ಮಾಡಿ ಜಾರಿಕೊಳ್ಳುವವನಿಗೆ ಜೈಲೆಂಬುದು ಕಟ್ಟಿಟ್ಟದ್ದೇ. ನಿರೃಣಿಯಾದವನೇ ನಿರಾಳವಾಗಿರುವುದು: ಎಲ್ಲಿಗೆಂದರಲ್ಲಿಗೆ ಆತ ಹೋಗಬಹುದು. ಋಣವು ಮುಗಿಯುವ ತನಕವೂ ಕಟ್ಟುಪಾಡೇ; ಮಹಾಪಾಡೇ. ಋಣಿಯು ಬದ್ಧ; ಋಣಮುಕ್ತನೇ ಮುಕ್ತ. ಸಂಸಾರದ ಬಂಧ-ಮೋಕ್ಷಗಳೆನ್ನುವಾಗಲೂ ಹೀಗೆಯೇ.

ಸಾಲ ತೀರಿಸದೆ ಓಡಿಹೋದವವನ್ನು ಹಿಡಿದು ಹಾಕುವುದು ಜೈಲಿಗೇ. ಕೆಲವರು "ಅತಿಜಾಣ"ರು: ಮತ್ತೆ ಅಲ್ಲಿಂದಲೂ ತಪ್ಪಿಸಿಕೊಂಡುಹೋಗಿಬಿಡುವ ಆಸೆಯ ಭೂಪರು! ಹಾಗೆ ಪ್ರಯತ್ನಿಸಿದರೆ ಸಹ ಅವರಿಗಿನ್ನೂ ಹೆಚ್ಚಿನ ಶಿಕ್ಷೆಯೆಂಬುದು ಕಟ್ಟಿಟ್ಟ ಬುತ್ತಿ! ಬಂಧದ ದೆಸೆಯಿಂದ ಬೇಗನೆ ಬಿಡಿಸಿಕೊಂಡುಬಿಡಬೇಕೆಂದು ದುರ್ಮಾರ್ಗದತ್ತ ಧಾವಿಸಿದರೆ, ಮತ್ತೂ ತೀವ್ರವೆನಿಸುವ ನಿರ್ಬಂಧಗಳ ಸಂಕೋಲೆಯು ಸಿದ್ಧವಾದದ್ದೇ.

ಆತ್ಮಹತ್ಯೆಯು ಮಹಾಪಾಪವೆಂಬುದನ್ನು ತಿಳಿಸಲು ಶ್ರೀರಂಗಮಹಾಗುರುಗಳು ಮೇಲಿನ ಉಪಮಾನವನ್ನು ಕೊಡುತ್ತಿದ್ದರು: ಭವಬಂಧನವನ್ನು ಅದು ಮತ್ತೂ ಉಗ್ರಗೊಳಿಸುವುದೇ ಸರಿ! ಉಂಟಾಗಿಬಿಟ್ಟಿರುವ ಗಂಟುಗಳನ್ನು ಸರಿಯಾದ ಅರಿವು, ಸೂಕ್ಷ್ಮದೃಷ್ಟಿ, ತಾಳ್ಮೆಗಳಿಂದ ಬಿಡಿಸಿಕೊಳ್ಳಬೇಕು. ಬದಲಾಗಿ, ಧೃತಿಗೆಟ್ಟು ಹೇಗೆಹೇಗೋ ಎಳೆದಾಡಿದಲ್ಲಿ ಗಂಟನ್ನು ಕಗ್ಗಂಟಾಗಿಸಿಕೊಳ್ಳುವಂತಾಗುತ್ತದೆ: ತಂತುವು ಇನ್ನೂ ತೊಂತೇ ಆದಂತಾದೀತು!

ಋಣವೆಂದರೆ ಹಣದ ಸಾಲವೆಂದಷ್ಟೇ ಅಲ್ಲ. ಬೇರೆ ಋಣಗಳೂ ಉಂಟು - ಕಣ್ಣಿಗೆ ಕಾಣದವೂ, ಎಂದೇ ಮುಖ್ಯತರವಾದವೂ ಅವಾಗಿವೆ: ಅವಿಂದಲೂ ಬಿಡುಗಡೆ ಬೇಕಾದದ್ದೇ. ಅವನ್ನು ತೀರಿಸಿಕೊಂಡರೆ, ಎಂದರೆ ಕಾಲಕಾಲಕ್ಕೆ ತೀರಿಸಿಕೊಳ್ಳುತ್ತಾ ಬಂದರೆ, ಮನಸ್ಸನ್ನು ಮೋಕ್ಷದತ್ತ ಹರಿಸುತ್ತಿರಲು ಸಾಧ್ಯವಾಗುವುದು.

ಯಾವುವು ಆ ಋಣಗಳು? ಮೂರು ಋಣಗಳೆಂದು ಪ್ರಧಾನವಾಗಿ ತಿಳಿಸಿದೆ: ದೇವಋಣ-ಪಿತೃಋಣ-ಋಷಿಋಣ - ಎಂಬುದಾಗಿ. ನಮಗೆ ಜೀವನದಲ್ಲಿ ದಕ್ಕುವ ಭಾಗ್ಯವೆಲ್ಲ ದೇವಕಾರುಣ್ಯದಿಂದ; ಶರೀರವು ದಕ್ಕಿರುವುದು ತಂದೆ-ತಾಯಿಗಳಿಂದ; ಹೆಗ್ಗುರಿಯರಿವು ದೊರೆಯುವುದು ಋಷಿಕೃಪೆಯಿಂದ: ಎಂದೇ, ಯಜ್ಞ ಅಥವಾ ದೇವಪೂಜೆಯಿಂದ ದೇವಋಣವನ್ನೂ, ಸತ್-ಸಂತಾನಪ್ರಾಪ್ತಿಯಿಂದ ಪಿತೃಋಣವನ್ನೂ, ಋಷಿಗಳು ಬೋಧಿಸಿರುವ ಜ್ಞಾನದ ಸಂಪಾದನೆಯಿಂದ ಋಷಿಋಣವನ್ನೂ ಹೋಗಲಾಡಿಸಿಕೊಳ್ಳುತ್ತಲೇ ಮೋಕ್ಷದತ್ತ ಮನಸ್ಸನ್ನು ಕೊಡಬೇಕಾದದ್ದೂ.

ಈ ಸಾಲಗಳನ್ನು ತೀರಿಸದೆಯೇ "ಮೋಕ್ಷ-ಮೋಕ್ಷ"ವೆಂದು ಜಪಿಸಿ ಜಾರಿಕೊಳ್ಳುವ ಬೇಜವಾಬ್ದಾರಿಯವನಿಗೆ ಅಧೋಗತಿಯು ಸಿದ್ಧವೆಂದು ಮನುವು ಎಚ್ಚರಿಸುತ್ತಾನೆ! ಧರ್ಮ-ಅರ್ಥ-ಕಾಮ-ಮೋಕ್ಷಗಳನ್ನು ಕ್ರಮಬದ್ಧವಾಗಿ ಸಾಧಿಸತಕ್ಕದ್ದಿದೆ. ಸಮಾಜದ ಋಣ, ದೇಶದ ಋಣಗಳನ್ನೂ ಮರೆಯುವಂತೆಯೇ ಇಲ್ಲ.

ಹೀಗೆ ಈ ಎಲ್ಲ ಅರ್ಥಗಳ ಋಣಗಳನ್ನೂ ಹಿಂದಿರುಗಿಸಬೇಕು; ಜೊತೆಜೊತೆಗೇ ಪಾಶಕಾರಕಭ್ರಮದಿಂದಾಗಿರುವ ಸಂಸಾರಭ್ರಮಣದಿಂದಲೂ ಮನಸ್ಸನ್ನು ಹಿಂದಿರುಗಿಸಿ - ಅರ್ಥಾತ್ ಮನಸ್ಸನ್ನು ಮೋಕ್ಷದತ್ತ ಕೊಟ್ಟುಕೊಂಡು - ಅಲ್ಲಿಯೇ ಅದನ್ನು ನೆಲೆಗಾಣಿಸಬೇಕು. ಮನುವು ಮೂಡಿಸಿರುವ ಮಾನನೀಯವಾದ ಮಹಾಮಾರ್ಗವಿದು.

ಪರಮಪುರುಷಾರ್ಥವೆಂಬ ಜೀವನದ ಚರಮಲಕ್ಷ್ಯದತ್ತ ಪ್ರತಿದಿನವೂ ಕೊಂಚಕೊಂಚವಾಗಿ ಸಾಗುತ್ತಾ; ಈ ದೇಹವನ್ನು ತಳೆಯುವುದಕ್ಕೆ ಮುಂಚಿತವಾಗಿಯೂ, ಆಮೇಲೂ, ಕೂಡಿ(ಟ್ಟು)ಕೊಂಡಿರುವ ಋಣಗಳನ್ನೆಲ್ಲ ಕಳೆಯುತ್ತಾ; ಬಿಡುಗಡೆಯತ್ತ ಸಾಗಬೇಕಾದ ಜವಾಬ್ದಾರಿಯುತವಾದ ಜೀವನಕ್ರಮವನ್ನು ಋಷಿಗಳು ಬೋಧಿಸಿದ್ದಾರಲ್ಲವೆ? ದೇಶದ ಶ್ರೇಯಸ್ಸಿನೊಂದಿಗೆ ಸ್ವಶ್ರೇಯಸ್ಸನ್ನೂ, ಅವುಗಳೊಂದಿಗೆ ನಿಶ್ಶ್ರೇಯಸವನ್ನೂ (ಎಂದರೆ ಮೋಕ್ಷವನ್ನೂ), ಪ್ರತಿದಿನವೂ ಸ್ವಲ್ಪಸ್ವಲ್ಪವಾಗಿ ಸಾಧಿಸಿಕೊಳ್ಳುವುದೇ ನಮ್ಮೆಲ್ಲರ ನಿತ್ಯಕೃತ್ಯವಾಗಬೇಕಲ್ಲವೇ? ಕರ್ತವ್ಯಗಳ ಅರಿವು-ಆಚರಣೆಗಳನ್ನು ಉಪೇಕ್ಷಿಸಿದರೆ ಇಹವೂ ಇಲ್ಲ, ಪರವೂ ಇಲ್ಲವಾದಾವು!

ಸೂಚನೆ: 23/1/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.