Sunday, January 16, 2022

ಶ್ರೀರಾಮನ ಗುಣಗಳು - 40 ಸ್ಥಿರಪ್ರಜ್ಞ- ಶ್ರೀರಾಮ (Sriramana Gunagalu -40 Sthiraprajna shriRama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಶ್ರೀರಾಮನ ಸ್ಥಿರಪ್ರಜ್ಞತೆ ಅಸಾಧಾರಣವಾಗಿತ್ತು. ಎಂತಹ ಪರಿಸ್ಥಿತಿಯಲ್ಲೂ ತಾನು ನಿರ್ಧರಿಸಿದ ವಿಷಯದಿಂದ ಸ್ವಲ್ಪವೂ ಕದಲುತ್ತಿರಲಿಲ್ಲ. ಇದು ಸಾಧ್ಯವಾಗುವುದು ಬಹಳ ಕಷ್ಟವೇ ಸರಿ. ಸಾಮಾನ್ಯರು ಕೆಲವೊಮ್ಮೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದರಲ್ಲಿ ಎಡವುತ್ತಾರೆ. ಅಥವಾ ತೆಗೆದುಕೊಂಡ ನಿರ್ಧಾರವನ್ನು ಬದಲಿಸುತ್ತಾರೆ. ಆದರೆ ಶ್ರೀರಾಮನದ್ದು ಹಾಗಲ್ಲ. ನಿರ್ಧಾರವನ್ನು ತೆಗೆದುಕೊಂಡಿದ್ದರಲ್ಲಿ ಎಡವಲಿಲ್ಲ. ತೆಗೆದುಕೊಂಡ ನಿರ್ಧಾರವನ್ನು ಬದಲಿಸಲೂ ಇಲ್ಲ. ಒಂದು ಅಚಲವಾದ ನಿರ್ಣಯವನ್ನು ತೆಗೆದುಕೊಳ್ಳಲು ಅಂತಹ ಸ್ಥಿರವಾದ ಮಾನಸಿಕವಾದ ಸ್ಥಿತಿ ಬೇಕು. ರಾಮನ ಇಂತಹ ಮನಃಸ್ಥಿತಿಗೆ  ಕಾರಣ ಸಾತ್ತ್ವಿಕಗುಣ. ಯಾರಲ್ಲಿ ರಜಸ್ಸು ಮತ್ತು ತಮಸ್ಸು ಪ್ರಬಲವಾಗಿ ಕೆಲಸ ಮಾಡುತ್ತದೆಯೋ ಅವನು ತೆಗೆದುಕೊಳ್ಳುವ ನಿರ್ಧಾರವೂ ಅಸ್ಥಿರವೇ ಆಗಿರುತ್ತದೆ. ಅದೇ ಸಾತ್ತ್ವಿಕಗುಣವು ಯಾರಲ್ಲಿ ಬಲಿಷ್ಠವಾಗಿದೆಯೋ ಅವನ ತೀರ್ಮಾನವು ಸ್ಥಿರವೇ ಆಗಿರುತ್ತದೆ. ಸುಖ-ದುಃಖಗಳಲ್ಲಿ ಲಾಭ-ನಷ್ಟಗಳಲ್ಲಿ, ಜಯ-ಪರಾಜಯಗಳಲ್ಲಿ ಯಾವುದೇ ಬಗೆಯ ಮಾನಸಿಕ ವಿಕಾರವು ಉಂಟಾಗುವುದಿಲ್ಲ. ಎಲ್ಲಾ ದ್ವಂದ್ವಗಳನ್ನೂ ಸಮರ್ಪಕವಾಗಿ ನಿಭಾಯಿಸಿದ. ಇವೆಲ್ಲವೂ ಸ್ಥಿರಪ್ರಜ್ಞ ಅಥವಾ ಸ್ಥಿತಪ್ರಜ್ಞತೆಯ ಲಕ್ಷಣವೇ ಆಗಿದೆ. ಇದಕ್ಕೆ ಶ್ರೀರಾಮನ ಚರಿತ್ರೆಯಲ್ಲಿ ಅನೇಕ ಸಂದರ್ಭಗಳನ್ನು ನೋಡಬಹುದು.


ಮೊದಲನೆಯದಾಗಿ, ತಾನು ಯಾರು? ತಾನು ಈ ಭೂಮಿಗೆ ಬಂದ ಉದ್ದೇಶವೇನೆಂಬುದನ್ನು ಸ್ಪಷ್ಟವಾಗಿ ಅರಿತಿದ್ದ ಮತ್ತು ಅಂತೆಯೇ ಎಲ್ಲಾ ಕಡೆ ನಡೆದುಕೊಂಡ. ತಾನೊಬ್ಬ ದೇವತಾಂಶ ಸಂಭೂತ ಎಂಬುದನ್ನು ತೋರ್ಪಡಿಸಲು ಯಾವುದೇ ಬಗೆಯ ಪವಾಡಸದೃಶವಾದ ಕಾರ್ಯವನ್ನು ಪ್ರದರ್ಶಿಸಿಸಲಿಲ್ಲ. ರಾಮನು ತನ್ನ ಸಹೋದರರ ಜೊತೆ ತನ್ನ ಜೀವಿತಕಾಲದಲ್ಲಿ ಎಲ್ಲೂ ವಿರಸವನ್ನು ಮಾಡಿದ್ದಿಲ್ಲ. ತಂದೆಯ ಆಜ್ಞೆಯನ್ನು ಸ್ವೀಕರಿಸಿ ಅರಮನೆಗೂ ಸೈ, ಅರಣ್ಯಕ್ಕೂ ಸೈ ಎನಿಸಿಕೊಂಡ. ವನವಾಸಕ್ಕೆ ತೆರಳಲು ತಾಯಿಯಾದ ಕೈಕೇಯಿಯೇ ಕಾರಣವೆಂದು ತಿಳಿದೂ ಕೂಡ ಅವಳಲ್ಲಿದ್ದ ಮಾತೃತ್ವವನ್ನು ಅಲ್ಲಗಳೆದಿಲ್ಲ. 'ಅಯೋಧ್ಯೆಯನ್ನು ಬಿಟ್ಟು ಕಾನನಕ್ಕೆ ತೆರಳುವುದನ್ನು ನಮ್ಮಿಂದ ಸಹಿಸಲು ಸಾಧ್ಯವಿಲ್ಲ, ನಮ್ಮನ್ನೆಲ್ಲ ಬಿಟ್ಟು ಹೋದರೆ ನಾವೂ ನೀನಿದ್ದಲ್ಲಿಗೇ ಬರುತ್ತೇವೆ; ಯಾಕೆಂದರೆ ಎಲ್ಲಿ ರಾಮನಿರುವನೋ ಅದೇ ಅಯೋಧ್ಯೆ,' ಹೀಗೆ ಪರಿಪರಿಯಾಗಿ ಋಷಿಜನರು, ಅಯೋಧ್ಯಾಪುರಜನರು ಎಷ್ಟೇ ಕೇಳಿಕೊಂಡರೂ ತಾನು ತೆಗೆದುಕೊಂಡ ವನವಾಸದ ನಿರ್ಣಯದಿಂದ ವಿಮುಖನಾಗಲಿಲ್ಲ. ಶ್ರೀರಾಮನ ಸ್ಥಿರಪ್ರಜ್ಞತೆಗೆ ಉತ್ತಮವಾದ ಉದಾಹರಣೆ ಸೀತಾಪರಿತ್ಯಾಗ. ಸೀತಾಮಾತೆಯ ಚಾರಿತ್ರ್ಯದ ಬಗ್ಗೆ ಶ್ರೀರಾಮನಿಗೆ ಲವಲೇಶವೂ ಸಂದೇಹವಿಲ್ಲ. ಆದರೆ ರಾಜನಾದವನಿಗೆ ಪ್ರಜಾರಂಜನೆಗಿಂತ ಇನ್ನೊಂದು ಮುಖ್ಯವಾದ ವಿಷಯವಿಲ್ಲ. ಸೀತಾಮಾತೆಯ ಚಾರಿತ್ರ್ಯದ ಬಗ್ಗೆ ಶ್ರೀರಾಮನ ನಿಲುವು ನಿಶ್ಚಯವಾದದ್ದು. ಆದ್ದರಿಂದ ಅಯೋಧ್ಯೆಯ ಕೆಲವು ಪ್ರಜೆಗಳು ಸೀತೆಯ ಚಾರಿತ್ರ್ಯದ ಬಗ್ಗೆ ಹೀಗೊಂದು ಮಾತನ್ನು ಹೇಳುತ್ತಿದ್ದಾರೆ ಎಂದರೆ ರಾಜನಾದವನಿಗೆ ಅದು ಶೋಭೆಯಲ್ಲ. 'ರಂಜನಾಯ ಲೋಕಸ್ಯ ಮುಂಚತೋ ನಾಸ್ತಿ ಮೇ ವ್ಯಥಾ " ಎಂಬಂತೆ ಸೀತೆಯ ಚಾರಿತ್ರ್ಯವನ್ನು ಪ್ರಜೆಗಳು ಒಪ್ಪಬೇಕೇ ಹೊರತು, ಒಪ್ಪಿಸುವುದಲ್ಲ. ಹಾಗಾಗಿ ಪತ್ನಿಯಾದ ಸೀತೆಯನ್ನು ವಾಲ್ಮೀಕಿ ಆಶ್ರಮದ ಬಳಿ ಬಿಟ್ಟುಬಂದ. ಇದು ಶ್ರೀರಾಮನ ಮಾನಸಿಕ ಸ್ಥಿರತ್ವಕ್ಕೆ ಸಾಕ್ಷಿಯಾಗಿದೆ. ಸ್ಥಿರಪ್ರಜ್ಞನಾದವನು ಯಾವುದೇ ಬಗೆಯ ನಿರ್ಣಯವನ್ನು ತೆಗೆದುಕೊಂಡರೂ ಅದು ಲೋಕಕ್ಕೆ ಹಿತವೇ ಆಗಿರುತ್ತದೆ. ಇದು ರಾಮನದ್ದೇ ಆದರ್ಶಗುಣ.

ಸೂಚನೆ : 16/1/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.