ಭಾರತೀಯ ವಸ್ತ್ರ-ವಿನ್ಯಾಸದ ಮುಖ್ಯಾಂಶಗಳು
ವಸ್ತ್ರಗಳನ್ನು ಚಿತ್ರ -ವಿಚಿತ್ರವಾದ ಆಕಾರಗಳಲ್ಲಿ ತಯಾರಿಸಬಹುದು. ವಿಶ್ವದ ಪ್ರತಿಯೊಂದು, ದೇಶ-ನಾಗರೀಕತೆಯಲ್ಲಿ ಅದರದರದೇ ಆದ ವಸ್ತ್ರದ ಶೈಲಿಯುಂಟು. ಶರ್ಟ್, ಪ್ಯಾಂಟ್, ಕೋಟ್, ಪಂಚೆ, ಉತ್ತರೀಯ, ಸೀರೆ, ಸಲ್ವಾರ್, ಗೌನ್ ಮುಂತಾದ ಪ್ರಕಾರಗಳು ನಮಗೆಲ್ಲಾ ಚಿರಪರಿಚಿತ. ಒಂದೇ ದೇಶದಲ್ಲಾದರೂ ಫ್ಯಾಷನ್ ಬದಲಾದಂತೆ, ಉಡುವ ಶೈಲಿಗಳು ಮಾರ್ಪಾಡಾಗುವುದು ಸಹಜ. ಇತಿಹಾಸ ಹಾಗೂ ಪುರಾತತ್ತ್ವ ಸಂಶೋಧಕರು, ಭಾರತದಲ್ಲಿ ಸಿಂಧು ಕಣಿವೆಯ ನಾಗರೀಕತೆಯಿಂದ ಹಿಡಿದು ಕೆಲವು ಶತಮಾನಗಳ ಹಿಂದಿನವರೆಗಿನ ಕಾಲದಲ್ಲಿ ವಸ್ತ್ರಾಭರಣಗಳ ಅವಲೋಕನವನ್ನು ಮಾಡಿದ್ದಾರೆ. ಅಂತೆಯೇ ಈಜಿಪ್ಟ್, ಗ್ರೀಸ್, ಅರಬಿ ನಾಗರೀಕತೆಗಳಲ್ಲಿನ ವಸ್ತ್ರವಿನ್ಯಾಸದ ಜೊತೆ ಇರುವ ಸಾಮ್ಯ-ವ್ಯತ್ಯಾಸಗಳನ್ನೂ ಗಮನಿಸಿದ್ದಾರೆ. ಈ ಅಧ್ಯಯನಗಳಿಂದ ಹೊರಬಿದ್ದ ಕೆಲವು ಅಂಶಗಳನ್ನು ಗಮನಿಸಬಹುದು.
ಭಾರತೀಯ ವಸ್ತ್ರವಿನ್ಯಾಸದ ಮುಖ್ಯ ಅಂಶಗಳು
ಭಾರತಾದ್ಯಂತ ನಾನಾ ಪ್ರಾಂತ್ಯಗಳಲ್ಲಿ ಪ್ರಚಲಿತವಾಗಿ ಬಂದಿರುವ ವಸ್ತ್ರ ವಿನ್ಯಾಸಗಳನ್ನು ಆಯಾ ಪ್ರಾಂತ್ಯಗಳ - ಆಯಾ ಕಾಲದ ಶಿಲ್ಪ, ನಾಣ್ಯ, ಚಿತ್ರ ಮುಂತಾದ ಕಲಾಕೃತಿಗಳಲ್ಲಿ ಕಾಣಬಹುದಾಗಿದೆ. ಕಳೆದ ಅನೇಕ ಸಹಸ್ರಮಾನಗಳಿಂದ ಭಾರತಾದ್ಯಂತ ವಸ್ತ್ರಾಭರಣಗಳ ವಿನ್ಯಾಸದಲ್ಲಿ ಅನೇಕ ಬದಲಾವಣೆಗಲಾದರೂ ಕೆಲವು ಅಂಶಗಳು ಬದಲಾಗದೆ ಉಳಿದಿವೆ. ಕೆಳವಸ್ತ್ರ(ಅಂತರೀಯ) ಮತ್ತು ಮೇಲ್ವಸ್ತ್ರ(ಉತ್ತರೀಯ) ಎಂಬ ಇಬ್ಬಗೆಯ ವಸ್ತ್ರಗಳು ಪ್ರಾಚೀನಕಾಲದಿಂದಲೂ ನಮ್ಮ ದೇಶದಲ್ಲಿ ಕಂಡುಬಂದಿದೆ. ಇಂದು ನಾವು ಅವುಗಳನ್ನು ಪಂಚೆ-ಶಲ್ಯ ಎಂಬ ಹೆಸರಿಂದ ತಿಳಿಯುತ್ತೇವೆ. ವಾಸ್ತವಿಕವಾಗಿ ಈ ಇಬ್ಬಗೆಯ ವಸ್ತ್ರಯೋಜನೆ ಸ್ತ್ರೀ-ಪುರುಷರಲ್ಲಿ ಸಮಾನವಾಗಿ ಕಂಡುಬರುತ್ತದೆ. ಯಾವುದೋ ಒಂದು ಕಾಲಘಟ್ಟದಲ್ಲಿ ಸ್ತ್ರೀಯರ ಪೋಷಾಕಿನಲ್ಲಿ ಇವೆರಡು ಸೇರಿಕೊಂಡು ಸೀರೆಯಾಯಿತು. ವಸ್ತ್ರಾಭರಣಗಳನ್ನು ಉಡುವ ರೀತಿಯಲ್ಲಿ, ಕೆಲವು ವಿನ್ಯಾಸಗಳು ಅಚ್ಚಳಿಯದೆ ಉಳಿದಿದ್ದು ಭಾರತೀಯ ವಸ್ತ್ರವಿನ್ಯಾಸಕ್ಕೆ ಅಡಿಪಾಯದಂತೆ ಕಂಡುಬರುತ್ತವೆ.
ಮೊದಲ ಪ್ರಮುಖ ವಿನ್ಯಾಸವೆಂದರೆ ಸೊಂಟಕ್ಕೆ ಬಿಗಿಯಾಗಿ ಕಟ್ಟಿರುವುದು. ಇದು ಅನೇಕ ರೀತಿಯಲ್ಲಾಗಬಹುದು. ನಡುವಿಗೆ ಬಿಗಿದಿರುವ ಪಂಚೆ, ಸೀರೆಗಳ ರೂಪದಲ್ಲಿ ಆಗಬಹುದು, ಅಥವಾ ಡಾಬು, ಮೇಖಲೆ ಮುಂತಾದ ಆಭರಣಗಳ ರೂಪವನ್ನು ತಾಳಬಹುದು. ಎರಡನೆಯ ವಿಶಿಷ್ಟಾಂಶವೆಂದರೆ ಎಡ ತೋಳಿನಿಂದ ಸೊಂಟದ ಬಲಭಾಗಕ್ಕೆ ಇಳಿಯುವ ವಿನ್ಯಾಸ. ಈ ವಿನ್ಯಾಸವು ನಮಗೆ ಅನೇಕ ರೂಪಗಳಲ್ಲಿ ಕಂಡು ಬರುತ್ತದೆ. ಉತ್ತರೀಯದ ರೂಪದಲ್ಲೋ, ಜನ್ನದಾರದ ರೂಪದಲ್ಲೋ, ಸೀರೆಯ ಮೇಲ್ಭಾಗದ ಸೆರಗಿನ ರೂಪದಲ್ಲೋ ಕಂಡುಬರುತ್ತದೆ. (ಕೆಲವು ಪ್ರಾಂತ್ಯಗಳಲ್ಲಿ ವಿಪರೀತವಾಗಿ ಸೀರೆಯನ್ನು ಬಲತೋಳಿನಿಂದ ಎಡ-ಸೊಂಟಕ್ಕೆ ಉಡುವುದುಂಟು). ಮೂರನೆಯದು ನೆತ್ತಿಯ ಸುತ್ತಲೂ ಬಿಗಿದಿರುವುದು, ಉದಾಹರಣೆಗೆ ಪೇಟಾ, ಕೆರೀಟ, ಬಾಸಿಂಗ. ಭಾರತೀಯ ವಸ್ತ್ರವಿನ್ಯಾಸದ ಇತರ ಮುಖ್ಯಾಂಶಗಳಲ್ಲಿ ತರಹಾವರಿ ಬಳೆ-ಉಂಗುರ-ಸರಗಳ ಪ್ರಯೋಗ ಭಾರತೀಯರ ವಸ್ತ್ರಾಲಂಕಾರದ ಒಂದು ವೈಶಿಷ್ಟ್ಯ. ಹೆಸರುಗಳು ಬೇರೆಬೇರೆಯಾದರೂ, ಇವೆಲ್ಲವೂ ಶರೀರದ ನಾನಾಂಗಗಳನ್ನು ಮೃದುವಾಗಿ ಬಂಧಿಸುವ ಅಥವಾ ಸುತ್ತುವರೆವ ಆಭರಣಗಳು. ಬಳೆಗಳನ್ನು ತೋಳುಗಳಲ್ಲಿ, ಕೈಗಳಲ್ಲಿ, ಮಣಿಕಟ್ಟಿನಲ್ಲಿ, ಹಾಗೂ ಗೆಜ್ಜೆಯನ್ನು ಕಾಲಿನಲ್ಲಿ ಧರಿಸುವುದುಂಟು. ಅಂತೆಯೇ ಉಂಗುರ ಬಲೆಯಂತೆಯೇ ಇದ್ದು ಮೂಗು, ಬೆರಳುಗಳಲ್ಲಿ ಧರಿಸುವ ಸಣ್ಣ ಗಾತ್ರದ ಆಭರಣ. ಮಾಲೆಗಳು, ಹಾರಗಳು, ಸರಗಳೆಂಬೀ ಆಭರಣಗಳು ಕಂಠ-ಹೃದಯ-ಸ್ತನಗಳನ್ನು ಅಲಂಕರಿಸುವುದನ್ನು ನಾವು ಶಿಲ್ಪಗಳಲ್ಲಿ ಪುಷ್ಕಳವಾಗಿ ಕಾಣುತ್ತೇವೆ. ಕೇಶಾಲಂಕಾರ ಮತ್ತು ಲಲಾಟದ ಪುಂಡ್ರಗಳೂ ವಸ್ತ್ರದ ಅವಿಭಾಜ್ಯ ಅಂಗವಾಗಿವೆ.
ಮೇಲ್ಕಂಡ ಭಾರತೀಯ ವಸ್ತ್ರಾಭರಣ ವಿನ್ಯಾಸಗಳಾವುವೂ ಆಕಸ್ಮಿಕವಲ್ಲ. ಅವು ಋಷಿಗಳು ಯೋಗಸಾಧಕವಾಗಿ ಇವುಗಳನ್ನು ಕಂಡು ಯತ್ನಪೂರ್ವಕವಾಗಿ ಕಲ್ಪಿಸಿ, ಉಳಿಸಿಕೊಂಡು ಬಂದ ಉಪಾಯಗಳು. ಇವು ಯೋಗಸಾಧನಗಳು ಎಂಬುದು ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳ ಯಥಾರ್ಥ ಅನುಭವ. ಅದು ಹೇಗೆಂದು ಮುಂದೆ ನೋಡೋಣ.
(ಮುಂದುವರಿಯುವುದು)
ಸೂಚನೆ : 15/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.