Saturday, January 8, 2022

ನವವಿಧ ಭಕ್ತಿ - 10 ದಾಸ್ಯಭಕ್ತಿ - 1 ಯಾರು ದಾಸರು? (Dasya Bhakti - 1 - Yaaru Daasaru?)


ಲೇಖಕರು: 
ಡಾ ಸಿ.ಆರ್. ರಾಮಸ್ವಾಮಿ

(ಪ್ರತಿಕ್ರಿಯಿಸಿರಿ lekhana@ayvm.in)


 


'ದಾಸ' ಪದಕ್ಕೆ ಪರ್ಯಾಯವಾಗಿ ಗುಲಾಮ, ಸೇವಕ, ಆಳು, ಜವಾನ ಎಂಬ ಪದಗಳನ್ನು ಬಳಸುತ್ತೇವೆ. ದಾಸಭಾವವೇ ದಾಸ್ಯ. ಜನಸೇವೆ, ಈಶಸೇವೆ, ಹಾಗೂ 'ಜನಸೇವೆಯೇ  ಜನಾರ್ದನ ಸೇವೆ' ಎಂಬ ಮಾತುಗಳನ್ನು ಕೇಳುತ್ತೇವೆ. ರಾಜಕಾರಣಿಗಳೂ ತಮ್ಮನ್ನು ಜನಸೇವಕರೆಂದು ಭಾವಿಸುವುದರಲ್ಲಿ ಹೆಮ್ಮೆ ಪಡುತ್ತಾರೆ. ಆದರೆ ಈಗ ಸೇವೆ-ಸೇವಕ ಎನ್ನುವ ಪದಗಳನ್ನು ಸ್ವಲ್ಪ ವ್ಯತ್ಯಾಸವಾದ ಅರ್ಥದಲ್ಲಿ ಬಳಸುತ್ತಿದ್ದೇವೆ ಎಂಬುದನ್ನು ಗಮನಿಸಬೇಕಾಗಿದೆ. 


ಜನಸೇವೆ ಎಂದರೆ ಸಾಮಾನ್ಯವಾಗಿ ದೀನ-ದಲಿತರಿಗೆ ಸಹಾಯ; ರೋಗಿಗಳಿಗೆ ಔಷಧಿಗಳನ್ನೂ, ಹಣ್ಣು-ಹಂಪಲುಗಳನ್ನೂ ಕೊಡುವುದು ಇತ್ಯಾದಿಗಳೇ ಪ್ರಧಾನ  ಕಾರ್ಯಕ್ರಮಗಳಾಗಿರುವುದನ್ನು ಕಾಣುತ್ತೇವೆ. ಇಲ್ಲಿ ಸೇವೆಯೆನ್ನುವುದು ಪರೋಪಕಾರ ಅಥವಾ ಸಹಾಯ ಎನ್ನುವ  ಅರ್ಥದಲ್ಲಿ ಬಳಕೆಯಾಗುತ್ತಿದೆ. ಸೇವೆಯೆನ್ನುವುದು ಇಷ್ಟರಲ್ಲೇ ನಿಂತರೆ ಭಕ್ತಿಗೂ, ಸೇವೆಗೂ ಏನು ಸಂಬಂಧ? ಇಂತಹ ಸೇವೆಗೂ, ದಾಸ್ಯಭಾವಕ್ಕೂ ಇರುವ ವ್ಯತ್ಯಾಸವೇನು? 


ಸೇವೆ - ಸಹಾಯ 

ನೀರು ಮೇಲಿಂದ ಕೆಳಗೆ ಹರಿಯುವುದು ಸಹಜ. ಗಾಳಿಯು ಹೆಚ್ಚು-ಒತ್ತಡ ಪ್ರದೇಶದಿಂದ ಕಡಿಮೆ-ಒತ್ತಡ ಪ್ರದೇಶಕ್ಕೆ ಬೀಸುತ್ತದೆ. ಅಂತೆಯೇ ಧನವು ಶ್ರೀಮಂತರಿಂದ ದರಿದ್ರರಿಗೆ ಹರಿಯಬೇಕು.  ವಿದ್ಯಾವಂತನಾದ ಗುರುವಿನಿಂದ ವಿದ್ಯಾರ್ಥಿಯ ಕಡೆಗೆ ವಿದ್ಯೆಯು ಹರಿಯುತ್ತದೆ. ಹೀಗೆ ಎಲ್ಲವೂ ಅಧಿಕವಿರುವ ಕಡೆಯಿಂದ ಇಲ್ಲದಿರುವವರಿಗೆ ಹರಿಯುವುದೇ ನಿಯಮ. ಇದು  'ಸಹಾಯ'ವಾಗುತ್ತದೆ. 


ವಿದ್ಯೆಯನ್ನು ಬಯಸುವ ವಿದ್ಯಾರ್ಥಿಯು ಗುರುವಿಗೆ ಶುಶ್ರೂಷೆಯನ್ನು ಮಾಡಿ ವಿದ್ಯೆಯನ್ನು ಪಡೆಯುತ್ತಾನೆ. ಧನಿಕನನ್ನು ಒಲಿಸಿ ಬಡವನು ಐಶ್ವರ್ಯವನ್ನು ಪಡೆಯುತ್ತಾನೆ. ಹೀಗೆ ಇಲ್ಲದವನು, ಇರುವವನಿಗೆ ಶ್ರದ್ಧೆಯಿಂದ ಮಾಡುವ ಕ್ರಿಯೆಯೇ ನಿಜವಾದ ಅರ್ಥದಲ್ಲಿ ಸೇವೆಯಾಗುತ್ತದೆ. ಹಾಗಲ್ಲದೆ, ಇರುವವನು ಇಲ್ಲದವನಿಗೆ ಮಾಡುವುದು ಪರೋಪಕಾರ, ಸಹಾಯ ಎಂದಾಗುವುದೇ ಹೊರತು ಸೇವೆಯಲ್ಲ. 


ಭಗವಂತನಲ್ಲಿ ಜ್ಞಾನ-ಬಲ-ಐಶ್ವರ್ಯ-ವೀರ್ಯ-ಶಕ್ತಿ-ತೇಜಸ್ಸು ಎಲ್ಲವೂ  ಪೂರ್ಣಪ್ರಮಾಣದಲ್ಲಿ ತುಂಬಿವೆ. ನಮಗೆ ಇವೆಲ್ಲದರ ಬೇಡಿಕೆಯಿದ್ದಲ್ಲಿ, ಪರಮಪುರುಷನ ಸೇವೆಮಾಡಿದರೆ, ನಮ್ಮ ಯೋಗ್ಯತೆಗೆ ತಕ್ಕಂತೆ ಅವನಿಂದ ಅವು ಅನುಗ್ರಹರೂಪವಾಗಿ ಹರಿದು ಬರುವುವು. ವಾಸ್ತವವಾಗಿ ಭಗವಂತನಿಗೆ ಮಾಡುವ ಸೇವೆಯೇ ನಿಜವಾದ ಸೇವೆ. ಶ್ರೀರಂಗಮಹಾಗುರುಗಳ ಉಕ್ತಿಯು ಇಲ್ಲಿ ಸ್ಮರಣೀಯ: "ಭಗವಂತನ ಪರವಾಗಿ, ಅವನಿಗೆ ವಿರೋಧವಿಲ್ಲದ, ಅವನನ್ನು ಹೊಂದಿಸುವ ಕಾರ್ಯವ್ಯಾಪಾರಗಳೆಲ್ಲವೂ ಸೇವೆಯೇ". 


ಅದೇ ರೀತಿಯಲ್ಲಿ ಮಾತಾಪಿತೃಗಳ, ಗುರುಹಿರಿಯರ, ಜ್ಞಾನವೃದ್ಧರ ಸೇವೆ ಮಾಡುವುದೂ ರೂಢಿಯಲ್ಲಿದೆ. ಗುರು-ಹಿರಿಯರ ಸೇವೆಯಿಂದ ಅವರ ಆಶೀರ್ವಾದವು ಸೇವಿಸುವವನ ಕಡೆಗೆ ಹರಿಯುತ್ತದೆ. ವಯೋವೃದ್ಧರ ಸೇವೆಯಿಂದ ಅವರ ಅನುಭವದ ಮಾತುಗಳೂ-ವಿವೇಕಗಳೂ, ಜ್ಞಾನವೃದ್ಧರ ಸೇವೆಯಿಂದ ಜ್ಞಾನವೂ ಹರಿದು ಬರುತ್ತದೆ. ಹೀಗೆ ಆ ಹರಿಯುವಿಕೆಗೆ ಪೋಷಕವಾಗಿಯೂ ಅವರ ಮನಸ್ಸಂತೋಷವಾಗುವ ರೀತಿಯಲ್ಲಿಯೂ ಮಾಡುವ ಕ್ರಿಯೆಯೇ ಸೇವೆ ಅಥವಾ ದಾಸ್ಯವಾಗುವುದು. 


ಜವಾನ ಮತ್ತು ದಾಸ - ವ್ಯತ್ಯಾಸ

ಜವಾನ(servant) ಎಂದರೆ ಕೂಲಿಗೆ ಕೆಲಸ ಮಾಡುವವನು; ಕೂಲಿಗೆ ತಕ್ಕಂತೆ ಕೆಲಸ ಮಾಡುವವನು. ಕೆಲಸದ ವೇಳೆ ಮುಗಿದ ಕೂಡಲೇ ಅವನು ಸ್ವೇಚ್ಛಾಪರನಾಗುತ್ತಾನೆ. ಸಂಬಳಕ್ಕಾಗಿ ಕೆಲಸ ನಿರ್ವಹಿಸುವವರು ಎಲ್ಲರೂ ಈ ವರ್ಗಕ್ಕೇ ಸೇರುವರು. ಆದರೆ ದಾಸನು(slave) ಸ್ವಾಮಿಗಾಗಿಯೇ ಶ್ರದ್ಧೆಯಿಂದ ಕೆಲಸಮಾಡುವವನು. ತನ್ನ ಸರ್ವಸ್ವವನ್ನೂ ತನ್ನ ಸ್ವಾಮಿಗೇ ಒಪ್ಪಿಸುತ್ತಾನೆ. ಸ್ವಾಮಿಗಾಗಿಯೇ ತನ್ನ ಬದುಕು ಎಂದಿರುವವನು. ದಾಸನ ಯೋಗಕ್ಷೇಮವನ್ನು ಸ್ವಾಮಿಯೇ ನಿರ್ವಹಿಸುವನು. 

 ಜಮೀನ್ದಾರನ ಭೂಮಿಯಲ್ಲಿ ದುಡಿಯುವ ಕೃಷಿಕನಿಗೆ ತಾನು ಉಳುವ ಭೂಮಿಯು ತನ್ನದಲ್ಲ ಎಂಬ ಅರಿವಿರುತ್ತದೆ. ಆದರೂ ಶ್ರದ್ಧೆಯಿಂದಲೇ ತನ್ನ ಯಜಮಾನನಿಗೆ ಪರಮಾವಧಿ ಫಸಲು ಕೊಡಲು ಶ್ರಮಿಸಿ ಸಮರ್ಪಿಸುತ್ತಾನೆ.  ಇದು ಕೃಷಿಕನ ಸೇವೆ- ದಾಸ್ಯ. 


ದಾಸ್ಯ(ಗುಲಾಮಗಿರಿ) ಬೇಕೇ?

 ದಾಸ್ಯವನ್ನು, ಗುಲಾಮಗಿರಿಯನ್ನು ಅತ್ಯಂತ ನಿಕೃಷ್ಟಭಾವದಿಂದ ನೋಡುವವರು ಅನೇಕ ಮಂದಿ ಉಂಟು. ವ್ಯಕ್ತಿಯು ಯಾರ ದಾಸ ಎನ್ನುವುದರ ಮೇಲೆ ಇದನ್ನು ನಿರ್ಧರಿಸಬೇಕಾಗಿದೆ. ಶ್ರೀರಂಗಮಹಾಗುರುಗಳು ಕೇಳುತ್ತಿದ್ದುದು ಸ್ಮರಣೆಗೆ ಬರುತ್ತದೆ: ದಾಸ್ಯ ಬೇಡವೆಂದರೂ ನಾವು ಇಂದ್ರಿಯಗಳಿಗೆ ದಾಸರಾಗಿಲ್ಲವೇ? ಇಂದ್ರಿಯಸುಖಕ್ಕಾಗಿ ಪಂಚೇಂದ್ರಿಯಗಳಿಗೆ ಅನುಸಾರವಾಗಿ ಅಲ್ಲವೇ ನಮ್ಮ ಪ್ರವೃತ್ತಿಗಳು ಮತ್ತು ಕ್ರಿಯೆಗಳು? ಹೀಗಿರುವಾಗ ಅತೀಂದ್ರಿಯವಾದ ಸುಖವನ್ನು ಪಡೆಯಲು ಪರಮಾತ್ಮನ, ಜ್ಞಾನಿಗಳ ದಾಸರಾಗಲು ಏಕೆ ಹಿಂಜರಿಕೆ? 

ಆಂಜನೇಯ, ಶ್ರೀರಾಮನ ಪರಮದಾಸ. ಪರಿಪೂರ್ಣವಾಗಿ ಶ್ರೀರಾಮನಿಗೇ ಒಪ್ಪಿಸಿಕೊಂಡು ಅವನ ಬಂಟನಾಗಿ, ಸೇವಕನಾಗಿದ್ದುದರಿಂದ ಅವನೇ ದಾಸ್ಯಭಾವಕ್ಕೆ ಉತ್ತಮವಾದ ಉದಾಹರಣೆ. 


'ಸೇವೆ' ಪದದ ಅರ್ಥ 

ಸೇವೆ ಎನ್ನುವ ಪದಕ್ಕೆ 'ಭಜ ಸೇವಾಯಾಂ' ಭಜಿಸುವುದು-ಆರಾಧನೆ ಮಾಡುವುದು ಎಂದರ್ಥವಾಗುತ್ತದೆ. ಭಜನೆ ಎಂದಾಗ ಹಾಡು ಹೇಳಿ, ತಾಳಹಾಕುವುದಷ್ಟೇ ಅಲ್ಲ.  ಪೂಜೆಯನ್ನು ಯಾವ ಕ್ರಮದಲ್ಲಿ ಮಾಡಿದಾಗ ಭಗವಂತನಿಂದ ಅನುಗ್ರಹವು ನಮ್ಮ ಕಡೆಗೆ ಹರಿದು ಬರುತ್ತದೆ ಎಂಬ ವಿಜ್ಞಾನವನ್ನು ಅರಿತವರು ಮಹರ್ಷಿಗಳು. ಆ ಕ್ರಮವೇ ಅವರು ತಂದ ಪೂಜಾ ಪದ್ಧತಿಯೆನಿಸಿಕೊಳ್ಳುತ್ತದೆ. ಭಗವಂತನಿಗೆ ಮಾಡುವ ಅರ್ಚನೆ-ಅಲಂಕಾರ-ಅಭಿಷೇಕ ಮುಂತಾದ ವಿಶೇಷ ಉಪಚಾರಗಳು ಆರಾಧನೆಯ ಅಂಗಗಳಾಗಿ ದೇವರ ಸೇವೆಯಾಗುತ್ತವೆ. ದೇವರ ರಥವನ್ನು ಎಳೆಯುವುದೂ ಸೇವೆಯೇ. 

ದೇವಸ್ಥಾನಗಳಲ್ಲಿ ಷೋಡಶೋಪಚಾರಪೂಜೆಯಲ್ಲಿ ಅರ್ಚಕರು ಮಾತ್ರವಲ್ಲದೆ ನೆರೆದಿರುವ ಭಕ್ತಾದಿಗಳೂ ಭಾಗವಹಿಸುತ್ತಾರೆ. ವೇದಪಾರಾಯಣಸೇವೆ, ಸಂಗೀತಸೇವೆ, ನೃತ್ಯಸೇವೆ ಮುಂತಾದ ಅನೇಕ ಸೇವೆಗಳಲ್ಲಿ ಭಕ್ತಾದಿಗಳೆಲ್ಲರಿಗೂ ಅವಕಾಶವುಂಟು. "....ಸೇವಾಂ ಅವಧಾರಯ" ಎಂಬುದಾಗಿ ಉತ್ಸವಗಳಲ್ಲಿ ಘೊಷಿಸಿದಾಗ ತಾವು ಕಲಿತಿರುವ ವಿದ್ಯೆ, ಕಲೆಗಳನ್ನು ಭಗವಂತನ ಮುಂದೆ ಒಪ್ಪಿಸುವ ಕಾರ್ಯವೂ ಸೇವೆಯೇ. ಅದನ್ನು ಅವನಿಗೆ ಪ್ರೀತಿಯಾಗುವ ತರಹದಲ್ಲಿ ಒಪ್ಪಿಸಿದಾಗ ಅವನ ಅನುಗ್ರಹವು ನಮ್ಮ ಮೇಲೆ ಹರಿಯುತ್ತದೆ. ಆ ರೀತಿಯ ಹರಿಯುವಿಕೆಗೆ ಪೋಷಕವಾದ ನಡೆಯ ಜವಾಬ್ದಾರಿಯು ನಮ್ಮ ಮೇಲಿದೆ.  


ದಾಸ್ಯ  - ಭಕ್ತಿಯಿಂದ ಕೂಡಿದ ಸೇವೆ 

ಇಲ್ಲಿಯೇ ಭಕ್ತಿಭಾವವು ಸೇರಿಕೊಳ್ಳುತ್ತದೆ. ಭಗವಂತನಲ್ಲಿ ಪರಮಪ್ರೀತಿಯೇ ಭಕ್ತಿ.  ಭಗವಂತನಿಗೆ ಪ್ರೀತಿ-ತೃಪ್ತಿ ಉಂಟಾಗಬೇಕೆನ್ನುವ ಮನೋಭಾವವೇ ಭಕ್ತಿಭಾವ. ಆದರೆ ಇಂದು ಎಲ್ಲವೂ ಯಾಂತ್ರಿಕವಾಗಿ ಸಾಗುತ್ತಿವೆ.  ಪ್ರೀತಿಭಾವ ತುಂಬಿಕೊಂಡಾಗ ಅದೇ ದಾಸ್ಯಭಾವವಾಗುತ್ತದೆ. ಅಂತಹ ದಾಸ್ಯಭಾವದಿಂದ, ಸೇವಾಭಾವದಿಂದ ಪೂಜೆಯನ್ನು ಆಚರಿಸಿದಾಗ ಮಾತ್ರವೇ ಅದು ಶೋಭಿಸುತ್ತದೆ. ಹಾಗಿಲ್ಲದಿದ್ದಲ್ಲಿ ದೇವರ ಪೂಜೆಯು ಒಂದು ಪ್ರದರ್ಶನವಾಗುತ್ತದೆಯಷ್ಟೇ. 


(ಮುಂದುವರಿಯುವುದು)

ಸೂಚನೆ : 8/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.