Saturday, January 22, 2022

ವಸ್ತ್ರಾಭರಣ- 6 ಅಂತರೀಯ ಮತ್ತು ಬಂಧಗಳು (Vastra bharana - 6 Antariya Mattu Bandhagalu)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)



ಅಂತರೀಯ ಅಥವಾ ಕೆಳವಸ್ತ್ರ ಶರೀರದ ಕೆಳಭಾಗವನ್ನು ಮುಚ್ಚುವ ಒಂದು ಅವಿಚ್ಛಿನ್ನವಾದ ವಸ್ತ್ರ. ಇದು ಕೆಳಮೈಯನ್ನು ಸುತ್ತುವರೆದು, ಗಂಟುಹಾಕಿ ಸೊಂಟಕ್ಕೆ ಬಿಗಿದಿರುತ್ತದೆ. ಗಂಡಸರು ಉಡುವ ಪಂಚೆ, ಸ್ತ್ರೀಯರ ಸೀರೆಯ ಕೆಳಭಾಗ ಇವು ಅಂತರೀಯದ ನಿದರ್ಶನಗಳು. ಪಂಚೆ ಉಡುವ ಬಗೆಗಳು ಅನೇಕ. ಸುಮ್ಮನೆ ಸುತ್ತಿಕೊಂಡಿರುವುದು ಒಂದು. ಪಂಚಕಚ್ಛದ ಶೈಲಿ ಮತ್ತೊಂದು. ಕಚ್ಛ ಎಂದರೆ ಬಟ್ಟೆಯ ತುದಿ ಅಥವಾ ಅಂಚು. ಐದು ಜಾಗಗಳಲ್ಲಿ ತುದಿಯನ್ನು ಮಡಿಸಿ / ಗಂಟು ಹಾಕಿ  ಕಟ್ಟಿರುವುದರಿಂದ ಇದು ಪಂಚ-ಕಚ್ಛಾ. ಸೀರೆಯ ಕೆಳಭಾಗವನ್ನು ಉಡುವ ಕ್ರಮದಲ್ಲೂ ಈ ಎರಡು ಶೈಲಿಗಳು ಕಂಡುಬರುತ್ತವೆ. ಅಂತರೀಯವನ್ನು ಉಡುವ ಎಲ್ಲಾ ಶೈಲಿಗಳಲ್ಲೂ ಸಮಾನವಾಗಿರುವುದೆಂದರೆ ನಾಭಿಯ ಎಡ-ಬಲ ಭಾಗಗಳಲ್ಲಿ ಎರಡು ಗಂಟುಮಾಡಿ ಸೊಂಟವನ್ನು ಬಿಗಿಯಾಗಿ ಬಂಧಿಸುವ ಕ್ರಮ. ಕಚ್ಛೆ ಅಂತರೀಯದಲ್ಲಿ ಇದರ ಜೊತೆಗೆ, ಲಿಂಗ-ಮೂಲಗಳನ್ನು ಮುಚ್ಚಿ ಬಿಗಿಯಾಗಿ ಕಟ್ಟುವ ಮತ್ತೊಂದು ಬಂಧವೂ ಸೇರಿಕೊಳ್ಳುತ್ತದೆ. ಇಂತಹ ವಸ್ತ್ರಧಾರಣೆಯೇ ನಮ್ಮಲ್ಲಿ ಸಹಜವಾಗಿಯೇ ಉಡ್ಡೀಯನ ಹಾಗೂ ಮೂಲ ಬಂಧಗಳನ್ನು ಉಂಟು ಮಾಡಲು ಅತ್ಯಂತ ಸಹಕಾರಿ ಎಂಬುದು ಯೋಗರಹಸ್ಯಜ್ಞರಾದ ಶ್ರೀರಂಗಮಹಾಗುರುಗಳ ಅಭಿಪ್ರಾಯ. ಯೋಗಶಾಸ್ತ್ರದಲ್ಲಿ ಜಾಲಂಧರ, ಉಡ್ಡೀಯನ ಮತ್ತು ಮೂಲಬಂಧ ಎಂಬುದಾಗಿ ಮೂರು ಬಂಧಗಳ ಉಲ್ಲೇಖವಿದೆ. ಈ ಮೂರು 'ಬಂಧ'ಗಳನ್ನು ಸಾಧಿಸಿದವನಿಗೆ ಕಾಲಪಾಶದ 'ಬಂಧನ'ವೇ ಕಳಚಿ ಹೋಗುತ್ತಂತೆ ! ಅಂದರೆ ಅವನು ಯೋಗಸಿದ್ಧಿಯನ್ನು ಪಡೆದು ಮುಕ್ತನಾಗುತ್ತಾನೆ ಎಂದೇ ಅರ್ಥ.


ಬಂಧ ಹೇಗೆ ಯೋಗಸಿದ್ಧಿಯನ್ನು ಕೊಟ್ಟೀತು?     

ಮಹತ್ತಾದ ಭಾರವನ್ನು ಎತ್ತುವಾಗ, ಪೂರ್ವಸಿದ್ಧತೆಯನ್ನು ಹೇಗೆ ಮಾಡಿಕೊಳ್ಳುತ್ತೇವೆ ? ಸೊಂಟಕ್ಕೆ ಬಿಗಿದು, ಎತ್ತಬೇಕಾದ ವಸ್ತುವಿನ ಅಡಿಯಲ್ಲಿ ಕೈ ಹಾಕಿ ಸಜ್ಜಾಗುತ್ತೇವೆ. ಒಂದು ಕ್ಷಣ ದಮ್ ಕಟ್ಟಿ, ಎವೆಯಿಕ್ಕದೇ ಕಟ್ಟಿಗೆಯಂತಾಗುತ್ತೇವೆ. ಆಗ ಭಾರವನ್ನು ಎತ್ತುವ ಕೆಲಸ ಅನಾಯಾಸವಾಗಿ ಸಿದ್ಧಿಸುತ್ತೆ. ಇಲ್ಲಿ ಭಾರ ಎತ್ತಲು ಉಸಿರಿನ ಮೇಲೆ ನಿಯಂತ್ರಣ ಅವಶ್ಯಕ. ಅದನ್ನು ಸದಾಕಾಲವೂ ಉಳಿಸುವುದಕ್ಕೆ ನಡುವಿಗೆ ಬಿಗಿದ ಬಟ್ಟೆ ಸಹಕಾರಿಯಾಗಿತ್ತು.  


ಯೋಗಸಾಧನೆಗಂತೂ ಉಸಿರಾಟದ ಮೇಲೆ ನಿಯಂತ್ರಣ ಅವಶ್ಯಕ ಮಾತ್ರವಲ್ಲ ಅನಿವಾರ್ಯವೂ ಹೌದು. ಆದರೆ ಯೋಗಸಿದ್ಧಿಗೆ ಸಹಕಾರಿಯಾದ ಪ್ರಾಣಾಯಾಮ ಕೇವಲ ದಮ್ ಕಟ್ಟುವುದಲ್ಲ. ಅದರ ಒಂದು ಅಂಶವಷ್ಟೇ. ಯೋಗಸಾಧನೆಗೆ ಅನೇಕ ಒಳ ಪ್ರಕ್ರಿಯೆಗಳು ನಡೆದಿರಬೇಕು. ಪ್ರಾಣ ಮನಸ್ಸುಗಳು ಒಳಮುಖವಾಗಿ ಹರಿದು ಧ್ಯೇಯದಲ್ಲಿ ಲೀನವಾಗಿರಬೇಕು. ಧಾರಣ-ಧ್ಯಾನ-ಸಮಾಧಿ ಸಿದ್ಧಿಸಬೇಕು. ಸಮಾಧಿಯ ಸೌಖ್ಯವನ್ನು ಅನುಭವಿಸಬೇಕಾದರೆ ಒಳಮುಖವಾಗಿ ಹರಿದ ಪ್ರಾಣಗಳು ಹೊರಬಾರದಂತೆ, ಕೆಳಗಿಳಿಯದಂತೆ ನೋಡಿಕೊಳ್ಳುವುದೇ ಈ ಬಂಧಗಳು. ಬಂಧಗಳು ಮೂರು ಜಾಗದಲ್ಲಿ ಉಂಟಾಗುತ್ತವೆ. ಕಂಠದಲ್ಲಿ ಜಾಲಂಧರ, ಉದರಸ್ಥಾನದಲ್ಲಿ ಉಡ್ಡೀಯನ ಬಂಧ, ಮತ್ತು ಲಿಂಗ-ಮೂಲ ಗಳಲ್ಲಿ ಮೂಲಬಂಧ. ಭಾರತೀಯವಾದ ಪಂಚೆ-ಸೀರೆಗಳ ವಿನ್ಯಾಸ  ಉಡ್ಡೀಯನ ಮತ್ತು ಮೂಲ ಬಂಧಗಳನ್ನು ಉಂಟುಮಾಡಲು ಭೌತಿಕವಾದ ಸಹಕಾರವನ್ನು ನೀಡುತ್ತದೆ.  


ಡಾಬು-ಒಡ್ಯಾಣ-ಮೇಖಲೆ 

ಸ್ತ್ರೀಯರು ಆಭರಣವಾಗಿ ತೊಡುವ ಡಾಬು (ಒಡ್ಯಾಣ), ಬ್ರಹ್ಮಚಾರಿಗಳು ಸೊಂಟಕ್ಕೆ ಸುತ್ತುವ ಅಭಿಮಂತ್ರಿತ ಮೌಂಜೀ (ಮೇಖಲಾ) ಇವೂ ಸಹ ಇದೇ ಕೆಲಸವನ್ನೇ ಮಾಡುತ್ತವೆ. ಈಗಾಗಲೇ ಗಮನಿಸಿರುವ ಅಂತರೀಯದ ಯೋಗರಹಸ್ಯವನ್ನೇ ನಾವು ವೇದಾಗಳಲ್ಲಿಯೂ ಕಾಣುತ್ತೇವೆ. ವೇದಗಳು ಮೇಖಲೆಯನ್ನು ಸಾಕ್ಷಾತ್ ದೇವೀಸ್ವರೂಪಿಣಿಯಾಗಿ ಕಾಣುತ್ತದೆ. ಪ್ರಾಣ-ಅಪಾನಗಳಿಗೆ ಬಲವನ್ನು ತಂದು ಕೊಡವವಳೆಂದು ಕೊಂಡಾಡುತ್ತದೆ. ಋಷಿಗಳ ಆಯುಧವೆಂದೂ, ಸಹೋದರಿಯೆಂದೂ ಕೊಂಡಾಡುತ್ತಾರೆ. ಸನ್ಮತಿಯನ್ನೂ ಮೇಧೆಯನ್ನೂ ಕೊಡುವವಳು ಮೇಖಲೆ. 


ಪಂಚೆ, ಸೀರೆ, ಡಾಬು, ಮೇಖಲೆ ಮುಂತಾದವು ಹೊರಗಡೆಯಿಂದ ಆಕರ್ಷಕವಾದ ಅಲಂಕಾರವಾಗಿಯೂ ಇದ್ದು ಅದ್ಭುತವಾದ ಯೋಗಸಾಧನವೂ ಆಗಿವೆ ಎಂಬುದನ್ನು ಗಮನಿಸಬೇಕು. ಇಂತಹ ಅಲಂಕಾರವನ್ನು ತಂದುಕೊಟ್ಟ ಋಷಿಗಳ ಮೇಧೆಗೆ ನಮೋನಮಃ ! 

ಸೂಚನೆ : 22/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.