Saturday, January 1, 2022

ನವವಿಧ ಭಕ್ತಿ - 9 ವಂದನಸ್ವೀಕಾರ - ಅಧಿಕಾರಿ ಮತ್ತು ಜವಾಬ್ದಾರಿ (Navavidha Bhakti - 9 Vandanasvikaara- Adhikaari, Javaabdaari)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ

(ಪ್ರತಿಕ್ರಿಯಿಸಿರಿ lekhana@ayvm.in)


ನಮಸ್ಕಾರ ಸ್ವೀಕಾರಕ್ಕೆ ಅಧಿಕಾರಿಗಳು

ನಮಸ್ಕಾರವನ್ನು ಸ್ವೀಕರಿಸಲು ಪ್ರಥಮ ಅಧಿಕಾರಿ ಭಗವಂತನೇ.  ಭಗವಂತ ನಮಗೆ ಪ್ರತ್ಯಕ್ಷವಾಗಿ ಸಿಗದಿದ್ದಾಗ ಅವನ ಪ್ರತಿನಿಧಿಗಳಾಗಿರುವವರಿಗೆ ವಂದನೆಯನ್ನು ಸಲ್ಲಿಸಬೇಕು. ಆ ನಮಸ್ಕಾರವನ್ನು ಭಗವಂತನಿಗೇ ತಲುಪಿಸುವ ಯೋಗ್ಯತೆಯುಳ್ಳ  ಅಂತಹ ಗುರುಹಿರಿಯರಿಗೇ ನಮ್ಮ ವಂದನೆ. ಸಂಪ್ರದಾಯದಲ್ಲೂ ಅಂತಹ ಗುರುಹಿರಿಯರನ್ನು ನೋಡಿದ ತಕ್ಷಣವೇ ನಮಸ್ಕಾರ ಮಾಡಿ, ಆಶೀರ್ವಾದವನ್ನು  ಪಡೆಯುವ  ರೂಢಿಯಿದೆ. ಆ ಪಟ್ಟಿಯಲ್ಲಿ ಪ್ರಥಮಸ್ಥಾನ ಗುರುವಿಗೆ.  "ವರ್ಣಮಾತ್ರಂ ಕಲಿಸಿದಾತಂ ಗುರು" ಎಂಬ ನಾಣ್ಣುಡಿಯು ಇದ್ದರೂ ನಮ್ಮಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿ ಯಾರು ಜ್ಞಾನವನ್ನು ದಯಪಾಲಿಸುವರೋ ಅವರೇ ನಿಜವಾದ ಅರ್ಥದಲ್ಲಿ ಗುರುವೆನಿಸಿಕೊಳ್ಳುತ್ತಾರೆ. ಅವರೇ ಭಗವಂತನ ನಿಜವಾದ ಪ್ರತಿನಿಧಿಗಳು. ಇನ್ನು ಭಗವಂತನ ಉಸಿರಾಗಿರುವ ವೇದ-ಶಾಸ್ತ್ರಗಳನ್ನು ಅಧ್ಯಯನಮಾಡಿ ಅವುಗಳ ತತ್ತ್ವಗಳನ್ನು ಉಪದೇಶಮಾಡುವ ಆಚಾರ್ಯರೂ ವಂದನೆಗೆ ಯೋಗ್ಯರು. ಅಂತೆಯೇ, ಅವರವರ ತಂದೆತಾಯಿಗಳು, ಸೋದರಮಾವ, ಹೆಣ್ಣುಕೊಟ್ಟ ಮಾವ ಮತ್ತು ರಾಜ- ಇವರುಗಳೂ ಗುರುಸ್ಥಾನದಲ್ಲಿರುವವರು.

ಆಚಾರ್ಯಭಕ್ತಿ-ವಂದನೆ 

ಆಚಾರ್ಯಭಕ್ತಿಯನ್ನು ಬೆಳಕಿಗೆ ತರುವ ಭಗವದ್ರಾಮಾನುಜರ ಜೀವನದ ಘಟನೆಯೊಂದು ಇಲ್ಲಿ ಸ್ಮರಣೀಯ. ಯತಿರಾಜರೆನಿಸಿದ್ದ ಭಗವದ್ರಾಮಾನುಜರು ಅಪಾರ ಮಹಿಮೆಯನ್ನು ಹೊಂದಿದ್ದರು. ದೇವಾಲಯದ ನಿರ್ವಹಣೆಯಲ್ಲೂ ಅವರದು ಕಟ್ಟುನಿಟ್ಟಾದ ಶಿಸ್ತು. ಇದನ್ನು ಸಹಿಸದೇ ತೀವ್ರವಾಗಿ ದ್ವೇಷಿಸಿದವರು ಉಂಟು. ಕಿರುಕುಳ ಕೊಡುತ್ತಿದ್ದವರು ಕೊನೆಗೆ ಅವರಿಗೆ ವಿಷಹಾಕಲೂ ಯತ್ನಿಸಿದರು. ಆದರೂ ಅಂತಹವರಲ್ಲಿ ಕರುಣೆ ತೋರಿ ಅವರ ಪಾಪದ ಪ್ರಾಯಶ್ಚಿತ್ತಕ್ಕಾಗಿ ರಾಮಾನುಜರೇ ಉಪವಾಸವ್ರತವನ್ನು ಕೈಗೊಂಡು ಬಳಲುತ್ತಿದ್ದರು. ಇದನ್ನು ತಿಳಿದ ಅವರ ಆಚಾರ್ಯರಾದ ಗೋಷ್ಠೀಪೂರ್ಣರು ಸಮಸ್ಯೆಯನ್ನು ಬಗೆಹರಿಸಲು ಆಗಮಿಸಿದರು. ವಿಷಯವನ್ನು ತಿಳಿದು ಎದುರುಗೊಳ್ಳಲು ಹೋದ ರಾಮಾನುಜರು ಕಾವೇರೀತೀರದಲ್ಲೇ ಉರಿಬಿಸಿಲಿನ ಮರಳಲ್ಲಿ ತಮ್ಮ ಆಚಾರ್ಯರಿಗೆ ಸಾಷ್ಟಾಂಗನಮಸ್ಕಾರ ಮಾಡಿದರು. ಆದರೆ ಎಷ್ಟುಹೊತ್ತಾದರೂ ಆಚಾರ್ಯರು ಏಳಲು ಆಜ್ಞೆಯನ್ನೇ ನೀಡಲಿಲ್ಲ. ಇದನ್ನು ಗಮನಿಸುತ್ತಿದ್ದ ರಾಮಾನುಜರ ಶಿಷ್ಯರೊಬ್ಬರಿಗೆ ಆಚಾರ್ಯರ ಮೇಲೆ ಕೋಪ ಬಂದಿತು. "ಮೇಲೆ ಉರಿಬಿಸಿಲು,  ಕೆಳಗೆ ಕಾದ ಮರಳು ಸಾಲದ್ದಕ್ಕೆ ಬಹುದಿನ ಉಪವಾಸದಲ್ಲಿದ್ದು ಬಳಲಿದವರಿಗೆ ಇಂತಹ ಶಿಕ್ಷೆಯೇ?" ಎಂದು ವಿನಂತಿಸಿದರು. ಆದರೂ ಸುಮ್ಮನಿದ್ದರು ಆಚಾರ್ಯರು. ತಕ್ಷಣವೇ ಶಿಷ್ಯರು ನಿರ್ಧಾರಕ್ಕೆ ಬಂದು ಕಾದ ಮರಳಿನಮೇಲೆ ತಾನು ಸಾಷ್ಟಾಂಗ ನಮಸ್ಕಾರ ಮಾಡಿ ತನ್ನ ಗುರುವಾದ ರಾಮಾನುಜರನ್ನು ತನ್ನ ಮೇಲೆ ಎಳೆದುಕೊಂಡು ಅವರ ತಾಪ ಪರಿಹಾರಮಾಡಿದರಂತೆ! ಇದನ್ನು ಕಂಡು ಸಂತೋಷಿಸಿದ ಗೋಷ್ಠೀಪೂರ್ಣರು ಇಬ್ಬರನ್ನೂ ಅಭಿನಂದಿಸಿ "ಇಂದು ನನಗೆ ನಿರಾಳವಾಯಿತು. ಇಲ್ಲಿಯವರೆಗೆ ಪ್ರೀತಿ-ವಾತ್ಸಲ್ಯಗಳಿಂದ ನಾನು ಪೋಷಿಸುತ್ತಿದ್ದೆ. ಇನ್ನುಮುಂದೆ ರಾಮಾನುಜರಿಗೆ ಭಿಕ್ಷೆಯನ್ನು ಸಿದ್ಧಪಡಿಸಿ ಪೋಷಿಸುವ ಕೈಂಕರ್ಯವನ್ನು ನೀನೇ ನಿರ್ವಹಿಸು" ಎಂದು ಆ ಶಿಷ್ಯರಿಗೆ ಆಣತಿಯಿತ್ತು, ರಾಮಾನುಜರಿಗೆ ಉಪವಾಸ ವ್ರತವನ್ನು ಕೈಬಿಡುವಂತೆ ತಿಳಿಸಿದರು. ಆ ಶಿಷ್ಯರೇ ಕಿಡಾಂಬಿ ಆಚ್ಚಾನ್ ಎಂಬುವರು. ಆಚಾರ್ಯನಿಷ್ಠೆ, ಭಕ್ತಿ ಉಕ್ಕಿಹರಿದಾಗ ಮೂಡುವ ನಮಸ್ಕಾರಕ್ಕೆ ಇದೊಂದು ಉತ್ತಮ ಉದಾಹರಣೆಯಲ್ಲವೇ? 

 ನಮಸ್ಕಾರ ಸ್ವೀಕರಿಸುವವರ ಜವಾಬ್ದಾರಿ 

ಇಲ್ಲಿ ನಮಸ್ಕಾರ ಮಾಡಿಸಿಕೊಳ್ಳುವವರಿಗೂ ಒಂದು ಜವಾಬ್ದಾರಿಯಿದೆ. ವಾಸ್ತವವಾಗಿ ನಮಸ್ಕಾರವೆನ್ನುವುದು ನಮ್ಮೊಳಗಿರುವ ಭಗವಂತನಿಗೇ ಎನ್ನುವ ಪ್ರಜ್ಞೆ ಇರಬೇಕು. ಇದನ್ನೇ ಭಾಗವತವು ಹೀಗೆ ಹೇಳುತ್ತದೆ - "ಗುಹಾಶಯಾಯೈವ ನ ದೇಹಮಾನಿನೇ" ನಮ್ಮ ಹೃದಯಗುಹೆಯಲ್ಲಿ ವಾಸಮಾಡುವ ಭಗವಂತನಿಗೆ ನಮಸ್ಕಾರವೇ ಹೊರತು ದೇಹಾಭಿಮಾನಿಗೆ ಅಲ್ಲ. 

ಭಾಗವತದಲ್ಲಿ ದಕ್ಷಪ್ರಜಾಪತಿಯ ಪ್ರಸಿದ್ಧವಾದ ಕಥೆಯೊಂದು ಇದನ್ನು ತಿಳಿಸುತ್ತದೆ.  ಆತನು ಪ್ರಜಾಪತಿಯೇ ಆದರೂ ಮಹಾ ಅಹಂಕಾರಿ.  ಅವನ ಮಗಳು ಸತಿದೇವಿ, ಅಳಿಯ ಸಾಕ್ಷಾತ್ ಈಶ್ವರನೇ. ದಕ್ಷನು ಯಜ್ಞಕ್ಕಾಗಿ ಯಜ್ಞಶಾಲೆಯನ್ನು ಪ್ರವೇಶ ಮಾಡಿದಾಗ ತಕ್ಷಣವೇ ಅಲ್ಲಿದ್ದವರೆಲ್ಲರೂ ಎದ್ದುನಿಂತು ಗೌರವವನ್ನು ಸೂಚಿಸುತ್ತಾರೆ. ಈಶ್ವರನು ಮಾತ್ರ ಕುಳಿತೇ ಇದ್ದನು. ಅಳಿಯನಾದವನು ಮಾವನಿಗೆ ಗೌರವ ಕೊಡಬೇಕಾದದ್ದು ವಿಧಿ. ಅದನ್ನು ಮೀರಿ ಈಶ್ವರನು ಕುಳಿತೇ ಇರುವುದನ್ನು ಕಂಡು ದಕ್ಷನು ಅತ್ಯಂತ ಕುಪಿತನಾಗುತ್ತಾನೆ.  ಈಶ್ವರ ಸುಮ್ಮನೆ ನಕ್ಕುಬಿಡುತ್ತಾನೆ. ದಕ್ಷನು ಮಿತಿಮೀರಿದ ಕೋಪದಿಂದ ಶಿವನನ್ನು ಶಪಿಸುತ್ತಾನೆ.

ವಾಸ್ತವವಾಗಿ ಆ ಭಗವಂತನೇ-ಈಶ್ವರನೇ ಗುಹಾಶಯನು.  ದೇಹಗುಹೆಯೊಳಗಿರುವ  ಪರಮೇಶ್ವರನೇ ಹೊರಗೆ ಬಂದಿದ್ದಾನೆ. ವಾಸ್ತವವಾಗಿ  ದಕ್ಷನೇ ಅವನಿಗೆ ನಮಸ್ಕಾರ ಮಾಡಬೇಕಾಗಿತ್ತು. ಆದರೆ ನಮಸ್ಕಾರ ಯಾರಿಗೆ ಎನ್ನುವ ಪ್ರಜ್ಞೆ ಮರೆಯಾಗಿ, ಈಶ್ವರನ ಈಶ್ವರತ್ವವನ್ನು ಮರೆತು ಅಳಿಯನೆಂದಷ್ಟೇ ಭಾವಿಸಿ ತನಗೆ ಗೌರವ ಸಲ್ಲಿಸಬೇಕೆಂದು ನಿರೀಕ್ಷಿಸಿದನು.  

ಮಹಾತ್ಮರನ್ನು ನಮಸ್ಕರಿಸುವುದರ ಫಲ 

ನಮಸ್ಕರಿಸಿದವರಿಗೆ ಭವಿಷ್ಯತ್ತಿನಲ್ಲಿ ಏನಾಗಬೇಕೋ ಅದೇ ಮಹಾತ್ಮರ ಬಾಯಲ್ಲಿ ಆಶೀರ್ವಾದ ರೂಪದಲ್ಲಿ ಬರುವುದು. ಮಾರ್ಕಂಡೇಯರ ಕಥೆ ಇದನ್ನು ಉದಾಹರಿಸುತ್ತದೆ. ಮಹಾತಪಸ್ವಿಯಾಗಿ ಹದಿನಾರು ವರ್ಷಗಳು ಮಾತ್ರ ಜೀವಿಸುವ ಪುತ್ರ ಹುಟ್ಟುತ್ತಾನೆಂದು ಅವರ ತಂದೆಗೆ  ಭಗವಂತನೇ ವರಕೊಟ್ಟಿರುತ್ತಾನೆ. ಅಲ್ಪಾಯುಷಿ  ಎಂದು ತಿಳಿದು ತಂದೆಯು ಅತ್ಯಂತ ದು:ಖಿತರಾಗುತ್ತಾರೆ. ಇದರಿಂದ ಪಾರಾಗಲು ಅವರು ಅವನಿಗೆ ಒಂದು ಸೂತ್ರವನ್ನು ಹೇಳಿಕೊಡುತ್ತಾರೆ:  "ನೀನು ಯಾವಾಗ ಯಾವ ಮಹಾತ್ಮರನ್ನೇ ನೋಡಿದರೂ ತಕ್ಷಣವೇ ಅವರಿಗೆ ನಮಸ್ಕಾರ ಮಾಡಿಬಿಡು" ಎಂದು. ಅಂತೆಯೇ ಇವನೂ ಅನೇಕ ಋಷಿಗಳನ್ನೂ ಬ್ರಹ್ಮರ್ಷಿಗಳನ್ನೂ ನೋಡಿದಾಗಲೆಲ್ಲಾ  ನಮಸ್ಕಾರ ಮಾಡುತ್ತಾನೆ. ಒಮ್ಮೆ ಸಪ್ತರ್ಷಿಗಳನ್ನು ನಮಸ್ಕರಿಸಿದಾಗ ಅವರು "ದೀರ್ಘಾಯುಷ್ಮಾನ್ ಭವ" ಎಂದು ಆಶೀರ್ವದಿಸಿಬಿಡುತ್ತಾರೆ. ನಂತರ "ಈ ಬಾಲಕ 16 ವರ್ಷಕಾಲವೇ ಬದುಕುತ್ತಾನೆಂಬುದಾಗಿರುವಾಗ ಇಂತಹ ಆಶೀರ್ವಾದ ಮಾಡಿಬಿಟ್ಟೆವಲ್ಲ!" ಎಂದು ಯೋಚಿಸುತ್ತಾರೆ. ಆದರೆ ಮುಂದೆ ಹೀಗೆಯೇ ನಡೆಯುವುದೆಂದು ಗುರುತಿಸಿ ಮಾರ್ಕಂಡೇಯನಿಗೆ - 'ನೀನು ಈಶ್ವರನನ್ನು ಭದ್ರವಾಗಿ ಹಿಡಿದುಕೋ, ಅವನು ನಿನ್ನನ್ನು ಕಾಪಾಡುತ್ತಾನೆ' ಎಂಬುದಾಗಿ ಉಪಾಯವನ್ನು ಹೇಳಿಕೊಡುತ್ತಾರೆ. ಈಶ್ವರನನ್ನು ಹಿಡಿದುಕೊಳ್ಳುವುದೆಂದರೆ ಬಾಹ್ಯವಾಗಿ ಈಶ್ವರನ ಲಿಂಗವನ್ನು ಹಿಡಿದುಕೊಳ್ಳಬೇಕೆಂದರ್ಥವಲ್ಲ. ಹೃದಯದಲ್ಲಿ ಈಶ್ವರನನ್ನು ಧ್ಯಾನದಲ್ಲಿ ಭದ್ರವಾಗಿ ಇಟ್ಟುಕೊಂಡಿದ್ದರಿಂದ  ಅವನನ್ನು ಯಮಪಾಶ ಏನೂ ಮಾಡಲಾಗುವುದಿಲ್ಲ. ಈಶ್ವರನೇ ರಕ್ಷಿಸುತ್ತಾನೆ. ಅಲ್ಲಿಂದ ಮುಂದಕ್ಕೆ ಚಿರಂಜೀವಿಯಾಗಿರುತ್ತಾನೆ ಎಂಬ ಕಥೆಯನ್ನು ಕೇಳಿದ್ದೇವೆ. ಏನಾಗಬೇಕಾಗಿರುವುದೋ ಅದು ಆ ಮಹಾತ್ಮರ ಮುಖಾರವಿಂದದಿಂದ ಹೊರಬರುತ್ತದೆ. ಬ್ರಹ್ಮರ್ಷಿಗಳನ್ನು ನಮಸ್ಕರಿಸಿದ್ದರ  ಪರಿಣಾಮವಿದು.

(ಮುಂದುವರಿಯುವುದು)

ಸೂಚನೆ : 1/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.