Sunday, January 28, 2024

ವ್ಯಾಸ ವೀಕ್ಷಿತ - 73 ವಿವಾಹ ಸಂಭ್ರಮ – ಉಡುಗೊರೆ-ಆಶೀರ್ವಾದಗಳು (Vyaasa Vikshita - 73 Vivaha Sambhrama - Udugore-Ashirvadagalu)ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)
ವಿವಾಹ ಸಂಭ್ರಮ – ಉಡುಗೊರೆ-ಆಶೀರ್ವಾದಗಳು 


ಯುಧಿಷ್ಠಿರನನ್ನು ಕೃಷ್ಣೆಯೊಂದಿಗೆ ಕುಳ್ಳಿರಿಸಿದರು; ಪಾಣಿಗ್ರಹಣ ಮಾಡಿ ಅವರಿಬ್ಬರೂ ಅಗ್ನಿಗೆ ಪ್ರದಕ್ಷಿಣೆ ಬರುವಂತೆ ಮಾರ್ಗದರ್ಶನವಿತ್ತರು, ಧೌಮ್ಯರು.

ಆ ಬಳಿಕ, ಕ್ರಮವಾಗಿ ಒಂದೊಂದು ದಿನಕ್ಕೊಬ್ಬೊಬ್ಬರಂತೆ ಉಳಿದ ಪಾಂಡವರೂ ದ್ರೌಪದಿಯನ್ನು ವಿವಾಹವಾದರು. ಅಲ್ಲೊಂದು ಅದ್ಭುತವೂ ನಡೆಯಿತು. ಅದು ದೇವರ್ಷಿಯೊಬ್ಬರಿಂದ ವಿದಿತವಾಯಿತು, ವೈಶಂಪಾಯನರಿಗೆ. ಏನೆಂದರೆ, ಮಹಾನುಭಾವಳಾದ ದ್ರೌಪದಿಯು ಒಂದೊಂದು ವಿವಾಹವಾದ ಮೇಲೂ ಮತ್ತೆ ಮತ್ತೆ ಮರುದಿನಕ್ಕೆ ಕನ್ಯಾಭಾವವನ್ನೇ ಹೊಂದಿರುತ್ತಿದ್ದಳು!

ವಿವಾಹವು ನೆರವೇರಲು, ದ್ರುಪದನು ಆ ಐವರು ಮಹಾರಥರಿಗೆ ಹೇರಳವಾಗಿ ಐಶ್ವರ್ಯವಿತ್ತನು: ಹೇಮಮಾಲೆಯನ್ನು ಹೊಂದಿದ್ದ ನೂರು ರಥಗಳು - ಒಬ್ಬೊಬ್ಬರಿಗೂ ಒತೆಗೆ ಚಿನ್ನದ ಕಡಿವಾಣಗಳನ್ನುಳ್ಳ ನಾಲ್ಕು ನಾಲ್ಕು ಕುದುರೆಗಳು - ಒಂದೊಂದು ರಥಕ್ಕೂ! ಪದ್ಮ ಮೊದಲಾದ ಸಲ್ಲಕ್ಷಣಗಳಿಂದ ಕೂಡಿದ್ದ, ಗಿರಿಸದೃಶವಾಗಿದ್ದ ಹಾಗೂ ಚಿನ್ನದ ಅಂಬಾರಿಗಳಿಂದ ಕೂಡಿದ್ದ ಆನೆಗಳು!

ಬಹಳ ಬೆಲೆಬಾಳುವ ವೇಷಗಳು ಆಭರಣಗಳು ಹಾರಗಳು ಇವನ್ನು ಉಟ್ಟುತೊಟ್ಟಿರುವ ಹಾಗೂ ನವಯೌವನದಲ್ಲಿರುವ ನೂರು ದಾಸಿಯರನ್ನೂ ಕೊಡುವುದಾಯಿತು. ಮಹಾನುಭಾವನಾದ ಸೌಮಕಿಯು (ಎಂದರೆ ದ್ರುಪದನು) ದಿವ್ಯದರ್ಶನರಾದ ಪಾಂಡವರಿಗೆ ಪ್ರಭುತ್ವಸೂಚಕವಾದ ವಸ್ತ್ರ-ಆಭರಣಗಳನ್ನು ಅಗ್ನಿಯ ಎದುರಿನಲ್ಲೇ ಬಳುವಳಿಯಾಗಿತ್ತನು.

ವಿವಾಹವು ಹೀಗೆ ನೆರವೇರಲು, ಪಾಂಡವರು ರತ್ನಬಹುಳವಾದ ಸಿರಿಯನ್ನು ಪಡೆದವರಾದರು. ಮಹಾಬಲಶಾಲಿಗಳಾದ ಹಾಗು ಇಂದ್ರಸದೃಶರಾದ ಅವರು ಪಾಂಚಾಲನ ಆ ನಗರಿಯಲ್ಲಿ ಸುಖವಾಗಿ ವಿಹರಿಸಿದರು. ದ್ರೌಪದಿಯ ಸುಶೀಲತೆಯಿಂದಾಗಿ ಪಾಂಡವರು ಸಂತೋಷಿಸಿದರು. ಅವಳಾದರೂ ತನ್ನ ಸುವ್ರತಗಳಿಂದಾಗಿ ಅವರ ಸಂತೋಷವು ವರ್ಧಿಸುವಂತೆ ಮಾಡಿದಳು.

ಪಾಂಡವರೊಂದಿಗೆ ಈಗ ದ್ರುಪದನಿಗೆ ಸಂಯೋಗವುಂಟಾಯಿತಲ್ಲವೆ? ದೇವತೆಗಳಿಂದಲೂ ಇನ್ನು ಭಯಪಡಬೇಕಾದ್ದಿಲ್ಲವೆಂಬಂತಾಯಿತು ಅದು. ದ್ರುಪದನ ಕುಟುಂಬದ ನಾರಿಯರೆಲ್ಲರೂ ಕುಂತಿಯ ಬಳಿ ಬಂದರು. ತಮ್ಮ ಹೆಸರನ್ನು ಹೇಳಿಕೊಳ್ಳುತ್ತಾ ತಮ್ಮ ಮಸ್ತಕಗಳನ್ನು ಅವಳ ಪಾದಗಳಿಗೆ ಒಬ್ಬೊಬ್ಬರೂ ಮುಟ್ಟಿಸಿದರು. ಕೃಷ್ಣೆಯೂ ಕ್ಷೌಮವನ್ನು (ಎಂದರೆ ಪಟ್ಟೆವಸ್ತ್ರವನ್ನು) ಉಟ್ಟು, ವಿವಾಹಕಂಕಣಸಮೇತಳಾಗಿ ಕುಂತಿಯಲ್ಲಿಗೆ ಬಂದು ಅವಳಿಗೆ ಅಭಿವಂದನ ಮಾಡಿದಳು.

ರೂಪ-ಲಕ್ಷಣಗಳಿಂದ ಸಂಪನ್ನಳಾದವಳೂ, ಶೀಲ-ಆಚಾರಗಳಿಂದ ಕೂಡಿದವಳೂ ಆದ ಆ ಸೊಸೆ ದ್ರೌಪದಿಯನ್ನು ಕುರಿತು ಪೃಥೆಯು (ಎಂದರೆ ಕುಂತಿಯು) ಆಶೀರ್ವಚನವನ್ನು ನೀಡಿದಳು:

"ಇಂದ್ರನಿಗೆ ಶಚಿಯು ಯಾವ ರೀತಿಯಿರುವಳೋ ನೀನೂ ಹಾಗಿರು. ಹಾಗೆಯೇ ಅಗ್ನಿಗೆ ಸ್ವಾಹಾದೇವಿಯು ಹೇಗೋ ಹಾಗಿರು. ರೋಹಿಣಿಯು ಚಂದ್ರನೊಂದಿಗೆ ಇರುವಂತೆಯೂ, ದಮಯಂತಿಯು ನಳನೊಂದಿಗೆ ಇರುವಂತೆಯೂ, ಭದ್ರೆಯು ಕುಬೇರನೊಂದಿಗಿರುವಂತೆಯೂ, ಅರುಂಧತಿಯು ವಸಿಷ್ಠರೊಂದಿಗಿರುವಂತೆಯೂ, ಲಕ್ಷ್ಮಿಯು ನಾರಾಯಣನೊಂದಿಗಿರುವಂತೆಯೂ ನೀನು ನಿನ್ನ ಗಂಡಂದಿರೊಂದಿಗಿರು. (ಏಳು ಆದರ್ಶದಂಪತಿಗಳನ್ನು ಇಲ್ಲಿ ಹೇಳಿದೆ). ನೀನು ಜೀವಸೂ ಹಾಗೂ ವೀರಸೂ ಆಗು. (ದೀರ್ಘಾಯುಸ್ಸುಳ್ಳ ಮಕ್ಕಳಿಗೆ ಜನ್ಮನೀಡುವವಳು ಜೀವಸೂ. ವೀರರಿಗೆ ಜನ್ಮಕೊಡತಕ್ಕವಳು ವೀರಸೂ). (ಸಾರವಾಗಿ, ನಿನ್ನ ಮಕ್ಕಳು ದೀರ್ಘಾಯುಗಳಾಗಲಿ, ವೀರರಾಗಲಿ). ಬಹುಸೌಖ್ಯವು ನಿನ್ನದಾಗಲಿ. ಒಳ್ಳೆಯ ಸಿರಿ ಒಳ್ಳೆಯ ಭೋಗ - ಇವೂ ನಿನ್ನವಾಗಲಿ. ಪತಿವ್ರತೆಯಾಗಿದ್ದುಕೊಂಡು ಯಜ್ಞಗಳಲ್ಲಿ ಪತಿಯರೊಂದಿಗೆ ಭಾಗವಹಿಸುವವಳಾಗು. ಅತಿಥಿಗಳು, ಅಭ್ಯಾಗತರು, ಸಾಧುಗಳು, ವೃದ್ಧರು, ಮಕ್ಕಳು, ಗುರುಹಿರಿಯರು - ಇವರುಗಳಿಗೆಲ್ಲ ಯಥೋಚಿತವಾದ ಸತ್ಕಾರಗಳನ್ನು ನೆರವೇರಿಸುತ್ತಲೇ ನಿನ್ನ ಕಾಲವು ಕಳೆಯಲಿ.

ಸೂಚನೆ : 28/1/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 74 (Yaksha prashne 74)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 73 ಶ್ರಾದ್ಧವು ನಷ್ಟವಾಗುವುದು ಯಾವಾಗ ?

ಉತ್ತರ - ಶ್ರೋತ್ರಿಯನಾದ ಋತ್ವಿಜ ಸಿಗದಿರುವಾಗ.

ಇಂದಿನ ದಿನಮಾನದಲ್ಲಿ ಕೇವಲ ಶಬ್ದವನ್ನು ಮಾತ್ರ ಕೇಳಿ ಅದರ ಅರ್ಥ ಸ್ವಲ್ಪವೂ ತಿಳಿದಿಲ್ಲ ಎಂಬ ಶಬ್ದಗಳಿದ್ದರೆ ಅವು ಶ್ರಾದ್ಧ ಮತ್ತು ಶ್ರೋತ್ರಿಯ ಎಂಬ ಶಬ್ದಗಳು. ಶ್ರದ್ಧೆಯಿಂದ ಮಾಡುವ ಕರ್ಮಕ್ಕೆ ಶ್ರಾದ್ಧ ಎಂದು ಕರೆಯುತ್ತಾರೆ. ಆದರೆ ಈ ಪದವು ಮೃತರಾದ ಮಾತಾಪಿತೃಗಳಿಗೆ ಮಾಡುವ ಪಿಂಡ ತರ್ಪಣಾದಿ ವಿಧಾನಗಳಿಗೆ ಬಳಕೆಯಾಗುತ್ತಿದೆ. ಯಾವದಿನ ತಂದೆ ಅಥವಾ ತಾಯಿ ಇಹಲೋಕವನ್ನು ತ್ಯಜಿಸಿರುತ್ತಾರೋ ಪ್ರತಿವರ್ಷ ಅದೇದಿನದಂದು ಅವರನ್ನು ಉದ್ದೇಶವಾಗಿಟ್ಟುಕೊಂಡು ಅವರ ಮಕ್ಕಳು ಈ ಕಾರ್ಯವನ್ನು ಮಾಡುತ್ತಾರೆ. ಇದು ಪ್ರತಿಯೊಬ್ಬ ಮಾನವನ ಕರ್ತವ್ಯ ಎಂಬುದಾಗಿ ಭಾರತೀಯ ಸಂಸ್ಕೃತಿಯಲ್ಲಿ ಭಾವಿಸಲಾಗುತ್ತದೆ. ಪಿತೃ ಋಣವನ್ನು ತೀರಿಸಿಕೊಳ್ಳಲು ಅವರ ಮರಣಾನಂತರ ಮಕ್ಕಳಿಗೆ ಇರುವ ಉತ್ತಮ ಅವಕಾಶವಿದಾಗಿದೆ. ಯಾವನು ತಂದೆತಾಯಿಯರು ಇರುವಾಗ ಚೆನ್ನಾಗಿ ನೋಡಿಕೊಳ್ಳುತ್ತಾನೋ, ಅಂತವನ ಜವಾಬ್ದಾರಿಯಲ್ಲಿ ಇದೂ ಒಂದಾಗಿದೆ. ಇಂತಹ  ಶ್ರಾದ್ಧವನ್ನು ಪರಿಪೂರ್ಣವಾಗಿ ಮಾಡಬೇಕಾದರೆ ಅಲ್ಲಿ ಭೋಜನಕ್ಕೆ ಬ್ರಾಹ್ಮಣರನ್ನು ಕರೆಸಲಾಗಿತ್ತದೆ. ಕರೆಯಲಾದ ಬ್ರಾಹ್ಮಣರನ್ನು ಗತಿಸಿದ ಪಿತೃರೂಪದಲ್ಲಿ ಅರ್ಚಿಸಲಾಗುತ್ತಾದೆ. ಪಿತೃ - ಪಿತಾಮಹ - ಪ್ರಪಿತಾಮಹ, ಅಪ್ಪ - ಅಜ್ಜ - ಮುತ್ತಜ್ಜ ಹೀಗೆ ಮೂವರನ್ನು ಬ್ರಾಹ್ಮಣರಲ್ಲಿ ಆವಾಹಿಸಲಾಗುತ್ತದೆ. ಅಲ್ಲಿ ಅವರಿಗೆ ಪೂಜನ ದಾನ ಭೋಜನ ಮೊದಲಾದವುಗಳಿಂದ ತೃಪ್ತಿಮಾಡಿಸಬೇಕಾಗುತ್ತದೆ. ಇವರ ತೃಪ್ತಿಯು ಗತಿಸಿದ ಪಿತೃವರ್ಗಕ್ಕೆ ತೃಪ್ತಿದಾಯಕವಾದುದು ಎಂದು ಭಾವಿಸಲಾಗುತ್ತದೆ. 

ಶ್ರಾದ್ಧಕ್ಕಾಗಿ ಬಂದ ಬ್ರಾಹ್ಮಣರು ಯಾವ ರೀತಿ ಉತ್ತಮರಾಗಿರುತ್ತಾರೋ ಅಷ್ಟು ಶ್ರಾದ್ಧ ಫಲಪ್ರದ ಎಂದೂ ಭಾವಿಸಲಾಗುತ್ತದೆ. ಆ ಶ್ರಾದ್ಧಕ್ಕೆ ಒಬ್ಬ ವೇದ ವೇದಾಂಗ ಪಾರಗನಾಗ ಬ್ರಾಹ್ಮಣನು ಪೂರ್ವಪಂಕ್ತಿಭೋಜನಕ್ಕೆ ಬಂದರೆ ಅದು ಅತ್ಯಂತ ಶ್ರೇಷ್ಠವಾದ ಶ್ರಾದ್ಧ ಎಂದು ಕರೆಯಲಾಗುತ್ತದೆ. ಅಂತಹ ಬ್ರಾಹ್ಮಣನನ್ನು ಶ್ರೋತ್ರಿಯ ಎಂದೂ ಕರೆಯುತ್ತಾರೆ. ಈ ಪರಿಯಾದ ವಿಪ್ರೋತ್ತಮನು ಯಾವಾಗ ನಮ್ಮ ಮನೆಗೆ ಬರುತ್ತಾನೋ ಅದೇ ದಿನ ಶ್ರಾದ್ಧವನ್ನು ಮಾಡಬೇಕು. ಆ ದಿನ ಪಿತೃಗಳ ವಾರ್ಷಿಕ ಶ್ರಾದ್ಧದ ದಿನವಲ್ಲದಿದ್ದರೂ ಶ್ರೋತ್ರಿಯರ ಆಗಮನವು ಆ ದಿನವನ್ನು ಶ್ರೇಷ್ಠವೆಂದು ಪರಿಗಣಿಸಿ, ಅಂದೇ ಶ್ರಾದ್ಧವನ್ನು ಆಚರಿಸಬಹುದು ಎನ್ನುವಷ್ಟರ ಮಟ್ಟಿಗೆ ಶ್ರೋತ್ರಿಯನ ಮಹತ್ತ್ವವನ್ನು ಶ್ರಾದ್ಧಕ್ಕೆ ಹೇಳಲಾಗಿದೆ. ಇಲ್ಲಿ ಯಕ್ಷನ ಪ್ರಶ್ನೆಯು ಅರ್ಥವಾಗಬೇಕಾದರೆ ಈ ವಿಷಯವನ್ನು ಅರ್ಥಮಾಡಿಕೊಂಡರೆ ಹೆಚ್ಚು ಸೂಕ್ತ. ಯಾವ ಶ್ರಾದ್ಧವು ಮಾಡಿದರೂ ಮಾಡದಂತೆಯೇ ಆಗುತ್ತದೆ? ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಒಬ್ಬ ಸರ್ವಗುಣಸಂಪನ್ನನಾದ ಶ್ರೋತ್ರಿಯ ಸಿಗದಿದ್ದಾಗ ಎಂಬ ಉತ್ತರವನ್ನು ಧರ್ಮರಾಜನು ನೀಡುತ್ತಾನೆ. ಈ ಪ್ರಶ್ನೆಯಿಂದ ನಮಗೆ ಅರ್ಥವಾಗುವುದು ಇಷ್ಟೇ ಶ್ರಾದ್ಧಕ್ಕೆ ಶ್ರೋತ್ರಿಯ ಎಷ್ಟು ಮುಖ್ಯ ಎಂದು. ಶ್ರೋತ್ರಿಯ ಎನಿಸಿಕೊಳ್ಳಬೇಕಾದರೆ ಆತ ವೇದ ಶಾಸ್ತ್ರ ಮೊದಲಾದ ವಿದ್ಯಾಸಂಪನ್ನನಾಗಿರಬೇಕು. ಅಷ್ಟೆ ಅಲ್ಲದೆ ವೇದಶಾಸ್ತ್ರಗಳ ತತ್ತ್ವವನ್ನು ತಿಳಿದವನಾಗಿರಬೇಕು. ಅಂತಹ ವಿದ್ಯಾಸಂಪನ್ನನೂ ವಿನಯ, ಶೀಲ, ಸಚ್ಚಾರಿತ್ರ್ಯ, ಸಂಸ್ಕಾರ,,  ಮೊದಲಾದವುಗಳಿಂದ ಕೂಡಿದವನಾಗಿರಬೇಕು. ಇವನೇ ನಿಜವಾಗಿಯೂ ಶ್ರಾದ್ಧಭೋಜನ ಮಾಡಲು ಅರ್ಹ. ಅವನಿಲ್ಲದಿದ್ದರೆ ಅಂದರೆ ಸಂಧ್ಯಾವಂದನಾದಿ ನಿತ್ಯಕರ್ಮಗಳನ್ನು ಮಾಡದ ಬ್ರಾಹ್ಮಣನನಿಂದ ಮಾಡಿದ ಶ್ರಾದ್ಧ ನಿಷ್ಫಲ ಅಷ್ಟೇ. ಇಂದಿನ ದಿನಗಳಲ್ಲಿ ಶ್ರೋತ್ರಿಯರೇ ಸಿಗುತ್ತಿಲ್ಲ. ಆದ್ದರಿಂದ ಇಂದು  ನಡೆಯುತ್ತಿರುವ ಶ್ರಾದ್ಧ ಎಷ್ಟರಮಟ್ಟಿಗೆ ಪರಿಪೂರ್ಣ ?  

ಸೂಚನೆ : 28/1/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ದೇವಾಸುರರ ಪ್ರಕೃತಿಗಳು (Devasurara Prakrtigalu)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ
(ಪ್ರತಿಕ್ರಿಯಿಸಿರಿ lekhana@ayvm.in)

ತ್ರಿಗುಣಗಳು ಮತ್ತು ದೇವಾಸುರರು  

ದೇವಾಸುರರಿಬ್ಬರ ಸಹಾಯದಿಂದಲೇ ಭಗವಂತನು ತನ್ನ ಸೃಷ್ಟಿ-ಸ್ಥಿತಿ-ಲಯ ವ್ಯಾಪಾರವನ್ನು ಮಾಡುವನು. ಈ ಮೂರರಲ್ಲಿಯೂ ಜೊತೆಜೊತೆಯಾಗಿಯೇ ಇರುತ್ತಾರೆ. ತ್ರಿಗುಣಗಳಲ್ಲಿ ದೇವತೆಗಳಲ್ಲಿ ಸತ್ವಗುಣಪ್ರಧಾನ, ರಜಸ್ತಮೋಗುಣಗಳು ಗೌಣ. ಅಸುರರಲ್ಲಿ ರಜಸ್ತಮೋಗುಣಗಳು ಪ್ರಧಾನ, ಸತ್ವಗುಣವು  ಗೌಣ. ರಜೋಗುಣ ಎನ್ನುವುದು ಎರಡೂಕಡೆಯಲ್ಲಿಯೂ ಸೇರುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸತ್ವಗುಣದ ಜೊತೆಯಲ್ಲಿದ್ದಾಗ ದೇವತಾಂಶ ಹೆಚ್ಚಾಗಿರುತ್ತದೆ. ತಮೋಗುಣದ ಕಡೆ ಸೇರಿದರೆ ಆಸುರೀಭಾವ ಹೆಚ್ಚಾಗುತ್ತದೆ. ಆದ್ದರಿಂದ ಮನುಷ್ಯ ಇದನ್ನನುಸರಿಸಿ ತನ್ನ ಪ್ರಕೃತಿಯಲ್ಲಿ ಸಮತೋಲನವನ್ನು ಸಾಧಿಸುವ ರೀತಿಯಲ್ಲಿ ಜೀವನ ಕ್ರಮವನ್ನು ಅಳವಡಿಸಿಕೊಳ್ಳಬೇಕು. 

 

ಅಸುರಸೃಷ್ಟಿಯ ಅವಶ್ಯಕತೆಯಾದರೂ ಇದೆಯೇ? 

 ಅಸುರರು ಏಕೆ ಇರಬೇಕು? ದೇವತೆಗಳು ಮಾತ್ರವಿದ್ದರೆ ಸಾಲದೇ? ಎಂಬ ಪ್ರಶ್ನೆ ಏಳಬಹುದು. ಮೂಗು ಸುವಾಸನೆಯನ್ನು ಮಾತ್ರ ಗ್ರಹಿಸಬೇಕು, ದುರ್ವಾಸನೆ ಗ್ರಹಿಸುವಂತಿಲ್ಲ ಎಂದು ಹೇಳಲಾದೀತೇ? ಅಂತೆಯೇ ಬ್ರಹ್ಮನಿಗೂ ದೇವತೆಗಳನ್ನು ಮಾತ್ರ ಸೃಷ್ಟಿಮಾಡಲು ಸಾಧ್ಯವಿಲ್ಲ. ಕೇವಲ ಸತ್ತ್ವಗುಣದಿಂದ ಸೃಷ್ಟಿಯು ಅಸಾಧ್ಯ. ರಜಸ್ತಮೋಗುಣಗಳ ಅತಿರೇಕದಲ್ಲಿ ಅಸುರರ ಉತ್ಪತ್ತಿ. ಹೀಗಾಗಿ ದೇವತೆಗಳ-ಅಸುರರ ಸಹಬಾಳ್ವೆ,  ಅಣ್ಣತಮ್ಮಂದಿರಂತೆ. ಒಂದೇ ತಂದೆಯ ಮಕ್ಕಳು ಎಂಬ ಮಾತಿಗೂ ಇದೆ ಅರ್ಥ. ಕ್ರಮಬದ್ಧವಾಗಿ ಕಾರ್ಯಸಾಗದೇ ವ್ಯತ್ಯಾಸವಾದಾಗ ಏನಾಗಬೇಕೆನ್ನುವುದಕ್ಕೂ ಒಂದು ಹಾದಿ ಬೇಕು. ಅದನ್ನು ನಡೆಸಿಕೊಡುವವರು ಅಸುರರೇ. ಒಬ್ಬರು ಎಚ್ಚರತಪ್ಪಿದರೆ ಮತ್ತೊಬ್ಬರು ತಮ್ಮ ಕೆಲಸವನ್ನು ಸಾಧಿಸಿಕೊಳ್ಳಲು ಕಾಯುತ್ತಲೇ ಇರುವರು. ಇಬ್ಬರಿಗೂ ಪೈಪೋಟಿ- ಯುದ್ಧ ನಡೆಯುತ್ತಲೇ ಇರುತ್ತದೆ. ಒಬ್ಬರು ಗೆದ್ದರೆ ಮತ್ತೊಬ್ಬರು ಸೋಲನ್ನಪ್ಪುವರೆನ್ನುವುದು ನಿತ್ಯಸತ್ಯ.  


ದೈವಾಸುರರಲ್ಲಿನ  ಭೇದ 

 ದೈವೀ ಮತ್ತು ಆಸುರೀ/ರಾಕ್ಷಸೀ ಪ್ರವೃತ್ತಿಗಳೆರಡೂ ಪ್ರಕೃತಿಯ ಅಭಿವ್ಯಕ್ತಿಗಳೇ. ಮನುಷ್ಯನ  ಚರ್ಯೆಯಲ್ಲಿ ಇವೆರಡರ ಮಿಶ್ರಣವನ್ನು ಕಾಣಬಹುದು. ಇದಕ್ಕೆ ಕಾರಣ ಜೀವಿಯ ಪೂರ್ವಕರ್ಮ. ಕರ್ಮದಂತೆ ಜನ್ಮ. ಪುಣ್ಯ ಕರ್ಮದಿಂದ ಸತ್ಕುಲದಲ್ಲಿ ಜನ್ಮವೆತ್ತಿದ ಉತ್ತಮನ ಲಕ್ಷಣಗಳನ್ನು ಶ್ರೀಕೃಷ್ಣನು ಗೀತೆಯಲ್ಲಿ ವರ್ಣಿಸುತ್ತಾನೆ:  ನಿರ್ಭಯವಾಗಿ ಸತ್ಯವನ್ನು ನುಡಿಯುವುದು-ಧರ್ಮವನ್ನಾಚರಿಸುವುದು, ವಿನಯ, ನಿರ್ಮಲಮನಸ್ಕನಾಗಿರುವುದು,  ಭಗವಂತನನ್ನು ಪಡೆಯುವ ಹಂಬಲ-ಸಾಧನೆ, ದಾನ, ಇಂದ್ರಿಯಸಂಯಮ, ಈಶ್ವರಪೂಜೆ, ಸ್ವಾಧ್ಯಾಯ, ತಪಸ್ಸು, ಸರಳತೆ, ಚಾಡಿಹೇಳುವ ಚಾಳಿ ಇಲ್ಲದಿರುವುದು-ಇವೆಲ್ಲ ಸಾತ್ತ್ವಿಕಗುಣಗಳು, ದೈವೀಸಂಪತ್ತು. 

ಇದರ ವಿರುದ್ಧವಾದ ಆಸುರೀಸಂಪತ್ತಿನ ದುರ್ಲಕ್ಷಣಗಳು: ಕಾಮಕ್ರೋಧಾದಿ ಅರಿಷಡ್ವರ್ಗಗಳು. ಇವು  ಪೂರ್ವಜನ್ಮ ಪಾಪದಫಲ- ಸಂಸಾರ ಬಂಧನ ಹಾಗೂ ನರಕಕ್ಕೆ ಅಣಿಮಾಡುವುವು.  ಕಾಮ-ಕ್ರೋಧ-ಲೋಭಗಳು ನರಕಕ್ಕೆ ಮೂರು ಬಾಗಿಲುಗಳಂತೆ. ಕೆಲವರಲ್ಲಿ ಇವು ಉಲ್ಬಣವಾಗಿದ್ದುದನ್ನು ಕಾಣಬಹುದು - ಕೀಚಕನಲ್ಲಿ ಕಾಮವುಪ್ರಧಾನ; ಕಂಸನಲ್ಲಿ ಕ್ರೋಧ; ದುರ್ಯೋಧನನಲ್ಲಿ ಲೋಭ. ಮೂರೂ ಸೇರಿದ್ದು ರಾವಣನಲ್ಲಿ! ಇವುಗಳ ಜೊತೆಗೆ ಮೋಹ-ಮದ-ಮಾತ್ಸರ್ಯ. ಈ ಗುಣಗಳು ಚೆನ್ನಾಗಿ ಊರಿದಾಗ ಫಲ - ಸತ್ಯ-ಈಶ್ವರ-ವೇದ ಯಾವುದನ್ನೂ ಒಪ್ಪುವುದಿಲ್ಲ, ಧರ್ಮವ್ಯವಸ್ಥೆ ಕೃತ್ರಿಮ ಎಂಬಿತ್ತ್ಯಾದಿ ನಾಸ್ತಿಕವಾದ, ಪ್ರತ್ಯಕ್ಷವೆಷ್ಟೋ ಅಷ್ಟೇ ಜೀವನವೆಂಬ ನಂಬಿಕೆ, ಜಗತ್ತು ಕೇವಲ ಪರಮಾಣುಸಂಘಟನೆ ಎನ್ನುವವಾದ(materialists),  ಇತ್ಯಾದಿ.  


ಮೈ-ಮನಗಳ ಮೇಲೆ ಅಸುರರ ದಾಳಿ   

ಕತ್ತಿಯನ್ನು ತರಕಾರಿ ಹೆಚ್ಚುವುದಕ್ಕೆ ಉಪಯೋಗಿಸುವಾಗ ಸ್ವಲ್ಪ ಎಚ್ಚರತಪ್ಪಿದರೆ ಬೆರಳನ್ನು  ಕೊಯ್ದುಕೊಳ್ಳುತ್ತೇವೆ. ರಕ್ತ ಸುರಿಯುತ್ತದೆ. ಬೆರಳನ್ನು ಕೊಯ್ದು ರಕ್ತಬರಿಸುವುದು ಕತ್ತಿಯ ಗುರಿಯಲ್ಲ. ಅದನ್ನು ಕ್ರಮವರಿತು ಉಪಯೋಗಿಸಿದ್ದಲ್ಲಿ ಸತ್ಪ್ರಯೋಜನವಾಗುತ್ತಿತ್ತು. ಅಂತೆಯೇ ದೇವತೆಗಳ ಸಹಾಯದಿಂದಾಗುವುದು ಸತ್ಪ್ರಯೋಜನ, ಆದರೆ ಅಜಾಗರೂಕ ವರ್ತನೆಯಾದರೆ ಅಸುರರು ಮುನ್ನುಗ್ಗಿ ವಿಪರೀತ ಪರಿಣಾಮ. ಎಚ್ಚರಿಕೆ ವಹಿಸಿದಾಗ ಅಸುರರ ಹಿನ್ನಡೆ, ದೇವತೆಗಳ ಮುನ್ನಡೆ. ಇದೇ ದೇವಾಸುರರ ನಡುವಣ ಸಾಗುವ ಯುದ್ಧದ ಪರಿಣಾಮ. 

ಹಾಗೆಯೇ ಇನ್ನು ನಮ್ಮ ಮನಸ್ಸಿನ ಮೇಲಾಗುವ ಪರಿಣಾಮವನ್ನು ಗಮನಿಸಿದರೆ, ಪ್ರಮಾದಕ್ಕೆ ವಶರಾದರೆ (ಎಚ್ಚರತಪ್ಪಿದರೆ) ಸಮಯಕಾಯುತ್ತಿರುವ ಅಸುರರು ನಮ್ಮ ಮೇಲೆ ದಾಳಿಮಾಡಿ ನಮ್ಮಲ್ಲಿ ದುಷ್ಟವಾದ ಭಾವನೆಗಳನ್ನು ಅಂದರೆ ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಎಬ್ಬಿಸುವರು. ಅಂತೆಯೇ ಬುದ್ಧಿಯಲ್ಲಿ ವಿಕೃತಿಯನ್ನು ಒಡ್ಡುವರು- ಪರಿಣಾಮ, ನಾಸ್ತಿಕವಾದ ರುಚಿಸತೊಡಗುವುದು. ಸತ್ಯ-ಧರ್ಮದಲ್ಲಿ ಅಸಡ್ಡೆ ಹುಟ್ಟುವುದು. 

 

ತಿಳಿಯದಿದ್ದರೂ ಕೆಲಸ ನಡೆಯುವುದೇ? 

ನಮ್ಮ ಪ್ರಕೃತಿಯಲ್ಲಿ ಭೌತಿಕ-ದೈವಿಕ-ಆಧ್ಯಾತ್ಮಿಕ ಏಳಿಗೆಗೆ ಪೋಷಕವಾದ ಧರ್ಮ ಒಂದುಂಟು. ಆ ಧರ್ಮದ ರಕ್ಷಕರೇ ದೇವತೆಗಳು.  ನಮ್ಮ ದೈನಂದಿನ ಕರ್ಮಗಳಲ್ಲಿ ದೇವತೆಗಳ ಪಾತ್ರದ ಅರಿವು ನಮಗಿಲ್ಲದಿರಬಹುದು. ಆದರೂ ತಮಗೆ ವಿಧಿಸಿರುವ ಕರ್ತವ್ಯವನ್ನು ಅವರು ನಿರ್ವಹಿಸುತ್ತಲೇ ಇರುವರು. ಏಕೆಂದರೆ ಇವರೆಲ್ಲರೂ ಭಗವಂತನಿಂದ ತನ್ನ ಸೃಷ್ಟಿ-ಸ್ಥಿತಿ-ಲಯ ಕಾರ್ಯನಿರ್ವಹಣೆಗೆ ನಿಯಮಿಸಲ್ಪಟ್ಟವರು. ಉದಾಹರಣೆಗೆ Passport officeಗೆ ಅಪ್ಲಿಕೆಷನ್ ಕೊಟ್ಟರೆ ಸಾಕು. ಅಲ್ಲಿಯ ಕಾರ್ಯವಿಧಾನಗಳ ಪೂರ್ಣಅರಿವು ನಮಗೆ ಇರಬೇಕೆಂದಿಲ್ಲ. ಅದಕ್ಕಾಗಿ ನಿಯಮಿಸಲ್ಪಟ್ಟವರ ಹೊಣೆಗಾರಿಕೆ ಅದು. ಅಂತೆಯೇ ನಮ್ಮಲ್ಲೂ ಕೂಡ ದೇವಾಸುರರಿಬ್ಬರೂ ಭಗವಂತನ ಆಜ್ಞಾನುಸಾರ ಕಾರ್ಯಗಳನ್ನು ನಿರ್ವಹಿಸುವರು. ನಮಗೆ ಅದರ ಅರಿವಿರಲಿ-ಇಲ್ಲದಿರಲಿ ನಾವು ಒಪ್ಪಲಿ-ಒಪ್ಪದಿರಲಿ ಅವರವರ ಕಾರ್ಯಗಳು ನಡೆಯುತ್ತಲೇ ಇರುತ್ತವೆ. ಆದ್ದರಿಂದ ಇಬ್ಬರ ಸಹಕಾರವೂ ನಮ್ಮ ಜೀವನದ ಆಗುಹೋಗುಗಳಿಗೆ ಅವಶ್ಯಕ.  


ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  27/1/2024 ರಂದು ಪ್ರಕವಾಗಿದೆ.

Wednesday, January 24, 2024

ಋಷಿಗಳಾರು? ರಾಕ್ಷಸರಾರು? ( Rsigalaru? Raksasararu?)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)


ವಿಶ್ವಾಮಿತ್ರರು ಮಾಡುತ್ತಿದ್ದ ಒಂದು ಯಜ್ಞ. ಅದಕ್ಕೆ ಪದೇ ಪದೇ ವಿಘ್ನಗಳನ್ನೊಡ್ಡುತ್ತಿದ್ದರು, ರಾಕ್ಷಸರು. ಯಜ್ಞವನ್ನು ಸುಸೂತ್ರವಾಗಿ ಸಂಪನ್ನಗೊಳಿಸಲು ಅವರ ಸಂಹಾರವು ಅನಿವಾರ್ಯವಾಗಿತ್ತು, ವಿಶ್ವಾಮಿತ್ರರಿಗೆ. ಎಂದೇ ದಶರಥನ ಬಳಿ ಬಂದು, ಆತನ ಪುತ್ರರಾದ ರಾಮ-ಲಕ್ಷ್ಮಣರನ್ನು ತಮ್ಮೊಂದಿಗೆ ಕರೆದೊಯ್ದರು. ಯಜ್ಞ ಮಾಡಲು ಏರ್ಪಾಡಾಗಿದ್ದ ಸಿದ್ಧಾಶ್ರಮವನ್ನು ತಲುಪಿದರು. ಆರು ದಿನಗಳ ಯಜ್ಞವದು. ಯಜ್ಞದೀಕ್ಷೆ ತೆಗೆದುಕೊಂಡಿದ್ದ ವಿಶ್ವಾಮಿತ್ರರಿಗೆ ಅಷ್ಟು ದಿನಗಳೂ ಮೌನವ್ರತ. ವೀರಸಹೋದರರು ಹಗಲು-ರಾತ್ರಿ ಆಹಾರ-ನಿದ್ರೆಗಳನ್ನು ಬಿಟ್ಟು ಆ ಯಜ್ಞದ ರಕ್ಷಣೆಯಲ್ಲಿ ತೊಡಗಿದರು. ಕೊನೆಯ ದಿನ ಪೂರ್ಣಾಹುತಿ. ಆಗ ಬಂದಿತು ಮಾರೀಚ, ಸುಬಾಹು ಇತ್ಯಾದಿ ರಾಕ್ಷಸರ ತಂಡ. ರಕ್ತರಾಶಿಯನ್ನು ಯಜ್ಞಕುಂಡಕ್ಕೆ ಹಾಕಿ ಅದನ್ನು ಹಾಳುಮಾಡುವುದು ಅದರ ಉದ್ದೇಶ. ಆದರೆ ಈ ವೀರರ ಧನುಸ್ಸಿನ ಶಕ್ತಿಯ ಮುಂದೆ ಆ ರಾಕ್ಷಸರು ನಿಲ್ಲದಾದರು. ಮಾರೀಚ ದೂರದ ಸಮುದ್ರಕ್ಕೆ ಹೋಗಿ ಬಿದ್ದ. ಸುಬಾಹು ಸತ್ತ. ಇನ್ನಿತರರೂ ಧ್ವಂಸಗೊಂಡರು. ಅಂತೂ ಯಜ್ಞರಕ್ಷಣೆಯಾಯಿತು.

ಸಾಮಾನ್ಯವಾಗಿ ಈ ಕಥಾಭಾಗ ಎಲ್ಲರಿಗೂ ತಿಳಿದದ್ದೇ. ಆದರೂ ಈ ಒಂದು ಪ್ರಶ್ನೆಯನ್ನು ಯಾರೂ ಕೇಳಿದಂತಿಲ್ಲ: ವಿಶ್ವಾಮಿತ್ರರು ಯಜ್ಞವನ್ನು ಏತಕ್ಕಾಗಿ ಮಾಡಹೊರಟಿದ್ದರು? ಆಗುತ್ತಿದ್ದ ಧ್ವಂಸಕಾರ್ಯದ ಸುದ್ದಿಯೊಂದಿಗೆ ಅವರು ದಶರಥನ ಬಳಿ ಹೋದಾಗ ಆತನೂ ಈ ಪ್ರಶ್ನೆ ಕೇಳಲಿಲ್ಲ; ಬೇರೆಡೆ ಎಲ್ಲಾದರೂ ಮಾಡಬಾರದೇ ಎಂಬ ಬುದ್ಧಿವಾದ ಹೇಳಲಿಲ್ಲ. ಆತನು ಮೊದಲು ಹೇಳಿದ್ದಿಷ್ಟೇ: ನನ್ನ ಪ್ರಿಯಪುತ್ರ ರಾಮ ಬಹಳ ಚಿಕ್ಕವನು; ಅವನು ಈ ಕಾರ್ಯ ಮಾಡಲಾರ; ನಾನೇ ಬರುತ್ತೇನೆ - ಎಂದು. ವಸಿಷ್ಠರೂ ಅದರ ಬಗ್ಗೆ ಪ್ರಶ್ನೆ ಎತ್ತಲಿಲ್ಲ. ದಶರಥನು ಪುತ್ರಕಾಮೇಷ್ಟಿ ಮಾಡಿರುವುದರ ಬಗ್ಗೆ ರಾಮಾಯಣದ ಮೊದಲಲ್ಲೇ ನಾವು ಕೇಳಿರುತ್ತೇವೆ; ಅದು ಸಂತಾನಪ್ರಾಪ್ತಿಯ ಕಾಮನೆಯೊಂದಿಗೆ ಮಾಡಿದ ಯಜ್ಞ. ಹಾಗಾದರೆ ಇಲ್ಲಿ ವಿಶ್ವಾಮಿತ್ರರ ಕಾಮನೆಯೇನು?

ಧರ್ಮದ ಸ್ಥಾಪನೆ-ರಕ್ಷಣೆ, ಎಲ್ಲರ ಹಿತವೇ ಆ ಕಾಮನೆ. ದೊರೆತನವನ್ನು ತೊರೆದು ತಪಸ್ವಿಗಳಾಗಿದ್ದ ಅವರಿಗೆ ಭೌತಿಕ-ಕಾಮನೆಗಳೇನಿರಲಿಲ್ಲ. ಭೌತಿಕವಾದ ಜಗತ್ತನ್ನೂ ಸೇರಿ ಎಲ್ಲವನ್ನು ಧಾರಣೆ ಮಾಡುತ್ತಿರುವ ಧರ್ಮವನ್ನು ಉಳಿಸಿ-ಬೆಳೆಸುವ ಹಿರಿದಾದ ಆಸೆ ಅವರದು. ಧರ್ಮದ ಮೌಲಿಕ ಪಾತ್ರವನ್ನು ಶ್ರೀರಂಗಮಹಾಗುರುಗಳ ಈ ವಚನದಲ್ಲಿ ಕಾಣಬಹುದು: "ಧರ್ಮವು ಐಹಿಕ-ಪಾರಮಾರ್ಥಿಕ ಬಾಳಾಟಗಳಿಗೆ ಸೇತುವಾಗಿದೆ". ಕಾರಣವೆಂಬುದಿಲ್ಲದೆ ಧರ್ಮಕ್ಕಾಗಿ ತಮ್ಮೆಲ್ಲ ಶಕ್ತಿಯನ್ನು ಬಳಸುವವರು ಋಷಿಗಳು. ಧರ್ಮ್ಯವಾದದ್ದರಲ್ಲೇ ನಲಿವವರು ಅವರು.

ಋಷಿಗಳೇನು ರಾಕ್ಷಸರ ಸಂಪತ್ತನ್ನೋ ರಾಜ್ಯವನ್ನೋ ಲಪಟಾಯಿಸಲು ಈ ಯಜ್ಞಗಳನ್ನು ಮಾಡುತ್ತಿರಲಿಲ್ಲವಲ್ಲ! ಹಾಗಿದ್ದಲ್ಲಿ ರಾಕ್ಷಸರಿಗೇಕೆ ಋಷಿಗಳ ಯಜ್ಞಗಳನ್ನು ಧ್ವಂಸಮಾಡುವ ಮನಸ್ಸು? - ಎಂದರೆ, ಕಾರಣವಿಲ್ಲದೆ ಪರಹಿತವನ್ನು ಧ್ವಂಸಮಾಡುವವರು, ರಾಕ್ಷಸರು. ಭರ್ತೃಹರಿಯು ತನ್ನ ಒಂದು ಸುಭಾಷಿತದಲ್ಲಿ ಅಂತಹವರನ್ನು "ಏನೆಂದು ಕರೆಯಬೇಕೆಂದು ನಮಗೆ ತಿಳಿದಿಲ್ಲ" (ತೇ ಕೇ ನ ಜಾನೀಮಹೇ) ಎಂದಿದ್ದಾನೆ!

ಹೀಗೆ ಯಜ್ಞದ ಸಂದರ್ಭದಲ್ಲಿ ನಾವು ತಿಳಿಯಬಹುದಾದದ್ದು ಎರಡು ಲಕ್ಷಣಗಳು:ಅಕಾರಣವಾಗಿ ಧರ್ಮದ ಸ್ಥಾಪನೆಗಾಗಿ ಯಜ್ಞ ಮಾಡುವವರೇ ಋಷಿಗಳು. ಅಕಾರಣವಾಗಿ ಧರ್ಮವನ್ನು ಉನ್ಮೂಲನಗೊಳಿಸಲು ಯತ್ನಿಸುವವರೇ ರಾಕ್ಷಸರು. 

ಸೂಚನೆ: 24/1/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 73 (Yaksha prashne 73)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 72 ರಾಷ್ಟ್ರವು ಮೃತವಾಗುವುದು ಯಾವಾಗ ?

ಉತ್ತರ - ರಾಜನೇ ಇಲ್ಲದಿರುವಾಗ.

ರಾಜ ಮತ್ತು ರಾಷ್ಟ್ರ ಇವೆರಡು ಜೋಡಿಪದಗಳು. ಒಂದನ್ನೊಂದು ಬಿಟ್ಟು ಇರುವುದಿಲ್ಲ. ತಾಯಿ ಮಗು ಎಂಬ ಪದಗಳಂತೆ. ತಾಯಿಯಿಲ್ಲದೆ ಮಗು ಬೆಳೆಯದು. ತಾಯಿಯಿಲ್ಲದಿದ್ದರೆ ಮಗು ಬಡವಾಗುವುದು. ಮಗುವಿನ ಸಮಸ್ತವಾದ ಬೆಳವಣಿಗೆ ಅಥವ ಶಿಥಿಲತೆ ತಾಯಿಯ ಮೇಲೆ ನಿಂತಿದೆ. ಆದ್ದರಿಂದ ಮಗುವಿನ ಸಮಸ್ತ ಹೊಣೆಗಾರಿಕೆ ತಾಯಿಯ ಮೇಲೆಯೇ ನಿಂತಿದೆ. ಅಂತೆಯೇ ರಾಷ್ಟ್ರವು ಒಂದು ಮಗುವಿದ್ದಂತೆ. ಅದನ್ನು ಸಾಕಿ ಸಲಹುವವನು ರಾಜನೆ ತಾನೆ. ರಾಷ್ಟ್ರವನ್ನು ಪೋಷಿಸಬೇಕು ಮತ್ತು ಪಾಲಿಸಬೇಕು. ರಾಜನು ಹೇಗಿರಬೇಕು? ಎಂಬುದಕ್ಕೆ ಶ್ರೀರಂಗ ಮಹಾಗುರುಗಳು ಹೀಗೊಂದು ಮಾತನ್ನು ಹೇಳುತ್ತಿದ್ದರು. "ದೇಶವನ್ನು ಸುಸ್ಥಿತಿಯಲ್ಲಿಟ್ಟು ಕಾಪಾಡಲು ರಾಜನು ಬೇಕು. ಆ ರಾಜನು ಕೇವಲ ಇಂದ್ರಿಯಾರಾಮನಾದರೆ ಸಾಲದು. ಆತ್ಮಾರಾಮನೂ ಆಗಿರಬೇಕು. ಆದ್ದರಿಂದಲೇ 'ಆತ್ಮವಾನ್ ರಾಜಾ' ಎಂದು ಆತ್ಮವಂತನೇ ರಾಜನಾಗಿರಬೇಕು ಎಂಬ ಮಾತು" ಎಂದು. ಈ ಮಾತು ಪ್ರಸ್ತುತ ಯಕ್ಷಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ಕೀಲಿಕೈ ಇದ್ದಂತೆ. ರಾಜನು ಯಾವ ರೀತಿಯ ಆದರ್ಶನಾಗಿರಬೇಕು? ಎಂಬ ವಿಷಯಗಳನ್ನು ತಿಳಿದರೆ ಆ ರಾಷ್ಟ್ರ ನಿಜವಾಗಿಯೂ ಆತ್ಮರಾಜ್ಯವೇ ಆಗುವುದು. ಅತ್ಯಂತ ಸಮೃದ್ಧರಾಷ್ಟ್ರವೇ ಆಗುವುದು. ಇಂದು ಯಾವುದೇ ರಾಷ್ಟ್ರದಲ್ಲಿ ಕ್ಷಾಮ, ದಾರಿದ್ರ್ಯ, ಅಶಾಂತಿ ಮೊದಲಾದ ವಿಪರೀತ ಲಕ್ಷಣಗಳು ಕಾಣಲು ಇಂತಹ ಆದರ್ಶ ರಾಜನಿಲ್ಲದಿರುವುದೇ ಆಗಿದೆ. ರಾಜನ ಮೇಲೆಯೇ ರಾಷ್ಟ್ರ ನಿಂತಿದೆ, ಅದು ಮರಣಸದೃಶವೋ? ಅಥವಾ ಸ್ವರ್ಗಸದೃಶವೋ ? ಎಂದು. ಇಲ್ಲಿ ಯಕ್ಷನ ಪ್ರಶ್ನೆಯು ಕೇವಲ ರಾಜನು ಇರುವುದು ಮಾತ್ರ ರಾಷ್ಟ್ರದ ಲಕ್ಷಣ ಎಂಬುದನ್ನು ತೋರಿಸುವ ಉದ್ದೇಶವಲ್ಲ. ಎಂತಹ ರಾಜನು ಇದ್ದರೆ ಅದು ಸಮೃದ್ಧ? ಎಂತಹ ರಾಜನಿದ್ದರೆ ಮೃತಪ್ರಾಯ ಎಂಬುದನ್ನು ತೋರಿಸುವುದು. ರಾಜನು ಒಬ್ಬ ನಾಮ್ಕಾವಾಸ್ತೆ ಇದ್ದರೆ ಸಾಲದು. ಆತ ರಾಷ್ಟ್ರದ ಅಸ್ತಿತ್ವದ ಸಂಕೇತರೂಪನಾಗಿ ಇರಬೇಕು ಎಂಬ ಅಶಯವನ್ನು ಬಿತ್ತರಿಸುವುದು ಧರ್ಮರಾಜನ ಉತ್ತರದಲ್ಲಿದೆ ಎಂಬ ಅಂಶವನ್ನೂ ನಾವಿಲ್ಲಿ ಗಮನಿಸಬೇಕಾದುದು ಅಷ್ಟೆ ಮುಖ್ಯವಾಗಿದೆ. 

 ಮಾನವಶರೀರವನ್ನು ಆಧಾರವಾಗಿಟ್ಟುಕೊಂಡು ಈ ರಾಜ ಮತ್ತು ರಾಷ್ಟ್ರದ ವ್ಯವಸ್ಥೆಯು ಬಂದಿದೆ. ಶರೀರವು ಆರೋಗ್ಯವಾಗಿರಬೇಕಾದರೆ ಅದು ಆತ್ಮನ ಹಿಡಿತದಲ್ಲಿ ಇರಲೇಬೇಕು. ಆತ್ಮಸಂಯಮವಿಲ್ಲದಿದ್ದಾಗ ಶರೀರವು ಇದ್ದರೂ ಆ ಶರೀರಕ್ಕೆ ಯಾವುದೇ ಮೌಲ್ಯವಿರುವುದಿಲ್ಲ. ಒಬ್ಬ ಹುಚ್ಚು ಹಿಡಿದ ವ್ಯಕ್ತಿ ಇದ್ದಾನೆ. ಅವನಿಗೆ ಆತ್ಮವೂ ಇದೆ. ಶರೀರದ ಎಲ್ಲಾ ಅಂಗಗಳೂ ಇವೆ. ಆದರೆ ಅವನ ಆತ್ಮವೇ ಹಿಡಿತದಲ್ಲಿ ಇಲ್ಲದಿರುವುದರಿಂದ ಇಂದ್ರಿಯ ಮನಸ್ಸು ಮತ್ತು ಉಳಿದ ಯಾವ ಶರೀರದ ಭಾಗಗಳೂ ಅವನ ಇಚ್ಛೆಗೆ ಅನುಸಾರವಾಗಿ ನಡೆಯುವುದಿಲ್ಲ. ಅದರ ಪರಿಣಾಮವಾಗಿ ಆತ ಸಮಾಜದಲ್ಲಿ ನಗಣ್ಯನಾಗುತ್ತಾನೆ. ಹಾಗಾಗಿ ರಾಷ್ಟ್ರದಲ್ಲಿ ರಾಜನಾದವನ ಪಾತ್ರವೂ ಅಷ್ಟೇ ಮುಖ್ಯವಾಗಿರುತ್ತದೆ. ರಾಜನಾದವನು ಭಗವಂತನ ಶಾಸನವನ್ನು ಅಂದರೆ ಈ ಸಮಗ್ರಸೃಷ್ಟಿಯ ಇಂಗಿತವನ್ನು ಅರ್ಥಮಾಡಿಕೊಂಡು ರಾಷ್ಟ್ರವನ್ನು ಮುನ್ನಡೆಸಬೇಕಾದವನಾಗಿರಬೇಕು. ಸೃಷ್ಟಿಯ ಆಶಯಕ್ಕೆ ವಿರೋಧವಾಗುವಂತೆ ವರ್ತಿಸಿದರೆ ಆ ರಾಷ್ಟ್ರ ಅರಾಜಕತೆಯನ್ನು ಕಾಣುತ್ತದೆ. ಅದು ಸತ್ತಂತೆ. ಶತ್ರುವಶವಾಗಲು ಸನ್ನಿಹಿತವಾಗಿದೆ ಎಂಬುದೇ ತಾತ್ಪರ್ಯ. 

ಸೂಚನೆ : 21/1/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 72 ದ್ರೌಪದಿಯ ವಿವಾಹಕ್ಕೆ ಸಿದ್ಧತೆ (Vyaasa Vikshita - 72 Draupadiya Vivahakke Siddhate)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಹೇಗೆ ಭಗವದ್ಗೀತೆಯಲ್ಲಿ, ತಾನು ಹೇಳುವುದನ್ನೆಲ್ಲಾ ಹೇಳಿಯಾದ ಮೇಲೆ ಶ್ರೀಕೃಷ್ಣನು ಅರ್ಜುನನಿಗೆ 'ಯಥೇಚ್ಛಸಿ ತಥಾ ಕುರು' (ನಿನಗೆ ಬೇಕಾದಂತೆ ಮಾಡು) ಎಂದನೋ, ಹಾಗೆಯೇ ಇಲ್ಲಿ ವ್ಯಾಸರೂ ದ್ರುಪದನಿಗೆ "ಇಷ್ಟಂ ಕುರುಷ್ವ" (ನಿನಗೆ ಯಾವುದು ಇಷ್ಟವೋ ಇದನ್ನು ಮಾಡು) ಎಂದರು. (ಎಂದರೆ ಬಲವಂತವಿಲ್ಲ.)

ಆಗ ದ್ರುಪದನು ಹೇಳಿದನು: "ಮಹರ್ಷಿಗಳೇ, ತಮ್ಮ ಮಾತನ್ನು ಕೇಳುವುದಕ್ಕೆ ಮೊದಲು ನಾನು ದ್ರೌಪದಿಯನ್ನು ಒಬ್ಬನಿಗೇ ಕೊಡತಕ್ಕದ್ದೆಂದು ಭಾವಿಸಿದ್ದೆ. ದೈವವಿಹಿತವಾದದ್ದನ್ನು ಬೇರೆಯಾಗಿಸಲು ಸಾಧ್ಯವಿಲ್ಲ. ಆದ್ದರಿಂದ ವಿಹಿತವಾದದ್ದನ್ನು ಮಾಡುವುದೇ ಯುಕ್ತವಾದದ್ದು. ದೈವವೇ ಹಾಕಿರುವ ಗಂಟನ್ನು ಬದಲಿಸಲು ಸಾಧ್ಯವಿಲ್ಲ. ಇಲ್ಲಿ ನಾನು ಮಾಡಿರುವುದೆಂಬುದಾಗಿ ಏನೂ ಇಲ್ಲ.

ಒಬ್ಬ ವರನಿಗಾಗೆಂದೇ ಒಂದು ನಿಮಿತ್ತ(ವ್ಯವಸ್ಥೆ)ವನ್ನು ಮಾಡಿತ್ತು; ಆದರೀಗ ದೈವನಿಶ್ಚಿತವನ್ನು ಮಾಡುವುದೇ ಯುಕ್ತವಾಗಿದೆ. ಹಿಂದೆ ಕೃಷ್ಣೆಯೇ ಅನೇಕ ಬಾರಿ "ಪತಿಯನ್ನು ಕೊಡು" ಎಂಬುದಾಗಿ ಕೇಳಿಕೊಂಡಿರುವಳಷ್ಟೆ; ಅದಕ್ಕೇ, ಭಗವಂತನೇ "ಹೀಗೆಯೇ ಯುಕ್ತ"ವೆಂಬುದಾಗಿ ಹೇಳಿರುವನು. ಇಲ್ಲಿ ಉತ್ತಮವಾದದ್ದು ಯಾವುದೆಂಬುದನ್ನು ಆತನೇ ಬಲ್ಲ (ದೇವೋ ಹಿ ವೇತ್ತಾ). ಈ ಪ್ರಕಾರವಾಗಿ ಶಂಕರನೇ ವಿಧಾನ ಮಾಡಿರುವನೆಂದಾದಲ್ಲಿ, ಇದು ಧರ್ಮವೋ ಅಧರ್ಮವೋ ನನ್ನದಂತೂ ಅಪರಾಧವಿಲ್ಲಿಲ್ಲ. ಆದ್ದರಿಂದ ವಿಧಿಪೂರ್ವಕವಾಗಿ ಈ ಪಾಂಡವರು ಸಂತೋಷದಿಂದ ಮದುವೆಯಾಗಲಿ. ಕೃಷ್ಣೆಯು ಇವರಿಗೇ ವಿಹಿತಳಾಗಿದ್ದಾಳಷ್ಟೆ."

ಆ ಬಳಿಕ ವ್ಯಾಸರು ಧರ್ಮರಾಜನಿಗೆ ಹೇಳಿದರು: "ಪಾಂಡುಪುತ್ರನೇ, ಇಂದೇ ಒಳ್ಳೆಯ ದಿನವಾಗಿದೆ. ಚಂದ್ರನಿಂದು ಪುಷ್ಯನಕ್ಷತ್ರಯೋಗವನ್ನು ಹೊಂದುತ್ತಿದ್ದಾನೆ. (ಒಂದರ್ಥದಲ್ಲಿ, ಚಂದ್ರವಂಶದವನಾದ ಯುಧಿಷ್ಠಿರನಿಗೆ  ಪುಷ್ಟಿಪ್ರದವಾದ ಸಂನಿವೇಶ; ಪುಷ್ಯವು ಪೋಷಣಪ್ರದ). ಆದ್ದರಿಂದ ನೀನು ಮೊದಲು ಕೃಷ್ಣೆಯ ಕೈಹಿಡಿ." – ಎಂದು.

ಆಮೇಲೆ ದ್ರುಪದನು ತನ್ನ ಪುತ್ರ ಧೃಷ್ಟದ್ಯುಮ್ನನೊಂದಿಗೆ ವಧೂವರರಿಗೆಂದು ಹೇಳಲಾದ ಉತ್ತಮ ವಸ್ತುಗಳನ್ನೆಲ್ಲ ತರಿಸಿದನು. ಮಗಳಾದ ದ್ರೌಪದಿಯ ಮಂಗಳಸ್ನಾನವು ಮುಗಿಯಲು, ನಾನಾರತ್ನಮಯವಾದ ಆಭರಣಗಳಿಂದ ಅವಳನ್ನು ಅಲಂಕರಿಸಲಾಯಿತು.

ಆಮೇಲೆ ವಿವಾಹವನ್ನು ನೋಡಲು ರಾಜನ ಮಿತ್ರರೆಲ್ಲರೂ ಅತ್ಯಂತ ಸಂತುಷ್ಟರಾಗಿ ಅಲ್ಲಿಗೆ ಬಂದರು. ಮಂತ್ರಿಗಳೂ ದ್ವಿಜರೂ ಪುರವಾಸಿಗಳಾದ ಪ್ರಧಾನರೂ ಬಂದರು. ಅಗ್ರ್ಯಜನರಿಂದ (ಎಂದರೆ ಶ್ರೇಷ್ಠಪುರುಷರಿಂದ) ಸುಶೋಭಿತವಾಯಿತು, ದ್ರುಪದನ ಮನೆ.  ಅರಳಿದ ಅಬ್ಜ(ಗಳ ತೋರಣ)ಗಳಿಂದಾದ ಅಲಂಕಾರವಾಯಿತು, ಅಲ್ಲಿಯ ಅಂಗಣದಲ್ಲಿ. ಅಲ್ಲಿ ನೆರೆದಿದ್ದ ಸೈನ್ಯಸ್ತೋಮ ಹಾಗೂ ರತ್ನರಾಶಿ - ಇವುಗಳಿಂದಾಗಿ ಆಶ್ಚರ್ಯಕರವಾಗಿದ್ದು, ಆ ಅಂಗಣವು ಬೆಳಗುತ್ತಿತ್ತು - ನಿರ್ಮಲವಾದ ನಕ್ಷತ್ರಗಳಿಂದ ಕೂಡಿದ ಆಕಾಶವು ಹೇಗೆ ಕಂಗೊಳಿಸುವುದೋ ಹಾಗೆ.

ಆಮೇಲೆ ಆ ಯುವಕರಾದ ಪಾಂಡುಪುತ್ರರು ಸ್ನಾನ ಹಾಗೂ ಮಂಗಲಕ್ರಿಯೆಗಳನ್ನು ಮುಗಿಸಿಕೊಂಡರು. ಸಂತೋಷದಿಂದ ತುಂಬಿದ್ದ ಅವರು, ಚೆನ್ನಾಗಿ ವಸ್ತ್ರಗಳಿಂದಲೂ ಆಭೂಷಣಗಳಿಂದಲೂ ಅಲಂಕೃತರಾದರು. ಬಹಳ ಬೆಲೆಬಾಳುವ ಅವರ ವೇಷವಸ್ತ್ರಗಳ ಮೇಲೆ ಚಂದನ ರಸದ ಸಿಂಪಡಿಕೆಯಾಯಿತು. ಅಗ್ನಿಗೆ ಸಮಾನವಾದ ತೇಜಸ್ಸುಳ್ಳವರು, ಅವರಿಗೆ ಪುರೋಹಿತನಾಗಿ ಬಂದ ಧೌಮ್ಯರು. ಅಣ್ಣನು ಮೊದಲು, ತಮ್ಮನು ಆಮೇಲೆ - ಎಂಬ ಕ್ರಮದಲ್ಲಿ, ಅವರೆಲ್ಲರೂ ಧೌಮ್ಯರೊಂದಿಗೆ ಕ್ರಮವಾಗಿ ಸಭೆಯನ್ನು ಪ್ರವೇಶಿಸಿದರು - ಮಹಾವೃಷಭಗಳು ಗೋಶಾಲೆಗೆ ಬಂದು ಸೇರುವಂತೆ.

ವೇದಗಳಲ್ಲಿ ಪಾರಂಗತರಾಗಿದ್ದರು ಆ ಧೌಮ್ಯರು. ಮಂತ್ರಜ್ಞರಾದ ಅವರು ಮಂತ್ರಗಳೊಂದಿಗೆ ಮೊದಲು ಯಜ್ಞವೇದಿಕೆಗಳಲ್ಲಿ ಅಗ್ನಿಯು ಜ್ವಲಿಸುವಂತೆ ಮಾಡಿದರು.

ಸೂಚನೆ : 21/1/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕರ್ಮಗಳಲ್ಲಿ ದೇವಾಸುರರು - ತಾತ್ತ್ವಿಕ ಹಿನ್ನೆಲೆ (Karmagalalli Devasuraru -Tattvika Hinnele)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ 
(ಪ್ರತಿಕ್ರಿಯಿಸಿರಿ lekhana@ayvm.in)ದೇವಾಸುರರೆಂಬುದರ ಹಿಂದಿರುವ ತತ್ತ್ವಗಳನ್ನು ಕೆಲವು ಪುರಾಣಕಥೆಗಳ ಮೂಲಕ ಗಮನಿಸಿದೆವು. ಅಂತೆಯೇ ಕೆಲವು ಕರ್ಮಗಳಲ್ಲಿಯೂ ದೇವಾಸುರರ ಪ್ರಕರಣವು ಪ್ರಚಲಿತವಿರುವುವು. ಉದಾಹರಣೆಗೆ, ಶ್ರಾದ್ಧಕರ್ಮದಲ್ಲಿ ಪಿತೃಕಾರ್ಯವು ಪೂರ್ಣಗೊಳ್ಳದಂತೆ ಅಸುರರು ಧ್ವಂಸಮಾಡುತ್ತಾರಂತೆ. ಅಲ್ಲಿ ಸೌಮ್ಯರಾದ ಪಿತೃದೇವತೆಗಳ ರಕ್ಷಣೆಗಾಗಿ ಶಸ್ತ್ರಪಾಣಿಗಳಾದ ವಿಶ್ವೇದೇವತೆಗಳಿರಬೇಕೆಂಬ ನಿಯಮವಿದೆ.  ಆದರೆ ಶ್ರಾದ್ಧಕರ್ಮಗಳನ್ನು ಅನೇಕ ಶತಮಾನಗಳಿಂದಲೂ ಆಚರಿಸುತ್ತಲಿದ್ದರೂ ಎಂದೂ ಯಾರೂ ಅಸುರರನ್ನಾಗಲಿ ಪಿತೃದೇವತೆಗಳನ್ನಾಗಲಿ ಕಂಡಿಲ್ಲ! ಹಾಗಿದ್ದಲ್ಲಿ ಶ್ರಾದ್ಧಾಚಾರಣೆಯ ಔಚಿತ್ಯವೇನು? ಅಂತೆಯೇ ಪುಂಸವನ-ಸೀಮಂತ ಸಂಸ್ಕಾರಗಳಲ್ಲಿ ಗರ್ಭಿಣಿಯನ್ನು ಮತ್ತು ಗರ್ಭವನ್ನು ಅಸುರರ ದೆಸೆಯಿಂದ ರಕ್ಷಿಸಲೋಸುಗ ಕೆಲವು ವಿಶೇಷ ಕ್ರಿಯೆಗಳು ಆಚರಿಸಲ್ಪಡುತ್ತವೆ. ಇಲ್ಲೂ ಸಹ ಯಾವ ಅಸುರರೂ ಗೋಚರವಾಗಿಲ್ಲ. ಈ ವಿಚಾರವನ್ನು ಅರ್ಥೈಸಿಕೊಳ್ಳಲು  ಇದರ ಹಿಂಬದಿಯಲ್ಲಿನ  ಮರ್ಮವನ್ನು ತಿಳಿಯಬೇಕಾಗಿದೆ. 


ಯಾವ ಶಕ್ತಿ ಯಾವಾಗ ಪ್ರಬಲ?

ಶಕ್ತಿ-ಪ್ರಕಾಶಗಳೇ ದೇವತೆಗಳ ಮೂಲಭೂತಸ್ವರೂಪ. ಅವರದು ಪಾಂಚಭೌತಿಕಶರೀರವಲ್ಲ. ಅಂದರೆ ನಮ್ಮಂತೆ ಸ್ಥೂಲರೂಪಿಗಳಲ್ಲ. ವಿಶೇಷ ಯೋಗದೃಷ್ಟಿ-ದೈವೀದೃಷ್ಟಿಗೆ ಮಾತ್ರವೇ ಪುರುಷಾಕಾರದಿಂದಲೂ ಗೋಚರವಾಗುವವರು ಎಂಬುದನ್ನು ಹಿಂದೆಯೇ ಗಮನಿಸಿದ್ದೇವೆ. ಅಸುರರೂ ಸಹ ಶಕ್ತಿಸ್ವರೂಪರಾಗಿದ್ದು ಬ್ರಹ್ಮಾಂಡದಲ್ಲಿಯೂ ಪಿಂಡಾಡದಲ್ಲಿಯೂ ತಮ್ಮ ಕಾರ್ಯವನ್ನು ನಿರ್ವಹಿಸುವರು.

ಅವರ ಕಾರ್ಯನಿರ್ವಹಣಾ ಕ್ರಮವನ್ನು ಉದಾಹರಣೆಗಳ ಮೂಲಕ ಗಮನಿಸಬಹುದು.

1. ನಮ್ಮ ಜೀರ್ಣಕ್ರಿಯೆಯಲ್ಲಿ ಶರೀರದ ಅಂಗಗೋಪಾಂಗಗಳು ತಮ್ಮತಮ್ಮ ಕ್ರಿಯೆಯಮೂಲಕ ಆಹಾರದಲ್ಲಿರುವ ಸಾರವನ್ನು ಹೀರಿ ಇಡೀ ಶರೀರಕ್ಕೆ ಶಕ್ತಿಯನ್ನು ಕೊಡುತ್ತದೆಯಷ್ಟೇ. ಜೀರ್ಣಶಕ್ತಿ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಜೀರ್ಣಕ್ರಿಯೆ ಸರಿಯಾಗಿ ಸಾಗುತ್ತಿದೆಯೇ ಎಂಬುದನ್ನು ಅದರ ಪರಿಣಾಮದಿಂದ ತಿಳಿಯುತ್ತೇವೆ. ಅಂತೆಯೇ ಆಹಾರ ಜೀರ್ಣವಾಗದಿದ್ದಾಗ ಶರೀರದಲ್ಲಿ ನಾನಾ ತರಹದ ಬಾಧೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಅಜೀರ್ಣ ಎಲ್ಲಿದೆ ತೋರಿಸಿ ಎಂಬ ಪ್ರಶ್ನೆ ಅಸಂಬದ್ಧವಾಗುವುದು. ಅಂತೆಯೇ ಅಜೀರ್ಣಶಕ್ತಿ-ಜೀರ್ಣಶಕ್ತಿ ಇವೆರಡೂ ಶರೀರದಲ್ಲಿ ಕೆಲಸ ಮಾಡುತ್ತವೆಯಾದರೂ ಎರಡೂ ಒಟ್ಟಿಗೆ ಕೆಲಸ ಮಾಡುವುದಿಲ್ಲ.  ಆರೋಗ್ಯವಾಗಿರುವಾಗ ಜೀರ್ಣಶಕ್ತಿ ಉತ್ತಮರೀತಿಯಲ್ಲಿ ಕೆಲಸ ಮಾಡುತ್ತದೆ. ಜೀರ್ಣಶಕ್ತಿ ಕುಂಠಿತವಾದರೆ ಪರಿಣಾಮ ಅಜೀರ್ಣವೇ. ಆದ್ದರಿಂದ ಇವೆರಡರಲ್ಲಿ ಯಾವುದಾದರೊಂದು ಮಾತ್ರ ಅನುಭವಕ್ಕೆ ಬರುವುದು. 

ಹಾಗೆಯೇ ಜೀರ್ಣಕ್ರಿಯೆಗಿಂತಲೂ ಅಜೀರ್ಣಕ್ರಿಯೆಯು ತನ್ನನ್ನು ವಿವಿಧರೀತಿಯಲ್ಲಿ ಪ್ರಕಟಪಡಿಸಿಕೊಳ್ಳುತ್ತದೆ. ಅಂದರೆ, ಸಕ್ರಮ ಒಂದಾದರೆ ಅಕ್ರಮ ಅನೇಕ ಇರಬಹುದೆನ್ನುವುದು ಇಲ್ಲಿ ಗಮನಾರ್ಹ. ಗಣಿತದಲ್ಲೂ ಒಂದು ಪ್ರಶ್ನೆಗೆ ಸರಿಯಾದ ಉತ್ತರ ಒಂದೇ, ತಪ್ಪುತ್ತರ ನೂರಾರು ಇರಬಹುದೆನ್ನುವುದೂ ಸರ್ವವಿದಿತ.

2. ಹಲಸಿನ ಹಣ್ಣನ್ನು ಮಿತಪ್ರಮಾಣದಲ್ಲಿ ಸೇವಿಸಿದರೆ ನಾಲಿಗೆಗೆ ರುಚಿ, ಮನಸ್ಸಿಗೆ ಖುಷಿ, ಶರೀರಕ್ಕೆ ಪುಷ್ಟಿ. ಆದರೆ ಅದನ್ನೇ ಮಿತಿಮೀರಿ ತೆಗೆದುಕೊಂಡರೆ ದುಷ್ಪರಿಣಾಮವಾಗಿ, ಅಜೀರ್ಣಕ್ಕೆ ಹಲಸಿನ ಹಣ್ಣೇ ಕಾರಣವೆಂದು ತೀರ್ಮಾನಿಸುವುದು ತಪ್ಪೇನಲ್ಲ. ಆದರೆ ಅಜೀರ್ಣವನ್ನು ಹಲಸಿನಹಣ್ಣಿನಲ್ಲಿ ಹುಡುಕಿದರೆ ಕಾಣಿಸೀತೇ! ಆದ್ದರಿಂದ ಜೀರ್ಣಶಕ್ತಿ-ಅಜೀರ್ಣಶಕ್ತಿ ಎರಡೂ ಇರುವುದು ನಮ್ಮಲ್ಲೇ, ಆದರೆ ಅವುಗಳು ಕಾಣಸಿಗುವುದು ಪರಿಣಾಮದಲ್ಲಿ ಮಾತ್ರವೇ.  ಅಂತೆಯೇ ಶಕ್ತಿರೂಪರಾದ ದೇವಾಸುರರನ್ನು ಚರ್ಮಚಕ್ಷುಸ್ಸಿನಿಂದ ಹುಡುಕುವಂತಿಲ್ಲ. ಅವರುಗಳ ಇರುವನ್ನು ಪರಿಣಾಮದ ಮೇಲೆಯೇ ತಿಳಿಯತಕ್ಕದ್ದು. ದೇವಾಸುರರಲ್ಲಿ ಪ್ರಬಲರಾರೆನ್ನುವುದನ್ನು ಪರಿಣಾಮದಿಂದಲೇ ತೀರ್ಮಾನಿಸಬೇಕಾಗುವುದು. 


ಪೈಪೋಟಿ  

ಇಲ್ಲಿ, ಕ್ರಮಬದ್ಧವಾಗಿ ಜೀರ್ಣಕ್ರಿಯೆಯು ಸಾಗುವುದನ್ನು ದೇವತೆಗಳ ಕೆಲಸ ಎನ್ನಬಹುದು. ಅಂದರೆ, ಶರೀರದಲ್ಲಿನ ಸೃಷ್ಟಿನಿಯಮವನ್ನು ಕಾಪಾಡುವವರು ದೇವತಾಶಕ್ತಿಗಳು. ಜೀರ್ಣಶಕ್ತಿ(ದೇವತೆಗಳು) ಕುಂಠಿತವಾದಾಗ ಅಜೀರ್ಣಶಕ್ತಿ(ಅಸುರರು) ನುಗ್ಗಿ ಪ್ರಕೃತಿಯನ್ನು ಕೆಡಿಸುತ್ತದೆ. ಅಸುರರಿಂದ ಶರೀರನಿಯಮವು ಅಸ್ತವ್ಯಸ್ತವಾಗುವುದು. ಜೀರ್ಣ-ಅಜೀರ್ಣ ಎರಡೂ ಜೊತೆಯಾಗಿರುವಂತೆ ಕಂಡರೂ ಅವೆರಡಕ್ಕೂ ಪರಸ್ಪರ ಪೈಪೋಟಿ ಇರುತ್ತದೆ. ಯಾವುದಕ್ಕೆ ಜಯ ಎನ್ನುವುದು ನಮ್ಮ systemಅನ್ನು ಅವಲಂಬಿಸಿರುತ್ತದೆ. ಅಂದರೆ ಪರಸ್ಪರ ಎರಡಕ್ಕೂ ಕೂಡ ಘರ್ಷಣೆ ಆಗುತ್ತಲೇ ಇರುತ್ತದೆ. ಕೊನೆಗೆ ಯಾವುದೋ ಒಂದಕ್ಕೆ ಜಯ. ಅದು ವಿಜೃಂಭಿಸುತ್ತದೆ.  

ಇದನ್ನೇ ಶಕ್ತಿರೂಪದಲ್ಲಿ ತೆಗೆದುಕೊಂಡಾಗ ದೇವತೆಗಳಿಗೂ ಅಸುರರಿಗೂ ನಡೆಯುವ ಯುದ್ಧ  ಎನ್ನಬೇಕಾಗುವುದು. ಶ್ರಾದ್ಧ, ಸೀಮಂತ ಮುಂತಾದ ಕರ್ಮಗಳಲ್ಲೂ ಸಾಧಿಸಬೇಕಾದ ಧ್ಯೇಯವೊಂದುಂಟು. ಆ ಧ್ಯೇಯ ಸಾಧನೆಗೆ ಬೇಕಾದ ಶರೀರಧರ್ಮವೊಂದುಂಟು. ಆ ಧರ್ಮವನ್ನು ಕಾಪಿಡುವ ಶಕ್ತಿಗಳೇ ದೇವತೆಗಳು. ಅದು ವ್ಯತ್ಯಸ್ತವಾಗುವುದು ಆಸುರೀಶಕ್ತಿಗಳಿಂದ. ಇವೆರಡೂ ಶಕ್ತಿಗಳು ಶರೀರದಲ್ಲಿಯೇ ನೆಲೆಸಿ ಸೆಣಸುತ್ತವೆ. ಯಾರ ದೇಹಪ್ರಕೃತಿಯಲ್ಲಿ ದೇವತಾಶಕ್ತಿಗಳು ಗೆಲ್ಲುತ್ತವೆಯೋ ಆ ವ್ಯಕ್ತಿಯು ಕರ್ಮದ ಗುರಿಮುಟ್ಟುವನು ಎಂಬುದು ತಾತ್ಪರ್ಯ. 

 

ದೇವಾಸುರರ ಸಂಧಿ 

ಅಮೃತ ಮಥನದ ಕಥೆಯಂತೆ ಕೆಲವೊಮ್ಮೆ ದೇವಾಸುರರಿಬ್ಬರೂ ಒಂದೇ ಗುರಿಮುಟ್ಟಲು ಸಂಧಿಮಾಡಿಕೊಳ್ಳುವ ಸಂಭವವೂ ಉಂಟು. ಸಂಧಿಯ ಹಿಂಬದಿಯಲ್ಲಿ ಸಂಚು ಇರಬಹುದೆಂದು ಇಬ್ಬರಿಗೂ ಅನುಮಾನ ಇದ್ದೇ ಇರುವುದು. ಮರತ್ವವನ್ನು ಹೊಂದಲು ಅಮೃತವನ್ನು ಪಡೆಯಲೋಸುಗ ಇಬ್ಬರೂ ಸೇರಿ ಸಮುದ್ರಮಥನಕ್ರಿಯೆಯನ್ನು ಕೈಗೊಳ್ಳುತ್ತಾರೆ. ಒಂದುಕಡೆ ದೇವತೆಗಳು ಮತ್ತೊಂದುಕಡೆ ಅಸುರರಿದ್ದು ಕಡೆದಾಗಲೇ ಅಮೃತವು ದೊರೆಯುವುದು. ಮಥನಕ್ರಿಯೆಗೆ ನಾನಾರೀತಿಯಲ್ಲಿ ಸಹಾಯಮಾಡಿದಂತೆ ಮಹಾವಿಷ್ಣುವು ಮೋಹಿನೀರೂಪಧರಿಸಿ ಅಮೃತವನ್ನು ದೇವತೆಗಳಿಗೂ ಸುರಾಪಾನವನ್ನು ಅಸುರರಿಗೂ ಉಪಾಯದಿಂದ ಹಂಚಿ ದೇವತೆಗಳನ್ನು ಸಂರಕ್ಷಿಸಿದನು.


(ಮುಂದುವರಿಯುವುದು) 

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  20/1/2024 ರಂದು ಪ್ರಕಟವಾಗಿದೆ. 

Monday, January 15, 2024

ವ್ಯಾಸ ವೀಕ್ಷಿತ - 71 ಸ್ವಕಾಲದಲ್ಲೇ ಚರ್ಚೆಗೆ ಗ್ರಾಸವಾಗಿತ್ತು (Vyaasa Vikshita - 71 Svakaladalle Charchege Grasavagittu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in

)

 

ಅಲ್ಲಿಗೆ, ಯುಧಿಷ್ಠಿರನು ಹೇಳಿದುದು ತಪ್ಪೆಂದು ತೋರದಿದ್ದರೂ, ದುಡುಕುವುದು ಬೇಡವೆನಿಸಿದೆ ದ್ರುಪದನಿಗೆ.  ಹೀಗೆ ಇವರುಗಳು ಸಂಶಯಗ್ರಸ್ತರಾಗಿರುವ ಘಟ್ಟದಲ್ಲೇ  ಅತ್ಯನಿರೀಕ್ಷಿತವಾಗಿ ಅಲ್ಲಿಗೆ ವ್ಯಾಸರ ಆಗಮನವಾಯಿತು. ದ್ರುಪದನು ತನ್ನ ಪರಿಸ್ಥಿತಿಯನ್ನು ತೋಡಿಕೊಂಡ.

ಎಲ್ಲರ ಅಭಿಪ್ರಾಯಗಳನ್ನೂ ವ್ಯಾಸರು ಕೇಳಿದರು. ದ್ರುಪದ-ಧೃಷ್ಟದುಮ್ನ-ಯುಧಿಷ್ಠಿರ-ಕುಂತಿ - ಇವರುಗಳು ತಮ್ಮ ತಮ್ಮಅಭಿಪ್ರಾಯಗಳನ್ನು ಮಂಡಿಸಿದರು. ಕುಂತಿಯಂತೂ ಅನೃತಕ್ಕೆ ಹೆದರತಕ್ಕವಳು. ಆಗ ವ್ಯಾಸರು ದ್ರುಪದನನ್ನು ಏಕಾಂತಕ್ಕೆ ಕರೆದುಕೊಂಡುಹೋದರು. ದ್ರೌಪದಿಯ ಹಾಗೂ ಪಂಚಪಾಂಡವರ ಪೂರ್ವಜನ್ಮವೃತ್ತಾಂತವನ್ನು ತಿಳಿಸಿದರು. ಐದು ಜನ ಇಂದ್ರರೇ ಪಂಚಪಾಂಡವರಾಗಿ ಅವತರಿಸಿರುವುದು. ಅವರಲ್ಲಿ ಶಕ್ರನೇ(ಮಹೇಂದ್ರನೇ) ಈಗ ಅರ್ಜುನನಾಗಿರುವುದು. ಸ್ವರ್ಗಶ್ರೀಯೇ ದ್ರೌಪದಿಯಾಗಿರುವುದು. ಈ ರಹಸ್ಯವನ್ನು ತಿಳಿಸಿದ್ದಲ್ಲದೆ, ದಿವ್ಯದೃಷ್ಟಿಯ್ನ್ನೂ ದ್ರುಪದನಿಗೆ ದಯಪಾಲಿಸಿದರು, ವ್ಯಾಸರು. ಆಗ ಪಾಂಡವರೈವರನ್ನೂ ಅವರ ಪೂರ್ವರೂಪದಲ್ಲಿ ದ್ರುಪದನು ತಾನೇ ಕಾಣುವಂತಾಯಿತು.

ಇಷ್ಟೇ ಅಲ್ಲದೆ ಋಷಿಕನ್ಯೆಯೊಬ್ಬಳು ತಪಸ್ಸು ಮಾಡಿ ಶಂಕರನಿಂದ ಐದು ಮಂದಿ ಪತಿಗಳನ್ನು ಪಡೆದಿದ್ದು ಅವಳೇ ದ್ರೌಪದಿಯಾಗಿರುವುದನ್ನೂ ತಿಳಿಸಿದರು. ಹೀಗಾಗಿ ಈ ಎರಡೂ ಸಂನಿವೇಶಗಳ ಹಿನ್ನೆಲೆಯಲ್ಲಿ ದ್ರೌಪದಿಯು ಪಂಚಪಾಂಡವರನ್ನು ವಿವಾಹವಾಗುವುದು ಯುಕ್ತವೇ ಆಗಿದೆಯೆಂದು ಪ್ರತಿಪಾದಿಸಿದರು.

ಹೀಗೆ ನಾವು ಕಾಣುವ ಘಟನೆಗಳ ಹಿಂದೆ ಇನ್ನೆಷ್ಟೋ ದೈವಿಕವಾದ ಘಟನೆಗಳು ಸೇರಿರುವುದೂ ಉಂಟು.

ಎಷ್ಟೇ ಆದರೂ ಸ್ವಾನುಭವವೇ ಗಟ್ಟಿ. ದ್ರೌಪದೀ-ಪಂಚಪಾಂಡವರ ಈ ಪೂರ್ವೇತಿಹಾಸವು ದ್ರುಪದನ ಸ್ವಾನುಭವಕ್ಕೇ ಗೋಚರವಾದ ಮೇಲೆ ಇನ್ನಾತನಲ್ಲಿ ಸಂಶಯವು ಉಳಿಯಲಿಲ್ಲ. ಈ ವಿವಾಹಕ್ಕೆ ಆತನು ಸಂಮತಿಸಿದನು.

ಹೀಗಾಗಿ ದ್ರೌಪದಿಯ ಪಂಚಪತಿತ್ವಕ್ಕೆ ವಿಶೇಷವಾದ ಹಿನ್ನೆಲೆಯಿರುವುದು. ಅಂದು ಕೂಡ ಇದು ಸಾಧಾರಣಚರ್ಯೆಯಲ್ಲಿ ನಿಷಿದ್ಧವೆನಿಸಿಕೊಂಡದ್ದೇ. ಎಂದೇ ಒಬ್ಬೊಬ್ಬರೂ ಈ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿದ್ದವರೇ. ಕಗ್ಗಂಟಾಗಿದ್ದ ವಿಷಯವನ್ನು ಬಿಡಿಸಿಕೊಟ್ಟವರು ಮಹರ್ಷಿ ವ್ಯಾಸರು.

ಆದುದರಿಂದ ಇದೊಂದು ಸಾಧಾರಣ ಘಟನೆಯೆಂಬಂತೆ ಮಹಾಭಾರತದಲ್ಲಿ ಚಿತ್ರಿಸಿಲ್ಲ. ಮಹಾಭಾರತದ ಕಥೆಯಲ್ಲೇ, ಮುಂದೆಯೂ ಸಹ ಹಲವರು ದ್ರೌಪದಿಯ ಪಂಚಪತಿತ್ವದ ಬಗ್ಗೆ ತಮ್ಮ ಪ್ರಶ್ನೆಯನ್ನೋ ಆಕ್ಷೇಪವನ್ನೋ ವ್ಯಕ್ತಪಡಿಸಿರುವುದನ್ನು ನಾವು ನೋಡಬಹುದು. ಅಲ್ಲಿಗದು ಅಂದೂ ಪ್ರಚಲಿತವಿರಲಿಲ್ಲವೆಂದೇ.

ತಮ್ಮ ನಾರಿಯರಲ್ಲಿ ಬಹುಪತಿತ್ವದ ಆಚರಣೆಯೊಂದನ್ನು ಯಾರೋ ಗುಡ್ಡಗಾಡು ಜನರು ಇಟ್ಟುಕೊಂಡಿದ್ದಾರೆಂದೂ, ಪಾಂಡವರ ಕಾಲದಿಂದ ತಮ್ಮಲ್ಲಿ ಈ ಆಚರಣೆಯಿದೆಯೆಂದು ಅವರು ಹೇಳಿಕೊಳ್ಳುತ್ತಾರೆಂದೂ ಹೇಳಿ, ಅಷ್ಟಕ್ಕೇ ಪಾಂಡವರಿಗಿಂತಲೂ ಮೊದಲೇ ಈ ಕ್ರಮವು ಕೆಲ ಗುಂಪುಗಳಲ್ಲಿ ಪ್ರಚಲಿತವಾಗಿದ್ದಿರಬೇಕೆಂದು ಕಲ್ಪಿಸಿಕೊಂಡು ಭ್ರಮೆಪಡಬೇಕಿಲ್ಲ. ಆಧುನಿಕ ವಿಮರ್ಶಕರೂ, ಅದಕ್ಕಿಂತಲೂ ಹೆಚ್ಚಾಗಿ ಆಧುನಿಕ ಕತೆಗಾರರೂ, ಈ ಎಚ್ಚರವನ್ನು ತೆಗೆದುಕೊಳ್ಳಬೇಕಾದದ್ದು ವಿಶೇಷವಾಗಿಯೇ ಇದೆ.

ಪೌರಾಣಿಕ ಕಥೆಗಳನ್ನು ತಿರುಚುವ ಚಪಲವುಳ್ಳ ಇಂತಹ ಮಂದಿ, ಹಾಗೆ ಮಾಡುವುದರ ಬದಲು, ತಮ್ಮದೇ ಪಾತ್ರಗಳನ್ನು ಸೃಷ್ಟಿಮಾಡಿಕೊಂಡು ಹೊಸ ಕಥೆಗಳನ್ನು ಬರೆಯುವುದು ತರವೇ ವಿನಾ, ಪ್ರಾಚೀನವಾದ ಕಥೆಗಳನ್ನು ನವ್ಯ=ಪಾಶ್ಚಾತ್ತ್ಯ-ಸಿದ್ಧಾಂತಗಳ ಒತ್ತಡಗಳಿಂದಾಗಿ ತಮ್ಮ ಮೂಗಿನ ನೇರಕ್ಕೆ ವ್ಯತ್ಯಾಸ ಮಾಡುವುದು ಸರ್ವಥಾ ಸರಿಯಲ್ಲ. ಸಾಹಿತ್ಯ ಮೀಮಾಂಸೆಯಲ್ಲಿ ಮೂರ್ಧನ್ಯನೆನಿಸಿದ ಆನಂದವರ್ಧನನೇ ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿರುವನು. ವಿಶೇಷವಾಗಿ ಮೂಲರಸವಿರೋಧಿಯಾದ ಕಥಾ ಪರಿವೃತ್ತಿಯನ್ನು ಕಂಠೋಕ್ತವಾಗಿ (ಎಂದರೆ ಸ್ಪಷ್ಟೋಕ್ತಿಗಳಿಂದ) ನಿಷೇಧಿಸಿರುವುದನ್ನು ಗಮನಿಸಿಕೊಳ್ಳಬೇಕು.

ಹೀಗೆ ಈ ಪಂಚೇಂದ್ರೋಪಾಖ್ಯಾನವೊಂದರಿಂದಲೇ ದ್ರೌಪದಿಯ ಪಂಚಪತಿತ್ವದ ಮರ್ಮವು ಏನೆಂಬುದು ಗೊತ್ತಾಗುವಂತಹುದು.

ಸೂಚನೆ : 14/1/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 72 (Yaksha prashne 72)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 71 ಪುರುಷನು ಮೃತನಾಗುವುದು ಯಾವಾಗ ?

ಉತ್ತರ - ದರಿದ್ರನಾದಾಗ   

ಹುಟ್ಟಿನ ಅನಂತರ ಮರಣವೆಂಬುದು ಸಹಜ. ಆಗ ಹುಟ್ಟಿದವನು ಇರುವುದಿಲ್ಲ. ಆದರೆ ಯಕ್ಷನದ್ದು ಇಲ್ಲಿ ಒಂದು ವಿಚಿತ್ರವಾದ ಪ್ರಶ್ನೆ "ಜೀವಿಸುತ್ತಿದ್ದಾಗಲೇ ಮರಣವೆಂಬುದು ಯಾವಾಗ?" ಎಂಬುದು. ಜೀವಿಸುತ್ತಿರುವಾಗ ಮರಣವೆಂಬುದು ಹೇಗೆ ಸಾಧ್ಯ? ಎಂಬ ಸಂಶಯ ಬರದಿರದು. ಯುಧಿಷ್ಠಿರನು ಮಾರ್ಮಿಕವಾದ ಉತ್ತರವನ್ನು ನೀಡುತ್ತಾನೆ. ಜೀವಿಸುತ್ತಿರುವಾಗಲೇ ದಾರಿದ್ರ್ಯವು ಬಂದಲ್ಲಿ, ಆಗ, ಆತ ಜೀವಿಸುತ್ತಿದ್ದರೂ ಮೃತನಂತೆ ಆಗುತ್ತಾನೆ ಎಂದು. ಅಂದರೆ ಬಡತನವೆಂಬುದು ಮನುಷ್ಯನ ಜೀವಿತವನ್ನೇ ಅರ್ಥವಿಲ್ಲದಂತೆ ಮಾಡುತ್ತದೆ ಎಂದು. ಅದು ಹೇಗೆ? 

ಒಬ್ಬನಿಗೆ ಜೀವನದಲ್ಲಿ ಬಡತನವೆಂಬುದು ಹೇಗೆ ಬರುತ್ತದೆ? ಅದರ ಸ್ವರೂಪವೇನು? ಅದು ಮನುಷ್ಯನಿಗೆ ಒಕ್ಕರಿಸಿದರೆ ಹೇಗೆ ಅವನನ್ನು ಸಾಯಿಸುತ್ತದೆ? ಮರಣದ ಧರ್ಮವು ದಾರಿದ್ರ್ಯದಲ್ಲಿ ಹೇಗೆ ವ್ಯಕ್ತವಾಗುತ್ತದೆ ಎಂಬಿತ್ಯಾದಿ ವಿಚಾರಗಳು ಇಲ್ಲಿ ಪ್ರಸ್ತುತವಾಗಿವೆ. 

ಒಬ್ಬ ವ್ಯಕ್ತಿ ಚೆನ್ನಾಗಿ ಬದುಕನ್ನು ಸಾಗಿಸುತ್ತಿದ್ದಾನೆ ಎಂದರೆ ಅವನಿಗೆ ಅನೇಕ ಲಕ್ಷಣಗಳು ಇರುತ್ತವೆ. ಬಾಲ್ಯದಲ್ಲಿ ಚೆನ್ನಾಗಿ ವಿದ್ಯೆಯನ್ನು ಪಡೆದಿರಬೇಕು. ತಾನು ಅರ್ಜಿಸಿದ ವಿದ್ಯೆಯ ಬಲದ ಮೇಲೆ ವೃತ್ತಿ ಮಾಡಬೇಕು. ಅದರಿಂದ ಸಾಕಷ್ಟು ಧನವನ್ನು ಸಂಪಾದಿಸಬೇಕು. ಸಂಪಾದಿಸಿದ ಧನದಿಂದ ತಂದೆ, ತಾಯಿ, ಮಡದಿ, ಮಕ್ಕಳು, ಪರಿವಾರ, ತನ್ನನ್ನು ಆಶ್ರಯಿಸಿದವರು ಹೀಗೆ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳಬೇಕು. ಮತ್ತು ಸಂಪಾದಿಸಿದ ಧನದಿಂದಲೇ ದಾನ, ಉಪಕಾರ, ಪೂಜೆ, ಯಾಗ ಮೊದಲಾದ ಸತ್ಕರ್ಮಗಳಿಂದ ಧರ್ಮವನ್ನೂ ಸಂಪಾದಿಸಬೇಕು. ಹೀಗೆ ಯೌವನದಲ್ಲಿ ಧರ್ಮವನ್ನು ಮತ್ತು ಧರ್ಮಕ್ಕೆ ಅವಿರೋಧವಾದ ಅರ್ಥ-ಕಾಮಗಳನ್ನು ಪಡೆಯುವುದರಿಂದ ಅವನ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ. ವಯಸ್ಸಿಗೆ ಸರಿಯಾದ ಕರ್ಮವನ್ನು ಮಾಡಿದಾಗ ಆ ವಯಸ್ಸು ಸಾರ್ಥಕ. ಇದೇ ಅರ್ಥವನ್ನು ಕೊಡುವ ಒಂದು ಒಳ್ಳೆಯ ಮಾತನ್ನು ಕಾಳಿದಾಸನು ರಘುವಂಶ ಕಾವ್ಯದಲ್ಲಿ ಹೀಗೆ ಹೇಳುತ್ತಾನೆ. " ಶೈಶವೇ ಅಭ್ಯಸ್ತವಿದ್ಯಾನಾಂ ಯೌವನೇ ವಿಷಯೈಷಿಣಾಮ್ । ವಾರ್ಧಕೇ ಮುನಿವೃತ್ತೀನಾಂ ಯೋಗೇನಾಂತೇ ಯನುತ್ಯಜಾಮ್ " ಎಂದು. ಇದೇ ಅರ್ಥವನ್ನು ಕೊಡುವ ಸುಭಾಷಿತವೂ ಹೀಗಿದೆ - " ಪ್ರಥಮೇನ ಅರ್ಜಿತಾ ವಿದ್ಯಾ ದ್ವಿತೀಯೇನ ಅರ್ಜಿತಂ ಧನಮ್ । ತೃತೀಯೇನ ತಪಸ್ತಪ್ತಂ ಚತುರ್ಥೇ ಕಿಂ ಕರಿಷ್ಯತಿ- ಬಾಲ್ಯದಲ್ಲಿ ವಿದ್ಯೆ, ಯೌವನದಲ್ಲಿ ಸಂಪತ್ತು, ವಾರ್ಧಕದಲ್ಲಿ ತಪಸ್ಸು ಕೊನೆಗಾಲದಲ್ಲಿ ಅನಾಯಾಸವಾದ ಮರಣ ಇವು ಉತ್ತಮ ಬದುಕಿನ ಲಕ್ಷಣ. ಇದೇ ವಿರುದ್ಧವಾದಾಗ ಅವನು ಬದುಕಿದ್ದೂ ಸತ್ತಂತೆ. ಪ್ರಥಮೇ ನ ಅರ್ಜಿತಾ ವಿದ್ಯಾ, ದ್ವಿತೀಯೇ ನ ಅರ್ಜಿತಂ ಧನಮ್ । ತೃತೀಯೇ ನ ತಪಸ್ತಪ್ತಂ ಚತುರ್ಥೇ ಕಿಂ ಕರಿಷ್ಯತಿ - ಬಾಲ್ಯದಲ್ಲಿ ವಿದ್ಯೆ ಪಡೆದಿಲ್ಲ, ಯೌವನದಲ್ಲಿ ಸಂಪತ್ತು ಸಂಪಾದಿಸಿಲ್ಲ,, ವಾರ್ಧಕದಲ್ಲಿ ತಪಸ್ಸು ಮೊದಲಿಲ್ಲ, ಕೊನೆಗಾಲದಲ್ಲಿ ಮರಣ ಖಂಡಿತಾ ಬರುತ್ತದೆ. ಆದರೆ ಆ ಮರಣಕ್ಕೆ ಏನಿದೆ ಅರ್ಥ? ಬಾಲ್ಯದಲ್ಲಿ ವಿದ್ಯೆಯಿಂದ ಆನಂದ, ಮಧ್ಯದಲ್ಲಿ ಸಂಪತ್ತಿನಿಂದ ಆನಂದ, ಅನಂತರ ತಪಸ್ಸಿನಲ್ಲಿ ಆನಂದ, ಕೊನೆಯಲ್ಲಿ ಆನಂದವೇ. ಹೀಗೆ ಹುಟ್ಟಿನಿಂದ ಆರಂಭಿಸಿ ಮರಣಪರ್ಯಂತ ಆನಂದಜೀವನವಾಗಬೇಕು. ಇದಕ್ಕೆ ವಿರುದ್ಧವಾದ ಜೀವನ ಮರಣ ಸದೃಶವಷ್ಟೆ!  

ಸೂಚನೆ : 14/1/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, January 13, 2024

ಪ್ರ'ದೋಷ'ವೂ ಶಿವನಿಗೆ ಇಷ್ಟವೇ? (Pra'doṣa'vu Shivanige iṣṭave?)


ಲೇಖಕರು : ವಿದ್ವಾನ್ ನರಸಿಂಹ ಭಟ್
(ಪ್ರತಿಕ್ರಿಯಿಸಿರಿ lekhana@ayvm.in)


'ಪ್ರದೋಷ' ಎಂಬ ಪದವು 'ದೋಷ'ದಿಂದ ಕೂಡಿದೆ. ದೋಷವೆಂದರೆ ಕೆಟ್ಟದ್ದು. ತ್ಯಾಜ್ಯವಾದದ್ದು, ಹೇಯವಾದುದು, ಅದರಲ್ಲೂ ಪ್ರದೋಷವೆಂದರೆ ಪ್ರ- ಎಂಬ ಉಪಸರ್ಗವು ಬಹಳ ಕೆಟ್ಟದ್ದು - ದೋಷಯುಕ್ತವಾದದ್ದು ಎಂಬ ಅರ್ಥವನ್ನು ಕೊಡುತ್ತದೆ. ಇಂತಹ ದೋಷವನ್ನೂ ಇಷ್ಟಪಡುವಂತಹ ಒಂದು ದೇವತೆಯಿದೆಯೇ? ಹಾಗಾದರೆ ಅದು ಹೇಗೆ ಸಾಧ್ಯ? ಎಲ್ಲಾ ಕಡೆಗೂ ನಾವು ಕೇಳಿದ್ದು ಗುಣವನ್ನು ಇಷ್ಟಪಡುತ್ತಾರೆ ಅಂತ. ಆದರೆ ದೋಷವನ್ನೂ ಇಷ್ಟಪಡುವ ದೇವರಿದ್ದಾರೆ ಎಂದು ಕೇಳಿದರೆ ಆಶ್ಚರ್ಯವೂ ವಿಚಿತ್ರವೂ ಆಗುತ್ತದೆ. ಮನುಷ್ಯ ಅಥವಾ ಯಾವುದಾದರೂ ಪ್ರಾಣಿ, ಪಶು, ಪಕ್ಷಿಗಳು ದೋಷವನ್ನು ಅಂದರೆ ಕೆಟ್ಟದ್ದನ್ನು ಬಯಸುವುದನ್ನು ನೋಡುದ್ದೇವೆ. ಆದರೆ ಒಂದು ದೇವತೆಯಾಗಿ ಇಂತಹ ಅತ್ಯಂತ ದೊಷಯುಕ್ತವಾದುದನ್ನು ಇಷ್ಟಪಡುವುದೆಂದರೇನು? 


ಒಬ್ಬರಿಗೆ ಹೇಯವಾದುದು ಇನ್ನೊಬ್ಬರಿಗೆ ಉಪಾದೇಯವಾಗಬಹುದು ಎಂಬುದೂ ನಿಸರ್ಗದಲ್ಲೇ ಇರುವ ಸಹಜತೆ. ಕೆಲವೊಮ್ಮೆ ಹೇಯವಾದುದ್ದು ಪೂಜ್ಯವೂ ಆಗುವುದುಂಟು. ಉದಾಹರೆಣೆಗೆ ಹಸುವಿನ ಸಗಣಿ ಅದರ ತ್ಯಾಜ್ಯ. ಆದರೆ ಅದು ನಮಗೆ ಪೂಜ್ಯ. ನಮ್ಮನ್ನು ಪವಿತ್ರಗೊಳಿಸುವ ಒಂದು ಉತ್ತಮ ಪದಾರ್ಥ. ಅಂತೆಯೇ ಒಂದರ ಮಲ ಇನ್ನೊಂದಕ್ಕೆ ಇಷ್ಟವಾಗುವುದನ್ನೂ ನೋಡಿದ್ದೇವೆ. ಅಂದರೆ ನಮಗೆ ತಿಳಿಯುವುದು ಇಷ್ಟೇ; 'ಲೋಕದಲ್ಲಿ ಕೆಟ್ಟದ್ದು ಎಂಬುದೇ ಇಲ್ಲ' ಎಂದು. ಕೆಟ್ಟದ್ದು ಎಂಬುದು ಸಾರ್ವಕಾಲಿಕವಲ್ಲ. ಅಥವಾ ಸಾರ್ವತ್ರಿಕವಾದುದಲ್ಲ. 'ಇದು ಕೆಟ್ಟದ್ದು, ಇದು ಒಳ್ಳೆಯದು' ಎಂದು ಯಾವುದನ್ನೂ ಪ್ರತ್ಯೇಕಿಸಲು ಸಾಧ್ಯವಿಲ್ಲ. ಅದು ಯಾವಾಗ ? ಯಾರಿಗೆ ? ಹೇಗೆ? ಎಂಬುದರ ಮೇಲೆ ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ವಿಭಾಗವಿದೆ ಎಂಬುದನ್ನು ಮಾತ್ರ ನಾವು ಕೊಟ್ಟಕೊನೆಯಲ್ಲಿ ಗ್ರಹಿಸಬೇಕಾದ ಸಂಗತಿ. ಹಾಗಾದರೆ ಪ್ರದೋಷವೆಂದರೇನು? ಅದು ದೋಷಯುಕ್ತವಾದದ್ದಾದರೂ, ಪೂಜ್ಯ ಹೇಗೆ? ಅದರಲ್ಲೂ ತ್ರಿಮೂರ್ತಿಯರಲ್ಲಿ ಒಬ್ಬನಾದ ಪರಶಿವನಿಗೆ ಇಷ್ಟವಾದುದು ಯಾವ ಕಾರಣಕ್ಕೆ? ಎಂಬ ವಿಷಯದ ಬಗ್ಗೆ ನಾವಿಲ್ಲಿ ಪರಾಮರ್ಶಿಸೋಣ. 


'ಪ್ರದೋಷೋ ರಜನೀಮುಖಮ್' ಎಂದು ಅಮರಕೋಶ ಎಂಬ ಸಂಸ್ಕೃತದ ಕೋಶಗ್ರಂಥದಲ್ಲಿ ರಾತ್ರಿಯು ಆರಂಭವಾಗುವ ಕಾಲವೆಂಬ ಅರ್ಥವನ್ನು ಕೊಡಲಾಗಿದೆ. ಸೂರ್ಯಾಸ್ತವಾದ ಸಮಯದಿಂದ ಆರಂಭಿಸಿ ಸುಮಾರು ಎರಡು ಘಳಿಗೆ ಅಂದರೆ ಒಂದುವರೆ ಗಂಟೆಯ ಕಾಲಮಾನವನ್ನು 'ಪ್ರದೋಷ' ಎಂದು ಕರೆಯಲಾಗಿದೆ. ದೋಷವು ಆರಂಭವಾಗುವ ಸಮಯ ಎಂದು ಪ್ರದೋಷ ಶಬ್ದಕ್ಕೆ ಅರ್ಥ. ಸೂರ್ಯ ಅಸ್ತವಾದ ಮೇಲೆ ಎಲ್ಲೆಡೆ ಕತ್ತಲು ಆವರಿಸುತ್ತದೆ. ಆ ಕಾಲದಲ್ಲಿ ಯಾವ ಪದಾರ್ಥವೂ ಕಣ್ಣಿಗೆ ಕಾಣದಂತಾಗುತ್ತದೆ. ಹಾಗಾಗಿ ಇದನ್ನು ಪ್ರದೋಷ ಎಂದು ಕರೆದಿದ್ದಾರೆ. ಈ ಕಾಲದಲ್ಲಿ ತಮಸ್ಸು ಆವರಿಸುತ್ತದೆ. ಕಾಲದಲ್ಲಿ ಪ್ರಧಾನವಾಗಿ ಮೂರು ವಿಭಾಗವಿದೆ. ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು. ಬೆಳಗಿನ ಸೂರ್ಯ ಉದಯಕ್ಕಿಂತ ಎರಡು ಗಂಟೆ ಮೊದಲು; ಅಂದರೆ ಬ್ರಾಹ್ಮೀಮುಹೂರ್ತವನ್ನು ಮತ್ತು ಪ್ರಾತಃಸಂಧ್ಯಾ, ಮಧ್ಯಾಹ್ನಸಂಧ್ಯಾ, ಸಾಯಂಸಂಧ್ಯಾ ಮತ್ತು ನಡುರಾತ್ರಿ ಸಂಧ್ಯಾ ಸಮಯವನ್ನು ಸಾತ್ತ್ವಿಕಕಾಲವೆಂದು ಕರೆಯುತ್ತಾರೆ. ಉಳಿದ ಹಗಲಿನ ಸಮಯವನ್ನು ರಾಜಸಿಕ ಕಾಲ ಎಂದು ಪರಿಗಣಿಸಿದ್ದಾರೆ. ಅಂತೆಯೇ ಸೂರ್ಯಾಸ್ತದಿಂದ ಹಿಡಿದು ಮಾರನೆ ದಿನದ ಬ್ರಾಹ್ಮೀಮುಹೂರ್ತದ ವರೆಗಿನ ಸಮಯವನ್ನು ತಾಮಸಿಕಕಾಲ ಎಂದು ಗುರುತಿಸಲಾಗಿದೆ. ಸತ್ತ್ವ-ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳ ಪ್ರಾಧಾನ್ಯವನ್ನು ತಿಳಿಯುವ ಕಾಲವೆಂದರ್ಥ. ಹೇಗೆ ಕಾಲವು ಈ ಮೂರು ಗುಣಗಳಿಂದ ಕೂಡಿದೆಯೋ, ಅಂತೆಯೇ ಈ ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯಕ್ಕೆ ಕಾರಣವೂ ಇದೇ ಮೂರು ಗುಣಗಳಿಂದ ಎಂದು ಶಾಸ್ತ್ರಗಳು ಸಾರುತ್ತವೆ. ಈ ಮೂರೂ ಗುಣಗಳಲ್ಲಿ ರಜಸ್ಸಿಗೆ ಬ್ರಹ್ಮನು, ಸತ್ತ್ವಕ್ಕೆ ವಿಷ್ಣುವು ಮತ್ತು ಪರಶಿವನು ತಮಸ್ಸಿಗೆ ಅಧಿದೇವತೆಯಾಗಿದ್ದಾರೆ. ಇವರ ಕಾರಣದಿಂದಲೇ ಈ ಪ್ರಪಂಚದ ಪ್ರತಿಯೊಂದು ಕಾರ್ಯವೂ ನಡೆದುಕೊಂಡು ಬರುತ್ತಾ ಇದೆ. ಈ ಮೂರು ಗುಣಗಳಲ್ಲಿ ತಮಸ್ಸೂ ಒಂದು ಗುಣವಾಗಿದೆ. ತಮಸ್ಸು ಗುಣವೂ ಹೌದು, ದೋಷವೂ ಹೌದು. ಈ ಮೂರು ಗುಣಗಳ ವ್ಯಾಪಾರವಿಲ್ಲದೇ ಅಂದರೆ ಈ ಮೂರು ದೇವತೆಗಳ ಅನುಗ್ರಹವಿಲ್ಲದೇ ಯಾವ ಕಾರ್ಯವೂ ನಡೆಯುವುದಿಲ್ಲ. ಹುಟ್ಟು ಮತ್ತು ನಾಶ ಇವೆರಡರ ಮಧ್ಯೆ ಸ್ಥಿತಿ ಇದೆ. ಹುಟ್ಟಿಗೆ ರಜಸ್ಸು ಕಾರಣವಾದರೆ, ನಾಶಕ್ಕೆ ತಮಸ್ಸು ಕಾರಣ. ಚಟುವಟಿಕೆಗೆ ರಜಸ್ಸು ಕಾರಣವಾದರೆ, ವಿಶ್ರಾಂತಿಗೆ ತಮಸ್ಸು ಕಾರಣ. ಆರಂಭಕ್ಕೆ ರಜಸ್ಸು ಕಾರಣವಾದರೆ, ಅಂತ್ಯಕ್ಕೆ ತಮಸ್ಸು ಕಾರಣ. ಒಂದು ಪದಾರ್ಥ ನಿರ್ಮಾಣವಾಗಬೇಕಾದರೆ ತಮಸ್ಸು ಎಂಬ ಗುಣವೂ ಬೇಕೇಬೇಕು. ಇಷ್ಟು ವಿಷಯವನ್ನು ಭದ್ರವಾಗಿ ಧರಿಸಿದಾಗ ಮುಂದಿನ ವಿಷಯ ಅರ್ಥವಾಗಲು ಸಾಧ್ಯ.


     ಶಿವನನ್ನು ಆರಾಧಿಸಲು, ಅವನನ್ನು ಪ್ರಸನ್ನಗೊಳಿಸಲು ತಮಸ್ಸು ಪ್ರಧಾನವಾದ ಅಂದರೆ ರಾತ್ರಿಯ ಕಾಲ ಅತ್ಯಂತ ಪ್ರಶಸ್ತ. ಹಾಗಾಗಿ ಪ್ರತಿ ಮಾಸದ ಶುಕ್ಲ ಮತ್ತು ಕೃಷ್ಣಪಕ್ಷದ ತ್ರಯೋದಶಿಯ ಕೊನೆಯ ಭಾಗವನ್ನು ಪ್ರದೋಷ ಎನ್ನಲಾಗಿದೆ. ಪ್ರತಿದಿನವೂ ರಾತ್ರಿಯ ಆರಂಭವಿದ್ದರೂ, ಕೃಷ್ಣಪಕ್ಷದ ಚತುರ್ದಶಿಯಂದು ಚಂದ್ರನ ಬೆಳಕು ಬಹಳ ಕ್ಷೀಣವಾಗಿರುತ್ತದೆ. ಇಂತಹ ಬೆಳಕು ಕ್ಷೀಣವಾದ ಪ್ರತಿ ಮಾಸದ ಕೃಷ್ಣ ಚತುರ್ದಶಿಯನ್ನು 'ಮಾಸಶಿವರಾತ್ರಿ' ಎಂದು ಕರೆದು ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿಯನ್ನು 'ಮಹಾಶಿವರಾತ್ರಿ' ಎಂದು ಶಿವನ ಪೂಜೆಗೆ ಶ್ರೇಷ್ಠವಾದ ದಿನವೆಂದು ಪರಿಗಣಿಸಿದ್ದಾರೆ. ಸಕಾಲ-ಸುಕಾಲದಲ್ಲಿ ಮಾಡಿದ ಕಾರ್ಯಕ್ಕೆ ವಿಶೇಷಫಲವಲ್ಲವೇ! ಈ ದಿನ ಪರಶಿವನಿಗೆ ಪ್ರೀತಿದಾಯಕವಾದ ದಿನ. ಅದರಲ್ಲೂ ಪ್ರದೋಷವೆಂಬುದು ಬಹಳ ಪ್ರಿಯವಾದುದು. ಹಾಗಾಗಿ ಅಂದೇ ಪರಶಿವನ ಪೂಜೆಯನ್ನು ಮಾಡುವ ಸಂಪ್ರದಾಯವು ಬಂದಿದೆ..


ಸೂಚನೆ : 13/1/2024 ರಂದು ಈ ಲೇಖನವು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಬಕಪಕ್ಷಿಯಲ್ಲ- ಜೀವಹಂಸಗಳಾಗೋಣ (Bakapakshiyalla - Jeevahamsagalagona)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
ಹೀಗೊಂದು ಸುಭಾಷಿತ-ಒಂದು ಬಕ ಪಕ್ಷಿಗಳಿರುವ ನೀರಿನ ಆಸರೆ. ಅಲ್ಲಿಗೆ ಒಮ್ಮೆ ಸುಂದರವಾದ ಹಂಸಪಕ್ಷಿಯೊಂದು ಬಂತು. ತಮ್ಮಂತೆ ಇಲ್ಲದಿರುವ ಹೊಸದೊಂದು ಪಕ್ಷಿ ಬಂದಿದ್ದನ್ನು ಕಂಡು ಆ ಬಕಗಳಲ್ಲಿ ನಾಯಕನಾದ ಒಂದು ಬಕ ಈ ಹಂಸವನ್ನು ಪ್ರಶ್ನೆ ಮಾಡಿತು-

ಯಾರು ನೀನು? ನಿನಗೆ ಕೆಂಪಾದ ಕಣ್ಣು,ಮುಖ,ಪಾದಗಳಿವೆಯಲ್ಲಾ ಎಂದು. ನಾನು "ಹಂಸ' ಎಂದು ಹಂಸ ಉತ್ತರಿಸಿತು. ಬಕವು-ನೀನೆಲ್ಲಿಂದ ಬಂದೆ ಎಂದಿತು. ನಾನು ಮಾನಸ ಸರೋವರದಿಂದ ಬಂದೆ ಎಂದುತ್ತರಿಸಿತು ಹಂಸ. ಬಕವು ಸ್ವಲ್ಪ ಧಿಮಾಕಿನಿಂದಲೇ ಕೇಳಿತು-ಅಲ್ಲೇನಿದೆ? ಹಂಸವು ಹೇಳಿತು-ಅಲ್ಲಿ ಸುವರ್ಣಪಂಕಜಗಳ ವನ,ಅಮೃತೊಪಮವಾದ ನೀರು,ಬೇಕಾದಷ್ಟು ರತ್ನಗಳು, ಪ್ರವಾಳ, ವೈಡೂರ್ಯಗಳು ಇವೆಲ್ಲವೂ ಇವೆ. ಮತ್ತೆ ಬಕದ ಪ್ರಶ್ನೆ-ಕಪ್ಪೆಚಿಪ್ಪು ಇದೆಯೇ? ಎಂದು.ಇಲ್ಲವೆಂದಿತು ಹಂಸ. ಅದನ್ನು ಕೇಳಿ ಆ ಎಲ್ಲಾ ಬಕಗಳೂ ಹಿ..ಹಿ.. ಎಂದು ವ್ಯಂಗ್ಯವಾಗಿ ನಕ್ಕವಂತೆ. ಬಕಗಳಿಗೆ ಕಪ್ಪೆ ಚಿಪ್ಪೇ ಮಹತ್ತಾದುದು ಎಂಬ ನಿಶ್ಚಯ. ಬೇರೆ ಉನ್ನತೋನ್ನತವಾದ ವಸ್ತುಗಳ, ವಾತಾವರಣದ ಪರಿಚಯವೇ ಇಲ್ಲ. ಹಾಗೊಂದು ಇರಬಹುದೇನೋ ಎಂಬ ವಿಚಾರವನ್ನೇ ಒಪ್ಪಿಕೊಳ್ಳದ ಕೂಪಮಂಡೂಕದ ಮನಸ್ಸು. ಕಪ್ಪೆಚಿಪ್ಪು ಇಲ್ಲದ ಜಾಗ ನಿಷ್ಪ್ರಯೋಜಕ ಎಂಬ ಭಾವ.

ನಮಗೂ ನಾವು ನೋಡದ, ಅನುಭವಿಸದ ಉನ್ನತೋನ್ನತ ವಿಷಯಗಳ ಬಗ್ಗೆ ಜ್ಞಾನಿಗಳ, ಮಹರ್ಷಿಗಳ ವಿವರಣೆಯೂ ಹೀಗೇ ಆಗುವುದುಂಟು. ನಮ್ಮ ಇಂದ್ರಿಯಗಳ ಕ್ಷೇತ್ರದ ಆಚೆಗೆ ಇರುವ ಅತೀಂದ್ರಿಯವಾದ ಸತ್ಯದ ಬಗ್ಗೆ ಮಾತನಾಡಿದರೆ ನಾವೂ ಬಕಗಳಂತೆಯೇ ವ್ಯಂಗ್ಯ ಮಾಡುವುದುಂಟು. ಕಾರಣ ಇಂದ್ರಿಯಗಳ ಪ್ರಪಂಚವಷ್ಟೇ ನಮ್ಮ ಪ್ರಪಂಚ. ಭಾರತೀಯ ಮಹರ್ಷಿಗಳು ತಮ್ಮ ತಪಸ್ಯೆಯಿಂದ ಜೀವನಕ್ಕೆ ಸ್ಥೂಲ ,ಸೂಕ್ಷ್ಮ,ಪರಾ ಎಂಬ ಮೂರು ಕ್ಷೇತ್ರಗಳುಂಟು ಎಂದು ಸಾರಿದ್ದಾರೆ. ನಮ್ಮ ಇಂದ್ರಿಯಗಳಿಗೆ ಎಟುಕುವ ಹೊರ ಜೀವನವಷ್ಟೂ ಸ್ಥೂಲ. ಈ ಸ್ಥೂಲದ ಹಿಂಬದಿಯಲ್ಲಿ ಸ್ಥೂಲ ಜೀವನಕ್ಕೂ ಶಕ್ತಿಯನ್ನು ಕೊಡುತ್ತಾ ಬೆಳಗುತ್ತಿರುವ ಶಕ್ತಿಯ ಅನ್ಯಾನ್ಯ ರೂಪಗಳುಂಟು. ಆ ಶಕ್ತಿಗಳಿಂದಲೇ ಎಲ್ಲಾ ಇಂದ್ರಿಯಗಳೂ ಕೆಲಸ ಮಾಡುವುವು. ಆ ಶಕ್ತಿಗಳು ಯೋಗಿಗಮ್ಯ. ತಪೋದೃಷ್ಟಿ ಗೋಚರ.ಹೊರಗಣ್ಣಿಗೆ ಎಟುಕದು. ಅದೇ ಸೂಕ್ಷ್ಮ ಪ್ರಪಂಚ. ದೇವತಾ ಸಾಮ್ರಾಜ್ಯ. ಅದಕ್ಕೂ ಹಿಂದೆ ಈ ಎಲ್ಲಾ ದೇವತೆಗಳಿಗೂ ಚೈತನ್ಯ ಧಾರೆ ಎರೆಯುತ್ತಿರುವ ಮಹಾ ಶಕ್ತಿಯೇ ಪರಾ. ಪರಬ್ರಹ್ಮನ ನೆಲೆ. ನಮ್ಮ ಜೀವನಗಳು ಈ ಮೂರೂ ಕ್ಷೇತ್ರಗಳಿಗೆ ವಿರೋಧ ಬಾರದಂತೆ ಇದ್ದಾಗ ಸರ್ವಾಂಗಸುಂದರ. ಅಂತಹ ಜೀವನ ಶೈಲಿ ಸನಾತನ ಭಾರತೀಯರ ಜೀವನ ಶೈಲಿ. ಈ ಋಷಿದೃಷ್ಟಿ ಅರ್ಥವಾಗದಿದ್ದಾಗ ಅವರು ಹೇಳಿದ ಜೀವನ ವಿಧಾನಗಳ ಬಗೆಗೆ, ಅವರು ಅರುಹಿದ ಪರಮಾನಂದದ ಸ್ಥಿತಿಯ ಬಗೆಗೆ ಆ ಬಕಗಳಂತೆ ನಾವೂ ವ್ಯಂಗ್ಯವಾಡುತ್ತೇವೆ. ಸಮಗ್ರ ಜೀವನದ ಪರಿಚಯದ ಕೊರತೆ ಇದು. ನಾವು ಅರಿಯದ ಸೌಂದರ್ಯ ಆನಂದಗಳು ಜಗತ್ತಿನಲ್ಲಿ ಇಲ್ಲವೆಂಬ ಬಕಪ್ರಜ್ಞೆ. ಶ್ರೀರಂಗಮಹಾಗುರುಗಳು ಹೀಗೆನ್ನುತ್ತಿದ್ದರು-"ಜೀವನವೆಂದರೇನು? ಎನ್ನುವುದನ್ನರಿತು ಜೀವವನ್ನೂ ಅದರ ವಿಕಾಸಾವಸ್ಥೆಯನ್ನೂ ನೋಡದಿದ್ದರೆ ಬೇರನ್ನು ಮರೆತು ಮರದ ತುದಿಯಲ್ಲಿನ ಹಣ್ಣುಗಳನ್ನು ನೋಡುವಂತಾಗುತ್ತದೆ ನಮ್ಮ ಸ್ಥಿತಿ. ಆದ್ದರಿಂದ ಮೂಲವರಿತು ನೋಡುವ ಶ್ರದ್ಧೆ ನಮಗೆ ಬೇಕಾಗಿದೆ" ಅಂತಹ ಶ್ರದ್ಧೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ. ನಮ್ಮ ಪೂಜ್ಯ ಪೂರ್ವಜರ ನಿಜವಾದ ಅನುವಂಶೀಯರಾಗೋಣ.

ಸೂಚನೆ: 12/1/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

ನರಕಾಸುರ (Narakasura)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ 
(ಪ್ರತಿಕ್ರಿಯಿಸಿರಿ lekhana@ayvm.in)


 


ನರನಿಗೆ ಅತ್ಯಂತ ದುಃಖವನ್ನುಂಟುಮಾಡುವುದೇ ನರಕ. ಅದನ್ನು ಪ್ರಕಟಪಡಿಸುವ ಸಾಕಾರಮೂರ್ತಿಯೇ ನರಕಾಸುರ. ಭೂಮಿದೇವಿಯ ಮಗನಾದ್ದರಿಂದ 'ಭೌಮ' ಎಂದೂ ಕರೆಯಲ್ಪಡುತ್ತಿದ್ದನು. ಇವನ ರಾಜಧಾನಿ ಪ್ರಾಗ್ಜ್ಯೋತಿಷಪುರ. ಜನ್ಮತಃ ಇವನು ಅಸುರ. ಉತ್ಕಟತಪಸ್ಸಿನ ಪ್ರಭಾವದಿಂದ ಮಹಾಬಲಿಷ್ಠನಾಗಿದ್ದನು. ಜೊತೆಗೆ ಅವನ ತಾಯಿಯ ವರವೂ ಸೇರಿತ್ತು - "ನನ್ನನ್ನು ಯಾರೂ ಕೊಲ್ಲುವುದಕ್ಕೆ ಆಗದಿರಲಿ" ಎಂದು ಪ್ರಾರ್ಥಿಸಿದಾಗ, ಭೂದೇವಿಯು "ಅದು ಅಸಾಧ್ಯ, ಬದಲಿಗೆ ನನ್ನ ಅನುಮತಿ ಇಲ್ಲದೆ ಯಾರೂ ನಿನ್ನನ್ನು  ಕೊಲ್ಲದಿರಲಿ" ಎಂದು ಆಶೀರ್ವಾದ ಮಾಡಿದ್ದಳು. ತಾಯಿಯಾದವಳು ಮಗನನ್ನು ಸಂಹರಿಸಲು ಅನುಮತಿ ಖಂಡಿತ ನೀಡಲಾರಳು ಎಂಬ ವಿಶ್ವಾಸದಿಂದ ಮರಣವೇ ಇಲ್ಲವೆಂಬ ಧೈರ್ಯ ಇವನಿಗೆ !!


ಇಂತಹ ಸೌಲಭ್ಯವನ್ನು ಲೋಕಕಲ್ಯಾಣಕ್ಕಾಗಿ ಉಪಯೋಗಿಸದೆ ವರಬಲದಿಂದ ಮತ್ತನಾಗಿ ಲೋಕಕಂಟಕನಾದ. ಧರ್ಮಸೇತುವೆಯನ್ನು ರಕ್ಷಿಸಲು ಭಗವಂತನಿಂದ ನಿಯಮಿಸಲ್ಪಟ್ಟಿರುವ ದೇವತೆಗಳಿಗೇ ಕಂಟಕನಾದನು. ತನ್ನ ಅಸಾಧಾರಣ ಪರಾಕ್ರಮದಿಂದ ಅವರನ್ನು ಜಯಿಸಿದ್ದಲ್ಲದೇ ಇಂದ್ರನ ಸಾರ್ವಭೌಮಛತ್ರವು, ದೇವಮಾತೆಯಾದ ಆದಿತೀದೇವಿಯ ಕುಂಡಲಗಳು ಮುಂತಾದ ಅವರ ಚಿಹ್ನೆಗಳನ್ನು ಕಿತ್ತುತಂದನು. ಇಂದ್ರನು "ನರಕಾಸುರನ ತೀವ್ರಉಪದ್ರವದಿಂದ ನಮ್ಮನ್ನು ಕಾಪಾಡಬೇಕು" ಎಂದು ಕೃಷ್ಣನಲ್ಲಿ ಪ್ರಾರ್ಥಿಸಿಕೊಂಡ. ಇಂದ್ರನ ಮೊರೆಯನ್ನು ಕೇಳಿದ ಶ್ರೀಕೃಷ್ಣನು ಗರುಡಾರೂಢನಾಗಿ ಪ್ರಾಗ್ಜ್ಯೋತಿಷಪುರಕ್ಕೆ ಹೊರಟನು. ಗರುತ್ಮಂತ ಭಗವಂತನಿಗೆ ವಾಹನವಷ್ಟೇ ಅಲ್ಲದೇ ಮಿತ್ರನಾಗಿಯೂ ದಾಸನಾಗಿಯೂ ಧ್ವಜವಾಗಿಯೂ ಶೇಷಭೂತನಾಗಿಯೂ ಇರುವವನು. ಶ್ರೀಕೃಷ್ಣನು ಸ್ಮರಿಸಿದಮಾತ್ರಕ್ಕೇ ಅವನ ಮುಂದೆ ಕಾಣಿಸಿಕೊಳ್ಳುವನು. ಇವನ ಸಾಮರ್ಥ್ಯವೆಂದರೆ ಭೂಮಿಯಲ್ಲಿ, ಸಮುದ್ರದಲ್ಲಿ, ಸ್ವರ್ಗದಲ್ಲಿ, ಪರಮವೈಕುಂಠದಲ್ಲಿಯಾಗಲೀ ಸಂಚರಿಸಬಲ್ಲವನು. ಇಂತಹ ಗರುಡನ ಹೆಗಲೇರಿ ಸತ್ಯಭಾಮಾ ಸಮೇತನಾಗಿ ನರಕಾಸುರನ ರಾಜಧಾನಿಗೆ ಹೊರಟನು. ಸತ್ಯಭಾಮೆಯೂ ಭೂದೇವಿಯ ಅವತಾರವೇ. ಭೂಮಾತೆಯು ಅನುಮತಿ ಕೊಡುವವರೆಗೂ ಅವನಿಗೆ ಮರಣವಿಲ್ಲವೆಂಬ ವರಪಡೆದವನ ಸಂಹಾರಕ್ಕೆ ಭೂದೇವಿಯೇ ಆಜ್ಞೆಯನ್ನು ನೀಡಬೇಕು. 


ಪ್ರಾಗ್ಜ್ಯೋತಿಷಪುರವು ಗಿರಿದುರ್ಗ-ಶಸ್ತ್ರದುರ್ಗ-ಜಲದುರ್ಗ-ಆಗ್ನಿದುರ್ಗ-ವಾಯುದುರ್ಗಗಳೆಂಬ ಐದು ದುರ್ಗಗಳಿಂದ ಕೂಡಿದ್ದಾಗಿತ್ತು. ಇದು ಸಾಲದೋ ಎಂಬಂತೆ, ಮುರಾಸುರನೆಂಬ ಐದು ತಲೆಯ ರಾಕ್ಷಸನ ನೂರಾರು ಪಾಶಗಳು ಇದಕ್ಕೆ ರಕ್ಷಣೆಯನ್ನು ನೀಡುತ್ತಿದ್ದವು. ಶ್ರೀಕೃಷ್ಣನು ತನ್ನ ಗದೆಯಿಂದ ಅಲ್ಲಿಯ ಗಿರಿದುರ್ಗವನ್ನೂ, ಬಾಣಗಳಿಂದ ಶಸ್ತ್ರದುರ್ಗವನ್ನೂ ಸುದರ್ಶನ ಚಕ್ರದಿಂದ ಜಲ-ಅಗ್ನಿ-ವಾಯುದುರ್ಗಗಳನ್ನೂ ಧ್ವಂಸಮಾಡಿದನು. ಅಂತೆಯೇ ತನ್ನ ನಂದಕವೆಂಬ ಕತ್ತಿಯಿಂದ ಮುರಾಸುರನ ನೂರಾರು ಪಾಶಗಳನ್ನು ಕತ್ತರಿಸುತ್ತಾ ತನ್ನ ಅಮೋಘವಾದ ಶಂಖನಾದದಿಂದ ಅಸುರರ ಹೃದಯಗಳನ್ನೂ ಯಂತ್ರಗಳನ್ನೂ ಭೇದಿಸಿದನು. ಶಂಖದ ಭಯಂಕರ ಧ್ವನಿಯನ್ನು ಕೇಳಿ ಮುರಾಸುರನು ನಿದ್ರೆಯಿಂದೆದ್ದು ತ್ರಿಶೂಲದೊಡನೆ ಕ್ರೋಧದಿಂದ ಧಾವಿಸಿದನು. ಶೂಲವನ್ನು ಗರುತ್ಮಂತನಮೇಲೆ ವೇಗವಾಗಿ ಎಸೆದಾಗ ಕೃಷ್ಣನು ಅದನ್ನು ಚೂರುಮಾಡಿದನು. ಹೀಗೆ ಅವನ ಅನೇಕ ಅಸ್ತ್ರ-ಶಸ್ತ್ರಗಳು ವಿಫಲವಾದಮೇಲೆ ಕಡುಕೋಪದಿಂದ ಓಡಿಬರುತ್ತಿದ್ದ ಮುರಾಸುರನ ಐದೂತಲೆಗಳನ್ನು ಲೀಲಾಜಾಲವಾಗಿ ಚಕ್ರಾಯುಧದಿಂದ ಕತ್ತರಿಸಿದನು. ತಂದೆಯ ಮರಣದಿಂದ ಕೋಪಗೊಂಡ ಮುರನ ಏಳುಮಂದಿ ಪುತ್ರರು ಪ್ರಯೋಗಿಸಿದ ಅನೇಕಾನೇಕ ಆಯುಧಗಳನ್ನು ಕೃಷ್ಣನು ಛಿದ್ರಛಿದ್ರವಾಗಿಸಿ ಅವರ ತಲೆಗಳನ್ನೂ ಕತ್ತರಿಸಿದನು. 

ನಂತರ ನರಕನೇ ಕೋಪಾವೇಶದಿಂದ ಕೃಷ್ಣನನ್ನು ಎದುರಿಸಿದನು. ಮೊದಲು ಗರುತ್ಮಂತನಮೇಲೆ ನೂರಾರು ಜನರನ್ನು ಸಂಹರಿಸುವಂತಹ ತನ್ನ ಶತಘ್ನಿಯನ್ನು(ಇಂದಿನ ಬಾಂಬ್ ನಂತೆ) ಪ್ರಯೋಗಿಸಿದ. ಶ್ರೀಕೃಷ್ಣನು ತನ್ನ ತೀಕ್ಷ್ಣವಾದ ಬಾಣಗಳಿಂದ ಅದನ್ನು ವಿಫಲಗೊಳಿಸಿ ಅನೇಕಾನೇಕ ರಾಕ್ಷಸರನ್ನೂ ಮಹಾಸೇನೆಯನ್ನೂ ಸಂಹಾರ ಮಾಡಿದನು. ಗರುಡನೂಸಹ ತನ್ನ ರೆಕ್ಕೆಗಳ ಬಡಿದಾಟದಿಂದ ಅಸುರಸೈನ್ಯವನ್ನು ಸಂಹಾರ ಮಾಡುತ್ತಿದ್ದನು. ಆಗ ನರಕಾಸುರನೇ ತನ್ನ ಶಕ್ತ್ಯಾಯುಧವನ್ನು ಕೃಷ್ಣನಮೇಲೆ ಪ್ರಯೋಗಿಸಿದನು. ಅದನ್ನು ಸಹಿಸಲಾರದ ಸತ್ಯಭಾಮೆಯು ಅವನನ್ನು ಕೂಡಲೇ ಸಂಹರಿಸೆಂದು ಆಜ್ಞಾಪಿಸಿದಳು. ಆಗ ಕೃಷ್ಣನು ಆತನ ಆಯುಧದಿಂದ ಸ್ವಲ್ಪವೂ ವಿಚಲಿತನಾಗದೆ ಆತನ ತಲೆಯನ್ನು ಚಕ್ರಾಯುಧದಿಂದ ಕತ್ತರಿಸಿ ಭೂಮಿಯಲ್ಲಿ ಬೀಳಿಸಿದನು. ಅಸುರರಲ್ಲಿ ಹಾಹಾಕಾರವಾಗುತ್ತಲೇ ದೇವತೆಗಳೆಲ್ಲ ಪುಷ್ಪವೃಷ್ಟಿಸಮೇತ ಸ್ತುತಿಸಿದರು. ಭೂಮಾತೆಯೂ ಅಸುರನು ದುರಹಂಕಾರದಿಂದ ಅಪಹರಿಸಿದ್ದ ದಿವ್ಯಪದಾರ್ಥಗಳೆಲ್ಲವನ್ನೂ  ಕೃಷ್ಣನಿಗೆ ಒಪ್ಪಿಸಿ ನಮಸ್ಕರಿಸಿದಳು. ನರಕಾಸುರನಿಂದ ಸೆರೆಹಿಡಿಯಲ್ಪಟ್ಟಿದ್ದ ಹದಿನಾರು ಸಾವಿರ ಸ್ತ್ರೀಯರನ್ನೂ ಕೃಷ್ಣನು ವಿವಾಹವಾದನು.


ತತ್ತ್ವಾರ್ಥ: ಭೂದೇವಿಯ ಮಕ್ಕಳಾಗಿ ಆಕೆಯ ಸಂಪತ್ತುಗಳನ್ನು ರಕ್ಷಿಸದೆ ಆಸುರೀಪ್ರವೃತ್ತಿಯಿಂದ ಸೂರೆಯಾಡಿ  ದೇವಲೋಕ-ಮನುಷ್ಯಲೋಕದ ಕಂಟಕರಾಗುವವರೆಲ್ಲರೂ ನರಕಾಸುರರೇ. ಪ್ರಾಗ್ಜ್ಯೋತಿಷಪುರವೆಂಬುದು   ಹೊರಮುಖವಾದ ಇಂದ್ರಿಯಗಳಕಡೆ ಹರಿಯುವ ಪ್ರವೃತ್ತಿಯುಳ್ಳ ದೇಶ. ಇದು ಯೋಗಿಗಳ ನೆಲೆಯಾದ  ಪ್ರತ್ಯಗ್ಜ್ಯೋತಿಷಪುರಕ್ಕೆ-ಅಂತರ್ಮಾರ್ಗಕ್ಕೆ ವಿರುದ್ಧವಾದುದು. ಹೀಗೆ ರಾಜಧಾನಿಯ ಹೆಸರೂ ಅನ್ವರ್ಥವಾಗಿಯೇ ಇದೆ!   ಐದುತಲೆಯ ಮುರಾಸುರನೂ ಆತನ ಪಾಶಗಳೂ ಪಂಚಪ್ರಾಣಗಳನ್ನೂ ಅವುಗಳ ವೃತ್ತಿಗಳನ್ನೂ ಪ್ರತಿನಿಧಿಸುತ್ತವೆ.  ಅವನ ನಗರದ ಪಂಚದುರ್ಗಗಳು ಪಂಚಭೂತಗಳನ್ನು ಪ್ರತೀಕಿಸುತ್ತವೆ. ಸೆರೆಹಿಡಿಯಲ್ಪಟ್ಟ ಸ್ತ್ರೀಯರೇ ಹದಿನಾರುಸಾವಿರ ನಾಡಿಗಳು. ಆತನ ಕೃತ್ಯಗಳಿಂದ ಬಾಧಿತವಾದವುಗಳನ್ನು ಬಿಡಿಸಿ ಪರಮಾತ್ಮ ತನ್ನದಾಗಿಸಿಕೊಳ್ಳುವುದೇ ಆತನ ವಿವಾಹದಿಂದ ಸೂಚಿಸಲ್ಪಡುವುದು. ಹೀಗೆ ಸರ್ವಾತ್ಮನಾ ಇಂದ್ರಿಯ ಪ್ರಪಂಚದಲ್ಲೇ ಓಡಾಡುತ್ತಾ ತೀವ್ರ ಹಿಂಸಾಪ್ರವೃತ್ತಿಯುಳ್ಳವನನ್ನು ವಶಪಡಿಸುವುದು ಇಂದ್ರಿಯಗಳ ರಾಜನಾದ ದೇವೇಂದ್ರನಿಗೂ ಸಾಧ್ಯವಾಗುವುದಿಲ್ಲ. ಸಾಕ್ಷಾತ್ ಮಹಾವಿಷ್ಣುವೇ ಪ್ರಾಣಸ್ವರೂಪನಾದ ಗರುತ್ಮಂತಸಹಿತನಾಗಿ ಆಗಮಿಸಿ ಆಸುರೀಭಾವವನ್ನು ಸಂಪೂರ್ಣವಾಗಿ ನಾಶಪಡಿಸಿ ಇಂದ್ರಿಯಾತೀತಸ್ಥಿತಿಗೆ ಒಯ್ಯಬೇಕಾಗುವುದು ಎಂಬ ತತ್ತ್ವವನ್ನು ಬೋಧಿಸುವ ಸುಂದರ ಕಥೆಯಿದು.


ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  13/1/2024 ರಂದು ಪ್ರ

Sunday, January 7, 2024

ಯಕ್ಷ ಪ್ರಶ್ನೆ 71 (Yaksha prashne 71)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)ಪ್ರಶ್ನೆ – 70 ಸ್ವರ್ಗವನ್ನು ಸೇರದಿರಲು ಕಾರಣವೇನು ?

ಉತ್ತರ - ಸಂಗ   

ಈ ಹಿಂದಿನ ಲೇಖನದಲ್ಲಿ ಮಿತ್ರರನ್ನು ಬಿಡಲು ಕಾರಣವೇನು? ಎಂಬುದನ್ನು ಯಕ್ಷ ಕೇಳಿದ್ದ. ಮಿತ್ರರನ್ನು ಸಂಪಾದಿಸಬೇಕು, ಸನ್ಮಿತ್ರರು ನಮ್ಮನ್ನು ಸಂಸಾರವೆಂಬ ಬಂಧನದಿಂದಲೇ ಬಿಡಿಸಲೂಬಹುದು, ಯಾವುದೋ ಆಸೆಯಿಂದ ಅಂತಹ ಮಿತ್ರರನ್ನೂ ನಾವು ಕಳೆದುಕೊಳ್ಳುತ್ತೇವೆ, ಲೋಭದಿಂದ ಕಳೆದುಕೊಳ್ಳುವುದು ನಷ್ಟವೇ ಸರಿ, ಎಂಬ ಮಾತುಗಳನ್ನು ಆಡಲಾಗಿತ್ತು. ಆದರೆ ಪ್ರಕೃತ ಪ್ರಶ್ನೆಯಲ್ಲಿ ಇದಕ್ಕೆ ವಿರುದ್ಧವಾದ ಚಿಂತನೆಯನ್ನು ಮಾಡುತ್ತಿರುವಂತೆ ಕಾಣುತ್ತಿದೆ ಯಕ್ಷನ ಈ ಪ್ರಶ್ನೆಯಲ್ಲಿ. ಹಿಂದಿನ ಪ್ರಶ್ನೆಯಲ್ಲಿ ಸಂಗದ ಮಹತ್ತ್ವ ಮತ್ತು ಅನಿವಾರ್ಯವನ್ನು ಕೊಂಡಾಡಲಾಗಿತ್ತು. ಆದರೆ ಈ ಪ್ರಶ್ನೆಯಲ್ಲಿ ಸಂಗವೇ ಬೇಡ ಎಂಬುದನ್ನು ಬಲವಾಗಿ ಪ್ರತಿಪಾದಿಸಿದಂತೆ ಕಾಣುತ್ತಿದೆ. ಇದು ಪೂರ್ವಾಪರ್ಯ ವಿರೋಧವಲ್ಲವೇ? ಇದು ಗೊಂದಲಕ್ಕೆ ಕಾರಣವಲ್ಲವೇ?

ಇಲ್ಲಿ ವಿರೋಧವೂ ಇಲ್ಲ. ಗೊಂದಲವೂ ಇಲ್ಲ. ವಿಷಯವನ್ನು ಒಂದು ನೇರಕ್ಕೆ ಅರ್ಥಮಾಡಿಕೊಂಡಾಗ ಗೊಂದಲ ನಿವಾರಣೆಯಾಗುತ್ತದೆ. ನಮಗೆ ಸಂಗ ಎಲ್ಲಿಯವರೆಗೆ ಬೇಕು? ಮತ್ತು ಯಾವುದು ಲಭ್ಯವಾದರೆ ಮುಂದಕ್ಕೆ ಸಂಗಕ್ಕೆ ಆಸ್ಪದವಿಲ್ಲ ಎಂಬುದನ್ನು ವಿವೇಚಿಸಿಕೊಂಡಾಗ ಈ ಗೊಂದಲಕ್ಕೆ ತೆರೆ ಎಳೆದಂತಾಗುವುದು. 

ಯಾವುದನ್ನೇ ಸಾಧಿಸಬೇಕಾದರೂ ಅಲ್ಲಿ ಗಮ್ಯ ಮತ್ತು ಅದಕ್ಕೆ ಅನುಕೂಲಕರವಾದ ಗಮಕ-ಸಾಧನ ಎಂಬ ಎರಡು ಅಂಶಗಳು ಬಹಳ ಮುಖ್ಯ. ಗಮ್ಯಸ್ಥಾನವನ್ನು ತಲುಪಿದ ಮೇಲೆ ಮತ್ತೆ ಆ ಸಾಧನಾವಲಂಬನೆ ಬೇಕಾಗಿಲ್ಲ. ಗಮ್ಯಸ್ಥಾನವನ್ನು ತಲುಪುವ ತನಕ ಅದನ್ನು ಬಡುವಂತೆಯೂ ಇಲ್ಲ. 'ಮನದಿದಾಟಿದ ಮೇಲೆ ಅಂಬಿಗನ ಹಂಗೇನು?' ಎಂಬ ಗಾದೆಮಾತು ಈ ನೇರದಲ್ಲೇ ಬಂದಿದೆ. ಯಾವುದೇ ಅಪಾಯವಿಲ್ಲದೇ ನದಿಯನ್ನು ಅಂಬಿಗ ದಾಟಿಸಿದ್ದಾನಲ್ಲ; ದಾಟಿದ ಮೇಲೆ ಅವನನ್ನು ಬಿಡುವುದು ಸರಿಯೇ? ಅವನಿಗೆ ಬೇಸರವಾಗುವುದಿಲ್ಲವೇ ಬಿಟ್ಟರೆ? ಅಥವಾ ದೋಣಿ ನಮ್ಮನ್ನು ದಾಟಿಸಿದೆಯಲ್ಲ! ದೋಣಿಯನ್ನು ಬಿಟ್ಟು ಹೋಗುವುದೆಂತು? ಎಂದು ಪ್ರೀತಿಯನ್ನು ತೋರಿಸಿ ಅಲ್ಲೇ ಕುಳಿತುಕೊಂಡರೆ ಪಾರಕ್ಕೆ ತಲುಪಲು ಸಾಧ್ಯವೇ ಇಲ್ಲ. ಆ ಕಡೆ ಹೋಗದಿದ್ದರೆ ಅಂಬಿಗನೂ ನಮ್ಮನ್ನು ಬಿಡನು. ದೋಣಿಯಿಂದ ಕೆಳಗಿಳಿಸಿ ಮತ್ತೊಬ್ಬನನ್ನು ದಾಟಿಸಲು ಅದೇ ದೋಣಿಯನ್ನು ಬಳಸಿಕೊಳ್ಳಬೇಕಾಗುತ್ತದೆ. ನದಿಯನ್ನು ದಾಟುವ ತನಕ ಅಂಬಿಗನ ಮೇಲೆ ನಂಬಿಕೆ ಪ್ರೀತಿ, ದೋಣಿ ನಮ್ಮದೇ ಎಂಬ ಮಮತೆ ಇವೆಲ್ಲಲೂ ಬೇಕೇಬೇಕು. ಅದಿಲ್ಲದಿದ್ದರೆ ನಾವು ನದಿಯನ್ನು ದಾಟಲು ಸಾಧ್ಯವೇ ಇಲ್ಲ. ಆಲಿ ಸಾಧನದ ಬಗ್ಗೆ ಅಪವಿಶ್ವಾಸ ಸರ್ವಥಾ ಸಲ್ಲದು. ಇದೇ ವಿಷಯವನ್ನೇ ಯಕ್ಷನ ಪ್ರಶ್ನೆಯ ಉತ್ತರವಾಗಿ ಭಾವಿಸಬೇಕು. 

ಸಂಗವೆಂದರೆ ಸಂಬಂಧ. ನಮ್ಮ ಜೀವನದಲ್ಲಿ ಅನೇಕ ವಸ್ತುಗಳನ್ನು ಸಂಗ್ರಹಿಸುವುದು  ಅನಿವಾರ್ಯ. ಅವುಗಳ ಪ್ರಭಾವ ನಮ್ಮ ಮನಸ್ಸು ಇಂದ್ರಿಯಗಳ ಮೇಲೆ ಆಗುತ್ತದೆ. ಆಗ ಸಹಜವಾಗಿ ಇಂದ್ರಿಯ ಮನುಸ್ಸುಗಳು ಬಹಿರ್ಮುಖವಾಗುತ್ತವೆ. ಮನಸ್ಸು ಬಹಿರ್ಮುಖವಾಗುವುದನ್ನೇ ಸಂಗವೆಂದೂ, ಅದೇ ಮನಸ್ಸು ಅಂತರ್ಮುಖವಾಗುವುದನ್ನು ನಿಸ್ಸಂಗವೆಂದು ಕರೆಯಲಾಗಿದೆ. ಈ ನಿಸ್ಸಂಗಭಾವವೇ ನಿರ್ಮೋಹಭಾವಕ್ಕೂ ಕಾರಣ.  ನಿಶ್ಚಲವಾದ ತತ್ತ್ವವನ್ನು ನಾವು ಪಡೆಯಬೇಕಾದರೆ ಇಂತಹ ನಿಸ್ಸಂಗ ಭಾವವನ್ನು ಬೆಳೆಸಿಕೊಳ್ಳಬೇಕು. ಅದಲ್ಲದಿದ್ದರೆ ಎಂತಹ ಸ್ವರ್ಗಸುಖವೇ ಆದರೂ ನವದನ್ನು ಪಡೆಯಲು ಅಸಾಧ್ಯ ಎಂಬುದು ಈ ಉತ್ತರದ ಆಶಯವಾಗಿದೆ. 

ಸೂಚನೆ : 7/1/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.