Sunday, January 28, 2024

ದೇವಾಸುರರ ಪ್ರಕೃತಿಗಳು (Devasurara Prakrtigalu)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ
(ಪ್ರತಿಕ್ರಿಯಿಸಿರಿ lekhana@ayvm.in)

ತ್ರಿಗುಣಗಳು ಮತ್ತು ದೇವಾಸುರರು  

ದೇವಾಸುರರಿಬ್ಬರ ಸಹಾಯದಿಂದಲೇ ಭಗವಂತನು ತನ್ನ ಸೃಷ್ಟಿ-ಸ್ಥಿತಿ-ಲಯ ವ್ಯಾಪಾರವನ್ನು ಮಾಡುವನು. ಈ ಮೂರರಲ್ಲಿಯೂ ಜೊತೆಜೊತೆಯಾಗಿಯೇ ಇರುತ್ತಾರೆ. ತ್ರಿಗುಣಗಳಲ್ಲಿ ದೇವತೆಗಳಲ್ಲಿ ಸತ್ವಗುಣಪ್ರಧಾನ, ರಜಸ್ತಮೋಗುಣಗಳು ಗೌಣ. ಅಸುರರಲ್ಲಿ ರಜಸ್ತಮೋಗುಣಗಳು ಪ್ರಧಾನ, ಸತ್ವಗುಣವು  ಗೌಣ. ರಜೋಗುಣ ಎನ್ನುವುದು ಎರಡೂಕಡೆಯಲ್ಲಿಯೂ ಸೇರುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸತ್ವಗುಣದ ಜೊತೆಯಲ್ಲಿದ್ದಾಗ ದೇವತಾಂಶ ಹೆಚ್ಚಾಗಿರುತ್ತದೆ. ತಮೋಗುಣದ ಕಡೆ ಸೇರಿದರೆ ಆಸುರೀಭಾವ ಹೆಚ್ಚಾಗುತ್ತದೆ. ಆದ್ದರಿಂದ ಮನುಷ್ಯ ಇದನ್ನನುಸರಿಸಿ ತನ್ನ ಪ್ರಕೃತಿಯಲ್ಲಿ ಸಮತೋಲನವನ್ನು ಸಾಧಿಸುವ ರೀತಿಯಲ್ಲಿ ಜೀವನ ಕ್ರಮವನ್ನು ಅಳವಡಿಸಿಕೊಳ್ಳಬೇಕು. 

 

ಅಸುರಸೃಷ್ಟಿಯ ಅವಶ್ಯಕತೆಯಾದರೂ ಇದೆಯೇ? 

 ಅಸುರರು ಏಕೆ ಇರಬೇಕು? ದೇವತೆಗಳು ಮಾತ್ರವಿದ್ದರೆ ಸಾಲದೇ? ಎಂಬ ಪ್ರಶ್ನೆ ಏಳಬಹುದು. ಮೂಗು ಸುವಾಸನೆಯನ್ನು ಮಾತ್ರ ಗ್ರಹಿಸಬೇಕು, ದುರ್ವಾಸನೆ ಗ್ರಹಿಸುವಂತಿಲ್ಲ ಎಂದು ಹೇಳಲಾದೀತೇ? ಅಂತೆಯೇ ಬ್ರಹ್ಮನಿಗೂ ದೇವತೆಗಳನ್ನು ಮಾತ್ರ ಸೃಷ್ಟಿಮಾಡಲು ಸಾಧ್ಯವಿಲ್ಲ. ಕೇವಲ ಸತ್ತ್ವಗುಣದಿಂದ ಸೃಷ್ಟಿಯು ಅಸಾಧ್ಯ. ರಜಸ್ತಮೋಗುಣಗಳ ಅತಿರೇಕದಲ್ಲಿ ಅಸುರರ ಉತ್ಪತ್ತಿ. ಹೀಗಾಗಿ ದೇವತೆಗಳ-ಅಸುರರ ಸಹಬಾಳ್ವೆ,  ಅಣ್ಣತಮ್ಮಂದಿರಂತೆ. ಒಂದೇ ತಂದೆಯ ಮಕ್ಕಳು ಎಂಬ ಮಾತಿಗೂ ಇದೆ ಅರ್ಥ. ಕ್ರಮಬದ್ಧವಾಗಿ ಕಾರ್ಯಸಾಗದೇ ವ್ಯತ್ಯಾಸವಾದಾಗ ಏನಾಗಬೇಕೆನ್ನುವುದಕ್ಕೂ ಒಂದು ಹಾದಿ ಬೇಕು. ಅದನ್ನು ನಡೆಸಿಕೊಡುವವರು ಅಸುರರೇ. ಒಬ್ಬರು ಎಚ್ಚರತಪ್ಪಿದರೆ ಮತ್ತೊಬ್ಬರು ತಮ್ಮ ಕೆಲಸವನ್ನು ಸಾಧಿಸಿಕೊಳ್ಳಲು ಕಾಯುತ್ತಲೇ ಇರುವರು. ಇಬ್ಬರಿಗೂ ಪೈಪೋಟಿ- ಯುದ್ಧ ನಡೆಯುತ್ತಲೇ ಇರುತ್ತದೆ. ಒಬ್ಬರು ಗೆದ್ದರೆ ಮತ್ತೊಬ್ಬರು ಸೋಲನ್ನಪ್ಪುವರೆನ್ನುವುದು ನಿತ್ಯಸತ್ಯ.  


ದೈವಾಸುರರಲ್ಲಿನ  ಭೇದ 

 ದೈವೀ ಮತ್ತು ಆಸುರೀ/ರಾಕ್ಷಸೀ ಪ್ರವೃತ್ತಿಗಳೆರಡೂ ಪ್ರಕೃತಿಯ ಅಭಿವ್ಯಕ್ತಿಗಳೇ. ಮನುಷ್ಯನ  ಚರ್ಯೆಯಲ್ಲಿ ಇವೆರಡರ ಮಿಶ್ರಣವನ್ನು ಕಾಣಬಹುದು. ಇದಕ್ಕೆ ಕಾರಣ ಜೀವಿಯ ಪೂರ್ವಕರ್ಮ. ಕರ್ಮದಂತೆ ಜನ್ಮ. ಪುಣ್ಯ ಕರ್ಮದಿಂದ ಸತ್ಕುಲದಲ್ಲಿ ಜನ್ಮವೆತ್ತಿದ ಉತ್ತಮನ ಲಕ್ಷಣಗಳನ್ನು ಶ್ರೀಕೃಷ್ಣನು ಗೀತೆಯಲ್ಲಿ ವರ್ಣಿಸುತ್ತಾನೆ:  ನಿರ್ಭಯವಾಗಿ ಸತ್ಯವನ್ನು ನುಡಿಯುವುದು-ಧರ್ಮವನ್ನಾಚರಿಸುವುದು, ವಿನಯ, ನಿರ್ಮಲಮನಸ್ಕನಾಗಿರುವುದು,  ಭಗವಂತನನ್ನು ಪಡೆಯುವ ಹಂಬಲ-ಸಾಧನೆ, ದಾನ, ಇಂದ್ರಿಯಸಂಯಮ, ಈಶ್ವರಪೂಜೆ, ಸ್ವಾಧ್ಯಾಯ, ತಪಸ್ಸು, ಸರಳತೆ, ಚಾಡಿಹೇಳುವ ಚಾಳಿ ಇಲ್ಲದಿರುವುದು-ಇವೆಲ್ಲ ಸಾತ್ತ್ವಿಕಗುಣಗಳು, ದೈವೀಸಂಪತ್ತು. 

ಇದರ ವಿರುದ್ಧವಾದ ಆಸುರೀಸಂಪತ್ತಿನ ದುರ್ಲಕ್ಷಣಗಳು: ಕಾಮಕ್ರೋಧಾದಿ ಅರಿಷಡ್ವರ್ಗಗಳು. ಇವು  ಪೂರ್ವಜನ್ಮ ಪಾಪದಫಲ- ಸಂಸಾರ ಬಂಧನ ಹಾಗೂ ನರಕಕ್ಕೆ ಅಣಿಮಾಡುವುವು.  ಕಾಮ-ಕ್ರೋಧ-ಲೋಭಗಳು ನರಕಕ್ಕೆ ಮೂರು ಬಾಗಿಲುಗಳಂತೆ. ಕೆಲವರಲ್ಲಿ ಇವು ಉಲ್ಬಣವಾಗಿದ್ದುದನ್ನು ಕಾಣಬಹುದು - ಕೀಚಕನಲ್ಲಿ ಕಾಮವುಪ್ರಧಾನ; ಕಂಸನಲ್ಲಿ ಕ್ರೋಧ; ದುರ್ಯೋಧನನಲ್ಲಿ ಲೋಭ. ಮೂರೂ ಸೇರಿದ್ದು ರಾವಣನಲ್ಲಿ! ಇವುಗಳ ಜೊತೆಗೆ ಮೋಹ-ಮದ-ಮಾತ್ಸರ್ಯ. ಈ ಗುಣಗಳು ಚೆನ್ನಾಗಿ ಊರಿದಾಗ ಫಲ - ಸತ್ಯ-ಈಶ್ವರ-ವೇದ ಯಾವುದನ್ನೂ ಒಪ್ಪುವುದಿಲ್ಲ, ಧರ್ಮವ್ಯವಸ್ಥೆ ಕೃತ್ರಿಮ ಎಂಬಿತ್ತ್ಯಾದಿ ನಾಸ್ತಿಕವಾದ, ಪ್ರತ್ಯಕ್ಷವೆಷ್ಟೋ ಅಷ್ಟೇ ಜೀವನವೆಂಬ ನಂಬಿಕೆ, ಜಗತ್ತು ಕೇವಲ ಪರಮಾಣುಸಂಘಟನೆ ಎನ್ನುವವಾದ(materialists),  ಇತ್ಯಾದಿ.  


ಮೈ-ಮನಗಳ ಮೇಲೆ ಅಸುರರ ದಾಳಿ   

ಕತ್ತಿಯನ್ನು ತರಕಾರಿ ಹೆಚ್ಚುವುದಕ್ಕೆ ಉಪಯೋಗಿಸುವಾಗ ಸ್ವಲ್ಪ ಎಚ್ಚರತಪ್ಪಿದರೆ ಬೆರಳನ್ನು  ಕೊಯ್ದುಕೊಳ್ಳುತ್ತೇವೆ. ರಕ್ತ ಸುರಿಯುತ್ತದೆ. ಬೆರಳನ್ನು ಕೊಯ್ದು ರಕ್ತಬರಿಸುವುದು ಕತ್ತಿಯ ಗುರಿಯಲ್ಲ. ಅದನ್ನು ಕ್ರಮವರಿತು ಉಪಯೋಗಿಸಿದ್ದಲ್ಲಿ ಸತ್ಪ್ರಯೋಜನವಾಗುತ್ತಿತ್ತು. ಅಂತೆಯೇ ದೇವತೆಗಳ ಸಹಾಯದಿಂದಾಗುವುದು ಸತ್ಪ್ರಯೋಜನ, ಆದರೆ ಅಜಾಗರೂಕ ವರ್ತನೆಯಾದರೆ ಅಸುರರು ಮುನ್ನುಗ್ಗಿ ವಿಪರೀತ ಪರಿಣಾಮ. ಎಚ್ಚರಿಕೆ ವಹಿಸಿದಾಗ ಅಸುರರ ಹಿನ್ನಡೆ, ದೇವತೆಗಳ ಮುನ್ನಡೆ. ಇದೇ ದೇವಾಸುರರ ನಡುವಣ ಸಾಗುವ ಯುದ್ಧದ ಪರಿಣಾಮ. 

ಹಾಗೆಯೇ ಇನ್ನು ನಮ್ಮ ಮನಸ್ಸಿನ ಮೇಲಾಗುವ ಪರಿಣಾಮವನ್ನು ಗಮನಿಸಿದರೆ, ಪ್ರಮಾದಕ್ಕೆ ವಶರಾದರೆ (ಎಚ್ಚರತಪ್ಪಿದರೆ) ಸಮಯಕಾಯುತ್ತಿರುವ ಅಸುರರು ನಮ್ಮ ಮೇಲೆ ದಾಳಿಮಾಡಿ ನಮ್ಮಲ್ಲಿ ದುಷ್ಟವಾದ ಭಾವನೆಗಳನ್ನು ಅಂದರೆ ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಎಬ್ಬಿಸುವರು. ಅಂತೆಯೇ ಬುದ್ಧಿಯಲ್ಲಿ ವಿಕೃತಿಯನ್ನು ಒಡ್ಡುವರು- ಪರಿಣಾಮ, ನಾಸ್ತಿಕವಾದ ರುಚಿಸತೊಡಗುವುದು. ಸತ್ಯ-ಧರ್ಮದಲ್ಲಿ ಅಸಡ್ಡೆ ಹುಟ್ಟುವುದು. 

 

ತಿಳಿಯದಿದ್ದರೂ ಕೆಲಸ ನಡೆಯುವುದೇ? 

ನಮ್ಮ ಪ್ರಕೃತಿಯಲ್ಲಿ ಭೌತಿಕ-ದೈವಿಕ-ಆಧ್ಯಾತ್ಮಿಕ ಏಳಿಗೆಗೆ ಪೋಷಕವಾದ ಧರ್ಮ ಒಂದುಂಟು. ಆ ಧರ್ಮದ ರಕ್ಷಕರೇ ದೇವತೆಗಳು.  ನಮ್ಮ ದೈನಂದಿನ ಕರ್ಮಗಳಲ್ಲಿ ದೇವತೆಗಳ ಪಾತ್ರದ ಅರಿವು ನಮಗಿಲ್ಲದಿರಬಹುದು. ಆದರೂ ತಮಗೆ ವಿಧಿಸಿರುವ ಕರ್ತವ್ಯವನ್ನು ಅವರು ನಿರ್ವಹಿಸುತ್ತಲೇ ಇರುವರು. ಏಕೆಂದರೆ ಇವರೆಲ್ಲರೂ ಭಗವಂತನಿಂದ ತನ್ನ ಸೃಷ್ಟಿ-ಸ್ಥಿತಿ-ಲಯ ಕಾರ್ಯನಿರ್ವಹಣೆಗೆ ನಿಯಮಿಸಲ್ಪಟ್ಟವರು. ಉದಾಹರಣೆಗೆ Passport officeಗೆ ಅಪ್ಲಿಕೆಷನ್ ಕೊಟ್ಟರೆ ಸಾಕು. ಅಲ್ಲಿಯ ಕಾರ್ಯವಿಧಾನಗಳ ಪೂರ್ಣಅರಿವು ನಮಗೆ ಇರಬೇಕೆಂದಿಲ್ಲ. ಅದಕ್ಕಾಗಿ ನಿಯಮಿಸಲ್ಪಟ್ಟವರ ಹೊಣೆಗಾರಿಕೆ ಅದು. ಅಂತೆಯೇ ನಮ್ಮಲ್ಲೂ ಕೂಡ ದೇವಾಸುರರಿಬ್ಬರೂ ಭಗವಂತನ ಆಜ್ಞಾನುಸಾರ ಕಾರ್ಯಗಳನ್ನು ನಿರ್ವಹಿಸುವರು. ನಮಗೆ ಅದರ ಅರಿವಿರಲಿ-ಇಲ್ಲದಿರಲಿ ನಾವು ಒಪ್ಪಲಿ-ಒಪ್ಪದಿರಲಿ ಅವರವರ ಕಾರ್ಯಗಳು ನಡೆಯುತ್ತಲೇ ಇರುತ್ತವೆ. ಆದ್ದರಿಂದ ಇಬ್ಬರ ಸಹಕಾರವೂ ನಮ್ಮ ಜೀವನದ ಆಗುಹೋಗುಗಳಿಗೆ ಅವಶ್ಯಕ.  


ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  27/1/2024 ರಂದು ಪ್ರಕವಾಗಿದೆ.