ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ವಿವಾಹ ಸಂಭ್ರಮ – ಉಡುಗೊರೆ-ಆಶೀರ್ವಾದಗಳು
ಯುಧಿಷ್ಠಿರನನ್ನು ಕೃಷ್ಣೆಯೊಂದಿಗೆ ಕುಳ್ಳಿರಿಸಿದರು; ಪಾಣಿಗ್ರಹಣ ಮಾಡಿ ಅವರಿಬ್ಬರೂ ಅಗ್ನಿಗೆ ಪ್ರದಕ್ಷಿಣೆ ಬರುವಂತೆ ಮಾರ್ಗದರ್ಶನವಿತ್ತರು, ಧೌಮ್ಯರು.
ಆ ಬಳಿಕ, ಕ್ರಮವಾಗಿ ಒಂದೊಂದು ದಿನಕ್ಕೊಬ್ಬೊಬ್ಬರಂತೆ ಉಳಿದ ಪಾಂಡವರೂ ದ್ರೌಪದಿಯನ್ನು ವಿವಾಹವಾದರು. ಅಲ್ಲೊಂದು ಅದ್ಭುತವೂ ನಡೆಯಿತು. ಅದು ದೇವರ್ಷಿಯೊಬ್ಬರಿಂದ ವಿದಿತವಾಯಿತು, ವೈಶಂಪಾಯನರಿಗೆ. ಏನೆಂದರೆ, ಮಹಾನುಭಾವಳಾದ ದ್ರೌಪದಿಯು ಒಂದೊಂದು ವಿವಾಹವಾದ ಮೇಲೂ ಮತ್ತೆ ಮತ್ತೆ ಮರುದಿನಕ್ಕೆ ಕನ್ಯಾಭಾವವನ್ನೇ ಹೊಂದಿರುತ್ತಿದ್ದಳು!
ವಿವಾಹವು ನೆರವೇರಲು, ದ್ರುಪದನು ಆ ಐವರು ಮಹಾರಥರಿಗೆ ಹೇರಳವಾಗಿ ಐಶ್ವರ್ಯವಿತ್ತನು: ಹೇಮಮಾಲೆಯನ್ನು ಹೊಂದಿದ್ದ ನೂರು ರಥಗಳು - ಒಬ್ಬೊಬ್ಬರಿಗೂ ಒತೆಗೆ ಚಿನ್ನದ ಕಡಿವಾಣಗಳನ್ನುಳ್ಳ ನಾಲ್ಕು ನಾಲ್ಕು ಕುದುರೆಗಳು - ಒಂದೊಂದು ರಥಕ್ಕೂ! ಪದ್ಮ ಮೊದಲಾದ ಸಲ್ಲಕ್ಷಣಗಳಿಂದ ಕೂಡಿದ್ದ, ಗಿರಿಸದೃಶವಾಗಿದ್ದ ಹಾಗೂ ಚಿನ್ನದ ಅಂಬಾರಿಗಳಿಂದ ಕೂಡಿದ್ದ ಆನೆಗಳು!
ಬಹಳ ಬೆಲೆಬಾಳುವ ವೇಷಗಳು ಆಭರಣಗಳು ಹಾರಗಳು ಇವನ್ನು ಉಟ್ಟುತೊಟ್ಟಿರುವ ಹಾಗೂ ನವಯೌವನದಲ್ಲಿರುವ ನೂರು ದಾಸಿಯರನ್ನೂ ಕೊಡುವುದಾಯಿತು. ಮಹಾನುಭಾವನಾದ ಸೌಮಕಿಯು (ಎಂದರೆ ದ್ರುಪದನು) ದಿವ್ಯದರ್ಶನರಾದ ಪಾಂಡವರಿಗೆ ಪ್ರಭುತ್ವಸೂಚಕವಾದ ವಸ್ತ್ರ-ಆಭರಣಗಳನ್ನು ಅಗ್ನಿಯ ಎದುರಿನಲ್ಲೇ ಬಳುವಳಿಯಾಗಿತ್ತನು.
ವಿವಾಹವು ಹೀಗೆ ನೆರವೇರಲು, ಪಾಂಡವರು ರತ್ನಬಹುಳವಾದ ಸಿರಿಯನ್ನು ಪಡೆದವರಾದರು. ಮಹಾಬಲಶಾಲಿಗಳಾದ ಹಾಗು ಇಂದ್ರಸದೃಶರಾದ ಅವರು ಪಾಂಚಾಲನ ಆ ನಗರಿಯಲ್ಲಿ ಸುಖವಾಗಿ ವಿಹರಿಸಿದರು. ದ್ರೌಪದಿಯ ಸುಶೀಲತೆಯಿಂದಾಗಿ ಪಾಂಡವರು ಸಂತೋಷಿಸಿದರು. ಅವಳಾದರೂ ತನ್ನ ಸುವ್ರತಗಳಿಂದಾಗಿ ಅವರ ಸಂತೋಷವು ವರ್ಧಿಸುವಂತೆ ಮಾಡಿದಳು.
ಪಾಂಡವರೊಂದಿಗೆ ಈಗ ದ್ರುಪದನಿಗೆ ಸಂಯೋಗವುಂಟಾಯಿತಲ್ಲವೆ? ದೇವತೆಗಳಿಂದಲೂ ಇನ್ನು ಭಯಪಡಬೇಕಾದ್ದಿಲ್ಲವೆಂಬಂತಾಯಿತು ಅದು. ದ್ರುಪದನ ಕುಟುಂಬದ ನಾರಿಯರೆಲ್ಲರೂ ಕುಂತಿಯ ಬಳಿ ಬಂದರು. ತಮ್ಮ ಹೆಸರನ್ನು ಹೇಳಿಕೊಳ್ಳುತ್ತಾ ತಮ್ಮ ಮಸ್ತಕಗಳನ್ನು ಅವಳ ಪಾದಗಳಿಗೆ ಒಬ್ಬೊಬ್ಬರೂ ಮುಟ್ಟಿಸಿದರು. ಕೃಷ್ಣೆಯೂ ಕ್ಷೌಮವನ್ನು (ಎಂದರೆ ಪಟ್ಟೆವಸ್ತ್ರವನ್ನು) ಉಟ್ಟು, ವಿವಾಹಕಂಕಣಸಮೇತಳಾಗಿ ಕುಂತಿಯಲ್ಲಿಗೆ ಬಂದು ಅವಳಿಗೆ ಅಭಿವಂದನ ಮಾಡಿದಳು.
ರೂಪ-ಲಕ್ಷಣಗಳಿಂದ ಸಂಪನ್ನಳಾದವಳೂ, ಶೀಲ-ಆಚಾರಗಳಿಂದ ಕೂಡಿದವಳೂ ಆದ ಆ ಸೊಸೆ ದ್ರೌಪದಿಯನ್ನು ಕುರಿತು ಪೃಥೆಯು (ಎಂದರೆ ಕುಂತಿಯು) ಆಶೀರ್ವಚನವನ್ನು ನೀಡಿದಳು:
"ಇಂದ್ರನಿಗೆ ಶಚಿಯು ಯಾವ ರೀತಿಯಿರುವಳೋ ನೀನೂ ಹಾಗಿರು. ಹಾಗೆಯೇ ಅಗ್ನಿಗೆ ಸ್ವಾಹಾದೇವಿಯು ಹೇಗೋ ಹಾಗಿರು. ರೋಹಿಣಿಯು ಚಂದ್ರನೊಂದಿಗೆ ಇರುವಂತೆಯೂ, ದಮಯಂತಿಯು ನಳನೊಂದಿಗೆ ಇರುವಂತೆಯೂ, ಭದ್ರೆಯು ಕುಬೇರನೊಂದಿಗಿರುವಂತೆಯೂ, ಅರುಂಧತಿಯು ವಸಿಷ್ಠರೊಂದಿಗಿರುವಂತೆಯೂ, ಲಕ್ಷ್ಮಿಯು ನಾರಾಯಣನೊಂದಿಗಿರುವಂತೆಯೂ ನೀನು ನಿನ್ನ ಗಂಡಂದಿರೊಂದಿಗಿರು. (ಏಳು ಆದರ್ಶದಂಪತಿಗಳನ್ನು ಇಲ್ಲಿ ಹೇಳಿದೆ). ನೀನು ಜೀವಸೂ ಹಾಗೂ ವೀರಸೂ ಆಗು. (ದೀರ್ಘಾಯುಸ್ಸುಳ್ಳ ಮಕ್ಕಳಿಗೆ ಜನ್ಮನೀಡುವವಳು ಜೀವಸೂ. ವೀರರಿಗೆ ಜನ್ಮಕೊಡತಕ್ಕವಳು ವೀರಸೂ). (ಸಾರವಾಗಿ, ನಿನ್ನ ಮಕ್ಕಳು ದೀರ್ಘಾಯುಗಳಾಗಲಿ, ವೀರರಾಗಲಿ). ಬಹುಸೌಖ್ಯವು ನಿನ್ನದಾಗಲಿ. ಒಳ್ಳೆಯ ಸಿರಿ ಒಳ್ಳೆಯ ಭೋಗ - ಇವೂ ನಿನ್ನವಾಗಲಿ. ಪತಿವ್ರತೆಯಾಗಿದ್ದುಕೊಂಡು ಯಜ್ಞಗಳಲ್ಲಿ ಪತಿಯರೊಂದಿಗೆ ಭಾಗವಹಿಸುವವಳಾಗು. ಅತಿಥಿಗಳು, ಅಭ್ಯಾಗತರು, ಸಾಧುಗಳು, ವೃದ್ಧರು, ಮಕ್ಕಳು, ಗುರುಹಿರಿಯರು - ಇವರುಗಳಿಗೆಲ್ಲ ಯಥೋಚಿತವಾದ ಸತ್ಕಾರಗಳನ್ನು ನೆರವೇರಿಸುತ್ತಲೇ ನಿನ್ನ ಕಾಲವು ಕಳೆಯಲಿ.