Monday, January 1, 2024

ವ್ಯಾಸ ವೀಕ್ಷಿತ - 69 ವ್ಯಾಸರಿತ್ತ ದಿಗ್ದರ್ಶನ (Vyaasa Vikshita - 69 Vyasaritta Digdarshana)


ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)
ದ್ರೌಪದಿಯು ಐವರನ್ನು ವಿವಾಹವಾಗುವುದೆಂಬುದಾಗಿ ಬಂದ

ಸೂಚನೆಯು ದ್ರುಪದನನ್ನು ಚಿಂತೆಗೀಡುಮಾಡಿತಷ್ಟೆ. ಲೋಕವಿರುದ್ಧವೂ ವೇದವಿರುದ್ಧವೂ ಆದುದನ್ನು ಅಚರಿಸುವುದು ತಮಗೆ ತಕ್ಕುದಲ್ಲ - ಎಂಬುದಾಗಿ ದ್ರುಪದನು ಯುಧಿಷ್ಠಿರನಿಗೆ ಹೇಳಲೇಬೇಕಾಯಿತು.

ಆಗ ಯುಧಿಷ್ಠಿರನು ಕೊಟ್ಟ ಉತ್ತರವು ಆಶ್ಚರ್ಯಕರವೆಂದೇ ಹೇಳಬೇಕು. ಆತನ ಉತ್ತರದಲ್ಲಿ ಐದು ಕಾರಣಗಳಿವೆಯೆಂಬುದನ್ನು ಗಮನಿಸಬೇಕು. ಮತ್ತು ಆ ಕಾರಣಗಳ ಮರ್ಮವನ್ನೂ ಅರಿಯಬೇಕು.

(೧) ಮೊದಲನೆಯದಾಗಿ, ಧರ್ಮವೆಂಬುದು ಸೂಕ್ಷ್ಮ; ಎಂದೇ ಅದರ ಗತಿ(ನಡೆ)ಯನ್ನು ನಾವರಿಯೆವು – ಎಂಬುದು. ಇಲ್ಲಿ ತನಗೆ ಅಂಶತಃ ಮಾತ್ರ ಗೊತ್ತಿರುವ ವಿಷಯವಿದು; ಅರ್ಥಾತ್ ಸ್ಥೂಲವಾಗಿ ಬಲ್ಲೆನಾದರೂ ಧರ್ಮವನ್ನು ಸೂಕ್ಷ್ಮಜ್ಞನಾಗಿ ತಾನು ಕಂಡಿಲ್ಲ - ಎಂಬುದನ್ನು ಹೇಳಿಕೊಳ್ಳುವಷ್ಟು ವಿನಯವು ಆತನಲ್ಲಿದೆ.

(೨) ಗೊತ್ತಿಲ್ಲದೆಡೆಯಲ್ಲಿ ಬಲ್ಲವರ ಮಾರ್ಗವನ್ನು, ಹಿಂದಿನವರ  ಹಾದಿಯನ್ನು, ಹಿಡಿಯಬೇಕೆಂಬುದು ಎರಡನೆಯದು. ಸೂಕ್ಷ್ಮವಾದುದನ್ನು ಕಾಣಲು ಮನಸ್ಸು ಸಮಾಹಿತವಾಗಿರಬೇಕು. ಬರೀ ಜಾಣತನದಿಂದಲೋ ಬುದ್ಧಿಶಕ್ತಿಯಿಂದಲೋ ಧರ್ಮಸೂಕ್ಷ್ಮಗಳನ್ನು ಹಿಡಿಯಲಾಗದು. ಅಲ್ಲದೆ, ಎಲ್ಲಿ ತಾನೇ ವಿಷಯವನ್ನು ನಿರ್ಣಯಿಸಲಾಗದೋ, ಅಲ್ಲಿ ಜ್ಞಾನಿಗಳೆನಿಸಿದ ಪೂರ್ವಿಕರ ನಡೆ-ನುಡಿಗಳನ್ನು ಅನುಸರಿಸಿ ನಡೆಯಬೇಕಾಗಿದೆ.

ಇದು ಯಾರಾದರೂ ಒಪ್ಪತಕ್ಕ ಮಾತೇ ಸರಿ.

(೩) ನನ್ನ ವಾಕ್ಕು ಸುಳ್ಳನ್ನು ನುಡಿದುದಿಲ್ಲ – ಎಂಬುದು ಮೂರನೆಯದು. ಇದೂ ಒಂದು ಧರ್ಮಸೂಕ್ಷ್ಮವೇ. ಯಾರು ಸುಳ್ಳನ್ನೇ ಆಡರೋ ಅವರಿಗೆ ತಾನೇ ಒಂದು ಸಿದ್ಧಿಯುಂಟಾಗುತ್ತದೆ. ಯಾವ ಸಿದ್ಧಿ? ಅವರ ಬಾಯಿಂದ ಬರುವ ಮಾತು ಸತ್ಯವೇ ಆಗಿರುತ್ತದೆ (ಅಥವಾ ಆಗಿಬಿಡುತ್ತದೆ).

ನಾನು ಎಂದೂ ಸುಳ್ಳನ್ನು ಹೇಳಿಲ್ಲ (ಅಥವಾ ಹೇಳುವವನಲ್ಲ) - ಎಂಬ ಸುಳ್ಳನ್ನೇ ಘಂಟಾಘೋಷವಾಗಿ ಹೇಳುವವರೇ ಹೆಚ್ಚು, ಲೋಕದಲ್ಲಿ; ನಾನು ಸುಳ್ಳಾಡಿಲ್ಲ - ಎಂದು ಎದೆ ತಟ್ಟಿ ಹೇಳಿಕೊಳ್ಳುವ ಮಂದಿ ತೀರ ಕಡಿಮೆಯೇ, ಲೋಕದಲ್ಲಿ. (ಸುಳ್ಳುಬುರುಕರಿಗೆ ಸ್ಮೃತಿಶಕ್ತಿಯು ಚೆನ್ನಾಗಿರಬೇಕಂತೆ. ಇಲ್ಲದಿದ್ದರೆ ಸುಳ್ಳನ್ನಾಡಿದ್ದನ್ನೂ ಮರೆಯಬಹುದು! ಮತ್ತು ಯಾರ ಬಳಿ ಯಾವ ಸುಳ್ಳನ್ನು ಹೇಳಿದ್ದೆನೆಂಬ ನೆನಪೂ ಇಲ್ಲದೆ ಪೇಚಿಗೆ ಸಿಕ್ಕಿಕೊಳ್ಳುವಂತೆಯೂ ಆಗುವುದುಂಟು!).

ಆದರೆ ಸತ್ಯವನ್ನು ಬಿಡದೇ ಹೇಳುತ್ತಿರುವವರಿಗೆ, ವಾಕ್-ಶಕ್ತಿಯೊಂದು ಏರ್ಪಡುವುದು. ಅವರ ಮಾತು ಅಮೋಘವಾಗುವುದು (ಮೋಘವೆಂದರೆ ವ್ಯರ್ಥ. ಸಫಲವೇ ಆಗುವುದು ಅ-ಮೋಘ). ಸತ್ಯವನ್ನು ನುಡಿಯುವುದೇ ಸ್ವಭಾವವಾಗಿಬಿಟ್ಟ ನಾಲಿಗೆಗೆ, ಅದು ನುಡಿದುದೇ ಸತ್ಯವಾಗಿಬಿಡುವ ಅನುಗ್ರಹವನ್ನು ಸೃಷ್ಟಿಯು ಕರುಣಿಸುತ್ತದೆ!

ಜೊತೆಗೆ, ತನ್ನ ಬಾಯಿಂದ ಅಸತ್ಯವು ಬರದೆಂಬ ವಿಶ್ವಾಸವೂ ಅಂತಹ ಸತ್ಯವಂತನಿಗೆ ಮೂಡುತ್ತದೆ. ಯುಧಿಷ್ಠಿರನಿಗೆ ಆ ಆತ್ಮವಿಶ್ವಾಸವು ಮೂಡಿದೆ.

(೪) ನನ್ನ ಮತಿಯು ಅಧರ್ಮದಲ್ಲಿ ನೆಲೆಗೊಳ್ಳದು - ಎಂಬುದು ಯುಧಿಷ್ಠಿರನಿತ್ತ ನಾಲ್ಕನೆಯ ಕಾರಣ.

ಮಾತಿಗಿಂತಲೂ ಮಿಗಿಲಾದದ್ದು ಮನಸ್ಸು. ಯಾರ ಮನಸ್ಸು ಧರ್ಮದಲ್ಲಿಯೇ ಸವಿಯನ್ನು ಕಾಣುವುದೋ, ಅಂತಹವರಿಗೆ ಅಧರ್ಮವು ರುಚಿಸದು. ಯಾರ ಅಂತಃಕರಣವು ಶುದ್ಧತೆಯನ್ನು ಕಾಪಾಡಿಕೊಂಡಿರುವುದೋ ಅಂತಹವರಿಗೆ ತಮ್ಮ ಮನಸ್ಸಿನ ಧರ್ಮಮಯತೆಯೂ ಅರಿವಿಗೆ ಬರುವುದು.

ಕೆಲವೊಮ್ಮೆ ಈ ಹೆಜ್ಜೆಯಿಡಲೋ ಬೇಡವೋ - ಎಂಬ ಸಂಶಯವು ಬರುವುದಲ್ಲವೇ? ಧರ್ಮವೆಂಬುದು ನಿರ್ದಿಷ್ಟಸಂದರ್ಭದಲ್ಲಿ ಲೆಕ್ಕಾಚಾರವಾಗಿಯೇ ಇರುವುದಾದರೂ, ಆ ಲೆಕ್ಕಾಚಾರವು ಸಾಧಾರಣರ ಮನಸ್ಸಿಗೆ ಹೊಳೆಯದಿರಬಹುದು. ಆದರೆ ಧರ್ಮಮಾರ್ಗದಲ್ಲೇ ಚರಿಸುವವರ ಮನಸ್ಸಿನ ವಿಷಯವು ಹಾಗಲ್ಲ.

ಸೂಚನೆ : 31/12/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.