Wednesday, January 24, 2024

ಋಷಿಗಳಾರು? ರಾಕ್ಷಸರಾರು? ( Rsigalaru? Raksasararu?)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)


ವಿಶ್ವಾಮಿತ್ರರು ಮಾಡುತ್ತಿದ್ದ ಒಂದು ಯಜ್ಞ. ಅದಕ್ಕೆ ಪದೇ ಪದೇ ವಿಘ್ನಗಳನ್ನೊಡ್ಡುತ್ತಿದ್ದರು, ರಾಕ್ಷಸರು. ಯಜ್ಞವನ್ನು ಸುಸೂತ್ರವಾಗಿ ಸಂಪನ್ನಗೊಳಿಸಲು ಅವರ ಸಂಹಾರವು ಅನಿವಾರ್ಯವಾಗಿತ್ತು, ವಿಶ್ವಾಮಿತ್ರರಿಗೆ. ಎಂದೇ ದಶರಥನ ಬಳಿ ಬಂದು, ಆತನ ಪುತ್ರರಾದ ರಾಮ-ಲಕ್ಷ್ಮಣರನ್ನು ತಮ್ಮೊಂದಿಗೆ ಕರೆದೊಯ್ದರು. ಯಜ್ಞ ಮಾಡಲು ಏರ್ಪಾಡಾಗಿದ್ದ ಸಿದ್ಧಾಶ್ರಮವನ್ನು ತಲುಪಿದರು. ಆರು ದಿನಗಳ ಯಜ್ಞವದು. ಯಜ್ಞದೀಕ್ಷೆ ತೆಗೆದುಕೊಂಡಿದ್ದ ವಿಶ್ವಾಮಿತ್ರರಿಗೆ ಅಷ್ಟು ದಿನಗಳೂ ಮೌನವ್ರತ. ವೀರಸಹೋದರರು ಹಗಲು-ರಾತ್ರಿ ಆಹಾರ-ನಿದ್ರೆಗಳನ್ನು ಬಿಟ್ಟು ಆ ಯಜ್ಞದ ರಕ್ಷಣೆಯಲ್ಲಿ ತೊಡಗಿದರು. ಕೊನೆಯ ದಿನ ಪೂರ್ಣಾಹುತಿ. ಆಗ ಬಂದಿತು ಮಾರೀಚ, ಸುಬಾಹು ಇತ್ಯಾದಿ ರಾಕ್ಷಸರ ತಂಡ. ರಕ್ತರಾಶಿಯನ್ನು ಯಜ್ಞಕುಂಡಕ್ಕೆ ಹಾಕಿ ಅದನ್ನು ಹಾಳುಮಾಡುವುದು ಅದರ ಉದ್ದೇಶ. ಆದರೆ ಈ ವೀರರ ಧನುಸ್ಸಿನ ಶಕ್ತಿಯ ಮುಂದೆ ಆ ರಾಕ್ಷಸರು ನಿಲ್ಲದಾದರು. ಮಾರೀಚ ದೂರದ ಸಮುದ್ರಕ್ಕೆ ಹೋಗಿ ಬಿದ್ದ. ಸುಬಾಹು ಸತ್ತ. ಇನ್ನಿತರರೂ ಧ್ವಂಸಗೊಂಡರು. ಅಂತೂ ಯಜ್ಞರಕ್ಷಣೆಯಾಯಿತು.

ಸಾಮಾನ್ಯವಾಗಿ ಈ ಕಥಾಭಾಗ ಎಲ್ಲರಿಗೂ ತಿಳಿದದ್ದೇ. ಆದರೂ ಈ ಒಂದು ಪ್ರಶ್ನೆಯನ್ನು ಯಾರೂ ಕೇಳಿದಂತಿಲ್ಲ: ವಿಶ್ವಾಮಿತ್ರರು ಯಜ್ಞವನ್ನು ಏತಕ್ಕಾಗಿ ಮಾಡಹೊರಟಿದ್ದರು? ಆಗುತ್ತಿದ್ದ ಧ್ವಂಸಕಾರ್ಯದ ಸುದ್ದಿಯೊಂದಿಗೆ ಅವರು ದಶರಥನ ಬಳಿ ಹೋದಾಗ ಆತನೂ ಈ ಪ್ರಶ್ನೆ ಕೇಳಲಿಲ್ಲ; ಬೇರೆಡೆ ಎಲ್ಲಾದರೂ ಮಾಡಬಾರದೇ ಎಂಬ ಬುದ್ಧಿವಾದ ಹೇಳಲಿಲ್ಲ. ಆತನು ಮೊದಲು ಹೇಳಿದ್ದಿಷ್ಟೇ: ನನ್ನ ಪ್ರಿಯಪುತ್ರ ರಾಮ ಬಹಳ ಚಿಕ್ಕವನು; ಅವನು ಈ ಕಾರ್ಯ ಮಾಡಲಾರ; ನಾನೇ ಬರುತ್ತೇನೆ - ಎಂದು. ವಸಿಷ್ಠರೂ ಅದರ ಬಗ್ಗೆ ಪ್ರಶ್ನೆ ಎತ್ತಲಿಲ್ಲ. ದಶರಥನು ಪುತ್ರಕಾಮೇಷ್ಟಿ ಮಾಡಿರುವುದರ ಬಗ್ಗೆ ರಾಮಾಯಣದ ಮೊದಲಲ್ಲೇ ನಾವು ಕೇಳಿರುತ್ತೇವೆ; ಅದು ಸಂತಾನಪ್ರಾಪ್ತಿಯ ಕಾಮನೆಯೊಂದಿಗೆ ಮಾಡಿದ ಯಜ್ಞ. ಹಾಗಾದರೆ ಇಲ್ಲಿ ವಿಶ್ವಾಮಿತ್ರರ ಕಾಮನೆಯೇನು?

ಧರ್ಮದ ಸ್ಥಾಪನೆ-ರಕ್ಷಣೆ, ಎಲ್ಲರ ಹಿತವೇ ಆ ಕಾಮನೆ. ದೊರೆತನವನ್ನು ತೊರೆದು ತಪಸ್ವಿಗಳಾಗಿದ್ದ ಅವರಿಗೆ ಭೌತಿಕ-ಕಾಮನೆಗಳೇನಿರಲಿಲ್ಲ. ಭೌತಿಕವಾದ ಜಗತ್ತನ್ನೂ ಸೇರಿ ಎಲ್ಲವನ್ನು ಧಾರಣೆ ಮಾಡುತ್ತಿರುವ ಧರ್ಮವನ್ನು ಉಳಿಸಿ-ಬೆಳೆಸುವ ಹಿರಿದಾದ ಆಸೆ ಅವರದು. ಧರ್ಮದ ಮೌಲಿಕ ಪಾತ್ರವನ್ನು ಶ್ರೀರಂಗಮಹಾಗುರುಗಳ ಈ ವಚನದಲ್ಲಿ ಕಾಣಬಹುದು: "ಧರ್ಮವು ಐಹಿಕ-ಪಾರಮಾರ್ಥಿಕ ಬಾಳಾಟಗಳಿಗೆ ಸೇತುವಾಗಿದೆ". ಕಾರಣವೆಂಬುದಿಲ್ಲದೆ ಧರ್ಮಕ್ಕಾಗಿ ತಮ್ಮೆಲ್ಲ ಶಕ್ತಿಯನ್ನು ಬಳಸುವವರು ಋಷಿಗಳು. ಧರ್ಮ್ಯವಾದದ್ದರಲ್ಲೇ ನಲಿವವರು ಅವರು.

ಋಷಿಗಳೇನು ರಾಕ್ಷಸರ ಸಂಪತ್ತನ್ನೋ ರಾಜ್ಯವನ್ನೋ ಲಪಟಾಯಿಸಲು ಈ ಯಜ್ಞಗಳನ್ನು ಮಾಡುತ್ತಿರಲಿಲ್ಲವಲ್ಲ! ಹಾಗಿದ್ದಲ್ಲಿ ರಾಕ್ಷಸರಿಗೇಕೆ ಋಷಿಗಳ ಯಜ್ಞಗಳನ್ನು ಧ್ವಂಸಮಾಡುವ ಮನಸ್ಸು? - ಎಂದರೆ, ಕಾರಣವಿಲ್ಲದೆ ಪರಹಿತವನ್ನು ಧ್ವಂಸಮಾಡುವವರು, ರಾಕ್ಷಸರು. ಭರ್ತೃಹರಿಯು ತನ್ನ ಒಂದು ಸುಭಾಷಿತದಲ್ಲಿ ಅಂತಹವರನ್ನು "ಏನೆಂದು ಕರೆಯಬೇಕೆಂದು ನಮಗೆ ತಿಳಿದಿಲ್ಲ" (ತೇ ಕೇ ನ ಜಾನೀಮಹೇ) ಎಂದಿದ್ದಾನೆ!

ಹೀಗೆ ಯಜ್ಞದ ಸಂದರ್ಭದಲ್ಲಿ ನಾವು ತಿಳಿಯಬಹುದಾದದ್ದು ಎರಡು ಲಕ್ಷಣಗಳು:ಅಕಾರಣವಾಗಿ ಧರ್ಮದ ಸ್ಥಾಪನೆಗಾಗಿ ಯಜ್ಞ ಮಾಡುವವರೇ ಋಷಿಗಳು. ಅಕಾರಣವಾಗಿ ಧರ್ಮವನ್ನು ಉನ್ಮೂಲನಗೊಳಿಸಲು ಯತ್ನಿಸುವವರೇ ರಾಕ್ಷಸರು. 

ಸೂಚನೆ: 24/1/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.