Friday, January 5, 2024

ಭಗವತ್ಸೇವೆಗೆ ಇರಬೇಕಾದ ಭಾವಶುದ್ಧಿ - ಅದರ ಫಲ (Bhagavatsevege Irabekada Bhavasuddhi - Adara Phala)

ಲೇಖಕರು :  ಸೌಮ್ಯಾ ಪ್ರದೀಪ್  ಎ. ಜೆ.

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀ ಮದ್ರಾಮಾಯಣದ ಪ್ರಸಂಗ,ಆಂಜನೇಯನು ಸೀತಾನ್ವೇಷಣೆ ಎಂಬ ಪವಿತ್ರ ಕಾರ್ಯಕ್ಕಾಗಿ ಸಮುದ್ರವನ್ನು ಹಾರಿ ಲಂಕೆಗೆ ಹೋಗುತ್ತಾನೆ. ಅಲ್ಲಿ ಅಶೋಕವನದಲ್ಲಿರುವ ಸೀತಾಮಾತೆಯನ್ನು ಸಂದರ್ಶಿಸುತ್ತಾನೆ. ಅಲ್ಲಿಂದ ಹೊರಟು ಶ್ರೀರಾಮನ ಬಳಿಗೆ ಬಂದು ಸೀತಾಮಾತೆಯನ್ನು ಭೇಟಿಮಾಡಿದ ಶುಭ ಸಮಾಚಾರವನ್ನು ತಿಳಿಸುತ್ತಾನೆ. ದುಷ್ಟ ರಾವಣನೊಂದಿಗೆ ಯುದ್ಧ ಮಾಡಿ ಸೀತೆಯನ್ನು ಕರೆತರಲು ಶ್ರೀರಾಮನ ಆದೇಶದಂತೆ ಸುಗ್ರೀವನ ನೇತೃತ್ವದಲ್ಲಿ ಸೈನ್ಯ ಸಿದ್ಧವಾಗುತ್ತದೆ. ಮೊದಲಿಗೆ, ಸಮುದ್ರದ ಮಧ್ಯದಲ್ಲಿರುವ ಲಂಕಾನಗರಿಯನ್ನು ತಲುಪಲು ಸಮುದ್ರಕ್ಕೆ ಸೇತುವೆಯನ್ನು ನಿರ್ಮಾಣ ಮಾಡುವ ಕಾರ್ಯ ಆರಂಭವಾಗುತ್ತದೆ. ಸಮುದ್ರಕ್ಕೆ ಸೇತುವೆಯನ್ನು ಕಟ್ಟುವುದು ಕ್ಲಿಷ್ಟಕರವಾದ ಕಾರ್ಯವಾದರೂ ರಾಮನಾಮ ಸ್ಮರಣೆಯೊಂದಿಗೆ ಆ ಅಧ್ಭುತವಾದ ಕಾರ್ಯ ಆರಂಭವಾಗುತ್ತದೆ. 


ಆ ಕಾರ್ಯಕ್ಕೆ ಕಾಡಿನಲ್ಲಿರುವ ಎಲ್ಲಾ ಪ್ರಾಣಿಗಳೂ ತಮ್ಮ ತಮ್ಮ ಶಕ್ತಿಯ ಅನುಸಾರ ಸಹಕಾರ ಮಾಡುತ್ತವೆ. ಅಳಿಲು, ಇರುವೆ ಮುಂತಾದ ಚಿಕ್ಕ ಪುಟ್ಟ ಪ್ರಾಣಿಗಳೂ ಕೂಡ  ಸೇತುವೆ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ಹೊತ್ತು ತಂದುಕೊಡುತ್ತವೆ, ಅತ್ಯಂತ ಉತ್ಸಾಹದಿಂದ ಆ ಕಾರ್ಯದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತವೆ. ಅಂತಹ ಬೃಹತ್ತಾದ ಸೇತುವೆ ಕಟ್ಟಲು ಅವುಗಳು ತಂದು ಕೊಡುವ ಸಾಮಗ್ರಿಗಳು ಅತ್ಯಲ್ಪವಾದರೂ ರಾಮಕಾರ್ಯಕ್ಕೆ ಸಹಕರಿಸಬೇಕು, ಶ್ರೀರಾಮನ ಸೇವೆ ಮಾಡಬೇಕು ಎಂಬ ಅವುಗಳ ಮನಸ್ಸಿನ ಭಾವನೆ ಅತ್ಯಂತ ಮಹತ್ತರವಾದುದ್ದು. ಹದಿನಾಲ್ಕು ಲೋಕಗಳಿಗೆ ಒಡೆಯನಾದ ಶ್ರೀರಾಮನಿಗೆ ಸಮುದ್ರಕ್ಕೆ ಸೇತುವೆ ಕಟ್ಟುವುದು  ಹಾಗೂ ರಾವಣನ ಸಂಹಾರ ಅನ್ನುವಂತಹದ್ದು ಕ್ಷಣಮಾತ್ರದ ಕಾರ್ಯವಾದರೂ ರಾಮಾವತಾರದ ಸಂಕಲ್ಪದಂತೆಯೇ, ಸಾಮಾನ್ಯ ಮಾನವನಂತೆಯೇ ಪ್ರತಿಯೊಂದು ಹೆಜ್ಜೆಯನ್ನೂ ಇಡುತ್ತಾನೆ. ಸೇವಾ ಸೌಭಾಗ್ಯವನ್ನು ಕರುಣಿಸಿ, ತನ್ನನ್ನು ನಂಬಿದ ಜೀವಿಗಳ ಉದ್ಧಾರಕ್ಕಾಗಿಯೇ ಮೂಲ ನೆಲೆಯಿಂದ ಇಳಿದು ಬಂದ ದೇವನಲ್ಲವೇ ಅವನು! ಶುದ್ಧವಾದ ಮನಸ್ಸಿನಿಂದ ತನ್ನ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಪ್ರತಿಯೊಂದು ಜೀವಿಗಳ ಮೇಲೂ ಅನುಗ್ರಹ ದೃಷ್ಟಿಯನ್ನು ಹರಿಸುತ್ತಾನೆ. ಅಳಿಲಿನ ಬೆನ್ನಮೇಲೆ ತನ್ನ ಅಮೃತಹಸ್ತವನ್ನು ಸ್ಪರ್ಶಸಿ ಅನುಗ್ರಹಿಸಿದನೆಂಬುದು ಲೋಕಪ್ರಸಿದ್ಧವಲ್ಲವೇ.  "ಭಗವಂತನ ಪರಿವಾರವಾಗಿ ಕರಡಿಯೇ ಬರಲಿ, ಕಪಿಯೇ ಆಗಲಿ, ಶಿಂಗಳೀಕವೇ ಆಗಲಿ, ಅವಕ್ಕೆಲ್ಲಾ ಭಗವತ್ಕಾರ್ಯದಲ್ಲಿ ಪಾತ್ರ ಉಂಟು. ಭಗವಂತನವರಾಗಿ ಬಂದಾಗ, ಅವರ ಕಪಿತ್ವ, ಕರಡಿತನ ಎಲ್ಲಾ ಮರೆಯಾಗಿ ಬಿಡುತ್ತದೆ." ಎಂಬ ಶ್ರೀರಂಗ ಮಹಾಗುರುಗಳ ವಾಣಿಯು ಇಲ್ಲಿ ಸ್ಮರಣೀಯವಾಗಿದೆ. 


 'ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ ' ಎಂಬ ಭಗವದ್ವಾಣಿಯಂತೆ ಅತ್ಯಲ್ಪವಾದರೂ ಶುದ್ಧವಾದ ಮನಸ್ಸಿನಿಂದ, ಭಗವದರ್ಪಣ ಭಾವದಿಂದ ಮಾಡಿದ ಧರ್ಮಕಾರ್ಯಗಳು ಭಗವಂತನ ಕಾರ್ಯಗಳೇ. ಅಂತಹ ಕಾರ್ಯಗಳು ಎಂದಿಗೂ ವಿಫಲವಾಗದೇ ಮಾಡಿದವರನ್ನು ಮಹತ್ತಾದ ವಿಪತ್ತಿನಿಂದ ಪಾರು ಮಾಡುವ ಸಾಧನಗಳೇ ಆಗಿವೆ. ಸಂಸಾರ ಸಾಗರವನ್ನು ದಾಟಿಸಿ ಭಗವಂತನಲ್ಲಿ ಜೀವಿಗಳನ್ನು ಒಂದುಗೂಡಿಸುವಲ್ಲಿ ಸಹಕರಿಸುವ ಸಾಧನಗಳೇ ಆಗಿರುತ್ತವೆ.


 ಸರ್ವಶಕ್ತನಾದ ಭಗವಂತನಿಗೆ ತನ್ನೆಲ್ಲ ಕಾರ್ಯಗಳನ್ನೂ ಮಾಡುವ ಸಾಮರ್ಥ್ಯವಿದ್ದರೂ ಜೀವಿಗಳನ್ನು ನಿಮಿತ್ತವಾಗಿರಿಸಿಕೊಂಡು ಅವುಗಳಲ್ಲಿ ಶಕ್ತಿಯನ್ನು ತುಂಬಿಸಿ ಆ ಕಾರ್ಯದಲ್ಲಿ ತೊಡಗಿಸುತ್ತಾನೆ, ಅವುಗಳ ಮನಸ್ಸನ್ನು ತನ್ನೆಡೆಗೆ ಹರಿಯುವಂತೆ ಮಾಡುತ್ತಾನೆ. ಕಾಲ ಕಾಲದಲ್ಲಿ, ಯುಗ ಯುಗದಲ್ಲಿ ಭಗವಂತನು ವ್ಯಕ್ತನಾಗಿಯೂ, ಅವ್ಯಕ್ತನಾಗಿಯೂ ತಾನು ಸಂಕಲ್ಪಿಸಿದ ಕಾರ್ಯವನ್ನು ನಡೆಸುತ್ತಲೇ ಇರುತ್ತಾನೆ. ಅಂತಹ ಭಗವತ್ಕಾರ್ಯದಲ್ಲಿ ನಮ್ಮ ಮನೋಬುದ್ಧಿಗಳನ್ನು ಪ್ರೆರೇಪಿಸಿ, ತೊಡಗಿಸಿ ನಮ್ಮ ಜೀವನವನ್ನೂ ಪಾವನವನ್ನಾಗಿಸಲಿ ಎಂದು ಪ್ರಾರ್ಥಿಸೋಣ.

ಸೂಚನೆ: 4/1/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.