Wednesday, January 24, 2024

ಯಕ್ಷ ಪ್ರಶ್ನೆ 73 (Yaksha prashne 73)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 72 ರಾಷ್ಟ್ರವು ಮೃತವಾಗುವುದು ಯಾವಾಗ ?

ಉತ್ತರ - ರಾಜನೇ ಇಲ್ಲದಿರುವಾಗ.

ರಾಜ ಮತ್ತು ರಾಷ್ಟ್ರ ಇವೆರಡು ಜೋಡಿಪದಗಳು. ಒಂದನ್ನೊಂದು ಬಿಟ್ಟು ಇರುವುದಿಲ್ಲ. ತಾಯಿ ಮಗು ಎಂಬ ಪದಗಳಂತೆ. ತಾಯಿಯಿಲ್ಲದೆ ಮಗು ಬೆಳೆಯದು. ತಾಯಿಯಿಲ್ಲದಿದ್ದರೆ ಮಗು ಬಡವಾಗುವುದು. ಮಗುವಿನ ಸಮಸ್ತವಾದ ಬೆಳವಣಿಗೆ ಅಥವ ಶಿಥಿಲತೆ ತಾಯಿಯ ಮೇಲೆ ನಿಂತಿದೆ. ಆದ್ದರಿಂದ ಮಗುವಿನ ಸಮಸ್ತ ಹೊಣೆಗಾರಿಕೆ ತಾಯಿಯ ಮೇಲೆಯೇ ನಿಂತಿದೆ. ಅಂತೆಯೇ ರಾಷ್ಟ್ರವು ಒಂದು ಮಗುವಿದ್ದಂತೆ. ಅದನ್ನು ಸಾಕಿ ಸಲಹುವವನು ರಾಜನೆ ತಾನೆ. ರಾಷ್ಟ್ರವನ್ನು ಪೋಷಿಸಬೇಕು ಮತ್ತು ಪಾಲಿಸಬೇಕು. ರಾಜನು ಹೇಗಿರಬೇಕು? ಎಂಬುದಕ್ಕೆ ಶ್ರೀರಂಗ ಮಹಾಗುರುಗಳು ಹೀಗೊಂದು ಮಾತನ್ನು ಹೇಳುತ್ತಿದ್ದರು. "ದೇಶವನ್ನು ಸುಸ್ಥಿತಿಯಲ್ಲಿಟ್ಟು ಕಾಪಾಡಲು ರಾಜನು ಬೇಕು. ಆ ರಾಜನು ಕೇವಲ ಇಂದ್ರಿಯಾರಾಮನಾದರೆ ಸಾಲದು. ಆತ್ಮಾರಾಮನೂ ಆಗಿರಬೇಕು. ಆದ್ದರಿಂದಲೇ 'ಆತ್ಮವಾನ್ ರಾಜಾ' ಎಂದು ಆತ್ಮವಂತನೇ ರಾಜನಾಗಿರಬೇಕು ಎಂಬ ಮಾತು" ಎಂದು. ಈ ಮಾತು ಪ್ರಸ್ತುತ ಯಕ್ಷಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ಕೀಲಿಕೈ ಇದ್ದಂತೆ. ರಾಜನು ಯಾವ ರೀತಿಯ ಆದರ್ಶನಾಗಿರಬೇಕು? ಎಂಬ ವಿಷಯಗಳನ್ನು ತಿಳಿದರೆ ಆ ರಾಷ್ಟ್ರ ನಿಜವಾಗಿಯೂ ಆತ್ಮರಾಜ್ಯವೇ ಆಗುವುದು. ಅತ್ಯಂತ ಸಮೃದ್ಧರಾಷ್ಟ್ರವೇ ಆಗುವುದು. ಇಂದು ಯಾವುದೇ ರಾಷ್ಟ್ರದಲ್ಲಿ ಕ್ಷಾಮ, ದಾರಿದ್ರ್ಯ, ಅಶಾಂತಿ ಮೊದಲಾದ ವಿಪರೀತ ಲಕ್ಷಣಗಳು ಕಾಣಲು ಇಂತಹ ಆದರ್ಶ ರಾಜನಿಲ್ಲದಿರುವುದೇ ಆಗಿದೆ. ರಾಜನ ಮೇಲೆಯೇ ರಾಷ್ಟ್ರ ನಿಂತಿದೆ, ಅದು ಮರಣಸದೃಶವೋ? ಅಥವಾ ಸ್ವರ್ಗಸದೃಶವೋ ? ಎಂದು. ಇಲ್ಲಿ ಯಕ್ಷನ ಪ್ರಶ್ನೆಯು ಕೇವಲ ರಾಜನು ಇರುವುದು ಮಾತ್ರ ರಾಷ್ಟ್ರದ ಲಕ್ಷಣ ಎಂಬುದನ್ನು ತೋರಿಸುವ ಉದ್ದೇಶವಲ್ಲ. ಎಂತಹ ರಾಜನು ಇದ್ದರೆ ಅದು ಸಮೃದ್ಧ? ಎಂತಹ ರಾಜನಿದ್ದರೆ ಮೃತಪ್ರಾಯ ಎಂಬುದನ್ನು ತೋರಿಸುವುದು. ರಾಜನು ಒಬ್ಬ ನಾಮ್ಕಾವಾಸ್ತೆ ಇದ್ದರೆ ಸಾಲದು. ಆತ ರಾಷ್ಟ್ರದ ಅಸ್ತಿತ್ವದ ಸಂಕೇತರೂಪನಾಗಿ ಇರಬೇಕು ಎಂಬ ಅಶಯವನ್ನು ಬಿತ್ತರಿಸುವುದು ಧರ್ಮರಾಜನ ಉತ್ತರದಲ್ಲಿದೆ ಎಂಬ ಅಂಶವನ್ನೂ ನಾವಿಲ್ಲಿ ಗಮನಿಸಬೇಕಾದುದು ಅಷ್ಟೆ ಮುಖ್ಯವಾಗಿದೆ. 

 ಮಾನವಶರೀರವನ್ನು ಆಧಾರವಾಗಿಟ್ಟುಕೊಂಡು ಈ ರಾಜ ಮತ್ತು ರಾಷ್ಟ್ರದ ವ್ಯವಸ್ಥೆಯು ಬಂದಿದೆ. ಶರೀರವು ಆರೋಗ್ಯವಾಗಿರಬೇಕಾದರೆ ಅದು ಆತ್ಮನ ಹಿಡಿತದಲ್ಲಿ ಇರಲೇಬೇಕು. ಆತ್ಮಸಂಯಮವಿಲ್ಲದಿದ್ದಾಗ ಶರೀರವು ಇದ್ದರೂ ಆ ಶರೀರಕ್ಕೆ ಯಾವುದೇ ಮೌಲ್ಯವಿರುವುದಿಲ್ಲ. ಒಬ್ಬ ಹುಚ್ಚು ಹಿಡಿದ ವ್ಯಕ್ತಿ ಇದ್ದಾನೆ. ಅವನಿಗೆ ಆತ್ಮವೂ ಇದೆ. ಶರೀರದ ಎಲ್ಲಾ ಅಂಗಗಳೂ ಇವೆ. ಆದರೆ ಅವನ ಆತ್ಮವೇ ಹಿಡಿತದಲ್ಲಿ ಇಲ್ಲದಿರುವುದರಿಂದ ಇಂದ್ರಿಯ ಮನಸ್ಸು ಮತ್ತು ಉಳಿದ ಯಾವ ಶರೀರದ ಭಾಗಗಳೂ ಅವನ ಇಚ್ಛೆಗೆ ಅನುಸಾರವಾಗಿ ನಡೆಯುವುದಿಲ್ಲ. ಅದರ ಪರಿಣಾಮವಾಗಿ ಆತ ಸಮಾಜದಲ್ಲಿ ನಗಣ್ಯನಾಗುತ್ತಾನೆ. ಹಾಗಾಗಿ ರಾಷ್ಟ್ರದಲ್ಲಿ ರಾಜನಾದವನ ಪಾತ್ರವೂ ಅಷ್ಟೇ ಮುಖ್ಯವಾಗಿರುತ್ತದೆ. ರಾಜನಾದವನು ಭಗವಂತನ ಶಾಸನವನ್ನು ಅಂದರೆ ಈ ಸಮಗ್ರಸೃಷ್ಟಿಯ ಇಂಗಿತವನ್ನು ಅರ್ಥಮಾಡಿಕೊಂಡು ರಾಷ್ಟ್ರವನ್ನು ಮುನ್ನಡೆಸಬೇಕಾದವನಾಗಿರಬೇಕು. ಸೃಷ್ಟಿಯ ಆಶಯಕ್ಕೆ ವಿರೋಧವಾಗುವಂತೆ ವರ್ತಿಸಿದರೆ ಆ ರಾಷ್ಟ್ರ ಅರಾಜಕತೆಯನ್ನು ಕಾಣುತ್ತದೆ. ಅದು ಸತ್ತಂತೆ. ಶತ್ರುವಶವಾಗಲು ಸನ್ನಿಹಿತವಾಗಿದೆ ಎಂಬುದೇ ತಾತ್ಪರ್ಯ. 

ಸೂಚನೆ : 21/1/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.