Wednesday, January 24, 2024

ಕರ್ಮಗಳಲ್ಲಿ ದೇವಾಸುರರು - ತಾತ್ತ್ವಿಕ ಹಿನ್ನೆಲೆ (Karmagalalli Devasuraru -Tattvika Hinnele)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ 
(ಪ್ರತಿಕ್ರಿಯಿಸಿರಿ lekhana@ayvm.in)



ದೇವಾಸುರರೆಂಬುದರ ಹಿಂದಿರುವ ತತ್ತ್ವಗಳನ್ನು ಕೆಲವು ಪುರಾಣಕಥೆಗಳ ಮೂಲಕ ಗಮನಿಸಿದೆವು. ಅಂತೆಯೇ ಕೆಲವು ಕರ್ಮಗಳಲ್ಲಿಯೂ ದೇವಾಸುರರ ಪ್ರಕರಣವು ಪ್ರಚಲಿತವಿರುವುವು. ಉದಾಹರಣೆಗೆ, ಶ್ರಾದ್ಧಕರ್ಮದಲ್ಲಿ ಪಿತೃಕಾರ್ಯವು ಪೂರ್ಣಗೊಳ್ಳದಂತೆ ಅಸುರರು ಧ್ವಂಸಮಾಡುತ್ತಾರಂತೆ. ಅಲ್ಲಿ ಸೌಮ್ಯರಾದ ಪಿತೃದೇವತೆಗಳ ರಕ್ಷಣೆಗಾಗಿ ಶಸ್ತ್ರಪಾಣಿಗಳಾದ ವಿಶ್ವೇದೇವತೆಗಳಿರಬೇಕೆಂಬ ನಿಯಮವಿದೆ.  ಆದರೆ ಶ್ರಾದ್ಧಕರ್ಮಗಳನ್ನು ಅನೇಕ ಶತಮಾನಗಳಿಂದಲೂ ಆಚರಿಸುತ್ತಲಿದ್ದರೂ ಎಂದೂ ಯಾರೂ ಅಸುರರನ್ನಾಗಲಿ ಪಿತೃದೇವತೆಗಳನ್ನಾಗಲಿ ಕಂಡಿಲ್ಲ! ಹಾಗಿದ್ದಲ್ಲಿ ಶ್ರಾದ್ಧಾಚಾರಣೆಯ ಔಚಿತ್ಯವೇನು? ಅಂತೆಯೇ ಪುಂಸವನ-ಸೀಮಂತ ಸಂಸ್ಕಾರಗಳಲ್ಲಿ ಗರ್ಭಿಣಿಯನ್ನು ಮತ್ತು ಗರ್ಭವನ್ನು ಅಸುರರ ದೆಸೆಯಿಂದ ರಕ್ಷಿಸಲೋಸುಗ ಕೆಲವು ವಿಶೇಷ ಕ್ರಿಯೆಗಳು ಆಚರಿಸಲ್ಪಡುತ್ತವೆ. ಇಲ್ಲೂ ಸಹ ಯಾವ ಅಸುರರೂ ಗೋಚರವಾಗಿಲ್ಲ. ಈ ವಿಚಾರವನ್ನು ಅರ್ಥೈಸಿಕೊಳ್ಳಲು  ಇದರ ಹಿಂಬದಿಯಲ್ಲಿನ  ಮರ್ಮವನ್ನು ತಿಳಿಯಬೇಕಾಗಿದೆ. 


ಯಾವ ಶಕ್ತಿ ಯಾವಾಗ ಪ್ರಬಲ?

ಶಕ್ತಿ-ಪ್ರಕಾಶಗಳೇ ದೇವತೆಗಳ ಮೂಲಭೂತಸ್ವರೂಪ. ಅವರದು ಪಾಂಚಭೌತಿಕಶರೀರವಲ್ಲ. ಅಂದರೆ ನಮ್ಮಂತೆ ಸ್ಥೂಲರೂಪಿಗಳಲ್ಲ. ವಿಶೇಷ ಯೋಗದೃಷ್ಟಿ-ದೈವೀದೃಷ್ಟಿಗೆ ಮಾತ್ರವೇ ಪುರುಷಾಕಾರದಿಂದಲೂ ಗೋಚರವಾಗುವವರು ಎಂಬುದನ್ನು ಹಿಂದೆಯೇ ಗಮನಿಸಿದ್ದೇವೆ. ಅಸುರರೂ ಸಹ ಶಕ್ತಿಸ್ವರೂಪರಾಗಿದ್ದು ಬ್ರಹ್ಮಾಂಡದಲ್ಲಿಯೂ ಪಿಂಡಾಡದಲ್ಲಿಯೂ ತಮ್ಮ ಕಾರ್ಯವನ್ನು ನಿರ್ವಹಿಸುವರು.

ಅವರ ಕಾರ್ಯನಿರ್ವಹಣಾ ಕ್ರಮವನ್ನು ಉದಾಹರಣೆಗಳ ಮೂಲಕ ಗಮನಿಸಬಹುದು.

1. ನಮ್ಮ ಜೀರ್ಣಕ್ರಿಯೆಯಲ್ಲಿ ಶರೀರದ ಅಂಗಗೋಪಾಂಗಗಳು ತಮ್ಮತಮ್ಮ ಕ್ರಿಯೆಯಮೂಲಕ ಆಹಾರದಲ್ಲಿರುವ ಸಾರವನ್ನು ಹೀರಿ ಇಡೀ ಶರೀರಕ್ಕೆ ಶಕ್ತಿಯನ್ನು ಕೊಡುತ್ತದೆಯಷ್ಟೇ. ಜೀರ್ಣಶಕ್ತಿ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಜೀರ್ಣಕ್ರಿಯೆ ಸರಿಯಾಗಿ ಸಾಗುತ್ತಿದೆಯೇ ಎಂಬುದನ್ನು ಅದರ ಪರಿಣಾಮದಿಂದ ತಿಳಿಯುತ್ತೇವೆ. ಅಂತೆಯೇ ಆಹಾರ ಜೀರ್ಣವಾಗದಿದ್ದಾಗ ಶರೀರದಲ್ಲಿ ನಾನಾ ತರಹದ ಬಾಧೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಅಜೀರ್ಣ ಎಲ್ಲಿದೆ ತೋರಿಸಿ ಎಂಬ ಪ್ರಶ್ನೆ ಅಸಂಬದ್ಧವಾಗುವುದು. ಅಂತೆಯೇ ಅಜೀರ್ಣಶಕ್ತಿ-ಜೀರ್ಣಶಕ್ತಿ ಇವೆರಡೂ ಶರೀರದಲ್ಲಿ ಕೆಲಸ ಮಾಡುತ್ತವೆಯಾದರೂ ಎರಡೂ ಒಟ್ಟಿಗೆ ಕೆಲಸ ಮಾಡುವುದಿಲ್ಲ.  ಆರೋಗ್ಯವಾಗಿರುವಾಗ ಜೀರ್ಣಶಕ್ತಿ ಉತ್ತಮರೀತಿಯಲ್ಲಿ ಕೆಲಸ ಮಾಡುತ್ತದೆ. ಜೀರ್ಣಶಕ್ತಿ ಕುಂಠಿತವಾದರೆ ಪರಿಣಾಮ ಅಜೀರ್ಣವೇ. ಆದ್ದರಿಂದ ಇವೆರಡರಲ್ಲಿ ಯಾವುದಾದರೊಂದು ಮಾತ್ರ ಅನುಭವಕ್ಕೆ ಬರುವುದು. 

ಹಾಗೆಯೇ ಜೀರ್ಣಕ್ರಿಯೆಗಿಂತಲೂ ಅಜೀರ್ಣಕ್ರಿಯೆಯು ತನ್ನನ್ನು ವಿವಿಧರೀತಿಯಲ್ಲಿ ಪ್ರಕಟಪಡಿಸಿಕೊಳ್ಳುತ್ತದೆ. ಅಂದರೆ, ಸಕ್ರಮ ಒಂದಾದರೆ ಅಕ್ರಮ ಅನೇಕ ಇರಬಹುದೆನ್ನುವುದು ಇಲ್ಲಿ ಗಮನಾರ್ಹ. ಗಣಿತದಲ್ಲೂ ಒಂದು ಪ್ರಶ್ನೆಗೆ ಸರಿಯಾದ ಉತ್ತರ ಒಂದೇ, ತಪ್ಪುತ್ತರ ನೂರಾರು ಇರಬಹುದೆನ್ನುವುದೂ ಸರ್ವವಿದಿತ.

2. ಹಲಸಿನ ಹಣ್ಣನ್ನು ಮಿತಪ್ರಮಾಣದಲ್ಲಿ ಸೇವಿಸಿದರೆ ನಾಲಿಗೆಗೆ ರುಚಿ, ಮನಸ್ಸಿಗೆ ಖುಷಿ, ಶರೀರಕ್ಕೆ ಪುಷ್ಟಿ. ಆದರೆ ಅದನ್ನೇ ಮಿತಿಮೀರಿ ತೆಗೆದುಕೊಂಡರೆ ದುಷ್ಪರಿಣಾಮವಾಗಿ, ಅಜೀರ್ಣಕ್ಕೆ ಹಲಸಿನ ಹಣ್ಣೇ ಕಾರಣವೆಂದು ತೀರ್ಮಾನಿಸುವುದು ತಪ್ಪೇನಲ್ಲ. ಆದರೆ ಅಜೀರ್ಣವನ್ನು ಹಲಸಿನಹಣ್ಣಿನಲ್ಲಿ ಹುಡುಕಿದರೆ ಕಾಣಿಸೀತೇ! ಆದ್ದರಿಂದ ಜೀರ್ಣಶಕ್ತಿ-ಅಜೀರ್ಣಶಕ್ತಿ ಎರಡೂ ಇರುವುದು ನಮ್ಮಲ್ಲೇ, ಆದರೆ ಅವುಗಳು ಕಾಣಸಿಗುವುದು ಪರಿಣಾಮದಲ್ಲಿ ಮಾತ್ರವೇ.  ಅಂತೆಯೇ ಶಕ್ತಿರೂಪರಾದ ದೇವಾಸುರರನ್ನು ಚರ್ಮಚಕ್ಷುಸ್ಸಿನಿಂದ ಹುಡುಕುವಂತಿಲ್ಲ. ಅವರುಗಳ ಇರುವನ್ನು ಪರಿಣಾಮದ ಮೇಲೆಯೇ ತಿಳಿಯತಕ್ಕದ್ದು. ದೇವಾಸುರರಲ್ಲಿ ಪ್ರಬಲರಾರೆನ್ನುವುದನ್ನು ಪರಿಣಾಮದಿಂದಲೇ ತೀರ್ಮಾನಿಸಬೇಕಾಗುವುದು. 


ಪೈಪೋಟಿ  

ಇಲ್ಲಿ, ಕ್ರಮಬದ್ಧವಾಗಿ ಜೀರ್ಣಕ್ರಿಯೆಯು ಸಾಗುವುದನ್ನು ದೇವತೆಗಳ ಕೆಲಸ ಎನ್ನಬಹುದು. ಅಂದರೆ, ಶರೀರದಲ್ಲಿನ ಸೃಷ್ಟಿನಿಯಮವನ್ನು ಕಾಪಾಡುವವರು ದೇವತಾಶಕ್ತಿಗಳು. ಜೀರ್ಣಶಕ್ತಿ(ದೇವತೆಗಳು) ಕುಂಠಿತವಾದಾಗ ಅಜೀರ್ಣಶಕ್ತಿ(ಅಸುರರು) ನುಗ್ಗಿ ಪ್ರಕೃತಿಯನ್ನು ಕೆಡಿಸುತ್ತದೆ. ಅಸುರರಿಂದ ಶರೀರನಿಯಮವು ಅಸ್ತವ್ಯಸ್ತವಾಗುವುದು. ಜೀರ್ಣ-ಅಜೀರ್ಣ ಎರಡೂ ಜೊತೆಯಾಗಿರುವಂತೆ ಕಂಡರೂ ಅವೆರಡಕ್ಕೂ ಪರಸ್ಪರ ಪೈಪೋಟಿ ಇರುತ್ತದೆ. ಯಾವುದಕ್ಕೆ ಜಯ ಎನ್ನುವುದು ನಮ್ಮ systemಅನ್ನು ಅವಲಂಬಿಸಿರುತ್ತದೆ. ಅಂದರೆ ಪರಸ್ಪರ ಎರಡಕ್ಕೂ ಕೂಡ ಘರ್ಷಣೆ ಆಗುತ್ತಲೇ ಇರುತ್ತದೆ. ಕೊನೆಗೆ ಯಾವುದೋ ಒಂದಕ್ಕೆ ಜಯ. ಅದು ವಿಜೃಂಭಿಸುತ್ತದೆ.  

ಇದನ್ನೇ ಶಕ್ತಿರೂಪದಲ್ಲಿ ತೆಗೆದುಕೊಂಡಾಗ ದೇವತೆಗಳಿಗೂ ಅಸುರರಿಗೂ ನಡೆಯುವ ಯುದ್ಧ  ಎನ್ನಬೇಕಾಗುವುದು. ಶ್ರಾದ್ಧ, ಸೀಮಂತ ಮುಂತಾದ ಕರ್ಮಗಳಲ್ಲೂ ಸಾಧಿಸಬೇಕಾದ ಧ್ಯೇಯವೊಂದುಂಟು. ಆ ಧ್ಯೇಯ ಸಾಧನೆಗೆ ಬೇಕಾದ ಶರೀರಧರ್ಮವೊಂದುಂಟು. ಆ ಧರ್ಮವನ್ನು ಕಾಪಿಡುವ ಶಕ್ತಿಗಳೇ ದೇವತೆಗಳು. ಅದು ವ್ಯತ್ಯಸ್ತವಾಗುವುದು ಆಸುರೀಶಕ್ತಿಗಳಿಂದ. ಇವೆರಡೂ ಶಕ್ತಿಗಳು ಶರೀರದಲ್ಲಿಯೇ ನೆಲೆಸಿ ಸೆಣಸುತ್ತವೆ. ಯಾರ ದೇಹಪ್ರಕೃತಿಯಲ್ಲಿ ದೇವತಾಶಕ್ತಿಗಳು ಗೆಲ್ಲುತ್ತವೆಯೋ ಆ ವ್ಯಕ್ತಿಯು ಕರ್ಮದ ಗುರಿಮುಟ್ಟುವನು ಎಂಬುದು ತಾತ್ಪರ್ಯ. 

 

ದೇವಾಸುರರ ಸಂಧಿ 

ಅಮೃತ ಮಥನದ ಕಥೆಯಂತೆ ಕೆಲವೊಮ್ಮೆ ದೇವಾಸುರರಿಬ್ಬರೂ ಒಂದೇ ಗುರಿಮುಟ್ಟಲು ಸಂಧಿಮಾಡಿಕೊಳ್ಳುವ ಸಂಭವವೂ ಉಂಟು. ಸಂಧಿಯ ಹಿಂಬದಿಯಲ್ಲಿ ಸಂಚು ಇರಬಹುದೆಂದು ಇಬ್ಬರಿಗೂ ಅನುಮಾನ ಇದ್ದೇ ಇರುವುದು. ಮರತ್ವವನ್ನು ಹೊಂದಲು ಅಮೃತವನ್ನು ಪಡೆಯಲೋಸುಗ ಇಬ್ಬರೂ ಸೇರಿ ಸಮುದ್ರಮಥನಕ್ರಿಯೆಯನ್ನು ಕೈಗೊಳ್ಳುತ್ತಾರೆ. ಒಂದುಕಡೆ ದೇವತೆಗಳು ಮತ್ತೊಂದುಕಡೆ ಅಸುರರಿದ್ದು ಕಡೆದಾಗಲೇ ಅಮೃತವು ದೊರೆಯುವುದು. ಮಥನಕ್ರಿಯೆಗೆ ನಾನಾರೀತಿಯಲ್ಲಿ ಸಹಾಯಮಾಡಿದಂತೆ ಮಹಾವಿಷ್ಣುವು ಮೋಹಿನೀರೂಪಧರಿಸಿ ಅಮೃತವನ್ನು ದೇವತೆಗಳಿಗೂ ಸುರಾಪಾನವನ್ನು ಅಸುರರಿಗೂ ಉಪಾಯದಿಂದ ಹಂಚಿ ದೇವತೆಗಳನ್ನು ಸಂರಕ್ಷಿಸಿದನು.


(ಮುಂದುವರಿಯುವುದು) 

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  20/1/2024 ರಂದು ಪ್ರಕಟವಾಗಿದೆ.