Sunday, January 7, 2024

ತ್ರಿಪುರಾಸುರರು ( Tripurasuraru)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ 
(ಪ್ರತಿಕ್ರಿಯಿಸಿರಿ lekhana@ayvm.in)

 

ತ್ರಿಪುರಾಸುರರ ಕಥೆಯು ಶಿವಪುರಾಣದಲ್ಲೂ ಶ್ರೀಮತ್ ಭಾಗವತದಲ್ಲೂ ಮತ್ತು ವೇದದ ತೈತ್ತಿರೀಯ ಸಂಹಿತೆಯಲ್ಲಿಯೂ ಮತ್ತಿತರ ಪುರಾಣಗಳಲ್ಲೂ ವಿವರಿಸಲ್ಪಟ್ಟಿದೆ. ತ್ರಿಪುರಾಸುರರು ಎಂದರೆ ತಾರ-ತಾರಾಕ್ಷ-ಕಮಲಾಕ್ಷ ಎಂಬ ಮೂವರು. ಈ ಮೂವರೂ ತಾರಕಾಸುರನ  ಪುತ್ರರು. ಮಹಾಪರಾಕ್ರಮಿಗಳು, ಆಸುರರಾದರೂ ಸತ್ಯವಾದಿಗಳು, ವ್ರತನಿಷ್ಠರು, ಉದಾರಸತ್ವರು, ಶಿವನ ಭಕ್ತರು. ಇಷ್ಟೆಲ್ಲಾ ಗುಣಸಂಪನ್ನರಾದರೂ ದೇವತೆಗಳ ವಿಷಯದಲ್ಲಿ ನಿಷ್ಕಾರಣವಾಗಿ ದ್ವೇಷಕಾರುವವರು. ದೇವತೆಗಳು ಭಗವಂತನ ಧರ್ಮಸೇತುವೆಯನ್ನು ರಕ್ಷಣೆಮಾಡುವವರು. ಭಗವಂತನ ಸೇವಕರು. ಅಂತಹವರನ್ನು ವಿನಾಕಾರಣ ದ್ವೇಷಿಸುವುದೇ ಮಹಾಪರಾಧ.  


ವರ ಸಂಪಾದನೆ: ತ್ರಿಪುರಾಸುರರು ಅನೇಕವರ್ಷಗಳಕಾಲ ಘೋರತಪಸ್ಸುಗಳಿಂದ ಬ್ರಹ್ಮನನ್ನು ಒಲಿಸಿ ಅಜರಾಮರತ್ವವನ್ನು ಪ್ರಾರ್ಥಿಸಿದರು. "ಅದು ಸಾಧ್ಯವಿಲ್ಲ. ಯಾವರೀತಿ ವಧೆಯಾಗಬೇಕೆನ್ನುವ ಮಾರ್ಗವನ್ನು ನೀವೇ ಆರಿಸಿಕೊಳ್ಳಿ" ಎಂದು ಬ್ರಹ್ಮನು ಉತ್ತರಿಸಿದ. ದೀರ್ಘಾಲೋಚನೆಯನಂತರ "ಶಿವಭಕ್ತರಾದ ನಮಗೆ ಶಿವನಿಂದಲೇ ಮರಣವಾಗಲೆಂದು ಪ್ರಾರ್ಥಿಸಿದರು". ಅಂದರೆ ಶಾಂತಸ್ವರೂಪನಾದ ಶಿವನು ತನ್ನ ಭಕ್ತರನ್ನು ಹೇಗೆತಾನೇ ಸಂಹರಿಸುವನೆಂಬ ಭರವಸೆ ಮತ್ತು ಲೆಕ್ಕಾಚಾರ ಅವರದು. ಆದ್ದರಿಂದ ಅಮರರೇ ಆಗುತ್ತೇವೆ ಎಂಬ ದೃಢನಂಬಿಕೆ. ಮತ್ತೊಂದು ಷರತ್ತನ್ನೂ ಹಾಕಿದರು: ಬ್ರಹ್ಮದೇವರ ಆಜ್ಞೆಯಂತೆ ಮಯಾಸುರನಿಂದ ಉತ್ತಮಭೋಗಗಳಿಂದ ಕೂಡಿದ ಮತ್ತು ಸದಾಸಂಚಾರ ಮಾಡುವ ಸುವರ್ಣ-ರಜತ(ಬೆಳ್ಳಿ)-ಕಬ್ಬಿಣಮಯವಾದ ಮೂರು ಪಟ್ಟಣಗಳ ನಿರ್ಮಾಣವಾಗಬೇಕು.  ಮೂರೂ ಸಂಧಿಸುವುದು ಸಾವಿರವರ್ಷಕ್ಕೊಮ್ಮೆಯೇ, ಸಂಧಿಯೂ ಕ್ಷಣಮಾತ್ರವೇ ಆಗಿದ್ದು ಸಂಧಿಕಾಲ ಮಧ್ಯಾಹ್ನದಲ್ಲೇ ಕೂಡಿಬಂದು, ಒಂದೇ ಬಾಣದಿಂದ ಮಹಾದೇವನೇ ಅವರನ್ನು ಕೊಲ್ಲುವಂತಾದರೆ ಮಾತ್ರ ಮರಣ! ಇದರಲ್ಲಿ ಯಾವ ಒಂದು ಲೋಪವಾದರೂ ಮರಣವಿಲ್ಲ! ಎಂತಹ ಷರತ್ತು!! ಬ್ರಹ್ಮ ದೇವರು ಒಪ್ಪಿದರು.  


ಸಂಹಾರ: ಕಾಲಕಳೆದಂತೆ, ಇಂತಹ ಅಮೋಘವರದಿಂದ ದೇವತೆಗಳಿಗೆ ವಿರುದ್ಧವಾಗಿ ಲೋಕಕಂಟಕರಾಗುತ್ತಾರೆ. ಅಧರ್ಮ ಮಾರ್ಗವನ್ನು ಹಿಡಿದು ನಾಸ್ತಿಕವಾದವನ್ನು ಒಪ್ಪುತ್ತಾರೆ. ಪರಿಸ್ಥಿತಿ ಮಿತಿಮೀರಿದಾಗ ಅವರುಗಳು ಸಂಹಾರಕ್ಕೆ ಯೋಗ್ಯರೆಂದು ತಿಳಿದು ವಿಷ್ಣುವಿನಿಂದಲೇ ಸಂಹಾರಕಾರ್ಯದ ಸಿದ್ಧತೆ ಪ್ರಾರಂಭವಾಗುತ್ತದೆ. ವಿಶ್ವಕರ್ಮನು ಮಹಾದೇವನಿಗೆ ವಿಶ್ವಮಯವಾದ ಸುವರ್ಣರಥವೊಂದನ್ನು ನಿರ್ಮಿಸುತ್ತಾನೆ: ಇದರ ಬಲಭಾಗದಲ್ಲಿ 12 ಅರೆಪಟ್ಟಿಗಳೊಂದಿಗೆ ಸೂರ್ಯ, ಎಡಭಾಗದಲ್ಲಿ 16 ಅಡ್ಡಪಟ್ಟಿಗಳು ಮತ್ತು 27 ಅಲಂಕಾರಗಳಿಂದ ಕೂಡಿದ ಚಂದ್ರನೂ ಇದ್ದು, ರಥಕ್ಕೆ ಬ್ರಹ್ಮನೇ ಸಾರಥಿಯಾಗುತ್ತಾನೆ. ಗಂಗಾ-ಯಮುನಾದಿ ನದಿಗಳು ಧನುಷ್ಪಾಣಿಯಾದ ಮಹಾದೇವನಿಗೆ ಚಾಮರಸೇವೆಯನ್ನು ಮಾಡಿದವಂತೆ. ಸಂಹಾರಕ್ಕೆ ಏಕೈಕ ಬಾಣವೇ ಮಹಾವಿಷ್ಣು. ರಥವನ್ನು ಹತ್ತಿದ ಮಹಾದೇವನು ದೇವತೆಗಳಿಗೆ ಒಂದು ಕಂಡೀಷನ್ ಹಾಕುತ್ತಾನೆ. "ನೀವುಗಳೆಲ್ಲಾ ನನಗೆ ಪಶುಗಳಾಗಬೇಕು, ನಾನು ಪಶುಪತಿಯಾಗಬೇಕು" ಎಂದು. ಅವರು ಒಪ್ಪಿದಮೇಲೆ ಬಾಣಪ್ರಯೋಗಕ್ಕೆ ಸಿದ್ಧನಾಗುತ್ತಾನೆ. ಇದ್ದಕ್ಕಿದ್ದಂತೆ ಮಹಾಧಾನುಷ್ಕನೂ ಪಿನಾಕಿ ಎಂದು ಸ್ತುತಿಸಲ್ಪಡುವವನೂ ಆದ ಮಹಾದೇವನ ಬೆರಳುಗಳು ಅಲ್ಲಾಡಿತಂತೆ. ಹೆಬ್ಬೆರಳನ್ನು ಆಡಿಸಿದುದು ಗಣೇಶ! ವಿಘ್ನೇಶ್ವರನಿಗೆ ಪೂಜೆಯಾಗಬೇಕಿತ್ತು. ತಂದೆಯಾದರೂ  ವಿಘ್ನನಿವಾರಣೆಗಾಗಿ ಮಗನಿಗೆ ಪೂಜೆ ಮಾಡಲೇಬೇಕಲ್ಲವೇ? ಸರಿ. ಅದೂ ಸಂಪನ್ನವಾಯಿತು. ಇಷ್ಟೆಲ್ಲ ಆದಮೇಲೇ ಮೂರು ಪಟ್ಟಣಗಳೂ ಇದ್ದಕ್ಕಿದ್ದಂತೆ ನಿಶ್ಚಲವಾಗಿ ಒಂದೆಡೆ ಸೇರುತ್ತವೆ. ಸಮಯ 12ಘಂಟೆ. ಮಹಾದೇವ ಬಾಣಪ್ರಯೋಗಿಸಲಾಗಿ ಏಕಕಾಲದಲ್ಲಿ ಮೂರುಪುರಗಳೂ ಭಸ್ಮವಾದವು. ಆದುದರಿಂದಲೇ ಪರಶಿವನು ಪುರಾರಿ-ತ್ರಿಪುರಾರಿ ಎಂದು ಸ್ತುತಿಸಲ್ಪಡುವನು.   


ತತ್ತ್ವಾರ್ಥ: ಇದು ತತ್ತ್ವಮಯವಾಗಿ ಪೋಣಿಸಲ್ಪಟ್ಟಿರುವ ಒಂದು ಕಥೆ. ಇಲ್ಲಿ ತ್ರಿಪುರಗಳು ತ್ರಿಗುಣಗಳ ಪ್ರತೀಕ. ಸುವರ್ಣವರ್ಣ ಸತ್ವಗುಣದ ಪ್ರತೀಕವಾದರೆ, ಕೆಂಪುಬಣ್ಣ ರಜೋಗುಣವನ್ನು, ಕಪ್ಪುಬಣ್ಣವು ತಮೋಗುಣವನ್ನು ಪ್ರತೀಕಿಸುತ್ತವೆ. ತ್ರಿಗುಣಗಳ ಸ್ವಭಾವವೇ ಚಲನೆ. ಮೂರೂ ಒಂದೆಡೆ ಸೇರುವುದು ದುಷ್ಕರವೇಸರಿ. ಎಂದರೆ ವೈಷಮ್ಯವಿದ್ದೇ ಇರುತ್ತದೆ. ತ್ರಿಗುಣಗಳ ವೈಷಮ್ಯದಿಂದಲೇ ಸೃಷ್ಟಿಯಾಗುವುದು. ಸಾಮಾನ್ಯವಾಗಿ ತ್ರಿಗುಣಗಳಲ್ಲಿ ಒಂದು ಗುಣ ಪ್ರಧಾನವಾಗಿಯೂ ಉಳಿದೆರಡೂ ಅದಕ್ಕೆ ಅಧೀನವಾಗಿಯೂ ಇರುವುದು. ಎಂದಾದರೂ ಈ ಮೂರೂ ಒಟ್ಟಿಗೆಸೇರಿ ಸಾಮ್ಯಸ್ಥಿತಿಯುಂಟಾದರೆ ಅದೇ ಸಮಾಧಿಸ್ಥಿತಿ. ಇಲ್ಲಿ ತ್ರಿಪುರಾಸುರರ ಸಂಹಾರ ಎಂದರೆ ತ್ರಿಗುಣಗಳ ಏರಿಳಿತವಿಲ್ಲದೆ ಮನಸ್ಸು ಸಮಾಧಿಯಲ್ಲಿ ಲೀನವಾಗುವುದು ಎಂಬ ತತ್ತ್ವಾರ್ಥ. ಇದನ್ನು ಪಡೆಯುವುದು ಅತ್ಯಂತ ಕಷ್ಟಕರವಾದದ್ದು. ಸಾಧನೆಯಿಂದ ಕಾಲವಿಶೇಷದಲ್ಲಿ ಉಂಟಾಗುವುದು ಎಂಬ ತತ್ತ್ವವನ್ನೂ ದೇವತೆಗಳೆಲ್ಲರೂ ಸಹಕರಿಸಿ ತಮ್ಮತನವನ್ನು ಕಳೆದುಕೊಂಡು ಮಹಾದೇವನಲ್ಲಿ ಶರಣುಹೊಂದಿದರೇನೇ ಈ ಸ್ಥಿತಿಯು ಸಾಧ್ಯವಾಗುವುದೆಂದೂ ತಿಳಿಸುತ್ತದೆ. ಈ ಲಯವನ್ನು ಕರುಣಿಸುವವನೇ ಮಹಾಯೋಗಿಯಾದ ಮಹಾದೇವನು. ಅವನಿಗೇ ಇದು ಸಾಧ್ಯ. ಅವನಿಗೆ ಸಾರಥಿ ಮತ್ತು ಬಾಣದ ರೂಪದಲ್ಲಿ ಸಹಾಯಕರಾಗಿರುವವರು ಬ್ರಹ್ಮ ಮತ್ತು ವಿಷ್ಣು.  ತ್ರಿಗುಣಗಳ ಅಧಿಪತಿಗಳೇ ಬ್ರಹ್ಮ-ವಿಷ್ಣು-ಮಹೇಶ್ವರರು. ಅವರುಗಳು ಅಧಿಪತಿಗಳಾಗಿ ಅವುಗಳನ್ನು ನಡೆಸುತ್ತಾರೆಯೇ ವಿನಾ ಅವುಗಳಿಗೆ ಎಂದಿಗೂ ವಶರಾಗುವುದಿಲ್ಲ. ತ್ರಿಗುಣಗಳ ಸೇರುವಿಕೆ ಮತ್ತು ಬೇರ್ಪಡುವಿಕೆಯಿಂದಲೇ ಸೃಷ್ಟಿ-ಸ್ಥಿತಿ-ಲಯ ಕಾರ್ಯಗಳು ನಡೆಯುತ್ತವೆ ಎಂಬ ತತ್ತ್ವಾರ್ಥವನ್ನು ಬೋಧಿಸುತ್ತದೆ.


ಇದು ಆದ್ಯಂತ ಆಧ್ಯಾತ್ಮಿಕ ಕಥೆ. ತ್ರಿಗುಣಗಳಲ್ಲಿ ಓಡಾಟ ಕೊನೆಯಲ್ಲಿ ತ್ರಿಗುಣಗಳನ್ನೂ ಭಸ್ಮಮಾಡಿ ತ್ರಿಗುಣಾತೀತ ಸ್ಥಿತಿಯನ್ನು ಹೊಂದುವುದೇ ತಾತ್ಪರ್ಯ. ಈ ಕಥೆಯ ತತ್ತ್ವಾರ್ಥವನ್ನು ಬೋಧಿಸಿದ ಯತಿವರೇಣ್ಯರಾದ ಶ್ರೀಶ್ರೀರಂಗಪ್ರಿಯಶ್ರೀಗಳಿಗೆ ನಮೋನಮಃ 

ಪುರಾ ನಾರಾಯಣಾಸ್ತ್ರೇಣ ಭವರೂಪಂ ಪುರತ್ರಯಂ |

ಭಸ್ಮೀ ಚಕಾರ ಯೋಗೀಂದ್ರಃ ತಸ್ಮೈ ರುದ್ರಾತ್ಮನೇ ನಮಃ ||


ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  06/1/2024 ರಂದು ಪ್ರಕಟವಾಗಿದೆ .