ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 70 ಸ್ವರ್ಗವನ್ನು ಸೇರದಿರಲು ಕಾರಣವೇನು ?
ಉತ್ತರ - ಸಂಗ
ಈ ಹಿಂದಿನ ಲೇಖನದಲ್ಲಿ ಮಿತ್ರರನ್ನು ಬಿಡಲು ಕಾರಣವೇನು? ಎಂಬುದನ್ನು ಯಕ್ಷ ಕೇಳಿದ್ದ. ಮಿತ್ರರನ್ನು ಸಂಪಾದಿಸಬೇಕು, ಸನ್ಮಿತ್ರರು ನಮ್ಮನ್ನು ಸಂಸಾರವೆಂಬ ಬಂಧನದಿಂದಲೇ ಬಿಡಿಸಲೂಬಹುದು, ಯಾವುದೋ ಆಸೆಯಿಂದ ಅಂತಹ ಮಿತ್ರರನ್ನೂ ನಾವು ಕಳೆದುಕೊಳ್ಳುತ್ತೇವೆ, ಲೋಭದಿಂದ ಕಳೆದುಕೊಳ್ಳುವುದು ನಷ್ಟವೇ ಸರಿ, ಎಂಬ ಮಾತುಗಳನ್ನು ಆಡಲಾಗಿತ್ತು. ಆದರೆ ಪ್ರಕೃತ ಪ್ರಶ್ನೆಯಲ್ಲಿ ಇದಕ್ಕೆ ವಿರುದ್ಧವಾದ ಚಿಂತನೆಯನ್ನು ಮಾಡುತ್ತಿರುವಂತೆ ಕಾಣುತ್ತಿದೆ ಯಕ್ಷನ ಈ ಪ್ರಶ್ನೆಯಲ್ಲಿ. ಹಿಂದಿನ ಪ್ರಶ್ನೆಯಲ್ಲಿ ಸಂಗದ ಮಹತ್ತ್ವ ಮತ್ತು ಅನಿವಾರ್ಯವನ್ನು ಕೊಂಡಾಡಲಾಗಿತ್ತು. ಆದರೆ ಈ ಪ್ರಶ್ನೆಯಲ್ಲಿ ಸಂಗವೇ ಬೇಡ ಎಂಬುದನ್ನು ಬಲವಾಗಿ ಪ್ರತಿಪಾದಿಸಿದಂತೆ ಕಾಣುತ್ತಿದೆ. ಇದು ಪೂರ್ವಾಪರ್ಯ ವಿರೋಧವಲ್ಲವೇ? ಇದು ಗೊಂದಲಕ್ಕೆ ಕಾರಣವಲ್ಲವೇ?
ಇಲ್ಲಿ ವಿರೋಧವೂ ಇಲ್ಲ. ಗೊಂದಲವೂ ಇಲ್ಲ. ವಿಷಯವನ್ನು ಒಂದು ನೇರಕ್ಕೆ ಅರ್ಥಮಾಡಿಕೊಂಡಾಗ ಗೊಂದಲ ನಿವಾರಣೆಯಾಗುತ್ತದೆ. ನಮಗೆ ಸಂಗ ಎಲ್ಲಿಯವರೆಗೆ ಬೇಕು? ಮತ್ತು ಯಾವುದು ಲಭ್ಯವಾದರೆ ಮುಂದಕ್ಕೆ ಸಂಗಕ್ಕೆ ಆಸ್ಪದವಿಲ್ಲ ಎಂಬುದನ್ನು ವಿವೇಚಿಸಿಕೊಂಡಾಗ ಈ ಗೊಂದಲಕ್ಕೆ ತೆರೆ ಎಳೆದಂತಾಗುವುದು.
ಯಾವುದನ್ನೇ ಸಾಧಿಸಬೇಕಾದರೂ ಅಲ್ಲಿ ಗಮ್ಯ ಮತ್ತು ಅದಕ್ಕೆ ಅನುಕೂಲಕರವಾದ ಗಮಕ-ಸಾಧನ ಎಂಬ ಎರಡು ಅಂಶಗಳು ಬಹಳ ಮುಖ್ಯ. ಗಮ್ಯಸ್ಥಾನವನ್ನು ತಲುಪಿದ ಮೇಲೆ ಮತ್ತೆ ಆ ಸಾಧನಾವಲಂಬನೆ ಬೇಕಾಗಿಲ್ಲ. ಗಮ್ಯಸ್ಥಾನವನ್ನು ತಲುಪುವ ತನಕ ಅದನ್ನು ಬಡುವಂತೆಯೂ ಇಲ್ಲ. 'ಮನದಿದಾಟಿದ ಮೇಲೆ ಅಂಬಿಗನ ಹಂಗೇನು?' ಎಂಬ ಗಾದೆಮಾತು ಈ ನೇರದಲ್ಲೇ ಬಂದಿದೆ. ಯಾವುದೇ ಅಪಾಯವಿಲ್ಲದೇ ನದಿಯನ್ನು ಅಂಬಿಗ ದಾಟಿಸಿದ್ದಾನಲ್ಲ; ದಾಟಿದ ಮೇಲೆ ಅವನನ್ನು ಬಿಡುವುದು ಸರಿಯೇ? ಅವನಿಗೆ ಬೇಸರವಾಗುವುದಿಲ್ಲವೇ ಬಿಟ್ಟರೆ? ಅಥವಾ ದೋಣಿ ನಮ್ಮನ್ನು ದಾಟಿಸಿದೆಯಲ್ಲ! ದೋಣಿಯನ್ನು ಬಿಟ್ಟು ಹೋಗುವುದೆಂತು? ಎಂದು ಪ್ರೀತಿಯನ್ನು ತೋರಿಸಿ ಅಲ್ಲೇ ಕುಳಿತುಕೊಂಡರೆ ಪಾರಕ್ಕೆ ತಲುಪಲು ಸಾಧ್ಯವೇ ಇಲ್ಲ. ಆ ಕಡೆ ಹೋಗದಿದ್ದರೆ ಅಂಬಿಗನೂ ನಮ್ಮನ್ನು ಬಿಡನು. ದೋಣಿಯಿಂದ ಕೆಳಗಿಳಿಸಿ ಮತ್ತೊಬ್ಬನನ್ನು ದಾಟಿಸಲು ಅದೇ ದೋಣಿಯನ್ನು ಬಳಸಿಕೊಳ್ಳಬೇಕಾಗುತ್ತದೆ. ನದಿಯನ್ನು ದಾಟುವ ತನಕ ಅಂಬಿಗನ ಮೇಲೆ ನಂಬಿಕೆ ಪ್ರೀತಿ, ದೋಣಿ ನಮ್ಮದೇ ಎಂಬ ಮಮತೆ ಇವೆಲ್ಲಲೂ ಬೇಕೇಬೇಕು. ಅದಿಲ್ಲದಿದ್ದರೆ ನಾವು ನದಿಯನ್ನು ದಾಟಲು ಸಾಧ್ಯವೇ ಇಲ್ಲ. ಆಲಿ ಸಾಧನದ ಬಗ್ಗೆ ಅಪವಿಶ್ವಾಸ ಸರ್ವಥಾ ಸಲ್ಲದು. ಇದೇ ವಿಷಯವನ್ನೇ ಯಕ್ಷನ ಪ್ರಶ್ನೆಯ ಉತ್ತರವಾಗಿ ಭಾವಿಸಬೇಕು.
ಸಂಗವೆಂದರೆ ಸಂಬಂಧ. ನಮ್ಮ ಜೀವನದಲ್ಲಿ ಅನೇಕ ವಸ್ತುಗಳನ್ನು ಸಂಗ್ರಹಿಸುವುದು ಅನಿವಾರ್ಯ. ಅವುಗಳ ಪ್ರಭಾವ ನಮ್ಮ ಮನಸ್ಸು ಇಂದ್ರಿಯಗಳ ಮೇಲೆ ಆಗುತ್ತದೆ. ಆಗ ಸಹಜವಾಗಿ ಇಂದ್ರಿಯ ಮನುಸ್ಸುಗಳು ಬಹಿರ್ಮುಖವಾಗುತ್ತವೆ. ಮನಸ್ಸು ಬಹಿರ್ಮುಖವಾಗುವುದನ್ನೇ ಸಂಗವೆಂದೂ, ಅದೇ ಮನಸ್ಸು ಅಂತರ್ಮುಖವಾಗುವುದನ್ನು ನಿಸ್ಸಂಗವೆಂದು ಕರೆಯಲಾಗಿದೆ. ಈ ನಿಸ್ಸಂಗಭಾವವೇ ನಿರ್ಮೋಹಭಾವಕ್ಕೂ ಕಾರಣ. ನಿಶ್ಚಲವಾದ ತತ್ತ್ವವನ್ನು ನಾವು ಪಡೆಯಬೇಕಾದರೆ ಇಂತಹ ನಿಸ್ಸಂಗ ಭಾವವನ್ನು ಬೆಳೆಸಿಕೊಳ್ಳಬೇಕು. ಅದಲ್ಲದಿದ್ದರೆ ಎಂತಹ ಸ್ವರ್ಗಸುಖವೇ ಆದರೂ ನವದನ್ನು ಪಡೆಯಲು ಅಸಾಧ್ಯ ಎಂಬುದು ಈ ಉತ್ತರದ ಆಶಯವಾಗಿದೆ.