Showing posts with label author_narasimhabhat. Show all posts
Showing posts with label author_narasimhabhat. Show all posts

Monday, May 5, 2025

ಪ್ರಶ್ನೋತ್ತರ ರತ್ನಮಾಲಿಕೆ 14 (Prasnottara Ratnamalike 14)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೧೪. ಭಯ ಯಾರಿಂದ ?

ಉತ್ತರ - ಮರಣದಿಂದ, ಈಶ್ವರದಿಂದ

ಈ ಮುಂದಿನ ಪ್ರಶ್ನೆ - ಭಯ ಯಾರಿಂದ? ಎಂಬುದಾಗಿ. ಅದಕ್ಕೆ ಉತ್ತರ 'ಮರಣದಿಂದ' ಅಥವಾ 'ಈಶ್ವರನಿಂದ' ಎಂಬುದು ಕೇವಲ ಮಾನವನಿಗೆ ಮಾತ್ರವಲ್ಲ; ಸಕಲ ಜಂತುಗಳಿಗೂ ಭಯ ಎಂಬುದು ಬಿಟ್ಟಿದ್ದಲ್ಲ. ಭಯದಿಂದಲೇ ಅವನು ಜೀವನವನ್ನು ಮಾಡುತ್ತಿರುತ್ತಾನೆ. ಭಯದ ರಕ್ಷಣೆಯನ್ನು ಮಾಡಿಕೊಳ್ಳುವುದಕ್ಕೋಸ್ಕರವೇ ಜೀವನವನ್ನು ಮಾಡಿಕೊಳ್ಳುತ್ತಿರುತ್ತಾರೆ. ಭಯದಿಂದ ನಿವೃತ್ತಿ ಹೇಗೆ ಸಾಧ್ಯ? ಎಂಬುದು ಪ್ರತಿಯೊಬ್ಬರ ಚಿಂತನೆಯಾಗಿರುತ್ತದೆ. ಹಾಗಾಗಿ ಈ ಭಯ ಎಂಬುದು ನಮ್ಮನ್ನು ಯಾವಾಗಲೂ ಕಾಡುವಂತಹದ್ದು. ಹಾಗಾದರೆ ಮರಣವೆಂಬುದು ಅದೇಕೆ ನಮಗೆ ಇಷ್ಟು ಭಯ? ಎಂಬುದು ಬಹಳ ವಿಚಾರಣೀಯ.


ಭಾರತೀಯ ಸಂಸ್ಕೃತಿ ಇಷ್ಟು ಗಟ್ಟಿಯಾಗಿ ನಿಂತಿದೆ ಎನ್ನುವುದಾದರೆ ಅದಕ್ಕೆ ಕಾರಣವೇ ಈ ಮರಣಭಯ. ಅದೊಂದು ಇಲ್ಲವಾದರೆ ಈ ಸಂಸ್ಕೃತಿಗೆ ಅಸ್ತಿತ್ವವೇ ಇಲ್ಲ ಎನ್ನಬಹುದು; ಅಷ್ಟರಮಟ್ಟಿಗೆ ಈ ಮರಣಭಯಕ್ಕೆ ವಿಶೇಷತೆ ಇದೆ. ಮರಣ ಎಂಬುದು ನಮಗೆ ಯಾವಾಗ ಅನುಭವಕ್ಕೆ ಬಂದಿರುವುದು? ಎಂಬುದು ಇಲ್ಲಿನ ವಿಷಯವಾಗಿದೆ.  ಯಾವುದಾದರೂ ಜೀವದಿಂದಲೋ ತೊಂದರೆಯಾದರೆ ಅಥವಾ ನಮ್ಮ ಜೀವಕ್ಕೆ ಕುತ್ತುಬರುವಂತಾದರೆ ಆಗ ನಮಗೆ ಭಯವಾಗುವುದುಂಟು. ಏಕೆಂದರೆ ಅಲ್ಲಿ ಮರಣಭೀತಿ. ನಾವು ಹಿಂದೆ ಅನುಭವಿಸಿದ್ದರೆ ಮಾತ್ರ ಅದನ್ನು ಕಂಡರೆ ಭಯವೆಂಬುದು ಬರುತ್ತದೆ. ಅದರ ಬಗ್ಗೆ ಅರಿವು ಅಷ್ಟು ಬಂದಾಗ ಮಾತ್ರ ಮರಣದ ಬಗ್ಗೆ ನಮಗೆ ಭಯವಿರುವಿರಲು ಸಾಧ್ಯ. ಹಾಗಾದರೆ ಈ ಮರಣವು ಹೇಗೆ ನಮಗೆ ಭಯವಾಗಿ ಪರಿಣಾಮ ಪರಿಣಾಮವಾಗುತ್ತದೆ?


ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಹುಟ್ಟು ಸಾವುಗಳನ್ನು ಹೇಳಲಾಗಿದೆ. ಒಂದು ಜೀವಕ್ಕೆ ಒಂದೇ ಜನನ ಒಂದೇ ಮರಣವೆಂದರ್ಥವಲ್ಲ. ಅನೇಕ ಜನನ ಮರಣಗಳನ್ನು ಅನುಭವಿಸುತ್ತದೆ. ಅವನ ಪುಣ್ಯ ಪಾಪಕರ್ಮಗಳ ಮಿಶ್ರಣದಿಂದ ಜನ್ಮ ಎಂಬುದು ಪ್ರಾಪ್ತವಾಗುತ್ತದೆ. ಕಾಲ ಪಕ್ವವಾದಂತೆ ಆ ವ್ಯಕ್ತಿ ತನ್ನ ಜೀವಿತವನ್ನು ಮುಗಿಸುವುದು ಅಂದರೆ ಮರಣವನ್ನು ಪಡೆಯುತ್ತಾನೆ. ಇಂತಹ ಮರಣಗಳು ಅನೇಕ ಸಂಭವಿಸಿರುವುದರಿಂದ ಮರಣವೆಂದರೆ ಅವನಿಗೆ ಭಯ ಎಂಬುದಾಗಿ ಹೇಳಲಾಗಿದೆ. ಯೋಗಶಾಸ್ತ್ರದಲ್ಲಿ ಇದಕ್ಕೆ 'ಅಭಿನಿವೇಶ' ಎಂಬುದಾಗಿ ಹೇಳಲಾಗಿದೆ. ಐದು ವಿಧವಾದ ಜೀವ ಅನುಭವಿಸುವ ಕ್ಲೇಶಗಳಲ್ಲಿ ಇದು ಒಂದು ಕ್ಲೇಶ ಎಂಬುದಾಗಿ ಅಲ್ಲಿ ಹೇಳಲ್ಪಟ್ಟಿದೆ. ಅಂದರೆ ಜನ್ಮಜನ್ಮಾಂತರಗಳಲ್ಲಿ ಅನುಭವಿಸಿದ ಯಾವ ಮರಣ ಅನುಭವ ಉಂಟೋ ಅದೇ ಇಂದೂ ಕೂಡ ನಮ್ಮನ್ನು ಕಾಡುತ್ತಿರುತ್ತದೆ. ಸಂಸಾರ, ಜನನ. ಮರಣ ಇವುಗಳ ಆಳವಾದ ಅರಿವನ್ನು ಪಡೆದ ವಿದ್ವಾಂಸನಿಗೂ ಈ ಭಯ ಬಿಡುವುದಿಲ್ಲವಂತೆ. ಹಾಗಾಗಿ ಬದುಕಬೇಕು; ನಮ್ಮನ್ನು ಉಳಿಸಿಕೊಳ್ಳಬೇಕು; ಮರಣದಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕು ಎಂಬ ಪ್ರಯತ್ನ ನಿರಂತರವಾಗಿ ಸಾಗುತ್ತಿರುತ್ತದೆ. ಇದರ ಜೊತೆಯಲ್ಲಿ ಇನ್ನೊಂದು ವಿಷಯ - ನಾವು ಈ ಮರಣಭಯದಿಂದ ರಕ್ಷಿಸಿಕೊಳ್ಳಬೇಕಾದರೆ ಈಶ್ವರನ ಮೊರೆ ಹೋಗುವುದು ಅತ್ಯಂತ ಸೂಕ್ತ. ಅವನ ಅಭಯವಿಲ್ಲದಿದ್ದರೆ ಭಯ ನಿಶ್ಚಿತ. ಹಾಗಾಗಿ ಅವನಿಂದಲೂ ಭಯವಿರದ ರೀತಿಯಲ್ಲಿ ಅವನ ಅಭಯವನ್ನು ಪಡೆಯುವ ರೀತಿಯಲ್ಲಿ ನಮ್ಮ ಜೀವನ ಸಾಗಬೇಕು ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 04/05/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tuesday, April 22, 2025

ಪ್ರಶ್ನೋತ್ತರ ರತ್ನಮಾಲಿಕೆ 12 (Prasnottara Ratnamalike 12)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ ೧೨. ಸಂಸಾರವಲ್ಲಿ (ಬಳ್ಳಿ) ಯಾವುದು ?

ಉತ್ತರ - ತೃಷ್ಣಾ.


ಈ ಮುಂದಿನ ಪ್ರಶ್ನೆ ಹೀಗಿದೆ - ಸಂಸಾರ ಎಂಬ ಬಳ್ಳಿ ಯಾವುದು ? ಎಂದು. ಅದಕ್ಕೆ ಉತ್ತರ ತೃಷ್ಣಾ ಅಥವಾ ಆಶೆ. ಆಶೆ ಎಂಬುದು ಸಂಸಾರವನ್ನು ಬೆಳೆಸುತ್ತದೆ ಎಂಬುದು ಈ ಪ್ರಶ್ನೋತ್ತರದ ಒಟ್ಟಾರೆ ಅಭಿಪ್ರಾಯವಾಗಿದೆ. ಸಂಸಾರವನ್ನು ಆಶೆಯು ಹೇಗೆ ಬೇಳೆಸುತ್ತದೆ? ಎಂಬುದನ್ನು ನಾವಿಲ್ಲಿ ನೋಡಬೇಕಾಗಿದೆ. ಪ್ರಶ್ನೆಯು ಬಹಳ ಜಟಿಲವಾಗಿದೆ. ಭಾಷೆಯ ದೃಷ್ಟಿಯಿಂದ ಪ್ರಶ್ನೋತ್ತರ ಬಹಳ ಸುಲಭವಾಗಿರುವಂತೆ ಕಂಡರೂ ಅರ್ಥೈಸುವಾಗ ಅದರ ಕಾಠಿನ್ಯ ಅಥವಾ ಅದನ್ನು ಅನುಭವಿಸುವಾಗ ತಿಳಿಯುತ್ತದೆ. ಇಂತಹ ಗಂಭೀರವಾದ ವಿಷಯವನ್ನು ಪ್ರಶ್ನೋತ್ತರರೂಪದಲ್ಲಿ ಚಿಂತಿಸೋಣ. 


ಸಂಸ್ಕೃತ ಭಾಷೆಯ ವಲ್ಲಿ ಎಂಬ ಪದವೇ ಕನ್ನಡದಲ್ಲಿ ಬಳ್ಳಿಯಾಗಿದೆ. ವಕಾರಕ್ಕೆ ಬಕಾರ ಬಂದಿದೆ. ಲಕಾರವು ಳಕಾರವಾಗಿದೆ ಅಷ್ಟೆ. ಬಳ್ಳಿಯು ಹಬ್ಬುವ ಸಭಾವ ಉಳ್ಳದ್ದು. ಎಲ್ಲಿಯವರೆಗೆ ಅದಕ್ಕೆ ಬೇಕಾದ ಪೋಷಕವಾದ ಅಂಶ ದೊರಕುತ್ತದೆಯೋ ಅಲ್ಲಿಯವರೆಗೆ ಅದು ಹಬ್ಬುತ್ತದೆ. ಅದು ವಲ್ಲಿಯಾದ್ದರಿಂದ ಸ್ವತಂತ್ರವಾಗಿ ಬೆಳೆಯದು ಎಂಬುದನ್ನೂ ನಾವಿಲ್ಲಿ ತಿಳಿಯಲೇ ಬೇಕು. ವಲ್ಲಿಯ ಮೂಲ ಭದ್ರವಾಗಿ ಬೇರೂರಿದ ಒಂದು ವೃಕ್ಷ. ಅದನ್ನು ಆಶ್ರಯಿಸಿ ವಲ್ಲಿಯು ತನ್ನ ವಿಸ್ತಾರವನ್ನು ಮಾಡಿಕೊಳ್ಳುತ್ತದೆ. ವಲ್ಲಿಯ ಬೆಳವಣಿಗೆಗೆ ವಸ್ತುತತಃ ಬೇರೆಯದಾದ ಪೋಷಕಾಂಶದ ಅಗತ್ಯವಿಲ್ಲ. ವೃಕ್ಷಕ್ಕೆ ಹಾಕಿದ ನೀರು ಗೊಬ್ಬರವೇ ವಲ್ಲಿಗೂ ಸಾಕಾಗುತ್ತದೆ. ಕೆಲವೊಮ್ಮೆ ವಲ್ಲಿಯು ತಾನು ಆಶ್ರಯಿಸಿದ ಮರವನ್ನು ಬೆಳೆಯಲು ಕೊಡುವುದಿಲ್ಲ. ಮರಕ್ಕೆ ಹಾಕಿದ ಗೊಬ್ಬರವನ್ನೆಲ್ಲಾ ತಾನೇ ಹೀರುತ್ತದೆ. 


ಇಲ್ಲಿ ಬಹಳ ಅದ್ಭುತವಾದ ರೂಪಕ ಅಲಂಕಾರವಿದೆ. ಎರಡು ವಸ್ತುಗಳಿಗೆ ಅಭೇದವನ್ನು ಹೇಳುವಾಗ ರೂಪಕಾಲಂಕಾರವನ್ನು ಬಳಸಲಾಗುತ್ತದೆ.  ಇಲ್ಲಿ ವೃಕ್ಷವೆಂದರೆ ಸಮಸ್ತ ಪ್ರಪಂಚಕ್ಕೂ ಆಧಾರಭೂತವಾದ ಪರಬ್ರಹ್ಮ. ಅದನ್ನು ಆಶ್ರಯಿಸಿಕೊಂಡಿರುವುದು ಈ ಸಂಸಾರವೆಂಬ ವಲ್ಲಿ. ಹೇಗೆ ನೀರು ಗೊಬ್ಬರಗಳು ವೃಕ್ಷವನ್ನು ಮತ್ತು ವಲ್ಲಿಯನ್ನೂ ಬೆಳೆಸುತ್ತದೆಯೋ ಅಂತೆಯೇ ಆಶೆಯು ಪರಬ್ರಹ್ಮವನ್ನು ಮತ್ತು ಸಂಸಾರವನ್ನು ಎರಡನ್ನೂ ಬೆಳೆಸುತ್ತದೆ. ಆಶಾ ಎಂಬುದಕ್ಕೆ ಕಾಮ ಎಂದು ಇನ್ನೊಂದು ಪದದಿಂದ ಹೇಳುವ ರೂಢಿಯಿದೆ. ವಲ್ಲಿಯು ವೃಕ್ಷವನ್ನು ಆಶ್ರಯಿಸಿಕೊಂಡು ಬೆಳೆದರೆ ಒಳ್ಳೆಯದು. ತಾನು ಮಾತ್ರ ಬೆಳೆದು ವೃಕ್ಷವನ್ನೇ ಸಾಯಿಸುವಂತಾಗಬಾರದಷ್ಟೆ. ಅಂತೆಯೇ ಕಾಮವು ಸಂಸಾರವನ್ನು ಬೆಳೆಸುವುದರ ಜೊತೆ ಜೊತೆ ಸಂಸಾರ ಮೂಲವಾದ ಪರಬ್ರಹ್ಮವನ್ನು ಮೆರೆಸುವಂತೆ ಇರಬೇಕು; ಮರೆಸುವಂತಲ್ಲ. ಬಳ್ಳಿಯು ಮಿತಿಮೀರಿ ಬೆಳೆದರೆ ವೃಕ್ಷವೇ ಕಾಣದಂತಾಗುವ ಸಂದರ್ಭವಿರುತ್ತದೆ. ಅಂತೆಯೇ ಕಾಮವು ಅಧಿಕವಾಗಿ ಸಂಸಾರ ಮಾತ್ರ ಬೆಳೆಯುತ್ತದೆ. ಈ ಸಂಸಾರಕ್ಕೆ ಯಾವುದು ಆರಂಭವೋ ಅದೇ ಅಂತ್ಯವೂ ಹೌದು. ಪರಬ್ರಹ್ಮವೇ ಈ ಸಂಸಾರಕ್ಕೆ ಆರಂಭ, ಅದೇ ಅಂತ್ಯವೂ ಆಗಿದೆ.  ಶ್ರೀರಂಗ ಮಹಾಗುರುಗಳು ಹೇಳಿದ ಕಾಮದ ವಿವರಣೆ ಈ ವಿಷಯಕ್ಕೆ ಹೆಚ್ಚು ಸೂಕ್ತವಾಗಿದೆ - "ಅರ್ಥ-ಕಾಮಗಳು ತುಂಟಹಸುವಿನಂತೆ: ಹಾಲು ಕರೆಯಲು ಹೋದರೆ, ಕೊಂಬಿನಿಂದ ತಿವಿಯುವುವು, ಕಾಲಿನಿಂದ ಒದೆಯುವುವು. ಅಂತಹ ಹಸುಗಳನ್ನು ಹಿಂದೊಂದು ಮುಂದೊಂದು ಕಂಬಗಳಿಗೆ ಕಟ್ಟಿಹಾಕಿ ಹಾಲು ಕರೆಯಬೇಕು: ಧರ್ಮ-ಮೋಕ್ಷಗಳೆಂಬ ಎರಡು ಕಂಬಗಳಿಗೆ ಕಟ್ಟಿಹಾಕಿದಾಗ ಅಮೃತದ ಧಾರೆಯನ್ನೇ ಅವು ಕರೆಯಬಲ್ಲವು!" ಎಂದು. ಅಂತೆಯೇ ಆಶೆಯು ಸಂಸಾರವನ್ನು ಬೆಳೆಸಿ ಸಂಸಾರಮೂಲವಾದ ಪರಂಜ್ಯೋತಿಯನ್ನು ದರ್ಶನಮಾಡಿಸುವಂತಿರಬೇಕೆಂಬುದೇ ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 20/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, April 14, 2025

ಪ್ರಶ್ನೋತ್ತರ ರತ್ನಮಾಲಿಕೆ 11 (Prasnottara Ratnamalike 11)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೧೧. ಕಳ್ಳರು ಯಾರು ?

ಉತ್ತರ - ವಿಷಯಗಳು.


ಈ ಮುಂದಿನ ಪ್ರಶ್ನೆ ಕಳ್ಳರು ಯಾರು? ಎಂಬುದಾಗಿ. ಅದಕ್ಕೆ ಉತ್ತರ ವಿಷಯ. ಕಳ್ಳರು ವಸ್ತುವನ್ನು ಕದಿಯುವವರು. ಪ್ರತಿಯೊಂದು ವಸ್ತುವಿಗೂ ಒಂದು ಸ್ವಾಮೀ ಅಂದರೆ ಆ ವಸ್ತುವಿಗೆ ಆ ವ್ಯಕ್ತಿಯ ಅಧಿಕಾರ ಎಂಬುದು ಇರುತ್ತದೆ. ಆ ವಸ್ತುವಿನ ಸ್ವಾಮಿಯ ಅನುಮತಿ ಪಡೆದು ಆ ವಸ್ತುವನ್ನು ಸ್ವೀಕರಿಸುವುದು ಸರಿಯಾದ ಕ್ರಮ. ಆದರೆ ವಸ್ತುವಿನ ಸ್ವಾಮಿಯ ಅನುಮತಿಯನ್ನು ಪಡೆಯದೆ ಆ ವಸ್ತುವನ್ನು ಬಳಸಿದರೆ ಅದನ್ನು ಕಳ್ಳತನ ಅಥವಾ ಚೌರ್ಯ ಎಂಬುದಾಗಿ ಕರೆಯಲಾಗುತ್ತದೆ. ಆ ವಸ್ತುವು ಆತನ ಭೋಗದ ವಿಷಯವಾಗಿರುತ್ತದೆ. ಅದನ್ನು ಅನುಭವಿಸಲು ಆತನಿಗೆ ಮಾತ್ರ ಅವಕಾಶವಿರುತ್ತದೆ. ಅವನನ್ನು ಬಿಟ್ಟು ಉಳಿದವರು ಆ ವಸ್ತುವನ್ನು ಬಳಸಬೇಕಾದರೆ ಆ ಪದಾರ್ಥದ ಸ್ವಾಮಿಯ ಅನುಜ್ಞೆ ಅತ್ಯಂತ ಅವಶ್ಯ. ಪ್ರಸ್ತುತ ಪ್ರಶ್ನೆಯಲ್ಲಿ ವಿಷಯಗಳು ಆ ಚೋರರು ಎಂಬುದಾಗಿ ಹೇಳಲಾಗಿದೆ. ಅಂದರೆ ಈ ವಿಷಯಗಳು ಯಾವ ರೀತಿಯಾಗಿ ಸ್ವಾಮಿಯ ಅನುಮತಿ ಇಲ್ಲದೆ ಆ ವಸ್ತುವನ್ನು ಕದಿಯುವರು ಎಂಬುದು ಇಲ್ಲಿ ವಿವೇಚಿಸಬೇಕಾದ ವಿಷಯ.


ವಿಷಯ ಎಂದರೆ ವಿಷಿಣೋತಿ- ಬಧ್ನಾತಿ ಯಾವುದು ನಮ್ಮನ್ನು ಕಟ್ಟಿ ಹಾಕುತ್ತದೆಯೋ ಅದಕ್ಕೆ 'ವಿಷಯ' ಎಂಬುದಾಗಿ ಕರೆಯಲಾಗಿದೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಈ ಐದು ವಿಷಯಗಳಾಗಿವೆ. ರೂಪವು ಕಣ್ಣನ್ನು, ಗ್ರಂಧವು ಮೂಗನ್ನು, ರಸವು ನಾಲಿಗೆಯನ್ನು, ಸ್ಪರ್ಶವು ಚರ್ಮವನ್ನು, ಶಬ್ದವು ಕಿವಿಯನ್ನು ಬಂಧಿಸುತ್ತದೆ. ಅಂದರೆ ಈ ಕಣ್ಣಿನ ಎದುರುಗಡೆ ಯಾವುದಾದರೂ ಒಂದು ವಸ್ತು ಇದೆ ಅಂತಾದರೆ ಕಣ್ಣು ಆ ವಸ್ತುವಿನಿಂದ ಆಚೆಗೆ ಹೋಗದೆ ಇರುವಂತೆ ತಡೆಯುತ್ತದೆ. ಅದಕ್ಕೆ ಕಾರಣ ಎದುರುಗಡೆ ಇರುವಂತಹ ಆ ವಸ್ತುವಿನ ರೂಪ. ಅದು ನಮ್ಮ ಕಣ್ಣನ್ನು ಬಂಧಿಸುತ್ತದೆ ಎಂಬುದಾಗಿ ಹೇಳಬಹುದು. ಆತ್ಮವು ಅಥವಾ ಜೀವವು ಈ ಇಂದ್ರಿಯಗಳನ್ನು ಬಳಸಿಕೊಂಡು ಶಬ್ದಸ್ಪರ್ಶಾದಿ ವಿಷಯಗಳನ್ನು ಅನುಭವಿಸಬೇಕು. ಈ ಇಂದ್ರಿಯಗಳು ಆತ್ಮದ ಅಪ್ಪಣೆಯನ್ನು ಪಡೆದು ವಿಷಯವನ್ನು ಅನುಭವಿಸಬೇಕಾಗುತ್ತದೆ. ಇವೆಲ್ಲವೂ  ಜೀವದ ಅಧಿಕಾರದಲ್ಲಿಯೇ ಇರಬೇಕಾದದ್ದು ಸಹಜವಾದದ್ದು. ಆದರೆ ಈ ವಿಷಯಗಳು ಜೀವದ ಅಂದರೆ ಸ್ವಾಮಿಯ ಅನುಮತಿ ಇಲ್ಲದೆ ಅವು ಬೇರೆ ಬೇರೆ ವಸ್ತುವನ್ನು - ವಿಷಯವನ್ನು ಇಷ್ಟಪಡುವಂತಾಗುತ್ತದೆ. ಹಾಗಾಗಿ ಅವು ನಮ್ಮ ಜೀವದ ಅರಿವನ್ನು ಅದರ ವಿಷಯವನ್ನು ಅನುಭವಿಸದೆ ಇರುವಂತೆ ಮಾಡುತ್ತದೆ. ಯಾವಾಗ? ಎಷ್ಟು ವಿಷಯವನ್ನು ಅನುಭವಿಸಬೇಕು? ಎಂಬ ನಿಯಂತ್ರಣ ಈ ಇಂದ್ರಿಯಗಳಿಗೆ ಇರುವುದಿಲ್ಲ. ಈ ಇಂದ್ರಿಯಗಳನ್ನು ಆತ್ಮದ ಅರಿವಿಲ್ಲದಂತೆ ರೂಪಾದಿ ವಿಷಯಗಳು ಇಂದ್ರಿಯಗಳ ದಿಕ್ಕನ್ನೇ ಬದಲಿಸುತ್ತದೆ. ವಿಷಯಗಳ ದಾಸರಂತೆ ವರ್ತಿಸುತ್ತವೆ. ಆಗ ಶರೀರವು ಅನಾರೋಗ್ಯಪೀಡಿವಾಗುತ್ತದೆ. ಅಷ್ಟೇ ಅಲ್ಲ ಮನಸ್ಸು ಕೂಡ ನೆಮ್ಮದಿಯನ್ನು ಕಳೆದುಕೊಳ್ಳುದೆ. ಇದೆಲ್ಲದಕ್ಕೂ ಕಾರಣ ರೂಪಾದಿ ವಿಷಯಗಳು ಆತ್ಮದ ಅನುವಭವಕ್ಕೆ ಕಾರಣವಾಗದೆ ಆತ್ಮವನ್ನು ಮರೆಸಿ ಇಂದ್ರಿಯಾರಾಮರಾಗುವಂತೆ ಮಾಡುತ್ತವೆ. ಆದ್ದರಿಂದ ಈ ವಿಷಯಗಳನ್ನು ಕಳ್ಳರು, ಚೋರರು ಎಂಬುದಾಗಿ ಅಧ್ಯಾತ್ಮದ ಭಾಷೆಯಲ್ಲಿ ಹೇಳುವ ಅಭ್ಯಾಸ ಬಂದಿದೆ. 


ಸೂಚನೆ : 13/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, April 7, 2025

ಪ್ರಶ್ನೋತ್ತರ ರತ್ನಮಾಲಿಕೆ 10 (Prasnottara Ratnamalike 10)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೧೦. ಮದಿರದಂತೆ ಮೋಹಜನಕ ಯಾವುದು ?

ಉತ್ತರ - ಶರೀರ, ಸ್ತ್ರೀ, ಪುತ್ರ, ಧನ ಈ ವಿಷಯಗಳಲ್ಲಿ ಮೋಹ.


ಮದಿರಾ ಎಂಬುದು ಒಂದು ಬಗೆಯ ಮಾದಕದ್ರವ್ಯ. ಅದನ್ನು ಸ್ವೀಕರಿಸಿದವನು ತನ್ನ ಮನಸ್ಸಿನ ಸ್ತಿಮಿತತೆಯನ್ನು ಕಳೆದುಕೊಳ್ಳುತ್ತಾನೆ. ಅವನು ಹೇಗೆ ನಡೆಯಬೇಕಿತ್ತೋ ಹಾಗೆ ನಡೆಯಲಾಗದು; ಹೇಗೆ ಯೋಚಿಸಬೇಕೋ ಹಾಗೆ ಯೋಚಿಸಲಾಗದು; ಹೇಗೆ ಮಾತನಾಡಬೇಕೋ ಹಾಗೆ ಮಾತನಾಡಲಾಗದು. ಇವೆಲ್ಲವೂ ವ್ಯತ್ಯಾಸವಾಗುವುದು. ಅಂದರೆ ಅವನ ನಡವಳಿಕೆಯಲ್ಲಿ ಮದಿರೆಯೆಂಬುದು ತೊಂದರೆಯನ್ನು ಉಂಟುಮಾಡುತ್ತದೆ. ಹಾಗೆಯೇ ಇಲ್ಲೂ ಕೂಡ ಅಂಥದ್ದೇ ಮೋಹಜನಕವಾದುದು ಯಾವುದು? ಎಂಬ ಪ್ರಶ್ನೆ ಬಂದಿದೆ. ಅದಕ್ಕೆ ಉತ್ತರವಾಗಿ ಶರೀರ, ಸ್ತ್ರೀ, ಪುತ್ರ, ಧನ ಈ ವಿಷಯಗಳಲ್ಲಿ ಇರುವ ಮೋಹವವೇ ಅಂತಹ ಮದಿರೆ ಎಂಬುದಾಗಿ ಕರೆಯಬೇಕು ಎಂಬ ಉತ್ತರ ಇಲ್ಲಿದೆ. ಅಂದರೆ ಶರೀರ ಸ್ತ್ರೀ ಮೊದಲಾದವುಗಳು ನಮ್ಮ ಸ್ತಿಮಿತತೆಯನ್ನು ಅಥವಾ ನಮ್ಮ ಅಸ್ತಿತ್ವವನ್ನು ಕಳೆಯುವಂತವುಗಳು ಎಂಬುದು ಇದರ ಅರ್ಥ. 

 

ನಮಗೆ ಒಂದು ಸಂದೇಹ ಬರುತ್ತದೆ ಇವು ಮೋಹವನ್ನು ಅಂದರೆ ನಮ್ಮ ಅಸ್ತಿತ್ವವನ್ನು ಕಳೆಯುವಂತಹ ವಿಷಯಗಳಾದರೆ ಇವು ಬೇಡವೇ? ಎಂದರೆ ಹಾಗಲ್ಲ. ಇವುಗಳು ಇಲ್ಲದಿದ್ದರೆ ಯಾವುದೂ ಕೂಡ ನಡೆಯುವುದಿಲ್ಲ. ಶರೀರವಿಲ್ಲದಿದ್ದರೆ ನಾವು ಯಾವ ಕಾರ್ಯವನ್ನು ಕೂಡ ಮಾಡಲಾರೆವು. ಸ್ತ್ರೀ ಇಲ್ಲದಿದ್ದರೆ ಈ ಸಂಸಾರ ಅಥವಾ ವಂಶವೇ ಮುಂದುವರೆಯಲಾರದು. ಪುತ್ರ ಸಂತತಿ ಇಲ್ಲದಿದ್ದರೆ ಅದು ಕೂಡ ಅಷ್ಟೇ. ಇವೆಲ್ಲದಕ್ಕೂ ಕಳಶಪ್ರಾಯದಂತೆ ಇರುವಂತದ್ದು ಧನ. ಅಂದರೆ ನಮ್ಮ ಬಾಹ್ಯವ್ಯವಹಾರ ಸಂಗತವಾಗಿ ನಡೆಯಬೇಕಾದರೆ ಧನ ಬೇಕಷ್ಟೇ. ಹಾಗಾಗಿ ಇವುಗಳು ಇಲ್ಲದಿದ್ದರೆ ನಮ್ಮ ಬದುಕು ಅಸಾಧ್ಯ ಎಂಬುದೇ ವಿಷಯ. ಆದರೆ ಇಲ್ಲಿ ಹೇಳುವ ವಿಷಯ ಯಾವುದು? ಇವುಗಳು ಹೇಗೆ ಮೋಹಕ? 

 

ಶರೀರ ಮೊದಲಾದ ವಿಷಯಗಳು ನಮಗೆ ಬೇಡವೆಂಬ ಅರ್ಥವಲ್ಲ. ಅವುಗಳನ್ನು ಯಾವಾಗ? ಹೇಗೆ? ಎಷ್ಟು ಬಳಸಿಕೊಳ್ಳಬೇಕು? ಎಂಬ ಬಗ್ಗೆ ನಮಗೆ ಒಂದು ಬಗೆಯ ನಿಗಾ ಇರಬೇಕು ಎಂಬುದು ಇದರ ತಾತ್ಪರ್ಯ. ಅದಕ್ಕಾಗಿಯೇ ಶರೀರವನ್ನು ಅಷ್ಟಾಗಿ ಮೋಹಿಸಬಾರದು ಎಂಬುದಾಗಿ ಶ್ರೀಶಂಕರ ಭಗವತ್ಪಾದರು ಮೋಹಮದ್ಗರ ಸ್ತೋತ್ರದಲ್ಲಿ ಹೇಳುತ್ತಾರೆ ಮತ್ತು ದಾರೇಷಣ, ವಿತ್ತೇಷಣ, ಪುತ್ರೇಷಣ ಎಂಬುದಾಗಿ ಈಷಣಾತ್ರಯ ತ್ಯಾಗವೇ ಮುಕ್ತಿಗೆ ಸಾಧನ ಎಂಬುದಾಗಿ ಬಹಳ ವಿವರವಾಗಿ ಈ ಬಗ್ಗೆ ಉಪನಿಷತ್ತುಗಳಲ್ಲಿ ಕಾಣಬಹುದು. ಅಂದರೆ ಇವೆಲ್ಲವೂ ನಮ್ಮ ಮುಕ್ತಿಗೆ ಬಾಧಕಗಳಾಗಬಹುದು ಎಂಬುದು ಅರ್ಥ. ಇಲ್ಲಿ ಸ್ತ್ರೀ ಪುರುಷ ಎಂಬ ಸಂಕೇತದ ವಿಷಯವಲ್ಲ. ಈ ಪ್ರಪಂಚಕ್ಕೆ ಬಂದಂತಹ ಪ್ರತಿಯೊಬ್ಬರೂ ಕೂಡ ಸ್ತ್ರೀಯೇ ಆಗಿರುತ್ತಾನೆ. ಅಲ್ಲಿ ಭಾವಿಸಬೇಕಾದುದೇ ಪುರುಷ. ಹಾಗಾಗಿ ಈ ಪ್ರಪಂಚಕ್ಕೆ ಬಂದವನು ಈ ಶರೀರವೆಂಬ ಪ್ರಕೃತಿಯನ್ನು ಮತ್ತು ಅದರ ವಿಕಾಸ ರೂಪವಾಗಿರುವಂತ ಸಂಸಾರವನ್ನು ಮತ್ತು ಅದಕ್ಕೆ ಬೇಕಾದಂತಹ ಧನ-ಸಂಪತ್ತು ಮೊದಲಾದವುಗಳನ್ನು ಎಷ್ಟಕ್ಕೆ ಬೇಕೋ ಅಷ್ಟರಮಟ್ಟಿಗೆ ಅದನ್ನು ಬಳಸಿಕೊಂಡರೆ ಅವನು ತನ್ನ ಗುರಿಯನ್ನು ಬಹಳ ಸುಲಭವಾಗಿ ಮುಟ್ಟಬಲ್ಲ. ಅದಿಲ್ಲದಿದ್ದರೆ ಅವನಿಗೆ ಗುರಿಯು ಬಹಳ ಕಷ್ಟವಾದೀತು ಎಂಬ ಒಂದು ಸಂದೇಶವನ್ನು ಈ ಪ್ರಶ್ನೋತ್ತರದಲ್ಲಿ ಕೊಟ್ಟಂತೆ ಕಂಡುಬರುತ್ತದೆ. 


ಸೂಚನೆ : 6/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ರಾಮನಾಮ ಮಂತ್ರದ ಮಹಿಮೆ ( Ramanama Mantrada Mahime)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಚೈತ್ರಮಾಸದ ಶುಕ್ಲಪಕ್ಷದ ನವಮಿತಿಥಿಯು ಸನಾತನ ಭಾರತೀಯ ಎಲ್ಲಾ ಆಸ್ತಿಕರಿಗೂ ಅತ್ಯಂತ ಹೆಮ್ಮೆಯ ಮತ್ತು ತೃಪ್ತಿದಾಯಕವಾದ ದಿನ. ಏಕೆಂದರೆ ಅದು ಮರ್ಯಾದಾ ಪುರುಷೋತ್ತಮನಾಗಿ, ದಶರಥನ ನಂದನನಾಗಿ, 'ಶ್ರೀರಾಮಚಂದ್ರ' ಎಂಬ ಪದಭೂಷಿತನಾಗಿ ಭಗವಂತ ಧರೆಗೆ ಅವತರಿಸಿದ ಪಾವನಪರ್ವ. ಈ ದಿನ 'ರಾಮನವಮೀ' ಎಂಬುದಾಗಿ ಅತ್ಯಂತ ಶ್ರದ್ಧೆ ಭಕ್ತಿಯಿಂದ ಆ ದಿನ ರಾಮನನ್ನು ಪೂಜಿಸುತ್ತೇವೆ, ಆರಾಧಿಸುತ್ತೇವೆ, ವಿವಿಧ ಬಗೆಯಲ್ಲಿ ಅವನನ್ನು ಸ್ತುತಿಮಾಡಿ ಸಂತೋಷಪಡುತ್ತೇವೆ. ಈ ದಿನದಲ್ಲಿ ಅನೇಕ ಮಂತ್ರಗಳ ಪುರಶ್ಚರಣೆ ಇರುತ್ತದೆ; ಅನೇಕ ಬಗೆಯ ಪುಷ್ಪಾಲಂಕಾರಗಳಿರುತ್ತವೆ; ಅನೇಕ ಬಗೆಯ ನೈವೇದ್ಯಗಳು ಸಲ್ಲುತ್ತವೆ. ಹೀಗೆ ರಾಮನನ್ನು ಯಾವೆಲ್ಲ ವಿಧಾನಗಳಿಂದ ತೃಪ್ತಿಪಡಿಸಬಹುದೋ, ಆ ಎಲ್ಲ ವಿಧಾನಗಳನ್ನು ಈ ದಿನ ಬಳಸುತ್ತೇವೆ. ಅದರಿಂದ ನಾವು ತೃಪ್ತಿಪಡುತ್ತೇವೆ ಮತ್ತು ಧನ್ಯರಾಗುತ್ತೇವೆ. ಇಂತಹ ಶ್ರೇಷ್ಠವಾದ ದಿನವೇ ಶ್ರೀರಾಮನವಮಿ. ಈ ದಿನ ನಾವು ಅತ್ಯಂತ ಮುಖ್ಯವಾಗಿ ನೆನಪಿಸಿಕೊಳ್ಳಬೇಕಾದ ವಿಷಯವೆಂದರೆ ರಾಮಮಂತ್ರದ ಮಹಿಮೆ. ರಾಮನ ಹೆಸರೇ ಅತ್ಯಂತ ಪವಿತ್ರವಾದದ್ದು. ಅನೇಕ ಪಾಪಗಳನ್ನು ನಾಶಮಾಡುವಂತಹದ್ದು. ರಾ ಮತ್ತು ಮ ಎಂಬ ಎರಡು ಅಕ್ಷರಗಳಿಂದ ಕೂಡಿದ್ದ ಈ ಪದ ಅತ್ಯಂತ ಮಹತ್ವಪೂರ್ಣವಾದು ಏಕೆ? ಎಂಬುದನ್ನು ಸ್ವಲ್ಪ ವಿವರಿಸುವ ಪ್ರಯತ್ನವಿದಾಗಿದೆ.

ಮಂತ್ರ
'ಮನನಾತ್ ತ್ರಾಣನಾತ್ ಮಂತ್ರಃ ಸರ್ವವಾಚಸ್ಯ ವಾಚಕಃ' ಎಂಬುದು ಉಪನಿಷತ್ತಿನ ಮಾತು. ಅಂದರೆ ಮನನಮಾಡಲು ಯೋಗ್ಯವಾದುದು ಮತ್ತು ನಮ್ಮನ್ನು ರಕ್ಷಣೆ ಮಾಡಲು ಸಮರ್ಥವಾದುದು. ಆ ಕಾರಣದಿಂದ ಅದನ್ನು 'ಮಂತ್ರ' ಎಂಬುದಾಗಿ ಕರೆಯುತ್ತಾರೆ. ಮಂತ್ರಗಳೆಲ್ಲವೂ ವಿಶೇಷ ಅರ್ಥವನ್ನು ಕೊಡುವ, ಋಷಿಗಳ ಉಗ್ರ ತಪಸ್ಸಿನ ಫಲವಾಗಿ ಅಂತರಂಗದಲ್ಲಿ ಗೋಚರವಾದ ದಿವ್ಯವಾದ ಶಕ್ತಿಯನ್ನು ಹೊಂದಿರುವ ಅಕ್ಷರಪುಂಜ. ಅವುಗಳಿಗೆ ಉಚ್ಚಾರಣ ಮಾತ್ರದಿಂದಲೇ ಫಲವನ್ನು ಕೊಡುವ ಶಕ್ತಿಯಿದೆ. ಶ್ರದ್ಧಾಪೂರ್ವಕವಾಗಿ ಆ ಮಂತ್ರ ಯಾರನ್ನು ಉದ್ದೇಶವಾಗಿಟ್ಟುಕೊಂಡು ಬಂದಿದೆಯೋ ಆ ದೇವತೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ಬಳಸುವುದುಂಟು. ಯಾವ ಋಷಿಗಳು ತಮ್ಮ ಅಂತರಂಗದಲ್ಲಿ ರಮಿಸುತ್ತಿರುವ ಯಾವ ಚೈತನ್ಯಶಕ್ತಿಯನ್ನು ಕಂಡು 'ರಾಮ' ಎಂಬುದಾಗಿ ಉದ್ಗಸಿದರೋ, ಅಂತಹ ಶಬ್ದವಿಶೇಷವೇ 'ರಾಮ' ಎಂಬ ಮಂತ್ರವಾಗಿದೆ. ಇದು ಎಂತವರನ್ನು ಉದ್ಧಾರ ಮಾಡಬಲ್ಲ ಮಂತ್ರವಾಗಿದೆ. ಅಷ್ಟೇ ಏಕೆ! ಒಂದು ಮಾತಿದೆ - ಇದನ್ನು ತಿರುಗುಮುರಗಾಗಿ ಹೇಳಿದರೂ ಉದ್ಧಾರಮಾಡುವ ಸಾಮರ್ಥ್ಯವಿದೆ ಎಂಬುದಾಗಿ. ಇದಕ್ಕೆ ಒಂದು ಜಾನಪದ ಕಥೆಯು ಕೂಡ ಇದೆ. ವಾಲ್ಮೀಕಿ ಬೇಡನಾಗಿದ್ದ. ಅವನಿಗೆ ಸರಿಯಾಗಿ ರಾಮ ಎಂದು ಉಚ್ಚರಿಸಲು ಕೂಡ ಗೊತ್ತಿರಲಿಲ್ಲ ಮತ್ತು ಸಾಧ್ಯವಾಗುತ್ತಿರಲಿಲ್ಲ. ನಾರದ ಮಹರ್ಷಿಗಳು ಬಂದು ಅವನಿಗೆ ರಾಮಮಂತ್ರವನ್ನು ಉಪದೇಶಿಸಿದರು. ಆದರೆ ಅದನ್ನು ಹಾಗೆಯೇ ಉಚ್ಚರಿಸಲಾಗದಾಗ 'ಮರ ಮರ' ಎಂಬುದಾಗಿ ಉಚ್ಚರಿಸುವಂತೆ ಹೇಳಿದರು; 'ಮರ ಮರ' ಎಂದು ಉಚ್ಚರಿಸಿದ ವಾಲ್ಮೀಕಿ. ಅದು ಕೊನೆಯಲ್ಲಿ 'ರಾಮ ರಾಮ' ಎಂದಾಯುತು ಎಂದು. ಆದ್ದರಿಂದ ಇಂತಹ ವಿಶೇಷ ಅರ್ಥವನ್ನು ಕೊಡುವಂತಹ ರಾಮಮಂತ್ರ ಎಂಥವರನ್ನೂ ಉದ್ಧರಣ ಮಾಡಬಲ್ಲದು; ಹಾಗಾಗಿ ಈ ರಾಮಮಂತ್ರಕ್ಕೆ ಅಷ್ಟು ವಿಶೇಷ. 

ರಾಮಮಂತ್ರ
ರಾಮಮಂತ್ರಗಳು ಬಹಳ ಇವೆ.'ರಾ' ಎಂದರೆ ವಿಶ್ವ, ಮ ಎಂದರೆ ಈಶ್ವರ. ಅಂತಹ ವಿಶ್ವೇಶ್ವರನೇ ರಾಮ ಎಂದೂ, ರಮಾ ಎಂಬುವಳಿಂದ ರಮಿಸಲ್ಪಡುವವನು ರಾಮ ಎಂದೂ, ರ ಎಂದರೆ ಲಕ್ಷ್ಮೀ, ಮ ಎಂದರೆ ಈಶ್ವರ. ಅಂತಹ ಲಕ್ಷ್ಮೀಪತಿಯೇ ರಾಮ. ಬ್ರಹ್ಮಾದಿ ದೇವತೆಗಳನ್ನು ಸೂಚಿಸುವ ಶಬ್ದ ಎಂಬುದಾಗಿ ಉಪನಿಷತ್ತು ಸಾರುತ್ತದೆ. 'ಬ್ರಹ್ಮಾದಿ ದೇವತಾನಾಂ ವಾಚಕೋ ಮಂತ್ರಃ' - ಅಂದರೆ ಈ ರಾಮ ಎಂಬ ಮಂತ್ರವು. ರಾಮದೇವತೆಯನ್ನೂ ಸೂಚಿಸುವ ಶಬ್ದವಾಗಿದೆ. ಆದ್ದರಿಂದ ರಾಮ ಮಂತ್ರವನ್ನು ಜಪಿಸಿದವನು ರಾಮಭಾವವನ್ನು ಪಡೆಯುತ್ತಾನೆ. ಈ ಮಂತ್ರದಿಂದ ರಾಮನನ್ನು ಚಿಂತಿಸುತ್ತಾ ಚಿಂತಿಸುತ್ತಾ ಹೋದರೆ ಕೊನೆಗೆ ಅವನು ರಾಮನೇ ಆಗುತ್ತಾನೆ. 'ಓಂ ರಾಮಾಯ ನಮಃ, ಓಂ ರಾಮಚಂದ್ರಾಯ ನಮಃ, ಓಂ ರಾಮಭದ್ರಾಯ ನಮಃ, ಶ್ರೀರಾಮ ಜಯ ರಾಮ ಜಯ ಜಯ ರಾಮ' ಇತ್ಯಾದಿ ಮಂತ್ರಗಳಲ್ಲಿ ರಾಮ ಎಂಬ ಶಬ್ದವೇ ಇದೆ. ರಾಮ ಎಂಬ ಶಬ್ದದ ಮಹಿಮೆಯನ್ನು ಹೇಳಲೆಂದೇ ರಾಮತಾಪಿನೀ ಉಪನಿಷತ್ತು ಎಂಬ ಪ್ರಸಿದ್ಧವಾದ ಉಪನಿಷತ್ ಇದೆ. ಇಲ್ಲಿ ಅದರ ಬಗ್ಗೆ ವಿಶೇಷವಾದ ವಿವರಣೆಯು ಸಿಗುತ್ತದೆ. 
ಶ್ರೀರಾಮನು ದಶರಥ ಪುತ್ರರಾದ ಲಕ್ಷ್ಮಣ, ಭರತ, ಶತ್ರುಘ್ನ ಎಂಬುದಾಗಿ ಮೂವರು ತಮ್ಮಂದಿರನ್ನು ಹೊಂದಿದ್ದಾನೆ. ಇವರೆಲ್ಲರೂ ಕೂಡ ದೇವತಾಂಶ ಸಂಭೂತರೇ ಆಗಿದ್ದಾರೆ. ಅದಕ್ಕೆ ಓಂ ಎಂಬ ಅಕ್ಷರದಲ್ಲಿ ನಾಲ್ಕು ಭಾಗಗಳಿವೆ; ಅಕಾರಕ್ಕೆ ಶತ್ರುಘ್ನ, ಉಕಾರಕ್ಕೆ ಭರತ, ಮಕಾರಕ್ಕೆ ಲಕ್ಷ್ಮಣ  ಅರ್ಧಮಾತ್ರಾಕ್ಕೆ ಸ್ವತಃ ಶ್ರೀರಾಮನೇ ಅರ್ಥ ಎಂದು ಆ ನಾಲ್ಕು ಅಕ್ಷರಗಳಿಗೂ ಒಂದೊಂದು ಅರ್ಥವಿದೆ ಎಂದು ಉಪನಿಷತ್ತು ಸಾರುತ್ತದೆ. 

ರಾಮಶಬ್ದದ ಅರ್ಥವಿಸ್ತಾರ
ರಾ ಎಂದರೆ ರಾತಿ, ವಿತರತಿ, ಅವರವರ ಕರ್ಮಾನುಸಾರ ಯಾರು ಫಲವನ್ನು ಕೊಡುತ್ತಾನೋ ಅವನಿಗೆ 'ರಾಮ' ಎಂಬುದಾಗಿ ಕರೆಯುತ್ತಾರೆ. ರಾವಣಾದಿ ರಾಕ್ಷಸರು ಯಾರಿಂದ ಮರಣ ಹೊಂದಿದ್ದಾರೋ ಅವನನ್ನು 'ರಾಮ' ಎಂಬುದಾಗಿ ಕರೆಯುತ್ತಾರೆ. ಹೇಗೆ ರಾಹು ಬಂದಾಗ ಸೂರ್ಯನಿಗೂ ಚಂದ್ರನಿಗೂ ಒಂದು ಗ್ರಹಣ ಏರ್ಪಟ್ಟು ಅವರು ಕಲಾಹೀನರಾಗುತ್ತಾರೋ, ಹಾಗೆ ರಾಮನು ಮನುಷ್ಯರೂಪದಲ್ಲಿ ಬಂದು ರಾವಣಾದಿ ರಾಕ್ಷಸರನ್ನು ತೇಜೋಹಿನರನ್ನಾಗಿ ಮಾಡುತ್ತಾನೆ. ಆದ್ದರಿಂದ ಆತ 'ರಾಮ'. 'ರಮತೇ, ಶೋಭತೇ' - ಜ್ಞಾನ ವೈರಾಗ್ಯ ಐಶ್ವರ್ಯಗಳಿಂದ ಯಾರು ಸಂಪನ್ನನಾಗಿದ್ದಾನೋ ಅಂತವನನ್ನು ರಾಮ ಎಂಬುದಾಗಿ ಕರೆಯಬೇಕು ಎಂಬಿತ್ಯಾದಿ ವಿವರಣೆಗಳು ಕೂಡ ಈ ರಾಮ ಶಬ್ದಕ್ಕೆ ಕಂಡುಬರುತ್ತವೆ.
ಶ್ರೀರಂಗ ಮಹಾಗುರುಗಳು ರಾಮನ ಬಗ್ಗೆ ಒಂದು ವಿವರಣೆಯನ್ನು ನೀಡಿದ್ದನ್ನು ನಾವಿಲ್ಲಿ ಸಂದರ್ಭಕ್ಕೆ ಉಚಿತವಾಗಿ ನೆನಪಿಸಿಕೊಳ್ಳಬಹುದು. "'ರಾಮ' ಎನ್ನುವ ಶಬ್ದವೇ ಜೋಗಿಹೃದಯದಲ್ಲಿ ಜ್ಞಾನಿಗಳ ಹೃದಯದಲ್ಲಿ ರಮಿಸಲು ಯೋಗ್ಯನಾದವನು ಎಂಬ ಅರ್ಥವನ್ನು ಕೊಡುತ್ತದೆ. ರಾಮ ಎಂಬ ಹೆಸರನ್ನು ಪಡೆದ ಸ್ತ್ರೀಯು ಪತಿಯೊಡನೆ ರಮಿಸುವಂತೆ ಜೀವವು ತನ್ನ ದೇವನೊಡನೆ ಒಂದಾಗಿ ಸೇರಿ ಪರಮಾತ್ಮನಲ್ಲಿ ಅಂದರೆ ಪರಮಪುರುಷನಲ್ಲಿ ರಮಿಸುವುದಾದರೆ ಹಾಗೆ ರಮಿಸಲು ಯೋಗ್ಯನಾದ ದೇವನೇ ರಾಮ, ಪರಮಪುರುಷನೇ 'ರಾಮ'ಪ್ಪ" ಎಂಬುದಾಗಿ.

ರಾಮಮಂತ್ರೋಪಾಸನೆಯು ವೈದಿಕವೋ ಅಥವಾ ತಾಂತ್ರಿಕವೋ?
ರಾಮನ ಮಂತ್ರದಿಂದ ಮಾಡುವ ಉಪಾಸನೆಯು ವೈದಿಕವೋ ಅಥವಾ ತಾಂತ್ರಿಕವೋ ಎಂಬ ಸಂಶಯವಿದೆ. ಇದಕ್ಕೆ ಹೀಗೆ ವಿಚಾರ ಮಾಡಬಹುದು, ಮಂತ್ರರಾಮಾಯಣ ಮತ್ತು ರಾಮತಾಪಿನೀ ಉಪನಿಷತ್ತಿನಿಂದ ಉದ್ಧೃತವಾಗಿರುವಂತಹ ವೇದಪ್ರತಿಪಾದಿತವಾಗಿದೆ. ಮತ್ತು ನಾರದತಂತ್ರಪ್ರಪಂಚ, ಶಾರದಾತಿಲಕ ಮೊದಲಾದ ತಂತ್ರಗ್ರಂಥಗಳಲ್ಲಿ ರಾಮನ ಉಪಾಸನೆಯನ್ನು ಕಾಣಬಹುದು. ಆದ್ದರಿಂದ ಇದು ತಾಂತ್ರಿಕವಾದ ಮಂತ್ರವೂ ಕೂಡ ಆಗಿದೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಹಾಗಾಗಿ ಈ ಎರಡು ವಿಧದಿಂದಲೂ ರಾಮನ ಉಪಾಸನೆ ವಿಧ್ಯುಕ್ತವಾದುದೇ ಆಗಿದೆ.
ಅದೇನೆ ಇರಲಿ, ಚೈತ್ರ ಶುಕ್ಲ ನವಮಿಯು ಶ್ರೀರಾಮಚಂದ್ರ ಪ್ರಭುವಿನ ಅವತಾರದ ಪುಣ್ಯಪರ್ವ. ಅದನ್ನು ಯಾವ ರೀತಿಯಲ್ಲಿ ಆರಾಧಿಸಿದರೂ ಅದು ಶ್ರೇಷ್ಠವೇ. ಅದರಲ್ಲೂ ವಿಶೇಷವಾಗಿ ಶ್ರೀರಾಮನ ಮಂತ್ರೋಪಾಸನೆ ಅತ್ಯಂತ ಶೀಘ್ರಫಲವನ್ನು ಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಪುರಂದರದಾಸರೇ ಮೊದಲಾದ ಜ್ಞಾನಿವರೇಣ್ಯರು "ರಾಮ ಎಂಬ ಎರಡಕ್ಷರದ ಮಹಿಮೆಯನ್ನು ತಾವೇನು ಬಲ್ಲಿರಿ?" ಎಂದು ರಾಮಮಹಿಮೆಯನ್ನು ಕೊಂಡಾಡಿದ್ದಾರೆ. ಇಷ್ಟೆ ಅಲ್ಲ ಎಷ್ಟೋ ಸಾಧುಸಂತರು ರಾಮನನ್ನು ಜಪಿಸಿ, ತಪ್ಪಿಸಿ, ಧ್ಯಾನಿಸಿ, ಪೂಜಿಸಿ ರಾಮಮಯವಾಗಿದ್ದಾರೆ. ಆದ್ದರಿಂದ ಈ ಪರ್ವಕಾಲ ರಾಮಮಂತ್ರದ ಮಹಿಮೆಯನ್ನು ತಿಳಿದು ರಾಮಮಯವಾಗುವುದಕ್ಕೆ ಅತ್ಯಂತ ಶುಭಕಾಲ

ಸೂಚನೆ : 07
/04/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, March 30, 2025

ಪ್ರಶ್ನೋತ್ತರ ರತ್ನಮಾಲಿಕೆ 9 (Prasnottara Ratnamalike 9)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ ೯. ಯಾವುದು ವಿಷ ?

ಉತ್ತರ - ಗುರುಜನರ ಬಗ್ಗೆ ತಿರಸ್ಕಾರ.

ಪ್ರಸ್ತುತ ಪ್ರಶ್ನೆ ಇದಾಗಿದೆ - ಯಾವುದು ವಿಷ? ಎಂಬುದು? ಪ್ರಶ್ನೆಯ ಅರ್ಥ ಹೀಗಿದೆ ಎಂಬುದಾಗಿ ಭಾವಿಸ ಬಹುದು. ವಿಷ ಎಂದರೆ ವಿಷಮ. ಅಥವಾ ಫಲಸಾಧನೆಗೆ ಯಾವುದು ವಿಘ್ನವನ್ನು ಉಂಟುಮಾಡುವ ವಿಷಯವಾಗಿದೆಯೋ ಅಥವಾ ಉದಿಷ್ಟವಾದ ಪ್ರಯೋಜನಕ್ಕೆ ಯಾವುದು ಪ್ರತಿಬಂಧಕವೋ ಸಾಮಾನ್ಯವಾಗಿ ಅದನ್ನು 'ವಿಷ ಎಂಬುದಾಗಿ ಕರೆಯಬಹುದು ವಿಷವು ವಿಷಮತೆಯನ್ನು ಉಂಟುಮಾಡುತ್ತದೆ. ಯಾವುದೋ ಒಂದು ಇರುವ ಸ್ಥಿತಿಯನ್ನು ಕೆಡಿಸುತ್ತದೆ. ಧರ್ಮವನ್ನು ಕೆಡಿಸುತ್ತದೆ. ಹೀಗೆ ಕೆಡಿಸುವ ಸ್ವಭಾವವುಳ್ಳದ್ದು ವಿಷ ಎಂದರ್ಥ. ವಿಷವನ್ನು ಪಡೆದವನು ಸ್ವಸ್ಥವಾಗಿ ಇರಲು ಸಾಧ್ಯವೇ? ವಿಷವನ್ನು ಸೇವಿಸುತ್ತಾ ಸೇವಿಸುತ್ತಾ ವ್ಯಕ್ತಿಯ ಬಾಳೇ ನಾಶದತ್ತ ಸಾಗುತ್ತದೆ. ಪ್ರಗತಿ ಅಲ್ಲಿ ಸಾಧ್ಯವಾಗುವುದಿಲ್ಲವಷ್ಟೆ. 


ಪ್ರಸ್ತುತ ಪ್ರಶ್ನೆಯು ಬಾಳಿನ ವಿಷಮತೆಗೆ ಕಾರಣವನ್ನು ಕೇಳುತ್ತಿದೆ. ವಿಷ ಯಾವುದು ಎಂಬುದಕ್ಕೆ ಪ್ರಶ್ನೆಗೆ, ಗುರುಜನರ ಬಗ್ಗೆ ತಿರಸ್ಕಾರ, ಅಂದರೆ ಗುರು ಜನರ ವಿಷಯದಲ್ಲಿ ತೋರಿಸಲೇಬೇಕಾದ ಗೌರವ, ಆದರ, ಸತ್ಕಾರ, ಪ್ರೀತಿ, ಶ್ರದ್ಧೆ ಇತ್ಯಾದಿ ಸಂಗತಿಗಳನ್ನು ತೋರಿಸದಿರುವಿಕೆ ಎಂದರ್ಥ. ಇಲ್ಲಿ ಗುರುಜನ ಎಂದರೆ ತಂದೆ, ತಾಯಿ, ಕಲಸಿದ ಗುರು, ಶಿಕ್ಷಕ, ಅತಿಥಿ,  ಜ್ಞಾನವೃದ್ಧರು ಅಥವಾ ವಯೋವೃದ್ಧರು, ದುಃಖಿತರು, ದೀನಜನರು ದಯೆಗೆ - ಕಾರುಣ್ಯಕ್ಕೆ ಯೋಗ್ಯರಾದವರು, ಅನುಭವದಲ್ಲಿ ಮತ್ತು ವಿದ್ಯೆಯಲ್ಲಿ ನಮಗಿಂತ ದೊಡ್ಡವರು ಇವರೆಲ್ಲರನ್ನು ಸತ್ಕರಿಸುವುದು, ಆದರಿಸುವುದು ಅತ್ಯಂತ ಅವಶ್ಯಕ ಮತ್ತು ಆದ್ಯಕರ್ತವ್ಯ. ತಂದೆತಾಯಿ ವೃದ್ಧರಾಗಿದ್ದಾಗ ಅವರಿಗೆ ನೋವುಂಟಾಗದಂತೆ ವರ್ತಿಸುವುದು, ವಿದ್ಯೆಯನ್ನು ಪಡೆದ ಗುರುವಿನಲ್ಲಿ ಕೃತಜ್ಞತಾಭಾವವನ್ನು ಇಟ್ಟುಕೊಳ್ಳುವುದು, ವೃದ್ಧರಲ್ಲಿ ಸಂದರ್ಭವನ್ನು ಅರಿತು ವರ್ತಿಸುವುದು, ವೃದ್ಧರನ್ನು, ರೋಗಿಗಳ ಶುಶ್ರೂಷೆ ಮಾಡುವುದು. ಇಂತಹ ಅನೇಕ ನಡವಳಿಕೆಗಳಿಂದ ಗುರುಹಿರಿಯರ ಪ್ರೀತಿಗೆ ಆತ ಪಾತ್ರನಾಗುತ್ತಾನೆ. ಇದನ್ನು ಮಾಡದಿರುವವನು ಅವನ ಜೀವನಕ್ಕೆ ವಿಷಮತೆಯನ್ನು ತಂದುಕೊಳ್ಳುತ್ತಾನೆ ಎಂಬುದು ಈ ಪ್ರಶ್ನೋತ್ತರದ ತಾತ್ಪರ್ಯವಾಗಿದೆ. 

ಒಬ್ಬ ವ್ಯಕ್ತಿ ಯಾವ ಉತ್ತಮವಾದ ಜೀವನವನ್ನು ಸಾಗಿಸಬೇಕಾಗಿದೆಯೋ, ಅದಕ್ಕೆ ಅನೇಕ ರೀತಿಯ ಸಾಧನಸಾಮಗ್ರಿಗಳು, ಪೋಷಕ ಅಂಶಗಳು ಬೇಕಾಗುತ್ತವೆ. ಆ ಎಲ್ಲಾ ಅಂಶಗಳು ವೃದ್ಧರ, ಹಿರಿಯರ, ಗೌರವಕ್ಕೆ ಅರ್ಹರಾದವರನ್ನು ಪುರಸ್ಕರಿಸುವುದರಿಂದ ಪಡೆಯಬಹುದು. ಅವರನ್ನು ತಿರಸ್ಕರಿಸುವುದರಿಂದ ಅವರಿಂದ ನಮ್ಮ ಬಾಳಿಗೆ ಸಿಗಬೇಕಾದ ಪೋಷಕ ವಿಚಾರಗಳು ಅಲಭ್ಯವಾಗುವವು. ಅವರನ್ನು ಹೇಗೆ ನೋಡಿಕೊಳ್ಳಬೇಕು? ಎಂಬುದರ ಬಗ್ಗೆ ವಿವೇಕದ ಅವಶ್ಯಕತೆ ಇದೆ; ಒಂದು ಸಾಮಾನ್ಯಜ್ಞಾನದ ಅವಶ್ಯಕತೆ ಇದೆ;. ಸತ್ಕರಿಸುವುದು ಪೂಜಿಸುವುದು ಎಂದರೆ ದೇವರ ಪೂಜೆಯನ್ನು ಮಾಡಿದಂತೆ ಗಂಧ ಪುಷ್ಪ ಅಕ್ಷತಾ ಇವುಗಳನ್ನು ಸಮರ್ಪಿಸುವುದು ಎಂದರ್ಥವಲ್ಲ. ಯಾರನ್ನು ಹೇಗೆ ನೋಡಿಕೊಳ್ಳಬೇಕು ಹಾಗೆ ನೋಡಿಕೊಳ್ಳುವುದು. ಅದೇ ಅವರಿಗೆ ಸಲ್ಲಿಸುವ ಗೌರವ ಅಥವಾ ಪುರಸ್ಕಾರವಾಗಿರುತ್ತದೆ. "ಜ್ಞಾನದ ಕಡೆಗೆ ಒಯ್ಯುವ ಜಾಗಕ್ಕೆ ಬಗ್ಗಬೇಕು" ಎಂಬ ಶ್ರೀರಂಗಮಹಾಗುರುಗಳ ಮಾತು ಸ್ಮರಣೀಯ. ಹಾಗೆ ಅಂತಹ ಸ್ಥಾನಕ್ಕೆ ಗೌರವವನ್ನು ಸಲ್ಲಿಸದಿದ್ದರೆ ಅದೇ ತಿರಸ್ಕಾರವಾಗುತ್ತದೆ. ಹಾಗಾದಾಗ ಜೀವನವು ವಿಷಮತೆಗೆ ಸಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಾನವನೂ ಗುರುಹಿರಿಯರಿಗೆ ಗೌರವಾದರಗಳನ್ನು ಸಮರ್ಪಿಸಬೇಕು ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 30/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Thursday, March 27, 2025

ಯುಗಾದಿ- ಕಾಲ-ಪರ್ವಗಳ ಅವಿನಾಭಾವಸಂಬಂಧ (Yugadi- Kala-Parvagala Avinabhavasambandha)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪರ್ವ ಕಾಲಾಧಾರಿತ

ಭಾರತೀಯರ ಹಬ್ಬಗಳು ಕಾಲದ ಆಧಾರದಲ್ಲಿಯೇ ಆಚರಿಸಲ್ಪಡುತ್ತವೆ. ಕಾಲಕ್ಕೂ ಹಬ್ಬಕ್ಕೂ ಅವಿನಾಭಾವ ಸಂಬಂಧ ಇದೆ. ಇಂತಹ ಕಾಲದಲ್ಲಿ ಇಂತಹದ್ದೇ ಹಬ್ಬವನ್ನು ಆಚರಿಸಬೇಕೆಂಬ ವಿಧಾನ ಇದೆ. ಕಾಲವೇ ಆ ಹಬ್ಬಕ್ಕೆ ಬೇಕಾದ ಸಂದರ್ಭ - ಸನ್ನಿವೇಶಗಳನ್ನು ಒದಗಿಸಿಕೊಡುತ್ತದೆ. ಹಾಗಾಗಿ ಕಾಲ ಮತ್ತು ಪರ್ವ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾವು ಕಾಲವನ್ನು ಬಿಟ್ಟು ಹಬ್ಬವನ್ನು ಆಚರಿಸಲು ಸಾಧ್ಯವೇ ಇಲ್ಲ. ಭಾರತೀಯರ ಕಾಲಗಣನೆ ಇಂದು ನಿನ್ನೆಯದಲ್ಲ. ಇದನ್ನು ಅಳೆಯುವುದು ಸುಲಭಸಾಧ್ಯವಲ್ಲ. ಏಕೆಂದರೆ ಈ ಕಾಲಗಣನೆ ಎಂದಿನಿಂದ ಆರಂಭವಾಯಿತು? ಭಗವಂತನ ಸೃಷ್ಟಿಯ ಆರಂಭವೇ ಕಾಲದ ಆರಂಭ. ಅಷ್ಟು ಹಿಂದಿನಿಂದ ಈ ಕಾಲದ ಗಣನೆ ಬಂದಿದೆ. ಈ ಕಾಲದ ಆರಂಭವು ಬ್ರಹ್ಮನ ಆಯುಷ್ಯದಿಂದ ಆರಂಭವಾಗಿ, ಸೂಕ್ಷ್ಮಾತಿ ಸೂಕ್ಷ್ಮವಾದ ಕಾಲದವರೆಗೆ ವಿಸ್ತೃತವಾಗಿದೆ. ಇಂತಹ ಕಾಲದ ಘಟ್ಟದ ಆರಂಭವನ್ನು ಸೂಚಿಸುವ ಅತ್ಯಂತ ವಿಶೇಷವಾದ ಪರ್ವವೇ ಯುಗಾದಿ.


ನಾಲ್ಕು ಯುಗಗಳು

ಇಲ್ಲಿ 'ಯುಗಾದಿ' ಎಂದು ಹೆಸರೇ ಹೇಳುವಂತೆ ಈ ಪರ್ವವು ಯುಗದ ಆರಂಭವನ್ನು ತಿಳಿಸುತ್ತದೆ. ಕಾಲದ ಗಣನೆಯಲ್ಲಿ ಕೃತ, ತ್ರೇತ, ದ್ವಾಪರ ಮತ್ತು ಕಲಿ ಎಂಬುದಾಗಿ ನಾಲ್ಕು ಯುಗಗಳನ್ನು ಹೇಳಲಾಗಿದೆ. ಈ ನಾಲ್ಕು ಯುಗಗಳು ಆಗಾಗ ಆವರ್ತನೆಗೊಳ್ಳುತ್ತವೆ. ಒಂದೊಂದು ಯುಗಕ್ಕೂ ನಿರ್ದಿಷ್ಟವಾದ ಕಾಲ ಪರಿಮಾಣವಿದೆ. ಸಾಮಾನ್ಯವಾಗಿ ಕೃತಯುಗಕ್ಕೆ ೧೭೨೮೦೦೦ ವರ್ಷಗಳು, ತ್ರೇತಾಯುಗಕ್ಕೆ ೧೨೯೬೦೦೦ ವರ್ಷಗಳು, ದ್ವಾಪರಯುಗಕ್ಕೆ ೮೬೪೦೦೦ ವರ್ಷಗಳು ಮತ್ತು ಕಲಿಯುಗಕ್ಕೆ ೪೩೨೦೦೦ ವರ್ಷಗಳು ಎಂಬುದಾಗಿ. ಇಂತಹ ನಾಲ್ಕು ಯುಗಗಳು ಸೇರಿ ಒಂದು ಮಹಾಯುಗವಾಗುತ್ತದೆ. ಅಂತಹ ೭೧ ಯುಗಗಳಿಗೆ ಒಂದು ಮನ್ವಂತರವಾಗುತ್ತದೆ. ಒಟ್ಟು ಹದಿನಾಲ್ಕು ಮನ್ವಂತರಗಳಿವೆ. ಹಾಗಾಗಿ ಈ ಯುಗ ಎಂಬುದು ಯಾವುದೋ ಒಂದು ದಿನ ಆರಂಭವಾಗಿದೆ ಅನ್ನುವುದಲ್ಲ. ಇದು ಮತ್ತೆ ಮತ್ತೆ ಪರಿವರ್ತನೆಯಾಗುತ್ತದೆ ಎಂಬುದು ತಾತ್ಪರ್ಯ. ಈ ಹಿನ್ನೆಲೆಯಲ್ಲಿ ನೋಡಿದಾಗ ನಾಲ್ಕು ಯುಗದ ಆರಂಭವನ್ನು ಕಾಲವಿಧಾಯಕ ಶಾಸ್ತ್ರವಾದ ಜ್ಯೋತಿಷ್ಯದಲ್ಲಿ ಹೀಗೆ ಹೇಳಲಾಗಿದೆ. ಕಾರ್ತಿಕ ಶುಕ್ಲ ನವಮಿಯಂದು ಕೃತಯುಗದ ಆರಂಭ, ವೈಶಾಖ ಶುಕ್ಲ ಪಕ್ಷದ ತೃತೀಯಾ ತ್ರೇತಾಯುಗದ ಆರಂಭ, ಮಾಘ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯು ದ್ವಾಪರಾಯುಗದ ಆರಂಭ ಮತ್ತು ಶ್ರಾವಣ ಮಾಸದ ಅಮಾವಾಸ್ಯೆಯು ಕಲಿಯುಗದ ಆರಂಭ ಎಂಬುದಾಗಿ ಯುಗದ ಆರಂಭದ ದಿನಗಳನ್ನು ಹೇಳಲಾಗಿದೆ. ಅಂದರೆ ನಾವು ಈಗ ಈ ಯುಗಾದಿಯನ್ನು ವಸಂತ ಋತುವಿನ ಚೈತ್ರ ಮಾಸದ ಆರಂಭದ ದಿನ ಚಾಂದ್ರಮಾನ ಯುಗಾದಿ ಎಂತಲೂ ಸೌರಮಾಸಗಳಲ್ಲಿ ಮೇಷ ಮಾಸದ ಆರಂಭದ ದಿನವನ್ನು ಸೌರಮಾನ ಯುಗಾದಿ ಎಂಬುದಾಗಿಯೂ ಆಚರಣೆ ಮಾಡುತ್ತೇವೆ. ಚಾಂದ್ರಮಾನ ಯುಗಾದಿ ಎಂಬುದು ಚೈತ್ರಾದಿ ಮಾಸಗಳಿಂದ ಗಣನೆಮಾಡುವ ನೂತನ ವರ್ಷದ ಆರಂಭಕಾಲ. ಸೌರಮಾನ ಯುಗಾದಿ ಎಂಬುದು ಮೇಷಾದಿ ಮಾಸಗಳಿಂದ ಗಣನೆಮಾಡುವ ನೂತನ ವರ್ಷದ ಆರಂಭಕಾಲ. ಹೀಗೆ ಯುಗಾದಿ ಎಂಬುದನ್ನು ನಾವಿಂದು ಆಚರಿಸುತ್ತಿದ್ದೇವೆ. ಯಾವುದೋ ಒಂದು ಕಾಲಘಟ್ಟದಲ್ಲಿ ಈ ಯುಗಾದಿಯು ಚೈತ್ರಮಾಸದ ಶುಕ್ಲಪಕ್ಷದ ಪ್ರತಿಪತ್ ಭಾನುವಾಸರ ಅಶ್ವಿನಿನಕ್ಷತ್ರದಂದೇ ಆರಂಭವಾಗಿತ್ತು. ಕಾಲಾಂತರದಲ್ಲಿ ಅವುಗಳಲ್ಲಿ ವ್ಯತ್ಯಯ ಆಗಿದೆ. ಈಗ ಭಾನುವಾಸರ ಅಥವಾ ಅಶ್ವಿನಿನಕ್ಷತ್ರದಂದೇ ಯುಗಾದಿ ಆರಂಭವಾಗಬೇಕೆಂಬ ನಿಯಮವಿಲ್ಲ. ಮಾಸದ ಮೊದಲ ದಿನವನ್ನು ಯುಗಾದಿಯಾಗಿ ಪರಿಗಣಿಸುತ್ತೇವೆ. ಚಂದ್ರಮಾಸ ಅಥವಾ ಸೌರಮಾಸದ ಆದಿಯನ್ನು ಸಾಮಾನ್ಯವಾಗಿ ಯುಗಾದಿ ಎಂಬುದಾಗಿ ಇಟ್ಟುಕೊಂಡಿದ್ದೇವೆ. ಭಾರತೀಯರ ಕಾಲಗಣನೆಯು ಸೂರ್ಯ ಮತ್ತು ಚಂದ್ರನ ಆಧರಿಸಿ ಇದೆ. ಅದು ಸೂರ್ಯ ಚಂದ್ರರು ಎಷ್ಟು ನಿಖರವೋ ಅಷ್ಟೇ ನಿಖರವಾದದ್ದು ಭಾರತೀಯರ ಕಾಲಮಾನ. ಹಾಗಾಗಿ ಈ ಯುಗಾದಿಯ ಆರಂಭದಲ್ಲಿ ಕಿಂಚಿತ್ತೂ ವ್ತ್ಯಯಯ ಆಗುವುದಿಲ್ಲ. ಇಂತಹ ವಿಶಿಷ್ಟವಾದ ಕಾಲ ಗಣನೆಯ ಆರಂಭವನ್ನು 'ಯುಗಾದಿ' ಎಂಬುದಾಗಿ ಕರೆಯಲಾಗಿದೆ.


ಯುಗಾದಿ ಹಬ್ಬ ಏಕೆ?

ಈ ಯುಗಾದಿಯು ಒಂದು ಹಬ್ಬವಾಗಿದೆ, ಪರ್ವಕಾಲವಾಗಿದೆ. ಯಾವುದೇ ಆರಂಭವೂ ಇನ್ನೊಂದರ ಮುಕ್ತಾಯದ ಸಂಕೇತವಾಗಿರುತ್ತದೆ. ಅಂದರೆ ಒಂದರ ಮುಕ್ತಾಯ ಇನ್ನೊಂದರ ಆರಂಭ. ಭಾನುವಾರ ಮುಕ್ತಾಯ ಎಂದರೆ ಸೋಮವಾರದ ಆರಂಭವಷ್ಟೆ. ಅಶ್ವಿನಿಯ ಮುಕ್ತಾಯವೆಂಬುದು ಭರಣಿಯ ಆರಂಭವಲ್ಲವೇ! ಇದನ್ನೇ ಸಂಧಿಯೆಂದು ಕರೆಯಲಾಗಿದೆ. ಇದನ್ನೇ 'ಪರ್ವ' ಎಂಬುದಾಗಿ ಗುರುತಿಸಿ ಇದು ಅತ್ಯಂತ ಪವಿತ್ರವಾದ ಕಾಲ ಎಂಬುದಾಗಿ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಪರ್ವಕಾಲವು ಭಗವಂತನ ಉಪಾಸನೆ, ಪೂಜೆ, ಧ್ಯಾನ ಮೊದಲಾದ ವಿಷಯಗಳಿಗೆ ಅತ್ಯಂತ ಅನುಕೂಲವಾದದ್ದು ಎಂಬುದು ಜ್ಞಾನಿಗಳ ಅನುಭವದಿಂದ ಮತ್ತು ವೇದ ಶಾಸ್ತ್ರ ಮೊದಲಾದ ಗ್ರಂಥಗಳ ಆಧಾರದಿಂದ  ತೀರ್ಮಾನವಾಗಿದೆ. ಈ ಪರ್ವದಂದು ನಾವು ಹೇಗೆ ಹಬ್ಬವಾಗಿ ಆಚರಿಸುತ್ತಿದ್ದೇವೆ, ಇದರ ಗುಣಲಕ್ಷಣಗಳೇನು ಇತ್ಯಾದಿ ವಿಚಾರಗಳನ್ನು ನಾವು ಚಿಂತಿಸಬೇಕಾಗಿದೆ.


ಸೂಚನೆ: 27/3//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

Sunday, March 23, 2025

ಪ್ರಶ್ನೋತ್ತರ ರತ್ನಮಾಲಿಕೆ 8 (Prasnottara Ratnamalike 8)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ ೮. ಪಂಡಿತನಾರು ?

ಉತ್ತರ - ವಿವೇಕೀ.

ಪ್ರಸ್ತುತ ಪ್ರಶ್ನೆ ಬಹಳ ಸಾಮಾನ್ಯವಾದಂತೆ ಕಂಡು ಬರುತ್ತಿದೆ. ಆದರೆ ವಿಷಯದ ಆಳ ಮಾತ್ರ ಹೇಳಲು ಕಷ್ಟಸಾಧ್ಯವಾದುದು. ಏಕೆಂದರೆ ಇಲ್ಲಿನ ಪ್ರಶ್ನೋತ್ತರ ಹೀಗಿದೆ - 'ಪಂಡಿತ ಯಾರು?' ಎಂಬುದಾಗಿ. ಸಾಮಾನ್ಯವಾಗಿ ಯಾರು ತಿಳಿದಿರುತ್ತಾನೋ, ಜ್ಞಾನಿಯಾಗಿರುತ್ತಾನೋ, ಅನೇಕ ವಿಷಯಗಳ ಅರಿವನ್ನು ಪಡೆದಿರುತ್ತಾನೋ, ಅಥವಾ ತುಂಬಾ ಜನರಿಗೆ ತಿಳಿಯದೆ ಇರುವಂತಹ ವಿಷಯವನ್ನು ಯಾರೊಬ್ಬನು ತಿಳಿದಿರುತ್ತಾನೋ ಅಂತವನನ್ನು 'ಪಂಡಿತ' ಎಂಬುದಾಗಿ ಕರೆಯುವಂತದ್ದು ಅಭ್ಯಾಸ. ಆದರೆ ಇಲ್ಲಿನ ಉತ್ತರ ಬಹಳ ವಿಶೇಷವಾಗಿದೆ. ಪಂಡಿತ ಯಾರು? ಎಂಬ ಪ್ರಶ್ನೆಗೆ 'ವಿವೇಕೀ' ಎಂಬುದಾಗಿ ಉತ್ತರವನ್ನು ಇಲ್ಲಿ ಕೊಡಲಾಗಿದೆ. ಅಂದರೆ ವಿವೇಕಿಯಾದವನು ಮಾತ್ರ ಪಂಡಿತನಾಗಲು ಸಾಧ್ಯ ಎಂಬುದು ಇದರ ತಾತ್ಪರ್ಯ.


ಅಂದರೆ ನಾವಿಲ್ಲಿ ವಿವೇಚಿಸಬೇಕಾದ ವಿಷಯ ಇಷ್ಟು - ವಿವೇಕಿ ಎಂದರೇನು? ಎಂಬುದನ್ನು ತಿಳಿದರೆ, ಅವನು ಹೇಗೆ ಪಂಡಿತನಾಗುತ್ತಾನೆ? ಎಂಬುದನ್ನು ತಿಳಿಯಲು ಸುಲಭವಾಗುತ್ತದೆ. ವಿವೇಕ ಎಂಬ ಶಬ್ದಕ್ಕೆ ಪೃಥಕ್ಕಾಗಿ ಕಾಣುವುದು ಎಂದರ್ಥ. ಅಂದರೆ ಯಾವುದನ್ನು ಹೇಗೆ ನೋಡಬೇಕೋ ಅದನ್ನು ಹಾಗೆಯೇ ನೋಡುವಂತದ್ದು. ಅನ್ಯಥಾಭಾವದಿಂದ ನೋಡದಿರುವುದು. ಈ ಪ್ರಪಂಚದಲ್ಲಿ ಎರಡು ರೀತಿಯ ವಸ್ತುಗಳಿವೆ, ನಿತ್ಯವಾದದ್ದು ಮತ್ತು ಅನಿತ್ಯವಾದದ್ದು ಎಂಬುದಾಗಿ. ನಿತ್ಯವಾದ ವಿಷಯವನ್ನು ಅನಿತ್ಯವೆಂದೋ ಅಥವಾ ಅನಿತ್ಯವಾದ ವಸ್ತುವನ್ನು ನಿತ್ಯ ಎಂದೋ ಪರಿಗಣಿಸಿದರೆ ಅದು ಅವಿವೇಕವಾಗುತ್ತದೆ. ನಿತ್ಯವಾದದ್ದನ್ನು ನಿತ್ಯ ಎಂದು ಪರಿಗಣಿಸುವುದು, ಅನಿತ್ಯವಾದದ್ದನ್ನು ಅನಿತ್ಯವೆಂದೇ ಪರಿಗಣಿಸುವಂಥದ್ದು ವಿವೇಕ ಎಂದು ಕರೆಸಿಕೊಳ್ಳುತ್ತದೆ.


ಹಾಗಾದರೆ ನಿತ್ಯವಾದ ವಸ್ತು ಯಾವುದು? ಎಂದರೆ ಆತ್ಮವನ್ನು ಅಥವಾ 'ಪರಬ್ರಹ್ಮ' ಎಂಬ ವಿಷಯ ಏನಿದೆಯೋ ಅದನ್ನು ಮಾತ್ರ 'ನಿತ್ಯ' ಎಂದು ಕರೆದು, ಅದನ್ನು ಹೊರತುಪಡಿಸಿದ ಎಲ್ಲ ವಿಷಯಗಳನ್ನು 'ಅನಿತ್ಯ' ಎಂಬುದಾಗಿ ಕರೆಯುತ್ತಾರೆ. ಆದ್ದರಿಂದ ಈ ಪರಬ್ರಹ್ಮ ವಸ್ತುವನ್ನು ಬಿಟ್ಟು ಉಳಿದವುಗಳೆಲ್ಲವೂ ಕೂಡ ಅನಿತ್ಯ ಎಂಬುದಾಗಿ ಭಾವಿಸಬೇಕು ಮತ್ತು ಈ ಪ್ರಪಂಚದಲ್ಲಿ ಕಾಣುವ ಯಾವುದೇ ವಿಷಯಗಳು ಕೂಡ ಅನಿತ್ಯ ಅಶಾಶ್ವತ ಎಂಬುದಾಗಿ ಪರಿಗಣಿಸಿ, ಆ ಭಗವಂತ ಮಾತ್ರ ನಿತ್ಯ, ಅವನು ಮಾತ್ರ ಪಡೆಯಬೇಕಾದವನು ಎಂಬ ಅರಿವನ್ನೇ ವಿವೇಕ ಎಂಬುದಾಗಿ ಕರೆದು, ಇಂತಹ ಅರಿವು ಉಳ್ಳವನನ್ನು ವಿವೇಕೀ ಎಂದು ಕರೆಯುತ್ತಾರೆ. ಅಂದರೆ ಇವನೇ ನಿಜವಾದ ಜ್ಞಾನಿ, ಪಂಡಿತ. 'ಪಂಡಾ' ಅಂದರೆ ಪರಾತ್ಮವಿಜ್ಞಾನ. ಆತ್ಮಾ ಎರಡು ಬಗೆ ಜೀವಾತ್ಮ ಮತ್ತು ಪರಮಾತ್ಮಾ ಎಂದು. ಆತ್ಯಂತಿಕವಾಗಿ ಜೀವಾತ್ಮ ಮತ್ತು ಪರಮಾತ್ಮಾ ಎರಡೂ ಅಭಿನ್ನವಾದದ್ದು ಎಂಬ ಬಗೆಗಿನ ಅರಿವೇ ಪರಾತ್ಮವಿಜ್ಞಾನ ಎಂಬುದಕ್ಕೆ ಅರ್ಥವಾಗಿದೆ. ಅಂತಹ ಅರಿವು ಉಳ್ಳವನು ಪಂಡಿತ. ಅಂದರೆ ಯಾರು ಆ ಪರಬ್ರಹ್ಮ ವಸ್ತುವನ್ನು ನಿತ್ಯ ಎಂದೂ, ಉಳಿದ ವಸ್ತುಗಳೆಲ್ಲವೂ ಅನಿತ್ಯ ಎಂಬುದಾಗಿ ತಿಳಿದಿರುತ್ತಾನೋ ಅವನೇ ನಿಜವಾದ ಪಂಡಿತನಾಗುತ್ತಾನೆ. ಅವನೇ ನಿಜವಾಗಿ ವಿವೇಕೀ ಎಂದು ಅನಿಸಿಕೊಳ್ಳುತ್ತಾನೆ.


ಸೂಚನೆ : 23/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, March 16, 2025

ಪ್ರಶ್ನೋತ್ತರ ರತ್ನಮಾಲಿಕೆ 7 (Prasnottara Ratnamalike 7)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೭. ಅತ್ಯಂತ ಶುದ್ಧನು ಯಾರು ?

ಉತ್ತರ -  ಯಾರು ಮನಸ್ಸಿನಿಂದ ಶುದ್ಧನೋ ಅವನೇ ನಿಜವಾಗಿ ಶುದ್ಧ.


ಪ್ರಸ್ತುತವಾದ ಪ್ರಶ್ನೆ "ಅತ್ಯಂತ ಶುದ್ಧನಾದವನು ಯಾರು?" ಎಂಬುದಾಗಿ. ಅದಕ್ಕೆ ಉತ್ತರ ಹೇಗಿದೆ - "ಯಾರು ಮನಸ್ಸಿನಿಂದ ಶುದ್ಧನಾಗಿರುತ್ತಾನೋ ಅವನು ಅತ್ಯಂತ ಶುದ್ಧ" ಎಂಬುದಾಗಿ. ಇಲ್ಲಿ ನಾವು ಒಂದು ವಿಷಯವನ್ನು ಗಮನಿಸುವಂಥದ್ದು ಅತ್ಯಂತ ಅನಿವಾರ್ಯ. ಶುದ್ಧವಾಗಬೇಕಾದುದು ಮನಸ್ಸು. ಉಳಿದವು ಅಶುದ್ಧವಾಗಿದ್ದರೂ ಪರವಾಗಿಲ್ಲ ಎಂಬ ವಿಷಯವಲ್ಲ. ಮನಸ್ಸು ಶುದ್ಧವಾಗಬೇಕಾದರೆ ಉಳಿದೆಲ್ಲ ಅಂಗಗಳ ಶುದ್ಧಿಯು ಕೂಡ ಅತ್ಯಂತ ಅವಶ್ಯ ಎಂಬುದನ್ನು ಕೂಡ ಇದರ ಜೊತೆಯಲ್ಲಿ ಮನಗಾಣಬೇಕಾಗಿದೆ. ಇಲ್ಲಿ ಉಳಿದವುಗಳು ಹೇಗಿದ್ದರೂ ಆಗುತ್ತದೆ ಎಂಬ ವಿಷಯವಿಲ್ಲ. ಕೊನೆಯಲ್ಲಿ ಆಗಬೇಕಾದದ್ದು ಮಾನಸಿಕ ಸುದ್ದಿ ಮಾತ್ರ ಎಂಬುದು ತಾತ್ಪರ್ಯವಷ್ಟೆ. ಏಕೆಂದರೆ ನಮ್ಮ ಜೀವನದ ಉನ್ನತಿ ಮನಸ್ಸಿನಿಂದ ಮಾತ್ರ. ಮನಸ್ಸು ಶುದ್ಧವಾಗಿದ್ದರೆ ನಾವು ತಿಳಿಯಬೇಕಾದದ್ದನ್ನು ತಿಳಿಯಬಹುದು; ತಿಳಿಯಬೇಕಾದದ್ದನ್ನು ಅಂತಯೇ ತಿಳಿಯಬಹುದು; ವ್ಯತಿರಿಕ್ತವಾಗಿ ತಿಳಿಯದೆ ಯಥಾವತ್ತಾಗಿ ತಿಳಿಯಲು ಸಾಧ್ಯ. ಹಾಗಾಗಿ ತಿಳುವಳಿಕೆಯಲ್ಲಿ ಮನಸ್ಸಿನ ಪಾತ್ರ ಉಳಿದೆಲ್ಲವುಗಳಿಗಿಂತ ಮಿಗಿಲಾದುದು ಎಂಬುದು ಇದರ ಅರ್ಥ.


ಮನಸ್ಸನ್ನು ಇಂದ್ರಿಯ ಎಂದು ಕರೆಯಲಾಗಿದೆ. ವಿಷಯದ ಅರಿವನ್ನು ಉಂಟುಮಾಡುವ ಸಾಧನವದು.  ಇದನ್ನು ಅಂತರಿಂದ್ರಿಯ ಎಂಬುದಾಗಿ ಕರೆದು, ಕಣ್ಣು ಕಿವಿ ಮೂಗು ನಾಲಗೆ ಚರ್ಮ ಈ ಐದು ಇಂದ್ರಿಯಗಳನ್ನು ಬಹಿರಿಂದ್ರಿಯ ಎಂಬುದಾಗಿ ಕರೆಯಲಾಗಿದೆ. ಈ ಇಂದ್ರಿಯಗಳಿಂದ ನಮಗೆ ಹೊರಗಡೆ ಇರುವ ವಿಷಯದ ಅರಿವು ಬರುತ್ತದೆ. ಕಣ್ಣಿನಿಂದ ರೂಪ, ಕಿವಿಯಿಂದ ಶಬ್ದ, ಮೂಗಿನಿಂದ ಗಂಧ, ಚರ್ಮದಿಂದ ಸ್ಪರ್ಶ ಮತ್ತು ನಾಲಗೆಯಿಂದ ರಸ. ಆದರೆ ಈ ಎಲ್ಲ ಜ್ಞಾನಗಳಿಗೂ ಮನಸ್ಸು ಬೇಕು. ಬಹಿರಿಂದ್ರಿಗಳಿಗೂ ಮೀರಿದಂತಹ ಅನೇಕ ವಿಷಯಗಳ ಅರಿವು ನಮಗೆ ಬೇಕಾಗುತ್ತದೆ. ಅದಕ್ಕೆ ಮನಸ್ಸಿನಿಂದ ಮಾತ್ರ ಸಾಧ್ಯ. ಹಾಗಾಗಿ ಯಾವ ಅರಿವನ್ನು ಹೊರ ಇಂದ್ರಿಯಗಳಿಂದ ಪಡೆಯಲು ಸಾಧ್ಯವಿಲ್ಲವೋ ಅವುಗಳನ್ನು ಮನಸ್ಸಿನಿಂದ ಪಡೆಯಬೇಕಾಗುತ್ತದೆ. ಹಾಗಾಗಿ ಮನಸ್ಸು ಶುದ್ಧವಾಗಿರಬೇಕು. ಕಣ್ಣು ಶುದ್ಧವಾಗಿದ್ದರೆ ರೂಪ ಶುದ್ಧವಾಗಿ ಕಾಣುತ್ತದೆ. ಹಾಗೆ ಇಂದ್ರಿಯ ಶುದ್ಧವಾದಾಗ ಇಂದ್ರಿಯರಿಂದ ಬರುವ ಅರಿವು ಶುದ್ಧವಾಗಿ ಕಾಣುತ್ತದೆ ಎಂಬುದು ಇದರ ಅರ್ಥ. ಆದ್ದರಿಂದ ಮನಸ್ಸು ಅತ್ಯಂತ ಪರಿಶುದ್ಧವಾಗಿರಬೇಕು ಎಂಬುದು.


ಚಿಂತೆಯಿಂದ ಮನಸ್ಸು ಅಶುದ್ಧಗೊಳ್ಳುತ್ತದೆ. ಚಿಂತನದಿಂದ ಮನಸ್ಸು ಶುದ್ಧಗೊಳ್ಳುತ್ತದೆ. ಅಂದರೆ ಮನಸ್ಸು ತಿಳಿಯಾದಾಗ ಮನಸ್ಸಿನಿಂದ ಮನಸಸ್ಪತಿಯನ್ನು - ಭಗವಂತನನ್ನು ತಿಳಿಯಲು ಸಾಧ್ಯ. ಅದರದರ ಸ್ವಭಾವವನ್ನೆ ಶುದ್ಧಿ ಎನ್ನುತ್ತಾರೆ ಎಂಬುದಾಗಿ ಶ್ರೀರಂಗಮಹಾಗುರುಗಳು ಶುದ್ಧಿಯ ವಿವರಣೆಯನ್ನು ಈ ಭಾವದಿಂದ ನೀಡುತ್ತಿದ್ದರು. 'ಶುದ್ಧಾ ಹಿ ಬುದ್ಧಿಃ ಕಿಲ ಕಾಮಧೇನುಃ' ಮನಸ್ಸು ಶುದ್ವಾಗಿರಗಬೇಕು. ಅದರಿಂದ ಎಂತಹ ಕಾರ್ಯವನ್ನು ಸಾಧ್ಯವಾಗಿಸಬಹುದು. ಈ ಸ್ವಭಾವವಿರುವುದರಿಂದಲೇ ಮನುಷ್ಯ, ಮಾನವ, ಮನುಜ ಮೊದಲಾದ ಹೆಸರುಗಳು ನರರಿಗೆ ಬಂದಿವೆ. ಅದೇ ನಿಜವಾದ ಪರಿಶುದ್ಧಿ. ಉಳಿದೆಲ್ಲ ಶುದ್ಧಿಗಳು ಇದರಲ್ಲೇ ಪರ್ಯವಸಾನವಾಗುವಂತೆ ಇರಬೇಕಾಗುತ್ತದೆ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 16/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Monday, March 10, 2025

ಪ್ರಶ್ನೋತ್ತರ ರತ್ನಮಾಲಿಕೆ 6

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೫ - ಮಾನವನು ಅತಿಮುಖ್ಯವಾಗಿ ಮಾಡಬೇಕಾದ ಕಾರ್ಯ ಯಾವುದು ?

ಉತ್ತರ -  ತನಗೂ ಮತ್ತು ಪರರಿಗೂ ಹಿತವಾಗುವ ಕಾರ್ಯ. 


ಈ ಸೃಷ್ಟಿಯಲ್ಲಿ ಇರುವ ಎಂಭತ್ತ ನಾಲ್ಕು ಲಕ್ಷ ಜೀವ ಜಾತಿಗಳ ಪೈಕಿ ಮಾನವಜನ್ಮಕ್ಕೆ ಅತಿವಿಶೇಷವಾದ ಸ್ಥಾನ ಉಂಟು. ಹಾಗಾಗಿ ಮಾನವನಾಗಿ ಹುಟ್ಟನ್ನು ಪಡೆದ ಬಳಿಕ ಅತ್ಯಂತ ಮುಖ್ಯವಾಗಿ ಮಾಡಬೇಕಾದ ಕೆಲಸ ಯಾವುದು? ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ಅಂದರೆ ಅವನು ಎಂತಹ ಜೀವನವನ್ನು ಸಾಗಿಸಬೇಕಾಗಿದೆ? ಎಂಬುದು ಈ ಪ್ರಶ್ನೆಯ ಅರ್ಥವಾಗಿದೆ. ಅದಕ್ಕೆ ಉತ್ತರ ಹೇಗಿದೆ- ಯಾರು ತನಗೂ ಮತ್ತು ಪರರಿಗೂ ಹಿತವಾಗುವ ರೀತಿಯಲ್ಲಿ ಕೆಲಸ ಮಾಡ್ತಾನೋ, ಅವನೇ ನಿಜವಾಗಿಯೂ ಮಾನವನಾಗಬಲ್ಲ; ಅಂದರೆ ಅವನು ಮಾಡುವ ಕಾರ್ಯವು ತನಗೂ ಮತ್ತು ಪರರಿಗೂ ಅನುಕೂಲವಾಗುವ ರೀತಿಯಲ್ಲಿ ಇರಬೇಕು ಎಂಬುದಾಗಿ. ಒಂದು ಸುಭಾಷಿತ ಹೀಗೆ ಇದೆ "ಪರೇಷಾಮ್  ಉಪಕಾರಾರ್ಥಂ ಯೋ ಜೀವತಿ ಸ ಜೀವತಿ" ಎಂಬುದಾಗಿ ಅಂದರೆ ಯಾವನ ಜೀವನವು ಪರೋಪಕಾರಕ್ಕಾಗಿ ಇರುತ್ತದೆಯೋ ಅವನು ನಿಜವಾಗಿ ಜೀವನ ಮಾಡುತ್ತಿದ್ದಾನೆ ಎಂದರ್ಥ. ಮನುಜನ ಜೀವನಕ್ಕೂ ಮತ್ತು ಉಳಿದ ಜೀವಿಗಳ ಜೀವನಕ್ಕೂ ಇಷ್ಟು ವ್ಯತ್ಯಾಸವನ್ನು ಕಾಣಬಹುದು, .


ಏನೆಂದರೆ ಉಳಿದ ಜೀವಿಗಳ ಬದುಕು ಸಹಜವಾಗಿಯೇ ಸೃಷ್ಟಿಯ ಸಮತೋಲನವನ್ನು ಕಾದುಕೊಳ್ಳುವ ರೀತಿಯಲ್ಲಿ ಇರುತ್ತದೆ. ಅದು ಅಪ್ರಯತ್ನ ಪೂರ್ವಕವಾಗಿ ಇರುತ್ತದೆ. ಅವುಗಳಿಗೆ ಈ ಪ್ರಪಂಚದ ಆಗುಹೋಗುಗಳನ್ನು ನಿಯಂತ್ರಿಸಬಲ್ಲ ಸಾಮರ್ಥ್ಯವಿರುವುದಿಲ. ಆದರೆ ಮನುಷ್ಯನ ಜೀವನ ಹಾಗಲ್ಲ; ಅವನು ಈ ಸೃಷ್ಟಿಯ ಮೇಲೆ ತನ್ನ ಕೈಯನ್ನು ಆಡಿಸಬಲ್ಲ. ತನ್ನ ಬುದ್ಧಿಯ ಬಲದಿಂದ ಅವನು ಈ ಪ್ರಕೃತಿಗೆ ಹೇಗೆ ಹಿತವಾಗುವ ಕಾರ್ಯವನ್ನು ಮಾಡಬಹುದೋ ಅಂತೆಯೇ ಅಹಿತವಾಗುವ ಕಾರ್ಯವನ್ನೂ ಮಾಡಬಹುದಾಗಿದೆ. ಅಂತಹ ವಿವೇಕ ಮತ್ತು ಅವಿವೇಕವು ಎರಡೂ ಮನುಷ್ಯನಿಗೆ ಬಿಟ್ಟು ಬೇರೆ ಯಾವ ಜೀವಿಗಳಿಗೂ ಇರುವುದಿಲ್ಲ. ಆತ ತನ್ನ ಸಾಮರ್ಥ್ಯದಿಂದ ಪ್ರಪಂಚದ ಮೇಲೆ ಹಿಡಿತ ಸಾಧಿಸಬಲ್ಲ. ಆದ್ದರಿಂದಲೇ ಈ ಪ್ರಶ್ನೆಯಲ್ಲಿ ಎಚ್ಚರಿಕೆಯನ್ನು ಕೊಟ್ಟಂತೆ ಕಾಣುತ್ತದೆ. 


ಮಾನವ ಕೇವಲ ಸ್ವಾರ್ಥಕ್ಕಾಗಿ ಮಾತ್ರ ಜೀವಿಸಿದರೆ ಪ್ರಪಂಚಕ್ಕೆ ಸಾಲದು; ಆತ ಪ್ರಪಂಚದ ಪ್ರತಿಯೊಂದು ಜೀವವೂ ಸ್ವತಂತ್ರವಾಗಿ, ನಿರ್ಭೀತವಾಗಿ ಜೀವನ ಮಾಡುವಂತಾಗಬೇಕು. ಆ ರೀತಿಯಲ್ಲಿ ಮಾನವನ ಜೀವಿತ ಇರುವಂತೆ ನೋಡಿಕೊಳ್ಳಬೇಕಾದುದು ಮಾನವನದ್ದೇ ಹೊಣೆಗಾರಿಕೆಯೂ ಹೌದು. ಮಾನವನ ಜೀವನ ಕೇವಲ ತನ್ನ ಉದ್ಧಾರಕ್ಕಾಗಿ ಮಾತ್ರ ಅಲ್ಲ, ತಾನು ಉದ್ಧಾರವಾಗುವುದರ ಜೊತೆಯಲ್ಲಿ ಎಲ್ಲ ಜೀವಜಾತಿಗಳನ್ನು ಒಗ್ಗೂಡಿಸಿಕೊಂಡು ಅವುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅವನ ಜೀವನ ಸಾಗಬೇಕಾದದ್ದು ಎಂಬುದು ಇದರ ಅರ್ಥ. ಹಾಗಾಗಿ ಯಾವ ಮನುಷ್ಯನು ಈ ರೀತಿಯಾಗಿ ಬದುಕುತ್ತಾನೋ ಅವನು ನಿಜವಾದ ಮನುಷ್ಯ ಎಂಬುದಾಗಿ ಕರೆಸಿಕೊಳ್ಳಬಲ್ಲ. ಇದಕ್ಕೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅವನು ರಾಕ್ಷಸನಾಗುತ್ತಾನೆ ಉಳಿದ ಪ್ರಾಣಿಗಳಲ್ಲಿ ಸೌಮ್ಯಪ್ರಾಣಿಗಳು, ಕ್ರೂರಪ್ರಾಣಿಗಳು ಎಂಬುದಾಗಿ ಸೃಷ್ಟಿಸಹಜವಾಗಿ ಆ ಸ್ವಭಾವಕ್ಕೆ ಅನುಗುಣವಾಗಿ ವಿಭಾಗವನ್ನು ಕಾಣಬಹುದು. ಅವು ಬದುಕಿನುದ್ದಕ್ಕೂ ಅದೇ ಸ್ವಭಾವದ್ದಾಗಿರುತ್ತವೆ. ಸ್ವಭಾವಪರಿವರ್ತನೆ ಅಲ್ಲಿ ಅಸಾಧ್ಯ. ಆದರೆ ಮನುಷ್ಯನು ತನ್ನ ಸಜ್ಜನಿಕೆಯಿಂದ ಈ ಪ್ರಪಂಚದಲ್ಲಿ ಸಮತೋಲನವನ್ನು ಉಂಟುಮಾಡುವಂತೆ ಜೀವಿಸಲು ಸಾಧ್ಯ. ದುಷ್ಟನಾಗಿ ಅದನ್ನು ಕೆಡಿಸಲೂ ಸಾಧ್ಯ. ಹಾಗಾಗಿ ಮನುಷ್ಯನ ಸಮತೋಲನವಾದ ಬದುಕು ಹೇಗಿರಬೇಕೆಂದನ್ನು ಪ್ರಶ್ನೋತ್ತರ ಸಾರುತ್ತದೆ.



Sunday, March 2, 2025

ಪ್ರಶ್ನೋತ್ತರ ರತ್ನಮಾಲಿಕೆ 5 (Prasnottara Ratnamalike 5)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ ೫ - ಅತಿಶಯವಾದ ಪಥ್ಯ ಯಾವುದು ?

ಉತ್ತರ -  ಧರ್ಮ 


ಈ ಮುಂದಿನ ಪ್ರಶ್ನೆ 'ಅತಿಶಯವಾದ ಪಥ್ಯ ಯಾವುದು?' ಎಂಬುದಾಗಿ. ಅದಕ್ಕೆ ಉತ್ತರ 'ಧರ್ಮ'. ಈ ಪ್ರಶ್ನೋತ್ತರದಲ್ಲಿ ನಾವು ಚಿಂತಿಸಬೇಕಾದ ವಿಷಯ ಇಷ್ಟು, ಪಥ್ಯ ಎಂದರೇನು? ಅದು ಧರ್ಮ ಹೇಗೆ? ಎಂಬುದು. ಸಾಮಾನ್ಯವಾಗಿ ನಾವು ಪಥ್ಯ ಎಂದರೆ ಅಜೀರ್ಣವಾದಾಗ ಯಾವುದೇ ಆಹಾರವನ್ನು ತೆಗೆದುಕೊಳ್ಳದೆ ಇರುವಂತಹದ್ದು ಎಂಬುದಾಗಿ ಸಾಮಾನ್ಯವಾದ ವಿವರಣೆಯನ್ನು ಕೇಳಿರುತ್ತೇವೆ. ಆದರೆ ಇಲ್ಲಿನ ವಿವರಣೆ ಸ್ವಲ್ಪ ಭಿನ್ನವಾದದು. ಪಥ್ಯ ಎಂದರೆ ಪಥಿ - ಮಾರ್ಗ, ಅದಕ್ಕೆ ಯೋಗ್ಯವಾದದ್ದು ಯಾವುದುಂಟೋ ಅದಕ್ಕೆ 'ಪಥ್ಯ' ಎಂದು ಕರೆಯುತ್ತಾರೆ. ನಮ್ಮ ದಾರಿಯ ಯಾವುದು? ನಮ್ಮ ಗುರಿ ಏನು? ನಮ್ಮ ಗುರಿಗೆ ಅತ್ಯಂತ ಅವಶ್ಯಕವಾದದ್ದು ಯಾವುದು? ಹೀಗೆ ಇದೆಲ್ಲವನ್ನು ಒಟ್ಟಾರೆ ತಿಳಿದಾಗ ಧರ್ಮ ಎಂಬುದು ಪಥ್ಯವಾಗುತ್ತದೆ. ಅಂದರೆ ನಮ್ಮ ದಾರಿ ಯಾವುದು? ಗಮ್ಯ ಸ್ಥಾನ ಯಾವುದು? ಆ ಧರ್ಮವು ಗಮ್ಯವನ್ನು ತಲುಪಲು ಹೇಗೆ ಸಹಕಾರಿಯಾಗುತ್ತದೆ? ಎಂಬುದು ಇಲ್ಲಿ ಚಿಂತಿಸಬೇಕಾದ ವಿಷಯವಾಗಿದೆ.


ಪ್ರತಿಯೊಬ್ಬ ಮಾನವನು ಜನ್ಮ ಪಡೆದ ಮೇಲೆ ಸಾಧಿಸಬೇಕಾದದ್ದು ಅದುವೇ ಮೋಕ್ಷ. ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು - "ಮಾನವ ಜನ್ಮ ಪಡೆದ ಆ ಕ್ಷಣದಿಂದ ಅವನ ಹಕ್ಕಾಗಿರುವಂತದ್ದು ಮೋಕ್ಷಪ್ಪ, ಹೇಗೆ ಭಾರತೀಯ ಪ್ರಜೆಗೆ ಹದಿನೆಂಟು ವರ್ಷವಾದರೆ ಮತ ಚಲಾಯಿಸುವ ಹಕ್ಕು ತಾನಾಗಿಯೇ ಬರುತ್ತದೆಯೋ, ಹಾಗೆ ಮನುಷ್ಯ ಜನ್ಮ ಪಡೆದಾಗಲೇ ಅವನಿಗೆ ಮೋಕ್ಷ ಪಡೆಯುವುದು ಕೂಡ ಹಕ್ಕಾಗಿ ಬರುತ್ತದೆ" ಎಂಬುದಾಗಿ. ಅಂದರೆ ನಾವು ಪಡೆಯಲೇ ಬೇಕಾದುದು. ಅಲ್ಲ ಸಿಗಬೇಕದುದು ಮುಕ್ತಿ. ಆದ್ದರಿಂದಲೇ ಅದಕ್ಕೆ ಅಪವರ್ಗ ಎಂದೂ ಹೇಳುತ್ತಾರೆ. ಧರ್ಮ, ಅರ್ಥ ಮತ್ತು ಕಾಮ ಎಂಬ ಮೂರು ಪುರುಷಾರ್ಥಗಳನ್ನು ಪಡೆದು ಅವು ಮೂರನ್ನು ಬಿಟ್ಟಾಗ ಸಿಗುವಂತಹದ್ದು ಯಾವುದಿದೆಯೋ ಅದಕ್ಕೆ ಮೋಕ್ಷ ಎಂಬುದಾಗಿ ಕರೆಯುತ್ತಾರೆ. ಹಾಗಾಗಿ ಇದು ಅಪವರ್ಗ. ಧರ್ಮವು ಅತ್ಯಂತ ಅವಶ್ಯಕವಾಗಿ ಬೇಕಾಗಿದದ್ದು.


ಹಾಗಾದರೆ ಧರ್ಮ ಎಂದರೇನು? ಈ ಮೋಕ್ಷವನ್ನು ಪಡೆಯಲು ಧರ್ಮ ಹೇಗೆ ಸಹಕಾರಿ? ಅಂದರೆ ನಾವು ಕೇಳುವಂತಹ 'ಧರ್ಮ' ಎಂಬ ಶಬ್ದವು ಸಾಮಾನ್ಯವಾಗಿ ಬೇರೆ ಬೇರೆ ಅರ್ಥದಲ್ಲಿ ಇದೆ. ಆದರೆ ಆ ಎಲ್ಲಾ ಅರ್ಥವನ್ನು ವಿವರಿಸುವ ಸಂದರ್ಭ ಇದಲ್ಲ ಎಂಬುದಾಗಿ ಭಾವಿಸಿ, ಧರ್ಮ ಎಂಬ ಶಬ್ದಕ್ಕೆ ಒಂದು ಬಗೆಯ ಕಂಡೀಶನ್ ಅಥವಾ ಒಂದು ಸ್ಥಿತಿ ಎಂಬುದಾಗಿ ಶ್ರೀರಂಗಮಹಾಗುರುಗಳು ನೀಡಿದ ವಿವರಣೆಯನ್ನು ಮುಂದಿಟ್ಟುಕೊಂಡು ಧರ್ಮವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಅದನ್ನು ನಾವಿಲ್ಲಿ ತೆಗೆದುಕೊಂಡು ಧರ್ಮ ಎಂದರೆ ಮೋಕ್ಷವನ್ನು ಪಡೆಯಲು ಆಗುವ ಸ್ಥಿತಿ. ಮತ್ತು ಅದನ್ನು ಪಡೆಯುವ ಸಾಧನ. ಒಂದು ಉದಾಹರಣೆಯನ್ನು ಗಮನಿಸುವುದಾದರೆ, ನಾವು ನಿದ್ದೆಯನ್ನು ಮಾಡುತ್ತೇವೆ. ವಸ್ತುತಃ ನಿದ್ದೆ ಮಾಡುವಂತದ್ದಲ್ಲ; ಅದು ಬರುವಂತದ್ದು. ನಿದ್ದೆಗೆ ಪ್ರತಿಬಂಧಕವಾದ ವಿಷಯಗಳನ್ನೆಲ್ಲಾ ದೂರ ಮಾಡಿದಾಗ ನಿದ್ದೆಗೆ ಬೇಕಾದ ಸಂದರ್ಭ ತಾನಾಗಿಯೇ ಬರುತ್ತದೆ; ನಿದ್ದೆ ತಾನಾಗಿಯೇ ಹತ್ತುತ್ತದೆ. ಹಾಗೆಯೇ ಮುಕ್ತಿಗೆ ಪ್ರತಿಬಂಧಕವಾದದ್ದನ್ನು ತೆಗೆದಾಗ, ದೂರ ಮಾಡಿಕೊಂಡಾಗ ಆ ಮುಕ್ತಿಯು ಅಥವಾ ಮೋಕ್ಷವು ಸಹಜವಾಗಿ ಸಿದ್ಧವಾಗುವುದು ಎಂಬುದು ಇದರ ತಾತ್ಪರ್ಯ. ಹಾಗಾಗಿ ಮೋಕ್ಷ ಎಂಬ ಗಮ್ಯಸ್ಥಾನಕ್ಕೆ ಧರ್ಮ ಎಂಬುದು ಪಥ್ಯ, ಆ ಮಾರ್ಗಕ್ಕೆ ಅತ್ಯಂತ ಉಚಿತವಾದದು ಎಂಬುದು ಈ ಪ್ರಶ್ನೋತ್ತರ ಸಾರವಾಗಿದೆ

ಸೂಚನೆ : 2/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Monday, February 24, 2025

ಪ್ರಶ್ನೋತ್ತರ ರತ್ನಮಾಲಿಕೆ 4 (Prasnottara Ratnamalike 4)


ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ 4 - ಸಂಸಾರದಲ್ಲಿ ಸಾರ ಯಾವುದು ?

ಉತ್ತರ -  ಪರಮಾತ್ಮತತ್ತ್ವ.


ಈ ಹಿಂದಿನ ಪ್ರಶ್ನೆಯಲ್ಲಿ 'ನಾವು ಸಂಸಾರವನ್ನು ಬಿಡಬೇಕು; ಸಂಸಾರದ ಸಂಬಂಧವನ್ನು ಕತ್ತರಿಸಿಕೊಳ್ಳಬೇಕು ಬುದ್ಧಿವಂತನಾದವನು' ಎಂಬ ವಿಷಯವನ್ನು ಚರ್ಚಿಸಲಾಗಿತ್ತು. ಆದರೆ ಈ ಪ್ರಶ್ನೆಯಲ್ಲಿ ನಾವು ಚಿಂತಿಸಬೇಕಾದ ವಿಷಯ ಹೀಗಿದೆ - ಸಂಸಾರದಲ್ಲೂ ಕೂಡ ಸಾರ ಯಾವುದಾದರೂ ಇದೆಯೇ? ಎಂಬುದಾಗಿ. ಅದಕ್ಕೆ ಉತ್ತರ ಪರಮಾತ್ಮತತ್ತ್ವ ಎಂಬುದಾಗಿ. ಇಲ್ಲಿ 'ಸಂಸಾರ' ಎಂಬ ಪದವನ್ನೇ ನಾವು ವಿಶ್ಲೇಷಿಸಿದಾಗ ಅರ್ಥ ಮಾಡಿಕೊಳ್ಳಬಹುದು; ಸಮ್- ಸಮ್ಯಕ್-ಒಳ್ಳೆಯದಾದ, ಸಾರ-ಅತಿಮುಖ್ಯವಾದ ಭಾಗ. ಸಂಸಾರ ಅಂದರೆ ಸಂಸಾರದಲ್ಲೂ ಬೇಕಾದ ಭಾಗ ಇದ್ದೇ ಇದೆ ಎಂಬುದನ್ನು ಸಂಸಾರವೆಂಬ ಪದವೇ ನಮಗೆ ತಿಳಿಸುತ್ತದೆ. ಹಾಗಾದರೆ ಆ ಭಾಗ ಯಾವುದು? ಅದನ್ನೇ 'ಪರಮಾತ್ಮತತ್ತ್ವ' ಎಂಬುದಾಗಿ ಕರೆಯಲಾಗಿದೆ. ಅಂದರೆ ಭಗವಂತನನ್ನು ಈ ಸಂಸಾರದಲ್ಲಿ ಭಗವಂತನನ್ನು ಭಾವಿಸಿದರೆ ಆ ಸಂಸಾರವೂ ಕೂಡ ನಮಗೆ ಸಾರವಾಗಿಯೇ ಗೋಚರವಾಗುತ್ತದೆ. ಸಂಸಾರದಲ್ಲಿ ಪರಮಾತ್ಮತತ್ತ್ವವನ್ನು ಚಿಂತಿಸುವುದು ಹೇಗೆ? ಸಂಸಾರವೆಂ


ಬಂತಹ ಈ ಸಾಗರದಲ್ಲಿ ಅದಕ್ಕೆ ಅವಕಾಶವಿದೆಯೇ ಎಂಬ ಪ್ರಶ್ನೆ ಬರಬಹುದು. ಹೌದು, ಅದರಲ್ಲಿಯೇ ಚಿಂತಿಸಬೇಕಾದದ್ದು ಪರಮಾತ್ಮತತ್ತ್ವ. ಉದಾಹರಣೆಗೆ ಒಂದು ತೆಂಗಿನಕಾಯಿ. ಇದರಲ್ಲಿ ನಮಗೆ ಬೇಕಾದ ಅತಿಮುಖ್ಯವಾದ ಭಾಗವೆಂದರೆ ಕೊಬರಿ. ಅದಕ್ಕೆ ಹೊರಗಡೆ ಕರಟ, ಮೊಟ್ಟೆ ಮುಂತಾದ ಭಾಗಗಳನ್ನೆಲ್ಲಾ ಸೇರಿಸಿಕೊಂಡು ತೆಂಗು ಎಂದೇ ಕರೆಯುತ್ತೇವೆ. ಕೊಬರಿಗಾಗಿ ಉಳಿದೆಲ್ಲಾ ಭಾಗವನ್ನು ಕಾಪಿಡುತ್ತೇವೆ. ಅಲ್ಲಿಯವರೆಗೆ ಆ ಎಲ್ಲಾ ಭಾಗವನ್ನೂ ತೆಂಗು ಎಂದೆ ಕರೆಯುತ್ತೇವೆ. 


ಯಾವಾಗ ಒಳಗಡೆಯ ಸಾರವಾದ ಭಾಗವನ್ನು ಉಪಯೋಗಿಸಿಕೊಳ್ಳುತ್ತೇವೋ ಆಗ ಉಳಿದ ಭಾಗವನ್ನು ಎಸೆಯುತ್ತೇವೆ. ಏಕೆಂದರೆ ಕರಟವಾಗಲಿ ನಾರಾಗಲಿ ಅಡಿಗೆಗೆ ಉಪಯೋಗವಾಗುವುದಿಲ್ಲವಷ್ಟೇ. ಕೊನೆಯಲ್ಲಿ ನಾವು ಪಡೆಯಬೇಕಾದದ್ದು ಕೊಬ್ಬರಿಯನ್ನು ಅಷ್ಟೇ. ಹಾಗಾಗಿ ಹೊರಕವಚವನ್ನು ಚೆನ್ನಾಗಿಯೇ ನೋಡಿಕೊಳ್ಳಬೇಕಾದುದು ಕರ್ತವ್ಯವಷ್ಟೆ. ಇನ್ನೊಂದು ಉದಾಹರಣೆಯನ್ನು ಗಮನಿಸೋಣ. ರಾಮಾಯಣ ಎಂಬ ಗ್ರಂಥವು ರಾಮನ ಚರಿತ್ರವನ್ನು ಸಾರುವ ಗ್ರಂಥವಾಗಿದೆ. ರಾಮಾಯಣ ಎಂದರೆ  ಪುಸ್ತಕವೇ? ಅಥವಾ ಅದಕ್ಕೆ ಹಾಕಿದ ಬಾಯಿಂಡೇ? ಅಥವಾ ಅಲ್ಲಿ ಬರುವ ಏಳು ಕಾಂಡಗಳು, ಇಪ್ಪತ್ತ ನಾಲ್ಕು ಸಹಸ್ರ ಶ್ಲೋಕಗಳೇ? ವಸ್ತುತಃ ಅಲ್ಲ. ರಾಮನೆಂಬ ತತ್ತ್ವ ನಮಗರ್ಥವಾಗುವ ತನಕ ಅವೆಲ್ಲವೂ ರಾಮಯಣವೇ? ಅಲ್ಲಿಯತನಕ ರಾಮ ಎಂಬ ತತ್ತ್ವಕ್ಕೆ ಸಲ್ಲಿಸುವ ಗೌರವವನ್ನು ಅಲ್ಲೆಲ್ಲಾ ಸಲ್ಲಿಸುತ್ತೇವೆ. ಯಾವಾಗ ರಾಮನೇ ಅನುಭವಕ್ಕೆ ಬರುತ್ತಾನೋ ಆಗ ಬಾಯಿಂಡ್, ಪುಸ್ತಕ, ಶ್ಲೋಕಗಳೆಲ್ಲವೂ ಬೇಡವಾಗುತ್ತವೆ. ಹಾಗೆ ಈ ಸಂಸಾರದಲ್ಲೇ ಈ ಪರಮಾತ್ಮತತ್ತ್ವ ಎಂಬುದು ಅಡಗಿದೆ. ನಾವು ತಿಳಿದುಕೊಳ್ಳಬೇಕಾದುದು ಅದುವೇ ಆಗಿದೆ. ಆ ಭಗವಂತನು ಸಿಗುವ ತನಕ ಸಂಸಾರವನ್ನು ಸಾರವಾಗಿ ಕಾಣಬೇಕು. ಆದರೆ ಒಂದು ಎಚ್ಚರಿಕೆಯೇನೆಂದರೆ ಯಾವತ್ತೂ ಸಂಸಾರವೇ ಸಾರವೆಂದು ಭಾವಿಸಬಾರದು. ಒಂದರ್ಥದಲ್ಲಿ ಸಂಸಾರ ಮತ್ತು ಪರಮಾತ್ಮಾ ಇವೆರಡು ಪೃಥಕ್ಕಾಗಿ ಇರುವಂತಹ ಪದಾರ್ಥವಲ್ಲ. ಒಂದಾಗಿ ಇರುವಂತಹದ್ದು. ಆದರೆ ಅದನ್ನು ನಾವು ಕೆಲವೊಮ್ಮೆ ಬೇರಾಗಿ ತಿಳಿದುಕೊಳ್ಳುತ್ತೇವೆ. ಆದರೂ ಸಂಸಾರದಲ್ಲೂ ಅಂತಹ ಒಂದು ತತ್ವ ಅಡಗಿದೆ ಎಂಬುದನ್ನು ತಿಳಿಯಬೇಕು ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 23/2/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.