ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪರ್ವ ಕಾಲಾಧಾರಿತ
ಭಾರತೀಯರ ಹಬ್ಬಗಳು ಕಾಲದ ಆಧಾರದಲ್ಲಿಯೇ ಆಚರಿಸಲ್ಪಡುತ್ತವೆ. ಕಾಲಕ್ಕೂ ಹಬ್ಬಕ್ಕೂ ಅವಿನಾಭಾವ ಸಂಬಂಧ ಇದೆ. ಇಂತಹ ಕಾಲದಲ್ಲಿ ಇಂತಹದ್ದೇ ಹಬ್ಬವನ್ನು ಆಚರಿಸಬೇಕೆಂಬ ವಿಧಾನ ಇದೆ. ಕಾಲವೇ ಆ ಹಬ್ಬಕ್ಕೆ ಬೇಕಾದ ಸಂದರ್ಭ - ಸನ್ನಿವೇಶಗಳನ್ನು ಒದಗಿಸಿಕೊಡುತ್ತದೆ. ಹಾಗಾಗಿ ಕಾಲ ಮತ್ತು ಪರ್ವ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾವು ಕಾಲವನ್ನು ಬಿಟ್ಟು ಹಬ್ಬವನ್ನು ಆಚರಿಸಲು ಸಾಧ್ಯವೇ ಇಲ್ಲ. ಭಾರತೀಯರ ಕಾಲಗಣನೆ ಇಂದು ನಿನ್ನೆಯದಲ್ಲ. ಇದನ್ನು ಅಳೆಯುವುದು ಸುಲಭಸಾಧ್ಯವಲ್ಲ. ಏಕೆಂದರೆ ಈ ಕಾಲಗಣನೆ ಎಂದಿನಿಂದ ಆರಂಭವಾಯಿತು? ಭಗವಂತನ ಸೃಷ್ಟಿಯ ಆರಂಭವೇ ಕಾಲದ ಆರಂಭ. ಅಷ್ಟು ಹಿಂದಿನಿಂದ ಈ ಕಾಲದ ಗಣನೆ ಬಂದಿದೆ. ಈ ಕಾಲದ ಆರಂಭವು ಬ್ರಹ್ಮನ ಆಯುಷ್ಯದಿಂದ ಆರಂಭವಾಗಿ, ಸೂಕ್ಷ್ಮಾತಿ ಸೂಕ್ಷ್ಮವಾದ ಕಾಲದವರೆಗೆ ವಿಸ್ತೃತವಾಗಿದೆ. ಇಂತಹ ಕಾಲದ ಘಟ್ಟದ ಆರಂಭವನ್ನು ಸೂಚಿಸುವ ಅತ್ಯಂತ ವಿಶೇಷವಾದ ಪರ್ವವೇ ಯುಗಾದಿ.
ನಾಲ್ಕು ಯುಗಗಳು
ಇಲ್ಲಿ 'ಯುಗಾದಿ' ಎಂದು ಹೆಸರೇ ಹೇಳುವಂತೆ ಈ ಪರ್ವವು ಯುಗದ ಆರಂಭವನ್ನು ತಿಳಿಸುತ್ತದೆ. ಕಾಲದ ಗಣನೆಯಲ್ಲಿ ಕೃತ, ತ್ರೇತ, ದ್ವಾಪರ ಮತ್ತು ಕಲಿ ಎಂಬುದಾಗಿ ನಾಲ್ಕು ಯುಗಗಳನ್ನು ಹೇಳಲಾಗಿದೆ. ಈ ನಾಲ್ಕು ಯುಗಗಳು ಆಗಾಗ ಆವರ್ತನೆಗೊಳ್ಳುತ್ತವೆ. ಒಂದೊಂದು ಯುಗಕ್ಕೂ ನಿರ್ದಿಷ್ಟವಾದ ಕಾಲ ಪರಿಮಾಣವಿದೆ. ಸಾಮಾನ್ಯವಾಗಿ ಕೃತಯುಗಕ್ಕೆ ೧೭೨೮೦೦೦ ವರ್ಷಗಳು, ತ್ರೇತಾಯುಗಕ್ಕೆ ೧೨೯೬೦೦೦ ವರ್ಷಗಳು, ದ್ವಾಪರಯುಗಕ್ಕೆ ೮೬೪೦೦೦ ವರ್ಷಗಳು ಮತ್ತು ಕಲಿಯುಗಕ್ಕೆ ೪೩೨೦೦೦ ವರ್ಷಗಳು ಎಂಬುದಾಗಿ. ಇಂತಹ ನಾಲ್ಕು ಯುಗಗಳು ಸೇರಿ ಒಂದು ಮಹಾಯುಗವಾಗುತ್ತದೆ. ಅಂತಹ ೭೧ ಯುಗಗಳಿಗೆ ಒಂದು ಮನ್ವಂತರವಾಗುತ್ತದೆ. ಒಟ್ಟು ಹದಿನಾಲ್ಕು ಮನ್ವಂತರಗಳಿವೆ. ಹಾಗಾಗಿ ಈ ಯುಗ ಎಂಬುದು ಯಾವುದೋ ಒಂದು ದಿನ ಆರಂಭವಾಗಿದೆ ಅನ್ನುವುದಲ್ಲ. ಇದು ಮತ್ತೆ ಮತ್ತೆ ಪರಿವರ್ತನೆಯಾಗುತ್ತದೆ ಎಂಬುದು ತಾತ್ಪರ್ಯ. ಈ ಹಿನ್ನೆಲೆಯಲ್ಲಿ ನೋಡಿದಾಗ ನಾಲ್ಕು ಯುಗದ ಆರಂಭವನ್ನು ಕಾಲವಿಧಾಯಕ ಶಾಸ್ತ್ರವಾದ ಜ್ಯೋತಿಷ್ಯದಲ್ಲಿ ಹೀಗೆ ಹೇಳಲಾಗಿದೆ. ಕಾರ್ತಿಕ ಶುಕ್ಲ ನವಮಿಯಂದು ಕೃತಯುಗದ ಆರಂಭ, ವೈಶಾಖ ಶುಕ್ಲ ಪಕ್ಷದ ತೃತೀಯಾ ತ್ರೇತಾಯುಗದ ಆರಂಭ, ಮಾಘ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯು ದ್ವಾಪರಾಯುಗದ ಆರಂಭ ಮತ್ತು ಶ್ರಾವಣ ಮಾಸದ ಅಮಾವಾಸ್ಯೆಯು ಕಲಿಯುಗದ ಆರಂಭ ಎಂಬುದಾಗಿ ಯುಗದ ಆರಂಭದ ದಿನಗಳನ್ನು ಹೇಳಲಾಗಿದೆ. ಅಂದರೆ ನಾವು ಈಗ ಈ ಯುಗಾದಿಯನ್ನು ವಸಂತ ಋತುವಿನ ಚೈತ್ರ ಮಾಸದ ಆರಂಭದ ದಿನ ಚಾಂದ್ರಮಾನ ಯುಗಾದಿ ಎಂತಲೂ ಸೌರಮಾಸಗಳಲ್ಲಿ ಮೇಷ ಮಾಸದ ಆರಂಭದ ದಿನವನ್ನು ಸೌರಮಾನ ಯುಗಾದಿ ಎಂಬುದಾಗಿಯೂ ಆಚರಣೆ ಮಾಡುತ್ತೇವೆ. ಚಾಂದ್ರಮಾನ ಯುಗಾದಿ ಎಂಬುದು ಚೈತ್ರಾದಿ ಮಾಸಗಳಿಂದ ಗಣನೆಮಾಡುವ ನೂತನ ವರ್ಷದ ಆರಂಭಕಾಲ. ಸೌರಮಾನ ಯುಗಾದಿ ಎಂಬುದು ಮೇಷಾದಿ ಮಾಸಗಳಿಂದ ಗಣನೆಮಾಡುವ ನೂತನ ವರ್ಷದ ಆರಂಭಕಾಲ. ಹೀಗೆ ಯುಗಾದಿ ಎಂಬುದನ್ನು ನಾವಿಂದು ಆಚರಿಸುತ್ತಿದ್ದೇವೆ. ಯಾವುದೋ ಒಂದು ಕಾಲಘಟ್ಟದಲ್ಲಿ ಈ ಯುಗಾದಿಯು ಚೈತ್ರಮಾಸದ ಶುಕ್ಲಪಕ್ಷದ ಪ್ರತಿಪತ್ ಭಾನುವಾಸರ ಅಶ್ವಿನಿನಕ್ಷತ್ರದಂದೇ ಆರಂಭವಾಗಿತ್ತು. ಕಾಲಾಂತರದಲ್ಲಿ ಅವುಗಳಲ್ಲಿ ವ್ಯತ್ಯಯ ಆಗಿದೆ. ಈಗ ಭಾನುವಾಸರ ಅಥವಾ ಅಶ್ವಿನಿನಕ್ಷತ್ರದಂದೇ ಯುಗಾದಿ ಆರಂಭವಾಗಬೇಕೆಂಬ ನಿಯಮವಿಲ್ಲ. ಮಾಸದ ಮೊದಲ ದಿನವನ್ನು ಯುಗಾದಿಯಾಗಿ ಪರಿಗಣಿಸುತ್ತೇವೆ. ಚಂದ್ರಮಾಸ ಅಥವಾ ಸೌರಮಾಸದ ಆದಿಯನ್ನು ಸಾಮಾನ್ಯವಾಗಿ ಯುಗಾದಿ ಎಂಬುದಾಗಿ ಇಟ್ಟುಕೊಂಡಿದ್ದೇವೆ. ಭಾರತೀಯರ ಕಾಲಗಣನೆಯು ಸೂರ್ಯ ಮತ್ತು ಚಂದ್ರನ ಆಧರಿಸಿ ಇದೆ. ಅದು ಸೂರ್ಯ ಚಂದ್ರರು ಎಷ್ಟು ನಿಖರವೋ ಅಷ್ಟೇ ನಿಖರವಾದದ್ದು ಭಾರತೀಯರ ಕಾಲಮಾನ. ಹಾಗಾಗಿ ಈ ಯುಗಾದಿಯ ಆರಂಭದಲ್ಲಿ ಕಿಂಚಿತ್ತೂ ವ್ತ್ಯಯಯ ಆಗುವುದಿಲ್ಲ. ಇಂತಹ ವಿಶಿಷ್ಟವಾದ ಕಾಲ ಗಣನೆಯ ಆರಂಭವನ್ನು 'ಯುಗಾದಿ' ಎಂಬುದಾಗಿ ಕರೆಯಲಾಗಿದೆ.
ಯುಗಾದಿ ಹಬ್ಬ ಏಕೆ?
ಈ ಯುಗಾದಿಯು ಒಂದು ಹಬ್ಬವಾಗಿದೆ, ಪರ್ವಕಾಲವಾಗಿದೆ. ಯಾವುದೇ ಆರಂಭವೂ ಇನ್ನೊಂದರ ಮುಕ್ತಾಯದ ಸಂಕೇತವಾಗಿರುತ್ತದೆ. ಅಂದರೆ ಒಂದರ ಮುಕ್ತಾಯ ಇನ್ನೊಂದರ ಆರಂಭ. ಭಾನುವಾರ ಮುಕ್ತಾಯ ಎಂದರೆ ಸೋಮವಾರದ ಆರಂಭವಷ್ಟೆ. ಅಶ್ವಿನಿಯ ಮುಕ್ತಾಯವೆಂಬುದು ಭರಣಿಯ ಆರಂಭವಲ್ಲವೇ! ಇದನ್ನೇ ಸಂಧಿಯೆಂದು ಕರೆಯಲಾಗಿದೆ. ಇದನ್ನೇ 'ಪರ್ವ' ಎಂಬುದಾಗಿ ಗುರುತಿಸಿ ಇದು ಅತ್ಯಂತ ಪವಿತ್ರವಾದ ಕಾಲ ಎಂಬುದಾಗಿ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಪರ್ವಕಾಲವು ಭಗವಂತನ ಉಪಾಸನೆ, ಪೂಜೆ, ಧ್ಯಾನ ಮೊದಲಾದ ವಿಷಯಗಳಿಗೆ ಅತ್ಯಂತ ಅನುಕೂಲವಾದದ್ದು ಎಂಬುದು ಜ್ಞಾನಿಗಳ ಅನುಭವದಿಂದ ಮತ್ತು ವೇದ ಶಾಸ್ತ್ರ ಮೊದಲಾದ ಗ್ರಂಥಗಳ ಆಧಾರದಿಂದ ತೀರ್ಮಾನವಾಗಿದೆ. ಈ ಪರ್ವದಂದು ನಾವು ಹೇಗೆ ಹಬ್ಬವಾಗಿ ಆಚರಿಸುತ್ತಿದ್ದೇವೆ, ಇದರ ಗುಣಲಕ್ಷಣಗಳೇನು ಇತ್ಯಾದಿ ವಿಚಾರಗಳನ್ನು ನಾವು ಚಿಂತಿಸಬೇಕಾಗಿದೆ.
ಸೂಚನೆ: 27/3//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.