ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಎಷ್ಟೋ ವೇಳೆ ಯಾವುದೋ ವಿಷಯದಲ್ಲಿ ಮುಳುಗಿರುತ್ತೇವೆ. ಎದುರಿಗೆ ಸಿಕ್ಕವರನ್ನು ಮತ್ತಾವುದೋ ಹೆಸರಿನಿಂದ ಮಾತನಾಡಿಸಿಬಿಡುತ್ತೇವೆ. ಪರಿಣಾಮವಾಗಿ, ನಗೆಗೀಡಾಗುತ್ತೇವೆ.
ಸಾಧಾರಣವ್ಯವಹಾರದಲ್ಲಿ ಇದು ಬರೀ ನಗುವಿಗಾಗಬಹುದು. ಆದರೆ ಒಬ್ಬಳನ್ನು ಬೇರೊಬ್ಬಳ ಹೆಸರಿನಿಂದ ಸಂಬೋಧಿಸಿಬಿಟ್ಟರೆ, ಕಥೆ ಮುಗಿಯಿತು. ಸ್ತ್ರೀಯರಲ್ಲಿ ಕೆಲಸಮಾಡುವಷ್ಟು ಪ್ರಬಲವಾಗಿ ಗಂಡಸರಲ್ಲಿ ಕೆಲಸಮಾಡುವುದಿಲ್ಲವೋ ಏನೋ, ಅಸೂಯೆಯೆಂಬುದು. ಕೃಷ್ಣನಿಗೇ ಹಾಗೊಮ್ಮೆ ಆಯಿತಂತೆ. ರಾಧೆಯ ಸುಂದರ-ಗೃಹದಿಂದ ಹಿಂದಿರುಗಿಬರುತ್ತಿರುವಾಗ, ದಾರಿಯಲ್ಲಿ ಚಂದ್ರಾವಳಿಯೆಂಬ ಗೋಪಿಕೆ ಎದುರಾದಳು. ಆದರೆ ರಾಧೆಯ ಗುಂಗಿನಲ್ಲೇ ಇದ್ದ ಕೃಷ್ಣ, ಚಂದ್ರಾವಳಿಯನ್ನು ಕುರಿತು, "ರಾಧೆಯೇ, ಕ್ಷೇಮವೇ?" ಎಂದ.
ಪ್ರೀತಿಯಿಂದಿರುವ ಒಬ್ಬ ನಾರಿಗೆ ತುಂಬ ಕೋಪ ಬರಿಸುವ ವಿಷಯವೆಂದರೆ ಅವಳನ್ನು ಬೇರೊಬ್ಬಳ ಹೆಸರಿನಿಂದ ಕರೆಯುವುದು. ಯಾರ ಹೆಸರು ಬಾಯಲ್ಲಿ ಬಂದಿತೋ ಅವರಲ್ಲಿಯೇ ಅನುರಕ್ತಿ ಹೆಚ್ಚಿದೆಯೆಂಬ ಶಂಕೆಯು ಆಗ ಉಕ್ಕುವುದು. ಅನುರಕ್ತಿಯೆಂದರೆ ಅನುರಾಗವೇ. ಪ್ರೇಮವನ್ನು ಹಂಚಿಕೊಳ್ಳುವುದೇನು ಸುಲಭವೇ? ಕೃಷ್ಣನಿಗಾದರೂ ಹೆಂಗೆಳೆಯರೇನು ಕಡಿಮೆಯೇ? ಅವರಲ್ಲಿ ಪ್ರತಿಯೊಬ್ಬರಿಗೂ ತಾನೇ ಕೃಷ್ಣನಿಗೆ ಅಚ್ಚುಮೆಚ್ಚು - ಎಂಬ ಭಾವನೆ. ಕೃಷ್ಣನೇನೂ ಒಬ್ಬರಿಗೆ ನೋವಾಗುವಂತೆ ಮತ್ತೊಬ್ಬರೊಂದಿಗೆ ವರ್ತಿಸುವವನಲ್ಲ. ಅದು ಇತ್ತ ಆತನ ವ್ಯವಹಾರಕುಶಲತೆಯೂ ಹೌದು, ಅತ್ತ ಸರ್ವಜೀವ-ಸಮಾನಪ್ರೀತಿಯ ಸುಲಕ್ಷಣವೂ ಹೌದು.
ಯಾರೇ ಆದರೂ ಒಮ್ಮೊಮ್ಮೆ, ಬಹಳ ಅಪರೂಪವಾಗಿಯಾದರೂ, ಸಣ್ಣ ತಪ್ಪೊಂದನ್ನು ಮಾಡಿದರೆ ಆಶ್ಚರ್ಯವಿಲ್ಲ; ಆದರೆ ಇಂತಹ ತಪ್ಪು ಮಾತ್ರ ಕೆರಳಿಸುವಂತಹುದೇ. ಅಂತೂ ಇಲ್ಲಾಗಿರುವುದು ಹಾಗೆಯೇ. ನಾರಿಯರಿಗೆ ವಾಕ್-ಚಾತುರ್ಯವೆಂಬುದು ಹೇಳಿಕೊಟ್ಟು ಬರಬೇಕಾದುದಿಲ್ಲ. ಅದು ಅವರಿಗೆ ಸಹಜವಾಗಿ ಸ್ಫುರಿಸುವಂತಹುದು. ಇದನ್ನು "ಅಶಿಕ್ಷಿತ-ಪಟುತ್ವ"ವೆನ್ನುವರು. ಎಂದರೆ ಶಿಕ್ಷಣ ಕೊಟ್ಟಿಲ್ಲದೆಯೂ ಬಂದಿರುವ ಪಟುತ್ವ. ಎಂದೇ ಚಂದ್ರಾವಳಿಯು ಕೃಷ್ಣನ ಮೇಲೆ ಕೆಂಡವಾಗುವುದರ ಬದಲು, ಅದೇ ಧಾಟಿಯಲ್ಲಿ, "ಕಂಸನೇ, ನೀ ಕ್ಷೇಮವೇ?" ಎಂದು ಚೆನ್ನಾಗಿಯೇ ಚುಚ್ಚಿ ಕೇಳಿದಳು.
ಇದೇನಿವಳಿಗೆ ಇಂತಹ ಭ್ರಮೆ? ನಾನೆಲ್ಲಿ ಕಂಸನೆಲ್ಲಿ? - ಎಂದೆನಿಸಿತು ಕೃಷ್ಣನಿಗೆ. "ಅಯ್ಯೋ ಮುಗ್ಧೇ, ಕಂಸನನ್ನೆಲ್ಲಿ ಕಂಡೆ?" - ಎಂದು ಕೇಳಿದ. ಅದಕ್ಕವಳು, "ರಾಧೆಯೆಲ್ಲಿ?" ಎಂದು ಕೇಳಿಯೇಬಿಟ್ಟಳು. ನಾಚಿಕೆಯಾಯಿತು, ಕೃಷ್ಣನಿಗೆ. ಇನ್ನೇನು ಮಾಡಿಯಾನು? ಪೆಚ್ಚಾಗಿ ಮುಗುಳ್ನಕ್ಕ. ಈ ಪರಿಯ ಹಸಿತದ ಹರಿಯು ಪೊರೆಯಲೆಮ್ಮನು - ಎನ್ನುತ್ತಾನೆ, ಲೀಲಾಶುಕ.
ರಾಧಾಮೋಹನ-ಮಂದಿರಾದುಪಗತಃ ಚಂದ್ರಾವಲೀಮೂಚಿವಾನ್/
"ರಾಧೇ ಕ್ಷೇಮಮಯೇಽಸ್ತಿ?", ತಸ್ಯ ವಚನಂ ಶ್ರುತ್ವಾಽಽಹ ಚಂದ್ರಾವಲೀ |
"ಕಂಸ, ಕ್ಷೇಮಂ?" "ಅಯೇ ವಿಮುಗ್ಧಹೃದಯೇ! ಕಂಸಃ ಕ್ವ ದೃಷ್ಟಸ್ತ್ವಯಾ?"/
"ರಾಧಾ ಕ್ವೇ"ತಿ - ವಿಲಜ್ಜಿತೋ ನತಮುಖಃ ಸ್ಮೇರೋ ಹರಿಃ ಪಾತು ವಃ ||
ಇನ್ನೂ ಸೊಗಸಿನ ಈ ಪದ್ಯದ ಪರಿ ನೋಡಿ. ಈಗ ಕೇವಲ ಐವತ್ತು ವರ್ಷಗಳ ಹಿಂದೆ ಇಂದಿರುವ ಸಂನಿವೇಶವಿರಲಿಲ್ಲ. ಹಾಲು-ಮೊಸರುಗಳೆಂದರೆ ಪ್ಲಾಸ್ಟಿಕ್ ಕವರ್ ಗಳಲ್ಲಿ ಈಗ ಲಭ್ಯ. ಆಗೆಂದರೆ ಗೋಪಾಲಕರಲ್ಲಿಗೆ ನಾವೇ ಪಾತ್ರೆಯನ್ನು ತೆಗೆದುಕೊಂಡು ಹೋಗಿ ಹಾಲನ್ನೋ ಮೊಸರನ್ನೋ ತರುತ್ತಿದ್ದೆವು.
ಆದರೆ ಅದಕ್ಕೂ ಮೊದಲು ಶತಮಾನಗಟ್ಟಲೆ ಇದ್ದ ಸಂನಿವೇಶ ಬೇರೆ. ಮಡಕೆಗಳಲ್ಲಿ ಹೊತ್ತು ಹಾಲನ್ನೋ ಮೊಸರನ್ನೋ ಮಾರುತ್ತಿದ್ದರು. ಇಲ್ಲವೇ ಮನೆಯ ಮುಂದೆಯೇ ಹಸುವನ್ನು ತಂದು, ಮರಕ್ಕೋ ಕಂಬಕ್ಕೋ ಕಟ್ಟಿಹಾಕಿ, ಹಸಿವಿಗೆಂದು ಹಸುವಿಗೆ ಒಂದಷ್ಟು ಮೇವನ್ನು ಹಾಕಿ, ಅದು ಮೇಯುವುದರೊಳಗೆ ಹಾಲನ್ನು ಕರೆದುಕೊಡುವುದಾಗಿತ್ತು. ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಬರೆದಿರುವ ಕಥೆಯೇ ಒಂದುಂಟಲ್ಲವೇ, "ಮೊಸರಿನ ಮಂಗಮ್ಮ" ಎಂದು? ಅಂತೂ ಗೊಲ್ಲತಿಯರು ತಲೆಯ ಮೇಲೆ ಮೊಸರನ್ನೋ ಹಾಲನ್ನೋ ಹೊತ್ತು ಹೋಗುತ್ತ "ಹಾಲೂ, ಮೊಸರೂ…" ಎಂದು ಕೂಗಿಕೊಳ್ಳುತ್ತಾ ಹೋಗುತ್ತಿದ್ದರು. ಅವು ಬೇಕಾದವರು, "ಏ ಹಾಲೂ, ಏ ಮೊಸರೂ" ಎಂದು ಕೂಗಿದರೆ, ಒಂದಷ್ಟು ಮುಂದಕ್ಕೆ ಹೋಗಿದ್ದವರೂ ಹಿಂದಕ್ಕೆ ಬಂದು, ನಮ್ಮ ಪಾತ್ರೆಗೆ ಅದನ್ನು ಹುಯ್ದು ಹೋಗುತ್ತಿದ್ದರು. ಇದು ಹಳ್ಳಿಗಳಲ್ಲೆಂತೋ ಪಟ್ಟಣಗಳಲ್ಲೂ ಅಂತೆಯೇ ಸಾಧಾರಣವಾದ ದೃಶ್ಯವಾಗಿದ್ದಿತು. ಇದು ಲೀಲಾಶುಕನ ಕಾಲಕ್ಕೂ ಅನ್ವಯಿಸುವಂತಹುದೇ. ಇನ್ನೂ ಮೊದಲಿನ ಭಾಗವತ-ಪುರಾಣದ ಕಾಲಕ್ಕೂ ಅನ್ವಯಿಸುವಂತಹುದೇ ಎನ್ನಬಹುದು.
ಅಂತಹ ಕಾಲಕ್ಕೆ ಸಹಜವಾಗಿದ್ದ ಮಧುರ-ಚಿತ್ರಣವೊಂದನ್ನು ಕವಿ ಲೀಲಾಶುಕ ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸಿದ್ದಾನೆ. ಗೋಪ-ಕನ್ಯೆಯೊಬ್ಬಳು ಹೀಗೆಯೇ ಮೊಸರು ಮೊದಲಾದುವನ್ನು ಮಾರುತ್ತ ಹೋಗುತ್ತಲಿದ್ದಾಳೆ. "ಹಾಲೂ, ಮೊಸರೂ, ಬೆಣ್ಣೇ" - ಎಂದು ಕೂಗುತ್ತ ತಾನೆ ಅವಳು ಹೋಗಬೇಕಾದುದು? ಆದರೆ ನಡೆದುದೇ ಬೇರೆ. ಮುರಾರಿಯ ಪಾದದಲ್ಲೇ ಅವಳ ಚಿತ್ತ-ವೃತ್ತಿ ಅರ್ಪಿತವಾಗಿತ್ತು. ಕೃಷ್ಣನ ಚರಣಗಳಲ್ಲೇ ನೆಲೆಗೊಂಡ ಅವಳ ಮನಸ್ಸು, ಅವಳ ಬಾಯಿಂದ ಬೇರೆ ಮಾತುಗಳನ್ನೇ ಹೊರಡಿಸಿತು. ಮೊಸರೂ-ಹಾಲೂ-ಬೆಣ್ಣೇ - ಎಂಬುದಾಗಿ ಕೂಗಿಕೊಂಡು ಹೋಗುವ ಬದಲು, ಶ್ರೀಕೃಷ್ಣನ ಬಗೆಗೇ ತನ್ನ ಮೋಹ-ವ್ಯಾಮೋಹಗಳು ಆವರಿಸಿತ್ತಾಗಿ, ಬದಲಾಗಿ, ಗೋವಿಂದಾ ದಾಮೋದರಾ ಮಾಧವಾ - ಎಂಬುದಾಗಿ ಕೂಗಿ ಹೇಳಿದಳಂತೆ!
ಈ ಗೊಲ್ಲತಿ ಹೋಗುತ್ತಿದ್ದುದು ವ್ಯಾಪಾರಕ್ಕಾಗಿ. ವ್ಯಾಪಾರ-ವ್ಯವಹಾರಗಳಲ್ಲಿ ಎಚ್ಚರ ಬೇಕಷ್ಟೆ. ಈಕೆಗೆ ಆ ಬಗೆಯ ಎಚ್ಚರ ಸಾಲದೆಂದು ಆಕೆಯನ್ನು ನಿಂದಿಸುವುದಲ್ಲ. ಕೃಷ್ಣನು ಆಕೆಯ ಮನಸ್ಸನ್ನು ಸೂರೆಗೊಂಡಿದ್ದನಾಗಿ, ಆಕೆಯ ಅಂತರಂಗವೆಲ್ಲವೂ ಆ ರಂಗಯ್ಯನ ಚಿಂತನೆಗೇ ತಾಣವಾಗಿತ್ತು. ಚಿತ್ತ-ವೃತ್ತಿಯನ್ನು ಏಕಾಗ್ರಗೊಳಿಸುವುದೇ ಯೋಗವೆನ್ನುತ್ತಾರೆ. ಯೋಗೇಶ್ವರನಾದ ಶ್ರೀಕೃಷ್ಣನ ಪಾದಾರವಿಂದದಲ್ಲೇ ಸಮರ್ಪಣೆಗೊಂಡ ಅವಳ ಚಿತ್ತವೃತ್ತಿಗೆ ಅಲ್ಲೇ ಐಕಾಗ್ರ್ಯ. ಹೀಗಾಗಿ ಮನದೊಳಗಿರುವ ಮುದದ ವಚನವೇ ವದನದಿಂದಾಚೆ ಬಂದಿದೆ. ಮನಸ್ಸಿನಲ್ಲಿ ನೆಲೆಗೊಂಡ ಮುರಾರಿಯ ನೆನಪು ಅವಳನ್ನು ಕಾಡುತ್ತಲೇ ಬಂದಿದೆ. ಮುರಾರಿಯ ನಾಮಾಂತರಗಳೇ ಆದ ಗೋವಿಂದ-ದಾಮೋದರ-ಮಾಧವ-ಗಳನ್ನೇ ಅವಳು ಕೂಗಿ ಹೇಳುತ್ತಿದ್ದಾಳೆ!
ಆ ಗೊಲ್ಲತಿಯ ಮುಗ್ಧತೆಗೆ ಎಣೆಯುಂಟೆ? ಆ ಮುಗ್ಧಾಂಗನೆಯರು ಕೃಷ್ಣನಿಗೆ ಸೋತರೋ, ಅವರಿಗೆ ಕೃಷ್ಣನು ಸೋತನೋ, ಹೇಳಬಲ್ಲವರಾರು? ಅವರು ಓದಿದವರಲ್ಲ, ಶಾಸ್ತ್ರ ತಿಳಿದವರಲ್ಲ. ಆದರೆ ಸರ್ವ-ಶಾಸ್ತ್ರಗಳನ್ನೂ ತಿಳಿದವರಿಗೆ ದೊರೆಯಬೇಕಾದ ಯೋಗ-ಮೂರ್ತಿಯೇ ಅವರಿಗೆ ಕ್ರೀಡಾ-ಮೂರ್ತಿಯಾಗಿ ದೊರೆತಿದ್ದನು. ಎಷ್ಟು ಜನ್ಮಗಳ ಪುಣ್ಯವೋ - ಆ ಮುಗ್ಧ-ಬಾಲೆಯರದು, ಹೇಳುವುದೆಂತು? ಪ್ರಾಸಂಗಿಕವಾಗಿ ಹೇಳುವುದಾದರೆ, ಮುರನೆಂಬ ಅಸುರನನ್ನು ಕೊಂದದ್ದರಿಂದ ಕೃಷ್ಣನಿಗೆ ಮುರಾರಿಯೆಂಬ ಹೆಸರು. ಗೋವುಗಳನ್ನು ಕಾಪಾಡಿದವನು ಗೋವಿಂದ. ಉದರದಲ್ಲಿ ದಾಮವನ್ನು, ಎಂದರೆ ಹಗ್ಗವನ್ನು, ಯಾರಿಗೆ ಕಟ್ಟಿಹಾಕಲಾಗಿತ್ತೋ ಆತನು ದಾಮೋದರ. ಮಾ ಎಂದರೆ ಲಕ್ಷ್ಮಿ; ಅವಳಿಗೆ ಧವನೇ, ಎಂದರೆ ಪತಿಯೇ, ಮಾಧವ. ಅರ್ಥಾತ್ ವಿಷ್ಣು.
ಭಾವ-ಪರವಶತೆಯಿಂದ ಅಂತರಂಗ-ಬಹಿರಂಗಗಳಲ್ಲಿ ರಂಗನನ್ನು ಭಾವಿಸುತ್ತಿದ್ದ ಆ ಗೋಪ-ಕನ್ಯೆಯೇ ಧನ್ಯೆ. ಅವಳೇನು ಗೋವಿಂದನನ್ನೋ ದಾಮೋದರನನ್ನೋ ಮಾಧವನನ್ನೋ ಮಾರತಕ್ಕವಳೇ? ಆತನಿಗಾಗಿ ತನ್ನ ಪ್ರಾಣವನ್ನಾದರೂ ತೆತ್ತಾಳವಳು. ತನ್ನ ಆ ಪ್ರಾಣೇಶನನ್ನು ಬಿಟ್ಟುಕೊಡಲಾರಳು! ಅವಳಂತೆ ಭಗವಂತನನ್ನು ಭಾವಿಸುವಂತಾದರೆ ಇದೋ ನಮ್ಮ ಜೀವನವೂ ಧನ್ಯವಲ್ಲವೇ?
ವಿಕ್ರೇತುಕಾಮಾ ಕಿಲ ಗೋಪಕನ್ಯಾ/
ಮುರಾರಿ-ಪಾದಾರ್ಪಿತ-ಚಿತ್ತ-ವೃತ್ತಿಃ|
ದಧ್ಯಾದಿಕಂ ಮೋಹವಶಾದ್ ಅವೋಚತ್
"ಗೋವಿಂದ ದಾಮೋದರ ಮಾಧವೇ"ತಿ ||
ಸೂಚನೆ : 29/03/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.