ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಗೋಪಾಲಾಜಿರಕರ್ದಮೇ...
ಜೀವನದಲ್ಲಿ ಯಾರನ್ನು ನೆಚ್ಚಬಹುದು, ಯಾರನ್ನು ನೆಚ್ಚಬಾರದು? - ಎಂಬ ಜಿಜ್ಞಾಸೆಯು ನಮಗೆ ಅಗಾಗ್ಗೆ ಬರುವುದೇ. ಇಂತಹ ಸಂದರ್ಭಗಳಲ್ಲಿ ನಮಗೆ ದೊರೆಯಬಹುದಾದ ಅಳತೆಗೋಲೆಂದರೆ ಅವರ ನಡೆ-ನುಡಿಗಳೇ.
ಬಹುಮಂದಿಯ ನಡೆಯಲ್ಲಿ ಏನೋ ಒಂದು ಏಕರೂಪತೆಯಿರುತ್ತದೆ. ಉದಾಹರಣೆಗೆ ಒಬ್ಬ ಮನುಷ್ಯ ಕೋಪಿಷ್ಠನಾಗಿದ್ದರೆ, ಆತನು ಅನೇಕರೊಂದಿಗೆ, ಅಥವಾ ಎಲ್ಲರೊಂದಿಗೂ, ಕೋಪದ ವರ್ತನೆಯನ್ನೇ ತೋರುತ್ತಾನೆ. ಹಾಗೆಯೇ ಪರಮ-ಜಿಪುಣನಾದವನು ತನ್ನ ಜಿಪುಣತನವನ್ನು ಬಹುತೇಕ ಬಚ್ಚಿಟ್ಟುಕೊಳ್ಳಲಾರನು. ಹೀಗೆ ಸಜ್ಜನರ ಸಜ್ಜನಿಕೆಯಲ್ಲೂ ಏನೋ ಒಂದು ಏಕರೂಪತೆ, ದುರ್ಜನರ ದುಷ್ಟತನದಲ್ಲೂ ಏನೋ ಒಂದು ಏಕರೂಪತೆಗಳನ್ನು ನಾವು ಕಾಣಬಹುದಷ್ಟೆ?
ಆದರೆ ಯಾರಾದರೂ ಕೆಲವೊಮ್ಮೆ ಕೋಪಿಷ್ಠರು, ಕೆಲವೊಮ್ಮೆ ಶಾಂತ-ಸ್ವಭಾವದವರು - ಎಂದಾಗಿಬಿಟ್ಟರೆ, ಅವರೊಡನೆ ವ್ಯವಹರಿಸುವುದೇ ಕಷ್ಟವಾಗಿಬಿಡುವುದು, ಅಲ್ಲವೇ? ಅಂಥವರನ್ನೇ ಅವ್ಯವಸ್ಥಿತ-ಚಿತ್ತ ಎಂದು ಕರೆಯುವುದೂ.
ಕೃಷ್ಣನ ವರ್ತನೆಯು ಒಬ್ಬೊಬ್ಬರೊಂದಿಗೆ ಒಂದೊಂದು ಪರಿಯಲ್ಲಿರುವುದನ್ನು ಲೀಲಾಶುಕ ಗಮನಿಸಿದ್ದಾನೆ. ಕೃಷ್ಣನ ವರ್ತನೆಯ ಆರು ಪ್ರಸಂಗಗಳನ್ನು ನಮ್ಮ ಮುಂದಿಡುತ್ತಾನೆ. ಅವುಗಳಲ್ಲಿ ಎರಡೆರಡರಲ್ಲಿ ಪರಸ್ಪರ ವಿರೋಧಗಳು ತೋರುತ್ತವೆ. ಯಾವುದೋ ಒಂದು ಸೂಕ್ಷ್ಮಾಂಶವು ಹೊಳೆದಾಗ ಅವುಗಳಲ್ಲಿ ವಾಸ್ತವ-ವಿರೋಧವಿಲ್ಲವೆಂಬುದು ಗೋಚರವಾಗುವುದು. ಅದರ ಏನು-ಹೇಗೆಗಳನ್ನು ಗಮನಿಸಬೇಕಲ್ಲವೇ?
ಮೊದಲನೆಯದಾಗಿ ಕೃಷ್ಣನ ವಿಹಾರ-ಭೂಮಿಯೆಂಬುದು ಯಾವುದು? ಅದಾದರೂ ಗೋಪಾಲಾಜಿರ-ಕರ್ದಮ. ಅಜಿರಗಳ ಕರ್ದಮವೆಂದರೆ ಮನೆಯಂಗಳಗಳ ಕೆಸರು. ಗೊಲ್ಲರಂಗಣದ ಕೊಚ್ಚೆಯಿದು.ಇದಕ್ಕೆ ವ್ಯತಿರಿಕ್ತವಾದ ವರ್ತನೆ ಯಜ್ಞ-ಸಂನಿವೇಶದಲ್ಲಿ. ಅಲ್ಲಿ ವಿಪ್ರರು ನೆರವೇರಿಸುವುದು ಅಧ್ವರಗಳನ್ನು - ಎಂದರೆ ಯಜ್ಞಗಳನ್ನು. ಅಲ್ಲಿ ತೋರಿಕೊಳ್ಳಲೇ ಲಜ್ಜೆಪಡುತ್ತಾನಂತೆ, ಕೃಷ್ಣ!
ಅವರು ಅಷ್ಟೊಂದೆಲ್ಲ ನೀತಿ-ನಿಯಮಬದ್ಧವಾಗಿ ಕಟ್ಟುನಿಟ್ಟಾದ ಆಚರಣೆಗಳನ್ನು ಪಾಲಿಸುತ್ತಾ ಶುದ್ಧರಾಗಿ ಶುಚಿರ್ಭೂತರಾಗಿ ಯಾಗಗಳನ್ನು ನಿರ್ವಹಿಸುತ್ತಾರೆ. ಅವರ ಅಷ್ಟೊಂದು ಪ್ರಯತ್ನಕ್ಕಾದರೂ ಬೆಲೆಗೊಡಬಾರದೇ? ಭಗವಂತನು ಶುಚಿಯಾದ ಎಡೆಯಲ್ಲಿ ಕಾಣಿಸಿಕೊಳ್ಳತಕ್ಕವನೆಂದು ಬಗೆದು ನಿತ್ಯಗಟ್ಟಲೆಯ ಪೂಜೆಯಲ್ಲಿ ಸಹ ಮಡಿ-ಆಚಾರ-ಸಂಪ್ರದಾಯಗಳನ್ನು ಬ್ರಾಹ್ಮಣರು ಪಾಲಿಸಿರುತ್ತಾರೆ. ತಮ್ಮ ನಿತ್ಯಕೃತ್ಯಗಳಲ್ಲೇ ಅಷ್ಟು ಬಿಗಿ ಅವರದು. ಇನ್ನು ಸಾರ್ವಜನಿಕವಾಗಿ ನಡೆಸಬೇಕಾದ ಯಜ್ಞ-ಯಾಗಾದಿಗಳೆಂದರೆ ಅವರ ಕಟ್ಟುನಿಟ್ಟುಗಳೇನು ಕಡಿಮೆಯೇ? ಇಷ್ಟೆಲ್ಲ ಆದರೂ ಎಲ್ಲ ಯಜ್ಞಗಳಲ್ಲೂ ಯಜ್ಞ-ಸಾಫಲ್ಯ-ಸೂಚಕವಾಗಿ ಭಗವಂತನ ದರ್ಶನವು ಆಗಿಬಿಡುವುದೆಂಬ ನೆಚ್ಚಿಕೆಯಿಲ್ಲ.
ಸಾರಾಂಶವಾಗಿ, ಎಲ್ಲಿ ಕಾಣಿಸಿಕೊಳ್ಳಬೇಕೋ ಅಲ್ಲಿ ಕಾಣಿಸಿಕೊಳ್ಳುತ್ತಿಲ್ಲ! ವಿದ್ಯಾವಂತರೆನಿಸದ, ಶಾಸ್ತ್ರ-ಜ್ಞಾನ-ರಹಿತರ - ಎಂದರೆ ಕೇವಲ ದನಗಾಹಿಗಳ ಮನೆಗಳಂಗಳಗಳ ಕೊಚ್ಚೆಯಲ್ಲಿ ಕಾಣಿಸಿಕೊಳ್ಳುವವ ಈತ! ಇದರಿಂದ ಏಳುವ ಪ್ರಶ್ನೆಯೆಂದರೆ, ಹಾಗಾದರೆ ಈತನ ಲೆಕ್ಕಾಚಾರವೇನೆಂಬುದು. ತಾನೆಲ್ಲಿ ಕಾಣಬೇಕು, ಎಲ್ಲಿ ಕಾಣಬಾರದು? - ಎಂಬುದಕ್ಕೆ ಲೆಕ್ಕವೇನಾದರೂ ಈತನಿಗಿದೆಯೋ ಇಲ್ಲವೋ? - ಎಂಬುದು. ಇದು ಮೊದಲನೆಯ ವೈಪರೀತ್ಯ.
ಎರಡನೆಯದಿದು. ಗೋಧನರು, ಎಂದರೆ ಹಸುಗಳನ್ನೇ ತಮ್ಮ ಸಂಪತ್ತೆಂದು ಭಾವಿಸುವ ಮಂದಿ, ಏನನ್ನು ಹೇಳುವರೋ ಅದನ್ನು ಕೇಳುತ್ತಾನೆ, ಕೃಷ್ಣ. ಅವರು "ಹುಂ" ಎಂದರೆ ಸಾಕು, ಅಪ್ಪಣೆಯೆಂಬಂತೆ. ಅಷ್ಟರ ಸೂಚನೆ ಮಾತ್ರಕ್ಕೇ ಅವರೊಂದಿಗೆ ಮಾತನಾಡುವನು. ಆದರೆ ಜ್ಞಾನಿಗಳೆನಿಸುವವರೊಂದಿಗೆ ಹಾಗಿಲ್ಲ. ಅವರೋ ವೇದ-ಶಾಸ್ತ್ರ-ಪುರಾಣಾದಿಗಳನ್ನು ಓದಿಕೊಂಡಿರುವವರು, ನೂರಾರು ಸ್ತುತಿಗಳನ್ನು ಮಾಡುವವರು: ಅದು ದೀರ್ಘಕಾಲದ ಅಭ್ಯಾಸದಿಂದಾದ ವೇದ-ಮಂತ್ರಗಳಿಂದಾಗಬಹುದು, ಗಾನದ್ವಾರಾ ನೆರವೇರಬಹುದು. ವಿಪುಲ-ಸ್ತೋತ್ರ-ಸಾಹಿತ್ಯದ ಶುದ್ಧೋಚ್ಚಾರಣೆಯ ರೂಪದಲ್ಲಿರಬಹುದು.
ಹಾಗೆ ವೇದಮಂತ್ರಗಳಿಂದ ಆಹೂತನಾದ ದೇವನು, ಎಂದರೆ ಆಹ್ವಾನಿಸಲ್ಪಟ್ಟ ಭಗವಂತನು, ಸುಪ್ರಸನ್ನನಾಗಿ ಅವರ ಮುಂದೆ ನಿಂತು ಅವರ ಇಚ್ಛಾ-ಪೂರ್ತಿಯನ್ನು ಮಾಡಿಕೊಡಬೇಕು, ಅಲ್ಲವೇ? ಉಹೂಂ, ಅವರುಗಳೆದುರಿಗೆ ಬರಿದೇ ಮೌನ!
ಹೀಗೆ ಮತ್ತೆ ಅದೇ, ಅಜ್ಞರ ಸಂಜ್ಞೆಗೂ ಗೌರವವೀಯುವುದು; ಪ್ರಾಜ್ಞರ ಪ್ರಶಂಸೆಗೂ ಬೆಲೆಗೊಡದಿರುವುದು! ಏನಿದೆಲ್ಲ? ಅರ್ಥವಾಗದ ವಿಷಯವೇ ಸರಿ.
ಮತ್ತೆ ಮೂರನೆಯ ಅಂಶ. ಗೋಕುಲದ ನಾರಿಯರೆಂದರೇನು? ಅವರು ಒಂದರ್ಥದಲ್ಲಿ ಪುಂಶ್ಚಲಿಯರು. ಏನು ಹಾಗೆಂದರೆ? ಗಂಡುಬೀರಿಗಳು! ಮನೆಬಿಟ್ಟು ಬೀದಿ ಸುತ್ತುವ, ಅನ್ಯ-ಪುರುಷರೊಂದಿಗೆ ಹರಟುವ, ನಾರಿಯರವರು! ಅಂತಹ ಮಂದಿಯೊಂದಿಗೆ, ಅವರ ದಾಸನೆಂಬಂತೆ ವರ್ತಿಸುತ್ತಾನೀತ!
ಇದಕ್ಕೆ ಪ್ರತಿಯಾಗಿ ತೋರುವ ದೃಶ್ಯ ಯಾರಿಗಾದರೂ ಆಶ್ಚರ್ಯವೆನಿಸುವಂತಹುದು. ಅದೆಷ್ಟೇ ಮಂದಿ ದಾಂತಾತ್ಮರು - ಎಂದರೆ ತಮ್ಮ ಆತ್ಮದ ಮೇಲೆ, ಅರ್ಥಾತ್ ಮನಸ್ಸಿನ ಮೇಲೆ, ದಮನವನ್ನು ಸಾಧಿಸಿರುವವರು, ಎಂದರೆ ಹತೋಟಿಯನ್ನು ತಂದುಕೊಂಡಿರುವವರು - ಅವರಲ್ಲಿ ನಿನ್ನ ಸ್ವಾಮ್ಯವನ್ನು ಸಹ ನೀ ತೋರಿಸೆ. ಎಂದರೆ ನಿನ್ನ ಪ್ರಭುತ್ವವನ್ನೂ ತೋರುವುದಿಲ್ಲ. ನೀನು ನಿನ್ನ ಒಡೆತನವನ್ನು ಅವರ ಮೇಲೆ ಅವರ ಮುಂದೆ ಪ್ರದರ್ಶನ ಮಾಡಿದರೂ ಧನ್ಯಂಮನ್ಯರಾಗುವವರು, ಅವರು. ಎಂದರೆ ಧನ್ಯತಾಭಾವವನ್ನು ಹೊಂದುವವರು. "ಆಹಾ ನಮ್ಮ ಪ್ರಭು ನಮಗೊಲಿದ! ನಮ್ಮನ್ನು ತನ್ನವರನ್ನಾಗಿ ಭಾವಿಸಿದ! ಮಹಾಪ್ರಭುವಿಗೆ ಸೇರಿದವರು ನಾವು" - ಎಂದೆಲ್ಲ ಭಾವಿಸುವವರು, ಅವರು. ಪಾಪ, ಅವರ ವಿಷಯದಲ್ಲಿ ಇವರು ತನ್ನವರೆಂಬ ಭಾವವನ್ನು ಸಹ ತೋರ್ಪಡಿಸ!
ಸಾರಾಂಶವೇನು? ಬಲ್ಲರಲ್ಲದ ಗೊಲ್ಲರ ಬಳಿ ಸಲ್ಲದ ದಾಸ್ಯ; ಶಮ-ದಮಗಳ ಮಹಾಶ್ರಮದ ಸಾಧನೆ ಮಾಡಿದವರ ಮೇಲೆ ಒಂದೊಡೆತನದ ನಡೆಯು ಸಹ ಇಲ್ಲ!
ಓಹ್! ಇದಾವುದೂ ಅರ್ಥವೇ ಆಗದ ವಿಷಯ - ಎಂದು ಉದ್ಗರಿಸಬೇಕೆಂದಿರುವಷ್ಟರಲ್ಲೇ ಹೊಳೆದಿದೆ, ಲೀಲಾಶುಕನಿಗೆ. "ಅರ್ಥವಾಯಿತು, ಕೃಷ್ಣಾ! ನಿನ್ನ ಮಂಜುಲವಾದ ಚರಣ-ಕಮಲ-ಯುಗಲವು, ಎಂದರೆ ಸುಂದರವಾದ ಪದ-ಪದ್ಮ-ದ್ವಂದ್ವವು, ಪ್ರೇಮದಿಂದಲೇ ನಿಶ್ಚಲವಾಗಿರತಕ್ಕದು" - ಎಂದುದ್ಗರಿಸುತ್ತಾನೆ!
ಈಗ ಅರ್ಥವಾಗಿದೆ, ಶ್ರೀಕೃಷ್ಣನ ವರ್ತನೆಯೇನೆಂಬುದು! ಗೋವುಗಳನ್ನೇ ಧನವನ್ನಾಗಿ ಉಳ್ಳ ಗೋಕುಲದ ಗೋಪಾಲಕರು ಆತನಲ್ಲಿ ಭಕ್ತಿ-ಪ್ರೇಮಗಳಿಂದ ತುಂಬಿರುವರು. ಬದಲಾಗಿ ಜ್ಞಾನಿಗಳೆನಿಸಿಕೊಂಡ ವಿಪ್ರರು ಅಚಾರಸಾಧನೆ-ಯೋಗಸಾಧನೆಗಳಲ್ಲಿ ಮುಂದುವರೆದವರಾಗಿ ಚಾಚೂತಪ್ಪದಂತೆ ಯಜ್ಞವಿಧಿಗಳನ್ನು ನೆರವೇರಿಸಿಕೊಂಡು ಹೋಗುತ್ತಿದ್ದರೂ ಸಹ, ಯಾವ ನಮ್ರತೆ, ಯಾವ ಭಕ್ತಿಭಾವ, ಯಾವ ಆರ್ದ್ರತೆಗಳೊಂದಿಗೆ ತಮ್ಮ ಕ್ರಿಯೆಗಳನ್ನು ನೆರವೇರಿಸಬೇಕೋ ಹಾಗೆ ಮಾಡುತ್ತಿಲ್ಲ. ಅತಿಯಾದ ಆತ್ಮ-ವಿಶ್ವಾಸ, ಮಿತಿಯಾದ ಭಕ್ತಿ - ಇವುಗಳಿಗೆ ಒಲಿಯನು, ನಮ್ಮ ಕೃಷ್ಣನು. ಬದಲಾಗಿ ಎಲ್ಲಿ ಪ್ರೇಮರಸವು ಆತನತ್ತ ಹರಿಯುತ್ತದೋ, ಭಕ್ತಿಯಿಂದ ಆತನಿಗೇ ತಮ್ಮ ಸರ್ವಸ್ವವನ್ನೂ ಒಪ್ಪಿಸುವ ಮಂದಿಯಿರುವರೋ, ಅಲ್ಲಿಯೇ ಒಲಿಯುವವನು ನಮ್ಮ ದೇವ!
ಇದೆಲ್ಲರದರ ತಾತ್ಪರ್ಯವೆಂದರೆ ಯಜ್ಞ-ಯಾಗಾದಿಗಳನ್ನು ಬಿಡಬೇಕೆಂದಲ್ಲ, ವೇದೋಪನಿಷತ್ತುಗಳ ಅಧ್ಯಯನವನ್ನು ತೊರೆಯಬೇಕೆಂದಲ್ಲ. ಅವೆಲ್ಲವೂ ಬೇಕೇ. ಆದರೆ, ಇವುಗಳೊಂದಿಗೆ ಭಕ್ತಿ-ರಸವನ್ನೂ ಸೇರಿಸಿಕೊಂಡರೆ ಇವಿಷ್ಟೂ ಶೀಘ್ರವಾಗಿಯೂ ಅಧಿಕವಾಗಿಯೂ ಫಲಕೊಡತಕ್ಕವು - ಎಂದರಿಯಬೇಕು. ಗೋಪಿಕೆಯರ ಮುಗ್ಧ-ಭಕ್ತಿಗೂ ಬೆಲೆಯುಂಟು; ಪ್ರಾಜ್ಞಂಮನ್ಯ-ವಿಪ್ರರ ಯಜ್ಞರೂಪ-ಕ್ರಿಯೆಗಳಿಗೂ ಬೆಲೆಯಿರದು, ಭಕ್ತಿಭಾವವಿಲ್ಲದಿದ್ದರೆ - ಎಂಬುದು ಇದರ ತಾತ್ಪರ್ಯ. ಪ್ರಾಜ್ಞಂಮನ್ಯ ಅಥವಾ ಪಂಡಿತಂಮನ್ಯ ಎಂದರೆ ತಾನೇ ಪ್ರಾಜ್ಞ, ತಾನೇ ಪಂಡಿತ - ಎಂದೆಲ್ಲಾ ಭಾವಿಸಿಕೊಂಡುಬಿಡುವವನು.
ಹೀಗೆ, ಪ್ರೇಮಕ್ಕೇ ಪ್ರಧಾನವಾಗಿ ಒಲಿಯುವವ ನಮ್ಮ ಹೃದಯೇಶ್ವರ - ಎಂಬ ಸಂದೇಶವನ್ನು ಈ ಶ್ಲೋಕವು ಹೃದಯಂಗಮವಾಗಿ ತಲುಪಿಸುತ್ತದೆಯಲ್ಲವೇ?
ಶ್ಲೋಕ ಹೀಗಿದೆ:
ಗೋಪಾಲಾಜಿರ-ಕರ್ದಮೇ ವಿಹರಸೇ, ವಿಪ್ರಾಧ್ವರೇ ಲಜ್ಜಸೇ! /
ಬ್ರೂಷೇ ಗೋಕುಲ-ಹುಂಕೃತೈಃ, ಸ್ತುತಿಶತೈರ್ ಮೌನಂ ವಿಧತ್ಸೇ ವಿದಾಮ್! ।
ದಾಸ್ಯಂ ಗೋಕುಲ-ಪುಂಶ್ಚಲೀಷು ಕುರುಷೇ, ಸ್ವಾಂತಂ ನ ದಾಂತಾತ್ಮಸು! /
ಜ್ಞಾತಂ ಕೃಷ್ಣ! ತವಾಂಘ್ರಿ-ಪಂಕಜ-ಯುಗಂ ಪ್ರೇಮ್ಣಾಚಲಂ ಮಂಜುಲಮ್॥
ಸೂಚನೆ : 22/03/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.