Sunday, March 2, 2025

ಅಷ್ಟಾಕ್ಷರೀ 76 ಭಕ್ತಿಃ ಕಿಂ ನ ಕರೋತ್ಯಹೋ! (Astaksari 76)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಮೊನ್ನೆಯಷ್ಟೆ ಶಿವರಾತ್ರಿ ಕಳೆದಿದೆ. ಆದರೂ ಅದರ ಗುಂಗಿನ್ನೂ ಇದೆಯಲ್ಲವೇ? ಇಷ್ಟರಾದವರು ಮನೆಗೆ ಬಂದರೆ ಅವರಿಗೆ ಸಂತೋಷವಾಗುವಂತೆ ಮಾಡಲು ನಾವು ಯತ್ನಿಸುತ್ತೇವಲ್ಲವೆ? ಬಿಸಿಲಿನ ಬೇಗೆಯಲ್ಲಿ ಬಳಲಿ ಬಂದವರಿಗೆ ತಣಿಪನ್ನು ತರಿಸಬೇಕಲ್ಲವೆ? ಅದಕ್ಕೆ ಮೊಟ್ಟಮೊದಲು ಸಲ್ಲಬೇಕಾದುದು ತಂಪಾದ ಮಾತಿನ ಹಾರ್ದ-ಸ್ವಾಗತವೇ. ಇಲ್ಲೊಂದು ಸೂಕ್ಷ್ಮವನ್ನು ಶ್ರೀರಂಗಮಹಾಗುರುಗಳು ಸೂಚಿಸಿದ್ದರು. ಹಾಗೆ ಬಂದವರಿಗೆ "ಅಬ್ಬಾ ಅದೆಂತಹ ಸುಡುಬಿಸಿಲು!" ಎನ್ನುವುದಲ್ಲ; ಏಕೆಂದರೆ ಹಾಗೆ ಹೇಳಿದರೆ ಮತ್ತೆ ಆ ಧಗೆಯನ್ನೇ ಅವರಿಗೆ ಜ್ಞಾಪಿಸುವಂತಾಗುವುದು! ಬದಲಾಗಿ, "ತಣ್ಣನೆಯ ತಾಣಕ್ಕೆ ಬಂದಿದ್ದೀರಿ, ತಂಪಾದ ಪಾನೀಯ ತೆಗೆದುಕೊಳ್ಳಿ" ಎಂದು ಹೇಳಿ ಉಪಚರಿಸುವುದರಲ್ಲಿ ಔಚಿತ್ಯವಿದೆ. ಹಿಂದಂತೂ, ಬಂದವರಿಗೆ ಮೊದಲು ಪಾದ-ಶುದ್ಧಿಗಾಗಿ ಪಾದ್ಯ, ಹಸ್ತ-ಶುದ್ಧಿಗೋಸ್ಕರ ಅರ್ಘ್ಯ, ಮುಖ-ಶುದ್ಧಿಗೆಂದು ಆಚಮನೀಯ - ಇವನ್ನು ಕೊಡುತ್ತಿದ್ದರು. ಇವೆಲ್ಲವೂ ತಣಿಪನ್ನು ತರತಕ್ಕವೇ. ಉಪಚಾರವೆಂದರೆ ಇವೇ ಸರಿ!

ಆಮಜ್ವರವನ್ನು ಹೋಗಲಾಡಿಸಲು ಬೆವರಿಳಿಸಬೇಕೆಂದೂ, ಬದಲಾಗಿ ತಣ್ಣೀರು ತಣಿಸಿ ಜ್ವರವಿಳಿಸಹೊರಟರೆ ರೋಗವು ಉಲ್ಬಣವೇ ಆಗುವುದೆಂದೂ ಆಯುರ್ವೇದವು ಹೇಳುತ್ತದೆ. ರೋಗಾಪಹಾರವಾಗುವಂತೆ ಮಾಡಿದರೆ ಉಪಚಾರ. ರೋಗವು ಉಲ್ಬಣವಾಗುವುದಾದರೆ ಅಪಚಾರ.

ದೇವಸ್ಥಾನಕ್ಕೆ ಹೋಗುತ್ತೇವೆ. "ಅರ್ಚಕರೇ, ದೇವರ ದರ್ಶನ ಮಾಡಿಸಿ" ಎನ್ನುತ್ತೇವೆ. ಅವರಾದರೂ ಸ್ವಲ್ಪ ಪಕ್ಕಕ್ಕೆ ನಿಂತು, ಭಗವಂತನನ್ನು ಬೆಳಗಿಸುವಂತೆ ಮಂಗಳಾರತಿಯನ್ನು ಮಾಡಿದರೆ ಚೆನ್ನು; ಬದಲಾಗಿ ತಾನು ದೇವರ ಮೂರ್ತಿಗೇ ಎದುರಾಗಿ ನಿಂತುಬಿಟ್ಟು ಮಂಗಳಾರತಿಯ ತಟ್ಟೆಯನ್ನಾಡಿಸಿದರೆ, ನೆರೆದ ಭಕ್ತರಿಗೆ ಕಾಣುವುದು ಭಗವಂತನ ಮೂರ್ತಿಯಲ್ಲ, ಕಾಣುವುದು ಅರ್ಚಕನ ಪೃಷ್ಠ ಮಾತ್ರವೇ! ದೇವರಿಗೆ ಅಡ್ಡಲಾಗಿ ನಿಂತರೆ ಅಪಚಾರ, ಭಗವಂತನು ಮೆರೆಯುವಂತೆ ತಾನೆ ಮರೆಯಾಗಿ ನಿಂತರೆ ಅದಲ್ಲವೆ ಉಪಚಾರ!

ಮಡಿಯಾದ ವಸ್ತ್ರ, ಮಡಿಯಾದ ಮೈ, ಮತ್ತು ಅವಕ್ಕಿಂತಲೂ ಮುಖ್ಯವಾಗಿ ಮಡಿಯಾದ ಮನಸ್ಸು - ಇವುಗಳಿಂದ ದೇವಪೂಜೆ ನೆರವೇರಿದರೆ ಅದು ಉಪಚಾರ; ಅದಿಲ್ಲದೆ ಅಶುದ್ಧ-ಜಲದಿಂದ ಅಭಿಷೇಕವನ್ನೋ, ಎಂಜಲನ್ನದಿಂದ ನೈವೇದ್ಯವನ್ನೋ ಮಾಡಿದರೆ ದೇವನು ಮೆಚ್ಚುವನೇ? ಉಪಚಾರದ ಬದಲು ಅಪಚಾರವೇ ಆದೀತು!

ಆದರೂ ಇದಕ್ಕಿಂತಲೂ ಘೋರವಾಗಿ ವರ್ತಿಸಿದವನೊಬ್ಬನ ವಿಷಯದಲ್ಲಿ ಶಿವನು ಸಂತುಷ್ಟನಾಗಿದ್ದನಂತೆ! ಯಾರದು? ಒಬ್ಬ ಸಾಧಾರಣ ಕಿರಾತ. ಆತನು ಮಾಡುತ್ತಿದ್ದ ಅಭಿಷೇಕವೆಂದರೆ ಬಳಿಯ ನದಿಯ ನೀರನ್ನು ಬಾಯಿಂದ ತಂದು ಭಗವಂತನ ಮೇಲೆ ಉಗುಳುವುದು! ನೈವೇದ್ಯವೆಂದರೆ ತಾ ತಿಂದ ಮಾಂಸಾಹಾರದ ಶೇಷವನ್ನರ್ಪಿಸುವುದು! 

ಅದನ್ನು ಕಂಡ ಅಲ್ಲಿಯ ಅರ್ಚಕನು ಹೌಹಾರಿಹೋದನಂತೆ! ಆದರೆ ಶಿವನು ಅವನಿಗೆ, ಆ ಬೇಡನ ಮುಂದಿನ ನಡೆಯನ್ನು ನೋಡೆಂದನಂತೆ.

ಬೇಡನು ಮತ್ತಲ್ಲಿಗೆ ಬರುವಲ್ಲಿಗೆ ಶಿವಮೂರ್ತಿಯ ಒಂದು ಕಣ್ಣಿಗೆ ಘಾಸಿಯಾಗಿದ್ದು ಕಂಡಿತು: ತನ್ನೊಂದು ಕಣ್ಣನ್ನೇ ಕಿತ್ತು ಅಲ್ಲಿಗಂಟಿಸಿದನು! ಬಳಿಕ ಮತ್ತೊಂದು ಕಣ್ಣಿಗೂ  ಘಾಸಿಯಾಗಿರುವುದನ್ನು ಕಂಡನು. ತನ್ನ ಮತ್ತೊಂದು ಕಣ್ಣನ್ನೂ ಕಿತ್ತು ಆ ಸ್ಥಾನಕ್ಕೆ ಅಂಟಿಸಹೊರಟನು. ಆ ಸ್ಥಾನದ ಗುರುತು ಸಿಗಲೆಂದು ತನ್ನ ಸವೆದ ಪಾದುಕೆಯನ್ನು ಹುಬ್ಬುಗಳ ನಡುವಣದೆಡೆಗೆ  ಕುರುಹಾಗಿಟ್ಟನು. ಕಣ್ಣನ್ನು ಕಿತ್ತರ್ಪಿಸಬೇಕೆನ್ನುವಷ್ಟರಲ್ಲಿ, ಶಿವನು ಪ್ರತ್ಯಕ್ಷನಾಗಿ, ಆತನಿಗೆ ಪೂರ್ಣದೃಷ್ಟಿಯನ್ನು ಅನುಗ್ರಹಿಸಿದನಂತೆ! 

ಇದು ಕಾಳಹಸ್ತೀಶ್ವರನಾದ ಶಿವನು ಕಣ್ಣಪ್ಪನೆಂಬ ಬೇಡನಿಗೆ ಮಾಡಿದ ಅನುಗ್ರಹ. ಪುರಾಣ-ಪ್ರಸಿದ್ಧ ಕಥೆಯಿದು. ಶಿವಾನಂದಲಹರಿಯ ಮಾತು ಭಕ್ತಿಯ ಗರಿಮೆಯನ್ನೇ ಹೇಳುತ್ತದೆ.

ಬೇಡನು ಇಲ್ಲಿ ಮಾಡಿದುದೆಲ್ಲವೂ ಅಪಚಾರವೇ! ಆದರೂ ಎಲ್ಲವೂ ಭಗವಂತನಿಗೆ ಉಪಚಾರವೇ ಆಯಿತಲ್ಲವೇ?! ಹೇಗೆ?

ಉಪಚಾರ-ಅಪಚಾರಗಳ ಮರ್ಮವನ್ನು ಶ್ರೀರಂಗಮಹಾಗುರುಗಳು ಹೀಗೆ ಬಿಡಿಸಿ ಕೊಟ್ಟಿರುವರು.  ಚಾರವೆಂದರೆ ನಡೆ; ಉಪ ಎಂದರೆ ಹತ್ತಿರಕ್ಕೆ; ಅಪ ಎಂದರೆ ದೂರಕ್ಕೆ. "ಭಗವದ್ಭಾವಕ್ಕೇರುವುದಕ್ಕೆ ಬೇಕಾದ ಮನಸ್ಸಿನ ನಡೆಯೇ ನಿಜವಾದ ಉಪಚಾರ. ಅದಕ್ಕೆ ವಿರೋಧವಾಗುವ ನಡೆಯೇ ಅಪಚಾರ."

ಅತ್ಯುತ್ಕಟವಾದ ಭಕ್ತಿಭಾವವಿದ್ದಲ್ಲಿ ಮೇಲ್ನೋಟಕ್ಕೆ ಅಪಚಾರವಾದದ್ದೂ ಉಪಚಾರವಾಗಬಹುದು. ಮುಖ್ಯವಾದ ಅದೇ ಇಲ್ಲದಿದ್ದಲ್ಲಿ, ಹೊರನೋಟಕ್ಕೆ ಉಪಚಾರವೆನಿಸುವಂತಹುದೂ ಅಪಚಾರವೇ ಆದೀತು!

ಆದರೊಂದು ಎಚ್ಚರ. ತೀವ್ರವಾದ ಭಕ್ತಿಯಿದೆಯೆಂದು ನಮಗೆ ನಾವೇ ಅಂದುಕೊಂಡುಬಿಟ್ಟು ಸದಾಚಾರ-ಸತ್ಸಂಪ್ರದಾಯಗಳನ್ನು ಲೆಕ್ಕಿಸದೆ ವರ್ತಿಸಿದರೆ, ಅದರಿಂದಾಗುವುದು ಭಗವಂತನನ್ನು ಕುರಿತಾದ ಮಹಾಪಚಾರವೇ! ನಮಗೆ ನಾವೇ ಮಾಡಿಕೊಳ್ಳುವ ಮಹಾಪಕಾರವೇ!! 

ಉಚ್ಚವಾದ ಉಪಚಾರವಿರಲಿ! ಅದನ್ನು ಅತಿಶಯಿಸುವ ಭವ್ಯವಾದ ಭಕ್ತಿಯಿರಲಿ! ತೋರಿಕೆಯ ತೊರೆದ ಶುದ್ಧಾಂತರಂಗದ ಶುದ್ಧಸಮರ್ಪಣವನ್ನು ಮಹಾಪ್ರಭುವು ಮೆಚ್ಚದಿರುವನೇ?

ಸೂಚನೆ: 1/3//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.