ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಶ್ರೀಕೃಷ್ಣನು ಬೆಳೆದುದೆಲ್ಲಾ ಗೋಕುಲದಲ್ಲೇ ಅಲ್ಲವೆ? ಎಂದೇ, ತನ್ನಿಮಿತ್ತವಾದ ಆತನ ಗೋ-ಪಾಲತ್ವವನ್ನು ಬಳಸಿ ಬೆಳೆಸಿರುವ ಬಗೆಗಳು ಹಲವುಂಟು, ನಮ್ಮ ಸಾಹಿತ್ಯದಲ್ಲಿ. ಆತನು ದನಗಳ ಹಾಲು ಕರೆದುದು ನಿಜವಾದರೂ, ಗೀತೆಯೆಂಬ ಹಾಲನ್ನು ಕರೆದನೆಂಬುದಕ್ಕೇ ಹೆಚ್ಚು ಪ್ರಸಿದ್ಧಿ. ಉಪನಿಷತ್ತುಗಳೆಂಬ ಗೋವುಗಳ ಹಾಲೇ ಗೀತೆ. ಅರ್ಜುನನೆಂಬ ಕರುವಿಗಾಗಿ, ಅದನ್ನು ಕೃಷ್ಣನು ಗೋಪಾಲಕನಾಗಿ ಕರೆದುದು - ಎಂದು ಹೇಳುವ ಶ್ಲೋಕ ಪ್ರಸಿದ್ಧವೇ.
ಹಾಲೂ ಅಮೃತವೇ. ಸಾಕ್ಷಾದ್ ಅಮೃತವನ್ನೇ ತಂದುಕೊಟ್ಟವರಿಗೆ ನಮಸ್ಕಾರವನ್ನು ಯಾರು ಹೇಳರು? ಜೀವನವನ್ನು ನಡೆಸುವುದು ಹೇಗೆಂಬುದನ್ನು ಭಗವಂತನೇ ತೋರಿಸಿಕೊಟ್ಟುಬಿಟ್ಟರೆ ಅದಕ್ಕಿಂತಲೂ ಭಾಗ್ಯವಿನ್ನೇನು?: ಗೀತೆಗಿಂತ ಅಮೃತವಿನ್ನೇನು? ಉದ್ಧರಿಸಲದು ಸಾಕು.
ಗೀತಾಮೃತವನ್ನು ಕರೆದುಕೊಟ್ಟಿರುವುದು ಅರ್ಜುನನಿಗಾಗಿ, ಹೌದೇ. ಅದರೆ ಜೊತೆಗೆ ನಮ್ಮನ್ನೂ ಕರೆದು ಕೊಡುತ್ತಿದ್ದಾನೆ. ಅರ್ಜುನನೊಂದು ವ್ಯಾಜವಷ್ಟೆ. ವ್ಯಾಜವೆಂದರೆ ನೆಪ.
ಗೀತಾಮೃತವನ್ನು ಕರೆಯುವ ಕೃಷ್ಣನಿಗೆ ನಮಸ್ಕಾರ, "ಗೀತಾಮೃತ-ದುಹೇ ನಮಃ" - ಎನ್ನುವ ಈ ಶ್ಲೋಕದ ಉಳಿದ ಪದಗಳು ನೋಡಲು ಬರೀ ಕೃಷ್ಣವರ್ಣನೆಯಂತಿವೆ. ಆದರೆ ಅವುಗಳು ತತ್ತ್ವಾತ್ಮಕವೆಂಬ ವಿಷಯವನ್ನು ಶ್ರೀರಂಗಮಹಾಗುರುಗಳು ಸುಭಗವಾಗಿ ಪ್ರತಿಪಾದಿಸಿದ್ದರು - ಮತ್ತಾವ ಆಚಾರ್ಯರಾಗಲಿ ಭಾಷ್ಯಕಾರರಾಗಲಿ ಹಾಗೆ ವಿವರಿಸುವುದಿರಲಿ, ಸೂಚಿಸಿರುವುದು ಸಹ ಇದ್ದಂತಿಲ್ಲ.
ಯಾವ ವರ್ಣನೆ? ಏನು ತತ್ತ್ವ?
ಶ್ರೀಕೃಷ್ಣನನ್ನು ಪ್ರಪನ್ನ-ಪಾರಿಜಾತವೆಂದಿದೆ. ಶರಣಾದವರಿಗೆ ಆತ ಕಲ್ಪವೃಕ್ಷ, ಬಯಸಿದ್ದನ್ನೆಲ್ಲಾ ದಯಪಾಲಿಸತಕ್ಕವನು. ಶರಣಾಗತಿಯು ಪುರುಷಾರ್ಥ-ಚತುಷ್ಟಯವನ್ನೂ ಅನುಗ್ರಹಿಸುವುದೆಂಬ ತತ್ತ್ವವನ್ನು ಇಲ್ಲಿ ಹೇಳಿದೆಯೆಂದುಕೊಳ್ಳಬಹುದು. ಇದೊಂದು, ಸುವೇದ್ಯ-ತತ್ತ್ವವೇ ಸರಿ.
ಅದಕ್ಕಿಂತಲೂ ಮುಖ್ಯವೆನಿಸುವುದು ಮುಂದಿರುವ ಎರಡು ವರ್ಣನೆಗಳು. ಆತನು ಬೆತ್ತದ ಚಾವಟಿಯನ್ನು ಹಿಡಿದಿದ್ದಾನೆ - ಎಂಬುದು ಮೊದಲನೆಯದು.
ತೋತ್ರ-ವೇತ್ರವೆಂದರೆ ಬೆತ್ತದ ಚಾವಟಿ. ವಾಸ್ತವವಾಗಿ ಸಂಸ್ಕೃತದ "ವೇತ್ರ"ವೇ ಕನ್ನಡದಲ್ಲಿ "ಬೆತ್ತ"ವಾಗಿರುವುದು. ತೋತ್ರವೆಂಬುದು ಬಂದಿರುವುದು ತುದ್ ಎಂಬ ಧಾತುವಿನಿಂದ. ಪೀಡಿಸು - ಎಂದದರರ್ಥ. ತೋದನವೆಂದರೆ ನೋವುಂಟುಮಾಡುವುದು: ಏಟು ಕೊಡಲಿಕ್ಕೇ ಚಾವಟಿಯಲ್ಲವೇ?
ಜಟಕಾಸಾಬಿಯ ಕೈಯಲ್ಲೂ ಅದಿರುವುದಷ್ಟೆ? ಕುದುರೆ ಓಡಿಸುವವರ ಕೈಯಲ್ಲಿ ತೋತ್ರವಿದ್ದರೆ ಅದಕ್ಕೆಲ್ಲಾ ತತ್ತ್ವವಿದೆಯೆಂದು ಹೇಳಿದರೆ, ಅದೇಕೋ ಅತಿಯಾಯಿತೆನಿಸುವುದಲ್ಲವೇ? ಕುದುರೆಯನ್ನು ಬೆದರಿಸಲು ಬೇಕಾದುದದು - ಎಂದರಾಯಿತು, ಅಷ್ಟೇ ಅಲ್ಲವೇ? ಮುಂದೆ ನೋಡೋಣ.
ಹಾಗೆಯೇ, ಕೃಷ್ಣನ ಕೈಯಲ್ಲಿ ಜ್ಞಾನಮುದ್ರೆಯಿದೆ - ಎಂಬುದು ಎರಡನೆಯದು.
ಏನಾದರೂ ಪಾಠ ಮಾಡುವಾಗ ಸೂಕ್ಷ್ಮವಾದ ವಿಷಯವನ್ನೇನಾದರೂ ಹೇಳಲು ಎರಡು ಬೆರಳನ್ನು ಸೇರಿಸಿ ಹೇಳುವ ಪರಿ ಕೆಲವರದು. ಹಾಲು ಕರೆಯುವಾಗಲೋ ಮೂಗಿಗೆ ನಶ್ಯವೇರಿಸುವಾಗಲೋ ಹೆಬ್ಬೆಟ್ಟು-ತೋರ್ಬೆರಳುಗಳು ಹತ್ತಿರ ಬರುವುವಲ್ಲವೇ? ಹಿಂದಿನ ಕಾಲದಲ್ಲಂತೂ ಬೋಧನೆ ಮಾಡುವಾಗ ಆ ಎರಡು ಬೆರಳುಗಳ ತುದಿಗಳನ್ನು ಸೇರಿಸಿ ವಿವರಿಸುತ್ತಿದ್ದ ಪರಿಪಾಟಿಯಿತ್ತು - ಎಂದುಕೊಂಡರಾಯಿತು. ಇಂದಂತೂ "ಬಾಡಿ-ಲಾಂಗ್ವೇಜ್" (ಮೈಭಾಷೆ) ಬೇರೆಯಾಗಿದೆ: ಅಡುಗೆಯು ತುಂಬ ಚೆನ್ನಾಗಿದೆಯೆಂದು ತೋರಿಸಲು ಎರಡು ಬೆರಳುಗಳನ್ನು ಸೇರಿಸಿ ನಮ್ಮ ಚಪ್ಪರಿಕೆಯನ್ನು ತೋರಿಸುತ್ತೇವೆ.
ಇದರಲ್ಲೆಲ್ಲ ತತ್ತ್ವವೇನಿದ್ದೀತು? - ಎಂಬುದೇ ಪ್ರಶ್ನೆ.
ತತ್ತ್ವವಿದೆ. ಇಲ್ಲಿಯ ಬೆತ್ತದ ಕೋಲು ಸಹ ತತ್ತ್ವಾತ್ಮಕವಾದದ್ದು! ಹೇಗೆ? ಅದರಲ್ಲಿ ಏಳು ಗಿಣ್ಣುಗಳುಂಟು. ಸಂಪ್ರದಾಯಸ್ಥರ ಮನೆಗಳಲ್ಲಿ ಬಳಸುವ ಮಡಿಕೋಲುಗಳಲ್ಲಿ ಸಹ ಏಳು ಗಿಣ್ಣುಗಳಿರುವುವಲ್ಲವೇ? ಏಕೆ ಏಳು? ನಮ್ಮ ಬೆನ್ನು ಮೂಳೆಯ ಪ್ರತೀಕ ಈ ಕೋಲು. ಬೆನ್ನಲ್ಲಿ ಸಪ್ತಚಕ್ರಗಳೆಂಬ ಏಳು ಕೇಂದ್ರಗಳಿವೆ. ಬೆನ್ನುಮೂಳೆಗೇ ಜ್ಞಾನದಂಡವೆಂಬ ಹೆಸರೂ ಇದೆಯಲ್ಲವೇ? ಹೀಗಾಗಿ ಮೇಲ್ನೋಟಕ್ಕೆ ಬರಿಯ ಬೆತ್ತದ ಕೋಲೆನಿಸಿರುವುದು ಅತ್ತ ಜ್ಞಾನದಂಡದ ಪ್ರತೀಕವೇ ಆಗಿದೆ.
ಹೀಗಾಗಿ, ಬಲಗೈಯಲ್ಲಿ ಸಾಕ್ಷಾತ್-ಜ್ಞಾನಮುದ್ರೆ, ಎಡಗೈಯಲ್ಲಿ ಜ್ಞಾನದಂಡ-ಪ್ರತೀಕವೇ ಆದ ವೇತ್ರ-ತೋತ್ರ! ಎರಡೂ ಪರ್ಯಾಯವಾಗಿ ಏಕತತ್ತ್ವವನ್ನೇ ಹೇಳುತ್ತಿವೆ.
ಯಾರನ್ನಾದರೂ ಬೆದರಿಸಬೇಕಾದರೆ ನಾವು ತೋರುಬೆರಳನ್ನೇ ಹೆಚ್ಚು ಬಳಸುವುದು. ಎಂದೇ, ತೋರುಬೆರಳಿಗೆ ತರ್ಜನಿಯೆಂಬ ಹೆಸರು. ಅಂಗುಷ್ಠವೆಂದರೆ ಹೆಬ್ಬೆರಳು. ಜ್ಞಾನಮುದ್ರೆಯ ಲಕ್ಷಣ: "ತರ್ಜನ್ಯಂಗುಷ್ಠ-ಸಂಯೋಗ"ವೆಂದು.
ಇಲ್ಲೂ ತತ್ತ್ವವುಂಟು. ತರ್ಜನಿಯು ಜೀವ-ತತ್ತ್ವವನ್ನೂ, ಅಂಗುಷ್ಠವು ಪರಮಾತ್ಮ-ತತ್ತ್ವವನ್ನೂ ಸೂಚಿಸುವುವು. ಇವೆರಡೂ ಸೇರಿರುವುದು ಜೀವ-ದೇವರ ಯೋಗವನ್ನು ಸೂಚಿಸಲೆಂದೇ.
ಚಾವಟಿಯು ಮಾಡುವ ಕೆಲಸವೇನು? ಇಂದ್ರಿಯಗಳೆಂಬ ಕುದುರೆಗಳು ಅಮಾರ್ಗದಲ್ಲಿ ಹೆಜ್ಜೆಯಿಟ್ಟಾಗ ಅವನ್ನು ಸರಿದಾರಿಗೆ, ಎಂದರೆ ಧರ್ಮದ/ಯೋಗದ ಹಾದಿಗೆ, ತರುವುದು.
ಒಂದರ್ಥದಲ್ಲಿ, ನರನ ರಥದಲ್ಲಿ ನಾರಾಯಣನು ಬಂದು ಕುಳಿತಿರುವುದೇ ಜೀವ-ದೇವ-ಯೋಗ-ಸೂಚಕ. ಇನ್ನು ಇಡೀ ಗೀತೆಯ ಉಪದೇಶವೂ ಜೀವ-ದೇವ-ಯೋಗಕ್ಕಾಗಿ ಬೇಕಾದ ಯೋಗ-ಮಾರ್ಗ-ಬೋಧಕ.
ಒಟ್ಟಾರೆ ಚಿತ್ರಣವು ತತ್ತ್ವ-ರಸಾಯನವೇ ಆಯಿತಲ್ಲವೇ?
ಹೀಗೆ ತನ್ನ ಭಂಗಿಯಿಂದಲೂ, ಮಾತಿನಿಂದಲೂ, ಜ್ಞಾನಾಮೃತವನ್ನೇ ಕರೆದು ಕರೆದು ಕೊಡುತ್ತಿರುವ ಜಗದ್ಗುರುವಿಗೆ ನಮ್ಮ ನಮನಗಳು!
ಸೂಚನೆ: 15/3//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.