ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೮. ಪಂಡಿತನಾರು ?
ಉತ್ತರ - ವಿವೇಕೀ.
ಪ್ರಸ್ತುತ ಪ್ರಶ್ನೆ ಬಹಳ ಸಾಮಾನ್ಯವಾದಂತೆ ಕಂಡು ಬರುತ್ತಿದೆ. ಆದರೆ ವಿಷಯದ ಆಳ ಮಾತ್ರ ಹೇಳಲು ಕಷ್ಟಸಾಧ್ಯವಾದುದು. ಏಕೆಂದರೆ ಇಲ್ಲಿನ ಪ್ರಶ್ನೋತ್ತರ ಹೀಗಿದೆ - 'ಪಂಡಿತ ಯಾರು?' ಎಂಬುದಾಗಿ. ಸಾಮಾನ್ಯವಾಗಿ ಯಾರು ತಿಳಿದಿರುತ್ತಾನೋ, ಜ್ಞಾನಿಯಾಗಿರುತ್ತಾನೋ, ಅನೇಕ ವಿಷಯಗಳ ಅರಿವನ್ನು ಪಡೆದಿರುತ್ತಾನೋ, ಅಥವಾ ತುಂಬಾ ಜನರಿಗೆ ತಿಳಿಯದೆ ಇರುವಂತಹ ವಿಷಯವನ್ನು ಯಾರೊಬ್ಬನು ತಿಳಿದಿರುತ್ತಾನೋ ಅಂತವನನ್ನು 'ಪಂಡಿತ' ಎಂಬುದಾಗಿ ಕರೆಯುವಂತದ್ದು ಅಭ್ಯಾಸ. ಆದರೆ ಇಲ್ಲಿನ ಉತ್ತರ ಬಹಳ ವಿಶೇಷವಾಗಿದೆ. ಪಂಡಿತ ಯಾರು? ಎಂಬ ಪ್ರಶ್ನೆಗೆ 'ವಿವೇಕೀ' ಎಂಬುದಾಗಿ ಉತ್ತರವನ್ನು ಇಲ್ಲಿ ಕೊಡಲಾಗಿದೆ. ಅಂದರೆ ವಿವೇಕಿಯಾದವನು ಮಾತ್ರ ಪಂಡಿತನಾಗಲು ಸಾಧ್ಯ ಎಂಬುದು ಇದರ ತಾತ್ಪರ್ಯ.
ಅಂದರೆ ನಾವಿಲ್ಲಿ ವಿವೇಚಿಸಬೇಕಾದ ವಿಷಯ ಇಷ್ಟು - ವಿವೇಕಿ ಎಂದರೇನು? ಎಂಬುದನ್ನು ತಿಳಿದರೆ, ಅವನು ಹೇಗೆ ಪಂಡಿತನಾಗುತ್ತಾನೆ? ಎಂಬುದನ್ನು ತಿಳಿಯಲು ಸುಲಭವಾಗುತ್ತದೆ. ವಿವೇಕ ಎಂಬ ಶಬ್ದಕ್ಕೆ ಪೃಥಕ್ಕಾಗಿ ಕಾಣುವುದು ಎಂದರ್ಥ. ಅಂದರೆ ಯಾವುದನ್ನು ಹೇಗೆ ನೋಡಬೇಕೋ ಅದನ್ನು ಹಾಗೆಯೇ ನೋಡುವಂತದ್ದು. ಅನ್ಯಥಾಭಾವದಿಂದ ನೋಡದಿರುವುದು. ಈ ಪ್ರಪಂಚದಲ್ಲಿ ಎರಡು ರೀತಿಯ ವಸ್ತುಗಳಿವೆ, ನಿತ್ಯವಾದದ್ದು ಮತ್ತು ಅನಿತ್ಯವಾದದ್ದು ಎಂಬುದಾಗಿ. ನಿತ್ಯವಾದ ವಿಷಯವನ್ನು ಅನಿತ್ಯವೆಂದೋ ಅಥವಾ ಅನಿತ್ಯವಾದ ವಸ್ತುವನ್ನು ನಿತ್ಯ ಎಂದೋ ಪರಿಗಣಿಸಿದರೆ ಅದು ಅವಿವೇಕವಾಗುತ್ತದೆ. ನಿತ್ಯವಾದದ್ದನ್ನು ನಿತ್ಯ ಎಂದು ಪರಿಗಣಿಸುವುದು, ಅನಿತ್ಯವಾದದ್ದನ್ನು ಅನಿತ್ಯವೆಂದೇ ಪರಿಗಣಿಸುವಂಥದ್ದು ವಿವೇಕ ಎಂದು ಕರೆಸಿಕೊಳ್ಳುತ್ತದೆ.
ಹಾಗಾದರೆ ನಿತ್ಯವಾದ ವಸ್ತು ಯಾವುದು? ಎಂದರೆ ಆತ್ಮವನ್ನು ಅಥವಾ 'ಪರಬ್ರಹ್ಮ' ಎಂಬ ವಿಷಯ ಏನಿದೆಯೋ ಅದನ್ನು ಮಾತ್ರ 'ನಿತ್ಯ' ಎಂದು ಕರೆದು, ಅದನ್ನು ಹೊರತುಪಡಿಸಿದ ಎಲ್ಲ ವಿಷಯಗಳನ್ನು 'ಅನಿತ್ಯ' ಎಂಬುದಾಗಿ ಕರೆಯುತ್ತಾರೆ. ಆದ್ದರಿಂದ ಈ ಪರಬ್ರಹ್ಮ ವಸ್ತುವನ್ನು ಬಿಟ್ಟು ಉಳಿದವುಗಳೆಲ್ಲವೂ ಕೂಡ ಅನಿತ್ಯ ಎಂಬುದಾಗಿ ಭಾವಿಸಬೇಕು ಮತ್ತು ಈ ಪ್ರಪಂಚದಲ್ಲಿ ಕಾಣುವ ಯಾವುದೇ ವಿಷಯಗಳು ಕೂಡ ಅನಿತ್ಯ ಅಶಾಶ್ವತ ಎಂಬುದಾಗಿ ಪರಿಗಣಿಸಿ, ಆ ಭಗವಂತ ಮಾತ್ರ ನಿತ್ಯ, ಅವನು ಮಾತ್ರ ಪಡೆಯಬೇಕಾದವನು ಎಂಬ ಅರಿವನ್ನೇ ವಿವೇಕ ಎಂಬುದಾಗಿ ಕರೆದು, ಇಂತಹ ಅರಿವು ಉಳ್ಳವನನ್ನು ವಿವೇಕೀ ಎಂದು ಕರೆಯುತ್ತಾರೆ. ಅಂದರೆ ಇವನೇ ನಿಜವಾದ ಜ್ಞಾನಿ, ಪಂಡಿತ. 'ಪಂಡಾ' ಅಂದರೆ ಪರಾತ್ಮವಿಜ್ಞಾನ. ಆತ್ಮಾ ಎರಡು ಬಗೆ ಜೀವಾತ್ಮ ಮತ್ತು ಪರಮಾತ್ಮಾ ಎಂದು. ಆತ್ಯಂತಿಕವಾಗಿ ಜೀವಾತ್ಮ ಮತ್ತು ಪರಮಾತ್ಮಾ ಎರಡೂ ಅಭಿನ್ನವಾದದ್ದು ಎಂಬ ಬಗೆಗಿನ ಅರಿವೇ ಪರಾತ್ಮವಿಜ್ಞಾನ ಎಂಬುದಕ್ಕೆ ಅರ್ಥವಾಗಿದೆ. ಅಂತಹ ಅರಿವು ಉಳ್ಳವನು ಪಂಡಿತ. ಅಂದರೆ ಯಾರು ಆ ಪರಬ್ರಹ್ಮ ವಸ್ತುವನ್ನು ನಿತ್ಯ ಎಂದೂ, ಉಳಿದ ವಸ್ತುಗಳೆಲ್ಲವೂ ಅನಿತ್ಯ ಎಂಬುದಾಗಿ ತಿಳಿದಿರುತ್ತಾನೋ ಅವನೇ ನಿಜವಾದ ಪಂಡಿತನಾಗುತ್ತಾನೆ. ಅವನೇ ನಿಜವಾಗಿ ವಿವೇಕೀ ಎಂದು ಅನಿಸಿಕೊಳ್ಳುತ್ತಾನೆ.